ಭಾರತ ಬಲಶಾಲಿಯಾಗಬೇಕೆಂದು ಹಂಬಲಿಸಿದ ಅಂಬೇಡ್ಕರ್
ಬಾಬಾ ಸಾಹೇಬ ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರನ್ನು ಬಹುತೇಕರು ದಲಿತನಾಯಕರು, ದಲಿತ ಚಿಂತಕರು, ದಲಿತರನ್ನು ಬಲಗೊಳಿಸಲು ಪ್ರಯತ್ನಿಸಿದರು ಎಂದೇ ವ್ಯಾಖ್ಯಾನಿಸುತ್ತಾರೆ, ಅರ್ಥೈಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ಅಂಬೇಡ್ಕರ್ ಭಾರತದ ಸರ್ವಜನಾಂಗದ ಸರ್ವಶ್ರೇಷ್ಠ ರಾಷ್ಟ್ರೀಯ ನಾಯಕರೂ, ದಲಿತ ತನವಿಲ್ಲದ, ದಲಿತತ್ವವಿಲ್ಲದ ಸರ್ವಶಕ್ತವಾದ ಸಮಾಜವನ್ನು ಸಂರಚಿಸಲು ಚಿಂತಿಸಿದವರು, ಕಟ್ಟಕಡೆಯ ದಲಿತನನ್ನೂ ಒಳಗೊಂಡಂತೆ ಪ್ರತಿಯೊಬ್ಬ ಭಾರತೀಯನೂ ನಿಜವಾದ ಮನುಷ್ಯನಾಗುವ ಮೂಲಕ, ಧರ್ಮದ ನೈತಿಕ ಕಾವಲುಗಾರನಾಗುವ ಮೂಲಕ, ನಿಜವಾದ ಅರ್ಥದಲ್ಲಿ ಭಾರತೀಯರಾಗಬೇಕು ಹಾಗೂ ಭಾರತ ಬಲಶಾಲಿಯಾಗಬೇಕೆಂದು ತಮ್ಮ ಜೀವನದ ಉದ್ದಕ್ಕೂ ಹಂಬಲಿಸಿದವರು. ಭಾರತಕ್ಕೆ ಬೇಕಾದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಂವಿಧಾನಾತ್ಮಕವಾದ ಎಲ್ಲ ರೀತಿಯ ಬಲವನ್ನು ತಮ್ಮ ಚಿಂತನೆಗಳ ಮೂಲಕ, ಹೋರಾಟಗಳ ಮೂಲಕ, ಆಡಳಿತದ ಮೂಲಕ, ಸಂವಿಧಾನದ ಮೂಲಕ ನೀಡಿದವರು. ಅವರ 'ಪಾಕಿಸ್ತಾನ ಅಥವಾ ಭಾರತ ವಿಭಜನೆ' ಕೃತಿಯನ್ನು ಓದಿದ ಯಾರಿಗಾದರೂ ಅಂಬೇಡ್ಕರ್ ಸ್ವಾತಂತ್ರ್ಯೋತ್ತರ ಭಾರತದ ಸ್ಪಷ್ಟ ಕನಸನ್ನು ಕಂಡ ಆಧುನಿಕ ಭಾರತದ ಪಿತಾಮಹ ಎಂದೆನಿಸದೆ ಇರಲಾರದು. ಅವರ ಜನಸಂಖ್ಯಾ ವಿನಿಮಯದ ಸಲಹೆಯನ್ನು ಒಪ್ಪದೇ ಹೋದದ್ದರ ಪರಿಣಾಮ ಇಂದು ಭಾರತ ಬವಣೆಗಳನ್ನು ಅನುಭವಿಸಬೇಕಾಗಿ ಬಂದಿರುವುದನ್ನು ನೋಡಿದರೆ ಅಂಬೇಡ್ಕರ್ ಅವರ ವಾಸ್ತವವಾದಿ ರಾಷ್ಟ್ರೀಯತೆಯ ದೂರದೃಷ್ಟಿ ಅರ್ಥವಾಗುತ್ತದೆ.
ಭಾರತ ಬಲಶಾಲಿಯಾಗಬೇಕಾದರೆ ಭಾರತೀಯರು ಬಲಶಾಲಿಗಳಾಗಬೇಕು. ಭಾರತದಲ್ಲಿ ಯಾವ ದುರ್ಬಲನೂ ದಲಿತನೂ ನಿರ್ಗತಿಕನೂ ಯಥಾಸ್ಥಿತಿಯಲ್ಲಿ ಉಳಿಯಬಾರದು. ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಮೇಲೆದ್ದು ಆರ್ಥಿಕವಾಗಿ ಬಲಗೊಂಡು, ರಾಜಕೀಯವಾಗಿ ನೇತೃತ್ವ ನೀಡಿ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ನೈತಿಕ ಕಾವಲುಗಾರರಾಗಿ ನೈತಿಕ ಬಲದ ಭಾರತವನ್ನು ನಿರ್ಮಿಸಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಭಾರತದ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜನೀತಿ, ಧಾರ್ಮಿಕತೆ ಹೀಗೆ ಪ್ರತಿಯೊಂದೂ ಕ್ಷೇತ್ರಕ್ಕೂ ಬೇಕಾದ ನಿಜದ ಬೆಳಕನ್ನು ನಿರ್ಭೀತಿಯಿಂದ ನೀಡಿದ್ದಾರೆ. ಅವರ ಹುಟ್ಟಿನ ಕಾರಣಕ್ಕೆ ಆ ಸತ್ಯದ ಹಣತೆಯ ಬೆಳಕನ್ನು ನಾವು ಭಾರತೀಯರು ನಮ್ಮ ಮನಸ್ಸು ಹಾಗೂ ಮನೆಗಳಲ್ಲಿ ತುಂಬಿಕೊಳ್ಳದಿದ್ದರೆ ನಷ್ಟವಾಗುವುದು ಅಂಬೇಡ್ಕರರಿಗಲ್ಲ. ನಿಜವಾಗಿಯೂ ನಷ್ಟ ಆಗುವುದು ಭಾರತೀಯರಿಗೆ ಹಾಗೂ ಭಾರತಕ್ಕೆ.
ಈ ಹಿನ್ನೆಲೆಯಲ್ಲಿ ಅವರ ಆರ್ಥಿಕ ಚಿಂತನೆಗಳನ್ನು ಗಮನಿಸಿದರೆ ಅದೇ ಒಂದು ಆರ್ಥಿಕ ಮಾನವತಾ ಧರ್ಮವಾಗಿ ಮೈದಳೆಯುತ್ತದೆ. ಹಾಗಾಗಿಯೇ ಶ್ರೇಷ್ಠ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರು 'Ambedkar is my father in Economics... His contribution in the field of economics is marvellous and will be remembered for ever...!' ಎಂದಿದ್ದಾರೆ. ಕಾರಣ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಯ ಮೂಲ ಆಶಯ ಬಿದ್ದ ದೀನದಲಿತ ಶೋಷಿತನಿಂದ ಹಿಡಿದು ಬಿದ್ದ ಭಾರತದವರೆಗೆ ಬಿದ್ದದ್ದೆಲ್ಲವೂ ಶೋಷಿತವಾದದ್ದೆಲ್ಲವೂ ಬಲಗೊಂಡು ಮೈಕೊಡವಿ ಸ್ವಾಭಿಮಾನದಿಂದ ಮೇಲೆದ್ದು ನಿಲ್ಲುವಂತಾಗಬೇಕೆಂಬುದೇ ಆಗಿತ್ತು. ಅಂಬೇಡ್ಕರ್ ಅವರು ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿದ್ದರೂ ಅವರಿಗೆ ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಧರ್ಮಶಾಸ್ತ್ರ, ವಿಜ್ಞಾನ, ತರ್ಕಜ್ಞಾನ, ಅಧ್ಯಾತ್ಮಗಳು ಬೇರೆ ಬೇರೆಯಾಗಿರಲಿಲ್ಲ. ಎಲ್ಲವೂ ಬಿದ್ದ ಜನರನ್ನು, ಬಿದ್ದ ದೇಶವನ್ನು ಮೇಲೆತ್ತಲು ಅತ್ಯಗತ್ಯವಾದ ವೈಜ್ಞಾನಿಕ ವಿಧಾನವಾಗಿ, ವಾಸ್ತವತೆಯಿಂದ ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರಲು ಬೇಕಾಗಿದ್ದ ಶಕ್ತಿ ಸಾಧನಗಳೇ ಆಗಿದ್ದವು. ಹಾಗಾಗಿಯೇ ಅವರು ಕೊಟ್ಟ ಸಂವಿಧಾನದಲ್ಲಿ ಯಾವ ಶಾಸ್ತ್ರಗಳಿಲ್ಲ? ಎಲ್ಲವೂ ಇದೆ. ಲೋಕದ ಎಲ್ಲಾ ಕಲ್ಯಾಣಕಾರಿ ಅರಿವನ್ನೂ ಸ್ವಾಗತಿಸಿ ಭಾರತವನ್ನು ಬಲಗೊಳಿಸಿದಂಥ ಆಧುನಿಕ ಮಹಾನ್ ಮಾನವತಾವಾದಿ, ರಾಷ್ಟ್ರಪ್ರೇಮಿ, ನೈತಿಕತೆಯ ಕಾವಲುಗಾರ ಬಾಬಾ ಸಾಹೇಬ್ ಅಂಬೇಡ್ಕರ್. ಇದಕ್ಕೆ 1915ರ ಹೊತ್ತಿನಲ್ಲೇ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ 'ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು ವ್ಯವಸ್ಥೆ' ಎಂಬ ಪ್ರಬಂಧವನ್ನು ಸಲ್ಲಿಸುತ್ತಾರೆ. ಅದರಲ್ಲಿ 'ಭಾರತಕ್ಕೆ ಇಂಗ್ಲೆಂಡಿನ ಕೊಡುಗೆಯನ್ನು ವಿವೇಚಿಸಬೇಕಾಗಿದೆ. ಇದರಲ್ಲಿ ಎದ್ದು ಕಾಣುವ ಅಂಶವೆಂದರೆ ಆರ್ಥಿಕವಾಗಿ ಭಾರತಕ್ಕೆ ಇಂಗ್ಲೆಂಡಿನ ಕೊಡುಗೆಗಿಂತಲೂ ಇಂಗ್ಲೆಂಡಿಗೆ ಭಾರತವು ನೀಡಿದ ಕೊಡುಗೆ ಅಗಾಧವಾದದ್ದು. ಇದು ದಿಗ್ಭ್ರಮೆಗೊಳಿಸುವ ಅಂಶವಾದರೂ ಸತ್ಯಸಂಗತಿಯಾಗಿದೆ. ಇಂಗ್ಲೆಂಡಿನ ಕೊಡುಗೆ ಶೂನ್ಯವೆಂದೇ ಹೇಳಬಹುದು. ಈ ಎರಡು ಮಾತುಗಳು ಆರ್ಥಿಕವಾಗಿ ಸತ್ಯಸಂಗತಿಗಳಾಗಿವೆ. ಇಂಗ್ಲೆಂಡ್ ಭಾರತದ ಬೆಳ್ಳಿ ಮತ್ತು ಬಂಗಾರದ ಸಂಗ್ರಹಕ್ಕೆ ಒಂದು ಚಿಕ್ಕಾಸನ್ನೂ ನೀಡಿಲ್ಲ. ಆದರೆ ಅದು ಭಾರತವನ್ನು ಎಷ್ಟರಮಟ್ಟಿಗೆ ಬರಿದು ಮಾಡಿದೆಯೆಂದರೆ ಅದು ಭಾರತವನ್ನು ಇಡೀ ಪ್ರಪಂಚದಲ್ಲೇ ಒಂದು ಬತ್ತಿ ಹೋದ ಸ್ಥಳವನ್ನಾಗಿಸಿದೆ... ಮೃಗಜೀವನದ ಶಾಂತಿಗಾಗಿ ಆರ್ಥಿಕ ದಾರಿದ್ರ್ಯಕ್ಕೆ ಪ್ರಾಶಸ್ತ್ಯ ಕೊಡಬೇಕೇ ಹೇಗೆ ಎಂಬುದನ್ನು ಪ್ರತಿಯೊಬ್ಬನೂ ಆಲೋಚಿಸಬೇಕಾದ ಸಂಗತಿ' ಎಂದಿದ್ದಾರೆ.
'ರೂಪಾಯಿ ಸಮಸ್ಯೆ' ಕೃತಿಯಲ್ಲಿ ಭಾರತಕ್ಕೆ 'ಶುದ್ಧ ಸುವರ್ಣ ಪ್ರಮಿತಿ'ಯನ್ನು ಪ್ರತಿಪಾದಿಸುತ್ತಾರೆ. 'ಬ್ರಿಟಿಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ ವಿಕಾಸ' ಎಂಬ ಅಂಬೇಡ್ಕರ್ರವರ ಕೃತಿಯ ಮುನ್ನುಡಿಯಲ್ಲಿ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದ ಎಡ್ವಿನ್ ಆರ್.ಎ. ಸೆಲಿಗ್ಮನ್ ಅವರು 'ತಮ್ಮ ಸ್ವದೇಶದಲ್ಲಿ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ಪ್ರಸ್ತುತಗೊಳಿಸುವುದಲ್ಲದೆ ಪಕ್ಷಪಾತರಹಿತವಾಗಿ ವಿಶ್ಲೇಷಿಸುವುದರ ಮೂಲಕ ಅಂಬೇಡ್ಕರ್ ಒಳ್ಳೆಯ ಕೊಡುಗೆ ನೀಡಿರುತ್ತಾರೆ. ಬೇರೆ ದೇಶಗಳಿಗೂ ಅನ್ವಯವಾಗತಕ್ಕ ಈ ಸೂತ್ರಗಳು ಇಷ್ಟು ವಿವರವಾಗಿ ಇದುವರೆಗೆ ಎಲ್ಲೂ ಚರ್ಚಿತವಾದಂತೆ ನನಗೆ ಕಾಣುವುದಿಲ್ಲ' ಎಂದಿದ್ದಾರೆ. ಇಂಥ ಪ್ರಾಂತೀಯ ಹಾಗೂ ಕೇಂದ್ರಿಯ ಸರ್ಕಾರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ರಾಷ್ಟ್ರಕ್ಕೆ ಒಂದು ಸ್ವತಂತ್ರ ಕೇಂದ್ರ ಸರ್ಕಾರದ ರಚನೆ ಹಾಗೂ ದೇಶವಿಭಜನೆ ಪಾಕಿಸ್ತಾನದ ಬೇಡಿಕೆಯ ಸಂದರ್ಭದಲ್ಲೂ ಒಂದು ಪ್ರಮುಖ ಅಂಶವಾಗಿ ಅಂಬೇಡ್ಕರ್ ಆರ್ಥಿಕ ಸಂಗತಿಗಳನ್ನು ವಿಮರ್ಶೆಗೆ, ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಅಲ್ಲಿ ಅವರು ಅಂದಿನ ಪ್ರಾಂತಗಳ ಕರ ಸಂಗ್ರಹವನ್ನು ಕುರಿತು ಹೇಳುತ್ತಾ 'ಪಂಜಾಬು ತನಗಾಗಿ 11 ಕೋಟಿ ರೂಪಾಯಿಗಳ ವಾರ್ಷಿಕ ಕಂದಾಯ ಪಡೆದರೆ ಕೇಂದ್ರ ಸರ್ಕಾರಕ್ಕೆ ಕೇವಲ 1 ಕೋಟಿ ರೂಪಾಯಿಗಳನ್ನು ಕೊಡುತ್ತದೆ. ವಾಯವ್ಯ ಸರಹದ್ದು ಪ್ರಾಂತದ ವಾರ್ಷಿಕ ಕಂದಾಯ 1 ಕೋಟಿ 80 ಲಕ್ಷದ 83 ಸಾವಿರದ ಐದುನೂರಾ ನಲವತ್ತನಾಲ್ಕು ರೂಪಾಯಿಗಳು. ಆದರೆ ಅದು ಕೇಂದ್ರ ಸರ್ಕಾರಕ್ಕೆ ಕೊಡುವ ಕಂದಾಯದ ಮೊತ್ತ ಕೇವಲ 9, 28, 294 ರೂಪಾಯಿಗಳು...' ಎಂದು ವಿವಿಧ ಪ್ರಾಂತಗಳ ನಡುವಿನ ಆರ್ಥಿಕ ಹಂಚಿಕೆಯ ತಾರತಮ್ಯವನ್ನು ದಾಖಲಿಸಿ ಇದು ಮುಂದೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆಯಾಗಬಹುದೆಂದು 1940ರಲ್ಲೇ ಎಚ್ಚರಿಸುತ್ತಾರೆ.
ಅಂಬೇಡ್ಕರ್ ಅವರ ಯಾವುದೇ ಕೃತಿಯನ್ನು ಪರಿಶೀಲಿಸಿದಾಗಲೂ ಅವರ ಭಾರತವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ಸಂಗತಿಗಳು ನಮ್ಮ ಗಮನ ಸೆಳೆಯುತ್ತವೆ. ಜಾತಿ, ಅಸ್ಪೃಶ್ಯತೆಗಳಿಂದ ಹಿಡಿದು ತೆರಿಗೆ, ಕೇಂದ್ರ ಪ್ರಾಂತೀಯ ಸರ್ಕಾರಗಳ ಆರ್ಥಿಕ ನಿರ್ವಹಣೆ, ರಾಜಕೀಯ ಆಡಳಿತ, ಮತೀಯವಾದ ಪ್ರಾಂತಗಳು, ಕೋಮು ಗಲಭೆಗಳು, ಬ್ರಿಟಿಷ್ ಇಂಡಿಯಾ ಸೇರಿದಂತೆ ವೇದಕಾಲೀನ ಭಾರತದಿಂದ ಹಿಡಿದು ಸ್ವಾತಂತ್ರ್ಯೋತ್ತರ ಭಾರತದವರೆಗೆ ಭಾರತದ ಭೂತಕಾಲ, ವರ್ತಮಾನ ಕಾಲ ಹಾಗೂ ಭವಿಷ್ಯತ್ಕಾಲದ ಸಮಗ್ರ ಚಿತ್ರಣವನ್ನು ಹೊಂದಿದ್ದವರು ಅಂಬೇಡ್ಕರ್. ಸ್ಪೃಶ್ಯ - ಅಸ್ಪೃಶ್ಯರ ನಡುವಿನ ಭೇದ ಭಾವಗಳಾಗಲೀ , ಪ್ರಾಂತೀಯವಾದ ಭೇದ ಭಾವಗಳಾಗಲೀ, ಲಿಂಗಾಧಾರಿತ ಭೇದಭಾವಗಳಾಗಲೀ ಭಾರತದಲ್ಲಿ ಇರಬಾರದು. ಯಾವುದೇ ಭೇದ ಭಾವಗಳಿಲ್ಲದಂತ ರಾಷ್ಟ್ರೀಯ ಭಾವೈಕ್ಯತೆಯ ಆಧಾರದ ಮೇಲೆ ಸುಭದ್ರವಾದ ಸ್ವಾತಂತ್ರ್ಯ, ಸೋದರತ್ವ, ಸಮಾನತೆಯ ರಾಷ್ಟ್ರ ನಮ್ಮದಾಗಬೇಕೆಂಬುದು ಅಂಬೇಡ್ಕರ್ ಅವರ ಅಪೇಕ್ಷೆಯಾಗಿತ್ತು. 'ಸೈನಿಕ ಶಕ್ತಿ ಮತ್ತು ನೈತಿಕ ಶಕ್ತಿ ರಾಜಕೀಯ ಸ್ವಾತಂತ್ರ್ಯಕ್ಕೆ ಮುಖ್ಯ ಸಾಧನಗಳಾಗಿವೆ. ಮೊದಲಿನದನ್ನು ನಿರ್ಮಿಸಲಾಗದ ದೇಶ ಎರಡನೆಯದನ್ನು ಬೆಳೆಸಿಕೊಳ್ಳಬೇಕು. ಆದ್ದರಿಂದ ಇಂಡಿಯಾದಲ್ಲಿ ರಾಜಕೀಯ ಸಮಸ್ಯೆ ಸಂಪೂರ್ಣವಾಗಿ ಒಂದು ಸಾಮಾಜಿಕ ಸಮಸ್ಯೆಯಾಗಿದೆ ಮತ್ತು ಅದರ ಪರಿಹಾರವನ್ನು ಮುಂದೂಡುವುದು ತನ್ನ ಜನರ ಆಜ್ಞೆಗೆ ಅಧೀನವಾಗಿರುವ ಸ್ವತಂತ್ರ ಸರ್ಕಾರವನ್ನು ಇಂಡಿಯಾ ಹೊಂದಬಹುದಾದ ದಿನವನ್ನು ಮುಂದೂಡಿದಂತೆ' ಎಂದಿದ್ದಾರೆ.
ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ರಚಿಸಬೇಕೆಂಬ ಚರ್ಚೆ ದೇಶದಲ್ಲಿ ನಡೆಯುತ್ತಿರುವಾಗ 'ಹೀಗೆ ಆಗುವುದೇ ಆಗಿದ್ದರೆ, ಹೊಸ ಸಂವಿಧಾನದ ತಳಪಾಯವೂ ಹಾಕುವ ಮೊದಲೇ ಈ ರೀತಿ ಆಗಲು ಬಿಡುವುದು ಹೆಚ್ಚು ಸೂಕ್ತ' ಎನ್ನುತ್ತಾರೆ.
ಮತ್ತೊಂದೆಡೆ 'ಹಿಂದೂಗಳು ಒಟ್ಟಾಗುತ್ತಿದ್ದಾರೆ ಎಂಬುದೂ, ಐಕ್ಯಮತ್ಯದಿಂದ ಕೂಡಿ ಒಂದು ರಾಷ್ಟ್ರವಾಗುವಂತೆ ಅವರ ಮೇಲೆ ಚೇತನವೊಂದು ಪ್ರಭಾವ ಬೀರುತ್ತಿದೆ ಎಂಬುದೂ ನಿಜ. ಒಂದು ರಾಷ್ಟ್ರವಾಗಿ ಆಗುವ ಪ್ರಕ್ರಿಯೆಯಲ್ಲಿ ಅವರು ತೊಡಗಿದ್ದಾರೆ. ಆದರೆ ಆ ಪ್ರಕ್ರಿಯೆಯು ಪೂರ್ಣವಾಗುವ ಮೊದಲೇ ಅದಕ್ಕೆ ಹಿನ್ನೆಡೆಯುಂಟಾಗಬಹುದು. ಅಂತಹ ಹಿನ್ನೆಡೆಯು ಇಡೀ ಶತಮಾನದ ಶ್ರಮವನ್ನೇ ಹಾಳು ಮಾಡಬಹುದು' ಎಂಬ ಆತಂಕವನ್ನು ಅಂದೇ ವ್ಯಕ್ತಪಡಿಸಿದ್ದರು. ಅದು ಇಂದು ನಿಜವಾಗುತ್ತಿದೆ!
1945ರಲ್ಲಿ ಎರಡನೆಯ ಆವೃತ್ತಿಗೆ ಮುನ್ನುಡಿಯನ್ನು ಬರೆಯುವಾಗ 'ರಾಷ್ಟ್ರದ ಪ್ರಭುಶಕ್ತಿ ಮತ್ತು ರಾಷ್ಟ್ರದ ಒಳಗೆ ಇರುವ ರಾಷ್ಟ್ರವಿರೋಧಿ ರಾಷ್ಟ್ರೀಯತಾವಾದದ ಶಕ್ತಿಗಳ ನಡುವಣ ಸಂಘರ್ಷದ ಬಗ್ಗೆ ಐತಿಹಾಸಿಕ ಸಾಕ್ಷಿ ಸಂದಿಗ್ದವೆನಿಸದಿದ್ದರೂ ಅಸ್ಪಷ್ಟವಾಗಿದೆ ಎಂಬುದು ನಿಜ... ರಾಷ್ಟ್ರೀಯತಾ ವಾದವನ್ನು ಅರ್ಥಹೀನವಾಗಿ
ದಮನ ಮಾಡುವ ಕಾರ್ಯದಲ್ಲಿ ನಿರತವಾಗಿದ್ದ ಮತ್ತು ಆ ಪ್ರಯತ್ನದಲ್ಲಿ ತಾವೇ ಹಾಳಾಗಿ ಹೋದ ಪ್ರದೇಶಗಳ ಅನುಭವವನ್ನು ಹಿಂದಿನ ಆವೃತ್ತಿಯಲ್ಲಿ ಚಿತ್ರಿಸಿದ್ದೇನೆ. ತದ್ವಿರುದ್ಧವಾದ ಚಿತ್ರಗಳನ್ನು ತೋರಿಸುವ ಸಲುವಾಗಿ, ಜೊತೆಗೂಡಿ ಬಾಳಬೇಕೆಂಬ ಸಂಕಲ್ಪವಿದ್ದರೆ, ಪರಸ್ಪರ ವಿಭಿನ್ನ ಕೋಮುಗಳು ಹಾಗೂ ಪರಸ್ಪರ ವಿಭಿನ್ನ ರಾಷ್ಟ್ರೀಯತೆಗಳೂ ಕೂಡ ಒಂದು ರಾಷ್ಟ್ರದ ಮಡಿಲಲ್ಲಿ ಒಟ್ಟಾಗಿ ವಾಸಿಸುವುದು ಅಸಾಧ್ಯವೇನಲ್ಲಾ ಎಂಬುದನ್ನು ಸ್ಪಷ್ಟಪಡಿಸುವ ಕೆಲವು ದೇಶಗಳ ಅನುಭವವನ್ನು ಈ ಆವೃತ್ತಿಯಲ್ಲಿ ಪ್ರಸ್ತಾಪಿಸಿದ್ದೇನೆ' ಎಂದಿದ್ದಾರೆ. ಆದರೆ ಒಟ್ಟಾಗಿ "ಜೊತೆಗೂಡಿ ಬಾಳಬೇಕೆಂಬ ಸಂಕಲ್ಪ" ಸಾಧ್ಯವಾಗಲೇ ಇಲ್ಲ! ಸಬಲಗೊಳ್ಳಬೇಕಾಗಿದ್ದ ಭಾರತ ಭಯೋತ್ಪಾದನೆಯ ಕರಿನೆರಳಿನಲ್ಲಿ ಇಂದೂ ನರಳಬೇಕಾಗಿರುವುದು ಈ ಶತಮಾನದ ಶ್ರಮ ಹಾಳಾಗಿ ಹೋಗುತ್ತಿರುವುದರ ಸಂಕೇತ ಅಲ್ಲವೇ? ಭಾರತ ಬಲಶಾಲಿಯಾಗಬೇಕೆಂಬ ಅಂಬೇಡ್ಕರ್ ಆಶಯ ಈಡೇರಲಿ.
-ಡಾ. ಬಿ.ವಿ. ವಸಂತಕುಮಾರ್
ಪ್ರಾಧ್ಯಾಪಕರು
anisikeprabha@gmail.com