ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸವೇನು?
1915ರಲ್ಲಿ ಸ್ಥಾಪನೆಗೊಂಡ, ಸರ್ಕಾರೇತರ ಕನ್ನಡಿಗರಿಂದ ರೂಪಿಸಲ್ಪಟ್ಟ, ಸರ್ಕಾರದ ಅನುದಾನದೊಂದಿಗೆ ಸಾರ್ವಜನಿಕರ ದೇಣಿಗೆಯಿಂದ ಅಂದಿನಿಂದ ಇಂದಿನವರೆಗೂ ನಡೆದು ಬಂದ ಬೃಹತ್ ಪರಿಷತ್ತು ಕ.ಸಾ. ಪ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಮೂಲ ಉದ್ದೇಶ, ಕಾರ್ಯ ನಿರ್ವಹಣೆಯಲ್ಲಿ ಸೊರಗುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಜಿಲ್ಲೆಗಳಲ್ಲಿ ಕ.ಸಾ.ಪ. ಚುನಾವಣೆಯಲ್ಲಿ ಸ್ಪರ್ಧಿಸಿ ಜಿಲ್ಲಾ ಚುನಾವಣೆಯಲ್ಲಿ ಸೋತವರನ್ನು ಇಂದಿನ ದಿನಗಳಲ್ಲಿ ಹುಡುಕುವ ಪರಿಸ್ಥಿತಿ ಬಂದಿದೆ. ಪರಾಭವಗೊಂಡವರಲ್ಲಿ ಸಂಘಟನಾ ಶಕ್ತಿ, ಕಾರ್ಯತತ್ಪರತೆ, ಅಭಿವೃದ್ಧಿ ಯೋಜನೆ ಮತ್ತು ಯೋಜನೆಗಳಿದ್ದರೂ ಸಹ ಕ.ಸಾ.ಪ. ಬೆಳವಣಿಗೆಗೆ ಕಾರ್ಯನಿರ್ವಹಿಸದೇ ಭೂಗತರಾಗಿರುವುದು ನಿಜಕ್ಕೂ ಅವರ ಇಚ್ಛಾಶಕ್ತಿ ಕ.ಸಾ.ಪ. ಬೆಳವಣಿಗೆಗೋ ಅಥವಾ ಆ ಪದಾಧಿಕಾರಿ ಸ್ಥಾನಕ್ಕೋ ಎಂಬ ಪ್ರಶ್ನೆ ಮೂಡುವುದು ಸಹಜ.
ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳನ್ನು ಗಮನಿಸಿದಾಗ ಜಿಲ್ಲಾ ಭವನದ ಬಗ್ಗೆಯೂ ಚಿಂತನೆ, ಒಂದೆರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇನ್ನೇನು ದತ್ತಿ ಉಪನ್ಯಾಸಗಳ ದಾನಿಗಳಿರುತ್ತಾರೆ. ಅವರ ಪ್ರಕಾರ ದತ್ತಿ ಕಾರ್ಯಕ್ರಮ ನಡೆಸುವುದೇ ಸಾಧನೆಯಂತೆ ಕಾಣುತ್ತಿದೆ. ದಾವಣಗೆರೆಯ ಜಿಲ್ಲಾ ಕನ್ನಡ ಭವನ ಪ್ರತಿ ಪ್ರಮುಖ ಕಾರ್ಯಕ್ರಮಗಳು ನಡೆಯುವಾಗ ಜಿಲ್ಲಾ ಅಧ್ಯಕ್ಷರ ಮೊದಲ ಬೇಡಿಕೆ 'ಕನ್ನಡ ಭವನಕ್ಕೆ ಅನುದಾನ ಕೊಡಿ' ಎಂಬುದು. ಇದನ್ನು ವರ್ಷಗಳಿಂದ ಕೇಳಲಾಗುತ್ತಿದೆ. ಅನುದಾನ ದೊರೆತರೂ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ! ಯಾಕೆ ರಾಜ್ಯದಲ್ಲಿ ಕನ್ನಡ ಭವನಗಳ ನಿರ್ಮಾಣಕ್ಕೂ ಸಹ ಅನುದಾನ ನೀಡುವಲ್ಲಿ ಕಿಸ್ತೆಗಳ (ಕಂತು) ರೂಪದಲ್ಲಿ ಹಣ ನಿಡಬೇಕೇ? ಅದಿರಲಿ ಅಧ್ಯಕ್ಷರಾದವರು ಬರೀ ಗೋಡೆ ಕಟ್ಟಿಸುವುದಷ್ಟೇ ತಮ್ಮ ಕೆಲಸವೆಂದು ಭಾವಿಸಿದ್ದಾರಾ? ಜಿಲ್ಲೆಯ ತಾಲೂಕುಗಳು ಮತ್ತು ಪ್ರತಿ ಊರುಗಳಲ್ಲಿ ಕ.ಸಾ.ಪ. ಚಟುವಟಿಕೆಗಳೇನು ಎಂಬುದರ ಬಗ್ಗೆ ಯೋಚನೆ ಮಾಡಬಾರದೇ? ಗ್ರಾಮಾಂತರ ಪ್ರದೇಶಗಳಲ್ಲಿ ಪುಸ್ತಕಗಳು ದೊರೆಯುವಂತೆ ಕ.ಸಾ.ಪ. ಏನಾದರೂ ವ್ಯವಸ್ಥೆ ಮಾಡಿದೆಯೇ? ಮಾತೃ ಭಾಷೆ, ಸಾಹಿತ್ಯ, ಜಾನಪದ ಸಾಹಿತ್ಯ, ಸಂಸ್ಕೃತಿ ಬೆಳೆಸುವಲ್ಲಿ ಜನಸಾಮಾನ್ಯರ ಕೊಡುಗೆ ಅಪಾರ. ಕಸಾಪ ಪದಾಧಿಕಾರಿಗಳು ಬರೀ ದೊಡ್ಡವರ ಮಧ್ಯೆ ಕುಳಿತು ಕಾರ್ಯಕ್ರಮಗಳನ್ನು ನಡೆಸುವುದನ್ನು, ನಡೆಸುತ್ತಿರುವುದನ್ನು ನೋಡಿದ್ದೇವಷ್ಟೆ.
ಇನ್ನು ಉರ್ದು ಶಾಲೆಗಳ ಬಗ್ಗೆ ಹೇಳಬೇಕೆಂದರೆ "ಪ್ಯಾರ್ಗೆ ಆಗಬಿಟ್ಟೈತೆ" ಅಂತ ಶಿಕ್ಷಣಾಧಿಕಾರಿಗಳು ಮತ್ತು ಯಾವಾಗಲಾದರೂ ಆ ಕಡೆ ಬಂದ ಕಸಾಪ ಪದಾಧಿಕಾರಿಗಳು ಹೇಳಿದರೆ ಸಾಕೆ? ಉರ್ದು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಎಷ್ಟರಮಟ್ಟಿಗೆ ಕನ್ನಡ ಕಲಿಸುತ್ತಿದ್ದಾರೆ ಎಂಬುದು ಬರೀ ಪ್ರಶ್ನೆಯೇ ಆಗಿ ಉಳಿದಿದೆ. ನನ್ನೂರಿನ ಶಾಲೆಯ ಉದಾಹರಣೆ ತೆಗೆದುಕೊಂಡರೆ ಕೆಲವರು ನನ್ನ ಬಳಿಗೆ ಬಂದು 'ಸಾರ್ ನಿಮ್ಮ ಉರ್ದು ಶಾಲೆಯ ಮಕ್ಕಳಿಗೆ ಕನ್ನಡದ "ಆ,ಆ.ಇ.ಈ." ಸಹ ಬರುವುದಿಲ್ಲ. ಈಗಲಾದರೂ ಅಲ್ಲಿಯ ಶಿಕ್ಷಕರಿಗೆ ಹೇಳಿ ಕನ್ನಡ ಸರಿಯಾಗಿ ಕಲಿಸಲು ಹೇಳಿ ಸಾರ್' (ನಾನು ದಂಗಾದೆ. ಉರ್ದು ಶಾಲೆ ನನ್ನದು ಯಾವಾಗ ಆಯಿತು ಎಂಬುದು). ಇಂದಿನ ದಿನಗಳಲ್ಲಿ ಉರ್ದು ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವಲ್ಲಿ ಶಿಕ್ಷಣ ಇಲಾಖೆಯೂ ಸಂಪೂರ್ಣ ವಿಫಲವಾಗಿದೆ. ನನ್ನೂರಿನ ಉರ್ದು ಶಾಲೆಗೆ ಕನ್ನಡ ಶಿಕ್ಷಕರನ್ನು ವರ್ಷ ಕಳೆದರೂ ಸಹ ನೇಮಕ ಮಾಡದಿರುವುದು ಕನ್ನಡ ಬೆಳವಣಿಗೆಯ ಗೌಪ್ಯ ಸೂಚನೆ ತೋರಿಸುತ್ತದೆ. ಮಾತೃ ಭಾಷೆ ಬೆಳೆಸಬೇಕು ಎಂದರೆ ನರ್ಸರಿ ತಂದು ನಡೆಸಬೇಕೆಂದಲ್ಲ. ತಮಿಳು, ತೆಲುಗು, ಮರಾಠಿ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಕಾಯಾ, ವಾಚಾ, ಮನಸಾ ಬೋಧಿಸುವಂತಹ ಶಿಕ್ಷಕರನ್ನು ಶಿಕ್ಷಣ ಇಲಾಖೆಯವರು ನೇಮಿಸಿದ್ದೇ ಆದರೆ ಅದು ನಿಜಕ್ಕೂ ಕನ್ನಡ ಬೆಳವಣಿಗೆಯಲ್ಲಿನ ಚಿಕ್ಕ ಸೇವೆ ಎಂಬುದರಲ್ಲಿ ಸಂದೇಹವಿಲ್ಲ. ಅಗತ್ಯವಿದ್ದಲ್ಲಿ ಸಾಹಿತ್ಯ ಪರಿಷತ್ ಸಹ ಕನ್ನಡೇತರ ಶಾಲೆ, ಸಂಸ್ಥೆಗಳಲ್ಲಿ ನಮ್ಮ ಮಾತೃ ಭಾಷೆಗೆ ಎಷ್ಟರಮಟ್ಟಿಗೆ ಸಹಾಯ ಮಾಡಬಲ್ಲೆವು ಎಂಬ ಚಿಂತನೆ ಮತ್ತು ದತ್ತಿ ಉಪನ್ಯಾಸಗಳನ್ನು ಇಂತಹ ಕಡೆ ನಡೆಸುವುದರಿಂದ ಉಪಯೋಗವಾಗುತ್ತದೆ.
- ಕೆ.ಸಿರಾಜ್ ಅಹ್ಮದ್
ಸಂತೇಬೆನ್ನೂರು