ಬಿಜೆಪಿ ಬೆಂಬಲಿಸುವವರು ಸಾಗಬೇಕಾದ ಮಾರ್ಗವೇನು?
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ತಿಂಗಳೂ ಬಾಕಿಯಿಲ್ಲ. ಬಿಜೆಪಿಯ ಬೆಂಬಲಿಗರಾಗಿರುವವರು ಈ ಚುನಾವಣೆಯಲ್ಲಿ ಪಕ್ಷದ ಕತೆ ಮುಗಿದೇಹೋಯ್ತು ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಬಿಜೆಪಿ ಬೆಂಬಲಿಸುವವರ ಸ್ಥೈರ್ಯವನ್ನು ತುಸು ಉದ್ದೀಪಿಸುವ ನಿಟ್ಟಿನಲ್ಲಿ ಬಹಳಷ್ಟು ಸಕಾರಾತ್ಮಕ ಅಂಶಗಳನ್ನು ತೆರೆದಿಡುವುದು ಈ ಲೇಖನದ ಉದ್ದೇಶ. ಕರ್ನಾಟಕದ ಬಿಜೆಪಿ ಪಾಲಿಗೆ ಎಲ್ಲವೂ ಮುಗಿದುಹೋಯಿತು ಎನ್ನುವವರಿಗೆ ವಿರುದ್ಧ ದಿಕ್ಕಿನಲ್ಲಿ ವಾದವೊಂದನ್ನು ಕೆಲ ವಾಸ್ತವಗಳ ಅಡಿಪಾಯದಲ್ಲಿ ಮುಂದಿರಿಸಲಾಗಿದೆ. ಈ ಮಾಹಿತಿಗಳನ್ನು ಮುಂದಿಟ್ಟುಕೊಂಡು ನೋಡಿದಾಗ 2008-2013ರ ನಡುವಿನ ಈ ಅವಧಿಯಲ್ಲಿ ಬಿಜೆಪಿ ಸರ್ಕಾರದ ಆಡಳಿತವು ಅತ್ಯಂತ ಕೆಟ್ಟದ್ದು ಎಂದು ವರ್ಣಿಸುವ ಅಗತ್ಯ ಇಲ್ಲ ಹಾಗೂ ವಾಸ್ತವದಲ್ಲಿ ಈ ಅವಧಿಯಲ್ಲೇ ರಾಜ್ಯದಲ್ಲಿ ಅತಿಹೆಚ್ಚಿನ ಅಭಿವೃದ್ಧಿ ನೆರವೇರಿದೆ ಎಂಬುದು ಮುನ್ನೆಲೆಗೆ ಬರುತ್ತದೆ.
ಬಿಜೆಪಿಯನ್ನು ಬೆಂಬಲಿಸುತ್ತಿರುವವರು ಪ್ರಚಾರ ಕಾರ್ಯದಲ್ಲಿ ಅವಲಂಬಿಸಬೇಕಾದ ಧನಾತ್ಮಕ ಅಂಶಗಳು ಹಾಗೂನಕಾರಾತ್ಮಕ ನೆಲೆಯಲ್ಲಿ ಮಾತ್ರವೇ ಬಿಜೆಪಿಯನ್ನು ಬಿಂಬಿಸುತ್ತಿರುವ ಅದರ ಎದುರಾಳಿಗಳು ತಮ್ಮ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕಿಚಾಯಿಸುವ ರೀತಿಯಲ್ಲಿ ಈ ಕೆಳಗಿನ ಅಂಶಗಳನ್ನು ಓದಿಕೊಳ್ಳಬಹುದು.
1. ಸಾರ್ವಜನಿಕ ಸಾರಿಗೆ ಬಗ್ಗೆ ಹೆಚ್ಚು ಮಾತನಾಡಿ: ಕಾರ್ನಟಕವು ಬಸ್ ಸೇವೆಯಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಕೆಲವೇ ರಾಜ್ಯಗಳಲ್ಲಿ ಒಂದು ಎಂಬುದನ್ನು ಮುಲಾಜಿಲ್ಲದೇ ಹೇಳಬಹುದು. ಸಾರ್ವಜನಿಕ ಸಾರಿಗೆ ನಿರ್ವಹಣೆಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೂ ರಾಜ್ಯಕ್ಕೆ ಲಭಿಸಿದೆ. ಈ ನಿಟ್ಟಿನಲ್ಲಿ ಬಂದ ಎಲ್ಲ ಪ್ರಶಸ್ತಿಗಳನ್ನು ಉಲ್ಲೇಖಿಸುವುದಕ್ಕೆ ಹೋದರೆ ಬಹಳಷ್ಟು ಜಾಗ ಬೇಕಾದೀತು. 10229 ಹೊಸ ಬಸ್ಗಳು ಸೇವೆಗೆ ಸೇರ್ಪಡೆ ಆಗಿದ್ದು, ಎಲ್ಲ ಸೌಕರ್ಯಗಳಿರುವ 93 ಹೊಸ ಬಸ್ ಸ್ಟೇಷನ್ಗಳು ನಿರ್ಮಾಣಗೊಂಡಿವೆ. ಸ್ವಚ್ಛ- ಸೌಲಭ್ಯಯುಕ್ತ ಟ್ರಾಫಿಕ್ ಆ್ಯಂಡ್ ಟ್ರಾನ್ಸಿಸ್ಟ್ ಸೆಂಟರ್ಗಳೂ ನಿರ್ಮಾಣವಾಗಿವೆ. ಸಂಚಾರ ಒತ್ತಡವನ್ನು ಕಡಿಮೆ ಮಾಡುವಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಮತ್ತು ಅಂಡರ್ಪಾಸ್ಗಳಂತೂ ಅಚ್ಚರಿ ಹುಟ್ಟಿಸುವಂತೆ ಇವೆ. 2 ಸಾವಿರಕ್ಕೂ ಹೆಚ್ಚು ಬಸ್ಗಳಲ್ಲಿ ಪರ್ಯಾಯ ಇಂಧನವನ್ನು ಬಳಕೆ ಮಾಡಿರುವ ಕಾರಣಕ್ಕೆ 'ಗೋಲ್ಡನ್ ಪೀಕಾಕ್ ಇಕೊ ಇನ್ನೋವೇಶನ್ ಪ್ರಶಸ್ತಿ' ಲಭಿಸಿದೆ. ಬಸ್ ದಿನದ ಯಶಸ್ಸನ್ನು ಕಂಡು ಉಳಿದ ನಗರಗಳೂ ಈ ಪ್ರೋತ್ಸಾಹಕ ಮಾದರಿಯನ್ನು ತಮ್ಮದಾಗಿಸಿಕೊಳ್ಳುತ್ತಿವೆ.
ಮುಖ್ಯಮಾತು: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸೇವೆಗಳೂ ಯಾವಾಗಲೂ ಚೆನ್ನಾಗಿಯೇ ಇದ್ದವು ಬಿಡಿ ಎಂದು ಕೆಲವರು ಹೇಳಬಹುದು. ಆಗ, ಬಿಜೆಪಿ ಆಡಳಿತದಲ್ಲಿ ಅವು ಹೆಚ್ಚಿನ ಲಾಭಾಂಶಕ್ಕೆ ನೆಗೆದವು ಎಂಬುದನ್ನು ತೋರಿಸುವುದಕ್ಕೆ ಬ್ಯಾಲೆನ್ಸ್ಶೀಟ್ ಹರವಿಡಬೇಕಾಗುತ್ತದೆ.
2. ಕಂಪ್ಯೂಟರ್ ಸಾಕ್ಷರತೆ ಸಾಧಿಸಿದ ಪ್ರಮಾಣ: ಪಂಚಾಯತ್ ಸಾಫ್ಟ್ವೇರ್ ಅಳವಡಿಕೆಗೆ ರಾಷ್ಟ್ರಮಟ್ಟದ ಇ ಗವರ್ನೆನ್ಸ್ ಪ್ರಶಸ್ತಿ ದೊರೆತಿದ್ದರಿಂದ ಮೊದಲಾಗಿ ಹಲವು ಪುರಸ್ಕಾರಗಳು ಈ ವಲಯದಲ್ಲಿ ಕರ್ನಾಟಕಕ್ಕೆ ಒಲಿದು ಬಂದಿವೆ. ನಾಲೆಜ್ ಕ್ಯಾಪಿಟಲ್ ಎಂದು ಗುರುತಿಸಲಾಗುವ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಗೊತ್ತಿರುವ ಜನರೊಂದಿಗೆ ಬೆಸೆದುಕೊಳ್ಳುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಇ ಮತ್ತು ಎಮ್ ಆಡಳಿತಗಳಲ್ಲಿ ಆಗಿರುವ ಗಮನಾರ್ಹ ಬದಲಾವಣೆಗಳನ್ನು ಜನರಿಗೆ ವಿವರಿಸಬೇಕು. 'ಸಕಾಲ' ಯೋಜನೆಯು 1, 50, 00,000 ಅರ್ಜಿಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿದೆ. ತಮ್ಮ ಭಾಷಣಗಳಲ್ಲಿ ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸಬೇಕಿರುವ ವಿಷಯ ಇದು.
ಮುಖ್ಯಮಾತು: ಅದರಲ್ಲೇನು ವಿಶೇಷ, ಬಹಳಷ್ಟು ರಾಜ್ಯಗಳು ಈ ಮಾದರಿಯನ್ನು ಹೊಂದಿವೆ ಎಂದು ವಿರೋಧಿಗಳು ಹೇಳಬಹುದು. ಆದರೆ ಯಶಸ್ಸಿನ ದರದಲ್ಲಿ ಸಕಾಲದಷ್ಟು ಪ್ರಗತಿ ಇನ್ಯಾರಿಂದಲೂ ಸಾಧ್ಯವಾಗಿಲ್ಲ.
3. ಗ್ರಾಮೀಣ ಯೋಜನೆಗಳ ಯಶಸ್ಸನ್ನು ಪ್ರಮುಖವಾಗಿ ಬಿಂಬಿಸಬೇಕು: ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಗ್ರಾಮೀಣ ಭಾಗದಲ್ಲಿ ಆಗಿರುವ ಯೋಜನೆಗಳ ಯಶಸ್ಸನ್ನು ತಿಳಿಸುವ ಕೆಲಸ ಆಗಬೇಕಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಗತ್ಯವಾಗಿ ಬಿಂಬಿಸಬೇಕಾದ ವಿಷಯ ಎಂದರೆ: ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗಾ ಜಿಲ್ಲೆಗಳು ಉದ್ಯೋಗ ಖಾತ್ರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವುದಕ್ಕೆ ಪುರಸ್ಕಾರ ಪಡೆದಿವೆ. ಇದು ಕೇಂದ್ರದ ಯೋಜನೆ ಎಂಬ ಶ್ರೇಯಸ್ಸು ನೀಡಿದರೂ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸಿದ ರೀತಿ ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ವಿವರಿಸಬೇಕು. ಭಾರತದ ಯಾವ ಸರ್ಕಾರಗಳೂ ಯಾವ ರಾಜ್ಯದಲ್ಲೂ ಪ್ರತ್ಯೇಕ ಕೃಷಿ ಬಜೆಟ್ ತರುವ ಧೈರ್ಯ ಮಾಡಿರಲಿಲ್ಲ. ಬಿಜೆಪಿ ಸರ್ಕಾರದ ನಡೆ ರೈತರ ಹಿತಾಸಕ್ತಿಯನ್ನು ಘೋಷಣೆಗಳ ಆಚೆಗೂ ಈಡೇರಿಸುವುದರತ್ತ ಹೆಜ್ಜೆ. ಸಾವಯವ ಕೃಷಿಯಂಥ ಯೋಜನೆಗಳಿಗೆ ಸಾವಿರಾರು ಕೋಟಿ ರುಪಾಯಿಗಳ ಲಾಭ ದೊರೆಯಿತು.
ಮುಖ್ಯಮಾತು: ರೈತರ ಮೇಲೆ ಆದ ಗೋಲಿಬಾರ್, ಪ್ರವಾಹ-ಬರ ಇಂಥವುಗಳನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತದೆ. ಆಗ ಅದನ್ನು ಉಳಿದ ರಾಜ್ಯಗಳ ರೈತ ವಿಷಯಗಳೊಂದಿಗೆ ಅದರಲ್ಲೂ ಮಹಾರಾಷ್ಟ್ರದಲ್ಲಿ ನೀರಾವರಿಗಾಗಿ ಬೃಹತ್ ಮೊತ್ತ ವ್ಯಯಿಸಿಯೂ ಬರ ಹಾಗೆಯೇ ಉಳಿದಿದ್ದನ್ನು ನೆನಪಿಸಬೇಕು.
4. ಮೆಟ್ರೋ, ಮೆಟ್ರೋ ಮತ್ತು ಮೆಟ್ರೋ: ಬೆಂಗಳೂರಿನ ಮೆಟ್ರೋ ಉಳಿದ ನಗರಗಳ ರೈಲು ಯೋಜನೆಗಳಿಗಿಂತ ಭಿನ್ನವಾದ ಯಶೋಗಾಥೆ ನಿರ್ಮಿಸಿದೆ. ಕೋಲ್ಕತಾ ಮತ್ತು ದೆಹಲಿ ಯೋಜನೆಗಳಿಗೆ ಹೋಲಿಸಿದರೆ ಇಲ್ಲಿ ರಾಜ್ಯದ ಸಹಭಾಗಿತ್ವವೇ ಹೆಚ್ಚಿದೆ. ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಹೈದರಾಬಾದ್ ಮತ್ತು ಮುಂಬೈಗಳಲ್ಲೂ ಮೆಟ್ರೋ ರೈಲು ಯೋಜನೆ ಪ್ರಾರಂಭವಾಯಿತು. ಬೆಂಗಳೂರು ಎರಡನೇ ಹಂತದ ಮೆಟ್ರೋದ ಉದ್ಘಾಟನೆಗೆ ಸಿದ್ಧವಾಗಿದ್ದರೂ ಆ ಎರಡು ನಗರಗಳು ಇನ್ನೂ ಕಟ್ಟುವ ಕಾಯಕದಲ್ಲೇ ಇವೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಕಾಂಗ್ರೆಸ್ನ ಕೆಟ್ಟ ಆಡಳಿತದಿಂದ ಅವು ವೇಗ ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಿರ್ವಹಣೆ ಮಿನುಗುತ್ತದೆ.
ಮುಖ್ಯಮಾತು: ಇದು ಯುಪಿಎ ಹಣ, ಎಸ್.ಎಂ. ಕೃಷ್ಣ ಸಮಯದಲ್ಲೇ ಇದು ಶುರುವಾಗಿತ್ತು ಎಂಬ ವಾದಗಳು ಎದುರಾಗುತ್ತವೆ. ಹಾಗಾದರೆ ಮುಂಬೈ ಮತ್ತು ಹೈದರಾಬಾದ್ಗಳಲ್ಲಿ ಏಕೆ ವೈಫಲ್ಯ ಎದುರಾಗುತ್ತಿದೆ ಮತ್ತು 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಮೆಟ್ರೋ ಕಾಮಗಾರಿ ಯಾವ ಹಂತದಲ್ಲಿತ್ತು ಎಂದು ಪ್ರಶ್ನಿಸಿದರೆ ನಿಚ್ಚಳ ಚಿತ್ರಣ ಸಿಗುತ್ತದೆ.
5. ಕಾಂಗ್ರೆಸ್ ಹಾಗೂ ಇತರರನ್ನೂ ಬಯಲಲ್ಲಿ ನಿಲ್ಲಿಸಿ: ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾದ ಎಸ್.ಆರ್. ಹಿರೇಮಠ ಅವರಂಥವರು ಸುಪ್ರೀಂಕೋರ್ಟ್ ಮತ್ತಿತ್ತರ ಎಡೆಗಳಲ್ಲಿ ನೀಡಿರುವ ಒಟ್ಟಾರೆ ಚಿತ್ರಣದ ಕುರಿತು ಬಿಜೆಪಿ ಮಾತನಾಡಬೇಕು. ಗಣಿ ಅಕ್ರಮದ ಆರೋಪಗಳಲ್ಲಿ ಎಸ್ಸೆಂ ಕೃಷ್ಣ, ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್ ಹೆಸರುಗಳೂ ತಳುಕು ಹಾಕಿಕೊಂಡಿರುವುದು ಚರ್ಚೆಯಾಗಲಿ. ಇಲ್ಲಿ ಕೇವಲ 'ಯಡ್ಡಿ-ರೆಡ್ಡಿ' ಆಯಾಮ ಮಾತ್ರ ಮುಖ್ಯವಾಗುವುದಿಲ್ಲ. ತಾವು ಅಂದಿನ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ಆರ್ಗೆ ಹಣಕಾಸು ಒದಗಿಸಿದ್ದಾಗಿ ಸಿಬಿಐ ಮುಂದೆ ಜನಾರ್ದನ ರೆಡ್ಡಿ ಒಪ್ಪಿಕೊಂಡಿದ್ದಾರಲ್ಲ? ರೆಡ್ಡಿ ಸಹೋದರರೊಂದಿಗೆ ಕಾಂಗ್ರೆಸ್ ಪಕ್ಷವು ಆಂಧ್ರದಲ್ಲಿ ಹೊಂದಿರುವ ಬಾಂಧವ್ಯ ಎಂಥಾದ್ದು? ವೈಎಸ್ಆರ್ ಮಗ ಜಗನ್ ರೆಡ್ಡಿ ಜತೆ ಇವರ ಸಂಬಂಧ ಏನು?
6. ಬಳ್ಳಾರಿ ಬಗ್ಗೆ ಮಾತಾಡಲು ಮುಜುಗರ ಬೇಡ. ಬಿಜೆಪಿಯ ಈಗಿನ ಕ್ಲೀನ್ ಇಮೇಜ್ ಹೇಳಿ: ಯಡಿಯೂರಪ್ಪ ಮತ್ತು ರೆಡ್ಡಿ ಇಬ್ಬರೂ ಈಗ ಬಿಜೆಪಿಯಲ್ಲಿ ಇಲ್ಲ. ಬಳ್ಳಾರಿಯಲ್ಲಿರುವುದೇ ಮೈನಿಂಗ್ ಮಾಫಿಯಾದ ದುಡ್ಡು ಎಂದಾದರೆ ಅಲ್ಲಿ ಈ ಹಿಂದೆ ಲೋಕಸಭೆ ಚುನಾವಣೆ ಗೆದ್ದ ಸೋನಿಯಾ ಗಾಂಧಿ ಅವರ ಖರ್ಚು ನಿರ್ವಹಿಸಿದ್ದು ಯಾರು? ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವವರಲ್ಲಿ ಗಣಿಧಣಿಗಳು ಯಾರೂ ಇಲ್ಲವೇ?
ಮುಖ್ಯಮಾತು: ಬಿಜೆಪಿಯಿಂದ ಆದ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಕೆ ಬೇಡ. ಆದರೆ ಶೆಟ್ಟರ್, ಜೋಶಿ, ಸದಾನಂದ ಗೌಡ ಮುಂತಾದವರ ಮುಂದಾಳತ್ವದ ಬಿಜೆಪಿಯ ಹೊಸನಾಯಕತ್ವದ ಬಗ್ಗೆ ಮಾತಾಗಲಿ. 1990ರ ವೇಳೆಯ ಕಾಂಗ್ರೆಸ್ನ ಮೂರು ಸಿಎಂಗಳೊಂದಿಗೆ ಇವರನ್ನು ಹೋಲಿಸಿ.
7. ಅರ್ಥ ವ್ಯವಸ್ಥೆ ನೋಡಿ: 2007-08ರಲ್ಲಿ ಬಿಜೆಪಿಯ ಬಜೆಟ್ ರಿಸಿಪ್ಟ್ 40762 ಕೋಟಿ ರುಪಾಯಿಗಳಾಗಿದ್ದರೆ 2013-14ರಲ್ಲಿ 1,15, 983 ಕೋಟಿ ರುಪಾಯಿಗಳು. ಕೃಷಿ ಬಜೆಟ್ ಪ್ರತ್ಯೇಕ. ಬಿಜೆಪಿ ಆಳ್ವಿಕೆಯಲ್ಲಿ ಶೇ. 239ರ ಬೆಳವಣಿಗೆ ಆದಂತಾಯಿತು. 2008-09ರಲ್ಲಿ 27,009 ಕೋಟಿ ರುಪಾಯಿಗಳನ್ನು ಅಭಿವೃದ್ಧಿಗೆ ವ್ಯಯಿಸಿದ್ದರೆ 2013-14ರಲ್ಲಿ 77,383 ಕೋಟಿ ರುಪಾಯಿಗಳಿಗೆ ಅಂದರೆ 186 ಶೇಕಡ ಏರಿಕೆ. ರಾಜಕೀಯ ಅವ್ಯವಸ್ಥೆಗಳು ಆಗಾಗ ತಲೆ ಎತ್ತುತ್ತಲೇ ಇದ್ದಿದ್ದು ಹೌದಾದರೂ ಅರ್ಥ ವ್ಯವಸ್ಥೆ ಪ್ರಗತಿ ಅವೆಲ್ಲಕ್ಕಿಂತ ಮುಂದೆ ನಿಲ್ಲುತ್ತದೆ.
ಮುಖ್ಯಮಾತು: ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಬಂಡವಾಳ ಹೂಡಿಕೆದಾರರ ಸಮಾವೇಶ ನಮ್ಮಲ್ಲೇ ಹೆಚ್ಚು ಯಶಸ್ವಿಯಾಗಿರುವುದನ್ನು ಬಿಂಬಿಸಬೇಕು. ಗಣಿ ಮೇಲಿನ ನಿಷೇಧ ಹಲವು ಯೋಜನೆಗಳಿಗೆ ಅಡ್ಡಿಯಾಗಿರುವುದನ್ನು ಮನದಟ್ಟು ಮಾಡಿಸಬೇಕು.
8. ಕಾಂಗ್ರೆಸ್ನ ದೌರ್ಬಲ್ಯಗಳ ಬಗ್ಗೆ ಟೀಕೆ: ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದರ ಬಗ್ಗೆ ಬಿಜೆಪಿ ಟೀಕೆ ಎದುರಿಸಿತು. ಇದಕ್ಕೆ ಪ್ರತಿಯಾಗಿ ಅದೇಕೆ ಬಿಜೆಪಿ ಅಭಿಷೇಕ್ ಮನು ಸಿಂಘ್ವಿ ಬೆತ್ತಲಾದ ಸಿಡಿ ಬಗ್ಗೆ ಪ್ರತಿಏಟು ನೀಡಲಿಲ್ಲ? ರಾಜಭವನದಲ್ಲಿ ಎನ್ಡಿ ತಿವಾರಿ ಎಂಬ ವೃದ್ಧ ರಾಜಕಾರಣಿಯ ರಾಸಲೀಲೆ ಬೆಳಕಿಗೆ ಬಂತಲ್ಲವೇ? ರಾಜಸ್ಥಾನದ ಕಾಂಗ್ರೆಸ್ಸಿಗ ಮದ್ರೇನಾ ಭಾಗಿಯಾಗಿರುವ ಹಗರಣಗಳ ಬಗ್ಗೆ ಮತದಾರರಿಗೆ ಅರಿವು ಮಾಡಿಕೊಡಲಿ. ಬಿಜೆಪಿಯನ್ನು ಕೋಮುವಾದಿ ಎನ್ನುವ ಸೆಕ್ಯುಲರ್ ಕಾಂಗ್ರೆಸ್ ತೆರಿಗೆದಾರರ ಹಣದಲ್ಲಿ ಮುಸ್ಲಿಮರಿಗೆ ವಿಶೇಷವಾಗಿ ವಿವಿ ಕಟ್ಟುವುದಕ್ಕೆ ಹೊರಟಿದೆ.
ಮುಖ್ಯಮಾತು: ಬಿಜೆಪಿ ತಪ್ಪು ಮಾಡಲೇ ಇಲ್ಲ ಎಂದಲ್ಲ. ಆದರೆ ಇದನ್ನು ಯುಪಿಎ ಸರ್ಕಾರದ ಪರ್ವತಸದೃಶ ಹಗರಣಗಳೊಂದಿಗೆ ಹೋಲಿಸಿ.
9. ಕಾನೂನು ಸುವ್ಯವಸ್ಥೆಯ ಉತ್ತಮಿಕೆ: ಬಿಜೆಪಿ ಆಡಳಿತದ ಅವಧಿಯಲ್ಲಿ ಬೃಹತ್ ಪ್ರಮಾಣದ ದಂಗೆಗಳು ಆಗಲಿಲ್ಲ. ಐದಕ್ಕಿಂತ ಹೆಚ್ಚುಮಂದಿಯ ಪ್ರಾಣಹೋದ ದಂಗೆಗಳ ಉದಾಹರಣೆ ಇಲ್ಲ. ಕಾಂಗ್ರೆಸ್ ಆಳ್ವಿಕೆಯ 1991ರ ಸಂದರ್ಭದ ತಮಿಳು ವಿರೋಧಿ ದಂಗೆ ಹಾಗೂ 1994ರ ಉರ್ದು ವಿರೋಧಿ ದಂಗೆಯ ಸಾವು-ಹಿಂಸೆಗಳೊಂದಿಗೆ ಹೋಲಿಕೆ ಮಾಡಿ. ಕೋಮು ಸೌಹಾರ್ದ ಹಾಗೂ ಭದ್ರತೆ ಬಿಜೆಪಿ ಆಳ್ವಿಕೆಯಲ್ಲಿ ಉತ್ತಮವಾಗಿಯೇ ಇತ್ತು. ಎಸ್ಸೆಮ್ಮೆಸ್ ವದಂತಿಯಿಂದ ನಗರ ತೊರೆದಿದ್ದ ಈಶಾನ್ಯ ರಾಜ್ಯಗಳ ಯುವಕರನ್ನು ಸಮಾಧಾನಿಸುವುದಕ್ಕೆ ಗೃಹಮಂತ್ರಿ ತೋರಿಸಿದ ಆಸ್ಥೆ ಅನನ್ಯ. ಹುತಾತ್ಮರ ಸ್ಮಾರಕ ನಿರ್ಮಾಣದ ಮೂಲಕ ಯೋಧರಿಗೆ ಗೌರವ ಸಲ್ಲಿಸಿದ ಬಿಜೆಪಿ, ಯೋಧರಿಗೆ ಕರಭಾರ ತಗ್ಗಿಸುವ ಮೂಲಕವೂ ದೇಶಭಕ್ತಿ ತೋರಿಸಿದೆ.
ಮುಖ್ಯಮಾತು: ಕೆಲವರು ಚರ್ಚ್ದಾಳಿ ಕಡೆ ಬೊಟ್ಟು ಮಾಡುತ್ತಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಏನೆಲ್ಲ ಸಂಘರ್ಷವಾಗಿತ್ತು ಉದಾಹರಿಸಿ, ಬಿಜೆಪಿ ತುರ್ತುಕ್ರಮ ಕೈಗೊಂಡಿರುವುದರ ಬಗ್ಗೆ ಮನವರಿಕೆ ಮಾಡಿಕೊಡಿ.
10. ಹಿಂದಿನ ಸರ್ಕಾರಗಳ ತಪ್ಪು ಕ್ರಮದ ಪರಿಣಾಮ ವಿವರಿಸಿ: ಕಾಂಗ್ರೆಸ್ ಮತ್ತು ಜೆಡಿಎಸ್ಗಳು ತಮ್ಮ ಆಡಳಿತದಲ್ಲಿ ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರ ಪಾಲಿಸದೇ ಇದ್ದಿದ್ದೇ 2012ರ ಕಸದ ಸಮಸ್ಯೆಗೆ ಕಾರಣ. ಕಸ ಸುರಿಯುವಿಕೆಯ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ಇರಬಾರದು ಎಂಬ ಮಾರ್ಗದರ್ಶನವನ್ನು 0.5 ಕಿ.ಮೀ.ಗಳಿಗೆ ಇಳಿಸಿ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಮಾಡಿಕೊಡಲಾಯಿತು. ಅಲ್ಲದೇ ಕಾರ್ಪೋರೇಷನ್ಗಳನ್ನು ಬೇಗ ಬೇಗ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತ ಹೋದ ಬಿಬಿಎಂಪಿ ಅದಕ್ಕೆ ಪೂರಕ ಯೋಜನೆಗಳನ್ನು ಇರಿಸಿಕೊಳ್ಳದೇ ಇದ್ದದ್ದು ಮೆಟ್ರೋ ಸಿಟಿ ಗಬ್ಬೇಳುವುದಕ್ಕೆ ಕಾರಣವಾಯಿತು.
11. ಬಿಜೆಪಿ ಆಳ್ವಿಕೆಯಲ್ಲಿ ಕರ್ನಾಟಕ ಭಾರಿ ಬರವನ್ನು ಎದುರಿಸಿತು. ಆದರೂ ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಬಿಜೆಪಿ ಆಳ್ವಿಕೆ ಇಲ್ಲಿ ರೈತರ ಆತ್ಮಹತ್ಯೆ ಪ್ರಕರಣವನ್ನು ತಹಬಂದಿಗೆ ತಂದಿದೆ. ತಮಿಳುನಾಡು, ಆಂಧ್ರಗಳಿಗೆ ಹೋಲಿಸಿದಾಗ ವಿದ್ಯುತ್ ನಿರ್ವಹಣೆಯೂ ಚೆನ್ನಾಗಿಯೇ ಇದೆ. ಕಾಂಗ್ರೆಸ್ ಆಳ್ವಿಕೆಯ ಆಂಧ್ರಪ್ರದೇಶದಲ್ಲಿ ಜವಳಿ, ಸ್ಟೀಲ್ ಮತ್ತು ಮಿಶ್ರ ಲೋಹ ತಯಾರಿಕೆ ವಲಯದ 6 ಸಾವಿರ ಯೂನಿಟ್ಗಳು ಮುಚ್ಚಿ 2 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡರು. ಐದು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ 14751 ಕೋಟಿ ಹೂಡಿಕೆ ಆಗಿದೆ.
ಮುಖ್ಯಮಾತು: ಗ್ರಾಮೀಣ ಭಾಗಗಳ ಪವರ್ ಕಟ್ ಕಡೆ ಬೊಟ್ಟು ಮಾಡುವವರಿಗೆ ಸೆಂಟ್ರಲ್ ಗ್ರಿಡ್ನಿಂದ ಕರ್ನಾಟಕ ಪಡೆಯುತ್ತಿರುವ ವಿದ್ಯುತ್ ಸರಾಸರಿ ತೋರಿಸಿ. ಅದನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಪಡೆಯುತ್ತಿರುವ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕವು ಕಡಿಮೆ ವಿದ್ಯುತ್ನಲ್ಲೇ ಸೂಕ್ತ ನಿರ್ವಹಣೆ ಮಾಡುತ್ತಿರುವುದು ತಿಳಿಯುತ್ತದೆ. ಕೊನೆಯಲ್ಲಿ, ಬಿಜೆಪಿಗೆ ಖಂಡಿತ ಈಗಿರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇದ್ದಿರಬಹುದಾದ ಅವಕಾಶವಿತ್ತು. ಆದರೆ ಈಗಲೂ ಎಲ್ಲವೂ ಕಳೆದುಹೋಗಿಲ್ಲ.
- ಕಿರಣ್ ಕುಮಾರ್ ಎಸ್.
kirankumars@hotmail.com