ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜೀವನದಲ್ಲಿ ಮಂದಹಾಸ ಮೂಡಿಸಿದ 'ಮುಸ್ಕಾನ್‌'!

Mainashree
Updated On : 8 Apr 2013, 12:01 pm

ನನ್ನ ಜೀವನಕ್ಕೆ ಒಂದು ಮಹಾ ತಿರುವನ್ನು ಕೊಟ್ಟ ಒಂದು ಘಟನೆಯ ಬಗ್ಗೆ ನಿಮಗೆ ಹೇಳುತ್ತೇನೆ. ನಾನು ಮತ್ತು ನನ್ನ ಪತಿ ರಜನೀಶ್‌ರವರು ಕೆಲಸದಲ್ಲಿ ಎಷ್ಟು ತೊಡಗಿಸಿಕೊಂಡಿದ್ದೆವೆಂದರೆ ಸಮಯ ವೇಗವಾಗಿ ಹಾರಿ ಹೋಗುತ್ತಿರುವ ಅರಿವೂ ನಮಗೆ ಇರಲಿಲ್ಲ. ನಮಗಿಬ್ಬರಿಗೂ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಾಕಾಗುತ್ತಿರಲಿಲ್ಲ. ನಮಗೆ ಮಕ್ಕಳಾಗಿಲ್ಲವೆಂಬ ಕೊರಗು ಎಂದಿಗೂ ತಲೆದೋರಿರಲಿಲ್ಲ. ನಮಗೆ ಮಗು ಬೇಕು ಎಂದೂ ಅನಿಸುತ್ತಿರಲಿಲ್ಲ. ವಿಶೇಷವಾಗಿ ನಮ್ಮ ದೇಶದ ಜನಸಂಖ್ಯಾ ವಿಸ್ಫೋಟವನ್ನು ನೋಡಿ ನನ್ನ ಪತಿ ತುಂಬಾ ಬೇಜಾರು ಮಾಡಿಕೊಳ್ಳುತ್ತಿದ್ದರು. ಈ ಸಂಖ್ಯೆಯಲ್ಲಿ ನಮ್ಮದೂ ಒಂದು ಮಗು ಸೇರುವುದು ಬೇಡ ಎಂದು ಅವರಿಗೆ ಅನಿಸುತ್ತಿತ್ತು. ದೇಶದ ಎಲ್ಲಾ ಮಕ್ಕಳ ಜವಾಬ್ದಾರಿಯೂ ನಮ್ಮದಾಗಿರುವಾಗ ಕೇವಲ ಒಂದು ಮಗುವಿಗೇ ಏಕೆ ಸೀಮಿತಗೊಳ್ಳಬೇಕು ಎನ್ನುತ್ತಿದ್ದರು. ಅದರೂ ನಮ್ಮ ತಾಯಿ-ತಂದೆ ಮತ್ತು ಸ್ನೇಹಿತರು ಈ ಒಂದು ಅನುಭವ ಜೀವನದಲ್ಲಿ ಇರಲೇಬೇಕು ಎಂದು ಒತ್ತಾಯಿಸಿದರು. ಆ ಸಮಯದಲ್ಲಿ ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಹೆಣ್ಣು ಮಕ್ಕಳಿಗಾಗಿ ನಾವು ವೈಯಕ್ತಿಕವಾಗಿ ಏನಾದರೂ ಮಾಡಬೇಕೆಂದು ಅನಿಸಿತ್ತು. ಕಡೆಗೆ ಇಬ್ಬರೂ ಆಲೋಚಿಸಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳುವುದೆಂದು ನಿರ್ಧರಿಸಿದೆವು.
ಮಗುವನ್ನು ದತ್ತು ತೆಗೆದುಕೊಳ್ಳಬೇಕಾದರೆ ಈಆಖಆ ಎಂಬ ರಾಷ್ಟ್ರೀಯ ಸಂಸ್ಥೆಯ ಮೂಲಕ ನಿರ್ಧರಿಸಲಾದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಏಕೆಂದರೆ ಕೆಲವೊಮ್ಮೆ ಮಕ್ಕಳ ಶೋಷಣೆ ನಡೆಯುವಂತಹ ಪ್ರಸಂಗಗಳು ಸಂಭವಿಸಬಹುದು. ಅಂತೆಯೇ ದೆಹಲಿಯಲ್ಲಿರುವ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ತಗೆದುಕೊಳ್ಳುವ ಬಗ್ಗೆ ನಿರ್ಧರಿಸಿದೆವು. ಆ ಸಂಸ್ಥೆಯವರು ನಮ್ಮ ಮನೆಗೆ ಬಂದು ನಮ್ಮ ಸ್ಥಿತಿ-ಗತಿಯನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿ, ನಮ್ಮಿಬ್ಬರನ್ನು ಸಂದರ್ಶಿಸಿ, ಅವರಿಗೆ ನಾವು ಒಳ್ಳೆಯ ತಂದೆ ತಾಯಿ ಆಗುತ್ತೇವೆಂಬುದು ಖಾತ್ರಿ ಆದಮೇಲೆ ಒಂದು ದಿನ ನಮಗೆ ಹೇಳಿ ಕಳುಹಿಸಿದರು. ಐದು ತಿಂಗಳ ಹೆಣ್ಣು ಮಗು ದತ್ತಕಕ್ಕೆ ಇದೆಯೆಂದು ನಮಗೆ ತಿಳಿಸಿದರು. ದೆಹಲಿಯ ವಸಂತನಗರದಲ್ಲಿರುವ ಆ ಸಂಸ್ಥೆಗೆ ನಾನು, ರಜನೀಶ್ ಮತ್ತು ನಮ್ಮ ಅತ್ತೆ ಹೊರಟೆವು. ಜೊತೆಗೆ ಮಗುವಿನ ಬಟ್ಟೆಯನ್ನು ಮತ್ತು ಇತರೆ ಬೇಕಾಗುವ ವಸ್ತುಗಳನ್ನು ತೆಗೆದುಕೊಂಡು ಹೋದೆವು. ನಾವು ಮೂವರೂ ಆ ಸಂಸ್ಥೆಗೆ ಹೋಗಿ ಅಲ್ಲಿ ಒಂದು ಕೊಠಡಿಯಲ್ಲಿ ಕುಳಿತುಕೊಂಡೆವು. ಮೂರರಿಂದ ಹತ್ತು ವರ್ಷ ವಯಸ್ಸಿನ ಹಲವಾರು ಮಕ್ಕಳು ಸಂತೋಷದಿಂದ ಅಲ್ಲಿ ಆಟ ಆಡುತ್ತಿದ್ದವು.  ಆ ಮಕ್ಕಳೆಲ್ಲರಿಗೂ ನಾವು ತೆಗೆದುಕೊಂಡು ಹೋದ ಸಿಹಿಯನ್ನು ಹಂಚಿದೆವು.
 ಆಗ ಅಲ್ಲಿನ ಆಯಾ ಐದು ತಿಂಗಳ ಹೆಣ್ಣು ಮಗುವನ್ನು ತನ್ನ ತೋಳಿನಲ್ಲಿ ತೆಗೆದುಕೊಂಡು ಬಂದು ನಮಗೆ ತೋರಿಸಿದಳು. ಆ ಮಗು ನಮ್ಮನ್ನು ನೋಡಿ ಬಹಳ ಮುದ್ದಾಗಿ, ಸುಂದರವಾಗಿ ಕಣ್ಣು ಅರಳಿಸಿಕೊಂಡು ನಕ್ಕಿತು. ಅದರ ನಗು ನೋಡಿ ನಾವೂ ಪುಳಕಿತಗೊಂಡೆವು. ತಕ್ಷಣವೇ ಆ ಮಗುವಿನ ಹೆಸರನ್ನು 'ಮುಸ್ಕಾನ್‌' (ಮುಸ್ಕಾನ್ ಎಂದರೆ ಹಿಂದಿಯಲ್ಲಿ  'ನಗು ಮುಖ' ಎಂದರ್ಥ) ಎಂದು ಇಡಬೇಕೆಂದು ಅನ್ನಿಸಿಬಿಟ್ಟಿತು. ಮುಸ್ಕಾನ್‌ಳ ಪ್ರವೇಶದಿಂದಾಗಿ ನಮ್ಮ ಜೀವನ ಸಂಪೂರ್ಣ ಬದಲಾಯಿತು. ಬೇರೆ ಎಲ್ಲವೂ ಹಿಂದೆ ಸರಿದು ಹೋಗಿ ಕೇವಲ ಮುಸ್ಕಾನ್ ನಮ್ಮ ಪ್ರಪಂಚವಾದಳು. ಆಕೆ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಳು. ಮೊದಲು ರಜನೀಶ್‌ರವರಿಗೆ ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಅಂತಹ ಆಸಕ್ತಿ ಇರಲಿಲ್ಲ. ಆದರೆ ಮುಸ್ಕಾನ್ ನಮ್ಮ ಮನೆಗೆ ಬಂದ ದಿನದಿಂದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಗುವಿನೊಡನೆ ಆಟವಾಡುತ್ತಾ ಕುಳಿತುಬಿಡುತ್ತಿದ್ದರು. ಮುತುವರ್ಜಿಯಿಂದ ಮತ್ತು ಉತ್ಸಾಹದಿಂದ ಅದರ ಲಾಲನೆ ಪಾಲನೆ ಮಾಡುತ್ತಿದ್ದರು.  ಇದನ್ನು ಕಂಡು ನನಗೆ ಅತ್ಯಂತ ಆಶ್ಚರ್ಯವಾಯಿತು. ಅತ್ತೆಯವರು ಹದಿನೈದು ದಿನ ನಮ್ಮೊಂದಿಗಿದ್ದು ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟರು. ನಾನು ಮಗು ಮುಸ್ಕಾನ್ ನಗುವಿನ ಸುಂದರ ಪೋಟೋಗಳನ್ನು ತೆಗೆದುಕೊಂಡು ಹೋಗಿ ನನ್ನ ಕಾರ್ಯದರ್ಶಿಗೆ ತೋರಿಸಿದೆ. ಅವರು ನನ್ನನ್ನು ಅಪ್ಪಿಕೊಂಡು ದತ್ತು ತೆಗೆದುಕೊಂಡದಕ್ಕಾಗಿ ಶ್ಲಾಘಿಸಿದರು. ಎರಡು ತಿಂಗಳ ಕಾಲ ರಜೆಯನ್ನು ಹಾಕಿ ಚಂಡೀಗಢ್‌ಗೆ ಬಂದು ಸಂಪೂರ್ಣ ಸಮಯವನ್ನು ಮಗುವಿನ ಪಾಲನೆ, ಪೋಷಣೆಗೆ ಮೀಸಲಿಟ್ಟೆ. ಹೊಸ ಜವಾಬ್ದಾರಿಯೊಂದಿಗೆ ನಮ್ಮ ಜೀವನದ ಶೈಲಿಯನ್ನು ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಅಣಿಯಾದೆವು. ಒಂದು ಅಚ್ಚರಿಯ ಸಂಗತಿ ಎಂದರೆ ನಾನು ಯಾರೊಡನೆ ದತ್ತು ತೆಗೆದುಕೊಂಡಿರುವ ವಿಷಯ ಪ್ರಸ್ತಾಪಿಸಿದರೂ ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ದತ್ತು ತೆಗೆದುಕೊಂಡಿರುವ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು. ನಮಗೆ ತಿಳಿದವರೆಲ್ಲರೂ ಮಗುವನ್ನು ನೊಡಲು ಬಂದರು. ಮುಸ್ಕಾನ್ ಎಲ್ಲರ ಕಣ್ಮಣಿ ಆದಳು. ನಮಗೆ ಸಂಬಂಧಪಟ್ಟ ಎಲ್ಲರಿಗೂ ಮುಸ್ಕಾನ್ ಕೇಂದ್ರ ಬಿಂದುವಾಗಿದ್ದಳು. ಪ್ರತಿದಿನವೂ ಮುಸ್ಕಾನ್‌ಳಿಂದ ನಮಗೆ ಹೊಸ ಅನುಭವ, ಹೊಸ ಜಗತ್ತು ಗೋಚರಿಸುತ್ತಿತ್ತು.  
ಮುಸ್ಕಾನ್ ಅಂಬೆಗಾಲಿಡಲು ಆರಂಭಿಸಿ ಮನೆಯಲ್ಲೆಲ್ಲ ಅಂಬೆಗಾಲಿಡುತ್ತಾ ಓಡಾಡಿ ನಮ್ಮನ್ನು ಅಚ್ಚರಿಗೊಳಿಸುತ್ತಿದ್ದಳು. ಅವಳ ಆಟವನ್ನು ನಾವು ಹೆಚ್ಚು ಅನುಭವಿಸುತ್ತ ಇರುವಾಗಲೇ ಅವಳು ಮುಂದಿನ ಹಂತಕ್ಕೆ ಕಾಲಿಡುತ್ತಿದ್ದಳು. ನಮ್ಮ ಬಾಲ್ಯ ಆಗ ಪ್ರತಿದಿನ ನೆನಪಿಗೆ ಬರುತ್ತಿತ್ತು. ಅವಳಿಗೆ ಔಷಧಿ ಕೊಡುವುದು ಮಾತ್ರ ದೊಡ್ಡ ಸಾಹಸವಾಗುತ್ತಿತ್ತು. ಹಾಕಿದ ಔಷಧಿಯನ್ನೆಲ್ಲಾ ವಾಂತಿ ಮಾಡಿಬಿಡುತ್ತಿದ್ದಳು. ಆಗ ನಮ್ಮ ತಾಯಿ-ತಂದೆ ನಮ್ಮನ್ನು ಬೆಳೆಸಲು ಎಷ್ಟು ಕಷ್ಟಪಟ್ಟಿರಬಹುದೆಂಬುದು ಅರಿವಾಯಿತು. ಬಹುಶಃ ಅದಕ್ಕೇ ಹೇಳುವುದು 'ಅನುಭವಕ್ಕಿಂತ ಜೀವನದಲ್ಲಿ ದೊಡ್ಡ ಪಾಠವಿಲ್ಲ' ಎಂದು. ಇಡೀ ಪ್ರಪಂಚ ಮುಸ್ಕಾನ್‌ಳೊಂದಿಗೆ ನಮಗೆ ಬಹಳ ಸುಂದರವಾಗಿ ಗೋಚರಿಸುತ್ತಿತ್ತು. ಅವಳ ಒಂದು ಮುಗುಳ್ನಗೆ ನಾವು ಪಡುತ್ತಿದ್ದ ಕಷ್ಟವೆಲ್ಲ ಮಂಜಿನಂತೆ ಕರಗಿ ಹೋಗುವಂತೆ ಮಾಡುತ್ತಿತ್ತು.  ಎರಡು ತಿಂಗಳ ರಜೆ ಹೇಗೆ ಕಳೆದು ಹೋಯಿತು ಎನ್ನುವುದೇ ತಿಳಿಯಲಿಲ್ಲ.  
ನಾವು ಕರ್ನಾಟಕಕ್ಕೆ ವಾಪಸ್ಸು ಬಂದು ಕೆಲಸಕ್ಕೆ ಹಾಜರಾಗಲೇಬೇಕಿತ್ತು. ನನಗೆ ಬೆಳಗಾವಿಯ ಜಿಲ್ಲಾಧಿಕಾರಿ ಹುದ್ದೆಯನ್ನು ನೀಡಲಾಯಿತು. ಆಗ ನನ್ನ ಮನಸ್ಸಿನಲ್ಲಿ ಬಹಳ ದೊಡ್ಡ ತೊಳಲಾಟ ಉಂಟಾಯಿತು.  ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವಿರಲಿಲ್ಲ. ಸಾಮಾನ್ಯವಾಗಿ ಆ ಅನುಭವ ಪಡೆಯಲು ಅದು ಐ.ಎ.ಎಸ್ ಅಧಿಕಾರಿಯಾಗಿ ಆರರಿಂದ ಒಂಭತ್ತು ವರ್ಷಗಳಾದರೂ ಬೇಕು. ಆದರೆ ನಾವು ಗಂಡ-ಹೆಂಡತಿ ಒಟ್ಟಿಗೆ ಇದ್ದು ಒಂದೇ ಜಾಗದಲ್ಲಿ ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸಿಕೊಂಡು ಹೋಗುವುದೆಂದು ನಿರ್ಧಿರಿಸಿದ್ದುದರಿಂದ ನನ್ನ ಪತಿ ರಜನೀಶ್ ಧಾರವಾಡದ ಜಿಲ್ಲಾಧಿಕಾರಿಯಾಗಿದ್ದಾಗ ನನಗೆ ಒದಗಿ ಬಂದ ಮಂಡ್ಯ ಜಿಲ್ಲಾಧಿಕಾರಿ ಹುದ್ದೆಯ ಅವಕಾಶವನ್ನು ನಾನು ನಿರಾಕರಿಸಿ ಧಾರವಾಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಕೆಲಸವನ್ನು ನಿರ್ವಹಿಸಲು ಒಪ್ಪಿದ್ದೆ.  ಹಾಗಾಗಿ ನಾನು ಯಾವುದಾದರೂ ಒಂದು ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಿತ್ತು. ಬೆಳಗಾವಿ ಬಹಳ ದೊಡ್ಡ ಜಿಲ್ಲೆ. ಮಾತ್ರವಲ್ಲದೆ ಅಲ್ಲಿನ ಗಡಿ ವಿವಾದವನ್ನು ಸಮರ್ಥವಾಗಿ ನಿಭಾಯಿಸಲು ಒಬ್ಬ ಹಿರಿಯ ಅಧಿಕಾರಿಯ ಅವಶ್ಯಕತೆ ಇತ್ತು. ಇಷ್ಟು ದೊಡ್ಡ ಜವಾಬ್ದಾರಿಯ ಮಧ್ಯೆ ನಾನು ಪುಟ್ಟ ಮಗಳಿಗೆ ಸಮಯ ಕೊಡಲು ಸಾಧ್ಯವಾಗುವುದೇ ಎನ್ನುವ ಗೊಂದಲಕ್ಕೆ ಸಿಲುಕಿದೆ. ಆಗ ನನ್ನ ಪತಿ ನನ್ನ ನೆರವಿಗೆ ಬಂದರು.
ಈ ಹಿಂದೆ ನಾನು ಜಿಲ್ಲಾಧಿಕಾರಿ ಸ್ಥಾನವನ್ನು ಸಂಸಾರಕ್ಕೋಸ್ಕರ ಬಿಟ್ಟು ಕೊಟ್ಟದ್ದನ್ನು ನೆನಪಿಸಿ ಈಗ ಈ ಜವಾಬ್ದಾರಿಯನ್ನು ತಿರಸ್ಕರಿಸುವುದು ಸರಿಯಲ್ಲ. ಈ ಜವಾಬ್ದಾರಿಯನ್ನು ನೀನು ಸಮರ್ಥವಾಗಿ ನಿರ್ವಹಿಸಬಲ್ಲೆ. ಧೈರ್ಯದಿಂದ ಅಧಿಕಾರ ಸ್ವೀಕರಿಸಿ, ಉತ್ತಮವಾಗಿ ಕೆಲಸ ಮಾಡು. ಮಗುವನ್ನು ನೋಡಿಕೊಳ್ಳುವುದರ ಬಗ್ಗೆ ಯಾವುದೇ ಅತಂಕ ಬೇಡ. ನಾನು ನಿನ್ನೊಂದಿಗಿದ್ದೇನೆ. ಮಗುವಿನ ಪಾಲನೆಯಲ್ಲಿ ಹೆಚ್ಚಿನ ಸಮಯವನ್ನು ನಾನು ಕೊಡುತ್ತೇನೆ ಎಂದು ಹೇಳಿದರು. ಮನಸ್ಸಿನಲ್ಲಿ ಇನ್ನೂ ಬಹಳಷ್ಟು ತೊಳಲಾಟ ಇದ್ದರೂ ಅವರ ಪ್ರೋತ್ಸಾಹದಾಯಕ ಮಾತುಗಳು ನನಗೆ ಧೈರ್ಯ ಕೊಟ್ಟಿತು. ಇಂದಿಗೂ ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ರಜನೀಶ್‌ರಂತಹ ಮನಸ್ಥಿತಿಯ ಪುರುಷರು ಹೆಚ್ಚಾಗಬೇಕು. ತಮ್ಮ ಪತ್ನಿಯ ಯೋಗ್ಯತೆಯನ್ನು ಗಮನಿಸಿ ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಿದರೆ, ಅದರಿಂದ ಹೆಣ್ಣಿನಲ್ಲಿ ಹುದುಗಿರುವ ಚೈತನ್ಯ ಹೊರ ಹೊಮ್ಮಿ ಸಂಸಾರ ಮತ್ತು ಸಮಾಜ ಎರಡೂ ಉದ್ಧಾರ ಆಗುವುದರಲ್ಲಿ ಸಂಶಯವಿಲ್ಲ. ರಜನೀಶ್‌ರನ್ನು ಬೆಳಗಾವಿಯ Command Area Development Agency ಸಂಸ್ಥೆಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು.  
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement