ಇಂಜಿನಿಯರ್ ಆಗದಿದ್ದರೆ ಕಥೆ ಮುಗಿದೇ ಹೋಯಿತೇ?
ಒಮ್ಮೆ ಸಾಹಿತಿಯೊಬ್ಬರು ಜೀವನದ ಸಾರಾಂಶವನ್ನು ಕೆಲವೇ ಸಾಲುಗಳಲ್ಲಿ ತಿಳಿಸುತ್ತ: 'ನನ್ನ ಮದುವೆ ಆಯಿತು. ಇಲ್ಲಿಗೆ ನನ್ನ ಕಥೆ ಮುಗಿಯಿತು' ಎಂದಿದ್ದರಂತೆ. ಆದರೆ ಪಿ.ಯು.ಸಿ ಮುಗಿಸಿದ ಒಬ್ಬ ವಿಜ್ಞಾನ ವಿದ್ಯಾರ್ಥಿಗೆ, ಇದೇ ರೀತಿ ಕೇಳಿದ್ದರೆ 'ಪಿ.ಯು ಪರೀಕ್ಷೆ ಫಲಿತಾಂಶ ಬಂದಿತು, ಇಲ್ಲಿಗೆ ನನ್ನ ಕಥೆ ಮುಗಿಯಿತು' ಎಂದೇ ಹೇಳುತ್ತಿದ್ದ. ಜನರ ಭ್ರಮೆಯೋ, ಇಂಜಿನಿಯರಿಂಗ್ನ ಹುಚ್ಚು ಹಾವಳಿಯೋ ಗೊತ್ತಿಲ್ಲ. ಒಬ್ಬ ವಿದ್ಯಾರ್ಥಿ ಒಳ್ಳೆಯ ಅಂಕ ಗಳಿಸಿಬಿಟ್ಟರೆ ಆತ ಇಂಜಿನಿಯರಿಂಗ್ ಅಥವಾ ಮೆಡಿಕಲ್ಗಾಗಿಯೆ ಹುಟ್ಟಿದ್ದು ಎಂಬಂತೆಯೇ ಎಲ್ಲರು ವರ್ತಿಸತೊಡಗುತ್ತಾರೆ. ನಾನೂ ಕೂಡ ಈ ಹಳೆಯ ನಾಟಕದಲ್ಲಿನ ಹೊಸ ಪಾತ್ರ.
ಒಂದು ಕಾಲದ ರಾಜಕೀಯದಲ್ಲಿ ಮಾರ್ಕ್ಸ್ವಾದ ಹೇಗೆ ಪ್ರಾಬಲ್ಯ ಸ್ಥಾಪಿಸಿತ್ತೋ, ಹಾಗೆಯೇ ಇಂದು ಭಾರತದ ಶಿಕ್ಷಣದಲ್ಲಿ 'ಮಾರ್ಕ್ಸ್'ವಾದ ತಲೆ ಎತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಓದುವುದು, ಬದುಕುವುದು ಅಂಕಕ್ಕಾಗಿಯೇ ಅನ್ನುವಂತಹ ಸ್ಥಿತಿ. ನನ್ನ ಹತ್ತನೇ ತರಗತಿಯ ಫಲಿತಾಂಶ ಚೆನ್ನಾಗಿದ್ದುದರಿಂದ ಎಲ್ಲರೂ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೋ ಎಂದು ಹೇಳಿದರು. ನನಗೂ ಅದು ಇಷ್ಟವಿತ್ತು. ಹಾಗಾಗೇ ವಿಜ್ಞಾನ ವಿಭಾಗವನ್ನೇ ಆಯ್ದುಕೊಂಡೆ. ಹಾಗೆಯೆ ಪಿ.ಯು ಫಲಿತಾಂಶ ಅತ್ಯುತ್ತಮವಲ್ಲದಿದ್ದರೂ ಉತ್ತಮವಾಗಿತ್ತು. ನನ್ನೂರಿನಲ್ಲೇ ನನಗೆ ಇಂಜಿನೀಯರಿಂಗ್ ಸೀಟು ಸಿಗುತ್ತಿತ್ತು. ಆದರೂ ಬಿಎಸ್ಸಿ ಆರಿಸಿಕೊಂಡೆ. ಅಲ್ಲಿಗೆ ಹೊಸ ಕಥೆಯ ಆರಂಭವಾಯಿತು!
ಪಿ.ಯು ಪರೀಕ್ಷೆ ಫಲಿತಾಂಶದ ಮರುದಿನವೇ ಒಂದು ಶಿಬಿರವಿತ್ತು. ಹೋಗಲೇಬೇಕಾದಂತಹ ಪರಿಸ್ಥಿತಿ. ಫಲಿತಾಂಶ ಅಪೇಕ್ಷೆಗೆ ತಕ್ಕಂತೆ ಬರಲಿಲ್ಲ. ಆದರೂ ಶಿಬಿರವನ್ನು ತಪ್ಪಿಸಲಿಲ್ಲ. ಸಿ.ಇ.ಟಿಯ ಫಲಿತಾಂಶ ಅನ್ನುವುದೊಂದು ಇನ್ನು ಉಳಿದಿತ್ತಲ್ಲ. ಅದರಲ್ಲಿ ಎಷ್ಟು ಅಂಕ ಬಂದರೆ ಯಾವ ಕಾಲೆಜ್ನಲ್ಲಿ ಸೀಟು ಸಿಗುತ್ತದೆ, ಎಲ್ಲಿ ಸಿಗುವುದಿಲ್ಲ ಅನ್ನುವುದೇ ಆ ಚರ್ಚೆಯ ಮುಖ್ಯಾಂಶ. ಕೆಲವರು 'ನನಗೆ ಇಂಜಿನೀಯರಿಂಗ್ ಸಿಕ್ಕರೆ ಸಾಕಪ್ಪ' ಎಂದರೆ ಇನ್ನು ಹಲವರು 'ಈಗ ಇಂಜಿನಿಯರಿಂಗ್ಗೆ ಸ್ಕೋಪ್ ಇಲ್ಲ' ಎಂದರು. ಇನ್ನೂ ಕೆಲವರಂತೂ 'ಇಂಜಿನೀಯರಿಂಗ್ಗೇ ಸ್ವರ್ಗ' ಎಂಬಂತೆ ಮಾತನಾಡಿದರು.
ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಶಿಬಿರವೂ ಮುಗಿಯಿತು, ಸಿ.ಇ.ಟಿ ಫಲಿತಾಂಶವೂ ಬಂದಿತು. ಅಲ್ಲಿಗೆ ಶುರುವಾಗಿದ್ದು 'ಸಜೆಜೆನ್ ಶೆಷನ್'. 'ಎಷ್ಟಾಯ್ತು', 'ಯಾಕಪ್ಪ ಸ್ವಲ್ಪ ಕಡಿಮೆ ಆಯ್ತಲ್ಲಪ್ಪ', 'ಚೆನ್ನಾಗೆ ಆಗಿದೆಯಲ್ಲಾ, ಯಾವ ಇಂಜಿನಿಯರಿಂಗ್ ಕಾಲೇಜ್ಗೆ ಸೇರಬೇಕಂದ್ಕೊಂಡಿದಿಯಾ', 'ಆ ಕಾಲೇಜ್ ಚೆನ್ನಾಗಿದೆ, ಇದು ಬೇಡ' ಎನ್ನುವ ಸಲಹೆಗಳ ಸುರಿಮಳೆ ತಲೆ ಮೇಲೆ ಸುರಿಯಿತು.ಪಿ.ಯು ಪರೀಕ್ಷೆಯ ಪ್ರಶ್ನೆಗಳು ಈ ಪ್ರಶ್ನೆಗಳಿಗಿಂತ ತುಂಬಾ ಸುಲಭ ಅನ್ನಿಸಿಬಿಟ್ಟವು!
ಆದರೇನು ಮಾಡುವುದು? ಹೃದಯದ ಬಡಿತವೆಲ್ಲ ಬಿಎಸ್ಸಿ ಕಡೆಗೆ, ತಲೆಯ ಸಿಡಿತ ಮಾತ್ರ ಇಂಜಿನಿಯರಿಂಗ್ನೆಡೆಗೆ. ಆಗ ತಂದೆ 'ದಾಂಡೆಲಿಯಲ್ಲಿ ಕಾಗದ ತಯಾರಿಕೆ ಕಲಿಸುವ ಕಾಲೇಜ್ ಇದೆ. ಭಾರತದಲ್ಲೇ ಕೇವಲ ಎರಡೇ ಕಡೆ ಇವೆಯಂತೆ ಮಾಡ್ತಿಯಾ ನೋಡು' ಅಂದರು. ಆದರೆ ಗೊಂದಲಮಯವಾಗಿದ್ದ ತಲೆ ಇನ್ಯಾವ ಹೊಸ ಸಲಹೆಯನ್ನೂ ಒಳಗೆ ಬಿಟ್ಟುಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ತಂದೆಯವರಿಗೆ ಬೇಜಾರಾಯ್ತೋ ಗೊತ್ತಿಲ್ಲ. ಪರಮಾಪ್ತ ಗೆಳೆಯರ ಬಳಗವೂ ನನ್ನ ಆಸುಪಾಸಿನಲ್ಲೆ ಇದ್ದುದರಿಂದ ಅವರೆಲ್ಲರ ನಿರ್ಧಾರಗಳೂ ಕೂಡ ನನ್ನನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿದವು.
ಏನಾದರಾಗಲಿ ಎಂದು ನನ್ನ ಹೃದಯದ ಮಾತನ್ನು ಕೇಳಿ ಬಿಎಸ್ಸಿ ಸೇರಬೇಕೆಂದು ನಿಶ್ಚಯ ಮಾಡಿಬಿಟ್ಟೆ. ಅಮ್ಮನಿಗೆ ಹೇಳಿದಾಗ 'ನಿನಗೇನು ಇಷ್ಟಾನೋ ಮಾಡು' ಅಂದಳು. ಅಮ್ಮನಿಂದ ಕಿಜ್ಠಟ್ಝಡಡ್ಝ್ಟಟಿನ್ನೂ , ಅಪ್ಪನಿಂದ ಆಜಟ್ಝಡಡ್ಝ್ಟಟಿನ್ನೂ ಸಿಕ್ಕಿತು. ಎಲ್ಲರ ಮುಂದೆ ಎದೆ ಉಬ್ಬಿಸಿ ಹೆಳಬೇಕಲ್ಲ? ಅಲ್ಲಿ ಇನ್ನೊಂದು ಸಮಸ್ಯೆ ಶುರುವಾಯಿತು. 'ಯಾಕೊ ಇಂಜಿನಿಯರಿಂಗ್ ಸಿಗಲಿಲ್ವಾ, ಯಾಕೆ ಬಿಟ್ಟೆ?' ಅನ್ನುವ ಹಿತೈಶಿಗಳ(?) ಕೊಂಕು ಮರುಕಗಳು. ನನಗೂ ತಪ್ಪು ಮಾಡಿದೆನಾ ಅನ್ನಿಸುತ್ತಿತ್ತು. ಆದರೂ ಹೃದಯದ ಮಾತೇ ಮೇಲುಗೈ ಸಾಧಿಸಿತು.
ಇಂಜಿನಿಯರಿಂಗ್ ವರ್ಗಗಳು ಶುರುವಾಗುವ ಹಂತದಲ್ಲಿವೆ. ಬಿಎಸ್ಸಿ ವರ್ಗಗಳು ಶುರುವಾಗಿ ಮೊದಲನೇ ಪರೀಕ್ಷೆಯೂ ಬಂದಿದೆ. ಇಷ್ಟಪಟ್ಟದ್ದನ್ನು ಓದುತ್ತಿದ್ದೇನೆ ಎನ್ನುವ ನೆಮ್ಮದಿ ನನಗೀಗ ದೊರೆತಿದೆ. ಇಂಜಿನಿಯರಿಂಗ್ ಮಾಡದಿದ್ದರೆ ಮುಗಿದೇ ಹೋಯಿತು ಜೀವನ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ ಅದೊಂದೇ ಜೀವನವಲ್ಲವಲ್ಲ? ಇಷ್ಟವಿರದ ವಿಷಯವನ್ನು ಒಲ್ಲದ ಮನಸ್ಸಿನಿಂದ ಓದುವುದಕ್ಕಿಂತ, ಇಷ್ಟಪಟ್ಟು ತೆಗೆದುಕೊಂಡರೆ ಖುಷಿಯಿಂದಲೇ ಓದಬಹುದು.
- ಯಶಸ್ವಿಸುತ ಸಿಂಧೂರ