ಮಂಗಳೂರಲ್ಲಿ ಬೆಳೆಯುತ್ತಿದೆ ತಾಲಿಬಾನಿ ಸಂತತಿ
ನೆಲದಲ್ಲಿ ಚಲನೆ ಇಲ್ಲದೆ ಮಕಾಡೆ ಮಲಗಿರುವ ಮಧ್ಯವಯಸ್ಕನ ದೇಹ. ಆ ದೇಹದ ಎಲ್ಲೆಡೆ ...
ನೆಲದಲ್ಲಿ ಚಲನೆ ಇಲ್ಲದೆ ಮಕಾಡೆ ಮಲಗಿರುವ ಮಧ್ಯವಯಸ್ಕನ ದೇಹ. ಆ ದೇಹದ ಎಲ್ಲೆಡೆ ಒದೆಯುತ್ತ ಕುಣಿದು ಕುಪ್ಪಳಿಸುತ್ತ ವಿಕೃತ ಕೇಕೆ ಹಾಕುತ್ತಿರುವ ದುರುಳರು...
ಈ ದೃಶ್ಯ ಅಪ್ಘಾನಿಸ್ತಾನದ ತಾಲಿಬಾನ್ ಜಿಹಾದಿ ಸೈನಿಕರದಲ್ಲ. ಇದು ನ.27ರಂದು ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಕೋಳ್ನಾಡು ಬಾರೆಬೈಲ್ ಮನೆ ಮುಂಭಾಗದಲ್ಲಿ ಉದ್ರಿಕ್ತ ಯುವಕರು ಕಾನೂನು ಕೈಗೆತ್ತಿಕೊಂಡು ಪತ್ರಕರ್ತನೊಬ್ಬನಿಗೆ ಶಿಕ್ಷೆ ವಿಧಿಸುತ್ತಿರುವ ದೃಶ್ಯ. ಇದು ಮಾಡಿದ್ದು ಸ್ಥಳೀಯ ಪಿಎಫ್ಐ ಕಾರ್ಯದರ್ಶಿ ಸಿದ್ದೀಕ್ ನೇತೃತ್ವದ ಯುವಕರ ದಂಡು.
ತಾಲಿಬಾನಿಗಳಾದರೂ ಒಂದೇಟಿಗೆ ಗುಂಡಿಕ್ಕಿ, ಹೆಣದ ಮೇಲೆ ನರ್ತಿಸುತ್ತಾರೆ, ಇವರು ಮಾತ್ರ ಪ್ರಜ್ಞಾಶೂನ್ಯ ಜೀವಂತ ದೇಹದ ಮೇಲೆ ನರ್ತಿಸುತ್ತಿದ್ದರು !
ಸಂಜೆ ಪತ್ರಿಕೆಯ17-6-2013ರ ಸಂಚಿಕೆಯಲ್ಲಿ 60 ವರ್ಷದ ವಿಧವೆ ಹಲೀಮಾ ಬೀಡಿ ಕಟ್ಟಿ ಬದುಕು ಸಾಗಿಸುತ್ತಿರುವ ವಿಶೇಷ ವರದಿ ವಿ.ಟಿ.ಪ್ರಸಾದ್ ಮಾಡಿದ್ದರು. ಸ್ವಂತ ಸೂರಿಲ್ಲದೆ ಬಡತನದಲ್ಲಿ ಬೇಯುತ್ತಿದ್ದ ಮುಸ್ಲಿಂ ಸಮುದಾಯದ ವಿಧವೆ ಕುಟುಂಬಕ್ಕೆ ಪತ್ರಿಕಾ ವರದಿ ಮೂಲಕ ನೆರವಾಗಿದ್ದೇ ಈ ಬಡಪಾಯಿ ಪತ್ರಕರ್ತ ಮಾಡಿದ ತಪ್ಪು. ಈ ತಾಲಿಬಾನಿ ರಾಕ್ಷಸೀ ಕೃತ್ಯಕ್ಕೆ ಕಾರಣ ಪತ್ರಕರ್ತ ಅನ್ಯಮತೀಯ, ಅನ್ಯಮತೀಯ ಮುಸ್ಲಿಂ ಸಮುದಾಯದ ಮಹಿಳೆಗೆ ನೆರವಾಗುವುದು ಇವರ ಲೆಕ್ಕದಲ್ಲಿ ಹರಾಮ್!... ಹೇ ರಾಮ್! ಬೆಳಗ್ಗೆ 11.30ಕ್ಕೆ ಮನೆ ಸಮೀಪದ ಶಾಲೆಯಲ್ಲಿ ವಾರ್ಷಿಕೋತ್ಸವ ಸಭೆಯಲ್ಲಿ ಭಾಗವಹಿಸಿದ್ದ ಪ್ರಸಾದ್ ಅವರನ್ನು ಮಾತನಾಡುವ ನೆಪದಲ್ಲಿ ಹೊರಗೆ ಕರೆದ ತಂಡ ಏಕಾ ಏಕಿ ಹಲ್ಲೆ ನಡೆಸತೊಡಗಿದೆ. ಅಲ್ಲಿಂದ ಎಳೆದುಕೊಂಡು ಸಮೀಪದ ಹಲೀಮಾ ಎಂಬ ಮಹಿಳೆ ಮನೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಕಲ್ಲು, ಮರದ ರೀಪು, ಪಕ್ಕಾಸ್ ತುಂಡುಗಳಿಂದ ಕೈಗೆ ಸಿಕ್ಕ ವಸ್ತುಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ತಲೆಗೆ, ಹೊಟ್ಟೆಗೆ, ಎದೆಗೆ ಬೆನ್ನಿಗೆ, ಮುಖಕ್ಕೂ ಗುದ್ದಿದ್ದಾರೆ. ಮುಖದ ಮೇಲೆ ಶೂ ಅಚ್ಚುಗಳು ಬಿದ್ದಿವೆ. ಮುಖ ಕುಂಬಳಕಾಯಿಯಂತೆ ಊದಿಕೊಂಡರೂ ಬಿಡದ ದುರುಳರು ಪ್ರಜ್ಞಾಹೀನ ದೇಹದ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಮೂವರು ಪತ್ರಕರ್ತರು ಧೈರ್ಯ ಮಾಡಿ ವಿ.ಟಿ.ಪ್ರಸಾದ್ರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ನೋಡಿದ್ದಾರೆ. ಕಟುಕರು ಅಲ್ಲೂ ಬಿಡದೆ ಆಂಬುಲೆನ್ಸ್ನಿಂದ ಶವ ಎಳೆಯುಂತೆ ಪ್ರಸಾದ್ ದೇಹವನ್ನು ಹೊರಗೆಳೆದು 'ಅವನನ್ನು ಏಕೆ ಬದುಕಿಸುತ್ತೀರಿ, ಇಲ್ಲೇ ಸಾಯಲಿ' ಎನ್ನುವ ಮೂಲಕ ಪಕ್ಕಾ ತಾಲಿಬಾನಿ ಎಂಬುದನ್ನು ಪ್ರದರ್ಶಿಸಿದ್ದಾನೆ. ಪತ್ರಕರ್ತ ಕರ್ತವ್ಯ ಜತೆ ಸಮಾಜಸೇವೆಗೆ ಮುಂದಾಗಿರುವುದೇ ಘನಘೋರ ಅಪರಾಧ. ಹಲೀಮಾರ ಮನೆ ನಿರ್ಮಾಣಕ್ಕೆ ಗ್ರಾಮಪಂಚಾಯ್ತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅದ್ರಾಮ, ದಾವೂದ್ ಮೊದಲಾದವರ ಸಹಕಾರದಿಂದ ದಾನಿಗಳನ್ನು ಸಂಪರ್ಕಿಸಿದ್ದರು. ಮುಸ್ಲಿಮ್ ಸಮುದಾಯಕ್ಕೆ ಸೇರಿದ ತುಂಬೆ ಮಿಲ್ ಮಾಲೀಕರು 1 ಲಕ್ಷ ಮೌಲ್ಯದ ಮರಮಟ್ಟುಗಳನ್ನು ಉಚಿತವಾಗಿ ನೀಡಿದ್ದರು.
ದೇಣಿಗೆ ಸಂಗ್ರಹ ಬಗ್ಗೆ ಮಾಹಿತಿ ಪಡೆದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ವಿ.ಟಿ.ಪ್ರಸಾದ್ರನ್ನು ಭೇಟಿಯಾಗಿ ಮನೆಗೆ ಬೇಕಾದ ಮರಮಟ್ಟು ಒದಗಿಸುತ್ತೇವೆ, ಈ ಬಗ್ಗೆ ವರದಿ ಮಾಡಬೇಕು ಎಂದರು. ಮನೆ ನಿರ್ಮಾಣಕ್ಕೆ ಮುಸ್ಲಿಂ ಉದ್ಯಮಿಗಳು ಈಗಾಗಲೇ ನೀಡಿದ್ದರಿಂದ ಈ ಕೊಡುಗೆಯನ್ನು ನಿರಾಕರಿಸಿದ್ದರು. ನಮ್ಮದೇ ಸಮುದಾಯದ ಮಹಿಳೆ ಮನೆ ದುರಸ್ತಿ ಉಸ್ತುವಾರಿ ವಹಿಸಲು ಇವನ್ಯಾರು ಎಂದವರೇ ಬುದ್ಧಿ ಕಲಿಸಲು ನಿಶ್ಚಯಿಸಿದ್ದರು. ತಾಲಿಬಾನಿ ಕೃತ್ಯ ನಡೆಸಿದ ಬಾರೆಬೆಟ್ಟು ಸಿದ್ದೀಕ್, ಕುಡ್ತಮೊಗೇರು ಬಾರಿಕ್, ಮದಕ ಶರಹೀಫ್, ಜಬ್ಬಾರ್, ಅಬ್ದುಲ್ ಲತೀಫ್ನನ್ನು ವಿ.ಟಿ.ಪ್ರಸಾದ್ ಗುರುತಿಸಿದ್ದಾರೆ.
ಇದುವರೆಗೆ ಕಷ್ಟಕ್ಕೆ ಸ್ಪಂದಿಸದೆ ಏಕಾಏಕಿ ಪ್ರತ್ಯಕ್ಷರಾಗಿ ಮನೆ ಬಾಗಿಲಿಗೆ ಬಂದು ಅಟ್ಟಹಾಸ ಏಕೆ ಮಾಡುತ್ತೀರಿ, ನಮ್ಮನ್ನು ಬದುಕಲು ಬಿಡುತ್ತಿಲ್ಲ ಏಕೆ ಎಂದು ಹಲ್ಲೆಕೋರರನ್ನು ಹಲೀಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಸಾದ್ ನೀಡಿದ ನೆರವನ್ನು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಪತ್ರಕರ್ತರು ವಾಯ್ಸ್ ರೆಕಾರ್ಡ್ ಕೂಡಾ ಮಾಡಿಕೊಂಡಿದ್ದು, ಎಸ್ಪಿಗೂ ನೀಡಿದ್ದಾರೆ.
ರೆಕಾರ್ಡ್ ಮಾಡಿ ಎಸ್ಪಿಗೆ ನೀಡಲು ಕಾರಣವೂ ಇದೆ. ಪತ್ರಕರ್ತನ ಮೇಲಿನ ಹಲ್ಲೆ ಪ್ರಕರಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಾಲಿಬಾನಿಗಳು ಪತ್ರಕರ್ತನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಲು ಹಲೀಮಾರನ್ನು ಬಲವಂತವಾಗಿ ಕರೆದೊಯ್ದು ಬೆದರಿಕೆ, ಒತ್ತಡ ಹಾಕಿದ್ದರು. ಹಲ್ಲೆ ನಡೆಸಿದ ಕೂಡಲೇ ಈ ಹಿಂದೆ ದುರುಳರು ಸ್ಥಳದಿಂದ ಕಾಲ್ಕೀಳುತ್ತಿದ್ದರು, ಆದರೆ ಈ ಬಾರಿ ಮಾತ್ರ ಪತ್ರಕರ್ತರು, ಪೊಲೀಸರು ಬಂದರೂ ಸ್ಥಳದಲ್ಲಿಯೇ ಇದ್ದರು. ಪತ್ರಕರ್ತನನ್ನು ಅರೆಬೆತ್ತಲೆ ಮಾಡಿದ ಫೋಟೋವನ್ನು ಪತ್ರಕರ್ತರಿಗೆ ನೀಡುವ ಮಟ್ಟಕ್ಕೆ ನೈತಿಕ ಪೊಲೀಸ್ ಮನೋಭಾವನೆ ಬೆಳೆದಿದೆ.
ಪತ್ರಕರ್ತನನ್ನು ಆಸ್ಪತ್ರೆಗೆ ಸೇರಿಸಿದ್ದು ಮುಸ್ಲಿಮ್ ಪತ್ರಕರ್ತರೇ, ಸಂಘಟನೆಯ ಮೂಲಭೂತವಾದ ಬಗ್ಗೆ ಪ್ರಜ್ಞಾವಂತ ಮುಸ್ಲಿಮರು ಆರಂಭದಿಂದಲೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ನನ್ನ ಪ್ರಶ್ನೆ ಇರುವುದು ಧರ್ಮದಲ್ಲಿ ವಿಂಗಡಿಸುವ ಮೂಲಭೂತವಾದಿಗಳಿಗೆ. ಮುಸ್ಲಿಮ್ ಮಹಿಳೆಗೆ ನೆರವು ನೀಡಲು ನೀನ್ಯಾರು ಭಟ್ಟ? ನೆರವು ನೀಡಲು, ನಾವಿಲ್ಲವೇ ಎಂದು ಹೇಳಿ ಹಲ್ಲೆಕೋರರು ಒದ್ದಿದ್ದಾರೆ. ಸರ್ಕಾರ ಘೋಷಣೆ ಮಾಡಿದ ಶಾದಿ ಭಾಗ್ಯ ಯೋಜನೆಯಲ್ಲಿ ಶೆಟ್ಟರದ್ದು, ಭಟ್ಟರದ್ದು, ಗೌಡರು, ಲಿಂಗಾಯಿತರು ಕ್ರೈಸ್ತರು, ಮುಸ್ಲಿಮರ ಹೀಗೆ ಎಲ್ಲರ ತೆರಿಗೆ ಹಣ ಇದೆ.
ಮಹಿಳೆಯರಿಗೆ ಮಾತ್ರವಲ್ಲ ಮುಸ್ಲಿಮರಿಗೆ ಅಲ್ಪಸಂಖ್ಯಾತ ಕೋಟಾದಲ್ಲಿ ಸವಲತ್ತುಗಳನ್ನು ಸರ್ಕಾರ ನೀಡುತ್ತದೆ, ಹಜ್ ಯಾತ್ರೆಗೆ ಪ್ರತಿಯೊಬ್ಬರಿಗೆ 45 ಸಾವಿರ ಧನಸಹಾಯ ಮಾಡುತ್ತದೆ, ಸರ್ಕಾರ ನೀಡುವ ಈ ಹಣದಲ್ಲಿ ಹಿಂದೂ, ಕ್ರೈಸ್ತರ ತೆರಿಗೆ ಹಣವೂ ಕೂಡಾ ಇದೆ. ಈ ಸೌಲಭ್ಯ ಪಡೆಯುವಾಗ ಅದರಲ್ಲಿ ಹಿಂದುಗಳ ಹಣ ಇದೆ, ಕಾಫಿರ್ಗಳ ಹಣ ಪಡೆಯಬಾರದು ಎಂದೆನಿಸುವುದಿಲ್ಲವೇ?
ಹಿಂದೂ ಯುವಕ, ಮುಸ್ಲಿಂ ಯುವತಿ ಜತೆ ಮಾತನಾಡಿದರೆ ಹಲ್ಲೆ ನಡೆಸುವ, ಕೇಳುವ ಅಧಿಕಾರ ಸಂಘಟನೆಗಳಲ್ಲಿರುವ ಮೂಲಭೂತವಾದಿಗಳಿಗೆ ಕೊಟ್ಟವರು ಯಾರು?
ಮುಸ್ಲಿಂ ಯುವತಿ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಬಲಾತ್ಕಾರವಾಗಿ ವಾಹನದಲ್ಲಿ ಕುಳ್ಳಿರಿಸಿ ಎಲ್ಲೆಲ್ಲಿ ಕರೆದುಕೊಂಡು ಹೋಗಿ ಬುದ್ಧಿ ಹೇಳಿ ಶಿಕ್ಷಿಸುವ ಅಧಿಕಾರವನ್ನು ನೀಡಿದವರು ಯಾರು?
ಹಿಂದೆಲ್ಲ ಹಲ್ಲೆ ಪ್ರಕರಣಗಳಲ್ಲಿ ಕಾರ್ಯಕರ್ತರಲ್ಲ ಎಂದು ತಪ್ಪಿಸಿಕೊಳ್ಳುವ ಸುಲಭ ಉಪಾಯ ಇತ್ತು. ಈ ಬಾರಿ ಲೆಟರ್ ಹೆಡ್ನಲ್ಲಿ ನಮೂದಾಗಿರುವ ಪದಾಧಿಕಾರಿ ನೇತೃತ್ವದಲ್ಲಿಯೇ ಹಲ್ಲೆ ನಡೆದಿರುವುದರಿಂದ ಉಗುಳಲೂ ನುಂಗಲೂ ಆಗದ ಸ್ಥಿತಿ ಇದೆ. ಪದಾಧಿಕಾರಿ ಕೃತ್ಯ ಮಾಡಿದ ಎಂದಾಕ್ಷಣ ಹಲ್ಲೆಯನ್ನು ಸಂಘಟನೆಯೇ ಮಾಡಿಸಿದೆ ಎಂದರ್ಥವಲ್ಲ. ಆದರೆ ಪಿಎಫ್ಐ ಮುಖಂಡರು ಸುದ್ದಿಗೋಷ್ಠಿ ನಡೆಸಿ, ತಮ್ಮವರ ಪಾತ್ರ ಇಲ್ಲ ಎಂದರು, ಜತೆಗೆ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾದ ಪತ್ರಕರ್ತನಿಗೆ ಶಿಕ್ಷೆಯಾಗಲಿ ಎನ್ನುವ ಮೂಲಕ ಪರೋಕ್ಷವಾಗಿ ಸಮರ್ಥಿಸಿರುವುದು ವಿಷಾದನೀಯ. ಒಬ್ಬಂಟಿ ಮಹಿಳೆ ಮನೆಗೆ ತೆರಳಿ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ಅಂತರ್ಜಾಲದ ಸಾಮಾಜಿಕ ತಾಣದಲ್ಲಿ ವಾದಿಸುವ ಬೆಂಬಲಿಗರು ಪತ್ರಕರ್ತನನ್ನು ಅತ್ಯಾಚಾರಿ ಎನ್ನುತ್ತಾರೆ. ಜುಲೇಕ ಎಂಬ ಯುವತಿ ಬಾಳು ಹಾಳು ಮಾಡಿ ಅತ್ಮಹತ್ಯೆಗೆ ಕಾರಣ ಈ ಪತ್ರಕರ್ತ ಎಂದು ವಾದಿಸುತ್ತಾರೆ. ಆದರೆ ಈತನ ವಿರುದ್ಧ ಆತ್ಮಹತ್ಯೆ ಪ್ರೇರೇಪಿಸಿದ ಪ್ರಕರಣದ ದಾಖಲೆ ನೀಡುವುದಿಲ್ಲ. ಆದರೂ ಕೂಡಾ ಇವರು ಹೇಳಿದ್ದೆಲ್ಲವೂ ಸತ್ಯ ಎಂದು ಒಂದು ಕ್ಷಣ ಭಾವಿಸಿದರೂ ಶಿಕ್ಷೆ ನೀಡಲು ಅಧಿಕಾರ ಕೊಟ್ಟವರು ಯಾರು? ಸಾಮಾಜಿಕ ನ್ಯಾಯ ಹೆಸರಲ್ಲಿ ಸಾಮಾಜಿಕ ಭಯೋತ್ಪಾದನೆ ಮಾಡುವುದು ಎಷ್ಟು ಸರಿ ? ಈ ಪ್ರಶ್ನೆ ಎಲ್ಲ ಸಂಘಟನೆಗಳಲ್ಲಿರುವ ಧಾರ್ಮಿಕ ಮೂಲಭೂತವಾದಿಗಳಿಗೂ ಅನ್ವಯವಾಗುತ್ತದೆ. ಆದಿ ಉಡುಪಿಯಲ್ಲಿ ಗೋಸಾಗಾಟ ನಡೆಸಿದ ಮುಸ್ಲಿಂ ಸಮುದಾಯಕ್ಕೆ ಸೇರಿದ ತಂದೆ-ಮಗನನ್ನು ಬೆತ್ತಲೆ ಮಾಡಿರುವ ಹೀನಕೃತ್ಯ ಖಂಡಿಸಿ ಕನ್ನಡಪ್ರಭ ವರದಿ ಮಾಡಿತ್ತು. ಹೋಮ್ ಸ್ಟೇ ದಾಳಿ ಕೋರ ದುಶ್ಯಾಸನರನ್ನು, ಪಬ್ ದಾಳಿ ನಡೆಸಿದ ಹಿಂದೂ ಸಂಘಟನೆಗಳ ಜನ್ಮಜಾಲಾಡಿತ್ತು. ಈಗ ಮುಸ್ಲಿಂ ಮೂಲಭೂತವಾದಿಗಳ ಸರದಿ. ಇದೇ ರೀತಿ ನಿಷ್ಪಕ್ಷಪಾತ ಕ್ರಮ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿದೆಯೇ ? ಪತ್ರಕರ್ತರು ಉಸ್ತುವಾರಿ ಸಚಿವ ರಮಾನಾಥ ರೈಗಳಿಗೆ ಮನವಿ ಸಲ್ಲಿಸಿದ್ದಾರೆ. ಆರಂಭದಲ್ಲಿ ಇಬ್ಬರುನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಇದ್ದಾಗ ಇಬ್ಬರ ಮುಖದಲ್ಲಿ ಯುದ್ಧದಲ್ಲಿ ಗೆದ್ದ ರಣೋತ್ಸಾಹ ಇತ್ತು, ಅಪರಾಧಿ ಪ್ರಜ್ಞೆಯೇ ಇರಲಿಲ್ಲ. ಇದೂ ಭಯಪಡಬೇಕಾದ ಸಂಗತಿ. ಪೊಲೀಸರು 40 ಆರೋಪಿಗಳಲ್ಲಿ ಕೇವಲ 3 ಮಂದಿಯನ್ನು ಮಾತ್ರ ಹಿಡಿದಿದ್ದಾರೆ. ಎಲ್ಲೇ ಇದ್ದರೂ ಆರೋಪಿಗಳನ್ನು ಹಿಡಿದು ತರುವ ಸಾಮರ್ಥ್ಯ ಪೊಲೀಸರಿಗಿದೆ ಆದರೆ ಜನಪ್ರತಿನಿಧಿಗಳೇ ಅಡ್ಡಗಾಲಾಗುತ್ತಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಕ್ಕೆ ಪರ್ಯಾಯ ಸರ್ಕಾರಗಳು ಕಾನೂನು ಕೈಗೆತ್ತಿಕೊಳ್ಳುವ ಪ್ರಕರಣಗಳು ನಡೆಯುತ್ತಿವೆ. ರಾಷ್ಟ್ರೀಯ ಉದ್ಯಾನವನದಿಂದ ಸ್ವ ಇಚ್ಛೆಯಿಂದ ಹೊರಬರಲು ನೆರವಾಗುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯ (ಕಾಂಗ್ರೆಸ್ ಬೆಂಬಲಿತ) ರಾಮಚಂದ್ರ ಭಟ್ಟರ ಮನೆಗೆ ನುಗ್ಗಿದ ನಕ್ಸಲರು 'ಜನ ಅದಾಲತ್' (ನಕ್ಸಲ್ ಸರ್ಕಾರ ನ್ಯಾಯತೀರ್ಮಾನ ಶೈಲಿ) ನಡೆಸಿ ಭಟ್ಟರು ಮಾಡಿರುವುದು ತಪ್ಪೆಂದು ತಾವೇ ತೀರ್ಮಾನಿಸಿ ಬೈಕ್ಗೆ ಬೆಂಕಿ ಹಚ್ಚಿದರು, ಕಾರ್ ಸುಟ್ಟುಹಾಕಿದರು. ಇದನ್ನು ಸಮರ್ಥಿಸಿ ಬ್ಯಾನರ್ ಪ್ರದರ್ಶಿಸಿದರು. ಸರ್ಕಾರಕ್ಕೆ ಮಾತ್ರ ಕಾಣುತ್ತಿಲ್ಲ. ಮುಸ್ಲಿಮ್ ಮಹಿಳೆ ಜತೆ ಅನೈತಿಕ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಿ ಚಾರ್ಮಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇಜಪ್ಪರನ್ನು ಮೂಲಭೂತವಾದಿ ಸಂಘಟನೆಗಳು ಅಪಹರಿಸಿ ಅರೆ ಬೆತ್ತಲೆ ಮಾಡಿ ಥಳಿಸಿದರು. ಈ ನೈತಿಕ ಪೊಲೀಸ್ ಗಿರಿ ಬಗ್ಗೆ ಯಾರೂ ತುಟಿಪಿಟಿಕ್ ಎನ್ನಲಿಲ್ಲ. ತಮ್ಮ ಕಾರ್ಯಕರ್ತ ಎಂಬ ಕಾರಣಕ್ಕೂ ಕಾಂಗ್ರೆಸಿಗರು ಪ್ರತಿಭಟನೆ ನಡೆಸಿಲ್ಲ.
ಪತ್ರಕರ್ತನಿಗೆ ಹಲ್ಲೆ ನಡೆಸಿದ ದಿನದಂದೇ ಮಂಗಳೂರಲ್ಲಿ ಂದು ಯುವಕನ ಜತೆಗೆ ಮುಸ್ಲಿಂ ಯುವತಿ ಇದ್ದ ಕಾರಣಕ್ಕೆ ಬಸ್ನಿಂದ ಇಳಿಸಿ ಯುವಕನಿಗೆ ಮೂಲಭೂತವಾದಿಗಳು ಹಲ್ಲೆ ನಡೆಸಿದರು. ಸ್ಥಳೀಯರು ರಕ್ಷಣೆಗೆ ಬಾರದಿದ್ದರೆ ಇನ್ನೊಂದು ತಾಲಿಬಾನ್ ಪ್ರಕರಣ ನಡೆಯುತ್ತಿತ್ತು. ಮುಸ್ಲಿಂ ಯುವತಿಯನ್ನು ಯುವಕರು ಬಲವಂತವಾಗಿ ಕಾರ್ನಲ್ಲಿ ಹಾಕಿ ಕರೆದೊಯ್ದು ಬೆದರಿಸಿ, ಬುದ್ಧಿವಾದ ಹೇಳಿ ಶಿಕ್ಷೆ ವಿಧಿಸಿದರು. ಆದರೆ, ಮಂಗಳೂರಿನ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪತ್ರಕರ್ತೆ ಭಾನುವಾರ ರಾತ್ರಿ ಮನೆಗೆ ಹೋಗುತ್ತಿರುವಾಗ ಬೈಕ್ನಲ್ಲಿ ಬಂದ ಜಾಕ್ಸನ್, ಡೆನ್ಸನ್ ಕೈ ಹಿಡಿದೆಳೆದು ಲೈಂಗಿಕ ಕಿರುಕುಳ ನೀಡಿದ್ದರು. ಈ ಪ್ರಕರಣದಲ್ಲಿ ಮೂಲಭೂತವಾದಿಗಳು ಪ್ರತಿಭಟನೆ ಮಾಡಿಲ್ಲ. ಮುಸ್ಲಿಂ ಮಹಿಳೆಯರು ರಾತ್ರಿ ವೇಳೆ ತಿರುಗಾಡುವುದು ನಿಷಿದ್ಧ ಎಂದು ಮಹಿಳೆಯರಿಗೇ ಬುದ್ಧಿ ಹೇಳಲು ಈ ಪ್ರಕರಣ ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಕೆಎಫ್ಡಿ ಆರಂಭದಲ್ಲಿ ತಮ್ಮ ಸಮುದಾಯ ಜತೆಗೆ ದಲಿತ, ಕ್ರೈಸ್ತರ ಪರ ಧ್ವನಿ ಎತ್ತುವ ಕಾರ್ಯಕ್ರಮ ನಡೆಸತೊಡಗಿತು. ತಮ್ಮದೇ ಸಮುದಾಯಕ್ಕೇ ಸೀಮಿತಗೊಳಿಸಿದರೆ ಜನಬೆಂಬಲ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ದಲಿತ ಸಂಘಟನೆಗಳ ಜತೆ ಸೇರಿ ಸಭೆಗಳಿಗೆ, ಹೋರಾಟಗಳಿಗೆ ಜನ ಒಟ್ಟುಮಾಡತೊಡಗಿತು. ತಮ್ಮ ಹೋರಾಟ ಸಂಘಪರಿವಾರದ ವಿರುದ್ಧವೇ ಹೊರತು ಹಿಂದೂ ಸಮುದಾಯದ ವಿರುದ್ಧವಲ್ಲ ಎಂಬ ನೀತಿ ಪಾಠ ಹೇಳುತ್ತಿತ್ತು. ಸಂಘಟನೆ ಪ್ರಬಲವಾದಂತೆ ಅಜೆಂಡಾ ಬದಲಾಗಿ ಹಿಡನ್ ಅಜೆಂಡಾ ಮುಂಚೂಣಿಗೆ ಬರತೊಡಗಿದವು. ನೈತಿಕ ಪೊಲೀಸ್ ಗಿರಿ ವಿರೋಧಿಸಿ ಪ್ರತಿಭಟನೆ ನಡೆಸಿದವರೇ ನೈತಿಕ ಪೊಲೀಸ್ಗಿರಿ ನಡೆಸತೊಡಗಿದರು. ಮೂಲಭೂತವಾದ ವಿರುದ್ಧ ಹೋರಾಟ ನಡೆಸುತ್ತೇವೆ ಎನ್ನುತ್ತಿದ್ದ ಕೋಮುಸೌಹಾರ್ದ ವೇದಿಕೆ ಈ ಸಂಘಟನೆಗಳ ಮೂಲಭೂತವಾದಕ್ಕೆ ವೇದಿಕೆ ಆಯಿತು!
ಈ ಬಗ್ಗೆ ಕೋಸೌವೇ ಮುಖಂಡರನ್ನು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ 'ಅವರೇನು ತಾಲಿಬಾನಿಗಳಲ್ಲ, ಪಾಕಿಸ್ತಾನೀಯರಲ್ಲ, ಭಾರತೀಯರೇ, ಸುಮ್ಮನೆ ಆರೋಪಿಸಬೇಡಿ ಸ್ಟ್ರಾಂಗ್ ಎವಿಡೆನ್ಸ್ ಕೊಡಿ' ಎಂದು ಹೇಳಿದ್ದರು. ಈಗ ಸ್ಟ್ರಾಂಗ್ ಎವಿಡೆನ್ಸ್ ಸಿಕ್ಕಿದೆ, ಆದರೂ ಕೋಸೌವೇ ಮಿಸುಕುತ್ತಿಲ್ಲ. ಇಷ್ಟೆಲ್ಲಾ ನೈತಿಕ ಪೊಲೀಸ್ ಗಿರಿ ನಡೆದರೂ ಸರ್ಕಾರದವರೆಗೆ ಮುಟ್ಟುತ್ತಿಲ್ಲ, ಏಕೆಂದರೆ ನೈತಿಕ ಪೊಲೀಸ್ ಗಿರಿ ನಡೆದರೆ ಆಯಾ ಪೊಲೀಸ್ ಠಾಣಾಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ, ಗೃಹಸಚಿವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಂಥ ಪ್ರಕರಣ ಮುಚ್ಚಿಡುವುದರಲ್ಲಿಯೇ ಕ್ಷೇಮ ಎಂದು ಪೊಲೀಸರು ಭಾವಿಸಿದಂತಿದೆ.
-ಜಿತೇಂದ್ರ ಕುಂದೇಶ್ವರ
ಕನ್ನಡಪ್ರಭ