ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬೃಂದಾವಿಹಾರಿ ಚಿತ್ರವು ಫ್ಯಾಮಿಲಿ ಆಡಿಯನ್ಸ್ಗಾಗಿ ಸೂಕ್ತವಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲಘಟ್ಟ, ಸಂಬಂಧಗಳ ಮೌಲ್ಯದ ಕುಸಿತ, ಮತ್ತು ಮಾಧವನ ಜೀವನದ ಸತ್ಯವನ್ನು ಚಿತ್ರವು ನಾಟಕೀಯವಾಗಿ ಅನಾವರಣಗೊಳಿಸುತ್ತದೆ. ಟಿವಿ ರಿಯಾಲಿಟಿ ಶೋಗಳ ಪ್ರಭಾವ ಮತ್ತು ಸಂಬಂಧಗಳ ಮಹತ್ವವನ್ನು ಚಿತ್ರವು ಪರಿಣಾಮಕಾರಿಯಾಗಿ ತೋರಿಸುತ್ತದೆ.
ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿ, ಶ್ರೀನಿವಾಸ್ ರಾಜು ನಿರ್ದೇಶನ ಬಂದಾವಿಹಾರಿ ಸಿನಿಮಾ ರಿಲೀಸ್ ಆಗಿದೆ. ಬೃಂದಾವಿಹಾರಿ ಚಿತ್ರದ ಮೊದಲ ಭಾಗವು ಬ್ರಿಟಿಷರ ಆಳ್ವಿಕೆಯ ಕಾಲದ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತದೆ. ನಂತರ ಕಥೆಯನ್ನು ವರ್ತಮಾನಕ್ಕೆ ತಂದು, ಇಂದಿನ ವೇಗದ ಬದುಕಿನಲ್ಲಿ ಆ ಹಳೆಯ ಬಾಂಧವ್ಯಗಳು ಎಷ್ಟರ ಮಟ್ಟಿಗೆ ಉಳಿದುಕೊಂಡಿವೆ ಎಂಬ ಬಗ್ಗೆ ಪ್ರಶ್ನೆ ಮೂಡಿಸುತ್ತದೆ.
ಕಾಲ ಬದಲಾದಂತೆ ಸಂಬಂಧಗಳ ಮೌಲ್ಯಗಳು ಕೂಡಾ ಕುಸಿಯುತ್ತಾ ಹೋಗುತ್ತಿವೆ. ತಂದೆ-ತಾಯಿ, ಮಗ-ಮಗಳು.. ಹೀಗೆ ಎಲ್ಲದರಲ್ಲೂ ಬಾಂಧವ್ಯ ಕಡಿಮೆಯಾಗಿ ವ್ಯವಹಾರಿಕವಾಗುತ್ತಿವೆ. ಇಂತಹ ಒಂದು ಗಂಭೀರ ವಿಚಾರವನ್ನಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ ಬೃಂದಾವಿಹಾರಿ. ಗಣೇಶ್ ಅವರಂತಹ ಫ್ಯಾಮಿಲಿ ಹೀರೋಗೆ ನಿರ್ದೇಶಕ ಶ್ರೀನಿವಾಸ ರಾಜು ಫ್ಯಾಮಿಲಿ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಟಿ.ವಿ ಚಾನೆಲ್ವೊಂದರ ಸಿಇಒ ರಾಮ್ಕುಮಾರ್ ಈ ಶೋ ರೂವಾರಿ. ತನ್ನ ದತ್ತು ಮಗನನ್ನೇ ‘ಬೃಂದಾವನ’ ರಿಯಾಲಿಟಿ ಶೋನ ಪಾತ್ರವಾಗಿಸುತ್ತಾನೆ. ಹೀಗೆ ಬೃಂದಾವನದಲ್ಲೇ 25 ವರ್ಷ ಬದುಕು ಕಳೆಯುವ ವಿಹಾರಿಯೇ ಕಥಾನಾಯಕ ಮಾಧವ.
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಬೃಂದಾವನ ಎಂಬ ಊರು.. ಆ ಊರಲ್ಲಿ ಮಾಧವ (ಗಣೇಶ್) ಅಂದ್ರೆ ಎಲ್ಲರಿಗೂ ಪ್ರಾಣ. ಇಡೀ ಊರಿಗೆ ಮಾಧವನೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಮಾಧವನಿಗೆ ಅಪ್ಪ - ಅಮ್ಮ ಇಲ್ಲ. ಸಾಕಿರೋದು ಅಜ್ಜ (ಅಶೋಕ್) - ಅಜ್ಜಿ (ಲಕ್ಷ್ಮಿ). 15 ವರ್ಷಗಳ ಬಳಿಕ ಚಿಕ್ಕಪ್ಪ (ರಾಜೇಶ್) - ಚಿಕ್ಕಮ್ಮ (ಸಂಗೀತಾ) ಬರ್ತಾರೆ. ಹಬ್ಬದ ವೇಳೆ ಮಾತ್ರ ಬಂಧುಗಳು ಆಗಮಿಸುತ್ತಾರೆ. ಅಷ್ಟು ಬಿಟ್ಟರೆ ಮಾಧವನಿಗೆ ಪತ್ರಗಳು ಬರುತ್ತಿರುತ್ತವೆ. ಆದರೆ ಮಾಧವನ ಇಡೀ ಜೀವನವೇ ಸುಳ್ಳು. ಸುಳ್ಳಿನ ಪ್ರಪಂಚದಲ್ಲೇ ಮಾಧವ 25 ವರ್ಷಗಳಿಂದ ಬದುಕುತ್ತಿರುತ್ತಾನೆ. ಆ ಸುಳ್ಳು ಏನು ಎಂಬುದೇ ಇಂಟರ್ವೆಲ್ ಬ್ಲಾಕ್ನಲ್ಲಿ ಬರುವ ಬಹುದೊಡ್ಡ ಟ್ವಿಸ್ಟ್. ಆನಂತರ ಏನಾಗುತ್ತೆ ಎಂಬುದು ಸಿನಿಮಾದ ಹೈಲೈಟ್. ಟಿವಿ ರಿಯಾಲಿಟಿ ಶೋ ಕ್ರೇಜ್ ಸಹ ಇದೆ. ಟಿಆರ್ಪಿಗೋಸ್ಕರ ಚಾನೆಲ್ಗಳು ಮಾಡುವ ಬ್ಲಂಡರ್ಗಳನ್ನ ಎತ್ತಿ ತೋರಿಸಲಾಗಿದೆ.
ಹಳ್ಳಿಯಲ್ಲಿ ಅಜ್ಜ – ಅಜ್ಜಿ ಜೊತೆ ಬದುಕು ಸಾಗಿಸುವ ಮಾಧವನ ಸುತ್ತ ಮುತ್ತ ಅನೇಕ ಸ್ನೇಹಿತರು, ಬಂಧು ಬಳಗ. ರಾಧಾ (ದೇವಿಕಾ ಭಟ್) ಮಾಧವನನ್ನು ಇಷ್ಟಪಡುತ್ತಾಳೆ. ಆತನೂ ಕೂಡ ಆಕೆಯೇ ಸರ್ವಸ್ವ ಎಂದುಕೊಂಡವ. ಇದ್ದಕ್ಕಿದ್ದಂತೆ ರಾಧಾ ಕೈಕೊಟ್ಟು ಹೋಗಿ ಬಿಡ್ತಾಳೆ. ಮತ್ತೊಂದೆಡೆ ಮಾಧವನನ್ನು ಮೀರಾ (ಮಾಳವಿಕ ಶರ್ಮಾ) ಮನಸಾರೆ ಪ್ರೀತಿಸುತ್ತಾಳೆ. ಇಬ್ಬರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಇಬ್ಬರ ಮುಖವಾಡವೂ ಕಳಚಿ ಬಿಡುತ್ತದೆ. ಇದ್ಯಾವುದರ ಅರಿವೂ ಇಲ್ಲದ ಮಾಧವನಿಗೆ ಸತ್ಯದ ಅರಿವಾದಾಗ ಮುಂದೇನಾಗುತ್ತದೆ. ಮೀರಾ, ರಾಧ, ನಿಜಕ್ಕೂ ಮಾಧವನನ್ನು ಪ್ರೀತಿ ಮಾಡಿದ್ರಾ.. ಎನ್ನುವುದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.
ಇನ್ನೂ ಬೃಂದಾವಿಹಾರಿ' ಚಿತ್ರಕ್ಕಾಗಿ ‘ಬೃಂದಾವನ’ ಎಂಬ ಲೋಕವನ್ನೇ ಸೃಷ್ಟಿಸಲಾಗಿದೆ. ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಸೆಟ್ ಹಾಕಲಾಗಿದೆ. ಹಾಡುಗಳನ್ನ ರಿಚ್ ಆಗಿ ಚಿತ್ರೀಕರಿಸಲಾಗಿದೆ. 25 ವರ್ಷದ ಮಾಧವನ ಪಾತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಬಣ್ಣ ಹಚ್ಚಿದ್ದಾರೆ. ತೆರೆಮೇಲೆ ಗಣೇಶ್ ಯಂಗ್ ಆಗಿ ಕಾಣಿಸುತ್ತಾರೆ. ಮಾಧವನ ಪಾತ್ರಕ್ಕೆ ಗಣೇಶ್ ಅಕ್ಷರಶಃ ಜೀವ ತುಂಬಿದ್ದಾರೆ. ಡ್ಯಾನ್ಸ್, ಆಕ್ಟಿಂಗ್ ಹಾಗೂ ಸ್ಟಂಟ್ಸ್ ವಿಚಾರದಲ್ಲಿ ಗಣೇಶ್ ಗಮನ ಸೆಳೆಯುತ್ತಾರೆ. ಮೊದಲಾರ್ಧದಲ್ಲಿ ಮುಗ್ಧನಾಗಿ ಕಾಣಿಸಿಕೊಳ್ಳುತ್ತಾರೆ ಗಣೇಶ್. ದೇವಿಕಾ ಭಟ್ ರಾಧೆಯಾಗಿ, ಮಾಳವಿಕಾ ಶರ್ಮ ಮೀರಾ ಆಗಿ ಉತ್ತಮವಾಗಿ ನಟಿಸಿದ್ದಾರೆ.
ಕುರಿ ಪ್ರತಾಪ್ ಸ್ಕ್ರೀನ್ ಮೇಲೆ ಬಂದಾಗೆಲ್ಲಾ ಕಾಮಿಡಿ ಕಚಗುಳಿ ನೀಡುತ್ತಾರೆ. ಮಂಜು ಪಾವಗಡ ಮೂಗನ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಹಿರಿಯ ನಟಿ ಲಕ್ಷ್ಮೀ, ಹಿರಿಯ ನಟ ಅಶೋಕ್, ನಟ ರಾಮ್ಕುಮಾರ್, ಸಾಧು ಕೋಕಿಲ, ಶ್ವೇತಾ, ರಂಗಾಯಣ ರಘು, ಜಗ್ಗಪ್ಪ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸಿನಿಮಾದ ಮೊದಲಾರ್ಧದಲ್ಲಿ ಹೊಲ, ಗದ್ದೆ, ಹಾಡು, ಸುಮುಧರ ಸಂಗೀತದ ನಾದ, ಮೀರಾ, ರಾಧಾಳ ಸಂಭಾಷಣೆ ರೀತಿ.. ಅಜ್ಜ, ಅಜ್ಜಿ, ಸುತ್ತಲಿರುವ ಸ್ನೇಹಿತರು, ಬಂಧು ಬಳಗ ಎಲ್ಲವೂ ಅದ್ಬುತ ದೃಶ್ಯ ವೈಭವವನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಎರಡನೇ ಭಾಗದಲ್ಲಿ ಮೊದಲರ್ಧದಲ್ಲಿರುವುದು ಎಲ್ಲವೂ ನಾಟಕ ಎನ್ನುವ ಸತ್ಯದ ಅನಾವರಣವಾಗುತ್ತದೆ.
ಬ್ರಿಟಿಷರೊಂದಿಗಿನ ಸಂಘರ್ಷವು ಕಥೆಗೆ ಮತ್ತೊಂದು ಆಯಾಮವನ್ನು ನೀಡುತ್ತದೆ. ಕ್ರಿಕೆಟ್ ಮತ್ತು ಸಾಂಪ್ರದಾಯಿಕ 'ಗಿಲ್ಲಿ ದಂಡು' ಆಟಗಳ ನಡುವೆ ಹೋಲಿಕೆಗಳನ್ನು ತರುವ ಮೂಲಕ, ಸ್ವಾಭಿಮಾನ ಮತ್ತು ಅಸ್ತಿತ್ವದ ಪ್ರಶ್ನೆ ಎಂದುರಾಗುತ್ತದೆ. ಬ್ರಿಟಿಷ್ ಅಧಿಕಾರಿಗಳು ಮಾಧವನನ್ನು 'ಬ್ರೌನ್ ಬಾಯ್' (ಕಂದು ಬಣ್ಣದ ಹುಡುಗ) ಮತ್ತು 'ಬ್ಲಡಿ ಇಂಡಿಯನ್' ಎಂದು ಅವಮಾನಿಸಿದಾಗ, ಅವನು ಅದಕ್ಕೆ ಕ್ರಿಕೆಟ್ ಮೈದಾನದಲ್ಲೇ ಉತ್ತರ ನೀಡಲು ನಿರ್ಧರಿಸುತ್ತಾನೆ. ಈ ಭಾಗಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ, ಏಕೆಂದರೆ ಇಲ್ಲಿ ಮಾತುಗಳಿಗಿಂತ ಆಟವೇ ಎಲ್ಲವನ್ನೂ ಹೇಳುತ್ತದೆ.
ಬೃಂದಾವಿಹಾರಿ ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ನಿರೂಪಣೆ ಮತ್ತು ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಬೇಕಿತ್ತು, ಕೆಲವು ಕಲ್ಪನೆಗಳು ವಾಸ್ತವಕ್ಕೆ ದೂರವಾಗಿವೆ ಎನಿಸುತ್ತದೆ.. ಕಥೆ - ಚಿತ್ರಕಥೆಯಲ್ಲಿ ಇನ್ನೂ ಗಟ್ಟಿತನ ಇರಬೇಕಿತ್ತು. ಈ ಚಿತ್ರದಲ್ಲಿ ಸಂಬಂಧಗಳ ಮಹತ್ವ ಹಾಗೂ ಮನುಷ್ಯತ್ವ ಬಗ್ಗೆ ತಿಳಿಸಲು ನಿರ್ದೇಶಕ ಶ್ರೀನಿವಾಸ್ ರಾಜು ಯತ್ನಿಸಿದ್ದಾರೆ. ಒಟ್ಟಾರೆ ಫ್ಯಾಮಿಲಿ ಆಡಿಯನ್ಸ್ ಇಷ್ಟ ಪಡುವ ಕಥೆಯಾಗಿದೆ.
ಸಿನಿಮಾ: ಬೃಂದಾ ವಿಹಾರಿ
ನಿರ್ದೇಶಕರು: ಶ್ರೀನಿವಾಸ್ ರಾಜು
ತಾರಾಗಣ: ಗಣೇಶ್, ದೇವಿಕಾ ಭಟ್, ಮಾಳವಿಕಾ ಶರ್ಮಾ, ರಾಮ್ಕುಮಾರ್, ಶ್ವೇತಾ, ಲಕ್ಷ್ಮಿ, ಅಶೋಕ್, ಕುರಿ ಪ್ರತಾಪ್, ರಂಗಾಯಣ ರಘು, ರಾಜೇಶ್ ನಟರಂಗ ಮುಂತಾದವರು