Sipayi Kannada Movie Review 
ಸಿನಿಮಾ ವಿಮರ್ಶೆ

ಕಥನ ಕಲೆಯಿಲ್ಲದ ಕದನ ಕಲೆ!

'ಲೂಸಿಯಾ' ಸಿನೆಮಾದಲ್ಲಿ ಸಹ ನಿರ್ದೇಶಕನಾಗಿದ್ದ ರಜತ್ ಮಯಿ ಈಗ ಸ್ವತಂತ್ರವಾಗಿ ನಿರ್ದೇಶಿಸಿರುವ 'ಸಿಪಾಯಿ' ಬಿಡುಗಡೆಯಾಗಿದೆ. ಚೊಚ್ಚಲ ಬಾರಿಗೆ ನಟಿಸಿರುವ ಸಿದ್ಧಾರ್ಥ್ ಅವರೇ ನಿರ್ಮಿಸಿರುವ

'ಲೂಸಿಯಾ' ಸಿನೆಮಾದಲ್ಲಿ ಸಹ ನಿರ್ದೇಶಕನಾಗಿದ್ದ ರಜತ್ ಮಯಿ ಈಗ ಸ್ವತಂತ್ರವಾಗಿ ನಿರ್ದೇಶಿಸಿರುವ 'ಸಿಪಾಯಿ' ಬಿಡುಗಡೆಯಾಗಿದೆ. ಚೊಚ್ಚಲ ಬಾರಿಗೆ ನಟಿಸಿರುವ ಸಿದ್ಧಾರ್ಥ್ ಅವರೇ ನಿರ್ಮಿಸಿರುವ ಸಿನೆಮಾದಲ್ಲಿ 'ಲೂಸಿಯಾ' ಖ್ಯಾತಿಯ ಶ್ರುತಿ ಹರಿಹರನ್ ನಾಯಕನಟಿ. ಈ ಹಿಂದೆ ಬಿಡುಗಡೆಯಾಗಿ ಜನಪ್ರಿಯವಾಗಿದ್ದ ನಟ ರವಿಚಂದ್ರನ್ ಅವರ ಸಿನೆಮಾದ ಹೆಸರನ್ನೇ ಹೊತ್ತಿರುವ 'ಸಿಪಾಯಿ'ಯ ಕದನ ಪ್ರೇಕ್ಷಕನನ್ನು ಆವರಿಸಿಕೊಳ್ಳಲಿದೆಯೇ?
ಬರೀ ವರದಿ ಮಾಡುವುದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ನಂಬುವ ಟಿವಿ ವಾಹಿನಿಯೊಂದರ ಕ್ರೈಮ್ ವರದಿಗಾರ ಸಿದ್ಧು (ಸಿದ್ಧಾರ್ಥ್), ಮಾಫಿಯಾದ ಒಳಹೊಕ್ಕು, ಅಲ್ಲಿನವರ ನಂಬುಗೆಗೆ ಪಾತ್ರನಾಗಿ ಒಳಗಿನಿಂದಲೇ ಹೋರಾಡುತ್ತಾನೆ. ಸ್ಪೈ ಕ್ಯಾಮರಾಗಳನ್ನು ಧಾರಾಳವಾಗಿ ಬಳಸಿ ಮಾಫಿಯಾ ಡಾನ್ ವಿರಾಟ್ ನ (ಕೃಷ್ಣ ಹೆಬ್ಬಾಳೆ) ದೌರ್ಜನ್ಯಗಳನ್ನು ಬಯಲಿಗೆಳೆಯುತ್ತಾನೆ. ಹೀಗೆ ಹತ್ತಾರು ಧೀರೋದ್ಧಾತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಿದ್ಧುಗೆ, ತಾನು ಓದಿದ ಕಾಲೇಜಿನಲ್ಲಿ ದಿವ್ಯಳನ್ನು (ಶ್ರುತಿ ಹರಿಹರನ್) ಕಂಡ ಕ್ಷಣ ಪ್ರೇಮ ಹೂಂಕರಿಸಿ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಹೀರೋನ ಚಟುವಟಿಕೆಗಳಿಗೆ ಅವನ ತಂದೆ ಮತ್ತು ವರಿದಿಗಾರ ನರಸಿಂಹ ರಾಜು (ಅಚ್ಯುತ್ ಕುಮಾರ್) ಪೂರ್ಣ ಸಾಥ್ ನೀಡಿದರೆ, ಗೆಳೆಯ ಮಂಜು (ಸಂಚಾರಿ ವಿಜಯ್) ಸದಾ ಜೊತೆಗೆ ಇರುತ್ತಾನೆ! ಹೀರೋನ ಈ ಹಾದಿಯಲ್ಲಿ ಸಿಗುವ ಕಲ್ಲು ಮುಳ್ಳು ಮತ್ತು ಹೂಗಳು ಏನೇನು?
ಅತಿ ಸಾಧಾರಣ ಕಥೆಯೊಂದನ್ನು ಹೆಣೆದು, ವಿವಿಧ ಪಾತ್ರಗಳ ನೆನಪಿನ ದೃಶ್ಯಗಳು ಮತ್ತು ಸದ್ಯದಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಬದಲಿಸುತ್ತಾ ಸಾಗುವ ನಿರೂಪಣಾ ತಂತ್ರದ ಮೂಲಕ ಕಥೆ ಹೇಳಿದ್ದು, ಪ್ರಾರಂಭಕ್ಕೆ ಪ್ರೇಕ್ಷಕರಲ್ಲಿ ಒಂದು ಸಣ್ಣ ಕುತೂಹಲ ಮೂಡಿಸಲು ಸಾಧ್ಯವಾಗಿದ್ದರೂ, ಮುಂದುವರೆದಂತೆ ಎಲ್ಲವು ಬಯಲಾಗಿ, ಸಮತಟ್ಟಾಗಿ  ನಿರಾಸೆಯನ್ನು ಹೆಚ್ಚಿಸುತ್ತಾ ಆಯಾಸ ತರಿಸುತ್ತದೆ. ಸಿನೆಮಾದ ಪ್ರಾರಂಭದಲ್ಲಿ ಪ್ರಜ್ಞೆ ಕಳೆದುಕೊಂಡಿರುವ ನಾಯಕ ಸಿದ್ಧು ಮೂಡಿಸುವ ಕುತೂಹಲದ ಎಳೆ ಮಾಯವಾಗಿ ಮುಂದೆಲ್ಲಾ ಫೈಟ್ ಗಳು, ಹಾಡುಗಳಿಂದ ತುಂಬಿ ಹೋಗಿ ಮಾಮೂಲಿ ಮಸಾಲಾ ಸಿನೆಮಾವಾಗಿ ಮಾರ್ಪಾಡಾಗುತ್ತದೆ. ನೆನಪಿನಲ್ಲುಳಿಯುವ ಯಾವುದೇ ಭಾವನಾತ್ಮಕ ಸನ್ನಿವೇಶ/ಘಟನೆಗಳಾಗಲಿ, ಅಥವಾ ಸೀಟಿನ ತುದಿಗೆ ಪ್ರೇಕ್ಷನನ್ನು ಎಳೆದು ಕೂರಿಸುವ ತಿರುವುಗಳಾಗಲಿ ಸಿನೆಮಾದಲ್ಲಿ ಇಲ್ಲ. ಹೀರೊ ಮಾಫಿಯಾದೊಳಗೆ ಸೇರುವ ಘಟನೆಯಾಗಲಿ, ಅಲ್ಲಿ ಇದ್ದುಕೊಂಡು ಅವರ ಚಟುವಟಿಕೆಗಳನ್ನು ದಾಖಲು ಮಾಡುವ ದೃಶ್ಯಗಳು ಬಹಳ ಜಾಳುಜಾಳಾಗಿದ್ದು, ಇನ್ನು ಸ್ವಲ್ಪ ಹೆಚ್ಚಿನ ವಿವರಗಳನ್ನು ಕೆದಕಿ ನಂಬಿಕೆಯುಟ್ಟಿಸುವಂತೆ ಚಿತ್ರಿಸಿದ್ದರೆ ಒಳ್ಳೆಯ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ರಂಜಿಸಬಹುದಿತ್ತು! ಇತ್ತ ಅಬ್ಬರದ ಹಾಡುಗಳ ನಡುವೆ ನಾಯಕ ನಾಯಕಿಯ ರೊಮ್ಯಾಂಟಿಕ್ ದೃಶ್ಯಗಳು ಕೂಡ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ.  
ಸಿನೆಮಾದ ತಾಂತ್ರಿಕ ಆಯಾಮಗಳಲ್ಲಿ ಗಮನ ಸೆಳೆಯುವುದು ಪರಮೇಶ್ ಅವರ ಛಾಯಾಗ್ರಹಣ. ಆಕ್ಷನ್ ದೃಶ್ಯಗಳಿಗೆ, ಹಾಡುಗಳಿಗೆ ಉತ್ತಮವಾದ ಪರಿಸರವನ್ನು ಕಥೆಗೆ ಪೂರಕವಾಗಿ ಸೆರೆಹಿಡಿರುವುದು ಮುದ ನೀಡುತ್ತದೆ. ಅಜನೀಶ್ ಲೋಕನಾಥ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಯಾವುದೇ ಹಾಡುಗಳು ಮನಸ್ಸಿನಲ್ಲುಳಿಯುವುದಿಲ್ಲ. ನಿರೂಪಣೆಯ ತಂತ್ರ ಕೂಡ ಸಿನೆಮಾಗೆ ಯಾವುದೇ ರೀತಿಯಲ್ಲಿ ಸಹಕರಿಸದೆ, ತಿರುವುಗಳನ್ನು ನೀಡದೆ, ಬೇಕಂತಲೇ ಹಿಂದಕ್ಕೆ ಮುಂದಕ್ಕೆ ಚಲಿಸುವ ದೃಶ್ಯಗಳು ಪ್ರಯಾಸವನ್ನು ತಂದೊಡ್ಡುತ್ತವೆ. ಈ ನಿಟ್ಟಿನಲ್ಲಿ ಸಂಕಲನ ಕೂಡ ಹೆಚ್ಚೇನೂ ಸಹಕರಿಸಿಲ್ಲ. ಚೊಚ್ಚಲ ನಟನೆಯಲ್ಲಿ ಸಿದ್ಧಾರ್ಥ್ ನೃತ್ಯ ಮತ್ತು ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆದರೂ, ಭಾವನಾತ್ಮಕ ದೃಶ್ಯಗಳಲ್ಲಿ ಇನ್ನು ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇದೆ. ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ ಎಂದಿನಂತೆ ತಮ್ಮ ಸಹಜ ನಟನೆ ನೀಡಿದ್ದರೆ, ಸಂಚಾರಿ ವಿಜಯ್ ಅವರ ಪಾತ್ರದ ಅವಶ್ಯಕತೆಯೇ ಪ್ರೇಕ್ಷಕರಿಗೆ ತಿಳಿಯದೆ ಹೋಗುತ್ತದೆ. ಯಾವುದೇ ಅತಿರೇಕದ ಹಾಸ್ಯದ ಟ್ರ್ಯಾಕ್ ಇಲ್ಲದೆ, ಒಂದು ಸುಲಭವಾದ ಕಥೆಯನ್ನು ಸೀದಾ ಸಾದವಾಗಿ ತೆರೆಗೆ ತಂದಿರುವ ನಿರ್ದೇಶಕ ರಜತ್ ಮಯಿ ಒಂದು ಸಾಧಾರಣ ಸಿನೆಮಾವನ್ನು ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT