ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗುಜರಾತ್ ಲೋಕಾಯುಕ್ತರ ನೇಮಕಾತಿಯಲ್ಲಿ ರಾಜ್ಯಪಾಲರ ರಾಜಕೀಯ!

ಆಯ್ಕೆ ಪ್ರಕ್ರಿಯೆಯೇ ಇಷ್ಟೊಂದು ಕಲುಷಿತವಾದ ಮೇಲೆ ನೇಮಕಾತಿಯ ಸಮರ್ಥನೆ ಸರಿಯೇ?

ಕಮಲಾ ಬೆನಿವಾಲ್, ಜಸ್ಟಿಸ್ ಮೆಹ್ತಾ
Mainashree
Updated On : 9 Aug 2013, 12:34 pm

ಆಯ್ಕೆ ಪ್ರಕ್ರಿಯೆಯೇ ಇಷ್ಟೊಂದು ಕಲುಷಿತವಾದ ಮೇಲೆ ನೇಮಕಾತಿಯ ಸಮರ್ಥನೆ ಸರಿಯೇ? ಈಗ ಗುಜರಾತ್ ಸರ್ಕಾರದ ಮೇಲೆ ಮುರಿದುಕೊಂಡು ಬೀಳುತ್ತಿರುವ ಮೆಹ್ತಾ, ಮೊದಲೇ ಈ ಸಮಸ್ಯೆಯ ಬಗ್ಗೆ ಏಕೆ ಯೋಚಿಸಲಿಲ್ಲ?

ಗುಜರಾತ್ ಸರ್ಕಾರದ ಒರಟು ವರ್ತನೆಯಿಂದಾಗಿ ಆ ರಾಜ್ಯದ ರಾಜ್ಯಪಾಲರು ನೇಮಕ ಮಾಡಿದ ಲೋಕಾಯುಕ್ತ ಜಸ್ಟಿಸ್ ಆರ್‌ಎ ಮೆಹ್ತಾ ಅವರು ಈ ವಾರ ರಾಜಿನಾಮೆ ನೀಡಬೇಕಾಯಿತು. ಭ್ರಷ್ಟಾಚಾರದಿಂದ ಮುಕ್ತನಾಗಿದ್ದೇನೆ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ಪ್ರಾಮಾಣಿಕ ಲೋಕಾಯುಕ್ತರಿಂದ ಏನು ಹಾನಿ ಆಗುತ್ತಿತ್ತು? ಇಬ್ಬರೂ ಸೇರಿ ಅಳಿದುಳಿದ ಭ್ರಷ್ಟತೆಯ ವಿರುದ್ಧ ಹೋರಾಡಬಹುದಿತ್ತಲ್ಲವೇ?
ಆದರೆ ಒಂದು ವಿಷಯ- 'ಜಸ್ಟಿಸ್ ಮೆಹತಾ ಅವರು ಬಿಜೆಪಿ ವಿರೋಧಿಯಾಗಿದ್ದಾರೆ, ಅವರು ಪಕ್ಷಪಾತ ಮಾಡುತ್ತಾರೆ' ಎಂದು ಗುಜರಾತ್ ಸರ್ಕಾರ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಆದರೆ ಮೆಹ್ತಾ ಈ ಆರೋಪವನ್ನು ತಮ್ಮ ರಾಜಿನಾಮೆ ಪತ್ರದಲ್ಲಿ ಅಲ್ಲಗಳೆದಿದ್ದಾರೆ. ಅವರು ಬರೆಯುತ್ತಾರೆ-
'ಪ್ರಸಕ್ತ ವಿವಾದದಿಂದಾಗಿ ಲೋಕಾಯುಕ್ತ ಕಚೇರಿಗೆ ಕಳಂಕ ಅಂಟಿದೆ. ಇದರಿಂದಾಗಿ ಅದರ ವಿಶ್ವಾಸಾರ್ಹತೆಯ ಮೇಲೆ ಪ್ರತೀಕೂಲ ಪರಿಣಾಮಗಳಾಗಿವೆ. ಒಬ್ಬ ವ್ಯಕ್ತಿ ಸರ್ಕಾರದ ಪರವಿಲ್ಲದಿದ್ದರೆ ಆತನನ್ನು 'ಸರ್ಕಾರದ ವಿರೋಧಿ' ಎಂದು ಕೆಲವರು ಭಾವಿಸುತ್ತಾರೆ. ಆದರೆಕೇವಲ ಪರ-ವಿರೋಧ ಎಂದಷ್ಟೇ ಅಲ್ಲದೆ ಇನ್ನೊಂದು ವರ್ಗವೂ ಇದೆ ಎನ್ನುವುದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಅದು ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ವರ್ಗ"
ಮೆಹ್ತಾ ಹೇಳುವುದೇನೋ ಸರಿಯಾಗಿದೆ. ಆದರೆ ಅವರು ಈ ವಿವಾದಕ್ಕೆ ಮೂಲ ಪುರುಷರಾದ ಕೆಲವು ದೊಡ್ಡ ವಿಲನ್‌ಗಳ ಬಗ್ಗೆ ಮಾತ್ರ ಮಾತಾಡುತ್ತಿಲ್ಲ. ತಾವು ಹುದ್ದೆಯಿಂದ ಇಳಿದದ್ದು ಹೇಗೆ ಎಂದು ಹೇಳುತ್ತಿರುವ ಮೆಹ್ತಾ, ಆ ಹುದ್ದೆಗೆ ತಮ್ಮ ಆಯ್ಕೆ ಹೇಗೆ ನಡೆಯಿತು ಎನ್ನುವುದರ ಬಗ್ಗೆ ಏಕೆ ಹೇಳುತ್ತಿಲ್ಲ?
ಜಸ್ಟಿಸ್ ಮೆಹ್ತಾ ಅವರು ತಮ್ಮ ಸ್ಥಾನದಿಂದ ಕೆಳಕ್ಕಿಳಿಯುವುದಕ್ಕೆ(ವಿವಾದದಿಂದ) ಪರೋಕ್ಷವಾಗಿ ದೂಷಿಸಬೇಕಾದದ್ದು ಅವರ ನೇಮಕಾತಿ ಪ್ರಕ್ರಿಯೆಗೆ ಮತ್ತು ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿದ ಕಾಂಗ್ರೆಸ್ ನೇಮಿತ ರಾಜ್ಯಪಾಲರಾದ ಕಮಲಾ ಬೆನಿವಾಲ್ ಅವರಿಗೆ. ಮೆಹ್ತಾ ಅವರ ಆಯ್ಕೆಯ ಬಗ್ಗೆ ಮುಖ್ಯಮಂತ್ರಿ(ಮೋದಿ)ಗೆ ಮಾತನಾಡುವ ಅವಕಾಶವನ್ನೇ ಇವರುಗಳು ಕೊಡಲಿಲ್ಲ. ಮುಖ್ಯಮಂತ್ರಿಯಾದವನು ತನ್ನ ಗುಲಾಮನನ್ನು ಲೋಕಾಯುಕ್ತ ಸ್ಥಾನಕ್ಕೆ ತಂದು ಕೂರಿಸಬಾರದು ಎಂದು ಇವರೆಲ್ಲ ಹೇಳುತ್ತಾರೆ. ಆದರೆ ಅದೇ ಮುಖ್ಯಮಂತ್ರಿಗೆ ಇವರು ಲೋಕಾಯುಕ್ತರ ನೇಮಕಾತಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಕ್ಕೂ ಅವಕಾಶ ಮಾಡಿಕೊಡಲಿಲ್ಲ!
ಗುಜರಾತ್‌ನಲ್ಲಿನ ಲೋಕಾಯುಕ್ತರ ನೇಮಕಾತಿಯ ಇತಿಹಾಸ ಈ ರೀತಿಯಲ್ಲಿದೆ: 2003ರಲ್ಲಿ ಲೋಕಾಯುಕ್ತರೊಬ್ಬರು ನಿವೃತ್ತರಾದಾಗ, ಆ ನಂತರದ ಮೂರು ವರ್ಷಗಳವರೆಗೆ ಏನೂ ನಡೆಯಲಿಲ್ಲ. 2006ರಲ್ಲಿ ನರೇಂದ್ರ ಮೋದಿ ಮತ್ತು ಗುಜರಾತ್ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಾಧೀಶರು ಲೋಕಾಯುಕ್ತ ಸ್ಥಾನಕ್ಕಾಗಿ ಕೆ.ಆರ್.ವ್ಯಾಸ್ ಅವರೇ ಸೂಕ್ತ ವ್ಯಕ್ತಿ ಎಂದು ಒಮ್ಮತಕ್ಕೆ ಬಂದರು. ಈ ಸಮಯದಲ್ಲೇ ಕಾಂಗ್ರೆಸ್ ನೇಮಿತ ರಾಜ್ಯಪಾಲ ನವಲ್ ಕಿಶೋರ್ ಕುಮಾರ್ ತಮ್ಮ ಕಳ್ಳಾಟವನ್ನು ಶುರುವಿಟ್ಟುಕೊಂಡರು. ಲೋಕಾಯುಕ್ತ ಸ್ಥಾನಕ್ಕೆ ನರೇಂದ್ರ ಮೋದಿ ಕೆ.ಆರ್. ವ್ಯಾಸ್ ಅವರ ಹೆಸರು ಸೂಚಿಸಿದರೂ ಕೂಡ ಯಾವ ನಿರ್ಧಾರಕ್ಕೂ ಬರದೆ ಒಂದು ವರ್ಷದವರೆಗೆ ಸಮಯ ತಳ್ಳುತ್ತಾ ಹೋದರು. ಈ ಸಮಯದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್, ಕೆ.ಆರ್. ವ್ಯಾಸ್ ಅವರಿಗೆ 'ಮಹಾರಾಷ್ಟ್ರ ಮಾನವ ಹಕ್ಕು ಸಮಿತಿಯ' ಅಧ್ಯಕ್ಷರಾಗಲು ಒಪ್ಪಿಸಿತು. ಇದಕ್ಕಾಗಿ ಕಾಯುತ್ತಿದ್ದ  ನವಲ್ ಕಿಶೋರ್, ಎರಡು ವರ್ಷದ ನಂತರ ಸರ್ಕಾರಕ್ಕೆ  'ವ್ಯಾಸ್ ಬೇರೇ ಹುದ್ದೆಯಲ್ಲಿದ್ದಾರೆ. ಹಾಗಾಗಿ ಲೋಕಾಯುಕ್ತ ಹುದ್ದೆಗೆ ಅವರ ಹೆಸರು ಸೂಕ್ತವಲ್ಲ' ಎಂದು ಪ್ರಸ್ತಾಪನೆಯ ಫೈಲನ್ನು ವಾಪಸ್ ಕಳುಹಿಸಿದರು! ಇನ್ನು 2009ರಲ್ಲಿ ಗುಜರಾತ್‌ನ ರಾಜ್ಯಪಾಲರಾಗಿ ನೇಮಕವಾದ ಕಮಲಾ ಬೆನಿವಾಲ್ ಕೂಡ ಇಂಥದ್ದೇ ಕೆಟ್ಟ ರಾಜಕೀಯಕ್ಕಿಳಿದರು. ಲೋಕಾಯುಕ್ತ ಹುದ್ದೆಗಾಗಿ ಅರ್ಹ ವ್ಯಕ್ತಿಗಳ ಹೆಸರನ್ನು ಸೂಚಿಸುವಂತೆ ಬೆನಿವಾಲ್  ಅವರು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದರು. ಆದರೆ ಹೀಗೆ ಕೇಳುವ ಅಧಿಕಾರ ಆಕೆಗಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಆಗ ನರೇಂದ್ರ ಮೋದಿ, ಲೋಕಾಯುಕ್ತ ಸ್ಥಾನಕ್ಕಾಗಿ ನಾಲ್ಕು ಹೆಸರುಗಳನ್ನು ಕಳುಹಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಕೇಳಿದರು. ಅವರ ಮನವಿಯಂತೆಯೇ  ಜಸ್ಟಿಸ್ ಮುಖ್ಯೋಪಾಧ್ಯಾಯ ಅವರು ನಾಲ್ಕು ಹೆಸರುಗಳನ್ನು ಸೂಚಿಸಿದರು. ಆಯ್ಕೆ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳೂ ಭಾಗವಹಿಸಬೇಕು ಎಂದು ಮೋದಿ ಪ್ರಯತ್ನಿಸಿದರಾದರೂ, ವಿರೋಧ ಪಕ್ಷದ ನಾಯಕರೆಲ್ಲ, 'ರಾಜ್ಯಪಾಲರು ಈ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿ ಕೈತೊಳೆದುಕೊಂಡರು. ನಂತರ ಗುಜರಾತ್ ಕ್ಯಾಬಿನೆಟ್ ಜೆ.ಆರ್.ವೋರಾರ ಹೆಸರಿಗೆ ಸಮ್ಮತಿ ನೀಡಿತು. ಆದರೆ ಬೆನಿವಾಲ್ ಸುಮ್ಮನೇ ಕೂಡಲಿಲ್ಲ. ಹೈಕೋರ್ಟ್‌ನ ಮುಖ್ಯ ನಾಯಾಧೀಶರಿಗೆ ಮತ್ತೆ ಮನವಿ ಸಲ್ಲಿಸಿದ ಅವರು, ಆರ್‌ಪಿ. ಢೋಲಾಕಿಯಾ ಮತ್ತು ಜೆ.ಆರ್. ವೋರಾರ ಮಧ್ಯೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಬೇಕೆಂದು ಕೇಳಿಕೊಂಡರು. ಆಗ ಮುಖ್ಯ ನಾಯಾಧೀಶರು ಜಸ್ಟಿಸ್ ಢೋಲಾಕಿಯಾ ಅವರ ಹೆಸರನ್ನು ಸೂಚಿಸಿದರು. ಆದರೆ ಅವರ ಹೆಸರನ್ನು ಬೆನಿವಾಲ್ ಅಂಗೀಕರಿಸಲಿಲ್ಲ!
ಡಿಸೆಂಬರ್ 2010ರಲ್ಲಿ ಬೆನಿವಾಲ್ ಅವರ ಇನ್ನೊಂದು ಮನವಿ ಪತ್ರದ ಮೇರೆಗೆ ಜಸ್ಟಿಸ್ ಎಸ್‌ಡಿ ದಾವೆ ಎನ್ನುವವರ ಹೆಸರನ್ನು ಮುಖ್ಯ ನಾಯಾಧೀಶರು ಸೂಚಿಸಿದರು. ಅದಾದ ಎರಡು ತಿಂಗಳ ನಂತರ ಮುಖ್ಯ ನಾಯಾಧೀಶರಿಗೆ ಪತ್ರ ಬರೆದ ಮೋದಿಯವರು 'ಲೋಕಾಯುಕ್ತ ಸ್ಥಾನಕ್ಕೆ ವೋರಾ ಅವರನ್ನು ನೇಮಿಸಲು ಒಪ್ಪಿಗೆ ನೀಡಬೇಕು. ಅವರು ಹುದ್ದೆ ಸ್ವೀಕರಿಸಲು ಸಿದ್ಧರಿದ್ದಾರೆ' ಎಂದು ಕೇಳಿಕೊಂಡರು. ಆದರೆ ಮುಖ್ಯ ನ್ಯಾಯಾಧೀಶರು ತಮ್ಮ ಆಯ್ಕೆಯಾಗಿ ಜಸ್ಟಿಸ್ ಆರ್.ಎ. ಮೆಹ್ತಾ ಅವರ ಹೆಸರನ್ನು ಸೂಚಿಸಿದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಬೆನಿವಾಲ್ ಅವರು ಸಕ್ರಿಯರಾಗಿಬಿಟ್ಟರು. ರಾಜ್ಯ ಕ್ಯಾಬಿನೆಟ್‌ನ ಗಮನಕ್ಕೂ ತರದೆ ಮೆಹ್ತಾರನ್ನು ಲೋಕಾಯುಕ್ತರನ್ನಾಗಿ ನೇಮಿಸಿದರು!
ಇಡೀ ಪ್ರಸಂಗದಲ್ಲಿ ಮೂರು ವಿಷಯಗಳು ನಮಗೆ ಸ್ಪಷ್ಟವಾಗುತ್ತವೆ.
ಮೊದಲನೆಯದಾಗಿ, ಜಸ್ಟಿಸ್ ಆರ್.ಎ.ಮೆಹ್ತಾ ಅವರ ನೇಮಕಾತಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಅವಕಾಶ ಸಿಗಲಿಲ್ಲ.
ಎರಡನೆಯದಾಗಿ, ಲೋಕಾಯುಕ್ತರನ್ನು ನೇಮಕ ಮಾಡಿದ್ದು ಕೇವಲ ಮೂರು ಜನ. ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ರಾಜ್ಯಪಾಲರು ಮತ್ತು ವಿರೋಧ ಪಕ್ಷದ ನಾಯಕ. ಮುಖ್ಯಮಂತ್ರಿಯ ನಿರ್ಧಾರ ಕೇಳುವ ಗೋಜಿಗೇ ಈ ಮೂವರು ಹೋಗಲಿಲ್ಲ!
ಮೂರನೆಯದಾಗಿ, ಚುನಾಯಿತ ಸರ್ಕಾರವನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಟ್ಟು ರಾಜ್ಯಪಾಲರು ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಲೋಕಾಯುಕ್ತ, ಗುಜರಾತ್ ಶಾಸಕಾಂಗದಿಂದ ಸ್ಥಾಪನೆಯಾಗಿದ್ದು. ಆದರೆ ಲೋಕಾಯುಕ್ತರ ನೇಮಕಾತಿಯಲ್ಲಿ ಅದಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶವನ್ನೇ ಕಸಿದುಕೊಳ್ಳಲಾಯಿತು. ಇದು ಶಾಸಕಾಂಗದ ನಿಯಮಗಳನ್ನು, ಮಂತ್ರಿಮಂಡಲವನ್ನು ಮತ್ತು ಕಾರ್ಯಾಂಗವನ್ನು ನಾಶಪಡಿಸುವ ಕ್ಷುದ್ರ ಕೆಲಸವಲ್ಲದೇ ಮತ್ತೇನು?
ಈ ಸಂದರ್ಭದಲ್ಲಿ, ಸಾಂವಿಧಾನಿಕ ಹುದ್ದೆಗಳ ಬಗ್ಗೆ ಹೇಗೆ, ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ನೋಡುವುದು ಒಳಿತು- ಕೇಂದ್ರ ಜಾಗೃತ ಆಯೋಗದ ಆಯುಕ್ತ(ಸಿವಿಸಿ)ರ ನೇಮಕಾತಿಯನ್ನು ತ್ರಿಸದಸ್ಯ ಸಮಿತಿಯೊಂದು ಮಾಡುತ್ತದೆ. ಆದರೆ, ಅದರಲ್ಲಿನ ಇಬ್ಬರು ವ್ಯಕ್ತಿಗಳು ಸರ್ಕಾರದ ಪ್ರತಿನಿಧಿಗಳಾಗಿದ್ದರೆ, ಇನ್ನೊಬ್ಬರು  ಮಾತ್ರ ವಿರೋಧ ಪಕ್ಷದ ನಾಯಕನಾಗಿರಬೇಕು. ಹಾಗಿದ್ದರೆ ಇಲ್ಲಿ ಯಾರ ನಿರ್ಧಾರ ಮೇಲುಗೈ ಸಾಧಿಸುತ್ತದೋ ಯೋಚಿಸಿ? ಒಟ್ಟಿನಲ್ಲಿ ಸರ್ಕಾರದ ಇಚ್ಛೆಯಂತೆಯೇ ನೇಮಕಾತಿ ನಡೆಯುತ್ತದಲ್ಲವೇ? ಇನ್ನು ಸಿಬಿಐ ಮುಖ್ಯಸ್ಥರನ್ನೂ ಬಹುಪಾಲು ಸರ್ಕಾರವೇ ನೇಮಿಸುತ್ತದೆ.
ಆದರೆ ಲೋಕಾಯುಕ್ತ ಹುದ್ದೆ ಹೀಗಲ್ಲ. ಅದನ್ನು ಸ್ಥಾಪಿಸುವುದು ಶಾಸಕಾಂಗ.  ಆರ್.ಎ. ಮೆಹ್ತಾರ ನೇಮಕಾತಿಗಾಗಿ ಸಾಂವಿಧಾನಿಕ ನಿಯಮಗಳನ್ನು ಮೀರಿದ್ದಕ್ಕಾಗಿ ಸುಪ್ರಿಂ ಕೋರ್ಟ್ ಬೆನಿವಾಲ್‌ಗೆ ಛೀಮಾರಿ ಹಾಕಿದರೂ ಕೂಡ ಅದೇಕೋ ಮೆಹ್ತಾ ಅವರ ನೇಮಕಾತಿಯನ್ನು ಎತ್ತಿ ಹಿಡಿಯುತ್ತಿದೆ. ಒಂದು ವೇಳೆ ಬೆನಿವಾಲ್ ತಪ್ಪು ಮಾಡಿದ್ದಾರೆ ಎನ್ನುವುದು ಸತ್ಯವಾದರೆ, ಮೆಹ್ತಾರ ನೇಮಕಾತಿಯನ್ನು ಅದ್ಹೇಗೆ ಒಪ್ಪಿಕೊಳ್ಳಲು ಸಾಧ್ಯ?
"ಬೆನಿವಾಲ್ 'ಲೋಕಾಯುಕ್ತರ ನೇಮಕಾತಿಯಲ್ಲಿ ಮಂತ್ರಿಮಂಡಲದ ಪಾತ್ರವಿಲ್ಲ, ಬದಲಾಗಿ ತಮಗಿದೆ' ಎಂದು  
ಹೇಳಿ ತಮ್ಮ ಅಧಿಕಾರ ವ್ಯಾಪ್ತಿಯ ಬಗ್ಗೆ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಈ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ಲೋಕಾಯುಕ್ತರ ನೇಮಕಾತಿಯಲ್ಲಿ ಸ್ವತಂತ್ರವಾಗಿ ನಿರ್ಧಾರಕ್ಕೆ ಬರುವ ಅಧಿಕಾರ ರಾಜ್ಯಪಾಲರಿಗಿಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಯ್ಕೆ ಪ್ರಕ್ರಿಯೆಯೇ ಇಷ್ಟೊಂದು ಕಲುಷಿತವಾದ ಮೇಲೆ ನೇಮಕಾತಿಯ ಸಮರ್ಥನೆ ಸರಿಯೇ? ಈಗ ಗುಜರಾತ್ ಸರ್ಕಾರದ ಮೇಲೆ ಮುರಿದುಕೊಂಡು ಬೀಳುತ್ತಿರುವ ಮೆಹ್ತಾ, ಮೊದಲೇ ಈ ಸಮಸ್ಯೆಯ ಬಗ್ಗೆ ಏಕೆ ಯೋಚಿಸಲಿಲ್ಲ?
ಈ ಹಿನ್ನೆಲೆಯಲ್ಲಿ ನೋಡಿದಾಗ ಜಸ್ಟಿಸ್ ಮೆಹ್ತಾ ರಾಜಿನಾಮೆ ಕೊಟ್ಟದ್ದು ಸರಿಯಾದ ನಡೆಯೇ. ಆದರೆ ಗುಜರಾತ್ ಸರ್ಕಾರ ಈ ಬಗ್ಗೆ ಸಂಭ್ರಮಿಸಬಾರದು. ವಿವಾದದಿಂದಾಗಿ ಹೆಸರು ಕೆಡಿಸಿಕೊಳ್ಳುವುದಕ್ಕೆ ಜಸ್ಟಿಸ್ ಮೆಹ್ತಾರಿಗೆ ಇಷ್ಟವಿಲ್ಲದೇ ಇದ್ದುದರಿಂದ ಅವರು ಹಾಗೆ ಮಾಡಿದರು ಅನ್ನಿಸುತ್ತಿದೆ. ಆದರೆ ತಮ್ಮ ನೇಮಕಾತಿಯಲ್ಲಿ ಇಷ್ಟೆಲ್ಲಾ ರಾಜಕೀಯ ನಡೆದುಹೋಯಿತು, ಇದರ ಸೂತ್ರಧಾರಿ ರಾಜ್ಯಪಾಲರು ಎನ್ನುವುದು ಮೆಹ್ತಾರಿಗೆ ಗೊತ್ತಿಲ್ಲವೇ? ಅವರು ಮೊದಲೇ ಈ ಹುದ್ದೆಯನ್ನು ನಿರಾಕರಿಸಬೇಕಿತ್ತು.

- ಆರ್. ಜಗನ್ನಾಥನ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement