ಇವು ಹಾಸ್ಟಲ್‌ಗಳೋ, ನಿರಾಶ್ರಿತ ಕೇಂದ್ರಗಳೋ?
ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ...
ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಅಪರೂಪಕೊಮ್ಮೆಯಾದರೂ ಮಂತ್ರಿಗಳು, ಶಾಸಕರು, ಜಿಪಂ, ತಾಪಂ ಜನಪ್ರತಿನಿಧಿಗಳು ದರ್ಶನ ಮಾಡುವ ಉದಾಹರಣೆಗಳು ತೀರಾ ವಿರಳ. ಒಂದು ವೇಳೆ ಮಂತ್ರಿಗಳು ದರ್ಶನ ಮಾಡಿದರೆ ಎಸ್ಸಿ, ಎಸ್ಟಿ ಹಾಸ್ಟೆಲ್‌ಗೆ ಮಂತ್ರಿಗಳ ಭೇಟಿ ಎಂದು ದೊಡ್ಡದಾಗಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆಯೇ ಹೊರತು ನರಕ ದರ್ಶನದ ಬಾಗಿಲು ತೆರೆದುಕೊಂಡಿರುವ ಆ ವಸತಿ ನಿಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಅವ್ಯವಸ್ಥೆಗಳಂತೂ ಕಣ್ಣಾರೆ ಕಾಣುವ ಮಂತ್ರಿಗಳೂ ಕೂಡ ವಾಸ್ತವವಾಗಿ ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡುವುದಿಲ್ಲ. ಕೇವಲ ಭೇಟಿ ಸಂದರ್ಭದಲ್ಲಿ ನೀಡುವ ಭರವಸೆ, ಅವ್ಯವಸ್ಥೆಯ ಕುರಿತು ಅಧಿಕಾರಿಗಳಿಗೆ ವಾರ್ಡನ್‌ಗಳಿಗೆ ಹಾಕುವ ಧಮ್ಕಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಆ ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಅನುಭವಿಸುವ ನರಕಯಾತನೆ ಮಾತ್ರ ಬದುಕಿನ ಸತ್ಯವನ್ನು ತೆರೆದಿಡುತ್ತದೆ.
ರಾಜ್ಯದ ಜೈಲುಗಳಲ್ಲಿರುವ ಕೈದಿಗಳು ಹಾಗೂ ವಿಚಾರಣಾಧೀನ ಆರೋಪಿಗಳು ನಾಲ್ಕು ಗೋಡೆ ಮಧ್ಯೆ ( ಬಂಧಿಖಾನೆ) ವಾಸಿಸುತ್ತಾರೆ ಎನ್ನುವುದನ್ನು ಹೊರತುಪಡಿಸಿದರೆ, ಉಳಿದಂತೆ ಊಟ, ತಿಂಡಿ, ಪೌಷ್ಠಿಕಾಂಶದ ಯೂನಿಟ್ ಪದ್ಧತಿಯ ಆಹಾರ, ಶಿಸ್ತು, ನಿಯಮ, ಸ್ವಚ್ಛತೆ, ಸೌಲಭ್ಯಗಳು ಯಾವ ಲಾಡ್ಜ್‌ಗಳಿಗಿಂತಲೂ ಕಡಿಮೆ ಏನೂ ಇಲ್ಲ. ಆದರೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ, ಅಲ್ಪಸಂಖ್ಯಾತ ಹಾಸ್ಟೆಲ್‌ಗಳ ಅವ್ಯವಸ್ಥೆ, ನಿರ್ಲಕ್ಷ್ಯ, ಮೂಲಭೂತ ಸೌಲಭ್ಯಗಳ ಕೊರತೆ ನೋಡಿದರೆ ಹಾಸ್ಟೆಲ್‌ಗಿಂತ, ಜೈಲೇವಾಸಿ ಎನ್ನುವ ನಿರ್ಧಾರಕ್ಕೆ ಬರಬೇಕಾಗುತ್ತದೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆದ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ನೀವು (ಡಿಸಿಗಳು) ಇನ್ನು ಮುಂದೆ ಎಸ್ಸಿ, ಎಸ್ಟಿ ಹಾಗೂ ಬಿಸಿಎಂ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಅಲ್ಲೇ ಊಟ ಮಾಡಿ. ಆಗ ಯಾವ ಗುಣ ಮಟ್ಟದ ಊಟ ನೀಡಲಾಗುತ್ತದೆ ಎಂಬ ಅರಿವು ನಿಮಗೆ ಬರುತ್ತದೆ' ಎಂದರು. ಸಂಸದರು ಮತ್ತು ಶಾಸಕರಿಗೆ, ಜಿಲ್ಲಾ, ತಾಲೂಕು ಪಂಚಾಯ್ತಿ ಸದಸ್ಯರಿಗೆ ಸಿಎಂ ಯಾವತ್ತೂ ಹೇಳಲ್ಲ.
ಬಡವರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ಸ್ಥಾಪಿಸಲಾಗಿರುವ ಬಡ ವರ್ಗದ ವಿದ್ಯಾರ್ಥಿಗಳ ವಸತಿ ನಿಲಯಗಳು ಸರ್ಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಕೂಸುಗಳಾಗಿವೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಸಮುದಾಯದ ಹಾಸ್ಟೆಲ್‌ಗಳ ಅವ್ಯವಸ್ಥೆಯ ಚಿತ್ರಣ ಭೀಕರ ಮತ್ತು ಗಂಭೀರವಾಗಿದೆ, ದೂರದ ಬೀದರ್‌ನಲ್ಲಿರುವ ವಿದ್ಯಾರ್ಥಿನಿಲಯದ ಚಿಕ್ಕ ಕೊಠಡಿಯೊಂದರಲ್ಲಿ 12 ಬಾಲಕಿಯರು ವಾಸವಾಗಿದ್ದಾರೆ. 80 ಮಂದಿ ಬಾಲಕಿಯರಿಗೆ ಒಂದೇ ಶೌಚಾಲಯ, ಅದೇ ನಗರದ ಮತ್ತೊಂದು ಹಾಸ್ಟೆಲ್‌ನಲ್ಲಿ 200 ವಿದ್ಯಾರ್ಥಿಗಳು ಎರಡು, ಮೂರು, ಕೊಠಡಿಯಲ್ಲಿ ವಾಸವಾಗಿದ್ದಾರೆ. ಶೌಚಾಲಯ, ಸ್ನಾನ ಗೃಹಗಳ ಕೊರತೆ, ಶುದ್ಧ ಕುಡಿಯುವ ನೀರು, ಭದ್ರತೆ ಸಮಸ್ಯೆಗಳ ನಡುವೆಯೂ ಹಾಸ್ಟೆಲ್ ವಾರ್ಡ್‌ನಗಳ ದಬ್ಬಾಳಿಕೆ, ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಹಸಿದ ಹೊಟ್ಟೆಯಲ್ಲಿ ವಿರ್ದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ.
ಚಿಕ್ಕಮಗಳೂರು, ಚಿಕ್ಕ ಬಳ್ಳಾಪುರ, ಮಂಡ್ಯ, ಕೋಲಾರ, ಗುಲ್ಬರ್ಗಾ, ಚಾಮರಾಜನಗರ ಹೀಗೆ ಯಾವುದೇ ಜಿಲ್ಲೆ ತೆಗೆದುಕೊಂಡರೂ ಬಾಲಕ, ಬಾಲಕಿಯರ ಹಾಸ್ಟೆಲ್‌ಗಳ ಮೂಲಭೂತ ಸೌಲಭ್ಯಗಳೇ ಶೋಚನೀಯ ಸ್ಥ್ಥಿತಿಯಲ್ಲಿವೆ. ಚಿಕ್ಕಮಗಳೂರಿನ ಹಾಸ್ಟೆಲ್ಲೊಂದರಲ್ಲಿ ಅತಿ ಚಿಕ್ಕದಾದ 24 ಕೊಠಡಿಗಳಲ್ಲಿ 150 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಿದ್ದೇವೆ ಎನ್ನುವುದನ್ನು ಹೊರತುಪಡಿಸಿದರೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ಕ್ರಮವಾಗಿ ನೀಡುತ್ತಿಲ್ಲ. ಅಧಿಕಾರಿಗಳು ಕೂಡ ಸಮಗ್ರವಾಗಿ ಹಾಸ್ಟೆಲ್‌ಗಳ ಆಡಳಿತ, ನಿರ್ವಹಣೆಯನ್ನು ಸರಿಯಾಗಿ ಉಸ್ತುವಾರಿ ಮಾಡುವ ಮಾತೇ ಇಲ್ಲ.
ಕೊಡೋದು ಮೂರು ಕಾಸು, ಕೋಣೆ ತುಂಬಾ ಹಾಸು ಎಂಬ ನೀತಿಯಂತೆ ರಾಜ್ಯ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ 900 ರು.ಗಳಿಂದ 1000 ರು. ನಿಗದಿ ಮಾಡಿದೆ. ಅಂದರೆ ಓರ್ವ ವಿದ್ಯಾರ್ಥಿಗೆ ದಿನಕ್ಕೆ 27 ರು. ಖರ್ಚು ಮಾಡಲಾಗುವುದು. ಈ 27 ರು.ಗಳಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಕೊಡಲಾಗುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಮಾತ್ರ ಒಂದು ದಿನಕ್ಕೆ ಒಬ್ಬ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಿದ್ಯಾರ್ಥಿಗಳ ಊಟ, ತಿಂಡಿಗಾಗಿ 50 ರು. ಘೋಷಣೆ ಮಾಡಿದ್ದಾರೆ. ಆದರೆ, ಇದುವರೆಗೂ ಒಂದೇ ಒಂದೂ ರು. ಘೋಷಣೆಯಾಗಿಲ್ಲ.
ಬಹುತೇಕ ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್‌ಗಳ ಆಟ ಹೇಳತೀರದು. ಸರ್ಕಾರ ನೀಡುವ ಸೌಲಭ್ಯಗಳನ್ನು ಗುಳುಂ ಮಾಡಲು ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಶನಿವಾರ, ಭಾನುವಾರ ಮನೆಗೆ ಕಳಿಸುತ್ತಾರೆ. ಊರು ದೂರದಲ್ಲಿದೆ ಅಥವಾ ಬಸ್ ಚಾರ್ಚಿಗೆ ಕಾಸಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರೆ, 'ಈ ಊರಿನಲ್ಲಿ ನಿಂಗೆ ಯಾರೂ ಗೆಳಯರ ಮನೆ ಇಲ್ವೆ? ಅಲ್ಲಿಗೆ ಹೋಗು' ಎಂದು ಗದರಿಸಿ ಕಳುಹಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೀಡುವ ಸೋಪು, ತಲೆಗೆ ಹಾಕುವ ಎಣ್ಣೆ, ಬೆಡ್‌ಶೀಟ್, ಮಾಂಸಾಹಾರವನ್ನೂ ಮಾರಿಕೊಳ್ಳುವ ಜನ ಈ ವಸತಿ ನಿಲಯಗಳಲ್ಲಿ ಇದ್ದಾರೆಂದರೆ ನೀವು ನಂಬುತ್ತೀರಾ?
ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮನೆಯಲ್ಲಿರುವ ನಾಯಿಗಳಿಗೆ ದಿನಕ್ಕೆ ಕನಿಷ್ಠ 100 ರು. ಖರ್ಚು ಮಾಡಲಾಗುತ್ತದೆ. ಅಂದರೆ ಮಾಸಿಕ 3 ಸಾವಿರ ರು. ಆದರೂ ಖರ್ಚು ಮಾಡುತ್ತಾರೆ. ಆದರೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಕೇವಲ 27 ರು.ಗಳನ್ನು ಊಟ, ತಿಂಡಿಗೆ ನೀಡಿ ಮಾಸಿಕ 900 ರಿಂದ 1000 ರು. ನೀಡಲಾಗುತ್ತಿದೆ. ಈ ದುಬಾರಿ ಕಾಲಕ್ಕೆ ಇಷ್ಟು ಕಡಮೆ ಹಣ ಯಾವುದಕ್ಕೆ ಸಾಕಾಗುತ್ತದೆ? ಹಸಿದ ಹೊಟ್ಟೆಗಳಿಗೆ ವಿದ್ಯೆ ಕೊಡುವ ಪ್ರಯತ್ನ ಮಾಡಿದರೆ ತಲೆಗೆ ಹೋಗುವುದಿಲ್ಲ. ಅದು ಬಲವಂತ ಮಾಘಸ್ನಾನವಾಗುತ್ತದೆ ಎಂಬುದನ್ನು ಮೊದಲು ಈ ಸರ್ಕಾರ ಅರಿಯಬೇಕಿದೆ.
ಹಾಸ್ಟೆಲ್‌ಗಳು ಅವ್ಯವಸ್ಥೆಯ ತಾಣಗಳಾಗಿವೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಅಭಾವವೂ ಹೇಳತೀರದು. ಸಮಾಜ ಕಲ್ಯಾಣ ಮತ್ತು ಬಿಸಿಎಂ ಅಧಿಕಾರಿಗಳು ತಮ್ಮ ಹಾಸ್ಟೆಲ್‌ಗಳ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಕೊಡುವ ಅನುದಾನವೂ ಸಾಕಾಗುವುದಿಲ್ಲ. ಈ ನಡುವೆ ಎಲ್ಲಾ ಜವಾಬ್ದಾರಿಗಳನ್ನು ವಾರ್ಡನ್‌ಗಳ ಹೆಗಲಿಗೆ ಹೊರಿಸುವ ಅಧಿಕಾರಿಗಳು ತಾವು ನೆಮ್ಮದಿಯಿಂದ ಇರುವುದನ್ನು ಕಲಿತಿದ್ದಾರೆ. ಆದರೂ ಅಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಮಾತ್ರ ಹೊಣೆಗಾರರಾಗುತ್ತಾರೆಯೇ? ಜಿ.ಪಂ ಅಧಿಕಾರಿಗಳು ದಂಡಕ್ಕೆ ಇದ್ದಾರೆಯೇ? ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ಇಲ್ಲ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು. ಗ್ರಂಥಾಲಯ ಸೌಲಭ್ಯಗಳು ಬೇಕು. ಗ್ರಂಥಾಲಯಕ್ಕೆ ಅಗತ್ಯವಾದ ಪಿಠೋಪಕರಣ ನೀಡಬೇಕು. ಇಂತಹ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇಲ್ಲದೇ ಹೋದರೆ ಅವೆಲ್ಲವೂ ನಿರಾಶ್ರಿತರ ತಾಣವಾಗುತ್ತವೆ.
ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಇತ್ತೀಚೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮುಂದಿನ 6 ತಿಂಗಳೊಳಗೆ ಹಾಸ್ಟೆಲ್‌ಗಳ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ವಾಗ್ದಾನವನ್ನು ಅಧಿಕಾರಿಗಳು ನ್ಯಾಯಮೂರ್ತಿಗಳ ಮುಂದೆ ಮಾಡಿದ್ದಾರಂತೆ. ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಯಾವುದೇ ಒಂದು ಸಮಸ್ಯೆಗೆ ಸರಿಯಾದ ರೀತಿಯ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈಗ 6 ತಿಂಗಳಲ್ಲಿ ಹಾಸ್ಟೆಲ್ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಅಧಿಕಾರಿಗಳು ನೀಡಿರುವ ವಾಗ್ದಾನ ಕೇವಲ ಬೂಟಾಟಿಕೆ. ಈ ವಾಗ್ದಾನಗಳ ಹಿಂದಿರುವ ಅಪ್ರಾಮಾಣಿಕತೆ ಮತ್ತು ನಿರ್ಲಕ್ಷ್ಯ ಮಾತ್ರ ಯಾರಿಗೂ ಅರಿವಾಗುತ್ತಿಲ್ಲ.
ಹಾಸ್ಟೆಲ್‌ಗಳ ನಿರ್ವಹಣೆಯಲ್ಲಿ ಜಿಲ್ಲಾ ಪಂಚಾಯ್ತಿಯ ಆಡಳಿತ ವ್ಯವಸ್ಥೆಗಳು ವಿಫಲವಾಗಿವೆ. ಜಿಪಂ, ತಾಪಂ ಸದಸ್ಯರಂತೂ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಅಮಾವಸ್ಯೆ, ಹುಣ್ಣಿಮೆಗೆ ಕಾಟಾಚಾರದ ಭೇಟಿ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಸಮಸ್ಯೆಗಳು ಮಾತ್ರ ಹಾಗೆ ಉಳಿದು ಬಿಡುತ್ತವೆ. ಅದಕ್ಕೆ ಇರಬೇಕು 'ವಿದ್ಯಾತುರಾಣಾಂ ನ ಸುಖ ನ ನಿದ್ರಾ' ಎಂದು!
- ಕೆ.ಎನ್.ರವಿ
ಕನ್ನಡಪ್ರಭ