ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಎಲ್ಲೆ ಮೀರಿತು ಸಂಸದರ ಸಣ್ಣತನ ಪ್ರದರ್ಶನ

ಕೆಲ ಸಮಯದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ...

Vishwanath S
Updated On : 31 Aug 2013, 11:00 am

ಕೆಲ ಸಮಯದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕಾ ವೀಸಾ ನೀಡದಂತೆ ಪತ್ರ ಬರೆದ ಪ್ರಕರಣ ಭಾರತದ ಮಾನ, ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಮೂರು ಕಾಸಿಗೆ ಹರಾಜು ಹಾಕಿದೆ. 60 ಮಂದಿ ಸಂಸದರ ಘನಾಂಧಾರಿ ಕೆಲಸವದು.
ದೇಶದ ಕೆಲವು ಸಂಸದರೇ ಮುಖ್ಯಮಂತ್ರಿಯೊಬ್ಬರಿಗೆ ವೀಸಾ ನಿರಾಕರಿಸುವಂತೆ ಅಮೆರಿಕಕ್ಕೆ ಪತ್ರ ಬರೆಯುತ್ತಾರೆ ಎಂದರೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತಂದಂತಾಗುತ್ತದೆ. ದ್ರೋಹ ಮಾಡಿದಂತಾಗುತ್ತದೆ. ಅಭಿವೃದ್ಧಿಯಲ್ಲಿ ಬಲಾಢ್ಯವಾಗಿರುವ ಅಮೆರಿಕ ವಿಶ್ವದ ಎಲ್ಲ ರಾಷ್ಟ್ರಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ದುರಾಸೆಗೆ ಭಾರತದಂತಹ ಬುದ್ಧಿವಂತ ರಾಷ್ಟ್ರಗಳ ಸಂಸದರೂ ಕೂಡ ಸಾಥ್ ನೀಡುತ್ತಾರೆಂದರೆ ನಾವಿನ್ನೂ ಗುಲಾಮಗಿರಿಯ ಸಂಕೇತದಲ್ಲಿ ಬದುಕಲು ಬಯಸುತ್ತೇವೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಅಗತ್ಯವಿಲ್ಲ.
ಶತಮಾನಗಳ ಹಿಂದೆ ಭಾರತವನ್ನು ಪ್ರತಿನಿಧಿಸಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಸನಾತನ ಭಾರತೀಯ ಸಂಸ್ಕೃತಿ, ಹಿಂದುತ್ವದ ಔದಾರ್ಯವನ್ನು ವಿದೇಶಿಗರಿಗೆ ಪರಿಚಯ ಮಾಡಿಕೊಟ್ಟು, ಎಂದೆಂದಿಗೂ ಭಾರತ ಧೀಮಂತವಾಗಿರುತ್ತದೆ ಎನ್ನುವುದನ್ನು ಪ್ರತಿಪಾದಿಸಿ ತೋರಿಸಿ ಹೋಗಿದ್ದಾರೆ. ಅದೇ ಸ್ಫೂರ್ತಿಯನ್ನು ನೆಚ್ಚಿಕೊಂಡಂತೆ ಕಾಣುವ ನರೇಂದ್ರ ಮೋದಿ ಭಾರತದ ಕನಸು ಮತ್ತು ದಿಕ್ಕು ಬದಲಿಸುವ ಒಂದು ಸಣ್ಣ ಪ್ರಯತ್ನವನ್ನು ಇಟ್ಟುಕೊಂಡು ಹೊಸ ಭರವಸೆ ಮೂಡಿಸುತ್ತಿದ್ದಾರೆ. ಹೀಗಾಗಿ ಮೋದಿಗೆ ಅಮೆರಿಕ ವೀಸಾ ನೀಡದೇ ಹೋದರೆ ಭಾರತಕ್ಕೆ ಯಾವುದೇ ಲಾಸ್ ಇಲ್ಲ. ಏಕೆಂದರೆ ಅವರಿಗೆ ಭಾರತವೇ ಭವಿಷ್ಯ, ಭವಿಷ್ಯದ ಹೊಂಗನಸೇ ಭಾರತಕ್ಕೆ ಈಗಿನ ಭರವಸೆ ಎಂಬುದನ್ನು ಅರಿಯಬೇಕಿದೆ.
ಇಷ್ಟಕ್ಕೂ ಮೋದಿ ಅಮೆರಿಕಕ್ಕೆ ಹೋಗಿ ಸಾಧನೆ ಮಾಡುವುದೂ ಏನೂ ಇಲ್ಲ. ಆದರೂ ಅಮೆರಿಕದಲ್ಲಿರುವ ಭಾರತೀಯ ಸಂಜಾತರು ಹಾಗೂ ಅನಿವಾಸಿ ಭಾರತೀಯರೊಂದಿಗೆ ಮುಕ್ತವಾಗಿ ಮಾತನಾಡಿ, ಭಾರತದ ಅಭಿವೃದ್ಧಿಗೆ ಪೂರಕವಾಗಿ ಒಂದಷ್ಟು ನೆರವು ನೀಡಿ, ಆ ಮೂಲಕ ಜನ್ಮ ಭೂಮಿಯ ಋಣ ತೀರಿಸಿ ಎಂದು ಕೇಳಿಕೊಳ್ಳುವ ಆಶಯ ಇತ್ತು ಎನ್ನುವುದಾದರೆ ಅದನ್ನು ತಪ್ಪು ಎಂದು ಈ ಪತ್ರ ಬರೆದ 60 ಮಂದಿ ಸಂಸದರೂ ಅಥವಾ ಸ್ವತಃ ಅಮೆರಿಕ ಕೂಡ ಹೇಳಲು ಸಾಧ್ಯವಿಲ್ಲ.
ನಮ್ಮ ದೇಶದ ಬಹುದೊಡ್ಡ ವೈಫಲ್ಯ ಎಂದರೆ ಪ್ರತಿಭಾ ಫಲಾಯನ. ತಪ್ಪು ಪ್ರತಿಭಾವಂತರದ್ದಲ್ಲ. ಬದಲಿಗೆ ಈಗಿನ ಭಾರತದ ವ್ಯವಸ್ಥೆಯದ್ದು. ಹತ್ತಾರು ಸಾಮಾಜಿಕ ಸಮಸ್ಯೆಗಳ ತೊಳಲಾಟಗಳಿಂದ ಮುಕ್ತಿ ಪಡೆಯಲು ಪ್ರತಿಭೆ ನಂಬಿಕೊಂಡವರು ವಿದೇಶದ ಆಶ್ರಯ ಬಯಸುವುದು ಸಹಜ. ವಿದೇಶಕ್ಕೆ ಹೋದಾಕ್ಷಣ ಹುಟ್ಟಿದ ನಾಡು, ದೇಶ ಮರೆಯುವುದುಂಟೆ ಮರೆತು ಹೋದವರನ್ನು ನೆನಪಿಸಿ ಮತ್ತೆ ಅವರನ್ನು ದೇಶದೊಂದಿಗೆ ಬೆಸೆಯುವ ಪ್ರಯತ್ನವನ್ನು ಇದುವರೆಗೂ ಯಾವುದೇ ರಾಜಕಾರಣಿಗಳು ಅಥವಾ ಪ್ರಧಾನಿಗಳು ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿ. ಆ ಕೆಲಸವನ್ನು ಮೋದಿ ಮಾಡಿದರೆ ತಪ್ಪೇನು?
ಕಾಂಗ್ರೆಸ್‌ನಲ್ಲಿರುವ ಕೆಲವು ಸಂಸದರ ಪಟಾಲಂಗೆ ಹಾಗೂ ಜಾತಿ, ಧರ್ಮಗಳ ವಿಷ ಬೀಜ ಬಿತ್ತುವ ಮುಂಚೂಣಿ ನಾಯಕರುಗಳಿಗೆ  ಭಾರತದ ಅಭಿವೃದ್ಧಿ ಬೇಕಿಲ್ಲ. ಹಿಂದುತ್ವ ಎಲ್ಲಿ ನೆಲೆಯೂರಿ ಬಿಡುತ್ತದೆ ಎನ್ನುವ ಆತಂಕದಲ್ಲೇ ಭಾರತ ಹಾಗೂ ಇಲ್ಲಿನ ಜನರನ್ನು ಒಡೆದು ಆಳ್ವಿಕೆ ನಡೆಸುವುದನ್ನೇ ಬಯಸುತ್ತಾರೆ. ಈಗ ನೋಡಿ ನಮ್ಮ ಕೆಲವು ಸಂಸದರು ಭಾರತಕ್ಕೆ ನಿಷ್ಠರಾಗಿರುವ ಬದಲಿಗೆ ಅಮೆರಿಕಕ್ಕೆ ತಮ್ಮ ಪ್ರಾಮಾಣಿಕತೆ ಮತ್ತು ಶ್ರದ್ಧೆ ತೋರುವ ತಂತ್ರ ಮಾಡಿದ್ದಾರೆ. ಏಕೆಂದರೆ ಕಾಂಗ್ರೆಸ್‌ನ ಅಧಿಪತಿ ಸೋನಿಯಾ ಗಾಂಧಿ ಮತ್ತು ಮರಿ ಅಧಿಪತಿ ರಾಹುಲ್ ಗಾಂಧಿಗೆ ಬಹು ಪರಾಕ್ ಹೇಳುವ ಕಾರಣಕ್ಕಾಗಿ ಮೋದಿಯ ವರ್ಚಸ್ಸನ್ನು ತುಳಿಯುವ ತಂತ್ರದಲ್ಲಿ ವೀಸಾ ನಿರಾಕರಣೆಗೆ ಬರೆದ ಪತ್ರದ ಕುತಂತ್ರವೂ ಸೇರಿದೆ.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿದರೆ ಸೋನಿಯಾ ಮಹಿಮೆ ಎಷ್ಟು, ಸಾಮರ್ಥ್ಯ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಮಾತನಾಡದ ಗೊಂಬೆ ಎಂದು ಖ್ಯಾತಿಯಾಗಿರುವ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಹುದ್ದೆಯಲ್ಲಿ ಕುಳ್ಳಿರಿಸಿ ಚದುರಂಗದ ಆಟ ಆಡುವುದು ಈ 60 ಮಂದಿ ಸಂಸದರಿಗೆ ಕಣ್ಣಿಗೆ ಕಾಣುವುದಿಲ್ಲವೇ?
ದೇಶದಲ್ಲಿ ಕಳೆದ 9 ವರ್ಷಗಳಿಂದ ಮಿತ್ರ ಪಕ್ಷಗಳನ್ನು ಕಟ್ಟಿಕೊಂಡು ಬೇಕಾಬಿಟ್ಟಿ ಆಳ್ವಿಕೆ ನಡೆಸುತ್ತಿರುವ ಯುಪಿಎ ಸರ್ಕಾರದಲ್ಲಿ ಆರ್ಥಿಕ ಸ್ಥಿತಿಗತಿಗಳು ದಿವಾಳಿಯಾಗುವ ಹಂತ ತಲುಪಿದೆ. ಅಗತ್ಯ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಮಧ್ಯಮ ವರ್ಗದ ಜನಕ್ಕೆ ದಿನಸಿ ಸಾಮಾನು, ಗ್ಯಾಸ್ ಸಿಲಿಂಡರ್‌ಗಳಂತಹ ಜೀವನ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ತಡೆದುಕೊಳ್ಳುವುದೇ ಕಷ್ಟವಾಗಿದೆ. ಮಧ್ಯಮ ವರ್ಗದವರ ಬದುಕು ಬಿಸಿ ತುಪ್ಪ.
ಆರ್ಥಿಕ ತಜ್ಞರೂ ಆಗಿರುವ ಡಾ. ಮನಮೋಹನ ಸಿಂಗ್ ಸಮರ್ಥವಾಗಿ ಪ್ರಧಾನಿ ಹುದ್ದೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂಬುದನ್ನು ಸಾಮಾನ್ಯ ಜನ ಬೀದಿಯಲ್ಲಿ ಮಾತನಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಕೇಂದ್ರ ಸರ್ಕಾರದ ಸಾಲು, ಸಾಲು ಹಗರಣಗಳು ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿವೆ. ಕಾಮನ್ವೆಲ್ತ್ ಹಗರಣ, 2 ಜಿ ಸ್ಪೆಕ್ಟ್ರಂ ಹಗರಣ, ರೈತರ ಸಾಲಮನ್ನಾ ದುರುಪಯೋಗ, ಕಲ್ಲಿದ್ದಲು ಖರೀದಿ ಹಗರಣ ಸೇರಿ ಮುಂತಾದ ಹಗರಣಗಳೊಂದಿಗೆ ನೆರೆಯ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ದಾಳಿಯಿಂದ ಮುಂಬೈನಲ್ಲಿ ಅಮಾಯಕರು ಸಾವನ್ನಪ್ಪಿದರು. ಚೀನಾ ಈಗಲೂ ಗಡಿಯಲ್ಲಿ ನಡೆಸಿರುವ ದಾಳಿ, ಪುರಿ ದೇವಾಲಯ ಸ್ಫೋಟದಂತಹ ಪ್ರಕರಣಗಳು ನಡೆಯದಂತೆ ತಡೆಯುವಲ್ಲಿ ಈ ಸರ್ಕಾರ ಸಾಕಷ್ಟು ವಿಫಲವಾಗಿದೆ ಎಂಬುದು ಕೆಲ ಸಂಸದರ ಗಮನಕ್ಕೆ ಬರಲಿಲ್ಲವೇ?
ದೇಶದಲ್ಲಿ ಆಂತರಿಕ ಭದ್ರತೆ ಇಲ್ಲ. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದ್ದಾರೆ. ಇಷ್ಟೆಲ್ಲಾ ಇದ್ದರೂ ಅನ್ಯ ದೇಶದ ಆಡಳಿತ ವ್ಯವಸ್ಥೆಗೆ ಇಲ್ಲಿಂದಲೇ ಪತ್ರ ಬರೆದು ದೇಶದ ಆಡಳಿತ ವ್ಯವಸ್ಥೆಯ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಿದ ಸಂಸದರ ನಿಲುವಿಗೆ ಏನನ್ನಬೇಕು? ನಮ್ಮ ರಾಷ್ಟ್ರ ಹಾಗೂ ರಾಜ್ಯದ ಮಂತ್ರಿಗಳು, ಸಂಸದರು, ಅಧಿಕಾರಿಗಳು ಲೆಕ್ಕವಿಲ್ಲದಷ್ಟು ಸಾರಿ ಸರ್ಕಾರಿ ವೆಚ್ಚದಲ್ಲಿ ವಿದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಮೋದಿ ಪ್ರವಾಸದಿಂದ ಆಗುವ ಲಾಭ ಏನು ಹೇಗೆ ಎಂಬುದನ್ನು ಪ್ರಶ್ನೆ ಮಾಡುವ ಅವಕಾಶ ಸಂಸದರಿಗೆ ಇದ್ದರೂ ಅದನ್ನು ನಿರ್ಲಕ್ಷ್ಯಿಸಿ ವೀಸಾ ಕೊಡದಂತೆ ಅಮೆರಿಕಾ ಮೇಲೆ ಒತ್ತಡ ತಂತ್ರ ರೂಪಿಸುವ ಮೂರ್ಖತನ ಮತ್ತೊಂದಿಲ್ಲ.
ಇಂತಹ ಕ್ಷುಲ್ಲಕ ವಿಚಾರಕ್ಕೆ ತಮ್ಮ ಪದವಿಯ ಘನತೆ ಅರಿಯದೆ ವೀಸಾ ನಿರಾಕರಣೆ ಪತ್ರಕ್ಕೆ ಸಹಿ ಹಾಕಿರುವ ಲೋಕಸಭೆಯ 40 ಮಂದಿ ಸಂಸದರು, ರಾಜ್ಯ ಸಭೆಯ 25 ಮಂದಿ ಸಂಸದರು, 10ಕ್ಕೂ ಹೆಚ್ಚು ಸಚಿವರ ವಿಚಾರವೇ ತಲೆ ತಗ್ಗಿಸುವಂತಹದ್ದು. ಸೀತಾರಾಂ ಯೆಚೂರಿ, ಅಚ್ಯುತನ್ ಅವರಂತಹ ಹಿರಿಯ ಸಂಸದರು ಸಹಿ ನಿರಾಕರಣೆ ಮಾಡಿರುವುದು ಸ್ವಾಗತಾರ್ಹ.
ರಾಜಕೀಯ ಪಕ್ಷಗಳ ನಾಯಕರು, ಸಂಸದರು ಕ್ಷುಲ್ಲಕ ವಿಚಾರಕ್ಕೆ ಪತ್ರ ಬರೆದು ಹಾದಿ- ಬೀದಿರಂಪ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ. ಇದನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ರಚನಾತ್ಮಕ ಅಂಶಗಳತ್ತ ಗಮನಹರಿಸಲಿ.


 - ಕಲ್ಲಹಳ್ಳಿ ಮಂಜುನಾಥ್
ಸಂಪಾದಕರು, ಮಧುರಮಂಡ್ಯ ಸಂಜೆ ದಿನಪತ್ರಿಕೆ, ಮಂಡ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement