ಕೆಟಿಎಂ ಸಿನಿಮಾ ಸ್ಟಿಲ್
ಕೆಟಿಎಂ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

KTM ಚಿತ್ರ ವಿಮರ್ಶೆ: ಟ್ವಿಸ್ಟ್ ಮೇಲೆ ಟ್ವಿಸ್ಟ್; ವಿವಿಧ ಶೇಡ್ ಗಳಲ್ಲಿ ದೀಕ್ಷಿತ್ ನಟನೆ ಬೆಸ್ಟ್; ಪ್ರೀತಿ- ಸ್ನೇಹದ ಜೊತೆಗೆ ನೀತಿಪಾಠ

Shilpa D

ಕೆಟಿಎಂ ಹೆಸರು ಕೇಳಿದ ಕೂಡಲೇ ಇದೊಂದು ಐಷಾರಾಮಿ ಬೈಕ್ ಹೆಸರು ಅಂತಾ ತಿಳಿದುಕೊಳ್ಳಬೇಡಿ, ಖಂಡಿತಾ ಇದು ಕೆಟಿಎಂ ಬೈಕ್ ಅಲ್ಲ, ಇದು ಸಿನಿಮಾಕಥೆಯ ನಾಯಕ- ನಾಯಕಿ ಪಾತ್ರಗಳ ಮೊದಲ ಹೆಸರು.

ಕಾರ್ತಿಕ್ ಭಟ್(ದೀಕ್ಷಿತ್ ಶೆಟ್ಟಿ) ತಾನ್ಯಾ ಭಟ್(ಕಾಜಲ್ ಕುಂದರ್) ಮತ್ತು ಮರ್ಸಿ (ಸಂಜನಾ ದಾಸ್) ಪ್ರಮುಖ ಪಾತ್ರಗಳು. ಎಲ್ಲಾ ಪ್ರೇಮಕಥೆಗಳಂತೆ ಇದೊಂದು ಕಾಲ್ಪನಿಕ ಮಧುರ ಪ್ರೇಮಕಥೆಯಲ್ಲ. ಮೊದಲಿಗೆ ಸ್ನೇಹದಲ್ಲಿ ಆರಂಭವಾದ ಕಥೆ ನಂತರ ಅನಿರೀಕ್ಷಿತ ತಿರುವುಗಳನ್ನು ಪಡೆದು ಹೊಸದಾಗಿ ಪ್ರೀತಿ ಅರಳಲು ದಾರಿ ತೋರುತ್ತದೆ.

ಹಳ್ಳಿಯ ಪರಿಸರಲ್ಲಿ ಮುಗ್ಧ ಬಾಲಕನಾಗಿದ್ದ ಕಥಾನಾಯಕನ ಬದುಕಿನಲ್ಲಿ ಪ್ರೀತಿಯ ಗಾಳಿ ಬೀಸುತ್ತದೆ. ನಂತರ ಆತನ ಪಯಣ ಬೆಂಗಳೂರಿನತ್ತ ಸಾಗುತ್ತದೆ. ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸಿದಾಗ ಮುಗ್ಧ ಯುವಕನ ಜೀವನದಲ್ಲಿ ತಲ್ಲಣಗಳು ಸೃಷ್ಟಿ ಆಗುತ್ತವೆ. ತನ್ನನ್ನೇ ಅರಸಿ ಬಂದ ಪ್ರೀತಿಯನ್ನು ಉಳಿಸಿಕೊಳ್ಳಲು ಕಾರ್ತಿಕ್ ಭಟ್ ಅನೇಕ ಸವಾಲು ಎದುರಿಸಬೇಕಾಗುತ್ತದೆ. ಇದರಿಂದ ಆತ ಜೀವನದಲ್ಲಿ ಕುಗ್ಗಿ ಹೋಗಿರುತ್ತಾನೆ.

ಆದರೆ ಕಾರ್ತಿಕ್ ಜೀವನದಲ್ಲಿ ಮರ್ಸಿ ಎಂಟ್ರಿಯಾದ ನಂತರ ಬದುಕಿನ ಬಗೆಗೆ ಆತನ ಭರವಸೆಗಳು ಬದಲಾಗುತ್ತವೆ. ಅದಾದ ನಂತರ ಎದುರಾಗುವ ಹಲವು ಅಡೆತಡೆಗಳಿಂದ ಮರ್ಸಿ ಆತನನ್ನು ಪಾರು ಮಾಡುತ್ತಾಳೆ. ಅರುಣ್ ಕಥೆ ಬರೆದು ನಿರ್ದೇಶಿಸಿರವ ಈ ಚಿತ್ರದಲ್ಲಿ ಕಾರ್ತಿಕ್ ನ 18 ರಿಂದ 28 ವಯಸ್ಸಿನವರೆಗೆ 12 ವರ್ಷಗಳ ಕಾಲದ ಪ್ರಯಾಣವಿದೆ. ದೀಕ್ಷಿತ್ ಶೆಟ್ಟಿ ಹಲವು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪಾತ್ರಕ್ಕೆ ಜೀವ ತುಂಬಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.

ಆರಂಭದ ಪ್ರೇಮ ಜೀವನವು ಆತನ ವೃತ್ತಿ ಮತ್ತು ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ದೇಶಕರು ನವಿರಾಗಿ ಬಿಚ್ಚಿಟ್ಟಿದ್ದಾರೆ. ಕೇವಲ ಪ್ರೀತಿ-ಪ್ರೇಮದ ಮೇಲೆ ನಿರ್ದೇಶಕರು ತಮ್ಮ ಗಮನ ಕೇಂದ್ರೀಕರಿಸದೆ ಗೆಳೆತನದ ಬಗ್ಗೆಯೂ ಉತ್ತಮ ಸಂದೇಶ ನೀಡಿದ್ಜಾರೆ.

ತುಕಾಲಿ ಸಂತೋಷ್ ಮತ್ತು ಚಿರು( ಅಭಿಷೇಕ್) ಪಾತ್ರ ಸಾಕಷ್ಟು ಹೈಲೈಟ್ ಆಗಿದೆ. ಚಿರು ದುರಂತ ಸಾವಿನಿಂದ ಕಾರ್ತಿಕ್ ಜೀವನ ಮತ್ತೊಂದು ತಿರುವು ಪಡೆಯುತ್ತದೆ. ಸ್ನೇಹಿತನ ಸಾವು ನಾಯಕನನ್ನು ಮದ್ಯ ವ್ಯಸನಿಯನ್ನಾಗಿಸುತ್ತದೆ, ಅಲ್ಲಿಂದ ಮತ್ತೊಂದು ಟ್ವಿಸ್ಟ್ ಶುರುವಾಗುತ್ತದೆ. ಈ ವೇಳೆ ನಾಯಕನ ಬಾಳಿನಲ್ಲಿ ತಾನ್ಯಾ ಪ್ರವೇಶವಾಗುತ್ತದೆ. ಅಲ್ಲಿಂದ ತ್ರಿಕೋನ ಪ್ರೇಮವೇ ಚಿತ್ರದ ಜೀವಾಳವಾಗುತ್ತದೆ.

ಕೆಟಿಎಂ ಸಿನಿಮಾ ಮೂಲಕ ನಿರ್ದೇಶಕರು ಉತ್ತಮ ಸಂದೇಶ ರವಾನಿಸಿದ್ದಾರೆ, ಪ್ರೇಮ ವೈಫಲ್ಯವಾದರೆ ಸಾಯುವುದೊಂದೇ ದಾರಿಯಲ್ಲ, ಬದುಕಲು ಹಲವು ಕಾರಣಗಳಿವೆ, ಒಂದರ ಅಂತ್ಯ ಮತ್ತೊಂದರ ಆರಂಭಕ್ಕೆ ನಾಂದಿ ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಸಿನಿಮಾದಲ್ಲಿನ ಕೆಲವು ನೆಗೆಟಿವ್ ಅಂಶಗಳನ್ನು ಮಾಫಿ ಮಾಡಬಹುದು. ಕೆಲವೊಮ್ಮೆ ಕಥೆಯ ನಿರೂಪಣೆ ಮಿಸ್ ಹೊಡೆಯುತ್ತದೆ. ಕೆಲವು ಪಾತ್ರಗಳು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತವೆ. ಕೆಲವು ದೃಶ್ಯಗಳಲ್ಲಿ ದೀಕ್ಷಿತ್ ರೆಡ್ಡಿ ತೆಲುಗಿನ ‘ಅರ್ಜುನ್​ ರೆಡ್ಡಿ’ ಸಿನಿಮಾವನ್ನು ನೆನಪಿಸುತ್ತಾರೆ. ಅತಿಯಾದ ಕುಡಿತದ ಚಟಕ್ಕೆ ಬಿದ್ದ ನಾಯಕ ಕೊನೆಗೆ ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಾಗುತ್ತಾನೆ.

ಸಿನಿಮಾದಲ್ಲಿ ನಾಯಕಿಯರಾಗಿ ಸಂಜನಾ ದಾಸ್​ ಮತ್ತು ಕಾಜಲ್​ ಕುಂದರ್​ ಅಭಿನಯಿಸಿದ್ದಾರೆ. ಆರಂಭದಲ್ಲಿ ಮತ್ತು ಕ್ಲೈಮ್ಯಾಕ್ಸ್​ನಲ್ಲಿ ಕಾಜಲ್​ ಕುಂದರ್​ ಮಿಂಚಿದ್ದಾರೆ. ಇನ್ನುಳಿದ ದೃಶ್ಯಗಳಲ್ಲಿ ಸಂಜನಾ ದಾಸ್​ ಹೈಲೈಟ್​ ಆಗಿದ್ದಾರೆ. ನಟಿಯರಿಬ್ಬರು ಕೂಡ ದೀಕ್ಷಿತ್​ ಶೆಟ್ಟಿಗೆ ಉತ್ತಮವಾಗಿ ಜೋಡಿಯಾಗಿದ್ದಾರೆ. ಅಂತಿಮವಾಗಿ ನಾಯಕನ ಪ್ರೀತಿ ಯಾರ ಪಾಲಾಗುತ್ತದೆ ಎಂಬುದೇ 'ಕೆಟಿಎಂ' ಸಸ್ಪೆನ್ಸ್​.

ಪ್ರತಿಯೊಂದು ಪ್ರೇಮಕಥೆಯಂತೆ KTM ಕೂಡ ಹಲವು ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳನ್ನು ಹೊಂದಿದೆ. ಆದಾಗ್ಯೂ, ಕಾರ್ತಿಕ್‌ನ ಪ್ರಯಾಣ, ತಾನ್ಯಾ ಮೇಲಿನ ಅವನ ಮೋಹ ಮತ್ತು ಮರ್ಸಿಯ ಮೇಲಿನ ಪ್ರೀತಿಯು ಗಮನ ಸೆಳೆಯುತ್ತದೆ. ಮೂವರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ದೀಕ್ಷಿತ್ ಶೆಟ್ಟಿ ಭರವಸೆಯ ನಟನಾಗಿ ಹೊರಹೊಮ್ಮಿದ್ದಾರೆ.

ಚಿತ್ರ: KTM

ನಿರ್ದೇಶನ: ಅರುಣ್

ಕಲಾವಿದರು: ದೀಕ್ಷಿತ್ ಶೆಟ್ಟಿ, ಕಾಜಲ್ ಕುಂದರ್, ಸಂಜನಾ ದಾಸ್, ತುಕಾಲಿ ಸಂತೋಷ್

SCROLL FOR NEXT