ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪತ್ರಕರ್ತರಿಗೆ ಲೈಸೆನ್ಸ್ ಎನ್ನೋರಿಗೆ ಯಾವ ಡಿಗ್ರಿ?

Vishwanath S
Updated On : 26 Aug 2013, 12:30 pm

ತಾ. 22.8.2013ರ (ಕ.ಪ್ರ.) ಸಂಪಾದಕೀಯ "ಪತ್ರಕರ್ತರಿಗೆ ಲೈಸೆನ್ಸ್: ಕೆಟ್ಟ ಸಲಹೆ" ಯ ಬಗ್ಗೆ ಒಂದೆರಡು ಮಾತು. ಕೇಂದ್ರ ವಾರ್ತಾ ಸಚಿವ ಮನೀಷ್ ತಿವಾರಿ ಅವರು ಪತ್ರಕರ್ತರಿಗೆ ಪರೀಕ್ಷೆ ನಡೆಸಿ ಲೈಸೆನ್ಸ್ ನೀಡುವ ಆಲೋಚನೆಯನ್ನು ಮಾಡಿರುವುದೇ ತಪ್ಪು. ಪತ್ರಿಕೋದ್ಯಮ ಒಂದು ಪವಿತ್ರ ಕ್ಷೇತ್ರ. ಪವಿತ್ರತೆಗೆ ಪಾಸು-ಫೇಲು ಎಂಬ ನಾಮಾಂಕಿತಗಳು ಅಪಹಾಸ್ಯಕ್ಕೆ ಗುರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಸಂಪಾದಕರು ಅಭಿಪ್ರಾಯಪಟ್ಟಂತೆ ಪತ್ರಿಕಾ ವ್ಯವಸಾಯಕ್ಕೆ ಪ್ರವೇಶಿಸುವವರಿಗೆ ಲಭಿಸುತ್ತಿರುವ ಶಿಕ್ಷಣದಲ್ಲಿ ಲೋಪ-ದೋಷಗಳನ್ನು ಹೋಗಲಾಡಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ತಾವೇ ಹೇರಿಕೊಂಡು ಈ ಕ್ಷೇತ್ರಕ್ಕೆ ಧುಮುಕುತ್ತಾರೆ ಎಂಬ ಸತ್ಯವನ್ನು ಸಚಿವರು ಮನಗಾಣಬೇಕು.
ಪತ್ರಿಕಾ ವ್ಯವಸಾಯಕ್ಕೆ ಪ್ರವೇಶವನ್ನು ಪಡೆಯಲು ಸರ್ಕಾರದ ಸರ್ಟಿಫಿಕೇಟ್ ಅಗತ್ಯ ಎನ್ನುವುದಾದರೆ ದೇಶವನ್ನು ಆಳುವ ರಾಜಕಾರಣಿಗಳಿಗೆ ವಿದ್ಯೆ ಅತ್ಯವಶ್ಯವಾಗಬೇಕು. ಐಐಎಸ್, ಐಪಿಎಸ್ ಅಧಿಕಾರಿಗಳು ವಿದ್ಯೆಯೇ ಇಲ್ಲದ, ಅಲ್ಪವಿದ್ಯೆಯ, ಡಿಗ್ರಿ ಪಡೆಯದ ಶಾಸಕರು, ಸಚಿವರುಗಳ ಮುಂದೆ ಕೈ ಕಟ್ಟಿ ನಿಲ್ಲುವ ದೃಶ್ಯಗಳು ಕರುಳು ಕಿವಿಚಿದಂತಾಗುತ್ತದೆ. ದಿವಂಗತ ರಾಮಕೃಷ್ಣ ಹೆಗಡೆಯವರು ಆಸ್ಪತ್ರೆಯಲ್ಲಿದ್ದಾಗ ಒಬ್ಬ ಐಎಎಸ್ ಅಧಿಕಾರಿ ಅವರ ಮುಂದೆ ಕೈ ಕಟ್ಟಿ ನಿಂತಾಗ, "ನಿಮ್ಮಂಥವರು ಕೈ ಕಟ್ಟಿ ನಿಲ್ಲಬಾರದು" ಎಂದು ಹಿತವಚನವನ್ನು ಹೇಳಿದ್ದು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ರಾಜಕೀಯ ಕ್ಷೇತ್ರದಲ್ಲಿ ಮೊದಲು ಶುದ್ಧೀಕರಣವಾಗಲಿ. ನಗರಸಭಾ ಸದಸ್ಯ, ಶಾಸಕ, ಸಂಸದರಾಗಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಬೇಕಾದ್ದು ಅತ್ಯವಶ್ಯಕ. ಅವಿದ್ಯಾವಂತ ರಾಜಕಾರಣಿಗಳು ಒಳ್ಳೆ ಆಡಳಿತವನ್ನು ಕೊಟ್ಟಿರುವುದು ನಿಜ; ಅಂತೆಯೇ ವಿದ್ಯಾವಂತ ರಾಜಕಾರಣಿಗಳು ಕೆಟ್ಟ ಆಡಳಿತವನ್ನು ಕೊಟ್ಟಿರುವುದೂ ಅಷ್ಟೇ ಸತ್ಯ. ಕಂಡದ್ದನ್ನು ಕಂಡ ಹಾಗೆ ಹೇಳುವುದು ಪತ್ರಿಕಾಧರ್ಮ. ಈ ಧರ್ಮವನ್ನು ಕಾಪಾಡುವಲ್ಲಿ ಸಮಾಜದ ಹಿತವನ್ನು ಕಾಪಾಡುವ ಜವಾಬ್ದಾರಿಯನ್ನು ಪತ್ರಕರ್ತರು ಎಂದಿಗೂ ಮರೆಯುವುದಿಲ್ಲ.
ಬಗೆಬಗೆಯ ಡಿಗ್ರಿಗಳನ್ನು ಪಡೆದವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂತೆಯೇ ಪತ್ರಿಕೋದ್ಯಮ. ಆರಂಭದ ದಿನಗಳಲ್ಲಿ ಹೊಸ ಪತ್ರಕರ್ತರು ಕಲಿಯಬೇಕಾದ್ದು ಸಾಕಷ್ಟಿರುತ್ತದೆ. ಇವರನ್ನು ತಿದ್ದಿ-ತೀಡಲು ಹಿರಿಯ ಪತ್ರಕರ್ತರು ಸೊಂಟ ಪಟ್ಟಿ ಕಟ್ಟಿದವರು ಸಮಾಜದಲ್ಲಿದ್ದಾರೆ ಎಂಬುದನ್ನು ಸಚಿವರು ಅರ್ಥಮಾಡಿಕೊಳ್ಳಬೇಕು.
ರಾಜಕಾರಣಿಗಳು ಪತ್ರಕರ್ತರನ್ನು ಹಗುರವಾಗಿ ಕಾಣುವ ಮನೋಭಾವವನ್ನು ಇನ್ನು ಮುಂದಾದರೂ ತ್ಯಜಿಸಲಿ. ಸರ್ಕಾರವನ್ನು ನಡೆಸಲು ಕನಿಷ್ಠ ವಿದ್ಯಾರ್ಹತೆಯನ್ನು ಮೊದಲು ಪಡೆದು ನಂತರ ಚುನಾವಣೆಗಳಿಗೆ ಸ್ಪರ್ಧಿಸಬೇಕೆಂಬ ರಾಜ್ಯಾಂಗವು ರಚನೆಯಾಗ ಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ. ಪ್ರಜ್ಞಾವಂತ ರಾಜಕಾರಣಿಗಳು ಇಂತಹ ವಿಷಯಗಳ ಚರ್ಚೆಗೆ ಲೋಕಸಭೆಯಲ್ಲಿ ನಿಲುವಳಿ ಸೂಚನೆಯನ್ನು ತರಲು ಹೋರಾಡಲಿ. ಅತಿ ತುರ್ತಾಗಿ ಬದಲಾವಣೆಗಳು ಆಗಬೇಕಾಗಿರುವುದು ರಾಜಕೀಯ ಕ್ಷೇತ್ರದಲ್ಲಿ. ಇದಕ್ಕಾಗಿ ರಾಜಕಾರಣಿಗಳು ಪಕ್ಷಾತೀತವಾಗಿ ಪ್ರಯತ್ನಿಸಲಿ. ರಾಜಕೀಯ ಕ್ಷೇತ್ರದಲ್ಲಿ ದ್ವೇಷ ಶಾಶ್ವತವಲ್ಲ ಎಂಬುದು ಈಗಾಗಲೇ ಸಾಕಷ್ಟು ಬಾರಿ ರಾಜಕಾರಣಿಗಳ ಅನುಭವಕ್ಕೆ ಬಂದಿರುವುದನ್ನು ಇಡೀ ಸಮಾಜಕ್ಕೆ ತಿಳಿದಿದೆ. ಒಳ್ಳೆಯ ಕೆಲಸಕ್ಕೆ ಹತ್ತು ಹಲವು ರಾಜಕೀಯ ಪಕ್ಷಗಳು ಒಂದಾಗುವುದರಲ್ಲಿ ತಪ್ಪಿಲ್ಲ!

- ಗೋಮಿನಿಪ್ರಿಯ, ಹಿರಿಯ ಪತ್ರಕರ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement