ಭಾರತೀಯ ಮತದಾರರು ಬುದ್ಧಿವಂತರಾಗುತ್ತಿದ್ದಾರೆ. ಜಾತಿ, ಸಮುದಾಯ, ಪ್ರದೇಶ, ಧರ್ಮ ಮುಂತಾದ ವಿಷಯಗಳು ಅವರ ಮನಸ್ಸನ್ನು ಆಕ್ರಮಿಸಿವೆಯಾದರೂ, ಕೆಲವೊಂದು ಸಂದರ್ಭಗಳಲ್ಲಿ ಆ ಎಲ್ಲಾ ಅಂಶಗಳನ್ನು ಬದಿಗೊತ್ತಿ, ತಮ್ಮ ನಿರೀಕ್ಷೆಗನುಗುಣವಾಗಿ ನಡೆದಕೊಳ್ಳದ ಪಕ್ಷಕ್ಕೆ ಅಥವಾ ಒಕ್ಕೂಟಕ್ಕೆ ಹೊರಬಾಗಿಲು ತೋರಿಸುತ್ತಿದ್ದಾರೆ. ಓಟ್ ಬ್ಯಾಂಕ್ ರಾಜಕೀಯದ ಮೇಲೆ ದೃಷ್ಟಿಯಿಟ್ಟುಕೊಂಡು ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಅಥವಾ ಜನರ ಭಾವನೆಗಳೊಂದಿಗೆ ಆಟವಾಡಿ ಆಡಳಿತ ಮತ್ತು ಅಭಿವೃದ್ಧಿಯನ್ನು ಕಡೆಗಣಿಸುವ ರಾಜಕೀಯ ಪಕ್ಷಗಳನ್ನು ಮುಲಾಜಿಲ್ಲದೆ ಮತದಾರರು ಹೊರನೂಕುತ್ತಿದ್ದಾರೆ.
ಜೆಡಿಎಸ್‌ನ ವಿಷಯವನ್ನೇ ತೆಗೆದುಕೊಳ್ಳಿ. ಒಂದೊಮ್ಮೆ ಈ ಪಕ್ಷವನ್ನು ಕಾಂಗ್ರೆಸ್‌ಗೆ ಪರ್ಯಾಯವೆಂಬಂತೆ ನೋಡಲಾಗುತ್ತಿತ್ತು. ಬಿಜೆಪಿಯಂತೂ ಲೆಕ್ಕಕ್ಕೇ ಇಲ್ಲದಂತಿತ್ತು. ಆದರೆ ಅಧಿಕಾರದಾಸೆಗೆ ಬಿದ್ದ ಜೆಡಿಎಸ್ ತಪ್ಪು ನಿರ್ಧಾರಗಳನ್ನು ಕೈಗೊಂಡಿತು. ಆಗ ಶುರುವಾಯಿತು ಅದರ ಅಧಃಪತನ. ಜನರಿಗೆ ಆ ಪಕ್ಷದ ಮೇಲಿನ ನಂಬಿಕೆ ಕಡಿಮೆಯಾಗತೊಡಗಿತು. ಜೆಡಿಎಸ್ ಮಾದರಿ ರಾಜಕೀಯವನ್ನು ಈಗ ಯಾರೂ ಕಣ್ಣೆತ್ತಿಯೂ ನೋಡುತ್ತಿಲ್ಲ.
- 2008ರ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ಮಾಡಿದ ಮೊದಲ ತಪ್ಪೆಂದರೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಕಡಿದುಕೊಂಡು ಬಿಜೆಪಿಯೊಂದಿಗೆ ದೋಸ್ತಿ ಮಾಡಿದ್ದು(ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ). 20-20 ಮಾದರಿಯಲ್ಲಿ ರಚನೆಯಾದ ಈ ಸರ್ಕಾರದಲ್ಲಿ ಮೊದಲು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ದೇವೇಗೌಡರ ಕುವರ ಕುಮಾರಸ್ವಾಮಿ. ತಮ್ಮ ಆಡಳಿತಾವಧಿಯಲ್ಲಿ ಜನ ಮೆಚ್ಚುವ ಕೆಲಸಗಳನ್ನು ಅವರು ಮಾಡಿದರಾದರೂ ಅಧಿಕಾರ ಹಸ್ತಾಂತರದ ಸಮಯ ಬಂದಾಗ ಬಿಜೆಪಿಗೆ ಕೈಕೊಟ್ಟರು. ಮತ್ತೊಮ್ಮೆ ಚುನಾವಣೆಗಳು ನಡೆದವು. ಜೆಡಿಎಸ್‌ನ ಈ ಅವಕಾಶವಾದಿ ರಾಜಕೀಯವನ್ನು ನೋಡಿದ ಜನ, ಚುನಾವಣೆಯಲ್ಲಿ ಅದನ್ನು 3 ನೇ ಸ್ಥಾನಕ್ಕೆ ತಳ್ಳಿ ಬುದ್ಧಿ ಕಲಿಸಿದರು. ಬಿಜೆಪಿಗೆ ಆಡಳಿತ ನಡೆಸುವ ಅಧಿಕಾರ ಲಭಿಸಿತು. ಅಂದು ಜೆಡಿಎಸ್‌ಗೆ ಬಿದ್ದು ಪೆಟ್ಟು ಎಷ್ಟು ಬಲವಾಗಿತ್ತೆಂದರೆ ಇದುವರೆಗೂ ಅದಕ್ಕೆ ಎದ್ದು ನಿಲ್ಲಲಾಗುತ್ತಿಲ್ಲ.
- 2013ರ ವಿಧಾನಸಭಾ ಚುನಾವಣೆಗಳಲ್ಲಿ ಅದು ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ದೂರವುಳಿಯಿತು. ಕಳಪೆ ಆಡಳಿತ ಮತ್ತು ಒಳ ಜಗಳಗಳಿಂದ ಬಿಜೆಪಿ ಹೆಸರು ಕೆಡೆಸಿಕೊಂಡಿತ್ತು. ಕೇಂದ್ರ ರಾಜಕಾರಣಿಗಳ ಹಗರಣಗಳ ಸರಮಾಲೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ಹತ್ತಿತ್ತು. ಈ ಹಿನ್ನೆಲೆಯಲ್ಲಿ ತಾನೇ ಗೆಲ್ಲುತ್ತೇನೆ ಎನ್ನುವ ಭರವಸೆಯೊಂದಿಗೆ ಜೆಡಿಎಸ್ ಕಣಕ್ಕಿಳಿಯಿತಾದರೂ, ಮತದಾರರ ಲೆಕ್ಕಾಚಾರವೇ ಬೇರೆಯಾಗಿತ್ತು. ಅವರು ಬಿಜೆಪಿಗೆ ತಕ್ಕ ಪಾಠ ಕಲಿಸಿದರಾದರೂ, ಜೆಡಿಎಸ್‌ಗೆ ಮಾತ್ರ ಮತ ನೀಡಲಿಲ್ಲ. ಬಹುಮತ ಪಡೆದ ಕಾಂಗ್ರೆಸ್ ಗದ್ದುಗೆ ಹಿಡಿಯಿತು. ಈ ಮೂಲಕ, ಕನಿಷ್ಟ ಪಕ್ಷ ಕಿಂಗ್‌ಮೇಕರ್ ಆಗಬೇಕೆಂದು ಬಯಸಿದ್ದ ಜೆಡಿಎಸ್‌ಗೆ ಮತದಾರರು ಮಂಗಳಾರತಿ ಮಾಡಿದರು.
- ಇತ್ತೀಚೆಗೆ ಲೋಕಸಭೆಗಾಗಿ ನಡೆದ ಉಪಚುನಾವಣೆಗಳ ವೇಳೆ ಜೆಡಿಎಸ್ ಮತ್ತೊಮ್ಮೆ ತನ್ನ ಹಳೆಯ ಆಟಕ್ಕಿಳಿಯಿತು. ಆ ಎರಡೂ ಸ್ಥಾನಗಳು ಪ್ರಮುಖವೆಂದೆನಿಸಿಕೊಂಡಿದ್ದ ಕಾರಣಕ್ಕೆ ಅದು ಮತ್ತೊಮ್ಮೆ ಬಿಜೆಪಿಯೊಂದಿಗೆ ಸ್ನೇಹ ಸಂಪಾದಿಸಿತು ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಲ್ಲಿ ನಿಲ್ಲಿಸದಂತೆ ಮನವೊಲಿಸಿತು. ಈ ಹೊಸ ಗೆಳೆತನವನ್ನು 2014ರ ಲೋಕಸಭಾ ಚುನಾವಣೆಗಳವರೆಗೆ ಮುಂದುವರಿಸಲು ತಾನು ಉತ್ಸುಕನಾಗಿದ್ದೇನೆ ಎಂಬ ಭ್ರಮೆಯನ್ನು ಅದು ಸೃಷ್ಟಿಸಿತು. ಜೆಡಿಎಸ್‌ನ ಮುಖ್ಯ ಉದ್ದೇಶ ಒಂದೊಮ್ಮೆ ತಮ್ಮ ಪಕ್ಷದವರೇ ಆಗಿದ್ದ, ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಮೇಲೆ ಸೇಡುತೀರಿಸಿಕೊಳ್ಳುವುದೇ ಆಗಿತ್ತು. ಅದರ ಆಟಕ್ಕೆ ದಾಳವಾಗಿ ಬಿಜೆಪಿಯ ಬಳಕೆಯಾಯಿತು. ಆದರೆ ಮತ್ತೊಮ್ಮೆ ಪ್ರಜ್ಞಾವಂತ ಮತದಾರರು ಜೆಡಿಎಸ್‌ನ ಕುತಂತ್ರವನ್ನು ಅರಿತು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತು. ಜೆಡಿಎಸ್ ಅನ್ನು ನಂಬಿದ ಬಿಜೆಪಿ ಬಿದ್ದಿತು! ಬಿದ್ದಿದ್ದಷ್ಟೇ ಅಲ್ಲ, ಈ ಅಪವಿತ್ರ ಮೈತ್ರಿಯಿಂದಾಗಿ ಅದರ ಬಹುಪಾಲು ಮತಗಳೆಲ್ಲ ಕಾಂಗ್ರೆಸ್‌ನತ್ತ ಹರಿದುಹೋದವು. ಜೆಡಿಎಸ್ ಈಗ ದೊಡ್ಡ ತೊಂದರೆಗೆ ಸಿಲುಕಿದೆ. ಜನರ ನಂಬಿಕೆಯನ್ನು ಹೇಗೆ ಗೆಲ್ಲಬೇಕು ಎನ್ನುವುದೇ ಅದಕ್ಕೀಗ ತಿಳಿಯುತ್ತಿಲ್ಲ. ಅದರ ಎಲ್ಲಾ ಲೆಕ್ಕಾಚಾರಗಳೂ ಲಾಗಾ ಹೊಡೆದಿವೆ. ದೇವೇಗೌಡರು ಚಿಂತಿತರಾಗಿದ್ದಾರ.
ಕೊನೆಯ ಗುಟುಕು:
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics