ಒಂದು ಅಂತಾರಾಷ್ಟ್ರೀಯ ಪ್ರಯತ್ನದಿಂದ, ವಿಶ್ವಬ್ಯಾಂಕ್ ಆಹಾರ ಮತ್ತು ಕೃಷಿ ವಿಶ್ವಸಂಸ್ಥೆ, ವಿಶ್ವ ಪರಿಸರ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅನ್ಯ ಅಂಗಗಳಾದ ಅಭಿವೃದ್ಧಿ ಸಂಸ್ಥೆ, ವಿಶ್ವ ಪರಿಸರ ಕಾರ್ಯಕಾರಿ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಸಾಂಸ್ಕೃತಿಕ ಸಂಸ್ಥೆಯ ಆಯೋಜನೆಯಲ್ಲಿ, 2008ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ಬಿಡುಗಡೆ ಯಾದ ಒಂದು ಉದ್ಗ್ರಂಥ ಅಂದರೆ- "ಅಂತಾರಾಷ್ಟ್ರೀಯ ಕೃಷಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ವಿಮರ್ಶೆ" (IAASTD) ಎಂಬ ಸಾವಿರಾರು ಪುಟಗಳ ವರದಿ. ಈ ವರದಿಯ ಮುಖ್ಯ ರೂವಾರಿ- ಡಾ. ಬಾಬ್ವಾಟ್ಸನ್.ಅವರು ಹಿಂದೆ ವಿಶ್ವಬ್ಯಾಂಕ್ನ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿದ್ದರು. ಸದ್ಯಕ್ಕೆ ಈ ವಾಟ್ಸನ್ ಮಹಾಶಯ, ಇಂಗ್ಲೆಂಡಿನ ಈಸ್ಟ್ ಆಂಗ್ಲಿಯ ವಿವಿದಲ್ಲಿ ಪ್ರಾಧ್ಯಾಪಕನಾಗಿದ್ದಾನೆ. ಈತ ಏನು ಮೋಡಿ ಮಾಡಿದ್ದನೋ ಏನೋ ಈಗ ವಿಶ್ವದ ಅತ್ಯಂತ ಉನ್ನತ ಹುದ್ದೆಗಳಿಂತಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾನೆ. 2005ರಲ್ಲಿ IPCC ಎಂಬ ಮತ್ತೊಂದು ಸಂಸ್ಥೆಯ ಅಧ್ಯಕ್ಷಗಿರಿಗೆ ಉಮೇದುವಾರನಾಗಿ, ಭಾರತದ ಡಾ. ಆರ್.ಕೆ. ಪಚೌರಿಯವರಿಂದ ಹೀನಾಯವಾಗಿ ಸೋಲುಂಡು ದಿಕ್ಕು ಕಾಣದೆ ವಾಷಿಂಗ್ಟನ್ನಲ್ಲಿ ಓಡಾಡಿಕೊಂಡಿದ್ದ. ಅಷ್ಟರೊಳಗೆ ಅಂತಾರಾಷ್ಟ್ರೀಯ ಸರ್ಕಾರೇತರ ಸಂಘಗಳು ಇಂಗೋಗಳ ಸಂಪರ್ಕವನ್ನು ಹೆಂಗೆಂಗೋ ಬಹು ಚೆನ್ನಾಗಿ ಸಂಪಾದಿಸಿದ್ದ. ಈ ಇಂಗೋಗಳ ಪ್ರೇರಣೆಯಿಂದ ಸುಮಾರು 25 ಮಿಲಿಯನ್ ಡಾಲರ್ಗಳ ಒಂದು ಅವಕಾಶವಾದಿ ಯೋಜನೆ ಹಾಕಿದ. ಅದಕ್ಕೆ ಅಂದಿನ ವಿಶ್ವಬ್ಯಾಂಕ್ನ ಅಧ್ಯಕ್ಷ ವೊಲ್ಫನ್ಷನ್ನ ಒಪ್ಪಿಗೆಯೂ ಪಡೆದು ಕೀನ್ಯಾದ ನೈರೋಬಿಯಲ್ಲಿ IAASTD ವರದಿ ತಯಾರು ಮಾಡುವುದಕ್ಕೆ ಆರಂಭಿಸಿಯೇ ಬಿಟ್ಟ. ಆ ಮೊದಲ ಸಭೆಗೆ ನಾನು ಹೋಗಿದ್ದೆ. ಅಲ್ಲಿ ನಡೆದ ವರ್ತಮಾನಗಳನ್ನು ಗಮನಿಸಿ, ಇದೊಂದು ಅತ್ಯಂತ ದೊಡ್ಡ ಅಂತರಾಷ್ಟ್ರೀಯ "ಗೋಲ್ಮಾಲ್" ಎಂದರಿತು ಮತ್ತೆ ಆ ಸಭೆಗಳಿಗೆ ಹೋಗುವುದನ್ನು ಕೈ ಬಿಟ್ಟೆ. ಇದಕ್ಕೆ ಮುಖ್ಯ ಕಾರಣವೆಂದರೆ ವಿಶ್ವದ ಪರಿಸರ ಸಂಘಗಳ ಅಟಾಟೋಪ. ಅದನ್ನು ನೋಡಿ ನನಗನ್ನಿಸಿದ್ದು ಈ ಯೋಜನೆ ಮೊದಲ ಹಂತದಿಂದಲೇ ಸಂಪೂರ್ಣವಾಗಿ ರಾಜಕೀಯಮಯವಾಗಿದ್ದು, ಗಬ್ಬೆಬ್ಬೆಸುವ ಕಾರ್ಯಕ್ರಮ ಎಂದು ತೀರ್ಮಾನಿಸಿದೆ. ನನ್ನ ಹಾಗೆ ಎಷ್ಟೋ ವಿಜ್ಞಾನಿಗಳು ಅದರ ಕಡೆ ತಲೆ ಕೂಡ ಹಾಕಿ ಮಲಗಲಿಲ್ಲ. ಏನೇ ಆಗಲಿ ಸುಮಾರು ನಾಲ್ಕು ವರ್ಷ ತೆಗೆದುಕೊಂಡು ಸುಮಾರು 400 ವಿಜ್ಞಾನಿಗಳು(?) ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿ IAASTD ವರದಿಯನ್ನು ತಯಾರಿಸಿಯೇ ಬಿಟ್ಟವು. ವಿಶ್ವದ ಅತ್ಯಂತ ವೈಜ್ಞಾನಿಕ ಮತ್ತು ತಂತ್ರಜ್ಞಾನಿಕ ದೇಶವಾದ ಅಮೆರಿಕ,ಈ ವರದಿಯನ್ನು ಓದದೆಯೇ ತಿರಸ್ಕರಿಸಿಬಿಟ್ಟಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಯೋಜನೆ ನಡೆಯಬೇಕಾದರೆ, ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರದಲ್ಲಂತೂ ಅಮೆರಿಕದ ಸಹಯೋಗವಿಲ್ಲದೆ ಏನೂ ನಡೆಯುವುದಿಲ್ಲ ಎಂಬುದನ್ನು ಅರಿತಿದ್ದೂ ಕೂಡ IAASTD ವರದಿ ಧರೆಗಿಳಿದು ಬಂತು.
ವಿಶ್ವದ ಎಲ್ಲಾ ಇಂಗೋಗಳು ಮತ್ತು ಪರಿಸರ ಕಾರ್ಯಕರ್ತರ ಏಕೈಕ ಉದ್ದೇಶವೆಂದರೆ ಈ ತರಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯ ತೆಗೆದುಕೊಂಡು ಅಮೆರಿಕವನ್ನು ಬಗ್ಗು ಬಡಿಯಬೇಕು ಎಂಬುದು. ಆದರೆ ಈ IAASTD ವರದಿ ಅಷ್ಟೇ ವೇಗವಾಗಿ ಯಾರಿಗೂ ಕಾಣದ ರೀತಿಯಲ್ಲಿ ಕಣ್ಮರೆಯಾಗಿದೆ. ಆದರೆ ಪರಿಸರ ಆಂದೋಲನವಾದಿಗಳೆಲ್ಲಾ ಸುಮ್ಮನೆ ಕೂರುವ ಜಾಯಮಾನದವರಲ್ಲ. ಆಗಿಂದ್ದಾಗ್ಗೆ, ಈ IAASTD ವರದಿಯ ಧೂಳ ಧೂಳು ಹಾರಿಸಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಸರ್ಕಾರಗಳಿಗೆ ಭೋಧಿಸುತ್ತಾ, ಅದರಲ್ಲಿರುವ ತಮ್ಮ ಮೂಗಿನ ನೇರಕ್ಕೆ ಒಗ್ಗುವ ಕೃಷಿ ನೀತಿ, ನಿಯಮಗಳನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತವೆ. ಈ IAASTD ವರದಿಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಒಂದು ರೀತಿಯಲ್ಲಿ ಈ ವರದಿ ಸತ್ತಂತೆಯೇ ಸರಿ. ಆದರೂ, ಪರಿಸರವಾದಿಗಳು ಸುಮ್ಮನೆ ಬಿಡದೆ, ಬೇರೆ ಬೇರೆ ರಾಷ್ಟ್ರಗಳಲ್ಲಿ ಈ IAASTD ವರದಿಯ ಬಗ್ಗೆ ತಗಾದೆ ತೆಗೆಯುತ್ತಿರುತ್ತಾರೆ. ಈ ಪರಿಸರವಾದಿಗಳ ತರಲೆಗೆ ಭಾರತ ದೇಶವೇನೂ ಹೊರತಲ್ಲ. ಪ್ರಸ್ತುತ ಭಾರತದಲ್ಲಿ ಕುಲಾಂತರಿ ತಂತ್ರಜ್ಞಾನದ ಬಗ್ಗೆ ವಿರೋಧಿ ಚಳವಳಿ ನಡೆಸುತ್ತಿರುವವರು, ಭಾರತ ಸರ್ಕಾರದ ಮೇಲೆ, ಈ IAASTD ವರದಿಯಾನುಸಾರ, ಕುಲಾಂತರಿ ತಂತ್ರಜ್ಞಾನವನ್ನು ಕೈ ಬಿಡಬೇಕೆಂದು ದುಂಬಾಲು ಬೀಳುತ್ತಿರುತ್ತಾರೆ. ಸದ್ಯಕ್ಕಂತೂ ಯುಪಿಎ ಸರ್ಕಾರ ಈ ವರದಿ ಇದೇ ಅಂದೇ ಪರಿಗಣಿಸಿಲ್ಲ ಹಾಗೂ ಇನ್ನೇನು ವರ್ಷದೊಳಗೆ ಆಗುವ ಲೋಕಸಭೆ ಚುನಾವಣೆಯ ಕಾರಣದಿಂದ, ಈ ತರಹದ ಕಾರ್ಯಕ್ರಮಗಳಿಗಾಗಲಿ ಅಥವಾ ವರದಿಗಳಿಗಾಗಲಿ ಯಾವ ಸರ್ಕಾರವೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಭಾರತದ ವಾಮಪಕ್ಷಗಳು ಈ ಪರಿಸರವಾದಿಗಳ ಪರವಾಗಿ ವಾದಿಸುತ್ತಾ ಏನಾದರೂ ಮಾಡಿ, ಯಾವ ರೀತಿಯಲ್ಲಾದರೂ ಸರಿ IAASTD ಯಲ್ಲಿರುವ ಕೃಷಿ ನೀತಿ, ನಿಯಮಗಳನ್ನೊಳಗೊಂಡ ಮಸೂದೆಯನ್ನು ಪ್ರಸ್ತುತ ಲೋಕಸಭಾವಧಿಯಲ್ಲೇ, ಎಲ್ಲಾ ಗಲಾಟೆಗಳ ನಡುವೆ ತೂರಿಸಿ ಲೋಕಸಭೆಯಿಂದ ಅಂಗೀಕೃತ ಪಡಿಸಬೇಕೆಂದು ಹೆಣಗುತ್ತಿವೆ. ಇವರ್ಯಾರೂ, ಈ ವಿಷಯದಲ್ಲಿ ಜಯ ಗಳಿಸುವುದಕ್ಕಾಗುವುದಿಲ್ಲ. ಸ್ವಚ್ಛವಾಗಿರುವ ಐಆಆಖಖಿಉ ವರದಿಯನ್ನು ಪುನಶ್ಚೇತನಗೊಳಿಸಬೇಕಾದರೆ, ಜೈವಿಕ ತಂತ್ರಜ್ಞಾನದ ಮೇಲಿರುವ ಅದರ ತಾತ್ಸಾರ ಮನೋಭಾವನೆಯನ್ನು ಸರಿಪಡಿಸಿಕೊಳ್ಳಬೇಕೆಂದು ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ Nature ತನ್ನ ಸಂಪಾದಕೀಯದಲ್ಲಿ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಈ ಸಂಪಾದಕೀಯವನ್ನು ಮಾರ್ಚ್3, 2013 Nature ಸಂಚಿಕೆಯಲ್ಲಿ ಓದಬಹುದು.
ಈ IAASTD ವರದಿಯಲ್ಲಿ ವಿಜ್ಞಾನದ ಯಾವುದೇ ಆಧಾರವಿಲ್ಲದ, ಇಂಗೋ ಮತ್ತು ಎಂಗೋಗಳ ಕಾರ್ಯಸಾಧುವಲ್ಲದ ನೀತಿ ನಿಯಮಗಳನ್ನು ತೂರಿಸಿರುವುದು. ಮತ್ತೊಂದು ತಿಳಿಯಬೇಕಾದ ವಿಷಯವೇನೆಂದರೆ, ಎಂದಿನಿಂದ ಸೋವಿಯತ್ ಸಾಮ್ರಾಜ್ಯ ಮುರಿದು ಬಿದ್ದು ವಾಮಪಂಥ ವಿಚಾರಗಳಿಗೆ ಪ್ರಪಂಚದಲ್ಲಿ ಎಲ್ಲೇ ಆಗಲಿ, (ಕ್ಯೂಬ ಬಿಟ್ಟು; ಆ ದೇಶವೂ ಸಹ ಕಮ್ಯುನಿಸ್ಟ್ ಸಿದ್ಧಾಂತವನ್ನು ಸಡಿಲಗೊಳಿಸಲು ಶುರುವಿಟ್ಟುಕೊಂಡಿದೆ) ಸಮಾಜವಾದ ಅಥವಾ ಕಮ್ಯುನಿಸ್ಟ್ ನೀತಿಗಳು ಸತ್ತು ಹೋಗುತ್ತಿವೆ ಅಥವಾ ಸಾಯ ಹತ್ತಿದೆ. ಇದರಿಂದ ರೋಸಿ ಹೋಗಿ ವಾಮಪಂಥೀಯ ಸರ್ಕಾರೇತರ ಸಂಘ, ಸಂಸ್ಥೆಗಳು ಪ್ರಪಂಚದಾದ್ಯಂತ ಸತತವಾಗಿ ಒಂದಲ್ಲಾ ಒಂದು ರೀತಿಯಲ್ಲಿ ವಿರೋಧಾಭಾಸಗಳನ್ನು ತೋರಿಸಲು ಯತ್ನಿಸುತ್ತವೆ. ಕೆಲವರಂತೂ ಏನೇ ಆಗಲಿ, ಎಷ್ಟೇ ಕಾಲವಾಗಲಿ, ಬಂಡವಾಳಶಾಹಿ ಪ್ರಾಬಲ್ಯವನ್ನು ಸದೆ ಬಡಿದು ಮತ್ತೆ ಸಮಾಜವಾದವನ್ನು ಕಟ್ಟುತ್ತೇವೆಂದು ಪಣ ತೊಟ್ಟಿವೆ. ಹಾಗಾಗಿ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, ಸ್ವಿಜರ್ಲ್ಯಾಂಡಿನ ಡಾಮೋಸ್ನಲ್ಲಿ ಚಳಿಗಾಲದಲ್ಲಿ ಪ್ರತಿ ವರ್ಷವೂ ನಡೆಯುವ ವಿಶ್ವ ಆರ್ಥಿಕ ಸಾರ್ವಜನಿಕ ವೇದಿಕೆ (World Economic forum) ಸೆಡ್ಡು ಹೊಡೆದು World Socialforum) (ವಿಶ್ವಸಾಮಾಜಿಕ ವೇದಿಕೆ) ಹುಟ್ಟು ಹಾಕಿ, ಪ್ರತಿ ವರ್ಷ ಸಭೆ ಸೇರಿ (ಯಾವ ವಾರದಲ್ಲಿ WEF ಸೇರುತ್ತದೋ) ಅದೇ ವಾರದಲ್ಲಿ ಬ್ರೆಜಿಲ್ನ ಪೊಟೋ ಅಲೆಗ್ರೆನನಲ್ಲಿ ಸಭೆ ಸೇರಿ WEF ಗೆ ವ್ಯತಿರಿಕ್ತವಾಗಿ ನಿರ್ಣಯಗಳನ್ನು ಮಂಡಿಸಿ ಕ್ಯೂಬಾ, ವೆನೆಜುವೆಲಾ ಮತ್ತು ಬೊಲಿವಿಯಾ ದೇಶದ ಚಪ್ಪಾಳೆ ಗಿಟ್ಟಿಸುತ್ತವೆ. ಆಧುನಿಕ ತಂತ್ರಜ್ಞಾನ ವಿರೋಧಿ ಗುಂಪುಗಳೂಸಹ ಈ ಇಂಗೋ ಮತ್ತು ಎಂಗೊಗಳಗೂಡಿ, ಅಮೇರಿಕದ ವಿರುದ್ಧ ಕತ್ತಿ ಮಸಿಯುತ್ತಲೇ ಇರುತ್ತದೆ.
ತಂತ್ರಜ್ಞಾನ ವಿರೋಧಿ ಗುಂಪುಗಳು ಭಾರತದಲ್ಲಿರುವ ಕೆಲವು ಪುಡಿ, ಪುಡಿ ರಾಜಕೀಯ ಪಕ್ಷಗಳ ರಾಜಕಾರಣಿಗಳನ್ನು ಪುಸಲಾಯಿಸಿ ರಾಜಕೀಯ ಒತ್ತಡಗಳನ್ನು ತಂದು, ಲೋಕಸಭೆಯ ಮಸೂದೆಯ ಮುಖಾಂತರ ತಂತ್ರಜ್ಞಾನವನ್ನು ಹತ್ತಿಕ್ಕಲು ಹವಣಿಸುತ್ತಿರುತ್ತವೆ. ಇಷ್ಟೆಲ್ಲಾ ಪುರಾಣ ಹೇಳುವುದಕ್ಕೆ ಕಾರಣವೇನೆಂದರೆ, ಯಾವುದೇ ಆಂದೋಲನವಾಗಲಿ ಅಥವಾ ವಿರೋಧಿ ಚಟುವಟಿಕೆಗಳಾಗಲಿ, ಕನಿಷ್ಟ ಮಟ್ಟದ ರಾಜಕೀಯ ಸಹಯೋಗವಿಲ್ಲದೆ ಬಾಲ ಅಲ್ಲಾಡಿಸುವುದಕ್ಕಾಗುವುದಿಲ್ಲ. ಯಾವಾಗ ವೈಜ್ಞಾನಿಕವಾದ ಲವಲೇಶವೂ ಇಲ್ಲದ ವಿಷಯವನ್ನು ವಿರೋಧಿಸಬೇಕಾದರೆ ವಿಜ್ಞಾನವನ್ನು ತಿರುಚಿ ಅಥವಾ ಸುಳ್ಳು-ಸುಳ್ಳು ವಿಜ್ಞಾನವನ್ನು ಹೋಲುವಂತ ದಾಖಲೆಗಳನ್ನು ನಿರ್ಮಿಸಿ ರಾಜಕೀಯವಾಗಿ ತಮ್ಮ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಕೊನೆಗೂ ಒಂದು ದಿನ ಈ ಶಕ್ತಿಗಳು ವಿಜಯ ಸಾಧಿಸಿದರೂ ಆಶ್ಚರ್ಯಪಡಬೇಕಿಲ್ಲ. ಆದರೆ ನಮ್ಮ ದೇಶದ ವಿಜ್ಞಾನಿಗಳು ಎಚ್ಚೆತ್ತಕೊಂಡು ಈಗಲಾದರೂ ವಿಜ್ಞಾನ ತಂತ್ರಜ್ಞಾನ ವಿರೋಧಿಗಳನ್ನು ಎದುರಿಸಬೇಕಾಗಿದೆ. ಕೃಷಿ ಕ್ಷೇತ್ರದಲ್ಲಂತೂ ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೆ ಭವಿಷ್ಯವೆಲ್ಲಾ ಅಂಧಕಾರದಲ್ಲಿ ಮುಳುಗಲಿದೆ.
ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu