ಸಹಿಷ್ಣುತೆ: ನಿಜಕ್ಕೂ ತೋರಬೇಕಿರುವವರು ಯಾರು?
ಹಿಂದು ಧರ್ಮ ಪರಧರ್ಮಗಳ ಹಪಾಹಪಿಗೆ ತುತ್ತಾಗುತ್ತಿದೆಯೇ ಎಂಬ ಪ್ರಶ್ನೆ ಈಗ ನಮ್ಮನ್ನು ಕಾಡದೇ ಇರದು. ಜಾಗತೀಕರಣದ ಮಧ್ಯೆ ಕೆಲ ಧರ್ಮೀಯರು ಮತಾಂತರಕ್ಕೆ ಮುಂದಾಗಿದ್ದಾರೆ. ಮೇಲ್ನೋಟಕ್ಕೆ ಹಸುವಿನಂತೆ ಕಂಡರೂ ಒಳಗೊಳಗೆ ವ್ಯಾಘ್ರ ಗುಣದಿಂದ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಹಿಂದು ಧರ್ಮ ಎಲ್ಲ ಧರ್ಮದವರನ್ನೂ ಗೌರವದಿಂದ ಕಾಣುತ್ತಿದೆ. ಆದರೆ ಇತರ ಧರ್ಮಗಳು ಹಿಂದು ಧರ್ಮವನ್ನು ಗೌರವದಿಂದ ಕಾಣುತ್ತಿಲ್ಲ. ಈ ದಿಸೆಯಲ್ಲಿ ವಿಚಾರ ಮಾಡಿದರೆ ಹಿಂದು ಧರ್ಮವನ್ನು ಹಿಂದಕ್ಕೆ ತಳ್ಳುವ ಷಡ್ಯಂತ್ರ ನಡೆದಿದೆಯೇ ಎಂಬ ಸಂಶಯ ಮೂಡದೇ ಇರದು.
ಪರ ಧರ್ಮದ ಹಬ್ಬಗಳನ್ನು ಹಿಂದು ಧರ್ಮದವರು ಆಚರಿಸುತ್ತಾರೆ. ಇತರರ ಸಂಸ್ಕೃತಿ, ಪರಂಪರೆ ಒಪ್ಪಿಕೊಂಡು ಅವರ ಧರ್ಮದ ಹಬ್ಬ, ಹರಿದಿನಗಳನ್ನು ಆಚರಿಸುವವರೇನೂ ನಮ್ಮಲ್ಲಿ ಕಮ್ಮಿ ಇಲ್ಲ. ಎಲ್ಲವೂ ನಮ್ಮ ಹಬ್ಬಗಳೇ ಅನ್ನುವಷ್ಟರ ಮಟ್ಟಿಗೆ ಹಿಂದುಗಳು ಇತರರ ಹಬ್ಬಗಳನ್ನು ಆಚರಿಸುತ್ತಾರೆ. ಪವಿತ್ರ ರಂಜಾನ್ ಹಬ್ಬದಲ್ಲಿ ನೂರಾರು ಹಿಂದು ಮಹಿಳೆಯರು ರೋಜಾ ಹಿಡಿದು ಸಮಾನತೆ ಮೆರೆದರೆ ಇನ್ನೊಂದು ಕಡೆ ಮೊಹರಂದಲ್ಲಿ ಹುಲಿ ವೇಷಧಾರಿಗಳಾಗಿ, ಫಕೀರರಾಗಿ ವೇಷ ಹಾಕಿಕೊಂಡು 'ಆಯ್ ಮೋ ಧೂಲೋ' ಎಂದು ಕೂಗುತ್ತಾ ಯುವಕರು ಅವರ ಸಂತಸದಲ್ಲಿ ಪಾಲ್ಗೊಳ್ಳುತ್ತಾರೆ. ಇದು ತಲೆ, ತಲಾಂತರದಿಂದ ಮುಂದುವರಿದಿದೆ. ಹಿಂದುತ್ವದ ಬಗ್ಗೆ ಮಾತನಾಡುತ್ತಾ ಚುನಾಯಿತರಾಗಿ ಹಿಂದು ಪರಂಪರೆಯ ಹಬ್ಬಗಳಲ್ಲಿ ಕಾಣಿಸಿಕೊಳ್ಳದ ಎಷ್ಟೋ ಮಹಾನುಭಾವರು ಮೊಹರಂ, ರಂಜಾನ್ ಬಕ್ರೀದ್ ಹಬ್ಬಗಳಲ್ಲಿ ಟೋಪಿ ಹಾಕಿಕೊಂಡು ಪ್ರಾರ್ಥನಾ ಸ್ಥಳಗಳಲ್ಲಿ ನಮಾಜ್ ಮಾಡಿ ಮತ ಪಡೆಯುವ ಹುನ್ನಾರ ನಡೆಸುತ್ತಾರೆ. ಆದರೆ, ಅದೇ ಒಬ್ಬ ಮುಸ್ಲಿಂ ಶಾಸಕ ಹಿಂದುಗಳ ಮತ ಪಡೆದು ಆಯ್ಕೆಯಾದರೂ ಕೂಡಾ ಹಿಂದುಗಳ ಪವಿತ್ರ ಹಬ್ಬಗಳಾದ ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ, ದಸರಾಗಳಲ್ಲಿ ದೇವಸ್ಥಾನಗಳಿಗೆ ಬಂದು ಕೈ ಮುಗಿದು ಕುಂಕುಮ ಹಚ್ಚಿಕೊಂಡ ಒಂದು ಸಣ್ಣ ಉದಾಹರಣೆಯಿದೆಯೇ? ಈ ರೀತಿ ಎಷ್ಟೋ ಹಬ್ಬ, ಹರಿದಿನಗಳಲ್ಲಿ ದರ್ಗಾಗಳಲ್ಲಿ, ಮಸೀದಿಗಳಲ್ಲಿ ಹಿಂದುಗಳೇ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಾರೆ. ಇದು ಹಿಂದುಗಳ ಉದಾರತನವಲ್ಲದೇ ಬೇರೇನಲ್ಲ. ಈ ಮನೋಭಾವ ಅನ್ಯಧರ್ಮದಲ್ಲಿ ವೈಯಕ್ತಿಕ ನೆಲೆಯಲ್ಲಿ ಅಲ್ಲಲ್ಲಿ ಕಂಡುಬಂದರೂ ಹಿಂದುಹಬ್ಬಗಳನ್ನು ತಮ್ಮದೆನ್ನುವ ಸಾರ್ವತ್ರಿಕ ಉತ್ಸಾಹ ಕಾಣುವುದಿಲ್ಲ. ರಾಜಕಾರಣಿಗಳ ಗಮನವೇನಿದ್ದರೂ ಮತ ಪಡೆಯುವತ್ತಲಷ್ಟೇ ಕೇಂದ್ರೀಕೃತವಾಗಿರುತ್ತದೆ. ದುರ್ದೈವವೆಂದರೆ ಇಂತಹ ಜನಪ್ರತಿನಿಧಿಗಳು, ರಾಜಕಾರಣಿಗಳು ನಿಜವಾಗಿಯೂ ಧರ್ಮಗಳ ಸಾಮರಸ್ಯದ ಕೊಂಡಿಯಾಗುವುದಿಲ್ಲ. ದೇವನೊಬ್ಬ ನಾಮ ಹಲವು ಎಂಬ ಹಿಂದು ಪದ್ಧತಿಗೆ ಅಲ್ಲಾಹು ಮತ್ತು ಜೀಸಸ್ರನ್ನು ದೇವರೆಂದು ನಮಿಸುವುದಕ್ಕೆ ಭಾರವಾಗುವುದಿಲ್ಲ. ಆದರೆ ಸಮಸ್ಯೆ ಉದ್ಭವವಾಗುವುದು ನಾವು ನಂಬಿರುವ ದೇವರನ್ನು ಬಿಟ್ಟರೆ ಬೇರೆ ಯಾರೂ ಗೌರವಕ್ಕೆ ಅರ್ಹರಲ್ಲ ಎಂಬ ವಾದ ಶುರುವಾದಾಗ!
ಇತ್ತೀಚೆಗೆ ಹೆಚ್ಚುತ್ತಿರುವ ಮತಾಂತರದ ಹಾವಳಿಯಲ್ಲಿ 'ಲವ್ ಜಿಹಾದ್' ಪ್ರಮುಖವಾಗಿ ಎದ್ದು ಕಾಣುವಂತಹುದು. ಇದಕ್ಕೆ ಬಲಿಯಾದ ಅನೇಕಾನೇಕ ಹಿಂದು ಯುವತಿಯರು ಬೀದಿ ಪಾಲಾಗಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿ ಶಾಲೆ, ಕಾಲೇಜಿಗೆ ಹೋದ ಯುವತಿಯರು ಮತಾಂತರಕ್ಕೆ ಬಲಿಯಾಗಿ ಮನೆಗೆ ಬರದೇ ಇರುವ ಉದಾಹರಣೆಗಳಿವೆ. ಉದಾಹರಣೆಗೆ ರೋಶನ್ ಎಂಬ ಒಬ್ಬ ಮುಸ್ಲಿಂ ಹುಡುಗ ಕವಿತಾ ಎಂಬ ಹಿಂದೂ ಹುಡುಗಿಯನ್ನು ಪ್ರೀತಿಸುತ್ತಾನೆ. ಕವಿತಾ ತನ್ನ ಪ್ರೀತಿಗಾಗಿ ಕರಿಷ್ಮಾ ಆಗುತ್ತಾಳೆ. ಆದರೆ ಒಬ್ಬ ಹಿಂದು ಹುಡುಗ ರಾಜೇಂದ್ರ ಶಬಾನಾಳನ್ನು ಪ್ರೀತಿಸುತ್ತಾನೆ. ಆದರೆ, ಆಕೆ ಹಿಂದು ಧರ್ಮದ ಪ್ರಕಾರ ಗಂಗಾ ಆಗುವ ಸಾಧ್ಯತೆ ಕಡಿಮೆ. ರಾಜೇಂದ್ರನೇ ರಾಜಾಸಾಬ ಆಗಬೇಕಾಗುತ್ತದೆ. ಇದಷ್ಟೇ ಅಲ್ಲದೆ ಇನ್ನು ಬೇರೆ ಬೇರೆ ಮುಖಗಳಿಂದಲೂ ಮತಾಂತರದ ಮಾರುಕಟ್ಟೆಗಳು ತೆರೆದುಕೊಂಡಿವೆ. ಒಂದು ಕಡೆ ಮುಸ್ಲಿಂ ಇನ್ನೊಂದು ಕಡೆ ಕ್ರಿಶ್ಚಿಯನ್ ಸನಾತನ ಹಿಂದು ಧರ್ಮದ ಮೇಲೆ ಮತಾಂತರದ ಗದಾ ಪ್ರಹಾರ ಮಾಡುತ್ತ ಬಂದಿವೆ. ಸೇವಾ ಮನೋಭಾವದಿಂದ ಸೈಲೆಂಟ್ ಆಗಿ ಮತಾಂತರ ಮಾಡುವ ಹುನ್ನಾರ ಈ ಧರ್ಮೀಯರಿಗೆ ಗೊತ್ತು. ನಿಮ್ಮ ನಿಮ್ಮ ಊರಿನ ಚರ್ಚ್ಗಳ ಕಡೆಗೆ ನಿಮ್ಮ ಗಮನವಿರಲಿ. ಗ್ರಾಮೀಣ ಪ್ರದೇಶದಲ್ಲಿ ಕ್ರಿಶ್ಚಿಯನ್ ಜನ ವಸತಿ ಇರದಿದ್ದರೂ ಚರ್ಚ್ಗಳು ತಲೆ ಎತ್ತಿ ನಿಂತಿವೆ.
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಪೆನ್ನನ್ನು ಮಂತ್ರಿಸಿ ಕೊಟ್ಟರಂತೆ, ಆತ ಮರು ಪರೀಕ್ಷೆಯಲ್ಲಿ ಪಾಸಾದನಂತೆ. ಏಡ್ಸ್ ರೋಗಿಗೆ ನೀರನ್ನು ಮಂತ್ರಿಸಿ ಕೊಟ್ಟರೆ ರೋಗ ಗುಣಮುಖವಾಗುತ್ತದೆಯಂತೆ ಎಂದು ಇದ್ದದ್ದು ಇಲ್ಲದ್ದು ಹೇಳಿ ಮತಾಂತರಕ್ಕೆ ಸೆಳೆಯುವ ಇವರುಗಳು, ದೊಡ್ಡ ದೊಡ್ಡ ನದಿಗಳನ್ನೇ ಮಂತ್ರಿಸಿ ಬಿಡಲಿ? ಆಗ ಎಲ್ಲರೂ ಆ ನೀರು ಕುಡಿದು ನಿರೋಗಿಗಳಾಗಿ ಬಿಡುತ್ತಾರಲ್ಲವೇ? ವೈದ್ಯರೇಕೆ ಬೇಕು ಇಂತಹ ಮತಾಂತರದ ಮಂತ್ರವಾದಿಗಳಿರುವಾಗ?
ಮಾತೆತ್ತಿದರೆ 'ಹಿಂದುತ್ವ' ಎಂದು ಮಾತನಾಡುವ ಹಿಂದು ಪರ ಸಂಘಟನೆಗಳು ಈ ಹಾವಳಿಯನ್ನು ತಡೆಯಲು ಮಾಡುತ್ತಿರುವುದಾದರೂ ಏನು? ಲವ್ ಜಿಹಾದ್, ಶಿಕ್ಷಣ, ಹಣ, ಮನೆ ಮುಂತಾದ ಆಸೆ ಆಮಿಷಗಳಿಗೆ ಬಲಿಯಾಗುತ್ತಿರುವ ಸ್ವಧರ್ಮೀಯರ ಹಿತ ಕಾಪಾಡುವ ಕಾಳಜಿ ಇಲ್ಲದಿದ್ದರೆ ಇವರಿಗೇಕೆ ಬೇಕು ಈ ಸಂಘಟನೆ ಎಂಬ ಡಂಭಾಚಾರ? ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮಾಡುವುದು ಬಿಟ್ಟು ಬಡ ದೀನ ದಲಿತರ ಮಕ್ಕಳ ಶಿಕ್ಷಣಕ್ಕಾಗಿ ಈ ಸಂಘಟನೆಗಳೇಕೇ ಆ ಹಣ ವ್ಯಯಿಸುವುದಿಲ್ಲ? ಮತಾಂತರದ ಮಾರುಕಟ್ಟೆಯಲ್ಲಿ ಮಾರಿಕೊಳ್ಳುತ್ತಿರುವ ಇಂಥವರ ಬಗ್ಗೆ ಸಮಸ್ತ ಹಿಂದು ಸಮಾಜದವರು ಎಚ್ಚತ್ತುಕೊಳ್ಳದಿದ್ದರೆ ಮತಾಂತರಿಗಳಿಗೆ ಎಲ್ಲರೂ ಬಿಕರಿಯಾಗುವ ಕಾಲ ದೂರವಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.
ಪರಶುರಾಮ ಪವಾರ
ಸಂಪಾದಕರು,
ಅಧಿಕಾರವಾಣಿ ದಿನಪತ್ರಿಕೆ
ಬಿಜಾಪುರ