ಅಂಕಣಗಳು

ಅರ್ಥವಿಲ್ಲದ ಉಪಚುನಾವಣೆಗೆ ನಮ್ಮ ತೆರಿಗೆ ಹಣ ವ್ಯರ್ಥ

ಇದನ್ನು ಅಹಂಕಾರಗಳ ಕಾದಾಟವೆಂದಾದರೂ ಕರೆಯಿರಿ, ವ್ಯಕ್ತಿತ್ವಗಳ ಜಟಾಪಟಿ/ ಮಾಡು ಇಲ್ಲವೇ ಮಡಿ ಹೋರಾಟ/ ಶಕ್ತಿ ಪರೀಕ್ಷೆ.

ಇದನ್ನು ಅಹಂಕಾರಗಳ ಕಾದಾಟವೆಂದಾದರೂ ಕರೆಯಿರಿ, ವ್ಯಕ್ತಿತ್ವಗಳ ಜಟಾಪಟಿ/ ಮಾಡು ಇಲ್ಲವೇ ಮಡಿ ಹೋರಾಟ/ ಶಕ್ತಿ ಪರೀಕ್ಷೆ. ಏನಾದರೂ ಹೆಸರಿಡಿ. ಆದರೆ ಅದಕ್ಕೆ ನೀಡಿದ ಪ್ರಾಮುಖ್ಯ ಮತ್ತು ಮಾಡಿದ ಖರ್ಚು ಅಗತ್ಯವಾಗಿತ್ತೇ? ಹೌದು, ನಾನು ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳಿಗಾಗಿ ನಡೆದ ಎರಡು ಉಪಚುನಾವಣೆಗಳ ಬಗ್ಗೆಯೇ ಮಾತನಾಡುತ್ತಿದ್ದೇನೆ. ಜನತೆಯೂ ಆ ಬಗ್ಗೆಯೇ ಮಾತನಾಡುತ್ತಿದ್ದಾರೆ...
-ಪ್ರಸಕ್ತ ಲೋಕಸಭೆಯ ಅವಧಿ ಮುಗಿಯಲು ಕೇವಲ 9 ತಿಂಗಳುಗಳಷ್ಟೇ ಉಳಿದಿರುವಾಗ ಬೊಕ್ಕಸದ ಅಮೂಲ್ಯ ಹಣವನ್ನು ಈ ಎರಡು ಉಪ ಚುನಾವಣೆಗಳಿಗಾಗಿ ಖರ್ಚು ಮಾಡಿದ್ದು ಏಕೆ? ಹೊಸದಾಗಿ ಆಯ್ಕೆಯಾದ ಎಂಪಿಗಳು ಈ ಚಿಕ್ಕ ಸಮಯದಲ್ಲಿ ಏನು ಮಾಡಬಲ್ಲರು?
- ಈ ಎರಡು ಸ್ಥಾನಗಳು ಖಾಲಿಯಾದದ್ದು ಏಕೆ ಎನ್ನುವುದು ನಿಮಗೆ ಗೊತ್ತಿದೆಯೇ? ಇಬ್ಬರು ಸಂಸತ್ ಸದಸ್ಯರಿಗೆ, ತಮ್ಮ ಇರುವು ಸಂಸತ್ತಿನಲ್ಲಿರುವುದಕ್ಕಿಂತಲೂ ವಿಧಾನಸಭೆಯಲ್ಲಿರುವುದು ಅತಿ ಅವಶ್ಯಕ ಎಂದು ಅನಿಸಿದ ಏಕೈಕ ಕಾರಣಕ್ಕೆ! ಹಾಗಾಗೇ ಅವರು ತಮ್ಮ ಲೋಕಸಭಾ ಸ್ಥಾನಗಳನ್ನು ಬದಿಸರಿಸಿ ಅಸೆಂಬ್ಲಿ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ತಮಗೆ ಜವಾಬ್ದಾರಿ ನಿರ್ವಹಿಸಲು ಆಗುವುದಿಲ್ಲ ಎಂದು ಗೊತ್ತಿದ್ದರೂ ಕೂಡ ಅವರು ಸಂಸತ್ ಚುನಾವಣೆಗಳಿಗೆ ಸ್ಪರ್ಧಿಸಿದ್ದೇಕೆ? ತಮ್ಮ ತಪ್ಪು ಎಣಿಕೆಯ ಕಾರಣದಿಂದಾಗಿ ನಡೆದ ಉಪಚುನಾವಣೆಗಳಿಂದ ಸರ್ಕಾರದ ಬೊಕ್ಕಸ ಎಷ್ಟು ಖಾಲಿಯಾಗುತ್ತದೆ ಎನ್ನುವುದನ್ನು ಅವರು ವಿಚಾರ ಮಾಡಿದ್ದರೆ?
- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜಿನಾಮೆ ನೀಡಿ ಉಪ ಚುನಾವಣೆಗಳಿಗೆ ಕಾರಣರಾದವರಲ್ಲಿ ಒಬ್ಬರು. ಸಂಸತ್ತಿನಲ್ಲಿ ಅವರ ಹಾಜರಿ ಪ್ರಮಾಣ ಕೇವಲ 32 ಪ್ರತಿಶತದಷ್ಟಿದೆ. ಇನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಅವರು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಇವರ ಕಥೆಯೇ ಹೀಗಾದಮೇಲೆ ಈಗ ಹೊಸತಾಗಿ ಆಯ್ಕೆಯಾಗಿರುವವರಿಂದ ಅದೂ ಇಷ್ಟೊಂದು ಕಡಿಮೆ ಸಮಯದಲ್ಲಿ ಏನು ಆಶಿಸಲು ಸಾಧ್ಯ? ಒಂದು ವೇಳೆ ಸಾರ್ವತ್ರಿಕ ಚುನಾವಣೆಗಳು ಮುಂಚಿತವಾಗಿಯೇ, ಅಂದರೆ ಎರಡು ಮೂರು ತಿಂಗಳಲ್ಲೇ ನಡೆದರೆ ಅವರೇನು ಮಾಡುತ್ತಾರೆ? ಮಾಡಬಲ್ಲರು?
- ಸಂಸತ್ ಸದಸ್ಯನೊಬ್ಬ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿ ಶಾಸಕನಾಗುವುದು, ಮತ್ತೆ ಹಿಂದಿರುಗಿ ಮೊದಲಿದ್ದ ಸ್ಥಾನಕ್ಕೆ ಹೋಗುವಂಥ ನಡೆಗೆ ಸೂಕ್ತ ನಿಯಮಗಳಿರಬೇಕಲ್ಲವೇ? ಸಾರ್ವಜನಿಕರ ಹಣ ಬಳಕೆಯಾಗುವ ಉಪಚುನಾವಣೆಗಳನ್ನು ಆಗ ತಡೆಗಟ್ಟಬಹುದು. ಅದಕ್ಕಿಂತಲೂ ಹೆಚ್ಚಾಗಿ, ಕೆಲವು ಸಂಸತ್ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡದೆಯೇ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದನ್ನು ನಾವು ನೋಡಿದ್ದೇವೆ. ಒಂದು ವೇಳೆ ಚುನಾವಣೆಯಲ್ಲಿ ಅವರು ಸೋತರೂ, ಎಂಪಿಆಗಿ ಅವರ ಸ್ಥಾನ ಮಾತ್ರ ಭದ್ರವಾಗಿರುತ್ತದೆ.
-ಇನ್ನು ಮತದಾರರ ಕಥೆಯೇನು? ರಾಜಿನಾಮೆ ನೀಡುವ ಮೂಲಕ ಈ ಇಬ್ಬರು ಸಂಸತ್ ಸದಸ್ಯರು ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದ ಮತದಾರರಿಗೆ ಅವಮಾನ ಮಾಡಿದಂತಾಗಲಿಲ್ಲವೇ? ಕುರ್ಚಿಯಿಂದ ಕೆಳಗಿಳಿಯುವಾಗ ಅವರು ಮತದಾರರೊಂದಿಗೆ ಈ ಬಗ್ಗೆ ಚರ್ಚಿಸಿದರೆ? ಅವರಿಂದ ಉತ್ತರ ಪಡೆಯುವ ಹಕ್ಕು ಮತದಾರರಿಗಿಲ್ಲವೇ? ಉತ್ತರದಾಯಿತ್ವವೆನ್ನುವುದಕ್ಕೆ ರಾಜಕೀಯದಲ್ಲಿ ಜಾಗವೇ ಇಲ್ಲವೇ?
ಚುನಾಯಿತ ಪ್ರತಿನಿಧಿಗಳು ಮೊದಲು ಈ ಬಗ್ಗೆ ವಿಚಾರ ಮಾಡಬೇಕು. ಮತದಾರರ ಬಗ್ಗೆ ಅಸಡ್ಡೆ ತಾಳುವುದನ್ನು ಅವರು ಬಿಡಬೇಕು. ತಮ್ಮ ಅನುಕೂಲಕ್ಕೆ, ಆಡಂಬರಕ್ಕೆ ಸಾರ್ವಜನಿಕ ಹಣವನ್ನು ಪೋಲು ಮಾಡುವುದರಲ್ಲಿ ಅರ್ಥವಿದೆಯೇ? ಇದು ಸಮರ್ಥನೀಯವೇ? ಚುನಾಯಿತ ಪ್ರತಿನಿಧಿಗಳಿಗೆ ಒಂದು ಜವಾಬ್ದಾರಿಯಿರುತ್ತದೆ. ಜನತೆಯ ಪ್ರಶ್ನೆಗಳಿಗೆ ಅವರು ಉತ್ತರಿಸಲೇಬೇಕು.
ಇನ್ನು ಮತದಾನದ ದಿನ ಅತಿ ಕಡಿಮೆ ಜನರು ಮತಗಟ್ಟೆಗಳಿಗೆ ಬಂದದ್ದನ್ನು ನೋಡಿದರೆ, ಅವರೆಲ್ಲ ಪದೇ ಪದೇ ಎದುರಾಗುವ ಚುನಾವಣೆಗಳಿಂದ ಬಹಳ ಬೇಸತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 2009 ರಂದು ಮತದಾನ ಮಾಡಿದವರ ಸಂಖ್ಯೆ 58 ಪ್ರತಿಶತವಿದ್ದರೆ, ಈ ಬಾರಿ ಅದು 46 ಪ್ರತಿಶತಕ್ಕೆ ಇಳಿದಿದೆ. ಈ ಬಾರಿ ಮಂಡ್ಯದಲ್ಲಿ ಮತದಾನ ಮಾಡಿದವರ ಸಂಖ್ಯೆ 52 ಪ್ರತಿಶತವಿದ್ದರೆ, 2009ರಲ್ಲಿ ಅದು 69 ಪ್ರತಿಶತದಷ್ಟಿತ್ತು. ಮತದಾರರು ಚುನಾವಣಾ ಆಯಾಸದಿಂದ ಬಳಲುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಇನ್ನು ಸ್ಥಳೀಯ ರಾಜಕಾರಣಿಗಳೂ ಕೂಡ ಜನರನ್ನು ಕಲೆಹಾಕುವುದರಲ್ಲಿ ಉತ್ಸುಕತೆ ತೋರಿಸಲಿಲ್ಲ.
ಕರ್ನಾಟಕ,  ಉಪಚುನಾವಣೆಗಳಿಗೆ ವ್ಯರ್ಥ ಖರ್ಚು ಮಾಡಿದ್ದಕ್ಕಷ್ಟೇ ಅಲ್ಲದೆ ಕೆಟ್ಟ ರಾಜಕೀಯದಾಟಕ್ಕೂ ಸಾಕ್ಷಿಯಾಯಿತು. ಪರಸ್ಪರ ಕೆಸರೆರಚಿಕೊಳ್ಳುತ್ತಿದ್ದ, ಮುಖ ಕಂಡರಾಗದ ಮುಖಂಡರು ಹಠಾತ್ತಾಗಿ ಸ್ನೇಹಿತರಾಗಿಬಿಟ್ಟರು. ಜೆಡಿಎಸ್- ಬಿಜೆಪಿ ಆಳ್ವಿಕೆಯಲ್ಲಿ ಯಡಿಯೂರಪ್ಪ ಅವರಿಗೆ ಕೈ ಕೊಟ್ಟಿದ್ದ ಕುಮಾರಸ್ವಾಮಿ, ಈ ಬಾರಿ ಅವರನ್ನು ಆಪ್ತವಾಗಿ ತಬ್ಬಿಕೊಂಡದ್ದನ್ನು ನೋಡಿ ಎಲ್ಲರೂ ಹುಬ್ಬೇರಿಸಿದರು. ರಾಜಕೀಯ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡವು. ಜೆಡಿಎಸ್‌ನೊಂದಿಗೆ ರಹಸ್ಯ ಸಂಬಂಧವನ್ನು ಬಿಜೆಪಿ ಬೆಳೆಸಿತು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ, ಬಿಜೆಪಿಯ ನಾಯಕರು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಷ್ಟು!
ಅಲ್ಲದೆ ಈ ಉಪಚುನಾವಣೆ ದೇವೇಗೌಡ ಕುಟುಂಬ ಮತ್ತು ಸಿದ್ದರಾಮಯ್ಯ ಅವರ ನಡುವಿನ ಕಾಳಗದ ರೂಪವನ್ನೂ ಪಡೆಯಿತು. ಸಿದ್ದರಾಮಯ್ಯ ಒಂದೊಮ್ಮೆ ದೇವೇಗೌಡರ ಮೆಚ್ಚಿನ ಹುಡುಗನಾಗಿದ್ದರು. ಆದರೆ ಯಾವಾಗ ಗೌಡರು ತಮ್ಮ ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡತೊಡಗಿದರೋ, ಆಗ ಸಿದ್ದು ಜೆಡಿಎಸ್‌ನಿಂದ ಎದ್ದು ಹೊರಬಂದರು. ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರಬಂದಿದ್ದಷ್ಟೇ ಅಲ್ಲದೆ, ಕಾಂಗ್ರೆಸ್ ಸೇರಿ ರಾಜ್ಯದ ಮುಖ್ಯಮಂತ್ರಿಯಾದರು. ಈಗ ಇದನ್ನು ಅರಗಿಸಿಕೊಳ್ಳಲು ಗೌಡರ ಕುಟುಂಬಕ್ಕೆ ಆಗುತ್ತಿಲ್ಲ. ಹಾಗಾಗೆ ಅವರು ಶತ್ರುಗಳೊಂದಿಗೆ ಕೈ ಜೋಡಿಸಿರುವುದು.
ನಿಜಕ್ಕೂ ಬೇಸರ ತರಿಸುವ ವಿದ್ಯಮಾನಗಳಿವು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಸಮಯದಲ್ಲಿ ನಮ್ಮಲ್ಲಿ
ಅನವಶ್ಯಕ ಚುನಾವಣೆಗಳನ್ನು ನಡೆಸಿ ದುಂದುವೆಚ್ಚ ಮಾಡಲಾಗುತ್ತಿದೆ. ರೋಮ್‌ನಗರ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಾ ಕುಳಿತಿದ್ದನಂತೆ. ನಮ್ಮಲ್ಲಿಯೂ ಹಾಗೇ ಆಗುತ್ತಿದೆ.

ಕೊನೆಯ ಗುಟುಕು: ಹಲವು ವಿಷಯಗಳ ಮೇಲೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಆಗಾಗ ಜಟಾಪಟಿ ನಡೆಯುವುದನ್ನು ನೋಡುತ್ತಲೇ ಇರುತ್ತೇವೆ. ಆದರೆ ಈ ಕೆಳಕಂಡ ವಿಷಯಗಳಲ್ಲಿ ಮಾತ್ರ ಅವುಗಳದ್ದು ಭಾರಿ ದೋಸ್ತಿ.

ಸಂಬಳ ಹೆಚ್ಚಳ: ತಮಗೆ ಸಂಬಳ ಹೆಚ್ಚು ಮಾಡಿದ ಕಾರಣಕ್ಕಾಗಿ ಯಾರಾದರೂ ತಗಾದೆ ತೆಗೆದದ್ದನ್ನು ನೋಡಿದ್ದೀರಾ?

ಕ್ರಿಮಿನಲ್ ಹಿನ್ನೆಲೆ: ಕ್ರಿಮಿನಲ್ ಹಿನ್ನೆಲೆಯ ಎಂಪಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನ ಆದೇಶವನ್ನು ಹತ್ತಿಕ್ಕಲು ಎಲ್ಲಾ ಪಕ್ಷದ ಎಂಪಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಲ್ಲವೇ?

ಆರ್‌ಟಿಐ ವ್ಯಾಪ್ತಿ:
ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದು ಬೇಡ ಎನ್ನುವುದಕ್ಕೆ ಎಲ್ಲಾ ರಾಜಕಾರಣಿಗಳೂ ಒಗ್ಗಟ್ಟಾಗಿ ದನಿ ಸೇರಿಸುತ್ತಿದ್ದಾರೆ ಎನ್ನುವುದು ನಿಮಗೆ ಗೊತ್ತೆ? ಇದರಿಂದ ನಮಗೆ ಆಶ್ಚರ್ಯವಾಗಿದೆಯೇ? ನಿಸ್ಸಂಶಯವಾಗಿಯೂ ಇಲ್ಲ!

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ