ಇರಾನ್ನ ಮೇಲೆ ದಾಳಿ ಮಾಡುವುದೇ ಇಸ್ರೇಲ್?
ಇಸ್ರೇಲ್ ಮತ್ತು ಇರಾನ್ನ ನಡುವಿನ ವೈರತ್ವ ಇಂದಿನದ್ದಲ್ಲ. ಅನೇಕ ವರ್ಷಗಳಿಂದ ಈ ಎರಡೂ ರಾಷ್ಟ್ರಗಳ ನಡುವಿನ ಜಗಳವನ್ನು ಪ್ರಪಂಚ ನೋಡುತ್ತಲೇ ಇದೆ.
ಇಸ್ರೇಲ್ ಮತ್ತು ಇರಾನ್ನ ನಡುವಿನ ವೈರತ್ವ ಇಂದಿನದ್ದಲ್ಲ. ಅನೇಕ ವರ್ಷಗಳಿಂದ ಈ ಎರಡೂ ರಾಷ್ಟ್ರಗಳ ನಡುವಿನ ಜಗಳವನ್ನು ಪ್ರಪಂಚ ನೋಡುತ್ತಲೇ ಇದೆ. 'ಇರಾನ್ ಪರಮಾಣು ಬಾಂಬ್ ತಯಾರಿಸಿದ್ದು, ಅದನ್ನು ತನ್ನ ಮೇಲೆ ಪ್ರಯೋಗಿಸಲಿದೆ' ಎಂದು ಮೊದಲಿನಿಂದಲೂ ಇಸ್ರೇಲ್ ಹೇಳುತ್ತಲೇ ಬಂದಿದೆ. ಪ್ರಪಂಚದ ಬಲಾಢ್ಯ ರಾಷ್ಟ್ರಗಳೆಲ್ಲವಕ್ಕೂ ಇರಾನ್ನ ಮೇಲೆ ಅನುಮಾನವಿದ್ದೇ ಇದೆ. ಇದೇನೇ ಇದ್ದರೂ ಇತ್ತೀಚೆಗೆ ಜಿನೀವಾದಲ್ಲಿ ನಡೆದ ಸರಣಿ ಮಾತುಕತೆಗಳಿಂದಾಗಿ ಇರಾನ್ನ ಪರಮಾಣು ತಂತ್ರಜ್ಞಾನ ಬಳಕೆಗೆ ತಾತ್ಕಾಲಿಕವಾಗಿ ಕಡಿವಾಣವಂತೂ ಬಿದ್ದಿದೆ.
ಇಷ್ಟೆಲ್ಲ ಆದರೂ ಕೂಡ ಇಸ್ರೇಲ್ ತನ್ನ ರಾಷ್ಟ್ರೀಯ ಭದ್ರತೆಗಾಗಿ ಇರಾನ್ನ ಮೇಲೆ ದಾಳಿ ಮಾಡುವುದು ನಿಶ್ಚಿತ ಎಂದೇ ಹಲವರು ಭಾವಿಸುತ್ತಾರೆ. ಉದಾಹರಣೆಗೆ, ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕ ವಿಲಿಯಮ್ ಕ್ರಿಸ್ಟಲ್ ಏನು ಹೇಳುತ್ತಾರೋ ನೋಡಿ- "ಇರಾನ್ ಅನ್ನು ಆರು ತಿಂಗಳು ಕಟ್ಟಿಹಾಕಿದಾಕ್ಷಣ ಇಸ್ರೇಲ್ ಸುಮ್ಮನಾಗುತ್ತದೆಂದು ನಾವು ಭಾವಿಸುವುದಿಲ್ಲ. ಒಂದು ವೇಳೆ ದಾಳಿ ಮಾಡಲೇಬೇಕು ಎಂದು ಇಸ್ರೇಲ್ ನಿರ್ಧರಿಸಿದ್ದರೆ ಅದು ಮಾಡಿಯೇ ತೀರುತ್ತದೆ".
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಸಂಶಯವನ್ನು ತೊಲಗಿಸಲು ಮುಂದಾಗಿಲ್ಲ. ಈ ಒಪ್ಪಂದವನ್ನು ಅವರು 'ಐತಿಹಾಸಿಕ ಪ್ರಮಾದ' ಎಂದು ಕರೆದಿರುವುದಷ್ಟೇ ಅಲ್ಲದೆ, "ಇಸ್ರೇಲ್ ಅನ್ನು ನಾಶ ಮಾಡುವುದೇ ಇರಾನ್ನ ಮುಖ್ಯ ಉದ್ದೇಶ, ಹಾಗಾಗೇ ಅಪಾಯವನ್ನು ತಡೆಗಟ್ಟುವುದಕ್ಕೆ ನಾವು ಆದ್ಯತೆ ನೀಡುತ್ತೇವೆ" ಎಂದಿದ್ದಾರೆ.
ಆದರೆ, ಇಸ್ರೇಲ್ ನಿಜಕ್ಕೂ ಇರಾನ್ನ ಮೇಲೆ ದಾಳಿ ಮಾಡಲಿದೆಯೇ? ಸತ್ಯವೇನೆಂದರೆ, ಈ ವಿಷಯವನ್ನು ಮೊದಲಿನಿಂದಲೂ ಬಹಳ ಉತ್ಪ್ರೇಕ್ಷೆ ಮಾಡುತ್ತಲೇ ಬರಲಾಗುತ್ತಿದೆ. ಇರಾನ್ನ ಮೇಲೆ ಇಸ್ರೇಲ್ ಏಕೆ ದಾಳಿ ಮಾಡುವುದಿಲ್ಲ ಎನ್ನುವುದಕ್ಕೆ ನಾನು 5 ಕಾರಣಗಳನ್ನು ಕೊಡುತ್ತೇನೆ.
1) ಒಂದು ವೇಳೆ ಇಸ್ರೇಲ್ಗೆ ಇರಾನ್ನ ಅಣು ಸ್ಥಾವರಗಳ ಮೇಲೆ ದಾಳಿ ಮಾಡಬೇಕು ಎಂಬ ಉದ್ದೇಶವಿದ್ದಿದ್ದೇ ಆದರೆ, ಅದು ಆ ಕೆಲಸವನ್ನು ಎಂದೋ ಮಾಡಿ ಮುಗಿಸುತ್ತಿತ್ತು. 1973ರ 'ಯಾಮ್ ಕಿಪ್ಪರ್ ಯುದ್ಧ'(ಈಜಿಪ್ಟ್ ಮತ್ತು ಸಿರಿಯಾದ ಸೇನೆ ಇಸ್ರೇಲ್ನ ಮೇಲೆ ಹಠಾತ್ ದಾಳಿ ನಡೆಸಿದ್ದವು)ದ ನಂತರ ಇಸ್ರೇಲ್ ತನ್ನ ಸುರಕ್ಷತೆಯ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದಕ್ಕೆ ಶುರು ಮಾಡಿತು. ಮುಂದೆ ಸಿರಿಯಾದ ಏಕೈಕ ಪರಮಾಣು ಸ್ಥಾವರ ಮತ್ತು ಸದ್ದಾಂ ಹುಸೇನ್ ಅವರ ಪರಮಾಣು ಯೋಜನೆಯ(ಒಂದು ಸ್ಥಾವರ) ಮೇಲೆ ಬಾಂಬ್ ದಾಳಿ ಮಾಡಿ ಧ್ವಂಸ ಮಾಡಿತ್ತು. ಆದರೆ ಅದೇ ಇಸ್ರೇಲ್ ಇರಾನ್ನೊಂದಿಗೆ ಹೇಗೆ ನಡೆದುಕೊಂಡಿತೋ ನೋಡಿ. ಇರಾನ್ನ ನತಾಂಝ್ನಲ್ಲಿನ ಯುರೇನಿಯಂ ಸಂವರ್ಧನಾ ಘಟಕ ಮತ್ತು ಅರಾಕ್ನಲ್ಲಿನ ಹೆವಿ ವಾಟರ್ ರಿಯಾಕ್ಟರ್ಗಳು ಬೆಳಕಿಗೆ ಬಂದು ಅದಾಗಲೇ ಒಂದು ದಶಕ ಕಳೆಯಿತು. ಆದರೂ ಇಸ್ರೇಲ್ ಇದುವರೆಗೂ ಮೌನವಹಿಸಿದೆ. ಇನ್ನು ಅಮೆರಿಕ ಇರಾನ್ನ ಮೇಲೆ ದಾಳಿ ಮಾಡುವುದು ದೂರದ ಮಾತಾಯಿತು ಎನ್ನುವುದು ಇಸ್ರೇಲ್ಗೆ 2008ರಲ್ಲೇ ಸ್ಪಷ್ಟವಾಗಿತ್ತು.
2)ಒಂದು ವೇಳೆ ಇಸ್ರೇಲ್ ಏನಾದರೂ ಇರಾನ್ನ ಪರಮಾಣು ಘಟಕಗಳ ಮೇಲೆ ದಾಳಿ ಮಾಡಿತೆಂದರೆ, ಇದನ್ನೇ ನೆಪವಾಗಿಟ್ಟುಕೊಂಡು ಇರಾನ್ ಪರಮಾಣು ಬಾಂಬ್ ತಯಾರಿಸುವುದಕ್ಕೆ ಮುಂದಾಗಬಹುದು. ಅಲ್ಲದೆ, ಇರಾನ್ನ ಮಾಜಿ ಅಧ್ಯಕ್ಷ ಮತ್ತು ಶಿಯಾ ಪಂಗಡದ ಧಾರ್ಮಿಕ ನೇತಾರ ಅಲಿ ಖಮೆನಿ ಅವರು ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಹೊರಡಿಸಿದ್ದ ಫತ್ವಾವನ್ನು ಹಿಂದಕ್ಕೆ ಪಡೆಯಬಹುದು! ಇನ್ನು ಈ ನಡೆ ಇರಾನ್ ಪ್ರಭುತ್ವಕ್ಕೆ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ (ಎನ್ಪಿಟಿ)ದಿಂದ ಹೊರಬರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ತನ್ನ ಮೇಲೆ ದಾಳಿಯಾದರೂ ತೆಹ್ರಾನ್ನ ಸದಸ್ಯರು ಸುಮ್ಮನೆ ನೋಡುತ್ತಾ ನಿಂತರು, ಇಂಥ ಸನ್ನಿವೇಶದಲ್ಲಿ ಒಪ್ಪಂದದಿಂದ ಹೊರಬರುವುದೇ ಸೂಕ್ತವಲ್ಲವೇ ಎಂದು ಇರಾನ್ ವಾದಿಸಬಹುದು. ಆಗ ಪ್ರಪಂಚಕ್ಕೆ ಅದರ ವಾದದಲ್ಲಿಯೂ ಸತ್ಯವಿದೆ ಎಂದನ್ನಿಸಿಬಿಡಬಹುದು. ಕೊನೆಯದಾಗಿ ದಾಳಿಯ ನಂತರ ಇರಾನ್ಗೆ ಅಂತಾರಾಷ್ಟ್ರೀಯ ಅನುದಾನಗಳು ಬಿಡುಗಡೆಯಾಗಬಹುದು, ಆಗ ಅದೇ ಹಣವನ್ನು ಬಳಸಿ ಅದು ಪರಮಾಣು ಬಾಂಬ್ ತಯಾರಿಸಬಹುದು.
3) ಇರಾನ್ನ ಮೇಲೆ ಒಂದು ವೇಳೆ ಇಸ್ರೇಲ್ ದಾಳಿ ಮಾಡಿತೆಂದರೆ, ನಿಸ್ಸಂಶಯವಾಗಿಯೂ ಇರಾನ್ಗೆ ಬಹಳ ಲಾಭವಾಗಲಿದೆ ಮತ್ತು ಟೆಲ್ ಅವೀವ್ಗೆ(ಇಸ್ರೇಲ್ನ ಅತಿದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರ) ಅನೇಕ ಸಮಸ್ಯೆಗಳು ಎದುರಾಗಲಿವೆ. ಅರಬ್ ಪ್ರಪಂಚದಲ್ಲಿ ಮತ್ತೆ ತನ್ನ ಪ್ರಾಮುಖ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಅರಬ್ ಪ್ರಭುಗಳ ಮೇಲೆ ಹೆಚ್ಚು ಒತ್ತಡ ಹೇರಲು ಇರಾನ್ಗೆ ಸಾಧ್ಯವಾಗುತ್ತದೆ.
ಇರಾನ್ ಏನಾದರೂ ಇಸ್ರೇಲ್ ಮೇಲಿನ ಕೋಪದಿಂದ ಅಮೆರಿಕದ ಪ್ರಾದೇಶಿಕ ಸ್ವತ್ತುಗಳಿಗೆ ಹಾನಿ ಮಾಡಿತೆಂದರೆ ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಹೊಡೆತ ಬೀಳಲಿದೆ. ಅದಾಗ್ಯೂ ಯುದ್ಧಗಳಿಂದ ರೋಸಿಹೋಗಿರುವ ಅಮೆರಿಕದ ಜನತೆ ಮತ್ತೊಂದು ಮಧ್ಯ ಪ್ರಾಚ್ಯದ ಸಮಸ್ಯೆಯಲ್ಲಿ ತಮ್ಮ ರಾಷ್ಟ್ರವನ್ನು ಸಿಲುಕಿಸದಿರುವಂತೆ ಸರ್ಕಾರಕ್ಕೆ ಎಚ್ಚರಿಸುತ್ತಿದ್ದಾರೆ. ಸರಳವಾಗಿ ಹೇಳಬೇಕೆಂದರೆ, ಇಸ್ರೇಲ್ ಒಂದು ವೇಳೆ ಇರಾನ್ನ ಮೇಲೆ ಮುಗಿಬಿತ್ತೆಂದರೆ ಅಮೆರಿಕಕ್ಕೂ ನಷ್ಟವಾಗುವುದು ಖಚಿತ!
ಅಲ್ಲದೆ ಕೆಲವು ವರ್ಷಗಳಿಂದ ಇಸ್ರೇಲ್ ಮತ್ತು ಸುನ್ನಿ ಅರಬ್ ರಾಷ್ಟ್ರಗಳ ನಡುವೆ ಮಧುರ ಸಂಬಂಧ ಬೆಳೆದಿದೆ. ಈ ಸಂಬಂಧ ರಾತ್ರೋರಾತ್ರಿ ಹಾಳಾಗುವುದಂತೂ ನಿಶ್ಚಿತ. ಸುನ್ನಿ ಅರಬ್ ರಾಷ್ಟ್ರಗಳ ಬುದ್ಧಿಜೀವಿಗಳು ಇಸ್ರೇಲ್ನ ನಡೆಯನ್ನು ಒಳಗೊಳಗೆ ಮೆಚ್ಚುತ್ತಾರಾದರೂ, ತಮ್ಮ ದೇಶದಲ್ಲಿ ಎದ್ದಿರುವ ಸಮೂಹ ಭಾವನೆಗೆ ಹೆದರಿ ಆ ಬಗ್ಗೆ ಬಹಿರಂಗವಾಗಿ ಮಾತನಾಡಲಾರರು ಮತ್ತು ಟೆಲ್ ಅವಿವಿಯಿಂದ ದೂರವೇ ಉಳಿಯಲಿದ್ದಾರೆ. ಮುಂದೆ ಏಶಿಯಾ ಮತ್ತು ಯುರೋಪ್ನ ಕಣ್ಣಿಗೆ ಇಸ್ರೇಲ್ ಖಳನಾಯಕನಾಗಿ ಕಾಣಿಸುತ್ತದೆ.
4) ಇರಾನ್ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡಲು ನೆತನ್ಯಾಹು ಅವರೇನೋ ಸಿದ್ಧರಿರಬಹುದು. ಆದರೆ ಇಸ್ರೇಲ್ನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲವಾದ ಬುದ್ಧಿಜೀವಿಗಳ ಸಮೂಹವಿದೆ. ರಾಷ್ಟ್ರೀಯ ಭದ್ರತಾ ವಲಯವಂತೂ ಈ ಸಮೂಹದ ಹಿಡಿತದಲ್ಲೇ ಇದೆ. ಇವರನ್ನು ಎದುರುಹಾಕಿಕೊಳ್ಳುವುದು ನೆತನ್ಯಾಹುಗೆ ಸಾಧ್ಯವಿಲ್ಲ. ಅಲ್ಲದೆ, ಆ ರಾಷ್ಟ್ರದಲ್ಲಿ ಯಾವುದೇ ಮಿಲಿಟರಿ ಕಾರ್ಯಾಚರಣೆ ಶುರುವಾಗಬೇಕೆಂದರೆ, ಇಡೀ ಭದ್ರತಾ ಕ್ಯಾಬಿನೆಟ್ನ ಬೆಂಬಲ ಅದಕ್ಕೆ ಸಿಗಬೇಕು. ಕೇವಲ ಒಬ್ಬ ವ್ಯಕ್ತಿಗೆ ಅಥವಾ ಇಬ್ಬರಿಗೆ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಈಗ ಇರಾನ್ ಒಡ್ಡುತ್ತಿರುವುದಕ್ಕಿಂತಲೂ ಹೆಚ್ಚು ಅಪಾಯವನ್ನು ಹಿಂದೊಮ್ಮೆ ಇರಾಕ್ನಿಂದ ಎದುರಿಸಿತ್ತು ಇಸ್ರೇಲ್. ಆದರೆ ಅದರ ಮೇಲೆ ದಾಳಿ ನಡೆಸಲು ಇಸ್ರೇಲ್ನ ಅಂದಿನ ಪ್ರಧಾನಿ ಮೆನಾಚೆಮ್ ಬೆಗಿನ್ ಅವರಿಗೆ ಬೆಂಬಲ ಸಿಗಲೇ ಇಲ್ಲ. ಈಗಂತೂ ಇರಾನ್ನ ವಿರುದ್ಧದ ನೆತನ್ಯಾಹುರ ನೀತಿಗಳನ್ನು ಅನೇಕ ಮಿಲಿಟರಿ ಅಧಿಕಾರಿಗಳು ಬಹಿರಂಗವಾಗಿಯೇ ಖಂಡಿಸುತ್ತಿದ್ದಾರೆ.
5) ಕೊನೆಯದಾಗಿ, ಇಸ್ರೇಲ್ ಇರಾನ್ನ ಮೇಲೆ ಏಕೆ ದಾಳಿ ಮಾಡುವುದಿಲ್ಲವೆಂದರೆ- ಇರಾನ್ ಮತ್ತು ಅಮೆರಿಕದ ನಡುವೆ ಒಪ್ಪಂದವಾದರೆ ತನ್ನ ರಾಷ್ಟ್ರೀಯ ಭದ್ರತೆಗೆ ಹಾನಿಯಾಗುವುದು ತಪ್ಪುತ್ತದೆ ಎನ್ನುವುದು ಇಸ್ರೇಲ್ಗೆ ಗೊತ್ತಿದೆ. ಅದಾಗ್ಯೂ ಅಮೆರಿಕ-ಇರಾನ್ ಪರಮಾಣು ಒಪ್ಪಂದದಿಂದ ಇಸ್ರೇಲ್ಗೆ ನೇರವಾಗಿ ಮತ್ತು ಪರೋಕ್ಷವಾಗಿ ಲಾಭವಾಗಲಿದೆ. ಈಗಂತೂ ಇರಾನ್ಗೆ, ಇಸ್ರೇಲ್ ವಿರೋಧಿ ರಾಷ್ಟ್ರಗಳಿಂದ ದಂಡಿಯಾಗಿ ಹಣ ಹರಿದುಬರುತ್ತಿದೆ. ಒಂದು ವೇಳೆ ಇರಾನ್ ಅಮೆರಿಕದ ಜೊತೆ ಕೈ ಜೋಡಿಸಿತೆಂದರೆ, ಆ ರಾಷ್ಟ್ರಗಳೆಲ್ಲ ಇಸ್ರೇಲ್ನತ್ತ ಮುಖ ಮಾಡಬಹುದು. ಹಾಗಂತ ಶಾಹ್ ಅಥವಾ ಇಸ್ಲಾಮಿಕ್ ರಿಪಬ್ಲಿಕ್ನಡಿಯಲ್ಲಿ ಅನುಭವಿಸಿದಂಥ ಸ್ನೇಹವೇ ಅಮೆರಿಕದಡಿಯಲ್ಲಿ ಇರಾನ್ ಮತ್ತು ಇಸ್ರೇಲ್ಗೆ ದೊರೆಯುತ್ತದೆ ಎಂದಲ್ಲ. ಆದರೆ ಇರಾನ್ನಿಂದ ಎದುರಾಗುವ ಕಿರಿಕಿರಿಯಿಂದಲಂತೂ ಇಸ್ರೇಲ್ ತಪ್ಪಿಸಿಕೊಳ್ಳುತ್ತದೆ. ಇತಿಹಾಸದತ್ತ ದೃಷ್ಟಿ ಹರಿಸಿದಾಗ, ಒಂದಂಶವಂತೂ ಸ್ಪಷ್ಟವಾಗುತ್ತದೆ. ಅಮೆರಿಕದ ಜೊತೆ ದೋಸ್ತಿ ಮಾಡಿಕೊಂಡ ಮಧ್ಯ ಪ್ರಾಚ್ಯ ರಾಷ್ಟ್ರಗಳು ಯಹೂದಿ ರಾಷ್ಟ್ರದೊಂದಿಗೆ(ಇಸ್ರೇಲ್) ಸೌಜನ್ಯಯುತವಾಗಿಯೇ ವರ್ತಿಸಿವೆ. ಆದರೆ ಅಮೆರಿಕದ ಶತ್ರುರಾಷ್ಟ್ರಗಳ ವಿಷಯದಲ್ಲಿ ಹೀಗೆ ಹೇಳುವುದಕ್ಕೆ ಸಾಧ್ಯವಿಲ್ಲ.
ಅಮೆರಿಕ-ಇರಾನ್ನ ನಡುವೆ ಪರಮಾಣು ಒಪ್ಪಂದವಾದರೆ ಸುನ್ನಿ ಅರಬ್ ರಾಷ್ಟ್ರಗಳ ರಾಜಧಾನಿಗಳಂತೂ ಬೆಚ್ಚಿಬೀಳುತ್ತವೆ- ಟೆಲ್ ಅವೀವ್ಗೆ ಪರೋಕ್ಷವಾಗಿ ಲಾಭವಾಗುತ್ತದೆ. ಇಂಥ ಒಪ್ಪಂದವೇನಾದರೂ ನಡೆಯಿತೆಂದರೆ, ಸೌದಿ ಅರೇಬಿಯಾ ಇಸ್ರೇಲ್ನೊಂದಿಗೆ ಹೆಚ್ಚು ಹತ್ತಿರವಾಗುವ ಸಾಧ್ಯತೆಯೂ ಇದೆ.
ಜಿನೀವಾದಲ್ಲಿ ನಡೆದ ಒಪ್ಪಂದವನ್ನು ನೋಡಿ, ಇಸ್ರೇಲ್ ಸುಮ್ಮನಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಅದಕ್ಕಿಂತಲೂ ಮೊದಲಿನಿಂದಲೇ ಆ ರಾಷ್ಟ್ರ ಇರಾನ್ನ ಮೇಲೆ ದಾಳಿ ಮಾಡುವ ಯೋಚನೆಯನ್ನು ಕೈಬಿಟ್ಟಿತ್ತು ಎನ್ನುವುದೇ ಸತ್ಯ.
- ಝಕರಿ ಕೆಕ್
'ದಿ ಡಿಪ್ಲೊಮ್ಯಾಟ್' ನಿಯತಕಾಲಿಕ