ಇದು ಮತದಾರನ ಜವಾಬ್ದಾರಿ ಪರೀಕ್ಷೆಯೂ ಹೌದು!
ನಮ್ಮ 100 ಜನರಲ್ಲಿ 70 ಜನ 1957ರಲ್ಲೊಮ್ಮೆ ಮತ ಚಲಾಯಿಸಿದ್ದೆವು. ಅದಾದಮೇಲೆ ಏನಾಯಿತೇನೋ ಗೊತ್ತಿಲ್ಲ. ನಮ್ಮದೇ ಆದ ವೈಯಕ್ತಿಕ ಲೋಕದಲ್ಲಿ ಬದುಕುತ್ತಿರುವ ನಾವು 100ರಲ್ಲಿ ಅಂದಾಜು 65 ಜನರು ಮಾತ್ರ ಕಳೆದ ನಾಲ್ಕು ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ. (1994ರಲ್ಲಿ 69, 1999ರಲ್ಲಿ 68, 2007ರಲ್ಲಿ 66 ಮತ್ತು ಕಳೆದ 2008ರಲ್ಲಿ 65) ಉಳಿದ 35 ಜನರಿಗೆ ಮತದಾನದ ಹಕ್ಕು ಚಲಾಯಿಸಬೇಕಿಲ್ಲ. ನಮ್ಮನ್ನು ಆಳಬೇಕಿರುವ ರಾಜಕಾರಣಿಗಳಿಂದ ಈ 35 ಜನರಿಗೆ ಆಗಬೇಕಾದ್ದೇನೂ ಇಲ್ಲ ಎಂಬ ನಿರ್ಣಯವನ್ನು ಮಾಡಿದಂತಿದೆ. ನಾಳೆಯ ದಿನಗಳಲ್ಲಿ ಪ್ರತಿಯೊಂದು ಸಮಸ್ಯೆಗೂ ನಮ್ಮನ್ನಾಳುವವವರನ್ನೂ ಪ್ರಶ್ನಿಸುವ ಹಕ್ಕೂ ಇವರಿಗಿಲ್ಲ. ಏಕೆಂದರೆ ಅವರ ಕೈಯಲ್ಲಿ ಇವರ ಪಾತ್ರ ಶೂನ್ಯ. ಉಳಿದ 35 ಜನರಲ್ಲಿ ಕನಿಷ್ಟ ಪಕ್ಷ 25 ರಿಂದ 30 ಜನರು ಮತದಾನದ ಹಕ್ಕನ್ನು ಚಲಾಯಿಸಿದ್ದೇ ಆಗಿದ್ದಲ್ಲಿ ಫಲಿತಾಂಶ ಬೇರೆಯದೇ ರೂಪ ಪಡೆಯುತ್ತಿತ್ತೇನೋ ಎನಿಸುತ್ತದೆ.
1978ರಲ್ಲಿ ಚುನಾವಣೆಯ ಮತದಾನದ ಪ್ರಮಾಣ ನೋಡಿದರೆ ಅಚ್ಚರಿಯಾಗುತ್ತದೆ. ನಮ್ಮ 100 ಜನರಲ್ಲಿ 72 ಜನ ತಮ್ಮ ಹಕ್ಕನ್ನು ಚಲಾಯಿಸಿದ್ದರು. ತುರ್ತು ಪರಿಸ್ಥಿತಿ ಘೋಷಿಸಿದ್ದ ಆಡಳಿತಾರೂಢ ಕಾಂಗ್ರೆಸ್ ವಿರೋಧಿ ಅಲೆಯ ನಡುವೆಯೂ ಕರ್ನಾಟಕದಲ್ಲಿ 45 ಪ್ರತಿಶತ ಮತಗಳನ್ನು ಸೆಳೆದು 149 ಸೀಟುಗಳನ್ನು ಪಡೆದು ಮತ್ತೆ ಅಧಿಕಾರ ಹಿಡಿಯಿತು. ದೇವರಾಜ್ ಅರಸ್ ಅವರ ಉತ್ತಮ ಆಡಳಿತದ ಪರಿಣಾಮದಿಂದ ಅವರ ಕೈಹಿಡಿಯುವಂತೆ ಮತದಾರ ಮಾಡಿದ್ದ. ಆ ಚುನಾವಣೆಯಲ್ಲಿ ಮಹಿಳೆಯರೂ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು. (57ಪ್ರತಿಶತದಿಂದ 68 ಪ್ರತಿಶತಕ್ಕೆ ಏರಿಕೆ). ಇಲ್ಲಿಯವರೆಗೂ 100ರಲ್ಲಿ ಕೇವಲ 63 ಮಹಿಳೆಯರು ಮಾತ್ರ ತಮ್ಮ ಈ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಮತದಾನದ ಪ್ರಮಾಣ ಹೀಗೆ ಹೊಯ್ದಾಡುತ್ತಿದ್ದರೆ, ಪಕ್ಕದ ತಮಿಳುನಾಡಿನ ಮತದಾರ 2001ರಲ್ಲಿ 59, 2006ರಲ್ಲಿ 70, 2011ರಲ್ಲಿ 78 ಪ್ರತಿಶತ ಮತ ಚಲಾಯಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಈ ಪ್ರಮಾಣ ಏರಿಕೆ ಕಂಡಿದೆಯೇ ಹೊರತು ಇಳಿಕೆಯಂತೂ ಸುಳ್ಳು. ಅದಕ್ಕೆ ಗಟ್ಟಿಯಾದ ಸರ್ಕಾರವನ್ನು ತರುವಲ್ಲಿ ಇದೂ ಪ್ರಮುಖ ಕಾರಣ. ಹಿಂದುಳಿದ ಪ್ರದೇಶವೆಂದು ಕರೆಯಿಸಿಕೊಳ್ಳುವ ಉತ್ತರ ಪ್ರದೇಶದಲ್ಲೂ ಇತ್ತೀಚಿನ ಚುನಾವಣೆಯಲ್ಲಿ 14 ಪ್ರತಿಶತ ಹೆಚ್ಚಿನ ಮತದಾನ ಪ್ರಮಾಣ ಕಂಡುಬಂದಿದೆ. (2007ರಲ್ಲಿ 46 ಪ್ರತಿಶತ ಮತ್ತು 2012 ರಲ್ಲಿ 60 ಪ್ರತಿಶತ).
ಈ ಅಂಕಿ ಅಂಶಗಳು ಮತದಾನದ ಪ್ರಮಾಣ ಮತ್ತು ಅದರ ಫಲಿತಾಂಶಗಳ ಸಂಬಂಧಗಳನ್ನು ಎತ್ತಿ ತೋರಿಸುತ್ತವೆ. ಪ್ರಜೆಗಳೇ ಪ್ರಭುಗಳಾಗಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದವರು ಎಂದು ಹೇಳಿಕೊಳ್ಳುವಾಗ ಮೇಲಿನ ಅಂಕಿಅಂಶಗಳು ನಮ್ಮನ್ನು ತರ್ಕಕ್ಕೀಡುಮಾಡುತ್ತವೆ. ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಜನ ಮಾತ್ರ ಮತದಾನ ಮಾಡಿ ಗೆಲ್ಲಿಸಿದ ರಾಜಕಾರಣಿಯೊಬ್ಬ ಹೇಗೆ ಎಲ್ಲರ ಪ್ರತಿನಿಧಿಯಾಗುತ್ತಾನೆ? ಉಳಿದ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಇರುವ ಜನರಿಗೆ ಇದನ್ನು ಅರ್ಥಮಾಡಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಿ ಪರಿಹಾರ ಕಂಡುಹಿಡಿಯುವದಕ್ಕೆ ಇದು ಸಕಾಲ.
ಮೇನಲ್ಲಿ ಮತದಾರನ ಜವಾಬ್ದಾರಿಯ ಪರೀಕ್ಷೆ ಎದುರುಗೊಳ್ಳಲಿದೆ. ಹಲವು ವರ್ಷಗಟ್ಟಲೇ ದುಂಬಾಲುಬಿದ್ದು, ಹೆಣಗಾಡಿ ಅವಕಾಶಗಳನ್ನು ಬಳಸಿಕೊಂಡು ಪಕ್ಷದ ಟಿಕೆಟ್ ಗಿಟ್ಟಿಸಿದ ಆಕಾಂಕ್ಷಿ ಅಭ್ಯರ್ಥಿಗೂ ಇದು ಅಗ್ನಿ ಪರೀಕ್ಷೆ. ಕಳೆದ ಹಲವು ವರ್ಷಗಳಿಂದ ಅತಂತ್ರ ರಾಜಕೀಯ ಸ್ಥಿತಿಗೆ ನಾವೆಲ್ಲ ಮೂಕಸಾಕ್ಷಿಗಳಾಗಿದ್ದೇವೆ. ರಾಜ್ಯದ ಚುಕ್ಕಾಣಿ ಹಿಡಿದ ಸರ್ಕಾರ ಅನುಭವಿಸಿದ ಪಡಿಪಾಟಲುಗಳು, ಅಧಿಕಾರ ಕೇಂದ್ರಿಕರಣಕ್ಕಾಗಿ ಆದ ಒಳಜಗಳಗಳು, ತನ್ನನ್ನು ತಾನು ಉಳಿಸಿಕೊಳ್ಳಲು ಮಾಡಿದ ಸರ್ಕಸ್ಸುಗಳು ಎಲ್ಲರಿಗೂ ಗೊತ್ತಿದ್ದು, ಏನೂ ಮಾಡಲಾಗದೇ ನಾವೆಲ್ಲ ಅಸಹಾಯಕರಾಗಿದ್ದು ಮನಸ್ಸಿನಲ್ಲಿದೆ. ಆಯಾ ಸಂದರ್ಭಗಳಲ್ಲಿ ಮಾತ್ರ ಚುನಾಯಿತ ಸರ್ಕಾರದ ಬಗ್ಗೆ ಅಸಹನೆ, ರೇಜಿಗೆ ಹುಟ್ಟಿ ಕೊನೆಗೆ ಈ ಬಾರಿಯಾದರೂ ಉತ್ತಮ ಸರ್ಕಾರವನ್ನು ಆರಿಸಿ ತರಬೇಕೆಂಬ ಆಸೆ ಮನಸನ್ನು ಹೊಕ್ಕು ಅಲ್ಲೇ ಕುಳಿತುಬಿಡುತ್ತದೆ. ಆದರೆ ಕಾಲಕ್ರಮೇಣ ಮತ್ತೆ ನಾವು ಮತದಾರರು ನಿರ್ಣಾಯಕ ಹಂತ (ಪೀಕ್ ಪಿರಿಯಡ್)ದಲ್ಲಿ ಎಡವಿಬಿಡುತ್ತೇವೆ. ಮತ್ತದೇ ರಾದ್ಧಾಂತಗಳು, ನಮ್ಮ ಮತ್ತದೇ ಗೋಳು, ಅಸಹನೆ, ರೇಜಿಗೆ ಪುನರಾವರ್ತನೆಯಾಗುತ್ತವೆ. ಕೆಲ ಸುಶಿಕ್ಷಿತ ವರ್ಗದ ಜನರಂತೂ ಇದೊಂದು ರಗಳೆ ಎಂಬಂತೆ ಮತ್ತದರ ಗೊಡವೆಯೇ ಬೇಡವೆಂಬಂತೆ ಮತದಾನವನ್ನು ತಿರಸ್ಕರಿಸುತ್ತಾರೆ. ಅರೇ, ನೀವು, ನಾವು ತಿರಸ್ಕರಿಸಿದ ಮಾತ್ರಕ್ಕೆ ಆಯ್ಕೆಗೊಂಡ ಅಭ್ಯರ್ಥಿ ನಮ್ಮನ್ನು ಪ್ರತಿನಿಧಿಸದೇ ಇರುತ್ತಾನೆಯೇ? ಅಥವಾ ಮತದಾನವನ್ನು ತಿರಸ್ಕರಿಸಿದವರಿಗಾಗಿಯೇ ಒಬ್ಬ ನಾಯಕನೇನಾದರೂ ಹುಟ್ಟುತ್ತಾನೆಯೇ? ಇಲ್ಲವಲ್ಲ. ಈ ಹಕ್ಕನ್ನು ತಿರಸ್ಕರಿಸುವುದರಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ನಾವೇ ವಿರೋಧಿಸಿದಂತೆ ಅಲ್ಲವೇ?
ಕೆಲವರು ಈ ಹಕ್ಕನ್ನು ಮಾರಿಕೊಳ್ಳುವುದಕ್ಕೂ ಸಿದ್ಧರಾಗುತ್ತಾರೆ. ಏಕೆಂದರೆ ಯಾರಿಗೆ ಮತ ಹಾಕಬೇಕೆನ್ನುವುದರ ವಿವೇಚನಾ ಶಕ್ತಿ ಇರದೇ ಇರುವುದು ಮತ್ತು ಅವರನ್ನು ಆರಿಸಿ ತಂದರೆ ಮುಂದೆ ಆಗಬಹುದಾದ ಪ್ರಯೋಜನ ಮತ್ತು ಉಪಯುಕ್ತತೆಯ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಮತ್ತು ಆ ಕ್ಷಣದಲ್ಲಿ ಅಭ್ಯರ್ಥಿ ನೀಡುವ ಹಣ ಅಥವಾ ಇನ್ನಾವುದೋ ಆಮಿಷಕ್ಕೆ ಬಲಿಯಾಗುವುದು ಈ ಎಲ್ಲ ಕಾರಣಗಳು ಇವರನ್ನು ಮತದಾನದ ಹಕ್ಕನ್ನೇ ಮಾರಿಕೊಳ್ಳುವಂತೆ ಮಾಡುತ್ತವೆ. ಆದರೆ ನಿರ್ಣಾಯಕ ಹಂತದಲ್ಲಿರುವಾಗ ಎಸಗುವ ಈ ತಪ್ಪು ಮುಂದೆ 5 ವರ್ಷಗಳವರೆಗೂ ನಮ್ಮನ್ನು ಕಾಡುತ್ತದೆ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ.
ಮತದಾನದ ಮೊದಲು ಈ ಕೆಲ ವಿಷಯಗಳ ಬಗ್ಗೆ ಚರ್ಚಿಸೋಣ. ನಮ್ಮನ್ನು ಆಳುವ ವ್ಯಕ್ತಿಯ ಸಮರ್ಥತೆಯ ಬಗ್ಗೆ ಮುಕ್ತವಾಗಿ ಚರ್ಚೆಗಳಾಗಬೇಕು. ಈ ಮೊದಲು ಕ್ಷೇತ್ರದಲ್ಲಿ ಆತ ಮಾಡಿದ ಕೆಲಸಗಳೇನು ಎಂಬುದನ್ನು ಪಟ್ಟಿ ಮಾಡಬೇಕು. ಯಾವ ಯೋಜನೆಗಳನ್ನು ಅವರು ಕ್ಷೇತ್ರಕ್ಕೆ ತಂದಿದ್ದಾರೆ, ಅಭಿವೃದ್ಧಿ ಕೆಲಸಗಳೇನಾಗಿವೆ, ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಅಭ್ಯರ್ಥಿಯ ನಡವಳಿಕೆಗಳು ಹೇಗಿವೆ, ಆರೋಗ್ಯ- ವೈಯಕ್ತಿಕ ಬದುಕು ಅವರಿಗೆ ಕೆಲಸ ಮಾಡಲು ಪೂರಕವೇ? .... ಹೀಗೆ ಅಭ್ಯರ್ಥಿಯ ಒಟ್ಟಾರೆ ಬದ್ಧತೆ ಬಗ್ಗೆ ಮುಕ್ತವಾಗಿ ವಿಶ್ಲೇಷಣೆಗಳಾಗಬೇಕು. ಯೋಗ್ಯ ವ್ಯಕ್ತಿಯೊಬ್ಬರಿಗೆ ಹಲವಾರು ಅಡೆತಡೆಗಳಿಂದ ಪ್ರತಿಷ್ಟಿತ ಪಕ್ಷದಿಂದ ಟಿಕೆಟ್ ಸಿಗದೇ ಹತಾಶರಾಗಿದ್ದಲ್ಲಿ ಕಣದಿಂದ ಹಿಂದೆ ಸರಿಯದೇ ಪಕ್ಷೇತರರಾಗಿಯಾದರೂ ಸ್ಪರ್ಧಿಸುವಂತೆ ಬೆಂಬಲಿಸಬೇಕು. ಹಾಲಿ ಇರುವ ಅಭ್ಯರ್ಥಿಯ ಕಾರ್ಯದಕ್ಷತೆಯನ್ನು ಅಳೆದುತೂಗಬೇಕು. ಆಯಾ ಕ್ಷೇತ್ರಗಳಲ್ಲಿ ಸುಶಿಕ್ಷಿತರಾದವರು, ಶ್ರೀಸಾಮಾನ್ಯರಿಗೆ ಇದರ ಅರಿವನ್ನುಂಟುಮಾಡಬೇಕು. ಕ್ಷಣಿಕ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಿದೆ. ಒಂದು ಬಾರಿ ಇದರ ಬಗ್ಗೆ ಶ್ರೀಸಾಮಾನ್ಯ ಜಾಗೃತಿಗೊಂಡರೆ ಯಾವುದೇ ಆಮಿಷಕ್ಕೂ ಅಷ್ಟು ಸುಲಭವಾಗಿ ಬೀಳಲಾರ. ವಿವಿಧ ಸಂಘ ಸಂಸ್ಥೆಗಳು ಸಕ್ರಿಯವಾಗಿ ಮುಕ್ತವಾಗಿ ಚರ್ಚೆಗಳನ್ನು ಏರ್ಪಡಿಸಿ ಸಾಧ್ಯವಾದಷ್ಟು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಮಹಿಳೆಯರ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದ್ದು ಮಹಿಳಾ ಸಂಘಟನೆಗಳು ಇದಕ್ಕೆ ಪಣ ತೊಡಬೇಕಿದೆ. ಪದವಿ ಕಾಲೇಜುಗಳಲ್ಲಿ ಉಪನ್ಯಾಸಕ ವರ್ಗವು ವಿದ್ಯಾರ್ಥಿಗಳಿಗೆ ಈ ವಿಷಯವಾಗಿ ಇನ್ನಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಚರ್ಚಾಕೂಟ, ಸ್ಪರ್ಧೆಗಳನ್ನು ಏರ್ಪಡಿಸಿ ಯಾವೊಬ್ಬ ವಿದ್ಯಾರ್ಥಿಯೂ ಮತದಾನ ಮಾಡದೇ ಉಳಿಯದಂತೆ ಮಾಡಬೇಕಿದೆ. ವಿದ್ಯಾರ್ಥಿಗಳನ್ನು ಆಯಾ ಕ್ಷೇತ್ರಗಳಲ್ಲಿ ಶ್ರೀಸಾಮಾನ್ಯರಿಗೆ ಜಾಗೃತಿ ಮೂಡಿಸುವಷ್ಟು ಸಮರ್ಥರನ್ನಾಗಿಸಿ ಅವರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಕುಟುಂಬದ ಪ್ರತಿಯೊಬ್ಬರೂ ಕೂಡ ತಮ್ಮ ಹಾಗೂ ತಮ್ಮ ಕುಟುಂಬದಲ್ಲಿಯ ಸದಸ್ಯರು ಮತದಾರರ ಪಟ್ಟಿಯಲ್ಲಿ ಇದ್ದಾರೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಿದೆ.
ಈಗಾಗಲೇ ಚುನಾವಣೆ ಆಯೋಗವು ದಕ್ಷ ಅಧಿಕಾರಿ ವರ್ಗವನ್ನು ಚುನಾವಣೆಗೆ ನೇಮಿಸಿದೆ. ಜನಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ಕೊಡಲು ಪ್ರಾರಂಭಿಸಿದ್ದು, ನಕಲಿ ಮತದಾನ ಮತ್ತು ತಿರಸ್ಕೃತ ಮತದಾನದ ಪ್ರಮಾಣವು ಆದಷ್ಟು ಕಡಿಮೆ ಆಗಲೆಂದು ಪಣತೊಟ್ಟಿದೆ. ಯಾವೆಲ್ಲ ಕಾರಣಗಳಿಂದ 15 ಪ್ರತಿಶತ ಮತದಾರ ಮತ ಚಲಾಯಿಸಲು ಸಾಧ್ಯವಾಗದೇ ಇದ್ದು, ಕನಿಷ್ಟ ಪಕ್ಷ ನಮ್ಮ ಮತದಾನದ ಪ್ರಮಾಣ 85 ಪ್ರತಿಶತ ದಾಟಿದರೂ ಸುಭದ್ರ ಸರ್ಕಾರ ಕರ್ನಾಟಕದಲ್ಲಿ ನೆಲೆಯೂರಲು ಒಂದು ಪೂರಕ ಕಾರಣವಾಗುವುದರಲ್ಲಿ ಸಂದೇಹವಿಲ್ಲ.
ಮೇ ತಿಂಗಳಿನ ಚುನಾವಣಾ ದಿನದಂದು ನಮ್ಮೆಲ್ಲ ವೈಯಕ್ತಿಕ ಕಮಿಟ್ಮೆಂಟುಗಳನ್ನು ಬದಿಗೊತ್ತಿ ಅಸಡ್ಡೆ ಮಾಡದೇ, ವಿವೇಕರಹಿತರಾಗಿ ತಿರಸ್ಕರಿಸದೇ, ಜಾಗರೂಕರಾಗಿ, ವಿವೇಚಿಸಿ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯೋಣ. ಏಕೆಂದರೆ ಮುಂದಿನ 5 ವರ್ಷಗಳಿಗಾಗಿ ನಾವು ಕಣದಲ್ಲಿರುವ ಅಭ್ಯರ್ಥಿಗಳ ಜೊತೆಗೆ ಕಮಿಟ್ ಆಗಬೇಕಿದೆ.
- ಡಾ. ಅಶೋಕ ಪಾಟೀಲ
ಗದಗ