ಸಿನಿಮಾ ವಿಮರ್ಶೆ

ಮದ್ದೂರು ವಡೆಯಲ್ಲ ಕೆಟ್ಟ ನಿಪ್ಪಟ್ಟು

ಅದು 'ಆಲಿಯಾ'ನ ಅಥವಾ 'ಅಳಿಯ'ನ ಎಂಬ ಗೊಂದಲಗಳೊಂದಿಗೆ, ಬಾಲಿವುಡ್ ತಾರೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾಳೆ, ಬಹಳ ಸಂಖ್ಯೆಯ ಸ್ಟಾರ್ ನಟರು ನಟಿಸಿದ್ದಾರೆ ಇತ್ಯಾದಿ

ಅದು 'ಆಲಿಯಾ'ನ ಅಥವಾ 'ಅಳಿಯ'ನ ಎಂಬ ಗೊಂದಲಗಳೊಂದಿಗೆ, ಬಾಲಿವುಡ್ ತಾರೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾಳೆ, ಬಹಳ ಸಂಖ್ಯೆಯ ಸ್ಟಾರ್ ನಟರು ನಟಿಸಿದ್ದಾರೆ ಇತ್ಯಾದಿ ಪ್ರಚಾರಾತ್ಮಕ ವಿಷಯಗಳೊಂದಿಗೆ ಜನರ ಕುತೂಹಲ ಕಾಯ್ದುಕೊಂಡಿದ್ದ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ತೆರೆಗೆ ಬಂದಿದ್ದು, ಜನರ ಕುತೂಹಲ ತಣಿಸಿದೆಯೇ? ಅಥವಾ ತಣ್ಣೀರೆರಚಿದೆಯೇ?

ಸಂಬಂಧಗಳನ್ನು ಕುದುರಿಸುವ ಅಥವಾ ಸಂಬಂಧಗಳನ್ನು ಮುರಿಯುವ ಮದುವೆ ದಲ್ಲಾಳಿ ವ್ಯವಹಾರ ಮಾಡುವ ಕಿರಣ್ (ಕಿರುತೆರೆ ನಟ ಚಂದನ್), ಒಂದು ಡೀಲ್ ನಲ್ಲಿ ಪರಿಚಯವಾಗುವ 'ಆಲಿಯಾ'ಳನ್ನು(ಸಂಗೀತಾ ಚೌಹಾನ್) ನೋಡಿ ಮೊದಲ ನೋಟಕ್ಕೆ ಪ್ರೀತಿಯಲ್ಲಿ ಬೀಳುತ್ತಾನೆ. ಮದುವೆಯಾಗುವಂತೆ ಪ್ರಪೋಸ್ ಮಾಡಿದಾಗ, ಅವಳು ಮದುವೆ ಎಂಬ ಸಾಂಸ್ಥಿಕ ಚೌಕಟ್ಟಿನಲ್ಲಿ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿ ವಿಚ್ಛೇದನಗೊಂಡಿರುವ ತನ್ನ ಪೋಷಕರ ಕಥೆ ಹೇಳುತ್ತಾಳೆ. ಗೈನೆಕಾಲಜಿಸ್ಟ್ ತಂದೆ ರವಿ (ರವಿಚಂದ್ರನ್) ಮತ್ತು ನೃತ್ಯಗಾರ್ತಿ ತಾಯಿ ಭೂಮಿ (ಭೂಮಿಕಾ ಚಾವ್ಲಾ) ಬೇರೆಯಾಗಿರುತ್ತಾರೆ. ಇವರನ್ನು ಒಂದು ಮಾಡಿ ಆಲಿಯಾಳನ್ನು ಒಲಿಸಿಕೊಳ್ಳಲು ಕಿರಣ್ ಗೆ ಸಾಧ್ಯವೇ? ಇದಕ್ಕೆ ಅವನು ಹಾಕುವ ವೇಷಗಳೇನು?

ಹಲವಾರು ವರ್ಷಗಳ ನಂತರ ಚಲನಚಿತ್ರ ನಿರ್ದೇಶನಕ್ಕೆ ಹಿಂದಿರುಗಿರುವ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನ ಛಾತಿಯಲ್ಲಿ ಯಾವುದೇ ಬದಲಾವಣೆ ಅಥವಾ ಬೆಳವಣಿಗೆ ನಿರೀಕ್ಷಿಸಿದ್ದರೆ ನಿರಾಸೆ ಕಟ್ಟಿಟ್ಟ ಬುತ್ತಿ. ತಮ್ಮ ಎಂದಿನ ಶೈಲಿಯ ಕೊಳಕು ಹಾಸ್ಯ, ಎಕ್ಸಾಟಿಕ್ ಪ್ರದೇಶಗಳಲ್ಲಿ ಚಿತ್ರೀಕರಣ, ಅತಿ ಸಾಧಾರಣ ಚಿತ್ರಕಥೆ ಮತ್ತು ನಿರೂಪಣಾ ಶೈಲಿಯನ್ನು ಮುಂದುವರೆಸಿರುವ ನಿರ್ದೇಶಕನಿಗೆ ಈ ಬಾರಿ ಕೈಕೊಟ್ಟಿರುವುದು ಹಿತವಲ್ಲದ ಸಂಗೀತ. ಎಂದಿನಂತೆ ಅತಿ ದೊಡ್ಡ ಸಿರಿವಂತ ಕುಟುಂಬಗಳ ಪಾತ್ರಗಳನ್ನು ಸೃಷ್ಟಿಸಿರುವ ಲಂಕೇಶ್, ಬಹುತೇಕ ಎಲ್ಲರ ಬಾಯಲ್ಲೂ ಬೋಧನೆಯ ಮಳೆಗರೆದಿದ್ದಾರೆ. ಎಲ್ಲರೂ ಪ್ರೀಚ್ ಮಾಡುವವರೇ ಇಲ್ಲಿ. ಮೊದಲಾರ್ಧ ನಟ ರವಿಶಂಕರ್ ಸುತ್ತ ಹೆಣೆದಿರುವ ಹಾಸ್ಯ ಸನ್ನಿವೇಶ ಕೆಟ್ಟ ಕಾಮಿಡಿ ಸೀರಿಯಲ್ ನಂತೆ ಪ್ರೇಕ್ಷಕನನ್ನು ಇರಿಯುತ್ತದೆ. ರವಿಶಂಕರ್ ತಮ್ಮ ಕೆಟ್ಟ ನಟನೆಯ ಕಹಳೆಯನ್ನು ಮತ್ತೆ ಮೊಳಗಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಈ ಕೆಟ್ಟ ಹಾಸ್ಯದ ಖೋ ಸಾಧುಕೋಕಿಲರಿಗೆ ಬಂದು ಕಿರಿಕಿರಿ ಇಮ್ಮಡಿಯಾಗುತ್ತದೆ. ಗೈನಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ರವಿಚಂದ್ರನ್ ಕಿರುತೆರೆಯ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳಿಗೆ ಪಾಠ ಹೇಳಿ ಅಭ್ಯಾಸವಾಗಿರುವುದಕ್ಕೋ ಏನೋ, ಅದನ್ನೇ ಸಿನೆಮಾದಲ್ಲೂ ಮುಂದುವರೆಸಿದ್ದಾರೆ. ಚೊಚ್ಚಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡಿರುವ ಚಂದನ್ ನಟನೆ ಇಂದ್ರನಿಗೇ ಪ್ರೀತಿಯಾಗಬೇಕು! ಸಂಗೀತಾ ಚೌಹಾನ್, ಭೂಮಿಕಾ ಚಾವ್ಲಾ ನಟನೆ ಕೂಡ ಅಷ್ಟಕ್ಕಷ್ಟೇ! ಇಷ್ಟು ಸಾಲದು ಎಂಬಂತೆ ಕಥೆಗೆ ಸಂಬಂಧವೇ ಇರದ ನಿರ್ದೇಶಕ ಇಂದ್ರಜಿತ್, ನಟ ಸುದೀಪ್ ಜೊತೆ ಮಾಡಿರುವ ಸಂದರ್ಶನ ಎರಡೆರಡು ಬಾರಿ ಕಾಣಿಸಿಕೊಂಡು ಅಲ್ಲಿ ಕೂಡ ಸುದೀಪ್ ಜೀವನದ ಪಾಠಗಳನ್ನು ಹೇಳಿ, ಪ್ರೇಕ್ಷನಿಗೆ ನೀರಿಳಿಸುತ್ತಾರೆ. ಚಿತ್ರಕಥೆ, ನಿರೂಪಣೆ, ಹಾಸ್ಯ, ನಟನೆ, ಸಂಗೀತ(ಜೆಸ್ಸಿ ಗಿಫ್ಟ್) ಯಾವುದೂ ಮನಮುಟ್ಟುವಂತಿಲ್ಲ. ಆದರೆ ಆಗಾಗ ವೈಭವಯುತವಾಗಿ ಕಾಣುವ ಪ್ರದೇಶಗಳಲ್ಲಿ ನಡೆಸಿರುವ ಹಾಡುಗಳ ಚಿತ್ರೀಕರಣ, ಕಂಪ್ಯೂಟರ್ಗಳಲ್ಲಿ ಒಳ್ಳೆಯ ಸೀನಿಕ್ ಸ್ಕ್ರೀನ್ ಸೇವರ್ ಗಳನ್ನು ಹಾಕಿ ಖುಷಿ ಪಡುವವರಿಗೆ ಸ್ವಲ್ಪ ಮುದ ನೀಡಬಹುದು. ಒಟ್ಟಿನಲ್ಲಿ ಇತ್ತೀಚೆಗೆ ಕಿರುತೆರೆಯಲ್ಲೇ ಅತಿ ಹೆಚ್ಚು ಸಕ್ರಿಯವಾಗಿರುವ (ಚಂದನ್, ಇಂದ್ರಜಿತ್, ರವಿಚಂದ್ರನ್) ಕೆಲವು ಮಂದಿ ಒಗ್ಗೂಡಿ, ಅದೇ ಶೈಲಿಯನ್ನು ದೊಡ್ಡ ತೆರೆಗೆ ತರಲು ನಡೆಸಿರುವ ಪ್ರಯತ್ನ ಇದು ಎನ್ನಬಹುದು.

ಸಿನೆಮಾದಲ್ಲಿ ನಟಿ ಭೂಮಿಕಾ ಅವರಿಗೆ ಮದ್ದೂರು ವಡೆ ಎಂದರೆ ಪಂಚ ಪ್ರಾಣ. ಅವಳಲ್ಲಿ ಶಿಷ್ಯವೃತ್ತಿ ಪಡೆಯುವ ನೆಪದಲ್ಲಿ ಬರುವ ನಾಯಕ ನಟ ಮದ್ದೂರು ವಡೆ, ಮೈಸೂರು ಪಾಕು ಇತ್ಯಾದಿಗಳನ್ನು ತಂದುಕೊಟ್ಟು ಮೋಡಿ ಮಾಡುತ್ತಾನೆ. ಬೆಂಗಳೂರಿನ ಬಹುತೇಕ ಹೋಟೆಲ್ ಗಳಲ್ಲಿ ನೀವು ಮದ್ದೂರು ವಡೆ ಕೇಳಿದರೆ, ಕರಿದಿರುವ ಅಗಲವಾದ ತಟ್ಟೆ ಹೋಲುವ ಒಂದು ಪದಾರ್ಥವನ್ನು ತಂದುಕೊಡುತ್ತಾರೆ. ಅದನ್ನು ತಿಂದಾಗಲೇ ನಿಮಗೆ ತಿಳಿಯುವುದು ಇದು ಮದ್ದೂರು ವಡೆಯಲ್ಲ, ನಿಪ್ಪಟ್ಟೆಂದು. ಮದ್ದೂರು ವಡೆ ರೀತಿಯಲ್ಲಿ ಮಾಡಹೋಗಿ ಆ ನಿಪ್ಪಟ್ಟಿನ ರುಚಿಯೂ ಕೆಟ್ಟು ಹೋಗಿರುತ್ತದೆ. ಹೀಗೆ ಮದ್ದೂರು ವಡೆ ನಿರೀಕ್ಷಿಸಿ ಹೋದವರಿಗೆ, ಕೆಟ್ಟ ನಿಪ್ಪಟ್ಟು ಸಿಗುವಂತಿದೆ ಇಂದ್ರಜಿತ್ ಲಂಕೇಶ್ ಅವರ 'ಲವ್ ಯು ಆಲಿಯಾ'.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT