ಸ್ವಿಚ್ { case n ಸಿನಿಮಾ ಸ್ಚಿಲ್  
ಸಿನಿಮಾ ವಿಮರ್ಶೆ

ಸ್ವಿಚ್ { case n ಸಿನಿಮಾ ವಿಮರ್ಶೆ: ಕಾರ್ಪೊರೇಟ್ ಜೀವನದ ಕಠೋರ ಸತ್ಯಗಳು; ಐಟಿ ಉದ್ಯೋಗಿಗಳಿಗೆ ಮಾತ್ರ ಅರ್ಥವಾಗುವ ಚಿತ್ರ!

Shilpa D

ಸಾಫ್ಟ್‌ವೇರ್ ಕೋಡಿಂಗ್ ಪರಿಕಲ್ಪನೆಗಳನ್ನು ಆಸಕ್ತಿದಾಯಕವಾಗಿ ಮತ್ತು ಬುದ್ಧಿವಂತಿಕೆಯಿಂದ ವಿಲೀನಗೊಳಿಸುವ ಕೋಡಿಂಗ್ ಬಗ್ಗೆ ಕಥೆ ಹೆಣೆಯಲಾಗಿದೆ. ಒಟ್ಟಾರೆ ಕೋಡ್‌ನ ಪ್ರತಿಯೊಂದು ಸಾಲಿನ ಹಿಂದೆ ಸವಾಲುಗಳಿವೆ. ಯಶಸ್ಸು, ಗೆಲುವು ಮತ್ತು ಅಭಿವೃದ್ಧಿಯ ಹಿಂದೆ ಮನುಷ್ಯನ ನೋವಿನ ಹಾಗೂ ಹೋರಾಟದ ಒಂದೊಂದು ಕಥೆಯಿದೆ.

ಅಗ್ನಿಸಾಕ್ಷಿ ಧಾರಾವಾಹಿಯ ನಟ ವಿಜಯ್‌ ಲಲಿತಾ ಸೂರ್ಯ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಅಗ್ನಿಪರೀಕ್ಷೆಗಿಳಿದಿದ್ದಾರೆ. ವಿಜಯ್ ಲಲಿತಾ ಸೂರ್ಯ ನಾಯಕನಾಗಿ ನಟಿಸಿರುವ ‘ಸ್ವಿಚ್ { case n’ ಸಿನಿಮಾ ತೆರೆಕಂಡಿದ್ದು, ಐಟಿ ವೃತ್ತಿಪರರು ಎದುರಿಸುವ ಸವಾಲುಗಳ ಸರಮಾಲೆನ್ನು ಬಿಚ್ಚಿಡಲಾಗಿದೆ.

ಚೊಚ್ಚಲ ನಿರ್ದೇಶಕ ಚೇತನ್ ಶೆಟ್ಟಿಯವರ ಸ್ವಿಚ್ {case n, ಇದು ಸಿ++ ಮತ್ತು ಜಾವಾ ಸ್ಕ್ರಿಪ್ಟ್‌ನಂತಹ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವವರಿಗೆ ಇಷ್ಟವಾಗುವಂತೆ ಕಥೆ ಹೇಳಲಾಗಿದೆ. ಸಾಫ್ಟ್‌ವೇರ್ ಕೋಡಿಂಗ್ ಪರಿಕಲ್ಪನೆಗಳನ್ನು ಆಸಕ್ತಿದಾಯಕವಾಗಿ ಮತ್ತು ಬುದ್ಧಿವಂತಿಕೆಯಿಂದ ವಿಲೀನಗೊಳಿಸುವ ಕೋಡಿಂಗ್ ಬಗ್ಗೆ ಕಥೆ ಹೆಣೆಯಲಾಗಿದೆ. ಸ್ವತಃ ಐಟಿ ವೃತ್ತಿಪರರಾಗಿರುವ ನಿರ್ದೇಶಕ ಚೇತನ್ ಅವರು ಐಟಿ ಜೀವನದ ವೈಯಕ್ತಿಕ ಅನುಭವಗಳಿಂದ ಕತೆ ಬರೆದಿದ್ದಾರೆ. ಟೆಕ್ಕಿಗಳಲ್ಲದವರೂ ಚಿತ್ರವನ್ನು ನೋಡುವಂತೆ ಆಕರ್ಷಕವಾಗಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬದಿಂದ ಬಂದು ಕ್ರಿಕೆಟಿಗನಾಗುವ ಕನಸು ಹೊಂದಿರುವ ಸಾಮಾನ್ಯ ಐಟಿ ಉದ್ಯೋಗಿ ಸಿದ್ಧಾರ್ಥ್ (ವಿಜಯ್ ಲಲಿತಾ ಸೂರ್ಯ) ಸುತ್ತ ಈ ಚಿತ್ರ ಸುತ್ತುತ್ತದೆ. ಸಿದ್ದಾರ್ಥ್ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಅಂತರ್ಮುಖಿ ಯುವಕ. ಆತ ಹೊಸ ಐಟಿ ಕಂಪನಿಗೆ ಕಾಲಿಡುತ್ತಾನೆ, ಆ ಕಂಪನಿ ಆತನ ಕನಸು ನನಸಾಗಿಸುವಂತಹ ಎಲ್ಲಾ ಸೌಕರ್ಯಗಳಿಂದ ತುಂಬಿರುತ್ತದೆ. ಆದರೆ ಕಂಪನಿಯಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನದ ವೇಳೆ ಸಿದ್ಧಾರ್ಥ್ ಗೆ ಕಚೇರಿ ರಾಜಕೀಯದ ಬಗ್ಗೆ ತಿಳಿಯುತ್ತದೆ. ಐಟಿ ಉದ್ಯಮದೊಳಗಿನ ಸ್ನೇಹ, ರಾಜಕೀಯ ಮತ್ತು ಸಂಬಂಧಗಳ ವಿಷಯಗಳನ್ನು ಚೇತನ್ ಶೆಟ್ಟಿ ಚಿತ್ರದಲ್ಲಿ ತೋರಿಸಿದ್ದಾರೆ. ಸಿನಿಮಾದಲ್ಲಿ ಒಬ್ಬ ಐಟಿ ಉದ್ಯೋಗಿಯ ದೈನಂದಿನ ಜೀವನವನ್ನು ತೆರೆದಿಡಲಾಗಿದೆ. ಕಚೇರಿಯಲ್ಲಿನ ಸಂಬಂಧಗಳು, ವೃತ್ತಿಪರ ಆಕಾಂಕ್ಷೆಗಳು ಹಲವು ಬದಲಾವಣೆಗಳಿಗೆ ಕಾರಣವಾಗುತ್ತದೆ. ಸಿದ್ಧಾರ್ಥ್ ವೃತ್ತಿ ಜೀವನದ ಪ್ರಯಾಣದ ಮೂಲಕ, ಸಹೋದ್ಯೋಗಿಗಳ ಕುತಂತ್ರ ಮತ್ತು ಹೊರಗಿನ ಅವಕಾಶಗಳ ಪ್ರಲೋಭನೆ ಹಾಗೂ ಹದಗೆಟ್ಟ ಕಾರ್ಪೊರೇಟ್ ಜೀವನದ ಕಠೋರ ಸತ್ಯಗಳನ್ನು ಸಿನಿಮಾದಲ್ಲಿ ತೋರಿಸಿದ್ದಾರೆ.

ಇದೇ ವೇಳೆ ನಾಯಕಿ ನವ್ಯ (ಶ್ವೇತಾ ವಿಜಯ್ ಕುಮಾರ್) ಸಿದ್ದಾರ್ಥ್ ಪ್ರೀತಿಯಲ್ಲಿ ಬೀಳುತ್ತಾಳೆ, ಆದರೆ ಆಕೆಯ ಅವಕಾಶವಾದಿತನ ನೈಜ ಪ್ರೀತಿಯನ್ನು ಮಸುಕುಗೊಳಿಸುತ್ತವೆ. ಸಿದ್ಧಾರ್ಥ್ ಒಂದು ಕಂಪನಿ ಬಿಟ್ಟು ಮತ್ತೊಂದು ಕಂಪನಿ ಸೇರಿದಾಗ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ವೃತ್ತಿಜೀವನದ ಅಭಿವೃದ್ಧಿಯ ಕಹಿ ಸತ್ಯಗಳನ್ನು ಬಹಿರಂಗಪಡಿಸುತ್ತದೆ.

ಚೇತನ್, ತಮ್ಮ ಚೊಚ್ಚಲದಲ್ಲಿ, ಐಟಿ ಜೀವನದ ಕಥೆಯನ್ನು ಯಾವುದೇ ಕತ್ತರಿ ಪ್ರಯೋಗ ಮಾಡದೇ ನೇರವಾಗಿ ಪ್ರೇಕ್ಷಕರಿಗೆ ನೀಡುವ ಮೂಲಕ ಚಿತ್ರದಲ್ಲಿ ವಾಸ್ತವತೆ ತರಲು ಪ್ರಯತ್ನಿಸಿದ್ದಾರೆ. ಪ್ರಸಿದ್ಧ ನಟ ವಿಜಯ್ ಲಲಿತಾ ಸೂರ್ಯ, ಸಂತೋಷ್ ಕರ್ಕಿ, ರಾಜಾ ಬಾಲವಾಡಿ ಹೊರತುಪಡಿಸಿ, ಬಹುತೇಕ ಹೊಸಬರೇ (ಪೃಥ್ವಿರಾಜ್, ವಿಜಯ್ ಸಿದ್ದರಾಜ್, ಕಾರ್ತಿಕ್ ವೈಭವ್) ಚಿತ್ರದಲ್ಲಿ ತುಂಬಿದ್ದಾರೆ. ಸ್ವಿಚ್ { case n: ಕಷ್ಟಪಟ್ಟು ದುಡಿಯುವ ಉದ್ಯೋಗಿಯ ಅಸ್ತಿತ್ವವನ್ನು ಡಿಕೋಡ್ ಮಾಡುವ, ಕನಸುಗಳು ಹಾಗೂ ಆಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದು ಕೇವಲ ಸಿನಿಮಾದಂತಿಲ್ಲ, ಬೈಟ್‌ಗಳು ಮತ್ತು ಪಿಕ್ಸೆಲ್‌ಗಳಿಂದ ಸಂಯೋಜಿತವಾಗಿದೆ. ಐಟಿ ಅಭಿಮಾನಿಗಳು ಮತ್ತು ಐಟಿ ವೃತ್ತಿ-ಆಧಾರಿತ ವ್ಯಕ್ತಿಗಳಿಗೆ ಮಾತ್ರ ಇಷ್ಟವಾಗುವ ಸಿನಿಮಾವಾಗಿದೆ.

ಕೋಡ್‌ನ ಪ್ರತಿಯೊಂದು ಸಾಲಿನ ಹಿಂದೆ ಸವಾಲುಗಳಿವೆ. ಯಶಸ್ಸು, ಗೆಲುವು ಮತ್ತು ಅಭಿವೃದ್ಧಿಯ ಹಿಂದೆ ಮನುಷ್ಯನ ನೋವಿನ ಹಾಗೂ ಹೋರಾಟದ ಒಂದೊಂದು ಕಥೆಯಿದೆ ಎಂದು ಸಿನಿಮಾ ತಿಳಿಸುತ್ತದೆ. ಐಟಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವವರಿಗೆ, ಸ್ವಿಚ್ { case n: ವೀಕ್ಷಿಸಲು ಯೋಗ್ಯವಾದ ಚಲನಚಿತ್ರವಾಗಿದೆ.

ಚಿತ್ರ: ಸ್ವಿಚ್ { case n

ನಿರ್ದೇಶಕ: ಚೇತನ್ ಶೆಟ್ಟಿ

ಕಲಾವಿದರು: ವಿಜಯ್ ಲಲಿತಾ ಸೂರ್ಯ, ಶ್ವೇತಾ ವಿಜಯ್‌ಕುಮಾರ್, ಪೃಥ್ವಿ ರಾಜ್, ವಿಜಯ್ ಸಿದ್ದರಾಜ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT