ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮತದಾನ ವ್ಯವಸ್ಥೆಯಲ್ಲಿ ಬದಲಾಗಬೇಕಾದ್ದೇನು?

Mainashree
Updated On : 10 Apr 2013, 12:34 pm

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಅದರ ತಳಪಾಯವಾದ ಚುನಾವಣೆಯಿಂದ ದೂರವೇ ಉಳಿಯುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಡೀ ಮತಕ್ಷೇತ್ರದ ಪ್ರಜೆಗಳಿಂದ ಆಯ್ಕೆಯಾಗಬೇಕಾದ ಅಭ್ಯರ್ಥಿ ಕೆಲವೇ ಕೆಲವರ ಮೂಲಕ ಆಯ್ಕೆಯಾಗುತ್ತಿರುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾದುದು. 'ಜಗತ್ತಿನಲ್ಲಿ ಕೆಟ್ಟದ್ದಾಗುತ್ತಿರುವುದು ಕೆಟ್ಟವರಿಂದಲ್ಲ, ಸಜ್ಜನರು ಸುಮ್ಮನೆ ಇರುವುದರಿಂದ' ಎನ್ನುವ ಮಾತಿಗೆ. ಈಗ ಆಗುತ್ತಿರುವುದು ಸಹ ಅದುವೇ. ಪ್ರಜಾಪ್ರಭುತ್ವ ಹಿನ್ನಡೆ ಅನುಭವಿಸುತ್ತಿರುವುದು ರಾಜಕಾರಣಿ/ ಪಕ್ಷಗಳಿಂದಲ್ಲ. ಪ್ರಜೆಗಳು ಚುನಾವಣೆಯಲ್ಲಿ ಭಾಗವಹಿಸದೇ ಇರುವುದರಿಂದ.
ಸ್ವಯಂಪ್ರೇರಿತರಾಗಿ 'ಮತದಾನ ಮಾಡಲೇಬೇಕು ಅದು ನನ್ನ ಹಕ್ಕು' ಎಂದು ಹೋಗಿ ಮತದಾನ ಮಾಡುವವರ ಸಂಖ್ಯೆ ವಿರಳ. ಇದಕ್ಕೆ ಕಲುಷಿತ ರಾಜಕಾರಣ, ಅಭ್ಯರ್ಥಿಗಳ ಹಿನ್ನೆಲೆ, ಪಕ್ಷಗಳ ಸಾಧನೆ, ಜಾತಿ ವ್ಯವಸ್ಥೆ, ಧರ್ಮಾಧಾರಿತ ಮತ ವಿಭಜನೆ,  ಹಿಂದಿನ ಪ್ರತಿನಿಧಿಗಳು ಮತದಾರ ಬಾಂಧವರಿಗೆ ಮಾಡಿರುವ ಸೇವೆ, ಅಭ್ಯರ್ಥಿಗಳು ಅಧಿಕಾರವಧಿಯಲ್ಲಿ ಗಳಿಸಿರುವ ಸಂಪನ್ಮೂಲ ಇತ್ಯಾದಿಗಳೆಲ್ಲ ಕಾರಣವಾಗಿವೆ. ಇದಕ್ಕಾಗಿಯೇ ಭಾರತದ ಪ್ರೆಸ್ ಕೌನ್ಸಿಲ್‌ನ ಅಧ್ಯಕ್ಷರಾದ ಕಾಟ್ಜು ಅವರು 'ನನ್ನ ಮತಕ್ಕೆ ಅರ್ಥವಿಲ್ಲದ್ದರಿಂದ ಇನ್ನು ಮುಂದೆ ಮತದಾನ ಮಾಡುವುದಿಲ್ಲ. ನಾನೇಕೆ ನನ್ನ ಸಮಯ ವ್ಯರ್ಥ' ಮಾಡಲಿ ಎಂದು ಹೇಳಿರಬೇಕು. ಆದರೆ ಕಾಟ್ಜು ಅಂಥವರೇ ಇಷ್ಟು ನಿರಾಶರಾದರೆ ಸಾಮಾನ್ಯ ಪ್ರಜೆಗಳು ಗತಿಯೇನು? ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕಾದ ಮಾಧ್ಯಮ ಮುಖ್ಯಸ್ಥರೇ ಪಲಾಯನ ಮಾಡಿದರೆ, ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದು ಹೇಗೆ? ಅಕ್ಕ-ಪಕ್ಕದ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳದೆ ಅನ್ಯ ಮಾರ್ಗಗಳನ್ನು ಹಿಡಿದು ಅಭಿವೃದ್ಧಿ ಹೊಂದದೆ ತೊಳಲಾಡುತ್ತಿವೆ. ಇಂತಹ ಪರಿಸ್ಥಿತಿ ಭಾರತಕ್ಕೂ ಬೇಕಾ? ಪ್ರಜಾಪ್ರಭುತ್ವ ಇಲ್ಲದಿದ್ದರೆ ಕಾಟ್ಜು ಈ ಸ್ಥಾನದಲ್ಲಿರುತ್ತಿದ್ದರೆ? ಅದೇನೇ ಇರಲಿ, ಮತದಾನ ಐಚ್ಛಿಕವಾಗಿರುವುದರಿಂದ ಆಯ್ಕೆಯೂ ಸಮರ್ಥವಾಗುತ್ತಿಲ್ಲ. ಕಡ್ಡಾಯ ಮತದಾನ ಘೋಷಿಸಿ ನಿಯಮಿತವಾಗಿ ಮೂರು ಚುನಾವಣೆಗಳಲ್ಲಿ ಮತದಾನ ಮಾಡದಿದ್ದರೆ ಕೊಟ್ಟಿರುವ ಸೌಲಭ್ಯಗಳನ್ನು ಕಿತ್ತುಕೊಳ್ಳುವ ನಿಯಮ ಜಾರಿಯಾದರೆ, ಹೇಳದೆ ಕೇಳದೆ ಮತ ಚಲಾಯಿಸಲು ಬರುತ್ತಾರೆ.
ಕಡ್ಡಾಯ ಮತದಾನ ಜಾರಿಯಾದರೆ ವ್ಯಕ್ತಿಯ ಹಕ್ಕು ಚಲಾವಣೆಯಾಗುತ್ತದೆ. ರಾಜಕೀಯ ಪಕ್ಷಗಳ ಒತ್ತಡ ಕಡಿಮೆಯಾಗಬಹುದು. ಆಗ ಶೇ. 50 ರಷ್ಟು ಮತ ಪಡೆದವರು ಆಯ್ಕೆಯಾಗುತ್ತಾರೆ ಎನ್ನುವ ಇನ್ನೊಂದು ನಿಬಂಧನೆ ಸೇರಿದರೆ ರಾಜಕೀಯ ಪಕ್ಷಗಳ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ. ಸದ್ಯದಲ್ಲಿ ಕಡ್ಡಾಯ ಮತದಾನ ಇಲ್ಲವೆ ಶೇ.50 ಮತ ಪಡೆದವನ ಆಯ್ಕೆ ಎರಡರಲ್ಲಿ ಒಂದು ಜಾರಿಯಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುತ್ತದೆ. ಪ್ರಜೆಗಳಿಗಾಗಿ ಇರುವ ಪ್ರಜಾಪ್ರಭುತ್ವ ಎಲ್ಲ ಪ್ರಜೆಗಳಿಂದ ಅಸ್ತಿತ್ವಕ್ಕೆ ಬರಬೇಕು. ಆಗ ಪ್ರಗತಿಯ ಬಗ್ಗೆ ಪ್ರಶ್ನಿಸುವ ಹಕ್ಕು ಮತದಾರರಿಗೆ ದೊರೆಯುತ್ತದೆ. ಪ್ರಶ್ನೆಗೆ ಉತ್ತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ವಿಶ್ವದಲ್ಲಿ 32 ರಾಷ್ಟ್ರಗಳು ಕಡ್ಡಾಯ ಮತದಾನ ಜಾರಿಗೊಳಿಸಿವೆ. ಆಸ್ಟ್ರೇಲಿಯಾದಿಂದ ಹಿಡಿದು ಉಗಾಂಡಾ ದಂತಹ ದೇಶಗಳು ಪರಿಣಾಮಕಾರಿಯಾಗಿ ಇದನ್ನು ಜಾರಿಗೆ ತಂದಿವೆ.
ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅವರ ತಂದೆ-ತಾಯಿಯರಿಂದ ಮತದಾನ ಮಾಡಿಸಿದರೆ ವಿದ್ಯಾರ್ಥಿಗಳಿಗೆ ಅಂಕಗಳ ಕೃಪೆಯನ್ನು ಕೆಲ ಶಿಕ್ಷಣ ಸಂಸ್ಥೆಗಳು ಘೋಷಿಸಿದವು. ಇದೊಂದು ಪ್ರೋತ್ಸಾಹದಾಯಕ ಕ್ರಮವೇ ಸರಿ. ಇದೇ ರೀತಿ ಕಾಲೇಜು ವಿದ್ಯಾರ್ಥಿಗಳು ಮತ ಚಲಾಯಿಸಿದರೆ ಗ್ರೇಸ್ ಮಾರ್ಕ್ಸ್ ನೀಡಬೇಕು. ಇಂತಹ ಪ್ರೋತ್ಸಾಹವನ್ನು ಮತದಾರನಿಗೆ ನೀಡಿದರೆ ಮತದಾನದ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ಜೊತೆಗೆ ಚುನಾವಣೆಯಲ್ಲಿ ಭಾಗವಹಿಸದೇ ಇದ್ದ ಅಥವಾ ಮೂರು ಚುನಾವಣೆಗಳಲ್ಲಿ ಮತದಾನ ಮಾಡದಿದ್ದರೆ ಅವರಿಗಿರುವ ಸೌಲಭ್ಯಗಳನ್ನು ಕಿತ್ತುಕೊಳ್ಳುವುದಾದರೆ ಅದರ ಪರಿಣಾಮ ಮತದಾನದ ಸಮಯವನ್ನು  ಹೆಚ್ಚಿಸಬೇಕೆಂಬ ಕೂಗು ಕೇಳಲಾರಂಭಿಸುತ್ತದೆ. ಚುನಾವಣಾ ಆಯೋಗ ಈಗ ಒಂದು ಗಂಟೆ ಅವಧಿಯನ್ನು ಕಡಿತ ಮಾಡಿದೆ. ಅದೇಕೋ ಸ್ಪಷ್ಟಪಡಿಸಿಲ್ಲ. ಆದರೆ ಕಡ್ಡಾಯ ಮತದಾನ ಜಾರಿಯಾದರೆ ಸಮಯವನ್ನು ಹೆಚ್ಚಿಸಬೇಕಾಗುತ್ತದೆ ಅಥವಾ ಮತ ಕೇಂದ್ರಗಳನ್ನು ಹೆಚ್ಚಿಸಬೇಕಾಗುತ್ತದೆ. ಇದು ತಂತ್ರಜ್ಞಾನ ಯುಗವಾಗಿರುವುದರಿಂದ ಮತದಾನವನ್ನೂ ಏಕೆ ಆನ್‌ಲೈನ್ ಮಾಡಬಾರದು? ಇದು ಹೆಚ್ಚು ಪರಿಣಾಮಕಾರಿ ಅಲ್ಲದೆ ಚುನಾವಣಾ ಅಕ್ರಮ, ಮತದಾನ ನಿರ್ಲಕ್ಷ್ಯವನ್ನು ನಿವಾರಿಸಬಹುದು.
ಹಿಂದಿನ ಚುನಾವಣೆಗಳ ಅಂಕಿ ಅಂಶಗಳನ್ನು ನೋಡಿದರೆ ಎಲ್ಲಾ ಚುನಾವಣೆಗಳಲ್ಲಿ ಮತದಾನವಾಗಿರುವುದು ಶೇ. 55-60 ರಷ್ಟು ಮಾತ್ರ. ಉಳಿದ ಶೇ.45 ಮತದಾರರಿಗೆ ಪ್ರಜಾಪ್ರಭುತ್ವ ಬೇಕಿಲ್ಲವೋ, ಚುನಾವಣೆ ಬೇಕಿಲ್ಲವೋ, ಸರ್ಕಾರಗಳು ರೂಪಿಸುವ ಯೋಜನೆಗಳು ಬೇಕಿಲ್ಲವೋ, ಹಕ್ಕು-ಅಧಿಕಾರಗಳ ಅರಿವಿಲ್ಲವೋ, ಇವಾವು ಇಲ್ಲದೆ ಸ್ವತಂತ್ರವಾಗಿ ಬದುಕುತ್ತೇವೆ ಎಂಬ ಸ್ವಾಭಿಮಾನವೋ ಗೊತ್ತಿಲ್ಲ. ಮತದಾನ ಮಾಡದೆ ಮನೆಯಲ್ಲಿ ಉಳಿದರೆ  ಸಂದೇಶ ರವಾನೆಯಾಗುವುದಿಲ್ಲ. ಮತ ಪೆಟ್ಟಿಗೆಯಲ್ಲಿರುವ ಅಭ್ಯರ್ಥಿ ತಿರಸ್ಕಾರ ಮತವನ್ನು ಚಲಾಯಿಸುವುದರ ಮೂಲಕ ವ್ಯವಸ್ಥೆಗೆ ಸಂದೇಶ ತಲುಪಿಸಬೇಕು. ಇಂತಹ ಮತಗಳು ಹೆಚ್ಚಾದರೆ ಮರುಚುನಾವಣೆ ಪ್ರಕ್ರಿಯೆ ಶುರುಮಾಡಬೇಕಾಗುತ್ತದೆ. ಆದರೆ ಈ ವ್ಯವಸ್ಥೆಯೂ ಜಾರಿಯಾಗುತ್ತಿಲ್ಲ!
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡದಿರುವುದೂ ಅವನ ಹಕ್ಕು ಎನ್ನುವುದಾದರೆ, ಸರ್ಕಾರದ ಕೆಲಸವನ್ನು ಅಥವಾ ಪ್ರತಿನಿಧಿಯ ಕಾರ್ಯವನ್ನು ಪ್ರಶ್ನಿಸುವ ಅಥವಾ ಟೀಕಿಸುವ ಹಕ್ಕು ಇರುವುದಿಲ್ಲ. ಮತದಾನದಲ್ಲಿ ಭಾಗವಹಿಸದವನು ಯಾವ ಸೌಲಭ್ಯವನ್ನೂ ಪಡೆಯಲು ಅರ್ಹನಲ್ಲ ಎನ್ನುವ ಕಾನೂನು ಜಾರಿಗೆ ಬರಬೇಕು. ಆಗ ಅವನು ತನ್ನ ಆಯ್ಕೆಯನ್ನು ಒತ್ತಲು ಮತಗಟ್ಟೆಗೆ ಬರುತ್ತಾನೆ.
ಮತದಾರರಿಗೆ ಈ ಕಡ್ಡಾಯ ಮತದಾನದಿಂದ ಕಿರುಕುಳ ಆಗಬಹುದೇ ಎನ್ನುವುದು ಇನ್ನೊಂದು ಪ್ರಶ್ನೆ. ಖಂಡಿತವಾಗಿಯೂ ಇಲ್ಲ. ಆದರೆ ರಾಜಕೀಯ ಪಕ್ಷಗಳಿಂದ ಪ್ರಜೆಗಳಿಗೆ ಒತ್ತಡ ಜಾಸ್ತಿಯಾಗುತ್ತದೆ. ಪಕ್ಷಗಳು ಹೆಚ್ಚು ಮತಗಳನ್ನು ಹಾಕಿಸುವುದರತ್ತ ಪ್ರಯತ್ನ ಮಾಡುತ್ತವೆ.
ಪಕ್ಷಗಳ ಸಂಖ್ಯೆ ಹೆಚ್ಚಾಗಿರುವುದು ಸಹ ಆಯ್ಕೆಯನ್ನು ಸಮರ್ಥಗೊಳಿಸುತ್ತಿಲ್ಲ. ಪಕ್ಷಗಳು ಐದಾರು ಇದ್ದು ಚಲಾವಣೆಯಾದ 55 ಮತಗಳನ್ನು ಇವರೆಲ್ಲರೂ ಹಂಚಿಕೊಂಡರೆ ಆಯ್ಕೆಯಾದವನು ಪಡೆದಿರುವುದು ಕೇವಲ 15. ನೂರರಲ್ಲಿ 15 ಜನರಿಂದ ಆಯ್ಕೆಯಾದವನು 100 ಜನಕ್ಕೂ ಹಿತವಾಗುವಂತಹ ತೀರ್ಮಾನ ಕೈಗೊಳ್ಳುತ್ತಾನೆಯೇ ಅಥವಾ ಅವನ ತೀರ್ಮಾನಗಳು 100 ಜನರ ಅಭಿಮತವೇ? ಶೇ.50ರಷ್ಟು ಮತ ಬೇಕೆಂದಾಗ ದ್ವಿಪಕ್ಷ ಪದ್ಧತಿ ಅವಶ್ಯವೆನಿಸುತ್ತದೆ. ಐದಾರು ಪಕ್ಷಗಳಲ್ಲಿ ಶೇ. 50 ಕನಸೇ ಸರಿ. ಭಾರತದಲ್ಲಿ ನೂರಾರು ಪಕ್ಷಗಳಿಂದಾಗಿ ಮತದಾರ ದಿಗ್ಮೂಢನಾಗಿರುವುದಂತೂ ಸತ್ಯ. ದ್ವಿ ಅಥವಾ ಮೂರು ಪಕ್ಷಗಳ ಪದ್ಧತಿ ಉತ್ತಮ ಸರ್ಕಾರ ಮತ್ತು ಸ್ಪಷ್ಟ ಬಹುಮತವನ್ನು ನೀಡುತ್ತದೆ.
ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾರತದ ಹೆಚ್ಚು ಜನರು ಅನಕ್ಷರಸ್ಥರಾದುದರಿಂದ ಕಡ್ಡಾಯ ಮತದಾನ ಬೇಡವೆಂದು ಐಚ್ಛಿಕ ಮತದಾನವನ್ನು ಜಾರಿಗೊಳಿಸಲಾಯಿತು. ಈಗ ಶಿಕ್ಷಣ ಮಟ್ಟ ಸುಧಾರಣೆಯಾಗಿದೆ. ಕಡ್ಡಾಯ ಶಿಕ್ಷಣ ಜಾರಿಯಾಗಿದೆ. ಕಡ್ಡಾಯ ಮತದಾನ ಏಕೆ ಬೇಡ? ಅಲ್ಲದೆ ಇದುವರೆಗಿನ ಚುನಾವಣೆಗಳ ಅಂಕಿ ಅಂಶಗಳ ಜಾಲಾಡಿದರೆ ಪ್ರಜ್ಞಾವಂತ - ಸುಶಿಕ್ಷಿತರ ಮತದಾನಕ್ಕಿಂತಲೂ ಅಶಿಕ್ಷಿತರ ಮತದಾನದ ಪ್ರಮಾಣವೇ ಜಾಸ್ತಿ ಇದೆ.
1985ರಲ್ಲಿ ವಿಶ್ವಸಂಸ್ಥೆ 'ಯುವ ವರ್ಷ'ವೆಂದು ಘೋಷಣೆ ಮಾಡಿದ್ದರಿಂದ ಆಗ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿ ಅವರು ಮತದಾರರ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದರು. ಈಗ ಯುವಕರ ಮಹಿಳೆಯರ-ಸುಶಿಕ್ಷಿತರ-ನೌಕರ ವರ್ಗದವರಿಗೆ ಸೌಲಭ್ಯಗಳ ಪಡೆಯುವಿಕೆಯನ್ನು ಪ್ರೋತ್ಸಾಹಿಸಿ ಕಡ್ಡಾಯ ಮತದಾನವನ್ನು ಜಾರಿಗೊಳಿಸಬೇಕಾದ ಅಗತ್ಯತೆ ಇದೆ. ದಿನೇಶ್ ಗೋಸ್ವಾಮಿ ಆಯೋಗವು (ಚುನಾವಣಾ ಸುಧಾರಣಾ ಆಯೋಗ) ಕಡ್ಡಾಯ ಮತದಾನ ಕಾರ್ಯಸಾಧುವಲ್ಲ ಎಂದು ಹೇಳಿದೆ. ಆದರೆ ಇತ್ತಿಚಿನ ಚುನಾವಣೆಗಳ ಮತದಾನದ ಅಂಕಿ ಅಂಶ, ಆಯ್ಕೆಯಾಗುವ ಸದಸ್ಯರ ಮತ ಪ್ರಮಾಣ, ಕಡ್ಡಾಯ ಮತದಾನ ಅಗತ್ಯವೆನ್ನುತ್ತಿದೆ.
ನಗರಸಭೆ ಮತ್ತು ಪುರಸಭೆಗಳ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ರಾಜಕೀಯ ಪಕ್ಷಗಳ ನಾಯಕರು ಮತದಾನ ಪ್ರಮಾಣ ಶೇಖಡಾವಾರು ಇಳಿಕೆಯಾಗಿರುವುದು ತಮ್ಮ ಪಕ್ಷದ ಹಿನ್ನೆಡೆಗೆ ಕಾರಣ ಎಂದು ಹೇಳಿಕೆಯನ್ನಿತ್ತರು. ಅವರ ಅಭಿಪ್ರಾಯ ಮತದಾನದಲ್ಲಿ ಜನತೆಯನ್ನು ತೊಡಗಿಸುವುದಾಗಿದೆ.
ಹಾಗಾದರೆ ಕಡ್ಡಾಯ ಮತದಾನ ಜಾರಿಗೊಳಿಸಿ ಪ್ರೋತ್ಸಾಹ, ಶಿಕ್ಷೆಗಳನ್ನು ಘೋಷಿಸಿದರೆ ಮತದಾನದ ಪ್ರಮಾಣ ಹೆಚ್ಚುತ್ತದೆ. ಪ್ರಜಾಪ್ರಭುತ್ವ ಅರ್ಥ ಪಡೆದುಕೊಳ್ಳುತ್ತದೆ. ಭಾರತ ಚುನಾವಣೆಗಳಿಗಾಗಿ ಸಾವಿರಾರು ಕೋಟಿ ರು.ಗಳನ್ನು ಖರ್ಚು ಮಾಡುತ್ತಿದೆ. ಇದು ಸಮರ್ಥ ಮತ್ತು ಅರ್ಥಪೂರ್ಣವಾಗಬೇಕಾದರೆ ಮತದಾನದಲ್ಲಿ ಭಾರತೀಯ ಮತದಾರರೆಲ್ಲರೂ ಭಾಗವಹಿಸಬೇಕು. ಸದೃಢ ಸಮರ್ಥ ಆಡಳಿತಕ್ಕಾಗಿ ಮತದಾನ ಕಡ್ಡಾಯ ಮಾಡಿದಾಗಲೇ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸರ್ಕಾರ ಪ್ರಜಾಪ್ರಭುತ್ವ ಜಾರಿಯಾಗುತ್ತದೆ.  
ಮತದಾನ ಮಾಡುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿರುವುದರಿಂದ ನಾವೆಲ್ಲ ಮತದಾನದಲ್ಲಿ ಪಾಲ್ಗೊಳ್ಳೋಣ.

- ಡಾ.ರೇವಯ್ಯ ಒಡೆಯರ್
ಸಂಶೋಧನಾ ಮುಖ್ಯಸ್ಥರು,
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement