ನಗದು ಕೊಟ್ಟು ನಕ್ಕರೂ ತಪ್ಪಿಲ್ಲ!
ನಗುವು ಸಹಜ ಧರ್ಮ ನಗಿಸುವುದು ಪರಧರ್ಮ ಎಂದಿದ್ದಾರೆ ನಮ್ಮ 'ತಿಮ್ಮ ಗುರು'. ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಾರದಿರುವ ಕಾರಣ ಅವರ ಮಾತನ್ನು ಎಳ್ಳಷ್ಟೂ ಸಂಶಯಿಸದೇ ಸ್ವೀಕರಿಸಬಹುದು. ಆದರೆ ಜಾಗತೀಕರಣ, ಉದಾರೀಕರಣ ಹಾಗೂ ಸಿಟಿಜನೀಕರಣಗಳೆಂಬ ತ್ರಿ-ಕರಣ ಪೂರ್ವಕವಾದ ಅಭಿವೃದ್ಧಿಯ ಮುಸುಕಿನೊಳಗೆ ನಗುವೆಂಬ ಸ್ವಧರ್ಮವನ್ನೂ, ನಗಿಸುವುದೆಂಬ ಪರಧರ್ಮವನ್ನೂ ಮರೆತು 'ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ' ಎಂಬ ಅದೇ ಆ ತಿಮ್ಮ ಗುರುವಿನ ಮಾತನ್ನೇ (ಬೇರೆ ಅರ್ಥದಲ್ಲಿ) ತ್ರಿಕರಣಪೂರ್ವಕವಾಗಿ ಸ್ವೀಕರಿಸಿದವರಂತೆ ಆಡುತ್ತಿದ್ದೇವೆ. ನಗುವೊಂದು ಮೂಲಭೂತ ಅವಶ್ಯಕತೆ ಎಂಬುದೇ ನಮಗೆ ಅರಿವಿಗೆ ಬರುತ್ತಿಲ್ಲ ಎಂಬುದು ನಗು ತರಿಸುವ ವಿಷಯವಲ್ಲವಾದರೂ ಹಾಸ್ಯಾಸ್ಪದವೇ ಎನ್ನಬೇಕು.
ಹಾಗೆ ನೋಡಿದರೆ 'ವಸಾಹತೋತ್ತರ ಭಾರತದ ಸಾಂಸ್ಕೃತಿಕ ಸಂದರ್ಭದಲ್ಲಿ' ನಿಂತು ಕಂಗ್ಲಿಷ್ ವಿಮರ್ಶಕನಂತೆ ದಿಟ್ಟಿಸಿದರೆ ಇದೊಂದು 'ಸಾಂಸ್ಕೃತಿಕ ತಲ್ಲಣಗಳ ಮೇಲ್ಮೆಯಲ್ಲಾಗುತ್ತಿರುವ ಗಂಭೀರ ರಾಚನಿಕ ಪರಿವರ್ತನೆ' ಎಂದೆಲ್ಲ ಅನಿಸಬಹುದು. ಆದರೆ ಹೀಗೆಲ್ಲ ಅರ್ಥವಾಗದ ಭಾಷೆಯಲ್ಲಿ ವಿಮರ್ಶಿಸ ಹೊರಟರೆ ಮೊದಲೇ ತುಟಿ ಕಚ್ಚಿ ಹಿಡಿದಿರುವ ಸಾಮಾನ್ಯರು ಇನ್ನಷ್ಟು ಹುಬ್ಬು ಗಂಟಿಕ್ಕಿಕೊಳ್ಳುವ ಅಪಾಯವಿದೆ. ಈ ನಿಟ್ಟಿನಲ್ಲಿ ನಗುವಿನ ಬಗೆಗಾಗಲೀ, ಹಾಸ್ಯದ ಕುರಿತಾಗಲೀ ಗಂಭೀರ ವಿಮರ್ಶೆಗಳ ಅಗತ್ಯವೇ ಇಲ್ಲವೆಂದೂ, ಅವುಗಳಿಂದ ಈಗಿರುವ ಸ್ಥಿತಿ ಇನ್ನಷ್ಟು ಬಿಗಡಾಯಿಸುವುದೆಂದೂ ಹೆಚ್ಚಿನವರು ಪ್ರತಿಪಾದಿಸುವುದರಲ್ಲಿ ಅರ್ಥವಿದೆ ಎನಿಸುತ್ತದೆ..
ನಗುವನ್ನು ಮರೆತರೆ ಏನಾಯಿತು ಎಂಬ ಪ್ರಶ್ನೆ ಬಹುಶಃ ಯಾರಿಗೂ ಏಳಲಿಕ್ಕಿಲ್ಲ ಎನಿಸುತ್ತದೆ. ಕಾರಣ ಇತ್ತೀಚಿನ ದಿನಗಳಲ್ಲಿ ನಗುವಿನ ಮಹತ್ವದ ಬಗೆಗೆ ಸಿಟಿಜನರೆಲ್ಲರಿಗೆ ಜ್ಞಾನೋದಯವಾಗುತ್ತಿದೆ. ಹೊಟ್ಟೆಪಾಡಿಗಾಗಿ ನಗರ ಸೇರಿಕೊಂಡವರೆಲ್ಲ ಒತ್ತಡದ ನೆಪ ಹಿಡಿದು ಹೊಟ್ಟೆಯನ್ನಷ್ಟೇ ಬೆಳೆಸಿಕೊಳ್ಳುತ್ತಿರುವುದಾಗಿಯೂ, ಇನ್ನು ಕೆಲವು ಲಲನಾಮಣಿಗಳು ತುಟಿಯ ಬಾಹ್ಯ ಸೌಂದರ್ಯದ ಬಗೆಗಷ್ಟೇ ಶ್ರಮಿಸುತ್ತಿರುವುದಾಗಿಯೂ ಸಮೀಕ್ಷೆಯಿಂದ ತಿಳಿದುಬಂದಿದ್ದು, ಹೊಟ್ಟೆಯಷ್ಟೇ ತುಟಿಯ ವಕ್ರತೆಯ ಬಗೆಗೂ ಗಮನವೀಯುವುದು ಸೂಕ್ತವೆಂಬ ಸಲಹೆ ವೈದ್ಯಲೋಕದಿಂದ ಹೊರಬಿದ್ದಿದೆ. ಇದುವರೆಗೆ ತಮಗಾಗದವರನ್ನು ಅಣಕಿಸಲು ಮಾತ್ರ ತುಟಿ ಕೊಂಕಿಸುವುದನ್ನು ತಿಳಿದಿದ್ದವರೆಲ್ಲ ಬಿಂಕವ ಬಿಟ್ಟು ನಗುವುದನ್ನೂ ರೂಢಿಸಿಕೊಳ್ಳಲು ಯತ್ನಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ಬೆಳ್ಳಂಬೆಳಗ್ಗೆ ಪಾರ್ಕ್ಗಳಲ್ಲಿ ಹತ್ತಾರು ಜನ ಸೇರಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ 'ಗೋಳೋ' ಎಂದು ಆಕಾಶವೇ ಹರಿದು ಬೀಳುವಂತೆ ನಿಷ್ಕಾರಣವಾಗಿ ನಗುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಅದನ್ನು ದೂರದಿಂದ ನೋಡಿದವನಿಗೂ ಒಮ್ಮೆ ಹಾಸ್ಯಪ್ರಜ್ಞೆಗೆ ಒದಗಿರುವ ಈ ದುರವಸ್ಥೆ ನೋಡಿ ತಡೆದುಕೊಳ್ಳಲಾಗದಿರುವಷ್ಟು ನಗು ಬಾರದಿದ್ದರೆ ಆತನೂ ಅವರ ಸಂಘವನ್ನು ಸೇರಿಕೊಳ್ಳಲು ಲಾಯಕ್ಕು. ಅದೇನೇ ಇದ್ದರೂ ನಿಧಾನವಾಗಿಯಾದರೂ ನಗುವಿನ ಮಹತ್ವ ಅರ್ಥವಾಗುತ್ತಿದೆಯೆಂಬುದೇ ಸಮಾಧಾನ..(?)
ನಕ್ಕರೆ ಆರೋಗ್ಯ ವರ್ಧಿಸುತ್ತದೆ ಎಂದು ಯಾವ ಡಾಕ್ಟರ್ ಹೇಳಿದನೋ ಗೊತ್ತಿಲ್ಲ ಎಲ್ಲರಿಗೂ ಒಮ್ಮೆಲೇ ಆರೋಗ್ಯದ ಕಾಳಜಿ ಹೆಚ್ಚಿ ಹೇಗಾದರೂ ಮಾಡಿ ನಗಲು ಹರಸಾಹಸ ಪಡುತ್ತಿರುವ ಸಂಗತಿಗಳೂ ಹೆಚ್ಚಾಗಿ ಕಂಡುಬರುತ್ತಿದೆ. ಎಲ್ಲಿ ನೋಡಿದರೂ ಹಾಸ್ಯೋತ್ಸವಗಳು ರಾರಾಜಿಸುತ್ತಿವೆ. ನಗೆಕೂಟಗಳು ಗಹಗಹಿಸಿ ನಗುತ್ತಿವೆ. ಕೆಲವರಂತೂ ಇಷ್ಟು ದಿನ ನಗದೇ ಮಾಡಿದ ಅಪರಾಧಕ್ಕೋ ಎಂಬಂತೆ ಇಂಥ ಕೂಟಗಳನ್ನು ಸೇರಿಕೊಂಡು ತಮ್ಮೊಳಗಿನ ನಗುವನ್ನೆಲ್ಲ ಹೊರ ಹಾಕಿ ಬಾಕಿ ತೀರಿಸಲು ಹೊರಟವರಂತೆ ಕಾಣುತ್ತಿದ್ದಾರೆ. ಹಾಸ್ಯೋತ್ಸವಗಳೆಂಬ ನಗೆ ಸಂತೆಯಲ್ಲಂತೂ ಜನ ಕಿಕ್ಕಿರಿದು ಸೇರುವ ಮೂಲಕ 'ನಕ್ಕೀರನ್' ಆಗಲು ಯತ್ನಿಸುತ್ತಿದ್ದಾರೆ. ಹಳಸಲು ಜೋಕ್ಗಳಿಗೂ ಇಲ್ಲಿ ಭಾರೀ ಬೇಡಿಕೆ. ಅಂತೂ ನಗುವಿಗೆ ಒಂದು ದೊಡ್ಡ 'ಮಾರ್ಕೆಟ್' ಸೃಷ್ಟಿಯಾಗಿರುವುದಂತೂ ನಿಜ. ಆದರೆ ನಿಜಕ್ಕೂ ನಗುವೆಂದರೆ ಇಷ್ಟೇನಾ? ಇಡೀ ವಾರವೆಲ್ಲ ಮುಖ ಗಂಟಿಕ್ಕಿಕೊಂಡು ವಾರದ ತುದಿಗೊಮ್ಮೆ ಕೃತಕವಾಗಿ ನಕ್ಕು ಬಿಟ್ಟರೆ ಆರೋಗ್ಯ ವರ್ಧಿಸುತ್ತಾ ಎಂಬ ಪ್ರಶ್ನೆ ಎದುರಾದರೂ ಇದನ್ನು ದೊಡ್ಡದಾಗಿ ಕೇಳುವ ಮೂರ್ಖತನ ನಾನು ಮಾಡುವುದಿಲ್ಲ. ಕಾರಣ ಅಷ್ಟಾದರೂ ನಗುವಿನ ಸಂತತಿ ಮುಂದುವರಿಯಲಿ ಎಂಬ ಆಶಯವೇ ನನ್ನದೂ...
ಕೆಲವು ದಶಕಗಳ ಹಿಂದೆ ಇಂತಹ ಹಾಸ್ಯೋತ್ಸವಗಳಿರಲಿಲ್ಲ. ಬದಲಿಗೆ ಹಾಸ್ಯ ಬರಹಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಮತ್ತು ಪುಸ್ತಕಗಳೇ ಈ ಕೆಲಸವನ್ನು ಮಾಡುತ್ತಿದ್ದವು. ಈಗ ಪುಸ್ತಕವನ್ನು ಓದುವಷ್ಟು ತಾಳ್ಮೆ ಮತ್ತು ಸಮಯ ಯಾರಿಗೂ ಇಲ್ಲವಾದ ಕಾರಣ, ಇನ್ಸ್ಟಂಟ್ ನಗುವಿಗಾಗಿ ಇಂಥ ಗೋಷ್ಠಿಗಳಿಗೆ ಹೋಗುವ ಮೂಲಕ ಆ ಅವಶ್ಯಕತೆಯನ್ನು ನೀಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ವಿಶೇಷವೆಂದರೆ ಹಳ್ಳಿಗಳಲ್ಲೂ ಇಂಥಹ ಹಾಸ್ಯೋತ್ಸವಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಹಾಸ್ಯಪ್ರಜ್ಞೆಯ ವ್ಯಾಪ್ತಿ ವಿಸ್ತರಿಸುತ್ತಿದೆಯೋ ಅಥವಾ ನಗರ ಜನರ ದುರ್ಗತಿಯೇ ಹಳ್ಳಿಗರಿಗೂ ಬಂದೊದಗಿದೆಯೋ ಎಂಬುದು ಸಂಶೋಧನಾರ್ಹ ವಿಷಯ. ಪಿ.ಹೆಚ್.ಡಿ ಪ್ರಬಂಧಕ್ಕಾಗಿ ವಿಷಯ ಹುಡುಕುತ್ತಿರುವ ಯಾರಾದರೂ ಈ ವಿಷಯದತ್ತ ಗಮನ ಹರಿಸಿ ಒಂದು ತೌಲನಿಕ ಅಧ್ಯಯನ ಮಂಡಿಸುವುದು ಸೂಕ್ತ. ಅದೇನೇ ಇದ್ದರೂ ನಾವಿಂದು ಸಹಜತೆಯನ್ನು ಕಳೆದುಕೊಳ್ಳುತ್ತಿದ್ದೇವೆಂಬುದಂತೂ ನಿಜ.
ಹಾಸ್ಯ ಸಾಹಿತ್ಯ ಇಂದಿಗೂ ಮುಖ್ಯವೆನಿಸುವುದೇ ಈ ನಿಟ್ಟಿನಲ್ಲಿ. ನಮಗಿಂದು ಸಹಜತೆಯ ಕೊರತೆ ಕಾಣುತ್ತಿದೆ. ದಿನ ನಿತ್ಯದ ಒತ್ತಡಗಳನ್ನೆಲ್ಲ ಮೀರಿ ಒಂದು ಕ್ಷಣ ನಕ್ಕು ಹಗುರಾಗಿಸುವ, ಮನಕ್ಕೆ ಮುದ ನೀಡುವ ಚೇತೋಹಾರಿ ಬರಹಗಳು ಈ ಕೊರತೆಯನ್ನು ನೀಗಿಸಬಲ್ಲವು ಎಂಬುದು ನನ್ನ ಅಭಿಪ್ರಾಯ. ಕತೆ, ಕಾದಂಬರಿಯಂಥ ಸೃಜನಶೀಲ ಬರಹಗಳಷ್ಟೇ ಮಹತ್ವ ಮತ್ತು ಪರಿಶ್ರಮದ ಅಗತ್ಯತೆ ಹಾಸ್ಯ ಸಾಹಿತ್ಯಕ್ಕೂ ಇದೆಯಲ್ಲದೇ ವ್ಯಾಪ್ತಿಯ ವಿಷಯದಲ್ಲಿ ಇದು ಅತಿ ಹೆಚ್ಚು ಜನರನ್ನು ತಲುಪಬಲ್ಲುದು ಎಂಬುದೂ ಸತ್ಯವೇ. ಅದಕ್ಕೇ ಬೀಚಿಯಿಂದ ಹಿಡಿದು ಡುಂಡಿರಾಜರವರೆಗಿನ ಅದೆಷ್ಟೋ ಹಾಸ್ಯ ಸಾಹಿತಿಗಳಿಗೆ ಇಂದಿಗೂ 'ಮಾರ್ಕೆಟ್' ಇದೆ. ಇನ್ನು ಹಾಸ್ಯ ಸಾಹಿತ್ಯ ಒಂದು ಗಂಭೀರ ಸಾಹಿತ್ಯವೇ ಅಲ್ಲ ಎಂದು ಕೆಲವರು ದೂರುತ್ತಾರೆ. ಅವರ ಆರೋಪದಲ್ಲೂ ಅರ್ಥವಿದೆ. ಅದು ನಿಜಕ್ಕೂ 'ಗಂಭೀರ' ಸಾಹಿತ್ಯವಲ್ಲ. ಬದಲಿಗೆ ಗಂಭೀರತೆಯನ್ನು ಚೂರು ಬದಿಗಿಟ್ಟು ಹಗುರವಾಗುವ ದಾರಿಯನ್ನು ಅದು ಕಲ್ಪಿಸುವ ಪ್ರಕಾರ. ಅಷ್ಟಕ್ಕೂ ಸಾಹಿತ್ಯ ಸಮ್ಮೇಳನಗಳಲ್ಲಿ ನಾಲ್ಕಾರು ಖುರ್ಚಿಯೆದುರು ಮಾಡುವ ಘನ ಗಂಭೀರ ವಿಮರ್ಶೆ, ಯಾರೂ ಕೇಳಲಾಗದಂಥ ಪದ್ಯಗಳಿಗಿಂಥ ಹಾಸ್ಯ ಬರಹಗಳು ಹೆಚ್ಚು ವ್ಯಾಪ್ತಿಯನ್ನು ಪಡೆಯುತ್ತವೆಂಬುದು ಅದನ್ನು ಟೀಕಿಸುವವರಿಗೂ ಅನುಭವ ವೇದ್ಯವೇ..
ಹಾಸ್ಯ ಪ್ರಕಾರಕ್ಕೆ ಮೊದಲಿನಿಂದಲೂ ದಿನ ಪತ್ರಿಕೆಗಳು, ನಿಯತಕಾಲಿಕೆಗಳು ವೇದಿಕೆಯನ್ನು ಒದಗಿಸಿಕೊಂಡೇ ಬರುತ್ತಿವೆ. ಇವತ್ತಿಗೂ ಅದು ಹರಟೆ, ವಿನೋದ, ವಿಡಂಬನೆ ಮೊದಲಾದ ಹೆಸರಲ್ಲಿ ಚಾಲ್ತಿಯಲ್ಲಿದೆ. ಹಾಸ್ಯ ಬರಹಗಳಿಗೆ ತನ್ನದೇ ಆದ ಚೌಕಟ್ಟಿಲ್ಲ. ಅದು ದೀರ್ಘ ಗದ್ಯ ರೂಪದಲ್ಲೂ ಇರಬಹುದು, ಪುಟ್ಟ ಹನಿಗವಿತೆಯ ರೂಪದಲ್ಲೂ ಇರಬಹುದು.
ಓದುಗನಿಗೆ ಮುಖದಲ್ಲೊಮ್ಮೆ ಥಟ್ಟನೇ ಮಂದಹಾಸ ಮೂಡಿಸಲು ಸಾಧ್ಯವಾದರೆ ಆ ಬರಹ ಸಾರ್ಥಕವೆಂದೇ ಅರ್ಥ. ಇವತ್ತಿನ ಬ್ಯುಸಿ ದಿನಮಾನದಲ್ಲೂ ತನ್ನ ಎಂದಿನ ಮಹತ್ವದ ಜೊತೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡು ಹೋಗುತ್ತಿರುವ ಹಾಸ್ಯ ಪ್ರಕಾರವು ಹೀಗೆಯೇ ಎಲ್ಲ ಜನರ ಮುಖದಲ್ಲಿ ಸಂತಸದ ಗೆರೆಯನ್ನು ಮೂಡಿಸುತ್ತಿರಲಿ. ಹೊಸವರ್ಷ ಎಲ್ಲರನ್ನೂ ಸಂತಸವಾಗಿಡಲಿ ಎಂಬುದೇ ನಮ್ಮ ಆಶಯ. ಅಂದ ಹಾಗೆ ಹೊಸವರ್ಷ ಪದಾರ್ಪಣೆ ಮಾಡುತ್ತಿರುವ ಇವತ್ತಿನ ಶುಭ ದಿನವೇ 'ಪದ ಪದರ' ಎರಡು ವರ್ಷಗಳನ್ನು ಪೂರೈಸುತ್ತಿದೆ. ನಿಮ್ಮ ಬೆಂಬಲ, ಹಾರೈಕೆ ಸದಾ ಇರಲಿ..
- ವಿಶ್ವನಾಥ ಸುಂಕಸಾಳ