ಬೆಂಗಳೂರು: ಎಳ್ಳು ಬೆಲ್ಲದ ಹಬ್ಬಕ್ಕೆ 'ದುನಿಯಾ' ಖ್ಯಾತಿಯ ವಿಜಯ್ ನಟನೆಯ 'ಜಾಕ್ಸನ್' ಸಿನೆಮಾ ಬಿಡುಗಡೆಯಾಗಿದೆ. ತಮಿಳಿನ 'ಇದರಕುಂತಾನೆ ಆಸೆಪಟ್ಟೈ ಬಾಲಕುಮಾರ' (ಬಾಲಕುಮಾರ ನೀನು ಇದನ್ನೇ ಆಸೆಪಟ್ಟಿದ್ದಲ್ಲವೇ) ಸಿನೆಮಾದ ನಕಲು ಕನ್ನಡಿಗರಿಗೆ ಸಂಕ್ರಾಂತಿಯ ಕೊಡುಗೆಯಾಗಿ ಬಂದಿದೆ. ಸಂಕ್ರಾತಿ ಸುಗ್ಗಿಯ ಸಿಹಿಗೆ ಈ ಸಿನೆಮಾ ಹುಳಿ ಹಿಂಡಿದೆಯೇ?
ಜಾಕ್ಸನ್ ಅಲಿಯಾಸ್ ಜಾತ್ರೆ ಜವರೇಗೌಡ ಒಬ್ಬ ಪೋಲೀ ಹುಡುಗ. ಮೈಕೆಲ್ ಜಾಕ್ಸನ್ ನ ಸಂಗೀತದ ಅಭಿಮಾನಿ. ಎದುರು ಮನೆಯ ಕುಮುದಾಳನ್ನು ಲವ್ ಮಾಡಿ, ಅವಳನ್ನು ಮತ್ತು ಅವಳ ಕುಟುಂಬದವರನ್ನು ಗೋಳು ಹೊಯ್ದುಕೊಳ್ಳುವುದೇ ಇವನ ಘನ ಕೆಲಸ. ಇದರಿಂದ ಬೇಸತ್ತ ಕುಮುದಾಳ ತಂದೆ, ಲೋಕಲ್ ಡಾನ್ ಅಣ್ಣಯ್ಯನಿಗೆ (ರಂಗಾಯಣ ರಘು) ದೂರು ಕೊಂಡೊಯ್ಯುತ್ತಾನೆ. ಅಣ್ಣಯ್ಯ, ಕುಮುದಾಳ ತಂದೆ ಮತ್ತು ಜಾಕ್ಸನ್ ಮಧ್ಯೆ ನಡೆಸುವ ಪಂಚಾಯಿತಿಯೇ ಮೊದಲಾರ್ಧ. ಜೊತೆಗೆ ಒಂದು ಸಾಂಗು, ಒಂದು ಫೈಟು. ದ್ವಿತೀಯಾರ್ಧದಲ್ಲಿ ಬಾರಿನಲ್ಲಿ ನಡೆಯುವ ಒಂದು ಕೊಲೆ. ಒಂದು ರಸ್ತೆ ಅಪಘಾತ. ಇವೆಲ್ಲಕ್ಕೂ ಏನಾದರೂ ಸಂಬಂಧ ಇದೆಯೇ?
ದುನಿಯಾ ಸಿನೆಮಾ ಮೂಲಕ ಸಿನೆಮಾರಂಗಕ್ಕೆ ಹಿರೋ ಆಗಿ ಪರಿಚಯವಾದ ವಿಜಯ್ ಅದದೇ ರೀತಿಯ ನಟನೆಯಿಂದ ಸ್ಟೀರಿಯೋಟೈಪ್ ಆಗಿರುವುದು ಈಗಾಗಲೇ ಹಳೆಯ ಕಥೆ. ಈ ಸಿನೆಮಾದಲ್ಲೂ ಇವರ ನಟನೆಯಲ್ಲಿ ಯಾವುದೇ ಹೊಸತನ ಕಾಣುವುದಿಲ್ಲ, ಹಾಗೂ ಇವರ ಹಾಸ್ಯ ಬೋರ್ ಹೊಡೆಸುತ್ತದೆ. ರಂಗಾಯಣ ರಘು ಅವರ ಪಾತ್ರ ಮತ್ತು ನಟನೆಯನ್ನು ನೋಡಿದರೆ ಅವರು ರಂಗಾಯಣದ ಮೂಲ ನಟನೆಯ ಪಾಠಗಳಿಗೆ ಹಿಂದಿರುಗಬೇಕು ಎಂದೆನಿಸದೆ ಇರಲಾರದು. ಹೀರೋವಿನ ವೈಭವೀಕರಣ, ಅನಗತ್ಯ ಅತಿರಂಜಿತ ಹೊಡೆದಾಟಗಳು, ತಲೆ ಚಿಟ್ಟು ಹಿಡಿಸುವ ಏಕತಾನದ 'ಸಂಭಾಷಣೆ-ಹಾಸ್ಯ', ಕಥೆಯ ಮುಖ್ಯ ಎಳೆಯ ಜೊತೆ, ಇನ್ನೆರಡು ಟ್ರಾಕ್ ಗಳನ್ನು ಮೇಳೈಸುವುದರ ಹಾಗೂ 'ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ' ಎಂಬ ಸಂದೇಶವನ್ನು ಮರೆಮಾಚುತ್ತದೆ. ಈ ಮೂರು ಎಳೆಗಳು ಸಿನೆಮಾದಲ್ಲಿ ಏಕಾದರೂ ತುರುಕಿದ್ದಾರೋ ಎಂದೆನಿಸುತ್ತದೆ. ಈ ಕಥೆಯ ಹಿನ್ನಲೆಯಲ್ಲಿ ಕಟ್ಟಿಕೊಡಬಹುದಾಗಿದ್ದ ಸ್ವಾಭಾವಿಕ 'ಸಾಮಾಜಿಕ-ಸಾಂಸ್ಕೃತಿಕ' ಚಿತ್ರಣವನ್ನೂ ಕೂಡ ಈ ಕನ್ನಡದ ನಕಲು ಹಾಳುಗೆಡವಿದೆ ಎಂದೆನಿಸುತ್ತದೆ. ಓಣಿಯಂತಹ ಅಪಾರ್ಟ್ ಮೆಂಟ್ ನಲ್ಲಿ ನಡೆಯಬಹುದಾದ ಒಂದು ಜಗಳವನ್ನು ಕೆಲವೇ ಸೆಕಂಡ್ ಗಳ ಕಾಲ ತೋರಿಸಿ ಸಿನೆಮಾದ ಪೂರಕ ಕಾಂಪೊಸಿಶನ್ ಬಗ್ಗೆ ಅರಿವೇ ಇಲ್ಲದಂತೆ ಸಿನೆಮಾ ಮಾಡಿದ್ದಾರೆ. ಮೊದಲಾರ್ಧದಲ್ಲಿ ರಂಗಾಯಣ ರಘು ಅವರ ಪಂಚಾಯಿತಿಯಂತೂ ಮುಗಿಯದೆ, ಮೊದಲಾರ್ಧಕ್ಕೆ ಜನರನ್ನು ಹೊರಗೆಬ್ಬಿಸುವಂತೆ ಚಿತಾವಣೆ ಮಾಡುತ್ತದೆ. ಕುಮುದಾ ಪಾತ್ರದಲ್ಲಿ ಪವನಾ ಗೌಡ ತೆರೆಯ ಮೇಲೆ ಹೆಚ್ಚೇನೂ ಕಾಣಿಸಿಕೊಳ್ಳುವುದಿಲ್ಲ. ಸಿಕ್ಕಾಪಟ್ಟೆ ಪೋಷಕ ಪಾತ್ರವರ್ಗವಿದ್ದು ಯಾರದ್ದೂ ಮನಸ್ಸಿನಲ್ಲಿ ಉಳಿಯುವಂತ ಪಾತ್ರವಲ್ಲ. ಯಾರು ಅತಿ ಕೆಟ್ಟ ಹಾಡು ಬರೆಯಬಲ್ಲೆವು ಎಂದು ಯೋಗರಾಜ್ ಭಟ್ ಹಾಗು ಚೇತನ್ ಜಿದ್ದಾಜಿದ್ದಿಗೆ ಬಿದ್ದಹಾಗಿದೆ. 'ಆಪೋಸಿಟ್ ಹೌಸು ಕುಮುದಾ' ಮತ್ತು 'ಗಾಡು ಕೇಳು ಗಾಡು' ಎಂಬ ಹಾಡುಗಳೊಂದಿಗೆ ಕ್ರಮವಾಗಿ ಯೋಗರಾಜ್ ಮತ್ತು ಚೇತನ್ ತಮ್ಮ ಜೀವಮಾನದ ಅತಿ ಕೆಟ್ಟ ಗೀತರಚನೆ ಮಾಡಿದ್ದಾರೆ. ಅರ್ಜುನ್ ಜನ್ಯ ಇದಕ್ಕೆ ತಕ್ಕನಾದ ಸಾಧಾರಣ ಸಂಗೀತ ಒದಗಿಸಿದ್ದಾರೆ. ನಿರ್ದೇಶಕ ಸನತ್ ಕುಮಾರ್ ಬಹುಶಃ ತಮಿಳಿನ ಮೂಲ ಸಿನೆಮಾದ ಸಂದರ್ಭ, ಕಾಂಪೊಸಿಷನ್ ಅರ್ಥ ಮಾಡಿಕೊಳ್ಳದೆ ವಿಜಯ್ ಅವರ ಹಿರೋಯಿಸಂ ಅನ್ನು ವೈಭವೀಕರಿಸಲು ಸರ್ಕಸ್ ಮಾಡಿದಂತಿದೆ.
ಎಳ್ಳು ಬೆಲ್ಲ ಒಂದು ಮಿತಿಯಲ್ಲಿ ರುಚಿ ನೀಡುತ್ತದೆ. ಸ್ವಲ್ಪ ಹೆಚ್ಚು ತಿಂದು ನೋಡಿ, ರಾತ್ರಿ ಮಲಗಲು ಬಿಡದಂತೆ ಕಾಟ ಕೊಡುತ್ತದೆ. ಹೀಗೆ ಅತಿಗಳೇ ತುಂಬಿರುವ ಜಾಕ್ಸನ್ ಸಿನೆಮಾ ಹಾಸ್ಯ ಸಿನೆಮಾ ಎಂದು ಹೇಳಿಕೊಂಡಿದ್ದರೂ ಕಚಗುಳಿಗಿಂತಲೂ ಹೆಚ್ಚು ತುರಿಕೆಯನ್ನೇ ಉಂಟುಮಾಡುತ್ತದೆ. ದುನಿಯಾ ಸಿನೆಮಾದಲ್ಲಿ ಮುಗ್ಧ ಹುಡುಗನೊಬ್ಬ ರೌಡಿಯಾಗುವ ಗಟ್ಟಿ ಪಾತ್ರವೊಂದನ್ನು ಪೋಷಿಸಿದ್ದ ವಿಜಯ್ ಈಗ ದೊಡ್ಡ ನಟನಾಗಿ ಅಡ್ಡಾದಿಡ್ಡಿ ರಿಮೇಕ್ ಸಿನೆಮಾಗಳ ಸವಕಲು ಪಾತ್ರಗಳನ್ನು ಅತಿ ಕೆಟ್ಟದಾಗಿ ನಟಿಸುತ್ತಿರುವುದು ಬಹುಷಃ ಕನ್ನಡ ಚಿತ್ರರಂಗದ ದುರಂತದ ಶಿಖರಪ್ರಾಯವೇನೋ! ಅಥವಾ ಆಳ ಮತ್ತು ಎತ್ತರವನ್ನು ಅರಿತವರ್ಯಾರು ಎನ್ನುವ ಹಾಗೆ ಪಾತಾಳವನ್ನು ಇನ್ನೂ ಕಾದು ನೋಡಬೇಕೇನೋ! ಮೈಕೆಲ್ ಜಾಕ್ಸನ್ ಅವರ ಮೂನ್ ವಾಕ್ ಜಗತ್-ಪ್ರಸಿದ್ಧ ಹಾಗೂ ಕೋಟ್ಯಂತರ ಜನರಿಗೆ ರಂಜಿಸಿದ ಸ್ಫೂರ್ತಿ ಕೊಟ್ಟ ನೃತ್ಯ. ಆದರೆ ಕನ್ನಡದ ಈ ಜಾಕ್ಸನ್ ಸಿನೆಮಾ ಬೇನ್-ವಾಕ್ (ಹಿಂಸೆಯ ನಡಿಗೆ).
-ಗುರುಪ್ರಸಾದ್
guruprasad.n@kannadaprabha.com