ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಯೋತ್ಪಾದನೆ ವಿರುದ್ಧದ ಹೋರಾಟ ಪಾಕ್‌ಗೇಕೆ ಬೇಡ?

ಕೆಲವು ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್‌ನ ನಾಯಕ ...

Vishwanath S
Updated On : 23 Aug 2013, 11:58 am

ಕೆಲವು ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್‌ನ ನಾಯಕ ಇಮ್ರಾನ್ ಖಾನ್. ಅಮೆರಿಕದ ಡ್ರೋನ್ ದಾಳಿಗಳನ್ನು ಖಂಡಿಸಿ ಸಮಾವೇಶವೊಂದನ್ನು ಆಯೋಜಿಸಿದ್ದರು. ಸಮಾವೇಶದ ಎರಡನೆಯ ದಿನ ಖಾನ್, ಡ್ರೋನ್ ದಾಳಿ ಪಾಕಿಸ್ತಾನದ ಸಾರ್ವಭೌಮತೆಗೆ ಹಾನಿ ಮಾಡುತ್ತಿದೆ ಎಂದು ಗುಡುಗಿದರು. ಒಂದು ತಿಂಗಳಲ್ಲಿ ಈ ದಾಳಿಗಳನ್ನು ತಡೆಗಟ್ಟಲು ಪಾಕಿಸ್ತಾನ ಸರ್ಕಾರ ಮುಂದಾಗದಿದ್ದರೆ, ಪಾಕಿಸ್ತಾನದ ರಸ್ತೆ ಮಾರ್ಗಗಳನ್ನು ಬಂದ್ ಮಾಡಿ, ನ್ಯಾಟೋದ ಪೂರೈಕೆಯನ್ನು ನಿಲ್ಲಿಸುವುದಾಗಿ ಎಚ್ಚರಿಕೆ ಕೊಟ್ಟರು. ಮೊದಲನೆಯದಾಗಿ ಚುನಾಯಿತ ಸರ್ಕಾರವೊಂದಕ್ಕೆ, ಅದೂ ಸಾರ್ವಜನಿಕವಾಗಿ 5000 ಕ್ಯಾಮೆರಾಗಳ ಮುಂದೆ ಡೆಡ್‌ಲೈನ್‌ಕೊಡುವುದು ಎಷ್ಟು ಸರಿ? ಆ ಹಕ್ಕು ಇಮ್ರಾನ್‌ಗೆ ಕೊಟ್ಟದ್ದು ಯಾರು? ಎರಡನೆಯದಾಗಿ ಅವರು ಮಾಡಿದ   ಇನ್ನೊಂದು ಎಡವಟ್ಟೆಂದರೆ ಎರಡು ಪಕ್ಷಗಳ ಶಾಸನಸಭೆಯ ಸದಸ್ಯರನ್ನು(ಪಿಎಮ್‌ಎಸ್-ಎನ್ ಮತ್ತು ಪಿಎಮ್‌ಎಲ್-ಕ್ಯು) ತಮ್ಮ ಪಕ್ಷಕ್ಕೆ ಬರಲು ಸಾರ್ವಜನಿಕವಾಗಿ ಆಹ್ವಾನಿಸಿದ್ದು. ಇದು ಎಷ್ಟು ಸರಿ? ಪ್ರತಿ ಬಾರಿಯೂ ಖಾನ್, ತಾವು ನುಡಿದದ್ದಕ್ಕೆ ವಿರುದ್ಧವಾಗಿ ನಡೆದು ತೋರಿಸುತ್ತಾರೆ. ಹೇಳುವುದೊಂದು ಮಾಡುವುದೊಂದು! ಹಿಂದೊಮ್ಮೆ ನವಾಜ್ ಷರೀಫ್ ಇದೇ ರೀತಿ ಕೆಲವು ಪಿಎಮ್‌ಎಲ್-ಕ್ಯು ನಾಯಕರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದಾಗ, ಇದೇ ಖಾನ್ ಮಾಧ್ಯಮಗಳೆದುರು ಆರ್ಭಟಿಸಿದ್ದರು. ಅಲ್ತಾಫ್ ಹುಸೇನ್ ಮತ್ತು ಮಾಜಿ ಸರ್ವಾಧಿಕಾರಿ ಮುಷರಫ್ ಅವರ ಬಗ್ಗೆ ಖಾನ್‌ರ ಮೂದಲಿಕೆಯ ಬಗ್ಗೆ ಎಲ್ಲರಿಗೂ ಗೊತ್ತಿರುವಂತೆಯೇ, ಇತ್ತೀಚೆಗೆ ಅವರಿಬ್ಬರನ್ನೂ ಖಾನ್ ಭೇಟಿಯಾಗಿದ್ದರು ಎನ್ನುವುದು ಕೂಡ ಗೊತ್ತಿರುವಂಥದ್ದೆ.
ಇತ್ತೀಚೆಗೆ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಖಾನ್, ಜನರಲ್ ಅಹಮದ್ ಖ್ವಾಜಾ ಪಾಷಾರನ್ನು(ಗೂಢಚರ ಸಂಸ್ಥೆಯೊಂದರ ಮುಖ್ಯಸ್ಥ) ತಾವು ಭೇಟಿಯಾಗಿದ್ದಾಗಿ ಒಪ್ಪಿಕೊಂಡರು. ಈ ಗೂಢಚರ ಸಂಸ್ಥೆ ಅಮೆರಿಕದ ಡ್ರೋನ್ ದಾಳಿಗಳಿಗೆ ಪ್ರಚೋದನೆ ನೀಡುತ್ತಿದೆ ಎನ್ನುವ ಆರೋಪಗಳಿವೆ! ರಾಜಕೀಯದ ಅರಿವಿಲ್ಲದ ಯುವ ಪಾಕಿಸ್ತಾನದ ಭಾವನೆಗಳಿಗೆ ತಕ್ಕಂತೆ ಇಮ್ರಾನ್ ಖಾನ್ ಬಣ್ಣ ಬದಲಿಸುತ್ತಿದ್ದಾರೆ. ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡದೆ, ಅಲ್ಪಕಾಲಿಕ ಆಸಕ್ತಿಗಳಿಗಾಗಿ ದೇಶದ ದೀರ್ಘಕಾಲಿಕ ಭವಿಷ್ಯವನ್ನು ಅವರು ಬಲಿಕೊಡಲು ಹಿಂದೇಟು ಹಾಕುತ್ತಿಲ್ಲ. ಅವರು ಮತ್ತು ಅವರಂತೆ ವರ್ತಿಸುವ ಇನ್ನುಳಿದ ರಾಜಕಾರಣಿಗಳು ಮಾತುಗಾರಿಕೆಯ ದುರ್ಬಳಕೆಯಿಂದ ಉಂಟಾಗಬಹುದಾದ ಪ್ರಮಾದದ ಬಗ್ಗೆ ಮೊದಲು ಅರಿತುಕೊಳ್ಳಬೇಕು. ಉಗ್ರವಾದದ ವಿರುದ್ಧದ ಹೋರಾಟ ನಮ್ಮ ಕೆಲಸವಲ್ಲ, ಅವರದ್ದು(ಅಮೆರಿಕ) ಎನ್ನುವುದು ನಿಜಕ್ಕೂ ಸ್ವಾರ್ಥ ಮತ್ತು ಅವಕಾಶವಾದಿ ರಾಜಕಾರಣವಲ್ಲದೆ ಮತ್ತೇನು?
ಆದಾಗ್ಯೂ 'ಇದು ನಮ್ಮ ಯುದ್ಧವಲ್ಲ' ಎನ್ನುವ ಮಾಧ್ಯಮ ಪ್ರೇರಿತ ಮಾತು ಹುಟ್ಟಿಕೊಂಡದ್ದು ನಮ್ಮೆಲ್ಲರ (ಪಾಕಿಸ್ತಾನಿಗಳ) ಸಾಮೂಹಿಕ ವಿಸ್ಮೃತಿಯಿಂದಲೇ ಅಲ್ಲವೆ? 1970ರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು, 1979ರ ವೇಳೆಗೆ ನಮ್ಮನ್ನೆಲ್ಲ ಆರ್ಥಿಕ ದಿವಾಳಿಯತ್ತ ಕೊಂಡೊಯ್ದಿತ್ತು. ಬ್ಯಾಂಕ್ ಆಫ್ ಕ್ರೆಡಿಟ್ ಆಂಡ್ ಕಾಮರ್ಸ್ ಎನ್ನುವ ಕುಖ್ಯಾತ ಬ್ಯಾಂಕ್‌ನ ಹೆಸರು ಯಾರಿಗಾದರೂ ನೆನಪಿದ್ದರೆ, ಅವರಿಗೆ ಅಘಾ ಹಸನ್ ಅಬೇದಿ ಮತ್ತು ಉಗ್ರವಾದದಲ್ಲಿ ಆತನ ಹೂಡಿಕೆಯ ಬಗ್ಗೆಯೂ ನೆನಪಿರುತ್ತದೆ. ಪಾಕಿಸ್ತಾನದ ಆರ್ಥಿಕತೆಗೆ ಈ ಬ್ಯಾಂಕ್ ಉಸಿರುಕೊಟ್ಟಿತಾದರೂ ಮುಂದಿನ ದಿನಗಳಲ್ಲಿ ವಿದೇಶಿ ಬಂಡವಾಳದಿಂದ ಮಾತ್ರ ಪಾಕಿಸ್ತಾನ ಬದುಕುಳಿಯಬಹುದು ಎನ್ನುವುದು ಎಲ್ಲರಿಗೂ ಸ್ಪಷ್ಟವಾಯಿತು.
1980ರಲ್ಲಿ ಜಿಯಾ ಸರ್ಕಾರಕ್ಕೆ ಅವಶ್ಯಕವಿದ್ದ ಹಣ ಹರಿದು ಬಂದಿತು. ಆ ಹರಿವಿಗೆ ಹಾದಿ ತೋರಿಸಿದ್ದು ಇಸ್ಲಾಂ ಎಂಬ ಕಾಲುವೆ. ಇದರಿಂದಾಗಿ ಪಾಕಿಸ್ತಾನ ಸೌದಿ ಅರೇಬಿಯಾ ಮತ್ತು ಅಮೆರಿಕಕ್ಕೆ ಹತ್ತಿರವಾಯಿತು. ಅರಬ್ ರಾಷ್ಟ್ರಗಳು 'ಇಸ್ಲಾಂ' ಎಂಬ ಅಜೆಂಡಾದೊಂದಿಗೆ ಪಾಕಿಸ್ತಾನಕ್ಕೆ ಸಹಾಯ ಮಾಡಿದರೆ, ಸಾಮ್ರಾಜ್ಯಶಾಹಿ/ವಿಸ್ತರಣವಾದಿ  ಆಕಾಂಕ್ಷೆಯ ಅಮೆರಿಕ ಸಹಜವಾಗಿಯೇ ಪಾಕಿಸ್ತಾನದತ್ತ ಹೊರಳಿತ್ತು.
ನಾವು ಪೆಟ್ರೋಡಾಲರ್‌ಗಳನ್ನು ಎಣಿಸುತ್ತಾ ಕುಳಿತಿರುವ ವೇಳೆಯಲ್ಲೇ ಸೌದಿಗಳು, ಐಎಸ್‌ಐನಿಂದಲೇ ಆಯ್ಕೆಯಾದ ಮುಜಾಹಿದ್ದಿನ್‌ಗಳನ್ನು ಬೆಳೆಸುತ್ತಾ ಹೋದರು. 'ಅವರಿಗೋಸ್ಕರ' ನಾವು ಅಫ್ಘಾನಿಸ್ತಾನದಲ್ಲಿ ಹೋರಾಡಿದೆವು. 'ಶತ್ರುಗಳೊಂದಿಗೆ' ಹೋರಾಡಲು ನಮ್ಮ ಯುವಕರನ್ನು ಮುಜಾಹಿದ್ದಿನ್‌ಗಳಾಗಿ ಕಳುಹಿಸಿದೆವು. ಆದರೆ ಯಾವ ಶತ್ರುಗಳು, ನಾವು ಯಾರ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವುದನ್ನು ಮಾತ್ರ ನಾವು ಕೇಳಲಿಲ್ಲ! ನಮ್ಮ ನೆಲದಲ್ಲೇ ಉಗ್ರರು ತರಬೇತಿ ಪಡೆದು ಕೊಬ್ಬುತ್ತಾ ಹೋದರೂ ನಾವು ತಲೆಕೆಡಿಸಿಕೊಳ್ಳಲಿಲ್ಲ.
ಆ ಯುದ್ಧವನ್ನು ಗೆದ್ದೆವೆಂದು ಭಾವಿಸಿ ಸುತ್ತಲೂ ತಿರುಗಿ ನೋಡಿದರೆ ಅಲ್ಯಾರೂ ಇರಲಿಲ್ಲ! ಯಾರ ವಿರುದ್ಧ, ಯಾಕಾಗಿ ಹೋರಾಡಿದೆವೋ ತಿಳಿಯಲಿಲ್ಲ. ನಾವು ಏಕಾಂಗಿಯಾಗಿದ್ದೆವು. ಈ ಯುದ್ಧದಲ್ಲಿ ಪಾಕಿಸ್ತಾನಿಗಳು ಪ್ರಾಣಬಿಟ್ಟರು, ನಮ್ಮ ಹಣವೂ ಹೋಯಿತು.
ಬಹುಶಃ ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರ ನೆನಪಿನ ಶಕ್ತಿ 2004ಕ್ಕಿಂತಲೂ ಹಿಂದಕ್ಕೆ ಹೋಗುತ್ತಿಲ್ಲ ಎನಿಸುತ್ತದೆ. ಅಮೆರಿಕ, ಡ್ರೋನ್ ದಾಳಿ ಶುರುಮಾಡಿದ ಸಮಯದಿಂದಲೇ ಪಾಕಿಸ್ತಾನದಲ್ಲಿ ಉಗ್ರವಾದ ಶುರುವಾಯಿತು ಎಂದವರು ಭಾವಿಸುತ್ತಾರೆ. ಹಾಗಿದ್ದರೆ 1988ರಲ್ಲಿ ತೆಹ್ರೀಕೆ ತಾಲಿಬಾನ್‌ನ ನಾಯಕ ಅಲ್ಲಮಾ ಹುಸ್ಸೇನಿಯ ಹತ್ಯೆಯಾದ ನಂತರದ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಏನಾಯಿತು? ಯಾವ ರೀತಿ ಉಗ್ರರ ಅಟ್ಟಹಾಸ ಮೇರೆ ಮೀರಿತು ಎನ್ನುವುದು ಖಾನ್‌ರ ಸ್ಮೃತಿಪಟಲದಿಂದ ಅಳಸಿಹೋಗಿದೆಯೇ? ಪಾಕಿಸ್ತಾನಿ ನಾಗರಿಕರ ಮೇಲೆ, ಪಾಕಿಸ್ತಾನದ ಮೇಲೆ ಉಗ್ರವಾದ ನಡೆಸುತ್ತಿರುವವರಿಗೆ ನಾವೇ ತರಬೇತಿ ಕೊಟ್ಟಿದ್ದೇವೆ, ನಮ್ಮ ರಕ್ಷಣಾ ಸಾಮಗ್ರಿಗಳಿಂದಲೇ ಅವರು ತರಬೇತಿ ಪಡೆದರು ಎನ್ನುವುದನ್ನು ಬಹುತೇಕ ಪಾಕಿಸ್ತಾನಿಗಳು ಮರೆತಂತೆ ವರ್ತಿಸುತ್ತಿದ್ದಾರೆ ಅಥವಾ ಮರೆತಿದ್ದಾರೆ. ಈ ತರಬೇತಿ ಪಡೆದ ಉಗ್ರರು ಅಫ್ಘಾನಿಸ್ತಾನದಲ್ಲಿ 'ನಮಗಾಗಿ' ಯುದ್ಧ ಮಾಡಿದರಂತೆ(ನಿಜವಾಗಿಯೂ?), ಅಷ್ಟೇ ಅಲ್ಲದೆ 'ನಮಗೋಸ್ಕರ' ಅವರು ಕಾಶ್ಮೀರದಲ್ಲೂ ಯುದ್ಧ ನಡೆಸುತ್ತಿದ್ದಾರಂತೆ, ಅದೂ ನಮ್ಮ ಸಂಪತ್ತನ್ನೇ ಬಳಸಿಕೊಂಡು!
ನಾವು ಹುಟ್ಟುಹಾಕಿದ ಧಾರ್ಮಿಕ ಮತ್ತು ಅಂಧಾಭಿಮಾನಿ ರಾಕ್ಷಸ ಇಂದು ನಮ್ಮನ್ನೇ ಕಾಡುತ್ತಿದ್ದಾನೆ. ನಾವೇ ತೋಡಿದ ತಗ್ಗಿನಲ್ಲೀಗ ಬಿದ್ದಿದ್ದೇವೆ. 90ರ ದಶಕದುದ್ದಕ್ಕೂ ನಾವು ತಾಲಿಬಾನಿಗಳನ್ನು ಬೆಳೆಸಿದೆವು. ಈಜಿಪ್ತ್‌ನ ರಾಯಭಾರ ಕಚೇರಿಯ ಮೇಲೆ 1996ರಲ್ಲಾದ ದಾಳಿ ಭಯೋತ್ಪಾದನೆಯಲ್ಲವೇ? 1996ರಲ್ಲಿ ಲಾಹೋರ್ ಸೆಷನ್ಸ್ ಕೋರ್ಟ್‌ನ ಮೇಲಾದ ದಾಳಿ ಉಗ್ರವಾದವಲ್ಲವೇ? ಅದೇ ವರ್ಷ ಮುಲ್ತಾನ್ ಮಸೀದಿಯ ಹತ್ಯಾಕಾಂಡ ನಡೆಯಿತಲ್ಲ, ಅದಕ್ಕೆ ಏನೆಂದು ಹೆಸರಿಡಬೇಕು?
1997ರಲ್ಲಿ ಕರಾಚಿಯಲ್ಲಿ 4 ಅಮೆರಿಕನ್ನರನ್ನು ಕೊಂದದ್ದು, 2000ದಲ್ಲಿ ಕರಾಚಿ ಮತ್ತು ಹೈದ್ರಾಬಾದ್‌ನಲ್ಲಾದ ಸ್ಫೋಟಗಳು, 2001ರ ಮಾರ್ಚ್‌ನಲ್ಲಿ ತೋರ್ಖಂನಲ್ಲಿ, ಅದೇ ವರ್ಷದ ಜುಲೈ ತಿಂಗಳು ಹೈದ್ರಾಬಾದ್ ಮತ್ತು ಇಸ್ಲಾಮಾಬಾದ್‌ನಲ್ಲಾದ ದಾಳಿ, ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೋಯ್ನುದ್ದೀನ್ ಹೈದರ್‌ನ ಸಹೋದರನ ಹತ್ಯೆ....ಇವೆಲ್ಲ ಏನು? ಚಿಕ್ಕ ಮಕ್ಕಳ ಆಟವೇ ಅಥವಾ ಉಗ್ರವಾದವೇ?
ಖಾನ್‌ರಿಗೆ ನನ್ನ ಪ್ರಶ್ನೆಯಿಷ್ಟೆ- ಉಗ್ರವಾದದ ವಿರುದ್ಧದ ಹೋರಾಟ ನಮ್ಮದಲ್ಲದಿದ್ದರೆ ಅದು ಯಾರಿಂದ, ಯಾರಿಗಾಗಿ ಮತ್ತು ಯಾರಿಗೋಸ್ಕರ ಇರುವಂಥದ್ದು? ಅಥವಾ 'ನಮ್ಮದು' ಎನ್ನುವಷ್ಟು ಆಪ್ತರಾಗಿ ಬಿಟ್ಟಿದ್ದಾರೆಯೇ ಪಾಕಿಸ್ತಾನಿಗಳಿಗೆ ಉಗ್ರರು? ನಿಜ ಹೇಳಬೇಕೆಂದರೆ ನಾವೆಲ್ಲ ಸ್ವಯಂ ವಿನಾಶಕ್ಕಿಳಿದ ರೋಗ್ರಗ್ರಸ್ಥ ರಾಕ್ಷಸರಾಗಿಬಿಟ್ಟಿದ್ದೇವೆ.
ಡಾಲರ್‌ಗಳ ದಾಹಕ್ಕೆ ಬಿದ್ದಿರುವ ನಮ್ಮ ಆಡಳಿತ ವರ್ಗ ತಮ್ಮ ಸ್ವಾರ್ಥಕ್ಕಾಗಿ ಸಾಮಾನ್ಯ ಪಾಕಿಸ್ತಾನಿಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ನಮ್ಮ ಭದ್ರತೆಯ ಹೊಣೆ ಹೊತ್ತಿರುವವರಿಗೆ ಬಹಳಷ್ಟು ಪ್ರಶ್ನೆಗಳು ಕೇಳುವುದು ಬಾಕಿ ಉಳಿದಿದೆ. ದೇಶದಲ್ಲಾಗುತ್ತಿರುವ ಇಷ್ಟೊಂದು ಭಯೋತ್ಪಾದನಾ ಕೃತ್ಯಗಳು ಒಂದು ವಿಷಯವನ್ನಂತೂ ಸ್ಪಷ್ಟಪಡಿಸುತ್ತವೆ: ನಮ್ಮ ಗುಪ್ತಚರ ವಿಭಾಗ ವೈಫಲ್ಯ ಅನುಭವಿಸುತ್ತಿದೆ, ನಮ್ಮ ಸೇನೆಗೆ ಉಗ್ರರನ್ನು ತಡೆಯಲಾಗುತ್ತಿಲ್ಲ(ಇವರನ್ನೆಲ್ಲ ಖಾನ್ ಹಾದಿತಪ್ಪಿದ ಹಳ್ಳಿಗಾಡಿನ ಜನರು ಎಂದು ಕರೆಯುತ್ತಾರೆ), ನಮ್ಮ ಸರ್ಕಾರ ಉಗ್ರರಿಗೆ ಉಚಿತವಾಗಿ ಸ್ಫೋಟಕ ವಸ್ತುಗಳನ್ನು ಕೊಡುತ್ತಿದೆ ಮತ್ತು ಸಾರಿಗೆ ಸ್ವಾತಂತ್ರ್ಯವನ್ನೂ ಅವರಿಗೆ ಕಲ್ಪಿಸಿಕೊಟ್ಟಿದೆ!
ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೂ ಇಂದು ಕಟಕಟೆಗೆ ತರಬೇಕಾದ ಅವಶ್ಯಕತೆಯಿದೆ. ಇದುವರೆಗೂ ಉಗ್ರವಾದದ ಆರೋಪ ಹೊತ್ತವರಲ್ಲಿ ಯಾರೊಬ್ಬರೂ ಶಿಕ್ಷೆ ಅನುಭವಿಸಿಲ್ಲ, ಏಕೆ? ಡ್ರೋನ್ ದಾಳಿಯ ವಿರುದ್ಧ ರ್ಯಾಲಿ ನಡೆಸುತ್ತಿರುವ ಯಾವೊಬ್ಬ ರಾಜಕಾರಣಿಯೂ ಕೂಡ ಇತ್ತೀಚೆಗೆ ಕರಾಚಿಯಲ್ಲಿನ ನೌಕಾ ಬಸ್‌ಗಳ ಮೇಲಾದ ಉಗ್ರರ ದಾಳಿಯನ್ನು ಅದೇಕೆ ಖಂಡಿಸುತ್ತಿಲ್ಲ? ಮೊದಲು, ಉಗ್ರರು ಅಮಾಯಕರು ಎಂಬ ಪೊಳ್ಳುವಾದವನ್ನು  ಕಿತ್ತೆಸೆಯಬೇಕು ಹಾಗೂ ಅವರೆಂದಿಗೂ ನಮ್ಮ ಸ್ನೇಹಿತರಾಗಲು ಅರ್ಹರಲ್ಲ ಎನ್ನುವ ಧೋರಣೆಯನ್ನು ನಾವೆಲ್ಲ ತಳೆಯಬೇಕು. ಅವರು ನಮ್ಮ ಜನರನ್ನು ಕೊಲ್ಲುತ್ತಾರೆಂದರೆ, ನಮ್ಮ ಸೇನೆಯ ವಿರುದ್ಧ ಹೋರಾಡುತ್ತಾರೆ, ನಮ್ಮ ಬಾಜಾರುಗಳನ್ನು, ಮಸೀದಿಗಳನ್ನು ಸ್ಫೋಟಿಸುತ್ತಾರೆಂದರೆ ಅವರೆಲ್ಲ ನಮ್ಮ ಶತ್ರುಗಳಲ್ಲದೇ ಮತ್ತೇನು? ಇದು ನಿಜಕ್ಕೂ 'ನಮ್ಮ ಯುದ್ಧ'ವಾಗಬೇಕಲ್ಲವೆ?

- ಮಾರ್ವಿ ಸಿರ್ಮದ್
ಪಾಕಿಸ್ತಾನಿ ಪತ್ರಕರ್ತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement