ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೆಳಗಾವಿಯಲ್ಲಿ ಎದುರಾದ ಎರಡು ಮುಖಗಳು!

ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ನಾಲ್ಕನೇ ಅಧಿವೇಶನ ನಡೆಯುತ್ತಿದೆ...

Mainashree
Updated On : 4 Dec 2013, 11:51 am

ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ನಾಲ್ಕನೇ ಅಧಿವೇಶನ ನಡೆಯುತ್ತಿದೆ. ಸುಮಾರು 400 ಕೋಟಿ ರುಪಾಯಿ ಖರ್ಚು ಮಾಡಿ ನಿರ್ಮಿಸಿರುವ ಭವ್ಯವಾದ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಎರಡನೇ ಅಧಿವೇಶನ ಇದು. ಅಧಿವೇಶನದ ಮೊದಲನೇ ವಾರದಲ್ಲಿ ಇಡೀ ನಾಡಿನ ಗಮನವನ್ನು ಮೂರು ಸಂಗತಿಗಳು ಸೆಳೆದವು. ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟಿಸಿದ ಮಹಾ ಮೇಳಾವದಲ್ಲಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ ವಿಚಾರ ಮೊದಲನೆಯದು. ಆ ಪಕ್ಷದಿಂದ ಆಯ್ಕೆ ಆಗಿರುವ ಶಾಸಕರೊಬ್ಬರು ಹೇಳಿದ ಮಾತು ಅತ್ಯಂತ ಆಕ್ಷೇಪಣಾರ್ಹ. "ಈಗ ಗೆದ್ದಿರುವ ಇಬ್ಬರು ಶಾಸಕರ ಜೊತೆಯಲ್ಲಿ ಇನ್ನಿಬ್ಬರು ಆಯ್ಕೆ ಆಗಿದ್ದರೆ ಕರ್ನಾಟಕ ರಾಜ್ಯ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು" ಎಂಬ ತೀರ ಕೀಳು ಮಟ್ಟದ ಮಾತು ಇಡೀ ರಾಜ್ಯದಲ್ಲಿ ಆಕ್ರೋಶ ನಿರ್ಮಾಣ ಮಾಡಿತ್ತು. ಅಧಿವೇಶನದ ಮೊದಲನೆ ದಿನವೇ ಸುವರ್ಣ ಸೌಧದ ಎದುರಿಗೆ ಹತ್ತಾರು ಸಾವಿರ ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬಿಗೆ ಸಮರ್ಪಕ ಬೆಲೆಯನ್ನು ಆಗ್ರಹಿಸಿ ಧರಣಿ ಸತ್ಯಾಗ್ರಹ ಮಾಡಿದರು. ಅದೇ ವಿಚಾರ ಹಿಡಿದು ಉಭಯ ಸದನಗಳಲ್ಲಿ ಚರ್ಚೆ ಆಗುತ್ತಿದ್ದ ಸಮಯದಲ್ಲಿ ಸುವರ್ಣ ಸೌಧದ ಮುಂದೆಯೇ, ಪ್ರತಿಭಟನಾ ಸ್ಥಳದಲ್ಲಿಯೇ ವಿಠಲ ಭೀಮಪ್ಪ ಅರಭಾವಿ ಎಂಬ ರೈತನೊಬ್ಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ಎರಡನೇ ಪ್ರಮುಖ ವಿಚಾರ. ವಿಧಾನಮಂಡಲದಲ್ಲಿ ಚರ್ಚೆಗಳು ಸಾಧಿಸಬೇಕಾದ ವಿಚಾರವನ್ನು ಒಂದು ಆತ್ಮಹತ್ಯೆ ಸಾಧಿಸಿದ್ದು ವಿಪರ್ಯಾಸ. ಎರಡೂ ಸದನಗಳಲ್ಲಿ ಈ ಆತ್ಮಹತ್ಯೆ ವಿಚಾರ ಮಾರ್ದನಿಸಿ ಸರ್ಕಾರವು ಕಬ್ಬಿಗೆ ಬೆಲೆಯನ್ನು ಘೋಷಿಸಿದೆ. ಆದರೆ ಅದನ್ನು ಅನುಷ್ಟಾನಗೊಳಿಸಬೇಕಾದ ಸಕ್ಕರೆ ಕಾರ್ಖಾನೆಗಳು ಭಿನ್ನ ರಾಗವನ್ನು ಹಾಡಿ ತಮ್ಮ ಅಸಹಾಯಕತೆ ಹೇಳಿಕೊಂಡಿವೆ. ಬಹು ಚರ್ಚಿತ, ಬಹು ವಿವಾದಿತ ಶಾದಿಭಾಗ್ಯ ಅಥವಾ ಬಿದಾಯಿ ಕುರಿತು ನಡೆದ ಚರ್ಚೆಗೆ ಸರ್ಕಾರ, 'ಏನೇ ಬರಲಿ, ಯಾರೇ ವಿರೋಧಿಸಲಿ, ತಾನು ಮಾತ್ರ ಶಾದಿಭಾಗ್ಯ ಕಾರ್ಯಕ್ರಮವನ್ನು ಮುಂದುವರಿಸುತ್ತೇನೆ' ಎಂದು ಹೇಳಿರುವುದು ರಾಜ್ಯದ ಗಮನ ಸೆಳೆದ ಮೂರನೇ ಸಂಗತಿ.
ಬೆಳಗಾವಿ ನಗರದಲ್ಲಿ ಈ ರೀತಿ ಆಧಿವೇಶನ ನಡೆಸಬೇಕೆಂಬುದು ಕಳೆದ ಏಳು ವರ್ಷಗಳ ಹಿಂದೆ ನಿರ್ಧರಿಸಲಾಯಿತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮತ್ತು ತದ ನಂತರ ಬಿ.ಎಸ್. ಯಡಿಯೂರಪ್ಪರವರ ಸರ್ಕಾರದ ಅವಧಿಯಲ್ಲಿ ಎರಡು ಬಾರಿ ಕೆ.ಎಲ್.ಇ. ಕಾಲೇಜ್ ಕಟ್ಟಡದಲ್ಲಿ ಅಧಿವೇಶನ ನಡೆಸಲಾಯಿತು. ಸುವರ್ಣಸೌಧ ಪೂರ್ಣಗೊಂಡ ಮೇಲೆ ಜಗದೀಶ್ ಶೆಟ್ಟರ್ ಹಾಗೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದಾಗ ಎರಡು ಅಧಿವೇಶನಗಳು ನಡೆದಿವೆ. ವರ್ಷಕ್ಕೆ ಒಂದು ಬಾರಿ ಸುಮಾರು 10 ದಿನಗಳ ಅಧಿವೇಶನಕ್ಕಾಗಿ ನೂರಾರು ಕೋಟಿ ರು.ಗಳ ಖರ್ಚಿನಲ್ಲಿ ಸುವರ್ಣ ಸೌಧ ನಿರ್ಮಿಸಿರುವ ಬಗ್ಗೆ ಮತ್ತು ಈ ದೊಡ್ಡ ಕಟ್ಟಡವನ್ನು ವರ್ಷದಲ್ಲಿ ಉಳಿದ ದಿನಗಳು ಯಾವುದೇ ರೀತಿ ಉಪಯೋಗ ಮಾಡುವ ಕುರಿತು ಏನೂ ನಿರ್ಧಾರ ಕೈಗೊಳ್ಳದಿರುವ ಬಗ್ಗೆ ಆನೇಕರ ಆಕ್ಷೇಪಣೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕೆಲವು ಇಲಾಖೆಗಳನ್ನು ಬೆಳಗಾವಿಗೆ ವರ್ಗಾಯಿಸುವ ಕುರಿತು, ಚಳಿಗಾಲದ ಈ ಅಧಿವೇಶನದೊಂದಿಗೆ ವರ್ಷದ ಪ್ರಾರಂಭದ ಜಂಟಿ ಅಧಿವೇಶನ ನಡೆಸುವ ಬಗ್ಗೆ ಮತ್ತು ಸದನ ಸಮಿತಿಗಳ ಕೆಲವು ಸಭೆಗಳನ್ನು ನಡೆಸುವಂತೆ ಕೆಲವು ಚಿಂತನೆಗಳು ಪ್ರಾರಂಭವಾಗಿವೆ.
ಬೆಳಗಾವಿಯಲ್ಲಿ ಈ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ 90 ವರ್ಷಗಳ ಹಿಂದೆ ಅಂದರೆ 1924ನೇ ಇಸವಿಯಲ್ಲಿ ನಡೆದ ಮತ್ತೊಂದು ಬೃಹತ್ ಅಧಿವೇಶನ ನೆನಪಿಗೆ ಬರುತ್ತಿದೆ. 1924 ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ 39 ನೇ ಅಧಿವೇಶನ ಬಹಳ ಮಹತ್ವದ ಅಧಿವೇಶನವಾಗಿತ್ತು. ಅಂದಿನ ಬೆಳಗಾವಿಯ ಜನಸಂಖ್ಯೆ ಕೇವಲ 30 ಸಾವಿರ. ಪ್ರಾಯಶಃ ಅಷ್ಟೇ ಸಂಖ್ಯೆಯ ಜನರು ಹೊರಗಿನಿಂದ ಬಂದು ಅಧಿವೇಶನದಲ್ಲಿ ಭಾಗವಹಿಸಿದರು. ಮೊದಲ ಹಾಗೂ ಕೊನೆಯ ಬಾರಿ ಅಂದರೆ ಕೇವಲ ಒಂದು ಬಾರಿಗೆ ಮಹಾತ್ಮಗಾಂಧಿಯವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದರು. 'ಉದಯವಾಗಲಿ ನಮ್ಮ ಕನ್ನಡ ಚೆಲುವನಾಡು...' ಮೊಳಗಿದ್ದು ಇದೇ ಅಧಿವೇಶನದಲ್ಲಿ.  ಆ ಅಧಿವೇಶನಕ್ಕೆ ತಗುಲಿದ ಖರ್ಚು 2,20,829 ರುಪಾಯಿ, 5 ಆಣೆ ಮತ್ತು 6 ಪೈಸೆ. ಈ ಖರ್ಚಿನ ನಿಖರತೆ ಯೋಚಿಸಿದರೆ ಯದ್ವಾತದ್ವಾ ಖರ್ಚು ಮಾಡುವ ಈ ದಿನಗಳಲ್ಲಿ ಮೈ ಜುಂ ಎನಿಸುತ್ತದೆ.
ಅಂದು ನಡೆದದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾ ಅಧಿವೇಶನ. ಭಾರತಕ್ಕೆ ಸ್ವಾತಂತ್ರ್ರ್ಯಆಗ್ರಹಿಸುವ ಉತ್ಕಟ ಇಚ್ಛೆಯಿಂದ ನಡೆದಿದ್ದ ಅಧಿವೇಶನ ಅದು. ಇಂದಿನ ಬೆಳಗಾವಿಯಲ್ಲಿ ಗೋಚರಿಸುವ ಎರಡು ಮನಸ್ಥಿತಿಗಳ ಎರಡು ಮುಖಗಳ ಪರಿಚಯ ಮಾಡಿಕೊಡುವ ಪ್ರಯತ್ನವಿದು.  ವಿಶೇಷವೆಂದರೆ ಇಲ್ಲಿನ ಕನ್ನಡಿಗರು ಹಾಗೂ ಮರಾಠಿ ಭಾಷಿಗರ ನಡುವೆ ಬಹಳ ಆರೋಗ್ಯಕರ ಸಾಮರಸ್ಯವಿದೆ. ಬೆಳಗಾವಿಯಲ್ಲಿ ಸಿಗುವ ಸಿಹಿ ಪದಾರ್ಥವಾದ 'ಕುಂದ'ದಿಂದಾಗಿ 'ಕುಂದಾನಗರಿ' ಎಂದೂ ಕರೆಯಲಾಗುತ್ತದೆ. ಆದರೆ ಇಲ್ಲಿನ ಕೆಲವು ನಾಯಕರ ಮನಸ್ಥಿತಿಯಿಂದಾಗಿ ನಡೆಯುವ ವಿದ್ಯಮಾನಗಳು ಜನತೆಗೆ ಕಹಿಯನ್ನೇ  ಉಣಬಡಿಸುತ್ತಿವೆ. ಉದಾಹರಣೆಗೆ ಇಡೀ ನಾಡು ಕನ್ನಡ ರಾಜ್ಯೋತ್ಸವ ಮಾಡುವಾಗ ಬೆಳಗಾವಿ ನಗರದಲ್ಲಿ ಮಾತ್ರ ಕಪ್ಪು ದಿನ ಆಚರಿಸುವುದು, 'ಝಲಾಚ್ ಪಾಯಿಜೆ' ಎಂಬ ಘೋಷಣೆಯನ್ನು ಆಗಾಗ ಹಾಕುವುದು, ಮಹಾಜನ ಆಯೋಗದ 'ಬೆಳಗಾವಿ ಕರ್ನಾಟಕದ ಒಂದು ಅವಿಭಾಜ್ಯ ಅಂಗ' ಎಂಬುದನ್ನು ಒಪ್ಪದಿರುವುದು, ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತ್ರಿ ಬಂದಾಗ ಬೆಳಗಾವಿ ಜಿಲ್ಲೆಯ ಆ ಸುಪುತ್ರನಿಗೆ ಅವಮಾನ ಮಾಡುವುದು, ಕರ್ನಾಟಕದ ವಿಧಾನಮಂಡಲಕ್ಕೆ ಹಾಗೂ ಇಲ್ಲಿನ ಸದಸ್ಯರನ್ನು ಕುರಿತು ಪತ್ರಿಕೆಯಲ್ಲಿ ಅವಾಚ್ಯ ಪದಗಳನ್ನು ಉಪಯೋಗಿಸುವುದು, ಬೆಳಗಾವಿಯಲ್ಲಿ ಹುಟ್ಟಿ ಬೆಳೆದರೂ ಕನ್ನಡ ಕಲಿಯದಿರುವುದು... ಮುಂತಾದ ಸಂಗತಿಗಳು ಬೆಳಗಾವಿಯ ಅನಪೇಕ್ಷಣೀಯ ಮುಖವನ್ನು ಅನಾವರಣಗೊಳಿಸುತ್ತದೆ.
ಕರ್ನಾಟಕ ವಿಧಾನಸಭೆಗೆ ಆಯ್ಕೆ ಆದರೂ ಕರ್ನಾಟಕ ರಾಜ್ಯವನ್ನು, ಕನ್ನಡ ಭಾಷೆಯನ್ನು, ಕರ್ನಾಟಕ ಸರ್ಕಾರವನ್ನು ಒಪ್ಪಿಕೊಳ್ಳದ ಮನಸ್ಥಿತಿ ಈ ಮುಖದ್ದು. ನಗರಾಭಿವೃದ್ಧಿಗಿಂತ, ನಾಗರಿಕರ ಹಿತಕ್ಕಿಂತ ಭಾಷಾ ವಿವಾದ ಉಂಟುಮಾಡಿ ಅದರಲ್ಲಿ ಬೇಳೆ ಬೇಯಿಸಿಕೊಳ್ಳುವುದು, ಈ ಮನಸ್ಥಿತಿಯ ಮತ್ತೊಂದು ಲಕ್ಷಣ.ಬೆಳಗಾವಿಯ ಸಾಮಾನ್ಯ ಜನರ ನಡುವೆ ಮತ್ತೊಂದು ಆರೋಗ್ಯಕರ ಮನಸ್ಸಿದೆ. ನಮ್ಮೆಲ್ಲರ ಮನಸ್ಸಿಗೆ ಚೈತನ್ಯ ತುಂಬುವ ಮುಖವಿದೆ. ಈ ಅಧಿವೇಶನದಲ್ಲಿ ನಾನು ಉಳಿದಿರುವ ಹೋಟೆಲ್ ಹೆಸರು 'ಸಂಕಂ ರೆಸಿಡೆನ್ಸಿ'. ವಿಠಲ್ ಹೆಗ್ಡೆ ಎಂಬ 77 ವರ್ಷದ, ಯುವಕರನ್ನೂ ನಾಚಿಸುವ ಲವಲವಿಕೆಯನ್ನು ಉಳ್ಳ ಈ ವ್ಯಕ್ತಿ ಆ ಹೋಟೆಲ್ ಮಾಲೀಕರೆಂದು ತಿಳಿದು ಬಂತು. ದಕ್ಷಿಣ ಕನ್ನಡದ ಬಾರಕೂರಿನ ವಿಠಲ್ ಹೆಗ್ಡೆ ಮನೆಯಲ್ಲಿ ಉಂಟಾದ ವಿಪರೀತ ತಾಪತ್ರಯದ ಕಾರಣ ಬೆಳಗಾವಿ ಜಿಲ್ಲೆಯ ಸೌದತ್ತಿಗೆ ಬಂದು ಹೋಟೆಲ್ಲೊಂದರಲ್ಲಿ ಲೋಟ ತೊಳೆಯುವ ಕಾಯಕದಲ್ಲಿ ತೊಡಗಿದರು. 1949 ರಲ್ಲಿ ಸೌದತ್ತಿಗೆ ಬಂದ ಈ ಹುಡುಗ 1968 ರಲ್ಲಿ ತಮ್ಮ ಯಜಮಾನರ ಹೋಟೆಲ್‌ನಲ್ಲಿ ಕೆಲಸ ಮಾಡಲು ಬೆಳಗಾವಿಗೆ ಬಂದರು. ತಮ್ಮ ಪರಿಶ್ರಮದ ಮೂಲಕ, ಕಾರ್ಯಶ್ರದ್ಧೆಯ ಮೂಲಕ ತಮ್ಮ ಮಾಲೀಕರ ವಿಶ್ವಾಸವನ್ನು ಎಷ್ಟು ಗಳಿಸಿದರೆಂದರೆ ಅವರು ತಮ್ಮ ಎಲ್ಲಾ ಹೋಟೆಲ್‌ಗಲ್ಲಿ ಶೇಕಡಾ 50 ರಷ್ಟು ಪಾಲುದಾರರನ್ನಾಗಿ ವಿಠಲ್ ಹೆಗ್ಡೆಯವರ ಹೆಸರನ್ನು ಘೋಷಿಸಿದರು. ಬೆಂಗಳೂರಿನ ರಾಜಾಜಿನಗರದಲ್ಲಿ ತ್ರಿವೇಣಿ ಹೋಟೆಲನ್ನು ಪ್ರಾರಂಭಿಸಿದ ವಿಠಲ್ ಹೆಗ್ಡೆ ಅದರ ಪ್ರಾರಂಭೋತ್ಸವಕ್ಕೆ ತಮ್ಮ ಯಜಮಾನರನ್ನು ಕರೆದುಕೊಂಡು ಹೋದಾಗಲೇ ಗುಟ್ಟು ಹೊರಬಿದ್ದದ್ದು. ತಮ್ಮ ಪರಿಶ್ರಮದಿಂದ ಪ್ರಾರಂಭಿಸಿದ ಆ ಹೋಟೆಲ್ ಸಹ ತಮ್ಮ ಯಜಮಾನರ ಹೆಸರಿನಲ್ಲಿ ಇಟ್ಟಿದ್ದರೆಂದು. ಆಗ ಸಂತೋಷಗೊಂಡ ಅವರ ಯಜಮಾನರು ತಮ್ಮ ಎಲ್ಲಾ ಬೆರಳುಗಳಲ್ಲಿದ್ದ, ಚಿನ್ನದ ಉಂಗುರಗಳನ್ನು ಎರಡು ಕೈಗಳಲ್ಲಿದ್ದ ಬ್ರಾಸ್ಲೇಟ್‌ಗಳನ್ನು, ಕತ್ತಿನಲ್ಲಿದ್ದ ಸರಪಳಿಯಂತಹ ಚಿನ್ನದ ಹಾರವನ್ನು ತೆಗೆದು ವಿಠಲ್ ಹೆಗ್ಡೆಗೆ ನೀಡಿದರು. ಆದರೆ  ಹೆಗ್ಡೆ ಅವುಗಳನ್ನು ಬಟ್ಟೆಯಲ್ಲಿ ಸುತ್ತಿಟ್ಟು ತಮ್ಮ ಯಜಮಾನರ ನೆನಪಿನಲ್ಲಿ ಹಾಗೆಯೇ ಇಟ್ಟಿದ್ದಾರೆ.
"ಬೆಳಗಾವಿಯಲ್ಲಿ 5 ಹೋಟೆಲ್‌ಗಳು, ಬೈಲಹೊಂಗಲ, ರಾಣಿಬೆನ್ನೂರು, ಕೊಲ್ಲಾಪುರ ಮುಂತಾದ ಸ್ಥಳಗಳಲ್ಲಿರುವ ಹೋಟೆಲ್‌ಗಳು ಸೇರಿ ಒಟ್ಟು 10 ಹೋಟೆಲ್‌ಗಳ ಮಾಲೀಕರಾದ ವಿಠಲ್ ಹೆಗ್ಡೆಯವರಿಗೆ ಜೀವನದ ಅನುಭವ ಅತ್ಯಂತ ತಾಳ್ಮೆಯನ್ನು, ಸಂಯಮವನ್ನು ಕಲಿಸಿ ಕೊಟ್ಟಿದೆ. ಕರ್ನಾಟಕದ ಮೊದಲನೇ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜನ್ನು ಸ್ನೇಹಿತರೊಡಗೂಡಿ ಬೆಂಗಳೂರಿನಲ್ಲಿ ಪ್ರಾರಂಭಿಸಿ ನಂತರ ಅದನ್ನು ಎಂ. ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗೆ ವಹಿಸಿದ್ದಾರೆ. ವಿಠಲ್ ಹೆಗ್ಡೆಯವರಿಂದ ವಿವಿಧ ರೀತಿಯ ಸಹಾಯ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಡಾಕ್ಟರ್, ಎಂಜಿನೀಯರ್, ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವಕೀಲರಾಗಿ ಬಹಳ ಹೆಸರು ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಹೆಚ್ಚು ಶಿಕ್ಷಣ ಪಡೆಯುವುದರಿಂದ ವಂಚಿತರಾದ ಹೆಗ್ಡೆ ಈ ರೀತಿ ಅರ್ಹರಿಗೆ ನಿರಂತರವಾಗಿ ಸಹಾಯ ಹಸ್ತ ನೀಡುವುದರ ಮೂಲಕ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದಾರೆ. ಸುಮಾರು 30 ವರ್ಷಗಳ ಹಿಂದೆ, ಒಂದು ರಾಜ್ಯೋತ್ಸವದ ದಿನ ಯಥಾಪ್ರಕಾರ ಬೆಳಗಾವಿಯಲ್ಲಿ ಕಪ್ಪುದಿನ ಘೋಷಿಸಲಾಗಿದ್ದರೂ, ಎಲ್ಲಾ ಹೋಟೆಲ್ ಅಂಗಡಿಗಳನ್ನು ಮುಚ್ಚಬೇಕೆಂದು ಎಂ.ಇ.ಎಸ್ ಆದೇಶ ಹೊರಡಿಸಿದ್ದರೂ, ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದವರೊಬ್ಬರು ಅಂದು ಆ ಕರಾಳದಿನವನ್ನು ಆಚರಿಸುವ ನೇತೃತ್ವ ಹೊಂದಿದ್ದರೂ, ತಮ್ಮ ಹೋಟೆಲಿನ ಎಲ್ಲಾ ಗಾಜುಗಳನ್ನು ಈ ಕನ್ನಡ ವಿರೋಧಿಗಳು ಧ್ವಂಸ ಮಾಡಿದ್ದರೂ, ಹೋಟೆಲ್ ಮುಚ್ಚದೇ ನಾಡಿಗೆ ನಿಷ್ಠೆ ತೋರಿದವರು ವಿಠಲ್ ಹೆಗ್ಡೆ. ಈ ಇಳಿವಯಸ್ಸಿನಲ್ಲಿಯೂ ಪ್ರತಿನಿತ್ಯ ಬೆಳಗಾವಿಯಲ್ಲಿರುವ ತಮ್ಮ ಎಲ್ಲಾ ಹೋಟೆಲ್‌ಗಳಿಗೆ ಭೇಟಿ ಕೊಟ್ಟು ಎಲ್ಲಾ ಅತಿಥಿಗಳನ್ನು-ಉಪಚರಿಸುವ ಕೈಂಕರ್ಯವನ್ನು ವ್ರತದಂತೆ ಆಚರಿಸುತ್ತಿರುವ ಅವರು ಬೆಳಗಾವಿಯ ಮತ್ತೊಂದು ಬಹು ಅಪೇಕ್ಷಣೀಯ ಮುಖ.  ಈ ಎರಡೂ ಮುಖಗಳ ದರ್ಶನ ಅಧಿವೇಶನದ ಈ ದಿನಗಳಲ್ಲಿ ನನಗಾಯಿತು. ಓ ವಿ ಚಾನಲ್ ನಡೆಸಿದ ಪ್ಯಾನಲ್ ಚರ್ಚೆಯಲ್ಲಿ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕ ಸಾಂಬಾಜಿರಾವ್‌ರಿಂದ ಕರ್ನಾಟಕ ಸರ್ಕಾರವನ್ನು ಶವವನ್ನಾಗಿಸುವ ಅವರ ಮಾತಿಗೆ ಕ್ಷಮಾಪಣೆ ಪಡೆಯುವುದರಲ್ಲಿ ಹೇಗೆ ಯಶಸ್ವಿಯಾದೆನೋ, ಅದೇ ರೀತಿ ವಿಠಲ್ ಹೆಗ್ಡೆಯಂಥವರ ಜೊತೆ ಮಾತನಾಡಿ ಅವರ ಅನುಭವ ತಿಳಿದುಕೊಳ್ಳುವುದರಲ್ಲಿಯೂ ಯಶಸ್ವಿಯಾದೆ. ಬೆಳಗಾವಿಗೆ ಯಾರೇ ಬಂದರು ತಮ್ಮ ವರ್ತನೆಯಿಂದ ಮನಸ್ಸು ಅಸ್ವಸ್ಥ ಮಾಡಿಕೊಂಡರೂ ಪರವಾಗಿಲ್ಲ, ಅದು ನಮ್ಮ ಚಿಂತೆಯಲ್ಲ ಎನ್ನುವುದು ಎಂ ಇ ಎಸ್ ಪಕ್ಷದ ಚುನಾಯಿತ ಪ್ರತಿನಿಧಿಯ ಮನಸ್ಥಿತಿಯಾದರೆ, ಬೆಳಗಾವಿಗೆ ಬಂದವರು ಯಾವುದೇ ಸಣ್ಣ ಕಾರಣಕ್ಕೂ ಬೇಜಾರು ಮಾಡಿಕೊಂಡು ಹೋಗಬಾರದು ಎಂಬುದು ವಿಠಲ್ ಹೆಗ್ಡೆಯವರ ಮನಸ್ಥಿತಿ.
ಪ್ರಾಯಶಃ ಎಲ್ಲಾ ಊರಿನಲ್ಲಿಯೂ ಇದೇ ಪರಿಸ್ಥಿತಿ. ನಾವು ಯಾವ ಮನಸ್ಥಿತಿಯವರಾಗ ಬೇಕೆಂಬುದು ನಮ್ಮದೇ ಆಯ್ಕೆ.

- ಎಸ್.ಸುರೇಶ್ ಕುಮಾರ್
ಮಾಜಿ ಸಚಿವರು
nimmasuresh.2009@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement