ಪ್ರೀತಿ ಪ್ರೇಮ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

'ಪ್ರೀತಿ ಪ್ರೇಮ' ಎಂಬ ಸಿನೆಮಾ ಬದನೆಕಾಯಿ

'ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೆಕಾಯಿ' ಎಂಬ ಹಳೆ ಸಿನೆಮಾ ಡೈಲಾಗ್ ಸುತ್ತಲೇ ಚಿತ್ರಕಥೆಯೊಂದನ್ನು ಹೆಣೆಯಬಹುದೆಂಬ ಐಡಿಯಾವನ್ನು ಸಾಕಾರಗೊಳಿಸಿದ್ದಾರೆ ನಿರ್ದೇಶಕ ಕಾಶಿ.

'ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೆಕಾಯಿ' ಎಂಬ ಹಳೆ ಸಿನೆಮಾ ಡೈಲಾಗ್ ಸುತ್ತಲೇ ಚಿತ್ರಕಥೆಯೊಂದನ್ನು ಹೆಣೆಯಬಹುದೆಂಬ ಐಡಿಯಾವನ್ನು ಸಾಕಾರಗೊಳಿಸಿದ್ದಾರೆ ನಿರ್ದೇಶಕ ಕಾಶಿ. ಚೈತನ್ಯ ಮತ್ತು ನಿಧಿ ಕುಶಾಲಪ್ಪ ನಟಿಸಿರುವ ಈ ಸಿನೆಮಾ, ಪುಸ್ತದದ ಬದನೆಕಾಯಿಗಿಂತಲೂ ರುಚಿಕಟ್ಟಾಗಿದೆಯೇ? 
ತನ್ನ ಪ್ರಿಯತಮೆ ರಾಗಿಣಿ ಲೌಖಿಕ ಆಸೆಗಳಿಗಾಗಿ ತೊರೆದು ಹೋಗಿರುವುದರಿಂದ ಚಿಂತಾಕ್ರಾಂತನಾಗಿ, ಹಿಂದಿನದೆಲ್ಲ ಮರೆಯಲು ಯತ್ನಿಸುತ್ತಿರುವ ಭಗ್ನ ಪ್ರೇಮಿ ಪ್ರೇಮ್ (ಚೈತನ್ಯ), ತಾನು ವಿವಾಹಿತ ಆದರೆ ಪತ್ನಿ ಹೆರಿಗೆಗಾಗಿ ಅಮೆರಿಕಾದಲ್ಲಿದ್ದಾಳೆ ಎಂದು ಸುಳ್ಳು ಹೇಳಿ ಕುಟುಂಬಕ್ಕೆ ಮಾತ್ರ ಮೀಸಲಾಗಿರುವ ಫ್ಲಾಟ್ ಒಂದನ್ನು ಹಿಡಿಯುತ್ತಾನೆ. ಎದುರು ಮನೆಯಲ್ಲಿ ವಾಸಿಸುವ ಆ ಪ್ಲಾಟ್ ನ ಮಾಲೀಕನ ಮಗಳು ಪ್ರೀತಿ (ನಿಧಿ ಕುಶಾಲಪ್ಪ), ಗೆಳೆಯನಾಗಿದ್ದ ಆದರೆ ಈಗ ಪ್ರೀತಿಸು ಎಂದು ಬೆದರಿಕೆ ಹಾಕುತ್ತಿರುವ ಕಿಶೋರ್ ಎಂಬ ಯುವಕನಿಂದ ಹೈರಾಣಾಗಿದ್ದಾಳೆ. ಪ್ರೇಮ್ ಮತ್ತು ಪ್ರೀತಿ ನಡುವೆ ಪ್ರೀತಿ ಹುಟ್ಟದಿರಲು ಸಾಧ್ಯವೇ? ಆದರೆ ಅದು ಸುಲಭವೇ? 
ಈಗಾಗಲೇ ಅಸಂಖ್ಯಾತ ಸಿನೆಮಾಗಳು ಯುವ ಜೋಡಿಗಳು ಪ್ರೀತಿಸುವುದು ಯಾವುದೋ ಲಾಭಕ್ಕಾಗಿ ಅದರಲ್ಲೂ ಯುವತಿಯರು ಯುವಕರನ್ನು ಹಣದ ಮತ್ತು ಇತರ ಅವಶ್ಯಕ ವಸ್ತುಗಳ ನಿರೀಕ್ಷೆಯಲ್ಲಿಯೇ ಬಲೆಗೆ ಬೀಳಿಸಿಕೊಳ್ಳುತ್ತಾರೆ ಎಂಬ ಗಾಂಧಿನಗರ 'ಘನ' ತತ್ವವನ್ನು ಜನರಲೈಸ್ ಮಾಡಿ ಸಾರುತ್ತಲೇ ಬಂದಿವೆ. ಮತ್ತೆ ಇಂತಹದೇ ಶುಷ್ಕತನದ-ಜೊಳ್ಳಿನ ಜಾಡು ಹಿಡಿದು, ಅದನ್ನು ವ್ಯಾಕರಿಕೆ ಬರುವಷ್ಟು ಪುನರಾವರ್ತಿಸಿ ಸುಧೀರ್ಘ ಸಿನೆಮಾವೊಂದನ್ನು ಮಾಡಿ ಮುಗಿಸಿದ್ದಾರೆ ನಿರ್ದೇಶಕ. 
ಭಗ್ನ ಪ್ರೇಮಿ ಯುವಕ ಮತ್ತು ಬೆದರಿದ ಯುವತಿಯ ನಡುವೆ ಪ್ರೇಮ ಹೇಗೆ ಹೂಂಕರಿಸುತ್ತದೆ ಮತ್ತು ಅದಕ್ಕೆ ಆಗುವ ಅಡೆತಡೆಗಳೇನು ಎಂಬ ಅತಿ ಸವಕಲು ಕಥೆಯೊಂದನ್ನು ಹೆಣೆಯುವುದಕ್ಕೆ ನಿರ್ದೇಶಕ ಹರಸಾಹಸಪಟ್ಟಿದ್ದಾರೆ. ಈ ಸಾಹಸದಲ್ಲಿ ಒಂದೇ ರೀತಿಯ ಹತ್ತಾರು ಘಟನೆಗಳನ್ನು ಕಟ್ಟಿಕೊಡುವ ಮೂಲಕ ಪ್ರೇಕ್ಷಕನನ್ನು ಹೈರಾಣು ಮಾಡುತ್ತಾರೆ. ಈ ನಾಯಕ-ನಾಯಕಿ ಜೋಡಿಯ ಪ್ರೇಮ ಕಥೆಗಳು ಸಾಲದೆಂಬಂತೆ, ನಾಯಕನಟಿಯ ಗೆಳತಿ ಭಾರ್ಗವಿ ಎಂಬ ಯುವತಿ ತನ್ನ ಅವಶ್ಯಕತೆಗಳಿಗಾಗಿ ಸಂತೋಷ್ ಎಂಬ ಯುವಕನನ್ನು ಸುಳ್ಳುಸುಳ್ಳೇ ಪ್ರೀತಿಸುತ್ತಿರುವ ಉಪಕಥೆಯನ್ನು ಕೂಡ ಪ್ರೇಕ್ಷಕ ಸಹಿಸಿಕೊಳ್ಳಬೇಕಾದ ಶಿಕ್ಷೆ ಕೊಡುತ್ತಾರೆ. 
ಯುವಕ-ಯುವತಿಯರ ಕೆಲವು ಪ್ರೇಮಪ್ರಕರಣಗಳಲ್ಲಿ ಇಂತಹ ಲಾಭದ ನಿರೀಕ್ಷೆಗಳು ಇಲ್ಲವೇ ಇಲ್ಲ ಎಂದಲ್ಲ ಆದರೆ ಅದು ಇಂದು ಯುವಜನತೆಯನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆ ಎಂಬಂತೆ ಎಲ್ಲವನ್ನು ಅತಿರೇಕಗೊಳಿಸಿ, ಜನರಲೈಸ್ ಮಾಡಿ, ಪುನರಾವರ್ತನೆ ಮಾಡಿ, ನೀರಸವಾಗಿ ಕಟ್ಟಿಕೊಡುವುದರಿಂದ ನಿರ್ದೇಶಕ ಎಚ್ಚರಿಕೆ ವಹಿಸಬಹುದಿತ್ತು. 
ಇವೆಲ್ಲವುದರ ಹೊರತಾಗಿ ಪ್ರೇಮ್-ಪ್ರೀತಿಯ ಪ್ರೇಮಕಥೆ ಕೂಡ ತಾಜಾತನದಿಂದ ಕೂಡಿರದೆ ಇರುವುದು, ತಂದೆ ಪುತ್ರಿ ಪ್ರೀತಿಯನ್ನು ಪ್ರೇಮ್ ನಿಂದ ದೂರ ಮಾಡುವುದು, ಪ್ರೇಮ್ ನನ್ನು ಹಳೆಯ ಪ್ರೇಯಸಿಯ ಜೊತೆಗೆ ಕಂಡು ಪ್ರೀತಿಗೆ ಆಗುವ ಗೊಂದಲ ಇವೆಲ್ಲವೂ ಹಿಂದೆ ಕಂಡಿರುವ ಕಥೆಗಳೇ! ಈ ನೀರಸ ಕಥೆಯಿಂದ-ನಿರೂಪಣೆಯಿಂದ ರಿಲೀಫ್ ನೀಡಬಹುದಾಗಿದ್ದ ಹಾಡುಗಳು ಕೂಡ ಸಿನೆಮಾದಲ್ಲಿ ಮೂಡಿ ಬಂದಿಲ್ಲ. ಬಿಜೆ ಭರತ್ ಸಂಗೀತ ನಿರ್ದೇಶನದ ಹಾಡುಗಳು ಸಾಧಾರಣವಾಗಿವೆ. ತಾಂತ್ರಿಕವಾಗಿಯೂ ಸಿನೆಮಾ ಯಾವುದೇ ಮೋಡಿ ಮಾಡುವುದಿಲ್ಲ. ಛಾಯಾಗ್ರಹಣವಾಗಲಿ, ಕಲಾನಿರ್ದೇಶನವಾಗಲಿ ಬಹಳ ಸಾಧಾರಣವಾಗಿದೆ. ಸಂಭಾಷಣೆ ಸಿನೆಮಾದ ಕ್ಲೀಷೆಯ ಕಥೆಗೆ ಹೊಂದಿಕೊಂಡು ಬೋರು ಹೊಡೆಸುತ್ತದೆ. ಯಾರು ಮನಸ್ಸಿನಲ್ಲುಳಿಯುವಂತಹ ನಟನೆ ನೀಡಿಲ್ಲ. 
ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೆಕಾಯಿ ಎಂಬ ಸ್ಲ್ಯಾಂಗ್ ಹಿಡಿದು ಹಿಗ್ಗಿಸಿ ಜಗ್ಗಿಸಿ, ಕೊನೆಗೆ ಯಶಸ್ವಿ ಪ್ರೀತಿಯನ್ನು ಕೂಡ ಕಟ್ಟಿ ಕೊಟ್ಟರೂ, ಎರಡುಘಂಟೆ ಹತ್ತು ನಿಮಿಷದ ಸಿನೆಮಾಗೆ ಬೇಕಾದ ಕಂಟೆಂಟ್ ಇಲ್ಲದೆ ಕೊರಗಿ, ಕುಗ್ಗಿ ಸಿನೆಮಾ ಬದನೆಕಾಯಿ ಮಾಡಿಮುಗಿಸಿದ್ದಾರೆ ನಿರ್ದೇಶಕ ಕಾಶಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Aland Constituency: ಮತಗಳ್ಳತನ ಪ್ರಕರಣದ ತನಿಖೆಗೆ SIT ರಚನೆ.. CM Siddarmaiah ಘೋಷಣೆ!

ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್ ಧರ್ಮದಡಿ ವಿವಿಧ ಜಾತಿಗಳ ಉಲ್ಲೇಖ ಕೈಬಿಡಲಾಗಿದೆ: ಸಿಎಂ ಸಿದ್ದರಾಮಯ್ಯ

ರಾತ್ರೋರಾತ್ರಿ ರೌಡಿಗಳ ಬೆಚ್ಚಿ ಬೀಳಿಸಿದ Bengaluru police, 1,478 ರೌಡಿಗಳ ಮನೆ ಮೇಲೆ ದಾಳಿ

H-1B ವೀಸಾ ಶುಲ್ಕ ಹೆಚ್ಚಳ: 'ಮಾನವೀಯ' ಪರಿಣಾಮಗಳ ಬಗ್ಗೆ MEA ತೀವ್ರ ಕಳವಳ; 'ಅಡೆತಡೆ' ನಿವಾರಣೆಗೆ ಅಮೆರಿಕಕ್ಕೆ ಒತ್ತಾಯ!

India vs Pakistan: ಪತ್ರಕರ್ತನ No-Handshake ಪ್ರಶ್ನೆಗೆ 'ಭರ್ಜರಿ' ಉತ್ತರ ಕೊಟ್ಟ Suryakumar Yadav, ಹೇಳಿದ್ದೇನು?

SCROLL FOR NEXT