ವಾತಾವರಣ ಯಾವಾಗಲೂ ಒಂದೇ ರೀತಿ ಇರುವುದಿಲ್ಲ
ಭಾರತೀಯ ದೂತಾವಾಸವನ್ನು ಸ್ಫೋಟಿಸಲು ಯತ್ನಿಸಿ ಸಾವಿಗೀಡಾದ ವ್ಯಕ್ತಿಯ ಛಿದ್ರವಾದ ದೇಹ ಜಲಾಲಾಬಾದ್ನ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿದ್ದಿತ್ತು. ಆತನ ದೇಹದ ಸುತ್ತ ಸ್ಥಳೀಯರು ಜಮಾಯಿಸಿದ್ದರು. ಮಸೀದಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆಯಲು ಹೋಗುತ್ತಿದ್ದ 9 ಚಿಕ್ಕ ಮಕ್ಕಳು ಆ ಸ್ಫೋಟದಲ್ಲಿ ಸಾವಿಗೀಡಾದರು. 'ಎಲ್ಲರೂ ಆ ದೇಹವನ್ನು ದಿಟ್ಟಿಸುತ್ತಿದ್ದರು. ಸತ್ತವನು ಮತ್ತೆ ಎದ್ದು ಬಂದರೆ ಬಡಿದು ಸಾಯಿಸಬೇಕು ಎನ್ನುವಂತೆ ಅವರೆಲ್ಲ ಕಾಯುತ್ತಿದ್ದರು' ಎನ್ನುತ್ತಾನೆ ಪ್ರತ್ಯಕ್ಷದರ್ಶಿಯೊಬ್ಬ.
ಆ ಸಮಯದಲ್ಲೇ ಜನ ಜಂಗುಳಿಯಿಂದ ನುಸುಳಿ ಬಂದ ಬಾಲಕನೊಬ್ಬ ನಿಶ್ಚಿಂತೆಯಿಂದ ಆ ದೇಹದ ಬಳಿ ತೆರಳಿ ಅದರ ಮೇಲೆ ಮೂತ್ರ ವಿಸರ್ಜಿಸಿದ. ನೆರೆದಿದ್ದವರೆಲ್ಲ ಉತ್ಸಾಹದಿಂದ ಶಿಳ್ಳೆಹೊಡೆಯತೊಡಗಿದರು. ಇದೇ ಸಮಯದಲ್ಲಿ, ಜಲಾಲಾಬಾದ್ನಿಂದ ವಾಯುಮಾರ್ಗದ ಮೂಲಕ ಮೂರು ತಾಸುಗಳ ದೂರದಲ್ಲಿರುವ ದೋಹಾದಲ್ಲಿ ಅಮೆರಿಕದ ದೂತಾವಾಸ ತಾಲಿಬಾನಿ ಸಮಾಲೋಚಕನೊಬ್ಬನ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಯಿಂದಾಗಿ ಕಳೆದ ತಿಂಗಳು ತಾಲಿಬಾನಿಗಳು ದೋಹಾದಲ್ಲಿನ ಅಮೆರಿಕದ ಹೊಸ ಕಚೇರಿಯನ್ನು ಮುಚ್ಚಿಸಿಹಾಕಿದ್ದರು. ಆದರೂ ಮಾತುಕತೆ ಮಾತ್ರ ಮುಂದುವರಿದಿದೆ. ಅಮೆರಿಕ ಅಫ್ಘಾನಿಸ್ತಾನದಿಂದ ಕಾಲ್ಕಿತ್ತುವ ಮುನ್ನ ಶಾಂತಿ ಸ್ಥಾಪನೆ ಮಾಡಿ ಹೋಗುತ್ತದೆ ಎನ್ನುವ ಭರವಸೆಯಲ್ಲಿ ಭಾರತ ಸರ್ಕಾರ ಕುಳಿತಿದೆ.
ಆದರೆ ಪೂಂಛ್ನಲ್ಲಿ ಇತ್ತೀಚೆಗೆ ಪಾಕಿಸ್ತಾನಿ ಸೈನಿಕರು ಐದು ಭಾರತೀಯ ಯೋಧರನ್ನು ಕೊಂದುಹಾಕಿದ ಘಟನೆಯನ್ನು ನೋಡಿದರೆ, ಭರವಸೆ ಎನ್ನುವುದು ಕೇವಲ 'ಭ್ರಮೆ' ಎನ್ನುವುದು ತಿಳಿಯುತ್ತದೆ. ಜಲಾಲಾಬಾದ್ನಲ್ಲಾದ ದಾಳಿ, ಭವಿಷ್ಯದಲ್ಲಿ ಅಫ್ಘಾನಿಸ್ತಾನ ಹೇಗಿರಲಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಆದರೆ ಈ ಸಂದೇಶಕ್ಕೆ ಕಿವಿಗೊಡಲು ಭಾರತ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಈಗ ನಡೆಯುತ್ತಿರುವುದೆಲ್ಲವೂ ಕೆಟ್ಟ ಕನಸಾಗಿರಲಿ ಎಂದು ಅದು ಕಣ್ಣು ಮುಚ್ಚಿಕೊಂಡು ಒಳ್ಳೆಯ ದಿನಗಳಿಗಾಗಿ ಕಾಯುತ್ತಾ ಕುಳಿತಿದೆ.
ಕಳೆದೊಂದು ವರ್ಷದಲ್ಲಿ ನಮ್ಮ ಅನೇಕ ಸೈನಿಕರು ಪಾಕಿಸ್ತಾನಿಗಳಿಂದ ಹತರಾಗಿದ್ದಾರೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಅಮೆರಿಕ ಅಫ್ಘಾನಿಸ್ತಾನದಿಂದ ಮೆಲ್ಲಗೆ ಕಾಲು ತೆಗೆಯುತ್ತಿದ್ದಂತೆ ಪಾಕಿಸ್ತಾನ ಮತ್ತೆ ತನ್ನ ಹಳೆಯ ಚಾಳಿಗೆ ಮರಳುತ್ತಿದೆ. ತನ್ನ ದೇಶಕ್ಕೆ ಹೊಕ್ಕಿರುವ ತಾಲಿಬಾನಿಗಳನ್ನು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಿದಂತೆಯೂ ಆಯಿತು, ಭಾರತದ ಮೇಲೆ ಅವರಿಂದ ದಾಳಿ ಮಾಡಿಸಿ ತನ್ನ ಪ್ರಾಬಲ್ಯವನ್ನು ಮೆರೆದಂತೆಯೂ ಆಯಿತು!
ಕಳೆದ ಡಿಸೆಂಬರ್ನಲ್ಲಿ ಲಷ್ಕರ್-ಎ-ತಯ್ಬಾದ ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ಕಾನ್ಫರೆನ್ಸೊಂದರಲ್ಲಿ ಮಾತನಾಡುತ್ತಾ, ಒಮ್ಮೆ ಅಮೆರಿಕ ಅಫ್ಘಾನಿಸ್ತಾನದಿಂದ ಹೊರಹೋಗುತ್ತಿದ್ದಂತೆಯೇ ಮತ್ತೆ ನಮ್ಮ 'ಚಟುವಟಿಕೆಗಳನ್ನು' ಶುರುಮಾಡುತ್ತೇವೆ ಎಂದು ಹೇಳಿದ್ದಾನೆ. ಇನ್ನು ಫೆಬ್ರವರಿಯಲ್ಲೂ ಭಾರತದ ವಿರುದ್ಧ ಸಾರ್ವಜನಿಕವಾಗಿ ಗುಡುಗಿದ ಸಯೀದ್-"ಒಂದು ಬಾರಿ ಅಮೆರಿಕ ಓಡಿಹೋಗಲಿ, ಆಮೇಲೆ ಭಾರತ ಕಾಶ್ಮೀರದಿಂದ ಓಡುವಂತೆ ಮಾಡುತ್ತೇವೆ!" ಎಂದು ಹೇಳಿದ್ದ.
ಗುಪ್ತಚರ ದಳ ಕಾಬೂಲ್, ಕಂದಹಾರ್ ಮತ್ತು ಜಲಾಲಾಬಾದ್ನಲ್ಲಿನ ದೂತಾವಾಸಗಳ ಮೇಲೆ ದಾಳಿ ನಡೆಯಬಹುದು ಎಂದು ಕಳೆದ ಹಲವಾರು ವಾರಗಳಿಂದ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಈ ವಿಷಯವನ್ನು ಸರ್ಕಾರದ ಕೆಲವು ಮೂಲಗಳೂ ಸ್ಪಷ್ಟಪಡಿಸಿವೆ!
ಸರಿಯಾದ ಯೋಜನೆ ಮತ್ತು ಶತ್ರುಗಳ ಬಗ್ಗೆ ವಿಷಯ ಸಂಗ್ರಹಣೆ ಮಾಡದೇ ಇರುವುದರಿಂದಲೇ ಭಾರತೀಯದೂತಾವಾಸದ ಮೇಲೆ ದಾಳಿಯಾಯಿತು ಎಂದು ಭಾರತ ಮತ್ತು ಅಫ್ಘಾನಿಸ್ತಾನದ ತನಿಖಾಧಿಕಾರಿಗಳು ಹೇಳುತ್ತಾರೆ. ಟೋಯೋಟಾ ಕರೋಲಾದಲ್ಲಿ ಬಂದ ಆ ಮೂವರು ಉಗ್ರರನ್ನು ದೂತಾವಾಸದಿಂದ 30 ಮೀಟರ್ ದೂರದಲ್ಲಿಯೇ ತಡೆದು ನಿಲ್ಲಿಸಲಾಯಿತು. ಕಾರಿನಿಂದ ಇಳಿದ ಇಬ್ಬರು ಉಗ್ರರು ಚೆಕ್ಪಾಯಿಂಟ್ ಬಳಿ ತೆರಳಲಾರಂಭಿಸಿದರು. ಅವರನ್ನು ತಡೆದು ನಿಲ್ಲಿಸುವು ಪ್ರಯತ್ನದಲ್ಲಿದ್ದಾಗಲೇ, ಕಾರಿನಲ್ಲಿದ್ದ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡ. ಇನ್ನುಳಿದ ಇಬ್ಬರಲ್ಲಿ ಒಬ್ಬನ ಬಾಂಬ್ ನಿಷ್ಕ್ರಿಯ ಮಾಡಲು ಸಫಲರಾದ ಪೊಲೀಸರು, ಎರಡನೆಯವನನ್ನು ಚೆಕ್ ಪಾಯಿಂಟ್ ಬಳಿಯೇ ಗುಂಡಿಕ್ಕಿ ಕೊಂದರು.
ಇತ್ತೀಚೆಗೆ ನಡೆದ ಕೆಲವು ದಾಳಿಗಳಲ್ಲಿ ಜಿಹಾದಿ ಕೆಲೆಗಡುಕರು ಗೊಂದಲ ಹುಟ್ಟಿಸಿಬಿಡುವ ತಂತ್ರವನ್ನು ಅನುಸರಿಸಿದ್ದಾರೆ. ಈ ಗೊಂದಲದ ಲಾಭ ಪಡೆದು ತಮ್ಮ ಗುರಿಯತ್ತ ಅವರು ತೆರಳುತ್ತಾರೆ. ಡೈನ್ಕಾರ್ಪ್ ಗೆಸ್ಟ್ ಹೌಸ್ ಮೇಲಿನ ದಾಳಿಯೂ ಇದೇ ರೀತಿ ಆಯಿತು. ಅದರಲ್ಲಿ ಭಾರತೀಯರಾದ ಜಾನ್ ಮಾರ್ಟಿಸ್, ಸಂದೀಪ್ ಜಿಲಾಲಿ, ನವೀನ್ ಕುಮಾರ್ ಕುರುಡಿ ಮತ್ತು ಕೌಶಿಕ್ ಚಕ್ರವರ್ತಿ ಮೃತಪಟ್ಟರು. ಇಂಥದ್ದೇ ತಂತ್ರವನ್ನೇ ಸಿಐಎದ ಕಚೇರಿಯ ಮೇಲೆ ನಡೆದ ದಾಳಿಗಳಲ್ಲಿಯೂ ಅನುಸರಿಸಲಾಗಿತ್ತು. ಇನ್ನು ಅಧ್ಯಕ್ಷ ಹಮೀದ್ ಕರ್ಜಾಯಿಯವರು ನಡೆಸಿದ ಪತ್ರಿಕಾಗೋಷ್ಠಿಯ ವೇಳೆಯಲ್ಲೂ ಇಂಥ ದಾಳಿಯ ಪ್ರಯತ್ನ ನಡೆಯಿತು. ಆದರೂ ಉಗ್ರರು ಆ ದಾಳಿಯಲ್ಲೇಕೆ ಸಫಲವಾಗಲಿಲ್ಲವೋ ಯಾರಿಗೂ ತಿಳಿಯದು. ಇನ್ನು ಇಂಥ ಹಲವಾರು ದಾಳಿಗಳಲ್ಲಿ ಪಾಕಿಸ್ತಾನದ ಐಎಸ್ಐನ ಕುಮ್ಮಕ್ಕಿರುವುದೂ ಬಹಿರಂಗವಾಗಿದೆ. 2008ರಲ್ಲಿ ಕಾಬೂಲ್ನಲ್ಲಿನ ಭಾರತೀಯ ದೂತಾವಾಸದ ಮೇಲೆ ಆದ ಭಯಾನಕ ದಾಳಿಯ ರೂವಾರಿ ಐಎಸ್ಐ ಎಂದು ನ್ಯೂಯಾರ್ಕ್ ಟೈಮ್ಸ್ನ ವರದಿಗಾರ ಎರಿಕ್ ಶಿಮ್ಟ್ ಬರೆಯುತ್ತಾರೆ.
ಆವಾಗಲೂ ಕೂಡ ಭಾರತ ಸುಮ್ಮನಿತ್ತು. ಮನಮೋಹನ್ ಸಿಂಗ್ ಅವರ 'ಶಾಂತಿ ಮಾತುಕತೆ' ಎನ್ನುವ ಗಂಭೀರ ವಿಷಯದ ಮುಂದೆ, ಈ ದಾಳಿಗಳೆಲ್ಲವೂ ನಮ್ಮ ಸರ್ಕಾರಕ್ಕೆ ಬಹಳ ಚಿಕ್ಕ ಘಟನೆಗಳಾಗಿ ಕಂಡವೇನೋ?
ಇಲ್ಲಿವರೆಗೆ ಭಾರತ ರಚಿಸಿದ ತಂತ್ರಗಳೆಲ್ಲ ವಿಫಲವಾಗಿವೆಯಾದರೂ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಅದು ಇನ್ನೊಂದು ಪ್ರಮುಖ ನಡೆಯನ್ನೂ ಅನುಸರಿಸಬಹುದು. ಇತ್ತೀಚೆಗೆ ಅಫ್ಘನ್ ಅಧ್ಯಕ್ಷ ಕರ್ಜಾಯಿ ಅವರು ಭಾರತಕ್ಕೆ 'ಶಸ್ತ್ರಾಸ್ತ್ರಗಳ ಶಾಪಿಂಗ್ ಲಿಸ್ಟ್' ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ಬಳಕೆಯಾದ 105 ಮಿಲಿಮೀಟರ್ ಫಿರಂಗಿಗಳು, ಹೆಲಿಕಾಪ್ಟರ್ಗಳು ಮತ್ತು ಸಾಗಣೆ ವಿಮಾನಗಳನ್ನು ಅತ್ಯಂತ ಕಡಿಮೆ ದರದಲ್ಲಿ ತಮಗೆ ಮಾರಬೇಕೆಂದು ಅವರು ಭಾರತವನ್ನು ಕೋರಿದ್ದಾರೆ. ಆದರೆ ನಮ್ಮವರು ಇದಕ್ಕೆ ಒಪ್ಪುತ್ತಿಲ್ಲ. ಹಾಗೆ ಮಾಡಿದರೆ ಅಮೆರಿಕ ಮತ್ತು ಪಾಕಿಸ್ತಾನದೊಂದಿಗಿನ ಸಂಬಂಧ ಎಲ್ಲಿ ಹದಗೆಡುತ್ತದೋ ಎನ್ನುವ ಭಯ ಇದಕ್ಕೆ ಕಾರಣ! ಆದರೆ ಭಾರತ ಅದರ ಬದಲಾಗಿ 100 ಮಿಲಿಯಲ್ ಡಾಲರ್ನಷ್ಟು ಆರ್ಥಿಕ ಸಹಾಯವನ್ನು ಅಫ್ಘಾನಿಸ್ತಾನಕ್ಕೆ ಮಾಡಿದೆ. ಇದರೊಟ್ಟಿಗೆ 2 ಬಿಲಿಯನ್ ಡಾಲರ್ ಕೊಡುವ ಒಪ್ಪಂದಕ್ಕೂ ಸಹಿಹಾಕಿದೆ. ಈ ಸಹಾಯದಿಂದಾಗಿ ಅನೇಕ ಆಫ್ಘನಿಗಳು ಭಾರತವನ್ನು ಗೌರವದಿಂದ ನೋಡತೊಡಗಿದ್ದಾರೆ. 'ಪಾಕಿಸ್ತಾನ ನಮಗೆ ಆತ್ಮಹತ್ಯಾ ಬಾಂಬರ್ಗಳನ್ನು ಕೊಟ್ಟರೆ, ಭಾರತ ನಮಗೆ ಆಸ್ಪತ್ರೆಗಳನ್ನು ಕೊಡುತ್ತಿದೆ' ಎಂದು ಸಾಮಾನ್ಯ ಜನತೆ ಮಾತನಾಡುತ್ತಿದ್ದಾರೆ. ಆದರೂ, ಅಫ್ಘಾನಿಸ್ತಾನಿ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ ಪಾಕಿಸ್ತಾನಕ್ಕೆ ಪ್ರಬಲ ಸಂದೇಶ ಕಳುಹಿಸಿದಂತೆ ಆಗುತ್ತದೆ.
ಇನ್ನು ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ಕೊಡದಿದ್ದರೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ತಾಲಿಬಾನಿಗಳಿಗೆ ಸ್ಪಷ್ಟವಾಗಿ ಹೇಳಬೇಕು. 2014ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅತಿ ಪ್ರಬಲ ಪೈಪೋಟಿ ನೀಡಲಿರುವ ವಿರೋಧ ಪಕ್ಷಗಳಾದ ನ್ಯಾಷನಲ್ ಫ್ರಂಟ್ ಮತ್ತು ನ್ಯಾಷನಲ್ ಕೋಲೇಷನ್ನ ಅಭ್ಯರ್ಥಿಗಳೆಲ್ಲರೂ- ವಿದೇಶಾಂಗ ಮತ್ತಿ ಅಬ್ದುಲ್ಲಾಹ್ ಅಬ್ದುಲಾಹ್ರಿಂದ ಹಿಡಿದು ಹನೀಫ್ ಅತ್ಮರ್ವರೆಗು- ಭಾರತದ ಸ್ನೇಹಿತರೇ. ಕರ್ಜಾಯಿಗೆ ಸಂಬಂಧಿಸಿದ ಅಭ್ಯರ್ಥಿಗಳಿಗೆ ಭಾರತಕ್ಕಿಂತ ಹೆಚ್ಚು ಪ್ರೀತಿ ಪಾಕಿಸ್ತಾನದ ಮೇಲಿದೆ. ಒಂದೊಮ್ಮೆ ಭಾರತ ಅಫ್ಘಾನಿಸ್ತಾನದ ಸೇನೆಗೆ ಹೆಚ್ಚು ಸಹಕಾರಿಯಾಗಿ ವರ್ತಿಸಿದರೆ ಅವರುಗಳೂ ನಮ್ಮತ್ತ ವಾಲುತ್ತಾರೆ.
ಇಷ್ಟೇ ಅಲ್ಲದೆ ಗಡಿರೇಖೆಯಲ್ಲಿ ಭಾರತ ಹೆಚ್ಚಿನ ಸಾಮರ್ಥ್ಯವನ್ನು ತೋರಿಸಬೇಕಿದೆ. ಪಾಕಿಸ್ತಾನಿ ಸೇನೆಯ ಸಾವಿರಾರು ಸೈನಿಕರು ಉಗ್ರ ನಿಗ್ರಹದ ನೆಪದಲ್ಲಿ ವಾಯುವ್ಯ ಪ್ರಾಂತ್ಯದಲ್ಲಿ ಜಮಾಯಿಸಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಭಾರತೀಯ ಸೈನಿಕರನ್ನೂ ಅಲ್ಲಿ ನಿಯೋಜಿಸಬೇಕು. ಸುಮ್ಮನೆ ಕಾಯುತ್ತಾ ಕೂರುವುದನ್ನು ಮೊದಲು ಭಾರತ ಬಿಡಬೇಕು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಉಪಸ್ಥಿತಿ, ಪಾಕಿಸ್ತಾನ-ಜಿಹಾದಿಗಳ ಜಗಳ, ಪೂರಕ ಅಂತಾರಾಷ್ಟ್ರೀಯ ನಿಯಮಗಳೆಲ್ಲ ಭಾರತವನ್ನು ಇಷ್ಟು ದಿನ ತುಸು ಸುರಕ್ಷಿತವಾಗಿಟ್ಟಿದ್ದವು. ಆದರೆ ಮೆಲ್ಲಗೆ ಎಲ್ಲವೂ ಬದಲಾಗುತ್ತಿದೆ. ಭಾರತಕ್ಕೆ ಬೃಹತ್ ಅಪಾಯ ಎದುರಾಗಬಹುದು. ಏಕೆಂದರೆ ವಾತಾವರಣ ಯಾವಾಗಲೂ ಒಂದೇ ರೀತಿ ಇರುವುದಿಲ್ಲವಲ್ಲ?
- ಪ್ರವೀಣ್ ಸ್ವಾಮಿ
anisikeprabha@gmail.com