ಶಿವಲಿಂಗ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

'ಆಪ್ತಮಿತ್ರ'ನಂತಿದ್ದೂ ಆಪ್ತನಾಗದ 'ಶಿವಲಿಂಗ'

೨೦೦೪ ನೇ ಇಸವಿಯಲ್ಲಿ ಮಲಯಾಳಂ ಚಿತ್ರವೊಂದ ರಿಮೇಕ್ 'ಆಪ್ತಮಿತ್ರ'ದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿ ಚಿತ್ರ ಸೃಷ್ಟಿಸಿ, ನಂತರ 'ಆಪ್ತರಕ್ಷಕ' ನಿರ್ದೇಶಿಸಿದ್ದ ಪಿ ವಾಸು ಮತ್ತೆ 'ಶಿವಲಿಂಗ'

೨೦೦೪ ನೇ ಇಸವಿಯಲ್ಲಿ ಮಲಯಾಳಂ ಚಿತ್ರವೊಂದ ರಿಮೇಕ್ 'ಆಪ್ತಮಿತ್ರ'ದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿ ಚಿತ್ರ ಸೃಷ್ಟಿಸಿ, ನಂತರ 'ಆಪ್ತರಕ್ಷಕ' ನಿರ್ದೇಶಿಸಿದ್ದ ಪಿ ವಾಸು ಮತ್ತೆ 'ಶಿವಲಿಂಗ' ಸಿನೆಮಾದ ಮೂಲಕ 'ಹಾರರ್'ಗೆ ಹಿಂದಿರುಗಿದ್ದಾರೆ. ಇದು 'ಹಾರರ್' ಸಿನೆಮಾ ಎಂಬ ಸುಳಿವು ಮೊದಲೇ ನೀಡಿದ್ದರೂ 'ಆಪ್ತಮಿತ್ರ'ದಲ್ಲಿದ್ದ ಸೂಕ್ಷ್ಮತೆಯನ್ನು, ರೋಚಕತೆಯನ್ನು, ಅತ್ಯುತ್ತಮ ನಟನೆಯ ಪ್ರದರ್ಶನವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದ್ದಾರೆಯೇ? ಹೊಸ ಹಾರರ್ ಸೃಷ್ಟಿಸಲು ನಿರ್ದೇಶಕರಿಗೆ ಸಾಧ್ಯವಾಗಿದೆಯೇ?

ಚಲಿಸುತ್ತಿರುವ ರೈಲಿನಿಂದ ನೂಕಲ್ಪಟ್ಟು 'ರಹೀಮ'ನ ಕೊಲೆಯಾಗುತ್ತಾನೆ.  ಸಾಕ್ಷ್ಯಾಧಾರಗಳಿಲ್ಲದೆ ರೈಲ್ವೇ ಪೊಲೀಸರು ಇದು ಆತ್ಮಹತ್ಯೆ ಎಂದು, ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ. ಆದರೆ ರಹೀಮನನ್ನು ಮದುವೆಯಾಗಬೇಕಿದ್ದ ಹುಡುಗಿ 'ಸಂಗೀತಾ' ಪ್ರಕರಣವನ್ನು ಮತ್ತೆ ರೀ-ಓಪನ್ ಮಾಡಿಸುತ್ತಾಳೆ. ಈ ಪ್ರಕರಣದ ತನಿಖೆಗೆ ಖಡಕ್ ಸಿ ಐ ಡಿ ಅಧಿಕಾರಿ ಶಿವ (ಶಿವರಾಜಕುಮಾರ್) ಅವರನ್ನು ನೇಮಿಸಲಾಗುತ್ತದೆ. ಆಗತಾನೇ  ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ಶಿವ ತನ್ನ ಹೆಂಡತಿ 'ಸತ್ಯ'ಳ (ವೇದಿಕಾ) ಜೊತೆಗೆ ತನಿಖೆ ನಡೆಸಲು 'ರಹೀಮ' ಮೃತಪಟ್ಟ ಊರಿಗೆ ಬರುತ್ತಾನೆ. ಸ್ಮಶಾಣದ ಪಕ್ಕದ ಮನೆ ಬಾಡಿಗೆ ಹಿಡಿಯುವ ದಂಪತಿಗಳಿಗೆ ದೆವ್ವ-ಭೂತದ ಅನುಭವಗಳಾಗುತ್ತವೆ. ಸತ್ತ ರಹೀಮನ ಆತ್ಮ ತನಿಕಾಧಿಕಾರಿಯ ಪತ್ನಿಯ ದೇಹ ಸೇರಿರುತ್ತದೆ. 'ರಹೀಮ'ನನ್ನು ಕೊಲೆ ಮಾಡಿದ್ದು ಯಾರು? ಸತ್ಯಳ ದೇಹಕ್ಕೆ ಬಡಿದುಕೊಳ್ಳುವ ರಹೀಮನ ಆತ್ಮ ಬಿಟ್ಟುಹೋಗುವುದೇ?

'ಆಪ್ತಮಿತ್ರ' ಸಿನೆಮಾದ ಗುಂಗಿನಿಂದ ಇನ್ನೂ ಹೊರಬರಲು ಸಾಧ್ಯವಾಗಿರದಂತೆ ಕಾಣುವ ನಿರ್ದೇಶಕ ವಾಸು, ಕಥೆಯ ಮೂಲ ರಚನೆಯನ್ನು ಉಳಿಸಿಕೊಂಡಿದ್ದರು, ಚಿಂತನೆಯಲ್ಲಿ ಹಿಮ್ಮುಖವಾಗಿ ಚಲಿಸಿದ್ದಾರೆ. 'ಆಪ್ತಮಿತ್ರ' ಸಿನೆಮಾದಲ್ಲಿ ಭೂತದ ಚೇಷ್ಟೆಗಳು ಮನೋವೈಜ್ಞಾನಿಕ ತೊಂದರೆಯಾಗಿ ಮೇಲುಗೈ ಪಡೆದಿದ್ದರೆ, 'ಶಿವಲಿಂಗ'ದಲ್ಲಿ ದೆವ್ವವನ್ನು ಎಸ್ಟಾಬ್ಲಿಶ್ ಮಾಡುತ್ತಾ ಹೋಗುವ ನಿರ್ದೇಶಕ, ಲೌಖಿಕ ಅನುಭವದ ಆಚೆಗೆ, ಜನಪದದ ಮಧ್ಯೆದಲ್ಲಿ ಜತನವಾಗಿ ಕಾಯ್ದುಕೊಂಡಿರುವ ಭೂತದ ಎಲ್ಲ ವಿಕಾರತೆಗಳನ್ನು, ನಂಬಿಕೆಗಳನ್ನು, ಚೇಷ್ಟೆಗಳನ್ನು ತೋರಿಸುತ್ತಾರೆ. 'ಆಪ್ತಮಿತ್ರ'ದಲ್ಲಿ ಗಟ್ಟಿಯಾಗಿ ಮೂಡಿ ಬಂದಿದ್ದ ಮನೋವಿಜ್ಞಾನಿಯ ಪಾತ್ರ ಇಲ್ಲಿ ಪೇಲವವಾಗುತ್ತದೆ. ಮಂತ್ರವಾದಿ-ಭೂತ ಬಿಡಿಸುವವನಿಗೆ ಹೆಚ್ಚಿನ ಮಹತ್ವ ಹಚ್ಚುತ್ತಾರೆ. ಮನೋವಿಜ್ಞಾನ ಮತ್ತು ಅಸ್ವಾಭಾವಿಕ ಅನುಭವಗಳ ನಡುವಿನ ತಾರ್ಕಿಕ ಚಿಂತನೆಗಳ ಹೊರತಾಗಿಯೂ ಒಂದು ಹಾರರ್ ಸಿನೆಮಾ ಪ್ರೇಕ್ಷಕರಿಗೆ ನೀಡಬಹುದಾಗಿದ್ದ ಥ್ರಿಲ್ ಅನುಭವ ಕೂಡ ಅತ್ಯುತ್ತಮ ಮಟ್ಟದಲ್ಲಿ ಮೂಡಿ ಬಂದಿಲ್ಲ. ಒಂದು ಸ್ಮಶಾನದ ಮುಂದೆ ಪ್ರತ್ಯೇಕಿಸಲ್ಪಟ್ಟ ಮನೆಯ ದೃಶ್ಯಗಳೇ ಬೆಚ್ಚಿಬೀಳಿಸುವ ಅನುಭವ ನೀಡಬಲ್ಲದ್ದಾಗಿದ್ದರೂ, ಆಮಟ್ಟಕ್ಕೆ ಚಿತ್ರೀಕರಣದಲ್ಲಾಗಲೀ, ನಿರೂಪಣೆಯಲ್ಲಾಗಲೀ, ಸಂಕಲನದಲ್ಲಾಗಲೀ ಚಾತುರ್ಯ ತೋರಿಲ್ಲ. ಅಗತ್ಯಕ್ಕಿಂತಲೂ ವೇಗವಾಗಿ ಓಡುವ ಸಿನೆಮಾ, ದೃಶಗಳಿಂದ ದೃಶ್ಯಕ್ಕೆ ಸರಾಗವಾಗಿ ಚಲಿಸಿದಂತೆ ಭಾಸವಾಗುವುದಿಲ್ಲ. ಸಿ ಐ ಡಿ ಅಧಿಕಾರಿ ಮಾಡುವ ತನಿಖೆಯ ವಿವರಗಳು ಕೂಡ ಬರೀ ಕ್ಲೈಮ್ಯಾಕ್ಸ್ ಗೆ ಸೀಮಿತವಾಗಿ, ಅದರ ವಿವರಗಳು ಕೊಡಬಹುದಾಗಿದ್ದ ಥ್ರಿಲ್ ಕೂಡ ಮಸುಕಾಗಿದೆ. ಹೆಚ್ಚೆಚ್ಚು ಕಾಣಿಸಿಕೊಳ್ಳುವ ಸಾಧುಕೋಕಿಲಾ ಕೆಲವೊಮ್ಮೆ ನಗಿಸಿದರೆ ಮತ್ತೆ ಕೆಲವೊಮ್ಮೆ ಆಯಾಸ ಮೂಡಿಸುತ್ತಾರೆ. ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳಲ್ಲಿ ಕೆಲವು ಪರವಾಗಿಲ್ಲ ಎನ್ನುವುದಾದರೂ, ಸಿನೆಮಾದಲ್ಲಿ ಅನಗತ್ಯವಾಗಿ ತುರುಕಿದಂತಿದ್ದು, ಸಿನೆಮಾದ ಗಂಭೀರತೆಗೆ-ಥ್ರಿಲ್ ಗೆ ತೊಡಕಾಗುತ್ತವೆ. ಶಿವರಾಜಕುಮಾರ್ ಎಂದಿನಂತೆ ತಮ್ಮ ಖಡಕ್ ನಟನೆಯಿಂದ, ಆಕ್ಷನ್ ದೃಶ್ಯಗಳಿಂದ, ನೃತ್ಯಗಳಿಂದ ಅಭಿಮಾನಿಗಳನ್ನು ರಂಜಿಸಿದರೆ, ದೆವ್ವ ಬಡಿದ ಪಾತ್ರದಲ್ಲಿ ವೇದಿಕಾ ನಟನೆ ಸಾಧಾರಣ. ಪೋಷಕ ನಟರಾದ ಅವಿನಾಶ್, ಊರ್ವಶಿ, ಅಶೋಕ್ ಮತ್ತುಳಿದವರ ನಟನೆ ಚೆನ್ನಾಗಿದೆ. 'ಆಪ್ತಮಿತ್ರ'ದಂತಹ ಅತ್ಯುತ್ತಮ ಸಿನೆಮಾ ನೀಡಿದ್ದ ಪಿ ವಾಸು, 'ಶಿವಲಿಂಗ' ಸಿನೆಮಾದಲ್ಲಿ ಆ ಮಾಂತ್ರಿಕತೆಯನ್ನು ಮರಳಿಸಲು ವಿಫಲರಾಗಿದ್ದಾರೆ ಎನ್ನಬಹುದು.

ಆಧುನಿಕ ಸಿನೆಮಾಗಳ ಸಂಕ್ರಮಣದಲ್ಲಿ ಹಾರರ್ ಸಿನೆಮಾಗಳ ಪಾತ್ರವೇನು ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಿಕೊಂಡದ್ದೇ ಆದರೆ, ಯಾವನೇ ಮನುಷ್ಯನೊಬ್ಬ ಅತೀ ಭಯದ ಸನ್ನಿವೇಶದಲ್ಲಿ, ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬ ದೃಷ್ಟಿ ಅತಿ ಮುಖ್ಯವಾಗುತ್ತದೆ. ಅದು ಸಿನೆಮಾದಲ್ಲಿ ತೀವ್ರವಾಗಿ-ಗಟ್ಟಿಯಾಗಿ-ಸ್ವಾಭಾವಿಕವಾಗಿ ಪ್ರತಿಧ್ವನಿಸುವುದು ಅತಿ ಮುಖ್ಯ. ಪ್ರೇಕ್ಷಕ ಆ ಅನುಭವಕ್ಕೆ ರಿಲೇಟ್ ಮಾಡಿಕೊಳ್ಳಲು ಆದೊಷ್ಟು ಸಾಧ್ಯವಾಗಬೇಕು, ಅಥವಾ ಆ ಭಯದ-ಥ್ರಿಲ್ ಅನುಭವವನ್ನು ಕತ್ತಲೆಕೋಣೆಯೊಳಗೆ, ಆಸನದ ತುದಿಯಲ್ಲಿ ಕೂತು ಅನುಭವಿಸುವಂತೆ ಮಾಡಿದರೂ ಆ ಸಿನೆಮಾ ಯಶಸ್ವಿಯಾಗುತ್ತದೆ. ಆದರೆ ಆ ಅನುಭವ ನೀಡುವಲ್ಲಿ 'ಶಿವಲಿಂಗ' ಮುಂಚೂಣಿಯಲ್ಲಿ ನಿಲ್ಲಬಹುದಾದ ಹಾರರ್ ಸಿನೆಮಾಗಳ ಸಾಲಿನಲ್ಲಿ ಸೇರ್ಪಡೆಯಾಗುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT