ನೀರ್ ದೋಸೆ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಡಬಲ್ ಮೀನಿಂಗ್ ಸಂಭಾಷಣೆಗಳ ಮೂಲಕ ಜೀವನದ ಮೀನಿಂಗ್ ಹುಡುಕಿ ಹೊರಟಾಗ!

ಸದಾ ಸಂಭೋಗಕ್ಕಾಗಿ ತಡಕಾಡುವ ಹಿರಿಯ ಜೀವಿ-ನಿವೃತ್ತ ಕ್ಲರ್ಕ್-ಬ್ರಹ್ಮಚಾರಿ ದತ್ತಾತ್ರೇಯ (ದತ್ತಣ್ಣ) ವೇಶ್ಯೆಯೊಬ್ಬರ ಬಗ್ಗೆ "ಅವಳ ಮೈ ಮೈಲಿಗೆ ಆದರೆ ಮನಸ್ಸು ಶುದ್ಧ" ಎಂದು ಅವಳ ವ್ಯಕ್ತಿತ್ವವನ್ನು...

ಸದಾ ಸಂಭೋಗಕ್ಕಾಗಿ ತಡಕಾಡುವ ಹಿರಿಯ ಜೀವಿ-ನಿವೃತ್ತ ಕ್ಲರ್ಕ್-ಬ್ರಹ್ಮಚಾರಿ ದತ್ತಾತ್ರೇಯ (ದತ್ತಣ್ಣ) ವೇಶ್ಯೆಯೊಬ್ಬರ ಬಗ್ಗೆ "ಅವಳ ಮೈ ಮೈಲಿಗೆ ಆದರೆ ಮನಸ್ಸು ಶುದ್ಧ" ಎಂದು ಅವಳ ವ್ಯಕ್ತಿತ್ವವನ್ನು ಅಳೆದು ದೊಡ್ಡ ಮಾತುಗಳನ್ನಾಡುತ್ತಾನೆ. "ಹೆಂಗಸರಿಂದ ಇತಿಹಾಸಗಳೇ ಬಿದ್ದು ಹೋಗಿವೆ, ಇನ್ನು ಇಡ್ಲಿ ಬಿದ್ದು ಹೋದರೇನು" ಎಂದು ಹೇಳುವ, ಸದಾ ಡಬಲ್ ಮೀನಿಂಗ್ ಮಾತುಗಳಲ್ಲಿ ಸಂತಸ ಕಾಣುವ, ಶವ ಸಾಗಾಣೆ ವಾಹನದ ಚಾಲಕ ಜಗ್ಗು (ಜಗ್ಗೇಶ್) ಮದುವೆಗೆ ಹೆಣ್ಣು ಸಿಗದೆ ನರಳುತ್ತಿರುವ ನಡುವಯಸ್ಕ. ಮೂಲಾ ನಕ್ಷತ್ರದಲ್ಲಿ ಜನಿಸಿದ ಕಾರಣದಿಂದ ಗಂಡು ಸಿಗದೆ ಒದ್ದಾಡುತ್ತಿರುವ ಶಾರದಾ (ಸುಮನ್ ರಂಗನಾಥ್) ಜಗ್ಗುವಿನ ಡಬಲ್ ಮೀನಿಂಗ್ ಮಾತುಗಳಿಗೆ ಮನಸೋತು ಮದುವೆಯಾಗಲು ಒಪ್ಪಿದರೂ, ಶವ ಸಾಗಿಸುವ ವಾಹನದ ಚಾಲಕ ಎಂದು ಶಾರದಾಳ ಅಪ್ಪ ಹೆಣ್ಣು ನೀಡಲು ನಿರಾಕರಿಸುತ್ತಾನೆ. ತನ್ನ ಬಾಲ್ಯದ ಹುಡುಗಾಟದ ಪ್ರಸಂಗವೊಂದರಿಂದ ಪಾಪಗ್ರಸ್ಥಳಂತೆ ನರಳುತ್ತಿರುವ ವೇಶ್ಯೆ ಕುಮುದಾಳನ್ನು (ಹರಿಪ್ರಿಯಾ) ಅರಸಿ ದತ್ತಾತ್ರೇಯ ಮತ್ತು ಜಗ್ಗು ಪೈಪೋಟಿಗೆ ಬಿದ್ದಾಗ, ಅವಳಿಗೆ ಬಾಲ್ಯದ ನೆನಪು ಮರುಕಳಿಸಿ ಇಬ್ಬರನ್ನೂ ನಿರಾಕರಿಸುತ್ತಾಳೆ. ಆದರೆ ಈ ಮೂವರು ಒಳ್ಳೆಯ ಗೆಳೆಯರಾಗಿ ಮಾರ್ಪಟ್ಟು ತಮ್ಮ ಹಿಂದಿನ ದುರಂತ ಕಥೆಗಳನ್ನು ಹೇಳಿಕೊಳ್ಳುತ್ತಾ ಸಮಾಧಾನ ಕಂಡುಕೊಳ್ಳುತ್ತಾರೆ. ಇವರ ಜೊತೆಗೆ ಶಾರದಾ ಕೂಡ ಸೇರುತ್ತಾಳೆ.  
ಹೀಗೆ ಗಟ್ಟಿ ಕಥೆಯಾಗಲಿ, ಅಥವಾ ಇರುವ ನಿರೂಪಣೆಗೆ ಒಂದು ಕೇಂದ್ರವಾಗಲಿ ಇರದೇ ಈ ಸಿನೆಮಾದಲ್ಲಿನ ಈ ನಾಲ್ಕು ಮುಖ್ಯ ಪಾತ್ರಗಳು ಹೇಗೆ ಭೇಟಿಯಾಗುತ್ತವೆ ಮತ್ತು ಭೇಟಿಯಾದ ಸಮಯದಲ್ಲಿ ಏನೇನು ವ್ಯವಹರಿಸುತ್ತಾರೆ ಮತ್ತು ತಮ್ಮ ಹಿಂದಿನ ಕಥೆಗಳನ್ನು ಹೇಗೆ ನೆನೆಪಿಸಿಕೊಳ್ಳುತ್ತಾರೆ ಎಂಬುದಷ್ಟೇ ಪ್ರೇಕ್ಷಕರಿಗೆ ದಕ್ಕುವುದು! ಪ್ರೀತಿ-ಆಪ್ತತೆಯಿಂದ ವಂಚಿತರಾದ ವ್ಯಕ್ತಿಗಳು ಒಂದು ಹಂತದಲ್ಲಿ ತಮ್ಮ ಜೀವನವನ್ನು ಹೆಣ್ಣಿನ ಸಂಘದಲ್ಲಿಯೇ ಕಳೆಯಲು ಬಯಸುವಾಗ ಅವರಲ್ಲಿ ಏನೇನು ಬದಲಾವಣೆಗಳಾಗಬಹುದು ಎಂಬ ಒಂದು ಗಟ್ಟಿ ಸಂಘರ್ಷವನ್ನು ಕಟ್ಟಿಕೊಡುವ ಎಲ್ಲ ಸಾಧ್ಯತೆಗಳು ಇದ್ದವಾದರೂ, ಹಲವು ಅಸೂಕ್ಷ್ಮ ಹಾಗು ನಿಂದನೀಯ ಸಂಭಾಷಣೆಗಳನ್ನು ಮತ್ತು ಆ ಡೈಲಾಗ್ ಗಳನ್ನೂ ಉದುರಿಸುವ ಪಾತ್ರಗಳನ್ನೂ ಅತಿರೇಕದಿಂದ ವಿಜೃಂಭಿಸುವ ಭರದಿಂದ ಆ ಸಂಘರ್ಷಕ್ಕೆ ನಿರ್ದೇಶಕ ಎಳ್ಳುನೀರು ಬಿಡುತ್ತಾರೆ. ಹಲವಾರು ಬಿಡಿ ಬಿಡಿ ಘಟನೆಗಳನ್ನು ಒಂದಕ್ಕೊಂದಕ್ಕೆ ಸಂಬಂಧವೇ ಇಲ್ಲದಂತೆ ಪೋಣಿಸಿದ್ದು, ಕೆಲವೊಮ್ಮೆ ಏನೂ ಸಿಕ್ಕದಿದ್ದಾಗ ಹಿಂದಿನ ದೃಶ್ಯಗಳನ್ನೇ ಪುನರಾವರ್ತಿಸುವ ಮೂಲಕ ಬೇಸರ ಮೂಡಿಸುತ್ತಾರೆ. ಪಾತ್ರಗಳು ತಮ್ಮನ್ನು ಕಂಡುಕೊಳ್ಳಲು ಮಾಡುತ್ತಿರುವ ಆತ್ಮವಿಮರ್ಶೆಯೇ? ಅಥವಾ ತಮ್ಮ ಜೀವನವನ್ನು ಸರಿದಾರಿಗೆ ತಂದುಕೊಳ್ಳುವ ತುಡಿತವೇ? ಪ್ರೀತಿಯ ಹುಡುಕಾಟವೇ? ಇಂತಹ ಪ್ರಶ್ನೆಗಳನ್ನು ಒಂದು ಕ್ಷಣ ಮೂಡಿಸಿದರು ಯಾವುದನ್ನು ನಿಖರವಾಗಿ ಕಟ್ಟಿಕೊಡದೆ ಗೊಂದಲಮಯವಾಗಿಸಿ, ಡೈಲಾಗ್ ಗಳಿಗೆ ಶಿಳ್ಳೆ ಹೊಡೆಯುತ್ತಾ, ಚಪ್ಪಾಳೆ ತಟ್ಟುತ್ತಾ ಎದ್ದು ನಡೆಯುತ್ತಿರಿ ಎನ್ನುವಂತಿದೆ ನಿರ್ದೇಶಕರ ಕಲ್ಪನೆ!
ತಾಂತ್ರಿಕವಾಗಿ ಸಿನೆಮಾ ಉತ್ತಮವಾಗಿ ಮೂಡಿಬಂದಿದ್ದು, ಸುಜ್ಞಾನ್ ಅವರ ಛಾಯಾಗ್ರಹಣ, ಸುರೇಶ ಅರಸ್ ಅವರ ಸಂಕಲನ ಎಂದಿನಂತೆ ಪೂರಕ ಸಹಕಾರ ನೀಡಿವೆ. ಅನೂಪ್ ಸೀಳಿನ್ ಸಂಗೀತದ ಹಾಡುಗಳು ಸಾಂದರ್ಭಿಕವಾಗಿವೆ. ಜಗ್ಗೇಶ್ ತಮ್ಮ ಎಂದಿನ ನಟನೆಯಿಂದ-ಮ್ಯಾನರಿಸಂನಿಂದ ಅವರ ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣರಾಗುತ್ತಾರೆ. ನಟಿ ಹರಿಪ್ರಿಯಾ ಕುಮುದಾ ಪಾತ್ರದಲ್ಲಿ ಶಕ್ತಿಮೀರಿ ಪ್ರದರ್ಶನ ನೀಡಿದ್ದು ಗಮನ ಸೆಳೆಯುತ್ತಾರೆ. ಸುಮನ್ ರಂಗನಾಥ್ ಮತ್ತು ದತ್ತಣ್ಣ ಕೂಡ ಎಂದಿನಂತೆ ಗಮನಾರ್ಹ ಅಭಿನಯ ನೀಡಿದ್ದಾರೆ. 
'ಸಿದ್ಲಿಂಗು'ನಂತಹ ಒಳ್ಳೆಯ ಕಥೆಯಿದ್ದ ಸಿನೆಮಾ ನೀಡಿದ್ದ ವಿಜಯ್ ಪ್ರಸಾದ್, ಪ್ರಸಕ್ತ ಯೋಜನೆಯಲ್ಲಿ ಆದ ಹಲವಾರು ಬದಲಾವಣೆಗಳಿಂದಲೋ ಏನೋ, ನಿರ್ಧಿಷ್ಟ ಸ್ಕ್ರಿಪ್ಟ್-ಚಿತ್ರ ಕಥೆ ಇಲ್ಲದ, ಸೆಟ್ ನಲ್ಲಿಯೇ ಕಥೆ ಕಟ್ಟಿರುವಂತೆ ಗ್ರಾಸವಾಗುವ ಅತಿರೇಕದ-ವಿರೂಪದ ವಿಜೃಂಭಣೆಗೆ ಮೊರೆ ಹೋಗಿ, ತಾವು ನಿರೂಪಿಸಿದ್ದ ಸಾಮರ್ಥ್ಯದಿಂದ ಹಿಂಬಡ್ತಿ ಪಡೆದವರಂತೆ ಕಂಡು ನಿರಾಸೆ ಮೂಡಿಸುತ್ತಾರೆ.
ಕನ್ನಡ ಚಿತ್ರರಂಗವೂ ಸೇರಿದಂತೆ ಭಾರತೀಯ ಸಿನೆಮಾರಂಗದ ವ್ಯಾಧಿ ಇದು. ಪುರುಷ ಪಾತ್ರಗಳನ್ನು ಅತಿರೇಕದಿಂದ ವೈಭವೀಕರಿಸಿ, ಅವರನ್ನು ಸಂತ್ರಸ್ತರಂತೆ ಚಿತ್ರಿಸಿ, ಮಹಿಳೆಯರೇ ಸರ್ವ ಸಮಸ್ಯೆಗೂ ಕಾರಣ ಎಂಬಂತೆ ಬಿಂಬಿಸುವುದು ಸಾಮಾನ್ಯ ಪ್ಯಾಟರ್ನ್  ಮತ್ತು ಇದು ಈ ಸಿನೆಮಾದಲ್ಲಿ ಕೂಡ ಮುಂದುವರೆದಿದೆ. ಜಗ್ಗು ಮತ್ತು ದತ್ತಾತ್ರೇಯ ಪಾತ್ರಗಳ ಹೆಡ್ಡತನಗಳು, ದುರುಳ ಚಿಂತನೆಗಳು ಭಾರಿ ತಾತ್ವಿಕ ಚಿಂತನೆಗಳಂತೆ ಚಿತ್ರೀಕರಿಸುವ ನಿರ್ದೇಶಕ, ಕುಮುದಾ ವಿದ್ಯಾರ್ಥಿನಿಯಾಗಿದ್ದಾಗ ಇಬ್ಬರು ಸಹ ವಿದ್ಯಾರ್ಥಿಗಳೊಡನೆ ನಡೆದಿದ್ದ ಒಂದು ಹುಡುಗಾಟದ ಪ್ರಸಂಗ ಅಥವಾ ಅವಳ ನೈಜ ಭಾವನೆಯನ್ನು ಅಪರಾಧವೋ-ಪಾಪವೋ ಎಂಬಂತೆ ನಿರೂಪಿಸಿಬಿಡುತ್ತಾರೆ. ಜಗ್ಗು ಪಾತ್ರದ ತಾಯಿ ಮತ್ತೊಬ್ಬನ ಜೊತೆ ಓಡಿಹೋಗುವುದನ್ನು ದೇವರು ಮಾಡಿದ ತಪ್ಪು ಎಂದು ಬಣ್ಣಿಸುವ ಜಗ್ಗು, ತನ್ನ ತಂದೆಯ ವಿವಾಹದಾಚೆಗಿನ ಸಂಬಂಧವನ್ನು ವಿಜೃಂಭಿಸುತ್ತಾನೆ. ಇಂತಹ ಘಟನೆಗಳನ್ನು ಕಟ್ಟಿಕೊಡುವಾಗ, ಸಿನೆಮಾ ಕರ್ತೃಗಳು ಕಪ್ಪು-ಬಿಳುಪಿನ ಸುಲಭ ವಾದಕ್ಕೆ, ಪುರುಷ ಅಹಂಕಾರಕ್ಕೆ ತಮ್ಮನ್ನು ಬಲಿಗೊಡದೆ ವಿಶಾಲ ಚಿಂತನೆಯಿಂದ ಕಥೆಯನ್ನು ದೃಶ್ಯಗಳನ್ನು ಕಟ್ಟಿಕೊಟ್ಟಾಗ ಅದನ್ನು ಸ್ವೀಕರಿಸುವ ಮನಸ್ಸುಗಳು ಕೂಡ ವಿಶಾಲವಾಗುತ್ತವೆ! ಅಂತಹ ಸಿನೆಮಾಗಳನ್ನು ಸ್ವೀಕರಿಸುವ ಪ್ರೇಕ್ಷಕರ ಸಂಖ್ಯೆಯೂ! 
ಕೊನೆಗೆ: 'ನೀರ್ ದೋಸೆ' ಏಕೆ ಎಂದರೆ ಇಲ್ಲಿನ ಹಲವಾರು ಪಾತ್ರಗಳಿಗೆ ನೀರ್ ದೋಸೆ ಎಂದರೆ ಚಪಲ! ಅದರಾಚೆಗೆ ಪ್ರೇಕ್ಷಕ ಪೇಚಿಗೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT