ಅಂಗವಿಕಲರ ದಿನ ಕೇವಲ 'ಡಿಸೆಂಬರ್ ಸಾಂತ್ವನ'ವಾಗದಿರಲಿ!
ನವೆಂಬರ್ ಕನ್ನಡಿಗರ ಮಾಸವಾದರೆ, ಡಿಸೆಂಬರ್ ಅಂಗವಿಕಲರ ಮಾಸ. ಇವೆರಡೂ ಸಾಕ್ಷೀಕರಿಸುವುದು ಒಂದರ್ಥದಲ್ಲಿ ಒಂದೇ ಬಗೆಯ ಅನಾಥ ಪ್ರಜ್ಞೆಯನ್ನೇ. ನವೆಂಬರ್ ತಿಂಗಳನ್ನು ಕಾಡುವುದು ಸಾಂಸ್ಕೃತಿಕ ಅನಾಥ ಪ್ರಜ್ಞೆಯಾದರೆ ಡಿಸೆಂಬರ್ ತಿಂಗಳನ್ನು ಕಾಡುವುದು ಸಾಮಾಜಿಕ ಅನಾಥ ಪ್ರಜ್ಞೆ.
ಒಂದು ಭಾಷೆಗೆ ಬೇಕಿರುವುದು ಆರ್ದ್ರವಾಗಿ ತೆರೆದುಕೊಳ್ಳುವ ಮನಸ್ಸುಗಳೇ ಹೊರತು ಆರ್ಭಟಿಸುವ ಆಕೃತಿಗಳಲ್ಲ. ದುರಂತವೆಂದರೆ ಇಲ್ಲಿ ಆಚರಿಸಲ್ಪಡುವ ಬಹುತೇಕ ಎಲ್ಲಾ ಬಗೆಯ ಹಬ್ಬಗಳು, ಸಂಭ್ರಮಗಳು ತಮ್ಮ ಅರ್ಥವನ್ನು ಕಳೆದುಕೊಂಡು ಅನ್ಯ ಉದ್ದೇಶಗಳನ್ನು ಪಡೆದುಕೊಳ್ಳುತ್ತಿವೆ.
ಪ್ರೀತಿ, ವಿಶ್ವಾಸ, ಅಭಿಮಾನಗಳಂತಹ ಉದಾತ್ತ ಭಾವನೆಗಳನ್ನು 'ಉದ್ದೇಶ' ಆವರಿಸಿಕೊಳ್ಳುತ್ತಿದೆ. ನಾಡು ನುಡಿ ಸಂಸ್ಕೃತಿಗಳನ್ನು ಜೀವಂತಗೊಳಿಸಬೇಕಾಗಿರುವ ನುಡಿಹಬ್ಬ ದ್ವಂದ್ವಾರ್ಥ, ಅಬ್ಬರದ ಹಾಡುಗಳಿಗೆ ಮೈ ಕೊಡವಿ ನಿಂತು ಪಾಶ್ಚಿಮಾತ್ಯ ಸಂಸ್ಕೃತಿಯ ಅರೆಬರೆ ನೃತ್ಯಗಳನ್ನು ತನ್ನ ತೆಕ್ಕೆಗೆ ಸಲೀಸಾಗಿ ಸೆಳೆದುಕೊಳ್ಳುತ್ತಾ ಸಾಂಸ್ಕೃತಿಕ ತಲ್ಲಣವನ್ನುಂಟು ಮಾಡುತ್ತಿದೆ. ಅಷ್ಟು ಸಾಲದೆಂಬಂತೆ ನಾಡದೇವಿಯನ್ನು ಪೂಜಿಸಬೇಕಾದ ಜಾಗದಲ್ಲಿ ರಾಜಕಾರಣಿಗಳನ್ನು ವೈಭವೀಕರಿಸುವ, ಬಡಾವಣೆಯ ಪುಢಾರಿಗಳನ್ನು ಪ್ರಮೋಟ್ ಮಾಡುವ ರಾಜಕೀಯ ಸಭೆಗಳಾಗಿ ರಾಜ್ಯೋತ್ಸವಗಳು ಮಾರ್ಪಾಡುಗೊಳ್ಳುತ್ತಿವೆ.
ಇಂತಹ ಅರ್ಥಹೀನ ಆಚರಣೆಗಳ ಸದ್ದು ಗದ್ದಲಗಳನ್ನು ಕನ್ನಡಿಗರ ಮಾಸವೂ ಅರಗಿಸಿಕೊಳ್ಳುವುದರೊಂದಿಗೆ ಮುಂದಿನ ಪೀಳಿಗೆಗೂ ಇದೇ ಸಂಸ್ಕೃತಿಯನ್ನೇ ರವಾನಿಸುತ್ತಿದೆ. ಹೀಗೆ ಬರೋಬರಿ 30 ದಿನಗಳು ಅಥವಾ ಕೆಲವೊಮ್ಮೆ 30 ದಿನಗಳನ್ನೂ ಮೀರಿದ ನವೆಂಬರ್ ಸಂಭ್ರಮಗಳ ಬೆನ್ನಲ್ಲೇ ಅಂಗವಿಕಲರ ಮಾಸಾಚರಣೆಯೂ ಮೊದಲುಗೊಳ್ಳುತ್ತದೆ.
80ರ ದಶಕ ಆರಂಭಗೊಳ್ಳುವವರೆಗೂ ಅಂಗವಿಕಲರನ್ನು ಗುರುತಿಸಬಹುದಾದ ಅವರು ಆಚರಿಸಿಕೊಳ್ಳಬಹುದಾದ ಯಾವುದೇ ಸಾಂಕೇತಿಕ ದಿನವನ್ನು ಅಧಿಕೃತವಾಗಿ ಘೋಷಿಸಿದ್ದಿರಲಿಲ್ಲವೆಂಬುದು ಈ ಸಮುದಾಯಕ್ಕೆ ತಿಳಿದ ಸಂಗತಿಯೇ. ಆದರೆ ವಿಶ್ವಮಾನ್ಯ ಲೂಯಿ ಬ್ರೈಲ್ರವರ ಹಾಗೂ ಹೆಲನ್ ಕೆಲ್ಲರ್ ಹುಟ್ಟು ಹಬ್ಬಗಳನ್ನು ವಿಶೇಷವಾಗಿ ಅಂಧರು, ಅಂಗವಿಕಲರು ಆಗೊಮ್ಮೆ ಈಗೊಮ್ಮೆ ಸಂಘ ಸಂಸ್ಥೆಗಳ ಮೂಲಕ ಆಚರಿಸಿ ನಿಜವಾದ ಅರ್ಥದಲ್ಲಿ ಸಂಭ್ರಮಿಸುತ್ತಿದ್ದುದು ಈಗ ಕೇವಲ ನೆನಪಷ್ಟೆ. ಇದರ ಅರ್ಥ ಆಚರಣೆಗಳೇ ಇಲ್ಲವೆಂದಲ್ಲ. ಇಂತಹ ಆಚರಣೆಗಳ ಹಿಂದೆ, ಹುಟ್ಟು ಹಬ್ಬಗಳ ಹಿಂದೆ ಹುಟ್ಟಿಕೊಳ್ಳುತ್ತಿರುವ ಲಾಭ ನಷ್ಟಗಳು, ಲೆಕ್ಕಾಚಾರಗಳು, ಸಾಧಕರ ಜನ್ಮ ದಿನಗಳೂ ಕೂಡ ಇಲ್ಲಿ ಹೂಡಬಹುದಾದ ಬಂಡವಾಳವಾಗಿ ಮಾರ್ಪಾಡುಗೊಳ್ಳುತ್ತಿರುವ ತಂತ್ರಗಾರಿಕೆಗಳು ಸಂಭ್ರಮವನ್ನು ಕುಗ್ಗಿಸಿ ಲಾಭವನ್ನು ಹೆಚ್ಚಿಸುತ್ತಿವೆ.
1981ರ ವರೆಗೂ ಆಚರಣೆಗಳನ್ನು ಕಂಡರಿಯದ ಅಂಗವಿಕಲ ಸಮುದಾಯವು 1981ರ ತರುವಾಯ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆಯನ್ನು ಆಚರಿಸಿಕೊಳ್ಳಲು ಶುರುಮಾಡಿತು. ಅಂಗವಿಕಲರನ್ನು ಸಾಮಾಜಿಕವಾಗಿ ಗುರುತಿಸುವ, ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಸದುದ್ದೇಶದಿಂದ ವಿಶ್ವ ಸಂಸ್ಥೆಯು 1981 ರ ವರ್ಷವನ್ನು ಅಂತಾರಾಷ್ಟ್ರೀಯ ಅಂಗವಿಕಲ ವರ್ಷವೆಂದು ಅಧಿಕೃತವಾಗಿ ಘೋಷಣೆ ಮಾಡಿತು.
ಇದರ ತರುವಾಯ ಪ್ರತಿ ವರ್ಷದ ಮಾರ್ಚ್ ತಿಂಗಳ ಮೂರನೇ ವಾರದ ಯಾವುದಾದರೊಂದು ದಿನದಂದು ಅಂಗವಿಕಲರ ದಿನಾಚರಣೆಯನ್ನು ಆಚರಿಸಬಹುದೆಂದು ವಿಶ್ವಸಂಸ್ಥೆಯು ಸೂಚನೆ ಹೊರಡಿಸಿತು. ಅಂತೂ ಚಂದ್ರ ಕಾಣಿಸಿದ ಮರುದಿನದ ಸಡಗರದಂತೆ ಮಾರ್ಚ್ ಮೂರನೇ ವಾರದ ಬಹುತೇಕ ಭಾನುವಾರದ ರಜಾ ದಿನಗಳಂದು ಈ ಅಂತಾರಾಷ್ಟ್ರೀಯ ದಿನವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆಯಾಯಿತು.
ಸುಮಾರು ಹನ್ನೆರಡು ವರ್ಷಗಳವರೆಗೆ ನಡೆದ ಈ ಬಗೆಯ ಸ್ಪಷ್ಟ ಆಚರಣೆ ಕಡೆಗೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 1993ರ ಏಷ್ಯಾ ರಾಷ್ಟ್ರಗಳ ಬೀಜಿಂಗ್ ಶೃಂಗ ಸಭೆಯಲ್ಲಿ (ಏಷ್ಯಾ ಫೆಸಿಫಿಕ್ ಕಾನ್ಫೆರೆನ್ಸ್) ನಿರ್ದಿಷ್ಟ ದಿನಾಂಕವನ್ನು ಘೋಷಿಸಲಾಯಿತು.
ಈ ಘೋಷಣೆಯ ಅನ್ವಯ ಪ್ರತಿ ವರ್ಷದ ಡಿಸೆಂಬರ್ 3ನೇ ದಿನಾಂಕವನ್ನು ವಿಶ್ವಾದ್ಯಂತ ಅಂಗವಿಕಲರ ದಿನವೆಂದು ಅಧಿಕೃತವಾಗಿ ಆಚರಿಸಲಾಗುತ್ತಿರುವುದು ಈಗ ಇತಿಹಾಸ. ನಮ್ಮ ರಾಜ್ಯ ಸರ್ಕಾರಗಳು ಅಂಗವಿಕಲರ ಸಬಲೀಕರಣ ಇಲಾಖೆಯ ಮೂಲಕ ಇದನ್ನು ಆಚರಿಸಿಕೊಂಡು ಬರುತ್ತಿವೆ. ಸರ್ಕಾರದ ವತಿಯಿಂದ ನಡೆದರೂ ಇದೊಂದು ಅಪ್ಪಟ ಸರ್ಕಾರಿ ಸಮಾರಂಭವಲ್ಲದ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಡಿ ನಡೆಯುವ ಸಮಾರಂಭವಾಗಿರುತ್ತದೆ. ಅಂತೆಯೇ 1981 ರಲ್ಲಿ ವಿಶ್ವ ಸಂಸ್ಥೆಯಿಂದ ಅಧಿಕೃತವಾಗಿ ಘೋಷಿಸಲ್ಪಟ್ಟ ಈ ದಿನಾಚರಣೆ ವರ್ಷಗಳು ಕಳೆದಂತೆ ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತಿದೆ. ಅಂಗವಿಕಲರ ಸಮಗ್ರ ಚಿಂತನೆ, ಸಾಮಾಜಿಕ ಸಮಾನತೆ, ಸಮನ್ವಯತೆಗಳ ಬಗೆಗೆ ಬೆಳಕು ಚೆಲ್ಲಬೇಕಾಗಿರುವ ಈ ಕಾರ್ಯಕ್ರಮಗಳು ಕೇವಲ ಅಂಗವಿಕಲರ ಮ್ಯೂಸಿಯಂ ನಿರ್ಮಾಣದಂತಹ ವಾತಾವರಣವನ್ನು ಸೃಷ್ಟಿಸುತ್ತಿವೆ.
ಅಂಧರಿಗೆ, ಅಂಗವಿಕಲರಿಗೆ ಬಿಳಿಕೋಲು, ಬ್ರೈಲ್ವಾಚ್, ಕೃತಕ ಕಾಲುಗಳು ಮತ್ತು ಶ್ರವಣ ಸಾಧನೆಗಳನ್ನು ವಿತರಿಸುವುದನ್ನೇ ಪರಿಪಾಠ ಮಾಡಿಕೊಂಡು ಬಂದಿರುವ ಇಲಾಖೆ ಬುದ್ಧಿಮಾಂದ್ಯ ಮಕ್ಕಳಿಗೆ ಯಾವ ಸಾಧನ ಸಲಕರಣೆಗಳನ್ನು ವಿತರಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇಲಾಖೆಯ ಮಾತು ಹಾಗಿರಲಿ, ಈ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮಂತ್ರಿ ಮಹೋದಯರಿಗೆ ಅಂಗವಿಕಲರ ಕಲ್ಯಾಣಕ್ಕಾಗಿ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಿಸುವ ಪ್ರಮೇಯವೇ ಇರುವುದಿಲ್ಲ! ಏಕೆಂದರೆ ಅವರು ವಾಚಿಸುವುದು ಇಲಾಖೆಯು ಸಿದ್ದಪಡಿಸಿದ ವರದಿಯನ್ನು ಮಾತ್ರ. ಏಕ ಪಕ್ಷೀಯವಾಗಿ ಹೆಣೆದ ಯೋಜನೆಗಳನ್ನು ಅನುಷ್ಟಾನಗೊಳಿಸುವುದಕ್ಕೇ ಹೆಣಗಾಡುವ ಇಲಾಖೆಯಿಂದ ಹೊಸ ಯೋಜನೆಗಳನ್ನು ಪ್ರಕಟಿಸಲು ಹೇಗೆ ಸಾಧ್ಯ?
ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ಅಂಗವಿಕಲರ ಸಾಮಾಜಿಕ ಭದ್ರತೆ ಪಿಂಚಣಿಯನ್ನು ಹೆಚ್ಚಿಸುತ್ತಿರುವುದೇ ಅಂಗವಿಕಲರಿಗೆ ನೀಡಲಾಗುತ್ತಿರುವ ದೊಡ್ಡ ಕೊಡುಗೆ ಎಂದು ಭ್ರಮಿಸಿರುವ ಸರ್ಕಾರ ಹೊಸ ಯೋಜನೆಗಳನ್ನಾದರೂ ಹೇಗೆ ಅಂಗೀಕರಿಸಿತು? ಇದರ ನಡುವೆ ಇನ್ನೊಂದು ನಗೆಪಾಟಲಿನ ಸಂಗತಿ ಎಂದರೆ ಈ ರಾಜ್ಯದ ಮುಖ್ಯಮಂತ್ರಿಯಿಂದ, ಇಲ್ಲವೆ ಸಂಬಂಧಪಟ್ಟ ಸಚಿವರಿಂದ ಬ್ರೈಲ್ ಕ್ಯಾಲೆಂಡರನ್ನು ಬಿಡುಗಡೆಗೊಳಿಸುತ್ತಿರುವುದು. ಕಳೆದ ನಾಲ್ಕೈದು ವರ್ಷಗಳಿಂದಲೂ ಈ ಪರಿಪಾಠವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅತ್ಯಾಧುನಿಕ ಬ್ರೈಲ್ ಮುದ್ರಣ ವ್ಯವಸ್ಥೆಯನ್ನು ಹೊಂದಿರುವ ಇಲಾಖೆಗೆ ಒಂದು ಉತ್ತಮ ಸಾಹಿತ್ಯಿಕ ಕೃತಿಯನ್ನು ಹೊರತರಲಾಗದಿದ್ದರೂ ಚಿಂತೆಯಿಲ್ಲ, ಆದರೆ ಹನ್ನೆರಡು ಹಾಳೆಗಳ ಒಂದು ಕ್ಯಾಲೆಂಡರನ್ನು ಬಿಡುಗಡೆಗೊಳಿಸಿ ಸ್ವಯಂ ತುತ್ತೂರಿ ಊದಿಕೊಳ್ಳುವ ಈ ಕಾರ್ಯ ನಿಲ್ಲಬೇಕಾಗಿದೆ.
ಏತನ್ಮಧ್ಯೆ ವಿಶ್ವ ಅಂಗವಿಕಲರ ದಿನಾಚರಣೆಯ ಸಂದರ್ಭದಲ್ಲಿ ಅರ್ಹತಾ ಪತ್ರಗಳನುಸಾರ ಒಂದಷ್ಟು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಮಾಧಾನಕರ ಅಂಶವಾದರೂ ಇಲ್ಲಿ ಯೋಗ್ಯತೆಯನ್ನು ಗಂಭೀರವಾಗಿ ಪರಿಗಣಿಸುವ ಪ್ರಯತ್ನ ಆಗಬೇಕಾಗಿದೆ. ಸಮಾಜದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಂಗವಿಕಲ ಸಮುದಾಯಗಳ ಸುತ್ತ ಹರಿದಾಡುವ 'ಡಿಸೆಂಬರ್ ಸಾಂತ್ವನ' ಕೇವಲ ಒಂದು ದಿನದ ಒಡ್ಡೋಲಗವಾಗದೇ ಈ ಜನಾಂಗದ ಆಶೋತ್ತರಗಳನ್ನು ಗೌರವಿಸುವ, ಎಲ್ಲಕ್ಕಿಂತಲೂ ಮುಖ್ಯವಾಗಿ ಅಂಗವಿಕಲರನ್ನು ಈ ಸಮಾಜದಿಂದ ಪ್ರತ್ಯೇಕಿಸಿ ನೋಡುವಂತಹ ಮಡಿವಂತಿಕೆಯಿಂದ ಇವರನ್ನು ಮುಕ್ತಗೊಳಿಸುವ ಹಾಗೂ ಈ ಸಮುದಾಯವನ್ನು ಕಾಡುತ್ತಿರುವ ಅನಾಥ ಪ್ರಜ್ಞೆಯನ್ನು ಹೋಗಲಾಡಿಸುವ ಸಾರ್ಥಕ ಪ್ರಯತ್ನಗಳನ್ನು ನಡೆಸಬೇಕಾಗಿರುವುದು ಇಲಾಖೆ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಹೊಣೆಯಾಗಿದೆ.
- ಮುದಿಗೆರೆ ರಮೇಶ್ಕುಮಾರ್
ಕರ್ನಾಟಕ ಅಂಧರ ವಿಮೋಚನಾ ವೇದಿಕೆ