ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗಂಭೀರ ಚರ್ಚೆಗಳಿಗೂ ಅನಿವಾರ್ಯವಾಯಿತೇ ತಾರೆಯರ ಚಮಕ್?

Mainashree
Updated On : 29 Apr 2013, 9:30 am

ಬೋಸ್ಟನ್ ಬಾಂಬ್ ಸ್ಫೋಟ ಇಲ್ಲವೇ ಎಂಐಟಿಯಲ್ಲಿ ನಡೆದ ಶೂಟಿಂಗ್ ಪ್ರಕರಣಗಳ ನಂತರ ಅಲ್ಲಿನ ಟಿವಿ ವಾಹಿನಿಗಳ ವರದಿಯನ್ನು ಗಮನಿಸಿರುತ್ತೀರಲ್ಲ? ಲಿಂಡ್ಸೆ ಲೋಹಾನ್, ಬ್ರೂಸ್ ವಿಲ್ಲೀಸ್, ಆ್ಯಂಜಲಿನಾ ಜೋಲಿ, ಜೆನ್ನಿಫರ್ ಲೋಫೆಜ್ ಇಂಥ ತಾರಾ ವರ್ಚಸ್ಸಿನ ಗಣವೇನಾದರೂ ಬಂದು ಅಂತಾರಾಷ್ಟ್ರೀಯ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಶಂಕಿತನಿಗೆ ಮರಣದಂಡನೆ ಆಗಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗಿಳಿದಿರುವುದನ್ನು ಕಂಡಿರಾ? ಅಥವಾ ಅಂಥ ದಾಳಿಯನ್ನು ಹೇಗೆ ತಡೆಯಬಹುದಿತ್ತು ಎಂಬ ವಿಶ್ಲೇಷಣೆಯಲ್ಲೂ ಅವರು ಕಾಣಿಸಿಕೊಳ್ಳಲಿಲ್ಲ ಅಲ್ಲವೇ? ಏಕೆಂದರೆ ಅಮೆರಿಕದ ಪತ್ರಿಕೆಗಳು ಮತ್ತು ವಾಹಿನಿಗಳು ತಮ್ಮ ಪ್ಯಾನಲಿಸ್ಟ್‌ಗಳನ್ನು ಅವರ ವಿಷಯ ಪರಿಣತಿಯ ಹಿನ್ನೆಲೆಯಲ್ಲಿ ಆರಿಸುತ್ತಾರೆಯೇ ಹೊರತು ತಾರಾ ವರ್ಚಸ್ಸಿನ ಮಾನದಂಡದಿಂದ ಅಲ್ಲ.
ಇದೇ ಬೋಸ್ಟನ್ ಪ್ರಕರಣವನ್ನು ನಮ್ಮ ದೇಸಿ ಮಾಧ್ಯಮವೂ ಚರ್ಚೆಗೆ ಎತ್ತಿಕೊಂಡಿತ್ತು. ಬೋಸ್ಟನ್ ಪೊಲೀಸರು ಹೇಗೆ ತ್ವರಿತವಾಗಿ ಸ್ಪಂದಿಸಿದರು ಹಾಗೂ ಇಂಥದೇ ಪರಿಸ್ಥಿತಿಯಲ್ಲಿ ನಮ್ಮ ಪೊಲೀಸರಾದರೆ ಏನು ಮಾಡುತ್ತಿದ್ದರು ಎಂಬ ಬಗ್ಗೆ ಹೋಲಿಕೆಯ ಮಾತುಗಳನ್ನಾಡಲಾಯಿತು. ಬೋಸ್ಟನ್‌ನ ಸಾರ್ವಜನಿಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದರು ಹಾಗೂ ಭಾರತದ ಮಂದಿ ಇಂಥ ಸನ್ನಿವೇಶದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದರ ವಿಶ್ಲೇಷಣೆಗಳಾದವು. ಆದರೆ ಬೋಸ್ಟನ್ ಬಾಂಬ್ ಸ್ಫೋಟವನ್ನು ಅಮೆರಿಕದ ಮಾಧ್ಯಮ ಹೇಗೆ ವರದಿ ಮಾಡಿತು ಮತ್ತು ಅದನ್ನು ಭಾರತೀಯ ಮಾಧ್ಯಮ ನಿರ್ವಹಿಸುತ್ತಿದ್ದ ಬಗೆ ಹೇಗೆ ಎಂಬ ಹೋಲಿಕೆಯನ್ನು ಮಾತ್ರ ಮಾಡಲೇ ಇಲ್ಲ!
ಹಮಾರಾ ಭಾರತ ಮಹಾನ್‌ನ ಚಿತ್ರಣವನ್ನು ಪರಿಗಣಿಸೋಣ. ಇಲ್ಲಿ ಕಾನೂನು- ಸುವ್ಯವಸ್ಥೆಗೆ ಭಂಗ ಬಂದ ಸಂದರ್ಭದಲ್ಲಿ, ಮಕ್ಕಳ ಮೇಲೆ ಅತ್ಯಾಚಾರಗಳಾಗಿ ಅವುಗಳಿಗೆ ಚಿಕಿತ್ಸೆ ದೊರಕದಾದ ಸಂದರ್ಭಗಳಲ್ಲೆಲ್ಲ ಮಾಧ್ಯಮವು ಸಮರೋಪಾದಿಯಲ್ಲಿ ಕೆಲಸಕ್ಕೆ ಇಳಿಯುತ್ತದೆ. ತ್ವರಿತಗತಿಯಲ್ಲಿ ಅಭಿಪ್ರಾಯ ನಿರೂಪಕರ ಪ್ಯಾನಲ್ ಸಿದ್ಧವಾಗುತ್ತದೆ. ಪ್ರೈಮ್‌ಟೈಮ್‌ನಲ್ಲಿ ಮಾತಿನ ಮಳೆ, ಧ್ವನಿ ಏರಿಕೆಯ ಗುಡುಗು. ಈ ನಡುವೆ ಎಲ್ಲ ಟಿವಿ ಚಾನೆಲ್‌ಗಳು ಪಾಲಿಸಿಕೊಂಡು ಬಂದಿರುವ ಪದ್ಧತಿ ಎಂದರೆ ಅವುಗಳ ಪ್ಯಾನಲ್‌ನಲ್ಲಿ ಒಬ್ಬ ಸೆಲಿಬ್ರಿಟಿ ಆದರೂ ಇರಬೇಕು ಎಂಬ ಅಲಿಖಿತ ನಿಯಮ. ಏಕೆ ಎಂದು ಪ್ರಶ್ನೆ ಹಾಕಿಕೊಂಡರೆ, ಚರ್ಚಾಕೂಟದಲ್ಲಿ ಚೆಂದದ್ದೊಂದು ಮುಖವಿದ್ದರೆ ಆಹ್ಲಾದಕರವಾಗಿರುತ್ತದೆ ಎಂಬ ಉತ್ತರವಷ್ಟೇ ಸಿಗಬಹುದೇನೋ. ಅಪ್ರಸ್ತುತ ಮಂದಿ ಮತ್ತು ಅವರ ಹೇಳಿಕೆಗಳೇ ಚರ್ಚೆಯ ಗುಣಮಟ್ಟವನ್ನೂ ವಿಷಯ ಗಾಂಭೀರ್ಯವನ್ನೂ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬಂತಿದೆ ಇವರ ನಿಲವು.
ಟೈಮ್ಸ್‌ನೌ ವಾಹಿನಿಯಲ್ಲಿ 'ರೇಪಿಸ್ಟ್‌ಗಳಿಗೆ ಮರಣದಂಡನೆ ಕಡ್ಡಾಯಗೊಳಿಸಬೇಕೇ' ಎಂಬ ಕುರಿತು ಚರ್ಚೆ. ಅರ್ನಬ್ ಗೋಸ್ವಾಮಿಯವರ ಮುಂದೆ ಕುಳಿತ ಪರಿಣತ ಚರ್ಚಾಕೂಟದ ಸದಸ್ಯರುಗಳು ಯಾರೆಂದರೆ: ಕುಶ್ಬೂ- ನಟಿ ಮತ್ತು ಡಿಎಂಕೆ ಪ್ರತಿನಿಧಿ, ಪಿಂಕಿ ವಿರಾನಿ- ಸಾಮಾಜಿಕ ಕಾರ್ಯಕರ್ತೆ ಹಾಗೂ ನ್ಯಾಯವಾದಿ, ವೀಣಾಲಕ್ಷ್ಮಿ ನೆಪ್ರಮ್- ಸಾಮಾಜಿಕ ಕಾರ್ಯಕರ್ತೆ, ಕಾಲಿನ್ ಗಾನ್‌ಸಾಲ್ವೇಸ್- ನ್ಯಾಯವಾದಿ, ಮಾನವ ಹಕ್ಕು ಕಾರ್ಯಕರ್ತರು, ರಾಹುಲ್ ನಾರ್ವೇಕರ್- ಹಿರಿಯ ವಕೀಲ ಹಾಗೂ ಶಿವಸೇನೆ ವಕ್ತಾರ ಹಾಗೂ...... ರವೀನಾ ಟಂಡನ್- ನಟಿ, ಶಬಾನಾ ಆಜ್ಮಿ, ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಶಬಾನಾ ಆಜ್ಮಿ ಸಾಮಾಜಿಕ ಕಾರ್ಯಕರ್ತೆ ಆಗಿರುವುದರಿಂದ ಅವರ ಉಪಸ್ಥಿತಿ ಅರ್ಥವಾಗುತ್ತದೆ. ಆದರೆ ಈ ಚರ್ಚೆಯಲ್ಲಿ ರವೀನಾ ಟಂಡನ್ ಏಕಾಗಿತ್ತು? ಆಕೆ ಹೇಳಿದ್ದಾರೂ ಏನು? 'ನಂಗೆ ನ್ಯಾಯ ಬೇಕು. ನಾನು ಮರಣದಂಡನೆ ಪರವಾಗಿದ್ದೇನೆ. ಈ ಕಾಯ್ದೆಗಳು ಬಹಳ ಹಳೆಯವು ಎಂದಿನಿಸುತ್ತಿದೆ. ಇದು ಹೊಸ ಪೀಳಿಗೆ. ಅವರಿಗೆ ನ್ಯಾಯ ಬೇಕು.' ಬಿಡಿ. ಇಲ್ಲಿ ರವೀನಾ ಟಂಡನ್ ಅವರನ್ನು ದೂಷಿಸುವುದಕ್ಕೇನೂ ಇಲ್ಲ. ಆಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಷ್ಟೆ. ಆದರೆ ರವೀನಾ ಟಂಡನ್ ಅಲ್ಲಿರದಿದ್ದರೆ ಚರ್ಚೆ ಕಳೆದುಕೊಳ್ಲುತ್ತಿದ್ದದ್ದು ಏನು? ಏನಿಲ್ಲ ಎನ್ನಬಹುದು. ಹೋಗಲಿ, ಆಕೆ ತಾಯಿಯ ಸ್ಥಾನದಲ್ಲಿ ನಿಂತು ತನ್ನ ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ತೋಡಿಕೊಳ್ಳುವುದಕ್ಕೆ ಬಂದಿದ್ದರೇ? ರವೀನಾ ಟಂಡನ್ ಮಾತುಗಳನ್ನು ಕೇಳಿಸಿಕೊಂಡ ಯಾರಿಗೂ ಹಾಗೇನೂ ಅನ್ನಿಸುತ್ತಿರಲಿಲ್ಲ. ಟಿವಿಯಲ್ಲೂ ರವೀನಾರನ್ನು ಆ ಹಿನ್ನೆಲೆಯಲ್ಲಿ ಪರಿಚಯ ಮಾಡಿಕೊಡಲೂ ಇಲ್ಲ.
ಈ ಸೆಲಿಬ್ರಿಟಿ ಥಳುಕಿಗೆ ಇದೊಂದೇ ಚಾನೆಲ್ ಸಿಕ್ಕಿಕೊಂಡಿದೆ ಎಂದೇನಲ್ಲ. ಎನ್‌ಡಿಟಿವಿಯಲ್ಲಿ ಸೋನಿಯಾ ಸಿಂಗ್ ಕೂಡ ಇಂಥದೇ ಧಾಟಿಯ ಚರ್ಚೆ ನಡೆಸಿಕೊಡುತ್ತಿದ್ದರು. 'ಕಠಿಣ ಅತ್ಯಾಚಾರ ವಿರೋಧಿ ಕಾಯ್ದೆಗಳು ಪ್ರತಿಬಂಧಕ ಆಗಲಾರವೇ?' ಎಂಬುದು ಚರ್ಚೆಯ ವಿಷಯ. ಈ ಚರ್ಚೆಗೆ ಪ್ರಮುಖವಾಗಿ ಕೂರಿಸಿಕೊಂಡಿದ್ದೆಂದರೆ ಸ್ಥಳೀಯ ಕಾಯ್ದೆ ಪಂಡಿತ, ತಥಾಕಥಿತ ಸಾಮಾಜಿಕ ಕಾರ್ಯಕರ್ತ ರಾಹುಲ್ ಬೋಸ್ ಎಂಬ ಸೆಲಿಬ್ರಿಟಿಯನ್ನು. ಜತೆಯಲ್ಲಿ ಮಹಿಳಾ ಬಲವರ್ಧನೆ ಸ್ಥಾಯಿ ಸಮಿತಿಯ ಸದಸ್ಯರಾದ ಅನು ಅಘಾ, ಕಿರಣ್ ಬೇಡಿ, ನಜ್ಮಾ ಹೆಪ್ತುಲ್ಲಾ, ಪ್ರಭಾ ಠಾಕೂರ್ (ಮಹಿಳಾ ಬಲವರ್ಧನೆಯ ಸಂಸದೀಯ ಸಮಿತಿ ಸದಸ್ಯೆ) ಇದ್ದರು. ಇವರೆಲ್ಲರ ಹಿನ್ನೆಲೆಯಲ್ಲಿ ರಾಹುಲ್ ಬೋಸ್ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಿರುವ ಯಾವ ಅರ್ಹತೆ ಹೊಂದಿದ್ದಾರೆ ಎಂಬುದನ್ನು ವಿಮರ್ಶಿಸಿದೆ. ಅವರದ್ದೊಂದು ಫೌಂಡೇಶನ್ ಎಂಬ ಎನ್‌ಜಿಒ ಇದೆ. ಬಾಲ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೀಲ್ ಎಂಬ ಅಭಿಯಾನವೊಂದನ್ನು ಅದು ಆರಂಭಿಸಿದೆ. ರಾಹುಲ್ ಬೋಸ್ ಮಾತಿನಲ್ಲೇ ಕೇಳುವುದಾದರೆ ಅವರ ಆ ಕಾರ್ಯಕ್ರಮವು 'ಲೈಂಗಿಕ ಕಿರುಕುಳದ ಪ್ರಕರಣವನ್ನು ಸುತ್ತುವರೆದಿರುವ ಮಿಥ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರೊಂದಿಗೆ ಅದು ಸಂವಾದಕ್ಕೆ ತೊಡಗುತ್ತದೆ. ಅಂತೆಯೇ ಕಿರುಕುಳಕ್ಕೆ ಒಳಗಾದ ಮಕ್ಕಳು ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಸಹಾಯವನ್ನೂ ಮಾಡುತ್ತದೆ.' ಒಂದು ಒಳ್ಳೆಯ ಪ್ರಯತ್ನವೇ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ ಚರ್ಚೆಗೆ ಚೈಲ್ಡ್‌ಲೈನ್ ಸಂಘಟನೆಯ ಯಾರನ್ನಾದರೂ ಕರೆಯಬಹುದಿತ್ತು. ಅದು ದೇಶವ್ಯಾಪಿ ಹರಡಿಕೊಂಡಿರುವ ಜಾಲವಾಗಿದ್ದು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಅಭ್ಯುದಯದ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ದಶಕಗಳ ಕಾಲ ಸೇವೆಯ ಇತಿಹಾಸವಿರುವ ಇದರ ಅಹೋರಾತ್ರಿ ಚೈಲ್ಡ್‌ಲೈನ್‌ಗೆ ಯಾರೇ ಆದರೂ ಕರೆ ಮಾಡಬಹುದು.
ಬಹುಶಃ ಇಂಥ ಸಂಸ್ಥೆಗೆ ಅಭಿಪ್ರಾಯ ನಿರೂಪಣೆಗೆ ಜಾಗ ಸಿಕ್ಕದಿರುವುದಕ್ಕೆ ಆ ಸಂಘಟನೆಯಲ್ಲಿ ಥಳುಕು ಬಳುಕಿನ ಮುಖ ಹೊತ್ತವರು ಮತ್ತು ಪ್ರಸಿದ್ಧಿ ಪಡೆದಿರುವವರು ಇಲ್ಲದಿರುವುದೇ ಕಾರಣವೇನೋ? ಹೀಗಾಗಿಯೇ ನಾವು ಅವರ ಜಾಗದಲ್ಲಿ ರಾಹುಲ್ ಬೋಸ್ ಅಂಥವರನ್ನು ಓತಪ್ರೋತವಾಗಿ ಮಾತನಾಡುವುದಕ್ಕೆ ಬಿಡುತ್ತೇವೆ. ರಾಹುಲ್ ಬೋಸ್‌ರಿಗೆ ಈ ವಿಷಯದಲ್ಲಿ ಅನ್ನಿಸಿದ್ದೇನೆಂದರೆ 'ಇಲ್ಲೊಂದು ಸಂವೇದನೆ ಅಥವಾ ಜ್ಞಾನ ಏನೆಂದರೆ ಹನ್ನೆರಡು ವರ್ಷದೊಳಗಿನ ಮಗು ಕಾಣೆಯಾಗಿದೆ ಎಂದರೆ ನಿಮಗದು ಬಹಳ ಬಹಳ ಕಳವಳವನ್ನು ಉಂಟುಮಾಡಬೇಕು. ಏಕೆಂದರೆ ನಿಮಗೆ ಗೊತ್ತು, ಬಹುಶಃ ಆ ಮಗು ಕೋಣೆಯಲ್ಲಿ ಬಂಧಿತವಾಗಿದ್ದಿರಬಹುದು ಮತ್ತು ನನಗನ್ನಿಸುವುದೇನೆಂದರೆ ಅಂಥವು ಹಲವಿವೆ. ಕಳೆದ ವರ್ಷಕ್ಕೆ ಬದಲಾಗಿ ನಾವು ಈ ವರ್ಷವಷ್ಟೇ ಮಕ್ಕಳನ್ನು ಲೈಂಗಿಕ ಶೋಷಣೆಯ ವಿರುದ್ಧ ರಕ್ಷಿಸುವ ಕಾಯ್ದೆಯನ್ನು ರೂಪಿಸಿದ್ದೇವೆ. ಇದಕ್ಕೆ ದೆಹಲಿಯ ಮಹಿಳೆಯರು ಪುರುಷರಿಗೆ ಶ್ರೇಯಸ್ಸು ಲಭಿಸಬೇಕು. ಅತ್ಯಾಚಾರವು ಹುಟ್ಟುಹಾಕುವ ನಾಚಿಕೆ ಎತ್ತಿಹಾಕಲ್ಪಟ್ಟು ಅಲ್ಲೊಂದು ಗುರುತರವಾದ ಅಭಿಯಾನವೇ ರೂಪುಗೊಂಡಿದೆ ಹಾಗೂ ನಾವು ಅಂಥದೇ ಒಂದು ಸನ್ನಿವೇಶದಲ್ಲಿ ನಿಂತಿದ್ದೇವೆ ಮತ್ತು ನನಗನ್ನಿಸುವ ಹಾಗೆ ಸಮಾಜದ ಒಂದು ವರ್ಗ ಎಂದಿನಂತೆ ಈ ಬಗ್ಗೆ ಕುರುಡಾಗಿದೆ..'
ಅಂತೂ ಈ ರಾಹುಲ್ ಬೋಸ್ ನಿಜಕ್ಕೂ ಹೇಳಿದ್ದೇನು ಎಂದು ನಿಮ್ಮ ಗ್ರಹಿಕೆಗೆ ನಿಲುಕಿದ್ದೇ ಹೌದಾದರೆ ನಿಮಗೊಂದು ನಮಸ್ಕಾರ! ಮಾತಿನ ನಾನಾ ಕಡೆ 200 ಮಿಲಿಯನ್ ಮಕ್ಕಳು ಎಂದು ಎಲ್ಲೋ ಕೇಳಿದ ಅಂಕಿಸಂಖ್ಯೆಯನ್ನು ಉಲ್ಲೇಖಿಸುತ್ತಲೇ ಹೋದ ರಾಹುಲ್ ಬೋಸ್ ಕನಿಷ್ಠ ಮೂರು ಬಾರಿ 'ನನ್ನ ಫೌಂಡೇಷನ್‌' ಎಂದು ಟಾಂಟಾಂ ಮಾಡಿಕೊಂಡರು. ಅದಕ್ಕೆ ವಾಹಿನಿಯೂ ಸಾಕಷ್ಟು ಅವಕಾಶ ಮಾಡಿಕೊಟ್ಟಿತು. ಹೀಗಾಗಿ ಒಂದು ದುರಂತ ಇನ್ನೊಂದು ಎನ್‌ಜಿಒಗೆ ತನ್ನ ಪ್ರಚಾರ ಕಾರ್ಯಕ್ಕೆ ಮೆಟ್ಟಿಲಾದಂತಾಯಿತು.
ಇದು ಕೇವಲ ಚಾನೆಲ್‌ಗಳ ಕತೆಯಲ್ಲ. ಪತ್ರಿಕೆಗಳು ಈ ವಿಷಯದಲ್ಲಿ ಅಮಿತಾಭ್ ಬಚ್ಚನ್ ಹೇಳಿಕೆ ಪಡೆದುಕೊಂಡವು.
ಶಿಲ್ಪಾ ಶೆಟ್ಟಿ ಕನಲಿದಳು- 'ಪ್ರತಿಭಟನೆ ನಿರತ ಹುಡುಗಿಗೆ ಕಪಾಳಕ್ಕೆ ಕೊಟ್ಟ ದೆಹಲಿ ಪೊಲೀಸರು ಹೇಸಿಗೆ ತರಿಸಿದರು. ಎಲ್ಲಿಗೆ ಬಂದು ನಿಂತಿದೆ ನಮ್ಮ ದೇಶ? ಈ ದಯನೀಯತೆಗೆ ಕೊನೆ ಎಲ್ಲಿ? ತಪ್ಪು ಮಾಡಿದವರ ವಿರುದ್ಧ ಶೀಘ್ರವಾಗಿ ಕಠಿಣ ಕ್ರಮ ಜಾರಿಗೆ ಬರಬೇಕು. ಹೃದಯ ಕಲಕುತ್ತಿದೆ!'
ಕರಣ್ ಜೋಹರ್- 'ಐದು ವರ್ಷದ ಮಗುವಿನ ಅತ್ಯಾಚಾರದ ಸುದ್ದಿ ಕೇಳಿ ಶಬ್ದಗಳೇ ಹೊರಡದಷ್ಟು ಆಘಾತ ಮತ್ತು ಹೇವರಿಕೆ ಆಯಿತು. ಇದೇನು ಕಟಕರ ರಾಷ್ಟ್ರವಾಯಿತೇ? ನೈತಿಕತೆ ಎಂಬುದೇ ಇಲ್ಲವಾಯಿತೇ?'
ಘಟನೆಗೆ ಸಂಬಂಧವಿಲ್ಲದ, ಆ ಬಗ್ಗೆ ತೀರ ಯೋಚಿಸುವುದಕ್ಕೆ ಸಮಯವೂ ಇಲ್ಲದ ಸೆಲಿಬ್ರಿಟಿಗಳನ್ನು ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದು ಆ ಚರ್ಚೆಯ ಆಶಯವನ್ನೇ ಗೇಲಿ ಮಾಡಿದಂತೆ. ಅಥವಾ ಇದೊಂದು ಸಮಾನ ವೇದಿಕೆ ಎಂದೂ ಸಮರ್ಥಿಸಿಕೊಳ್ಳಬಹುದು. ದೇಶದ ನಟ-ನಟಿಯರು ಕಾನೂನು ನಿರ್ಮಾಣದ ಪ್ರಕ್ರಿಯೆಯಲ್ಲಿ ಪ್ರಮುಖರಾಗಿ ಅಭಿಪ್ರಾಯ ನಿರೂಪಿಸುವ ಅವಕಾಶವೊಂದು ತಮ್ಮಿಂದಲೇ ಒದಗಿದೆ ಎಂದು ಸಮಾನತೆ ಹರಿಕಾರರಂತೆ ಮಾಧ್ಯಮ ಎದೆತಟ್ಟಿಕೊಳ್ಳಬಹುದೇನೋ.
ನಾಳೆ ಪ್ರೈಮ್‌ಟೈಮ್‌ನಲ್ಲಿ ಕಲ್ಲಿದ್ದಲು ಹಂಚಿಕೆ ಹಗರಣ ಚರ್ಚಿಸುವುದಕ್ಕೆ ಅಕ್ಷಯ್ ಕುಮಾರ್ ಬರಬಹುದು. ಪಾಕಿಸ್ತಾನದ ಜತೆ ಬಾಂಧವ್ಯ ಅಭಿವೃದ್ಧಿ ಹೇಗೆಂಬ ಚರ್ಚೆಯಲ್ಲಿ ಸನ್ನಿ ಲಿಯೋನ್ ಪಾಲ್ಗೊಂಡಾಳು. ಇನ್ಯಾವ ಉದ್ದೇಶ ಸಾಧನೆಯಾಗುವುದೋ ಗೊತ್ತಿಲ್ಲ. ಕಣ್ಣಿಗಂತೂ ಹಬ್ಬ.
(www.newslaundry.com ನಲ್ಲಿ ಪ್ರಕಟಿತ ಲೇಖನ, ಲೇಖಕಿಯ ಅನುಮತಿ ಮೇರೆಗೆ)

- ರಾಜ್ಯಶ್ರೀ ಸೆನ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement