ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೈಸೂರಿನಲ್ಲೊಬ್ಬ ಪಕ್ಷೇತರ ಟಿಕೆಟ್ ಆಕಾಂಕ್ಷಿ!

Mainashree
Updated On : 8 Apr 2013, 12:03 pm

ಹೇಳಿ ಕೇಳಿ ಇದು ಚುನಾವಣಾ ಸಮಯ. ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್‌ಗೆ ಭಾರಿ ಡಿಮ್ಯಾಂಡ್. ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇನ್ನೂ ಪೂರ್ಣ ಪಟ್ಟಿ ಪ್ರಕಟಿಸಿಲ್ಲ. ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಮೊದಲಾದ ಪಕ್ಷಗಳು ಅಭ್ಯರ್ಥಿಗಳಿಗಾಗಿ ಕಾಯುತ್ತಿವೆ. ಈ ಪಕ್ಷಗಳ ಟಿಕೆಟ್ ಬಯಸುವವರು ಆಕಾಂಕ್ಷಿಗಳೆಂದು ಹೇಳಿಕೊಳ್ಳುವುದು ಓಕೆ. ಆದರೆ ಪಕ್ಷೇತರರಾಗಿ ಕಣಕ್ಕಿಳಿಯುವವರಿಗೆ ಯಾರ ಹಂಗಿಲ್ಲ. ಆದರೆ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಎಚ್.ಎಸ್. ಮಂಜನಾಥ್ ಶೆಟ್ಟಿ ಎಂಬವರು ಪಕ್ಷೇತರರಾಗಿ ಕಣಕ್ಕಿಳಿಯಲು ಬಯಸಿದ್ದಾರೆ. ಇವರು ವಿದ್ಯುತ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದರು. ಅದರಲ್ಲಿ ಪಕ್ಷೇತರ ಟಿಕೆಟ್ ಆಕಾಂಕ್ಷಿ ಎಂದು ನಮೂದಿಸಿದ್ದರು. ಅಲ್ಲದೇ ಇಡೀ ಕ್ಷೇತ್ರದ ಜನ ಇವರಿಗೆ ಮತ ಹಾಕಲು ಸಿದ್ಧರಾಗಿದ್ದಾರಂತೆ. ಮೇ 8ರಂದು ಇವರೇ ಗೆಲ್ಲುವರಂತೆ!
ಸಂದರ್ಶಕರಿಗೆ ಸಿಹಿ, ಹುರಿದ ಗೋಡಂಬಿ ಬೀಜ!
ವಿಶ್ವವಿಖ್ಯಾತ ಮೈಸೂರು ಅರಮನೆಯ ಉಸ್ತುವಾರಿ ನೋಡಿಕೊಳ್ಳಲು ಅರಮನೆ ಮಂಡಳಿ ಇದೆ. ಇದು ಜಿಲ್ಲಾಧಿಕಾರಿಯ ವ್ಯಾಪ್ತಿಯಲ್ಲಿ ಬರುತ್ತದೆ. ಅರಮನೆ ಮಂಡಳಿಗೆ ಉಪ ನಿರ್ದೇಶಕರೊಬ್ಬರು ಇರುತ್ತಾರೆ.  ಇವರೇ ಅರಮನೆ ದೈನಂದಿನ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ. ಈಗಿನ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರೊಬ್ಬರ ಬಳಿ ಆಪ್ತ ಸಹಾಯಕರಾಗಿದ್ದವರು. ಇವರ ಛೇಂಬರ್‌ನಲ್ಲಿ ಯಾವಾಗಲೂ ಮೆಲು ದನಿಯಲ್ಲಿ ಇಂಪಾದ ಭಕ್ತಿ ಸಂಗೀತ ಕೇಳಿ ಬರುತ್ತದೆ. ಜತೆಗೆ ಘಮಘಮಿಸುವ ಸುಗಂಧದ ವಾಸನೆಯೂ ಇರುತ್ತದೆ. ಅಲ್ಲದೇ ಸಂದರ್ಶಕರಿಗೆ ಸ್ವೀಟ್, ಹುರಿದ ಗೋಡಂಬಿ ಬೀಜ ಗ್ಯಾರಂಟಿ!
ಕನ್ನಡದಲ್ಲಿ ನಿರೂಪಣೆ
ಮಾಡಲು ರೆಡಿಯಾಗಿಲ್ಲ!
ಮೈಸೂರಿನ ಮಾನಸ ಗಂಗೋತ್ರಿಯ ಸಿಸ್ಟ್‌ನಲ್ಲಿ ಕಳೆದ ವಾರ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಏರ್ಪಡಿಸಿದ್ದರು. ಇದಕ್ಕೆ ಚಾಲನೆ ನೀಡಲೊಂದು ಸಮಾರಂಭ ಆಯೋಜಿಸಲಾಗಿತ್ತು. ನಿರೂಪಕಿ ಇಂಗ್ಲಿಷ್‌ನಲ್ಲಿಯೇ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಸರ್ಕಾರಿ ಶಾಲೆಯಲ್ಲಿ ಹೇಳಿ ಕೇಳಿ ಕನ್ನಡ ಮಾಧ್ಯಮ. ಇಂಗ್ಲಿಷ್ ಕಲಿಸುವುದೇ ಐದನೇ ತರಗತಿಯಿಂದ. ಈ ಮಕ್ಕಳಿಗೆ ನಿರೂಪಕಿ ಇಂಗ್ಲಿಷ್‌ನಲ್ಲಿ ಹೇಳಿದ್ದು ತಲೆಬುಡ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ತಮ್ಮ ಪಾಡಿಗೆ ತಾವು ಗಲಾಟೆ ಮಾಡಿಕೊಂಡಿದ್ದವು. ಇದನ್ನು ಗಮನಿಸಿದ ಸಂಘಟಕರೊಬ್ಬರು ದಯವಿಟ್ಟು ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿ ಎಂದು ನಿರೂಪಕಿಯನ್ನು ಕೇಳಿಕೊಂಡರು. ಆಗ ನಿರೂಪಕಿ, 'ನಾನು ಇಂಗ್ಲಿಷ್‌ನಲ್ಲಿ ನಿರೂಪಣೆ ಮಾಡಲು ಸಿದ್ಧಳಾಗಿ ಬಂದಿದ್ದೇನೆ. ಹೀಗಾಗಿ ಕನ್ನಡದಲ್ಲಿ ನಿರೂಪಣೆ ಮಾಡುವುದು ಕಷ್ಟ' ಎಂದಾಗ ಸಂಘಟಕರು ಸುಸ್ತು. ಅಂದ ಹಾಗೆ ಈ ಕಾರ್ಯಕ್ರಮದಲ್ಲಿ ಡಿಡಿಪಿಐ ಬಿ.ಕೆ. ಬಸವರಾಜು ಹೊರತುಪಡಿಸಿ ಯಾರೊಬ್ಬರೂ ಅಪ್ಪಿತಪ್ಪಿಯೂ ಕನ್ನಡದಲ್ಲಿ ಮಾತನಾಡಲಿಲ್ಲ. ಜೈ ಕನ್ನಡಾಂಬೆ!
ರಾಸಲೀಲೆ ಸಿಡಿ ಹಗರಣದಲ್ಲಿ
ಅಡಗಿತ್ತು ಇಬ್ಬರ 'ಭವಿಷ್ಯ'
ಉಡುಪಿ ಕ್ಷೇತ್ರದ ಪ್ರಮೋದ್ ಮಧ್ವರಾಜ್ ತಂದೆ ಮಧ್ವರಾಜ್ ಶಾಸಕರಾದರು, ತಾಯಿ ಮನರಮಾ ಮಧ್ವರಾಜ್ ಶಾಸಕಿ ಹಾಗೂ ಸಂಸದರೂ ಆದರು. ಆದರೆ ಪ್ರಮೋದ್‌ಗೆ ಮಾತ್ರ ಶಾಸಕರಾಗುವ ಗ್ರಹಗತಿ ಕೂಡಿ ಬರಲೇ ಇಲ್ಲ. ಈ ಬಗ್ಗೆ ಜ್ಯೋತಿಷಿಗಳ ಬಳಿ ಹೋದಾಗ ಎಲ್ಲರೂ ಹೇಳುತ್ತಿದ್ದದ್ದು ಉಡುಪಿ ಶ್ರೀಕೃಷ್ಣನ ಕ್ಷೇತ್ರದಲ್ಲಿ ನೀವು ಗೆಲ್ಲಬೇಕಾದರೆ 'ಭಟ್‌' ಸಮುದಾಯದ ಅಭ್ಯರ್ಥಿ ಎದುರಾಳಿ ಇರಬಾರದು. ಆಗ ಮಾತ್ರ ಗೆಲವು ಎಂದು ಹೇಳುತ್ತಿದ್ದರಂತೆ. ಈಗ ಭಟ್ಟರು ಎದುರಾಳಿ ಇಲ್ಲ. ದೇವರ ಪ್ರಯತ್ನವೋ, ಸ್ವಪ್ರಯತ್ನವೊ ಜ್ಯೋತಿಷಿಗಳ ಮಾತು ಫಲಪ್ರದವಾಗುವ ಸಂದರ್ಭ ಬಂದೊದಗಿದೆ!
ಕಾಂಗ್ರೆಸ್ ಅಭ್ಯರ್ಥಿ 'ಕೈ'
ಬಲಪಡಿಸಲು ಸಿ.ಟಿ. ರವಿ ಪತ್ರ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸ್ಥಳಿಯಾಡಳಿತ ಚುನಾವಣೆಯಲ್ಲಿ ನೆಲಕಚ್ಚಿತ್ತು. ಅಭ್ಯರ್ಥಿಗಳು ಸೋಲಿಂದ ಹತಾಶರಾಗಬಾರದು ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಸಾಂತ್ವನ ಪತ್ರ ಕಳುಹಿಸಿದ್ದರು. ವಿಜೇತರಿಗೆ ಅಭಿನಂದನೆ ಪತ್ರ ಬರೆದಿದ್ದರು. ಈ ಪತ್ರ ಬೆಳ್ತಂಗಡಿ ಪಟ್ಟಣ ಪಂಚಾಯ್ತಿ 2ನೇ ವಾರ್ಡ್ ವಿಜೇತ ಅಭ್ಯರ್ಥಿ ಕಾಂಗ್ರೆಸ್‌ನ ಜಗದೀಶ್‌ಗೂ ತಲುಪಿತ್ತು. ಉಸ್ತುವಾರಿ ಸಚಿವರ ಪಕ್ಷಭೇದ ಇಲ್ಲದೆ ಅಭಿನಂದಿಸುವ ಈ ವೈಖರಿ ಕಂಡು ಸಂತೋಷಗೊಂಡ ಜಗದೀಶ್ ಪತ್ರ ಬಿಡಿಸಿ ಖುಷಿಯಿಂದಲೇ ಓದಿದರು. ಪತ್ರದಲ್ಲಿ ಹೀಗಿತ್ತು. 'ಚುನಾವಣೆಯಲ್ಲಿ ಸೋಲು ಗೆಲವು ಸಹಜ. ಚುನಾವಣೆಯಲ್ಲಿ ಸೋತೆವು ಎಂದು ನಿರಾಶರಾಗದಿರಿ, ಸೋಲನ್ನು ಸವಾಲಾಗಿ ಸ್ವೀಕರಿಸಿ ಜನಪರವಾಗಿ ಯೋಚಿಸಿ ಮತ್ತಷ್ಟು ಜನಸಂಪರ್ಕದೊಂದಿಗೆ ಕೆಲಸ ಮಾಡಿ, ನಾವು ನಿಮ್ಮೊಂದಿಗಿದ್ದೇವೆ'! ವಿಷಯ ಏನೆಂದರೆ ಉಸ್ತುವಾರಿ ಸಚಿವರು ಬಿಜೆಪಿ ಅಭ್ಯರ್ಥಿಗಳಲ್ಲಿ ಗೆದ್ದವರಿಗೆ ಅಭಿನಂದನೆ ಪತ್ರ, ಸೋತವರಿಗೆ ಸಾಂತ್ವನ ಪತ್ರ ಪೋಸ್ಟ್ ಮಾಡಿದ್ದರು ಅದು ಬಿಜೆಪಿ ಅಭ್ಯರ್ಥಿ ವಿಳಾಸ ಬದಲು ಕಾಂಗ್ರೆಸ್ ಅಭ್ಯರ್ಥಿಯ 'ಕೈ' ಸೇರಿತ್ತು!

ಟಿಕೆಟ್ ಸಿಕ್ಕಿದೆ, ಆದ್ರೆ ಸ್ಪರ್ಧೆಗಲ್ಲ!
ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಎಂ.ಎನ್. ರಾಜೇಂದ್ರ ಕುಮಾರ್ 'ಗಲಾಟೆ' ಸಿನಿಮಾ ನಿರ್ಮಿಸಿದವರು. ಟಾಕೀಸ್‌ಗಳಲ್ಲಿ ಅದು ಏನೂ ಗಲಾಟೆ ಮಾಡಿಲ್ಲ ಬಿಡಿ. ಆದರೆ ಅವರು ಉಡುಪಿ ಶಾಸಕ ರಘುಪತಿ ಭಟ್ ಅವರ ಸಿಡಿ ಹಗರಣದ ಬಳಿಕ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್ ಪರವಾಗಿ ಮತ ಹಾಕಿ ಎನ್ನುತ್ತಿದ್ದಾರೆ. ನವೋದಯ ಗುಂಪಿನ ಸದಸ್ಯರು ಹೆಚ್ಚಿನ ಮತದಾನ ಮಾಡಿದರೆ ಬಹುಮಾನ ನೀಡುವ ಘೋಷಣೆ ಕೂಡಾ ಮಾಡುತ್ತಿದ್ದಾರೆ. ಇದೆಲ್ಲ ನೋಡುವಾಗ ರಾಜೇಂದ್ರ ಕುಮಾರ್ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ವದಂತಿಯೂ ಜೋರಾಗಿ ಹಬ್ಬಿತ್ತು. ಇದರಿಂದ ಸಹಜವಾಗಿಯೇ ಪತ್ರಕರ್ತರು ಬೈಂದೂರಲ್ಲಿ ನಿಮಗೆ ಟಿಕೆಟ್ ಸಿಕ್ಕಿದೆಯಂತೆ ಎಂದು ಕೇಳಿದ್ದಾರೆ. ಅದಕ್ಕೆ ಹೌದು, ಬೈಂದೂರು ಟಿಕೆಟ್ ಸಿಕ್ಕಿದೆ. ಭಾನುವಾರ ಸಭೆ ಮಾಡಲು ಹೋಗುತ್ತಿದ್ದೇನೆ. ಅಲ್ಲಿಗೆ ಹೋಗಲು ಮಾತ್ರ ಬಸ್ ಟಿಕೆಟ್ ಸಿಕ್ಕಿದೆ, ಸ್ಪರ್ಧೆಗಲ್ಲ ಎಂದಾಗ ಪ್ರಶ್ನೆ ಕೇಳಿದವರು ಬೇಸ್ತು!


-ನಂಬಿರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement