ಚುನಾಯಿತ ಪ್ರತಿನಿಧಿಗಳು ಒಮ್ಮೆ ವಿಧಾನ ಮಂಡಲ ಅಥವಾ ಸಂಸತ್ತಿಗೆ ಕಾಲಿಟ್ಟರೆಂದರೆ ನಂತರ ಅವರು ಜನರತ್ತ ತಿರುಗಿ ನೋಡುವುದಿಲ್ಲ ಎನ್ನುವ ವಿಷಯ ಈಗ ನಮ್ಮನ್ನು ಚಕಿತಗೊಳಿಸುವುದಿಲ್ಲ. ಅವರೊಂದಿಗೆ ಸಂಪರ್ಕ ಸಾಧಿಸುವುದೇ ಅಸಾಧ್ಯ. ಒಂದು ವೇಳೆ ನಾವು ಎದುರಿಸುತ್ತಿರುವ ತೊಂದರೆಗಳನ್ನು ಅಥವಾ ಸಲಹೆಗಳನ್ನೇನಾದರೂ ಅವರಿಗೆ ತಲುಪಿಸುವಲ್ಲಿ ಯಶಸ್ವಿಯಾದರೂ, ಅದೆಲ್ಲ ಕಸದಬುಟ್ಟಿ ಸೇರುವುದು ಖಚಿತ. ಅವರು ನೀಡುವ ದೊಡ್ಡ ದೊಡ್ಡ ಭರವಸೆಗಳೆಲ್ಲ ಪೇಪರ್‌ಗಳ ಮೇಲಷ್ಟೇ ಗರ್ಜಿಸುತ್ತವೆ. ಸಾಮಾನ್ಯ ಜನರು ಎದುರಿಸುವ ಸಮಸ್ಯೆಗಳ ಬಗ್ಗೆ ಸಂಸತ್ತು ಅಥವಾ ವಿಧಾನ ಸಭೆಗಳಲ್ಲಿ ಹೆಚ್ಚು ಚರ್ಚೆಯಾಗುವುದಿಲ್ಲ. ಬಹುತೇಕ ಬಾರಿ ಇವರೆಲ್ಲ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುವುದನ್ನು ನಾವು ನೋಡಿದ್ದೇವೆ. ಅವರ ಪಟ್ಟಿಯಲ್ಲಿ ಜನರಿಗೇನಿದ್ದರೂ ಕೊನೆಯ ಸ್ಥಾನ. ಹಾಗೆಂದು ಎಲ್ಲರೂ ಇದೇ ರೀತಿ ವರ್ತಿಸುತ್ತಾರೆ ಎನ್ನುವ ಹಾಗಿಲ್ಲ. ಆದರೆ ಬಹುತೇಕರು ಇರುವುದು ಹೀಗೆಯೇ. ಚುನಾವಣೆಯ ಸಮಯದಲ್ಲಿ ಮತದಾರರ ಮುಂದೆ ಕೈಯೊಡ್ಡಿ ನಿಂತು, ಚುನಾವಣೆ ಮುಗಿದ ನಂತರ ಮಾಯವಾಗುವವರ ಸಂಖ್ಯೆಯೇ ಅಧಿಕ.
ಇಂಥ ಕೊರಗಿಸುವ ಸಂದರ್ಭದಲ್ಲೂ, ಕೆಲವು ರಾಜಕಾರಣಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಅಂದರೆ ಜನರ ಸಮಸ್ಯೆಗಳನ್ನು ಕೊಂಡೊಯ್ದು ಸರ್ಕಾರದೆದುರು ಹರವಿಡುತ್ತಿದ್ದಾರೆ. ಅಂಥವರಲ್ಲೊಬ್ಬರು ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು. ಭಾರತದ ಸಂಸದೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಜನತೆಗೆ ಅವರು ಬಾಗಿಲು ತೆರೆದಿದ್ದಾರೆ. A.S.K(Ask.Seek.Know) ಎನ್ನುವ ಅಭಿಯಾನವನ್ನು ಆರಂಭಿಸಿರುವ ಅವರು ಜನತೆಯ ಪ್ರಶ್ನೆಗಳನ್ನು ಆಡಳಿತದಲ್ಲಿರುವವರ ಕಿವಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿವಾಸಿ ಕಲ್ಯಾಣ ಸಂಘಗಳು ಮತ್ತು ಎನ್‌ಜಿಒಗಳು ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಈ ಮೂಲಕ ಸರ್ಕಾರದ ವಿಚಾರಣೆ ನಡೆಸಬಹುದಾಗಿದೆ. ಜನತೆ ಕೇಳುವ ಪ್ರಶ್ನೆಯನ್ನು ಸಂಸತ್ತಿನಲ್ಲಿ ಚರ್ಚಿಸುವ ಮೂಲಕ ಸೂಕ್ತ ಉತ್ತರಗಳನ್ನು ಕಂಡುಕೊಳ್ಳುವುದಾಗಿ ರಾಜೀವ್ ಭರವಸೆ ನೀಡಿದ್ದಾರೆ. ಈ ಪ್ರಕ್ರಿಯೆ ತುಂಬಾ ಸರಳವಾಗಿದೆ: ನಿಮ್ಮ ಪ್ರಶ್ನೆಗಳನ್ನು ಅವರ ಈ-ಮೇಲ್ ಐಡಿ: rc@rajeev.in ಗೆ ಕಳುಹಿಸಬಹುದು ಅಥವಾ 'ASK, ರಾಜೀವ್ ಚಂದ್ರಶೇಖರ್, ಎಂಪಿ, 11ನೇ ಮಹಡಿ, ಸರ್. ಎಂ. ವಿಶ್ವೇಶ್ವರಯ್ಯ ಟವರ್ಸ್, ಡಾ. ಅಂಬೇಡ್ಕರ್ ಬೀದಿ, ಬೆಂಗಳೂರು-560001ಗೆ' ಪತ್ರ ಮೂಲಕ ಕಳುಹಿಸಬಹುದು.
ಕೆಲವು ವಾರಗಳ ಹಿಂದೆ ಶುರುವಾದ ಆಸ್ಕ್ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಸಿಕೆ, ಪಿಂಚಣಿ, ಜೆಎನ್‌ಎನ್‌ಯುಆರ್‌ಎಂ ನಂಥ ಬಾಕಿ ಉಳಿದಿರುವ ಯೋಜನೆಗಳು, ಪವರ್ ಪ್ರಾಜೆಕ್ಟ್‌ಗಳು, ಖಾಸಗಿ ಕಾಲೇಜುಗಳಲ್ಲಿ ಮೆಡಿಕಲ್ ಸೀಟುಗಳು, ಮೆಟ್ರೋ ರೈಲು, ವಿಮಾನ ಪ್ರಯಾಣ ದರ, ಅಂತರ್ಜಾಲದ ಸ್ವಾತಂತ್ರ್ಯ, ಆಹಾರ ಭದ್ರತೆ, ಮಾಹಿತಿ ಹಕ್ಕು ಕಾಯ್ದೆ....ಹೀಗೆ ಅನೇಕ ವಿಷಯಗಳ ಬಗ್ಗೆ ಜನರು ತಮ್ಮ ದೂರು ಅಥವಾ ಪ್ರಶ್ನೆಗಳನ್ನು ರಾಜೀವ್‌ರಿಗೆ ತಲುಪಿಸಿದ್ದಾರೆ. ಪ್ರಜಾಪ್ರಭುತ್ವದ ಅತಿದೊಡ್ಡ ವೇದಿಕೆಗೆ ಜನರ ಸಮಸ್ಯೆಗಳನ್ನು ಕೊಂಡೊಯ್ಯುತ್ತಿರುವ ರಾಜೀವ್‌ರ ಈ ನಡೆಗೆ ಸಾಮಾಜಿಕ ಮಾಧ್ಯಮಗಳಿಂದ ಬಹಳ ಮೆಚ್ಚುಗೆ ವ್ಯಕ್ತವಾಗತೊಡಗಿದೆ.
ಇನ್ನು ಬೆಂಗಳೂರಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜೀವ್ ಚಂದ್ರಶೇಖರ್ ಮೊದಲಿನಿಂದಲೂ ಶ್ರಮಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಗಳಿಗೂ ಮುನ್ನ ಅವರು 'ಉತ್ತಮ ಬೆಂಗಳೂರಿಗಾಗಿ ಜವಾಬ್ದಾರಿಯುತವಾಗಿ ಮತ ನೀಡಿ' ಎನ್ನುವ ಬೃಹತ್ ಅಭಿಯಾನವನ್ನು ಆರಂಭಿಸಿ ಮತದಾನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮತನೀಡುವುದಷ್ಟೇ ಮುಖ್ಯವಲ್ಲ, ಸರಿಯಾದ ಅಭ್ಯರ್ಥಿಯನ್ನು ಆರಿಸುವುದು ಅದಕ್ಕಿಂತ ಮುಖ್ಯ ಎಂದು ಸಾರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು. ನಿವಾಸಿ ಕಲ್ಯಾಣ ಸಂಘಗಳು, ಎನ್‌ಜಿಒಗಳು, ನಾಗರಿಕ ಸಂಘಗಳನ್ನೊಳಗೊಂಡ ತಂಡವೊಂದು ಅಭ್ಯರ್ಥಿಗಳೆದುರಿಡಲು ಹಲವು ಪ್ರಶ್ನೆಗಳ ಪಟ್ಟಿಯನ್ನು ತಯಾರು ಮಾಡಿತು. ಆ ಮೂಲಕ ಅಭ್ಯರ್ಥಿಗಳಿಗೆ ಕೇಳಲಾದ ಪ್ರಶ್ನೆಗಳು...
ಈ ಸಮಸ್ಯೆಗಳ ಬಗ್ಗೆ ನಿಮ್ಮ ನಿಲುವೇನು ಮತ್ತು ಇದನ್ನು ಪರಿಹರಿಸಲು ಯಾವ ಕ್ರಮ ಅನುಸರಿಸುತ್ತೀರಿ: ಸಾರ್ವಜನಿಕ ಜಾಗಗಳ ನೋಟಿಫಿಕೇಷನ್ ಮತ್ತು ಡೀನೋಟಿಫಿಕೇಷನ್, ಪಾರ್ಕ್ ಮತ್ತು ಕೆರೆಗಳ ಒತ್ತುವರಿ, ಕಾಂಟ್ರಾಕ್ಟರ್‌ಗಳು ಸಾರ್ವಜನಿಕ ಹಣವನ್ನು ಪೋಲು ಮಾಡಿ ಅನವಶ್ಯಕ ಮತ್ತು ಅರ್ಥಹೀನ ಯೋಜನೆಗಳನ್ನು ಹೇರುತ್ತಿರುವುದು, ನಗರದ ಹಲವಾರು ಯೋಜನೆಗಳ ಗುತ್ತಿಗೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸ್ವಹಿತಾಸಕ್ತಿಗಾಗಿ ರಿಯಲ್ ಎಸ್ಟೇಟ್‌ನಿಂದ ಕಾಂಟ್ರಾಕ್ಟರ್‌ಗಳಾದವರು, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ಅಭಿವೃದ್ಧಿ, ಕಸದ ಸಮಸ್ಯೆ.
ಇದನ್ನು ನೀವು ಬೆಂಬಲಿಸಿ, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೀರಾ?: ನಗರದ ಯೋಜನೆ ಮತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವಾಗುವ ಯೋಜನೆಗಳ ಅನುಷ್ಠಾನ, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಉತ್ತಮ ಸಾರ್ವಜನಿಕ ಸೌಲಭ್ಯಗಳು. ಈ ಪ್ರಶ್ನೆಗಳಿಗೆ ಗುಣಾತ್ಮಕ ಮತ್ತು ಸೂಕ್ತ ಉತ್ತರಗಳನ್ನು ನೀಡುವವರಿಗೆ ಮಾತ್ರ ಜನತೆಯ ಮತ ದೊರಕಲಿದೆ ಎಂದು ಅಭ್ಯರ್ಥಿಗಳಿಗೆ ಹೇಳಲಾಯಿತು. ಪರಿಣಾಮವಾಗಿ, ಬೆಂಗಳೂರು ರಾಜ್ಯದ ಇತರಭಾಗಗಳಿಗಿಂತ ಭಿನ್ನವಾಗಿ ಮತದಾನ ಮಾಡಿತು. ಬೆಂಗಳೂರಿಗರು ಪಕ್ಷದ ಮುಖ ನೋಡದೆ, ಅಭ್ಯರ್ಥಿಗಳ ಸಾಮರ್ಥ್ಯ ನೋಡಿ ಮತ ಹಾಕಿದರು. ಇನ್ನು ಮತದಾನದ ಪ್ರಮಾಣ ಕೂಡ ಹೆಚ್ಚಾಯಿತು.
ಈ ಅಭಿಯಾನ ಇಲ್ಲಿಗೇ ಕೊನೆಗೊಳ್ಳಲಿಲ್ಲ. ಚುನಾವಣೆಗಳು ಮುಗಿದ ನಂತರ ನಿವಾಸಿ ಕಲ್ಯಾಣ ಸಂಘಗಳು, ನಾಗರಿಕ ಗುಂಪುಗಳು, ಎನ್‌ಜಿಒಗಳು 'ನಮ್ಮ ಬೆಂಗಳೂರು ಫೌಂಡೇಷನ್' ಅಡಿಯಲ್ಲಿ, ಹೊಸತಾಗಿ ಆಯ್ಕೆಯಾದ ಬೆಂಗಳೂರಿನ ಶಾಸಕರನ್ನು ಒಂದೇ ವೇದಿಕೆಯಲ್ಲಿ ಕರೆತಂದವು. ತಾವು ಮತ್ತು ನಗರ ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಯಿತು. ಇನ್ನು ಶಾಸಕರು ಮಾಡುವ ಪ್ರತಿಯೊಂದು ಕಾರ್ಯವನ್ನೂ ತಾವು ಗಮನವಿಟ್ಟು ನೋಡುವುದಾಗಿ ಅವುಗಳು ಹೇಳಿದವು. ನಾಗರಿಕ ಕೇಂದ್ರಿತ ಆಡಳಿತದ್ದ ಇದನ್ನೊಂದು ಬೃಹತ್ ಹೆಜ್ಜೆಯೆಂದೇ ಹೇಳಬಹುದು. ಒಂದು ವೇಳೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ರಾಜೀವ್ ಚಂದ್ರಶೇಖರ್‌ರಂತೆ, ಜನತೆಗಾಗಿ ದುಡಿಯುವುದನ್ನು ಕಲಿತರೆ, ಈ ದೇಶದ ಚಹರೆಯೇ ಬದಲಾಗುತ್ತದೆ. ಅಲ್ಲವೇ?
ಕೊನೆಯ ಗುಟುಕು: ಫೇಸ್‌ಬುಕ್‌ನಲ್ಲಿ ಕಂಡ ಒಂದು ಜೋಕ್. ಇದನ್ನು ಸೀರಿಯಸ್ ಆಗಿ ಮಾತ್ರ ತೆಗೆದುಕೊಳ್ಳಬಾರದು!
- ಬುದ್ಧಿವಂತ ವಿದ್ಯಾರ್ಥಿ ಪರೀಕ್ಷೆಗಳಲ್ಲಿ ಫಸ್ಟ್ ಕ್ಲಾಸ್ ಪಡೆದು ಡಾಕ್ಟರ್ ಅಥವಾ ಇಂಜಿನಿಯರ್ ಆಗುತ್ತಾನೆ!
- ಸೆಕೆಂಡ್ ಕ್ಲಾಸ್‌ನಲ್ಲಿ ತೇರ್ಗಡೆಯಾದವನು ಎಂಬಿಎ ಅಥವಾ ಕಾನೂನು ಪದವೀಧರನಾಗಿ ಫಸ್ಟ್ ಕ್ಲಾಸ್ ಪಡೆದವನನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೆ.
- ಥರ್ಡ್ ಕ್ಲಾಸ್ ಪಡೆದವನು ರಾಜಕೀಯಕ್ಕೆ ಸೇರಿ ಮೊದಲು ಎರಡೂ ವರ್ಗವನ್ನು ಆಳುತ್ತಾನೆ. - ಫೇಲ್ ಆದವನು ಅಂಡರ್ವಲ್ಡ್ ಸೇರಿ, ರಾಜಕಾರಣಿಗಳನ್ನು ಮತ್ತು ಉದ್ಯಮಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾನೆ.
- ಇನ್ನು ಶಾಲೆಗೆ ಹೋಗದವನು ಸ್ವಾಮೀಜಿಯಾಗುತ್ತಾನೆ. ಉಳಿದವರೆಲ್ಲರೂ ಆತನ ಆಜ್ಞೆ ಪಾಲಿಸುತ್ತಾರೆ!
- ಎಚ್.ಎಸ್. ಬಲರಾಮ್
hsbalram@gmail.com