ಸಮುದಾಯಕ್ಕೊಬ್ಬ ಸ್ವಾಮಿ, ಸಂಘಟನೆಯ ನೇಮಿ
ಮಾನವನಿಗೆ ಮೇಧಾವಿ, ಬುದ್ಧಿವಂತ ಮತ್ತು ವಿಚಾರವಂತ ಎಂಬ ಅಭಿದಾನ ಇತರೆ ...
ಮಾನವನಿಗೆ ಮೇಧಾವಿ, ಬುದ್ಧಿವಂತ ಮತ್ತು ವಿಚಾರವಂತ ಎಂಬ ಅಭಿದಾನ. ಇತರೆ ಪ್ರಾಣಿಗಳು ಜಗಳ ಕಾಯುತ್ತವೆ. ಪಕ್ಷಿಲೋಕದಲ್ಲು ಅದು ನಿರೀಕ್ಷಿತ. ಜಲಚರಗಳಾದ ತಿಮಿಂಗಿಲ, ಸಮುದ್ರ ಸಿಂಹ, ವೇಲ್, ಪೆಂಗ್ವಿನ್ ಇತ್ಯಾದಿಗಳಲ್ಲು ಹೊಡೆದಾಟ. ಮಾನವನು ಪ್ರಾಣಿಗಳಂತೆ ಕಾದಾಡುತ್ತಾನೆ. ಅನಿವಾರ್ಯ ಪ್ರಸಂಗದಲ್ಲಿ ಶಾರೀರಿಕವಾದ ಬಡಿದಾಟ. ಬಹಳ ಸಂದರ್ಭಗಳಲ್ಲಿ ಅವನು ಬೌದ್ಧಿಕವಾದ ಬಡಿದಾಟಕ್ಕೆ ಇಳಿಯುತ್ತಾನೆ. ಇದು ಶಸ್ತ್ರಾಸ್ತ್ರಗಳಿಲ್ಲದೆ ನಡೆಯುವಂತಹ ಸಮರ. ಬೌದ್ಧಿಕ ಸಮರವನ್ನು ಸಂಘರ್ಷವೆಂದು ಕರೆಯಬಹುದು. ಮಾನವನು ಇರುವೆಡೆಯಲ್ಲೆಲ್ಲ ಸಂಘರ್ಷ ಸಾಮಾನ್ಯ. ಕೆಲವರು ಸಾಮಾನ್ಯವಾದ ಅಂಶಗಳಿಗಾಗಿ ಸಂಘರ್ಷ ಮಾಡುತ್ತಾರೆ. ಕೆಲವರಾದರು ಅಸಾಮಾನ್ಯ ವಿಚಾರಗಳಿಗಾಗಿ ಸಂಘರ್ಷಕ್ಕೆ ಒಳಗಾಗುತ್ತಾರೆಂಬುದು ದಿಟ. ಅಸಾಮಾನ್ಯ ವಿಚಾರವೆಂದರೆ, ಸಾಮಾಜಿಕ ಸವಾಲುಗಳು. ಸಾಮಾಜಿಕ ಸವಾಲುಗಳಲ್ಲಿ ಅಸಮಾನತೆ (ಜಾತಿ-ವರ್ಣ-ವರ್ಗ-ಲಿಂಗ) ಅವೈಜ್ಞಾನಿಕತೆ, ಅನಕ್ಷರತೆ, ಅಮಾನವೀಯತೆ, ಅನಾಗರಿಕತೆ, ದಾರಿದ್ರ್ಯ, ಅಪೌಷ್ಟಿಕತೆ ಇತ್ಯಾದಿ. ಇವು ಮಾನವ ಕುಲದ ಜಟಿಲ ಸಮಸ್ಯೆಗಳು.
ಕೆಲವರು ಜಾತಿ-ಸಂಘಟನೆ - ಶಿಕ್ಷಣಸಂಸ್ಥೆ-ಧರ್ಮಬೋಧೆ ಇವುಗಳಿಗೆ ಸೀಮಿತ. ಸ್ವಹಿತಾಸಕ್ತಿ. ಸಾರ್ವಜನಿಕ ಹಿತಾಸಕ್ತಿಗೆ ಬದುಕನ್ನು ಕೊಡಬೇಕೆನ್ನುವವರು, ತನ್ನಂತೆ ಇತರೆಯವರು ಬದುಕಬೇಕೆನ್ನುವವರು ಚಳವಳಿಯ ಮಾರ್ಗವನ್ನು ಹಿಡಿಯುತ್ತಾರೆ. ಈ ಮಾರ್ಗದಲ್ಲಿ ನಡೆಯುವವರಿಂದ ಸಾಮಾಜಿಕ ಸುಧಾರಣೆ. ಸಾಮಾಜಿಕ ಸುಧಾರಣೆಯು ನಾವು ಅಂದುಕೊಂಡಷ್ಟು ಸುಲಭವಲ್ಲ. ಸಮಾಜ ಯಾವತ್ತು ಸಂಪ್ರದಾಯಬದ್ಧವಾಗಿರುತ್ತದೆ. ಸುಧಾರಣೆಯ ಹಂತಗಳನ್ನು ಸುಲಭವಾಗಿ ಒಪ್ಪಿಕೊಳ್ಳುವಷ್ಟು ಔದಾರ್ಯ ಇರುವುದಿಲ್ಲ. ಒಮ್ಮೊಮ್ಮೆ ಸುಧಾರಕರೇ ಮೂಲಭೂತವಾದಿಗಳು ಹೆಣೆಯುವ ಹುನ್ನಾರಗಳಿಗೆ ಬಲಿ ಆಗಬೇಕಾಗುತ್ತದೆ. ಅನೇಕ ಸುಧಾರಕರು ಸಂಪ್ರದಾಯಬದ್ಧ ಸಮಾಜದಿಂದ ಸಾವಿಗೆ ಒಳಗಾಗುವ ಸಂದರ್ಭ ಎದುರಾದರೂ ತಮ್ಮ ಪರಿವರ್ತನಾಪರವಾದ ನಿಲುವುಗಳಿಂದ ಹಿಂದೆ ಸರಿದಿರುವುದಿಲ್ಲ. ಅದು ಅವರ ಬದ್ಧತೆ ಮತ್ತು ಗಟ್ಟಿತನ. ಬದ್ಧತೆಯಿಲ್ಲದ ಬದುಕು ನಿರರ್ಥಕ.
ಉನ್ನತ ವಿಚಾರಗಳಿಗೆ ಬದುಕನ್ನು ಕೊಡುವುದೇ ಬದ್ಧತೆ. ಆಮಿಷಗಳಿಗೆ ಬದುಕನ್ನು ಕೊಡುತ್ತ, ವ್ಯವಸ್ಥೆಯ ಸಂಗಡ ರಾಜಿ ಮಾಡಿಕೊಳ್ಳುತ್ತ ಹೋಗುವುದರಿಂದ ಒಂದಿಷ್ಟು ಖುಷಿ ಸಿಗಬಹುದು. ಅದು ವೈಯಕ್ತಿಕ ನಿಲುವು. ಸಮುದಾಯಕ್ಕೆ ಅದರಿಂದ ಯಾವ ಪ್ರಯೋಜನವಿಲ್ಲ. ಸಾಮುದಾಯಿಕ ನಾಯಕತ್ವವನ್ನು ಪಡೆದು, ಅದನ್ನು ಮುನ್ನಡೆಸಬೇಕೆಂಬ ಉದ್ದೇಶದಿಂದ ಶ್ರೀಮಠದಿಂದ ತಳಮಟ್ಟದ ಜನಾಂಗಗಳಿಗೆ ಸ್ವಾಮಿಗಳನ್ನು ಕೊಡಮಾಡಲಾಯಿತು. ಆರಂಭದಲ್ಲಿ ಆಯಾಯ ಜನಾಂಗಗಳನ್ನು ಇದು ಪುಳಕಿತಗೊಳಿಸಿತು. ನಮ್ಮವರೇ ನಮಗೆ ಸ್ವಾಮಿಗಳಾಗಿದ್ದಾರೆ. ಅವರೇ ನಮ್ಮ ನಾಯಕರು. ನಾವು ಅವರ ಹಿಂಬಾಲಕರು ಎಂದು ಬೀಗಿದರು.
ಒಂದೆರಡು ಸಮಾವೇಶಗಳನ್ನು ಮಾಡಿ, ತಮ್ಮ ಜಾತಿ ಸಂಘಟನೆಯನ್ನು ತೋರಿಸಿಬಿಟ್ಟರೆ, ತಮ್ಮ ಜವಾಬ್ದಾರಿ ಮುಗಿಯಿತೆಂದು ಭ್ರಮಿಸಬಾರದು. ನಿರಂತರವಾಗಿ ಸಮುದಾಯದೊಟ್ಟಿಗೆ ಸಂಪರ್ಕವನ್ನು ಇಟ್ಟುಕೊಂಡು ಬಡತನ, ದರಿದ್ರತನ, ಅನಕ್ಷರತೆಯನ್ನು ಅಮೂಲಾಗ್ರವಾಗಿ ಕಿತ್ತೆಸೆಯುವವರೆಗೂ ಪ್ರಯತ್ನ ನಡೆಯಬೇಕಾಗುತ್ತದೆ. ಈ ಹೊಣೆಗಾರಿಕೆಯಿಂದ ನುಣುಚಿಕೊಂಡರೆ, ಸ್ವಾಮಿಗಳಾದುದಕ್ಕೆ ಸಾರ್ಥಕತೆಯಿಲ್ಲ. ಬಸವಣ್ಣನವರು ಕಾರ್ಯಕ್ಷಮತೆಯಿಂದ ತಪ್ಪಿಸಿಕೊಳ್ಳುವವರನ್ನು - ಹೊರಿಸಿಕೊಂಡು ಹೋದ ನಾಯಿ ಮೊಲನೇನ ಹಿಡಿಯಬಲ್ಲುದು ಎಂದು ಛೇಡಿಸಿದ್ದಾರೆ. ಬೇಟೆಯಲ್ಲಿ ನಾಯಿಯ ಪಾತ್ರವು ಪ್ರಮುಖ. ಬೇಟೆಗಾರನಿಗಿಂತ ಮುಂದೆ ಮುಂದೆ ನಡೆಯುವ ಧೈರ್ಯವನ್ನು ತೋರಬೇಕು. ಧೈರ್ಯದಿಂದ ಹೆಜ್ಜೆ ಹಾಕುತ್ತಲೇ ಅವನಿಗೆ ಬೇಕಾದ ಬೇಟೆಯನ್ನು ಒದಗಿಸಲು ಸಹಕರಿಸಬೇಕು. ಹೀಗೆ ಮಾಡದೆ, ಬೇಟೆಗಾರನ ಹೆಗಲನ್ನೇರಿಕೊಂಡು ಹೋಗುವ ನಾಯಿಯು ಬೇಟೆಯನ್ನೆಂತು ಹಿಡಿಯಬಲ್ಲುದು?
ಸಾಧಕನಾದವನು ಸಾಮಾಜಿಕ ಅನಿಷ್ಟಗಳೆಂಬ ಬೇಟೆಯನ್ನು ಆಡಬೇಕು. ಉತ್ಸವ ಮೂರುತಿಯಾಗಿ ಇರಬಾರದು. ಸದಾಕಾಲ ಉತ್ಸಾಹ ಮೂರುತಿ ಆಗಿ ಇರಬೇಕಾಗುತ್ತದೆ. ಜನಾಂಗಗಳಲ್ಲಿ ಜಾಗೃತಿ ಉಂಟುಮಾಡಲು ಜಾತಿಗೊಬ್ಬ ಸಾಧಕರನ್ನು ನೇಮಕ ಮಾಡುವ ಪ್ರಕ್ರಿಯೆಯು ಹತ್ತಾರು ವರ್ಷಗಳ ಹಿಂದೆಯೇ ನಡೆದಿದೆ. ನೇಮಕ ಮಾಡಿದಂತಹ ಸ್ವಾಮಿಗಳ ಮುಂದಾಳತ್ವದಲ್ಲಿ ಸಂಘಟನೆಯನ್ನು ಕೆಲಸಮುದಾಯಗಳು ಸಾಧಿಸುತ್ತಿವೆ. ಸ್ವಾಗತಾರ್ಹ ಕ್ರಮವಿದು. ಐದೂ ಬೆರಳುಗಳು ಸಮನಾಗಿ ಇರಲಾರವು. ಹೊಸಜೀವನ, ಹೊಸ ಪರಿವರ್ತನೆ ಹೊಸ ಸಂಘಟನೆ. ಸುಮ್ಮನೆ ಕುಳಿತವನು ಎಡವಲಾರ. ಸಂಘಟನೆ - ಸುಧಾರಣೆ ಮಾಡುವವರಿಂದ ತಪ್ಪುಗಳು ಸಹಜ. ಆ ಹಿನ್ನೆಲೆಯಲ್ಲಿ ಅನನುಭವ ಹಾಗು ಅಪಕ್ವತೆ.
ಅನನುಭವವನ್ನು ದುರುಪಯೋಗ ಮಾಡಿಕೊಳ್ಳುವವರು ಎಲ್ಲ ಕಾಲದಲ್ಲೂ ಇದ್ದೇಯಿರುತ್ತಾರೆ. ಇಲಿಗೆ ಪ್ರಾಣಸಂಕಟ, ಬೆಕ್ಕಿಗೆ ಚಿನ್ನಾಟ. ಮಾಡಿದ ತಪ್ಪನ್ನು ನಾನಿಲ್ಲಿ ಸಮರ್ಥಿಸುತ್ತಿಲ್ಲ. ತಪ್ಪು ಘಟಿಸಿದಂತಹ ಸಂದರ್ಭದಲ್ಲಿ ಅದನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಎಚ್ಚರಿರಬೇಕಾಗುತ್ತದೆ. ಇದೆಲ್ಲದರ ಜತೆಯಲ್ಲಿ ಪರಸ್ಪರರಲ್ಲಿನ ಅಸೂಯೆ, ಹೊಟ್ಟೆಕಿಚ್ಚು. ಹೊಟ್ಟೆಕಿಚ್ಚಿಗೆ ತುಪ್ಪ ಸುರಿಯುವ ಘನಕಾರ್ಯವು ಕೆಲವರಿಂದ. ತಮ್ಮದು ಪ್ರಾಚೀನ ಸಂಸ್ಕೃತಿಯೆಂದು ಬೀಗುವವರೇ ತಪ್ಪುಗಳನ್ನು ಮಾಡುತ್ತಾರೆ. ಇನ್ನು ಬೆಳೆಯುವ ಹಂತದಲ್ಲಿರುವವರಿಂದಾಗುವ ತಪ್ಪುಗಳು ಸಾಮಾನ್ಯ. ತಪ್ಪು ತಿಳುವಳಿಕೆಯಿಂದಾಗಿ ತಪ್ಪುಗಳು. ಒಮ್ಮೊಮ್ಮೆ ತಮ್ಮೊಳಗಿನ ಗುಂಪುಗಾರಿಕೆಯನ್ನು ಬೀದಿಗೆ ತಂದು ತನ್ನವರೆನ್ನುವವರನ್ನೇ ಚಾರಿತ್ರ್ಯವಧೆ ಮಾಡುತ್ತಿದ್ದಾರೆ, ತಮ್ಮ ಹಿತಕ್ಕಾಗಿ ಸಮಾಜದ ಹಿತವನ್ನು ಬಲಿಕೊಡುವ ಪ್ರಯತ್ನ. ಕೆಲವರಿಗೆ ತಮ್ಮ ಮೂರ್ಖತನವನ್ನು ಮುಚ್ಚಿಕೊಳ್ಳಲು ಬರುವುದಿಲ್ಲ. ಅಂಥವರ ಮೂರ್ಖತನವನ್ನು ಕೆಲವರು ಬಂಡವಾಳ ಮಾಡಿಕೊಳ್ಳದಿರಲೆಂಬ ಸಲಹೆ. ಕೆಲ ದೃಶ್ಯಮಾಧ್ಯಮಗಳಲ್ಲಿ ಬಿತ್ತರಿಸಲ್ಪಡುತ್ತಿರುವ ಮಾಹಿತಿಯನ್ನು ಆಧರಿಸಿ, ಕೆಲವರು ಆಪಾದನೆ ಮಾಡಲು ಹವಣಿಸುತ್ತಾರೆ.
ವಿವಿಧ ಸಮಾಜಗಳಿಗೆ ಸ್ವಾಮಿಗಳು ನೇಮಕಗೊಂಡಿರುವ ಸಮುದಾಯಗಳಲ್ಲಿ ಜಾಗೃತಿ ಉಂಟಾಗಿದೆ. ಹಾಗಾಗಿ ಅವರು ತಮ್ಮ ಧಾರ್ಮಿಕ ನೇತಾರರ ಸಂಗಡ ಗುರುತಿಸಿಕೊಳ್ಳುತ್ತಿದ್ದಾರೆ, ಸದ್ಭಕ್ತಿಯನ್ನು ತೋರಿಸುತ್ತಿದ್ದಾರೆ. ಅದಕ್ಕೆ ಕಾಲ ಹಿಡಿಯುತ್ತದೆ. ಕಾಲವು ಇಂಥ ಓರೆ-ಕೋರೆಗಳನ್ನು ತಿದ್ದುತ್ತದೆಂಬ ವಿಶ್ವಾಸ. ಇಂದು ಬಿತ್ತಿದ ಬೀಜವು ಮುಂದೆ ಫಲವನ್ನು ನೀಡಿಯೇತೀರುತ್ತದೆ. ಪ್ರಯೋಗವನ್ನು ಮಾಡಿ ಆಗಿದೆ. ಫಲಕ್ಕಾಗಿ ಕಾಯಬೇಕಾಗುತ್ತದೆ. ಈ ಸಂಬಂಧ ಚೆನ್ನಬಸವಣ್ಣನವರ ವಚನ ಹೆಚ್ಚು ಪ್ರಸ್ತುತ -
ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟಿತ್ತೆಂದೆನಬೇಡ,
ಮುಂದಣ ಫಲದೊಳಗರಸಿಕೋ
ಕಾಸಿ ಕರಗಿಸಿದ ಬಂಗಾರ ಕೆಟ್ಟಿತ್ತೆಂದೆನಬೇಡ,
ಮುಂದಣ ಬಣ್ಣದೊಳಗರಸಿಕೋ
ಹೊತ್ತಿಸಿದ ದೀಪ್ತಿ ಕೆಟ್ಟಿತ್ತೆಂದೆನಬೇಡ,
ಮುಂದಣ ಅಗ್ನಿಯೊಳಗರಸಿಕೋ
ಲಿಂಗದೊಳಗೆ ಪ್ರಾಣ, ಪ್ರಾಣದೊಳಗೆ ಲಿಂಗ.
ಇದು ಕಾರಣ ಕೂಡಲಚೆನ್ನಸಂಗನ ಶರಣರ
ಪಾದ ಪ್ರತಿಬಿಂಬದೊಳಗರಸಿಕೋ
ಸಂಗನಬಸವಣ್ಣಾ
ಈ ಬಗ್ಗೆ ನನಗಾವ ಆತಂಕವಿಲ್ಲ, ಅವಸರವೂ ಇಲ್ಲ. ಯಾರು ಏನೇ ಅಂದರೂ ತರಬೇತಿ ಹೊಂದಿದ ಸ್ವಾಮಿಗಳು ತಮ್ಮ ಜನಾಂಗದಲ್ಲಿ ಜಾಗೃತಿಯನ್ನು ತರುತ್ತಾರೆ. ಸಮ ಸಮಾಜವನ್ನು ಕಟ್ಟಲು ಸಹಕರಿಸುತ್ತಾರೆಂಬ ಸಂಪೂರ್ಣ ಭರವಸೆ. ಜಾತಿಗೊಬ್ಬ ಜಗದ್ಗುರುಗಳನ್ನು ಮಾಡಲಾಗುತ್ತಿದ್ದು, ಸಮಾಜವನ್ನು ಒಡೆಯುವ ಕೆಲಸವಿದೆಂಬ ಆಪಾದನೆ. ಇಂಥ ಆಪಾದನೆಯಲ್ಲಿ ಅಸಹನೆ. ಅಸಹನೆ ವ್ಯಕ್ತವಾಗುವುದು ಸ್ವಾಗತಾರ್ಹ. ಎಲ್ಲರ ಬೆಳವಣಿಗೆಗೂ ಅವಕಾಶವಿದೆ. ಇಂಥ ಕ್ರಮಗಳನ್ನು ಬೆಂಬಲಿಸಬಹುದು, ವಿರೋಧಿಸುವುದಂತು ಇದ್ದೇಯಿದೆ.
ತಮ್ಮ ಎಡೆಯಲ್ಲಿ ಕತ್ತೆ ಸತ್ತುಬಿದ್ದಿದ್ದರು ಅದರತ್ತ ಗಮನಹರಿಸಲಾರದೆ, ಬೇರೆಯವರ ತಾಟಿನಲ್ಲಿ ನೊಣ ಸತ್ತುಬಿದ್ದಿದೆಯೆಂದು ಕೆಲಧಾರ್ಮಿಕರು ಕೈಮಾಡಿ ತೋರಿಸುತ್ತಿದ್ದಾರೆ. ಮಾನವನಲ್ಲಿ ದೋಷ -ದೌರ್ಬಲ್ಯ ಸಹಜ. ತಮ್ಮ ದೋಷಗಳನ್ನು ಮುಚ್ಚಿಕೊಳ್ಳುತ್ತ, ಇನ್ನೊಬ್ಬರನ್ನು ಕಪಟಿಗಳೆಂದು ಜರಿಯುವವರು ಹೇಗಿದ್ದಾರೆಂದು ಅವರವರ ಭಕ್ತರಿಗೂ, ಅವರವರ ಹತ್ತಿರದವರಿಗೂ ಮತ್ತು ಅವರವರ ಅರಿವಿಗೂ ಗೊತ್ತಿದೆ. ಗಾಜಿನ ಮನೆಯಲ್ಲಿದ್ದವರು ಇನ್ನೊಬ್ಬರ ಮನೆಯಮೇಲೆ ಕಲ್ಲು ಎಸೆಯಬಾರದೆಂಬ ಪ್ರಾಥಮಿಕ ಜ್ಞಾನ ಇಲ್ಲದಿರುವುದು ಸೋಜಿಗ! ದೋಷವುಳ್ಳವರೇ ದೂಷಣೆಗೆ ಮುಂದಾಗಿರುವುದು ಒಂದು ಚೋದ್ಯ. ದೂಷಿಸುವ ಅಧಿಕಾರ ಯಾರಿಗೆ ದೋಷರಹಿತರಿಗೆ. ದೋಷರಹಿತರಿಗೆ ಮಾತ್ರ ದೂಷಿಸುವ ಅಧಿಕಾರ. ಹೀಗಿಲ್ಲದವರನ್ನು ಬಸವಣ್ಣನವರು -
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
21ನೇ ಶತಮಾನದಲ್ಲಿ ನಡೆದಿರಬಹುದಾದ ಸಾಮಾಜಿಕ ಸುಧಾರಣೆಗೆ ಕೆಲವರಿಂದ ವಿರೋಧ. ಕ್ರಿಯೆ ಇರುವೆಡೆಯಲ್ಲಿ ಪ್ರತಿಕ್ರಿಯೆ. ವಿರೋಧವು ಯಶಸ್ಸಿನ ಸಂಕೇತ. ಬಸವಣ್ಣನವರ ವಿಚಾರಧಾರೆಯನ್ನು ಕುರಿತು ಇಂದಿಗೂ ಚರ್ಚೆ ನಡೆಯುತ್ತಿದೆ. ಕೆಲವರು ಒಪ್ಪಿಕೊಳ್ಳುತ್ತಾರೆ, ಕೆಲವರು ವಿರೋಧಿಸುತ್ತಾರೆ. ಅದು ಬಸವಣ್ಣನವರ ವಿಜಯ. ಸ್ವಲ್ಪಜನ ವಿರೋಧಿಸಿದರೆ ಅರ್ಧ ಯಶಸ್ಸು, ಬಹಳ ಜನ ವಿರೋಧಿಸಿದರೆ ಸಂಪೂರ್ಣ ಯಶಸ್ಸು. ವಿರೋಧವನ್ನು ನಾನು ವಿರೋಧಿಸುವುದಿಲ್ಲ, ಬದಲಾಗಿ ಅದರಲ್ಲಿ ಒಳಿತಿನ ಅಂಶವಿದ್ದರೆ ಸ್ವೀಕರಿಸುತ್ತೇನೆ. ಪ್ರಗತಿಪರ ವಿಚಾರಗಳನ್ನು ಒಪ್ಪಿಕೊಳ್ಳಲಾರದವರು ಇರುವಂತೆ, ಯಶಸ್ಸನ್ನು ನೋಡಿ ಸಹಿಸಲಾರದವರು ಎಲ್ಲ ಕಾಲದಲ್ಲು ಇರುತ್ತಾರೆ. ವಿಚಾರಗಳಿಗೆ ಪ್ರಚಾರ ಕೊಡುವವರು ಅವರೇ ಆಗಿದ್ದಾರೆ. ನನ್ನ ವಿಚಾರಕ್ಕೆ ವಿರೋಧ ವ್ಯಕ್ತವಾದಲ್ಲಿ ಸಂದ ಗೌರವವೆಂದು ಭಾವಿಸುತ್ತೇನೆ. ಅವರಿಗೆ ಮತ್ತಷ್ಟು ವಿರೋಧಿಸುವಂತಹ ಯುಕ್ತಿ ಬರಲಿ, ಶಕ್ತಿಯೂ ಸಾಧ್ಯವಾಗಲೆಂದು ಬಯಸುತ್ತೇನೆ.
- ಡಾ. ಶಿವಮೂರ್ತಿ ಮುರುಘಾ ಶರಣರು
ಶ್ರೀ ಮುರುಘಾಮಠ, ಚಿತ್ರದುರ್ಗ
anisikeprabha@gmail.com