ಖುಷಿಗೆ ಇನ್ನಷ್ಟು ಖುಷಿ ಖುಷಿ ಪ್ರತಿಕ್ರಿಯೆ
ನಮ್ಮ ಓದುಗರು ನಿಜಕ್ಕೂ 'ಖುಷಿ'ಯಾಗಿದ್ದಾರೆ. ಪ್ರತಿ ಭಾನುವಾರ ಕನ್ನಡಪ್ರಭದೊಂದಿಗೆ ...
ನಮ್ಮ ಓದುಗರು ನಿಜಕ್ಕೂ 'ಖುಷಿ'ಯಾಗಿದ್ದಾರೆ. ಪ್ರತಿ ಭಾನುವಾರ ಕನ್ನಡಪ್ರಭದೊಂದಿಗೆ ತಮ್ಮ ಮನೆಗೆ ಬರುತ್ತಿದ್ದ 'ಸಾಪ್ತಾಹಿಕ ಪ್ರಭ' ಈಗ 'ಖುಷಿ' ಆಗಿರುವ ಬಗ್ಗೆ ಪತ್ರಿಕೆಯ ಕಾರ್ಯಾಲಯಕ್ಕೆ ದೂರವಾಣಿ, ಮಿಂಚಂಚೆಗಳ ಮೂಲಕ ತಮ್ಮ ಸಂತೋಷ ಹಂಚಿಕೊಳ್ಳುತ್ತಿದ್ದಾರೆ. 'ಖುಷಿ'ಯಲ್ಲಿ ತಮಗೆ ಏನು ಬೇಕು ಎನ್ನುವುದನ್ನೂ ಹೇಳಿಕೊಳ್ಳುತ್ತಿದ್ದಾರೆ. ಕೆಲವು ಪ್ರತಿಕ್ರಿಯೆಗಳು...
ಖುಷಿಪಟ್ಟ ಡಾ.ರಾಜ್ ಸಂಬಂಧಿಗಳು
ಇದೇ ಪ್ರಥಮ ಬಾರಿಗೆ ಭಾನುವಾರದ ಸಾಪ್ತಾಹಿಕ ಪ್ರಭವನ್ನು 'ಖುಷಿ' ರೂಪದಲ್ಲಿ ಹೊರತಂದ ಕನ್ನಡಪ್ರಭದ ಹೊಸ ಪ್ರಯೋಗಕ್ಕೆ ಡಾ.ರಾಜ್ಕುಮಾರ್ ಸಂಬಂಧಿಗಳು ಖುಷಿಪಟ್ಟಿದ್ದಾರೆ. 'ಖುಷಿ' ಮ್ಯಾಗಜಿನ್ನ ಮುಖಪುಟದಲ್ಲಿ ಡಾ.ರಾಜ್ ಭಾವಚಿತ್ರ ಬಳಸಿರುವುದರಿಂದ ಹಿಡಿದು ಅವರ ನಟನೆ, ಗುಣ ಮತ್ತು ನಡತೆಯನ್ನು ಬಿಂಬಿಸುವ ಲೇಖನ ಅಮೋಘವಾಗಿದೆ ಎಂದು ವಾಣಿಜ್ಯೋದ್ಯಮಿ ಎಂ.ಕೆ. ಪೋತರಾಜ್, ನಿರ್ಮಾಪಕ ಕೆ.ರಾಜಶೇಖರ್ ಹರ್ಷ ವ್ಯಕ್ತಪಡಿಸಿದ್ದಾರೆ. ಕನ್ನಡಪ್ರಭ ವಿನೂತನ ಪ್ರಯೋಗಗಳಿಗೆ ಮುಂದಾಗುತ್ತಿದ್ದು ದಿನಪತ್ರಿಕೆಯೊಂದಿಗೆ ಈಗ ವಾರಪತ್ರಿಕೆಯನ್ನೂ ನೀಡುತ್ತಿರುವ ಪ್ರಯೋಗ ಪ್ರಶಂಸನೀಯ. ಅದರಲ್ಲೂ ಮೊದಲ ಸಂಚಿಕೆಯಲ್ಲಿಯೇ ಡಾ. ರಾಜ್ಕುಮಾರ್ ಬಗ್ಗೆ ಸಂಪೂರ್ಣ ವಿವರ ನೀಡಿರುವುದು 'ಖುಷಿ' ತಂದಿದೆ. ಇದೇ ರೀತಿ ಕನ್ನಡ ಚಲನಚಿತ್ರರಂಗದ ಹಲವಾರು ಮಹನೀಯರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬೆಳಕು ಚೆಲ್ಲುವಂತಾಗಲಿ ಎಂದು ಕೆ. ರಾಜಶೇಖರ್ ಹಾರೈಸಿದ್ದಾರೆ.
ಹಬ್ಬದ ಸವಿಯೂಟ
ದೈನಂದಿನ ಸುದ್ದಿ ಪತ್ರಿಕೆಯ ಜತೆಗೆ ವಾರದಲ್ಲಿ ಇಂತಹ ಸಂಚಿಕೆಯನ್ನು ಓದುಗರಿಗೆ ಕನ್ನಡಪ್ರಭ ಕಲ್ಪಿಸಿರುವುದು ಹಬ್ಬದ ಫುಲ್ಮೀಲ್ಸ್ ಸವಿದಂತಾಗಿದೆ. ವಿವಿಧ ರಂಗದ ಲೇಖನಗಳ ಮಾಲೆಯೂ ಅದ್ಭುತ ಹಾಗೂ ಆಕರ್ಷಕ. 'ಖುಷಿ'ಯ ಭಕ್ಷ್ಯ ಭೋಜನದಲ್ಲಿ ರಂಗಭೂಮಿಗೂ ಒಂದಷ್ಟು ಅವಕಾಶವಿರಲಿ.
- ಮಂಡ್ಯ ರಮೇಶ್
ಕಾಲ ಮರುಕಳಿಸಿದೆ
ಹಿಂದೆಲ್ಲ ಹಾಗಿತ್ತು. ಒಂದು ಮ್ಯಾಗ್ಜಿನ್ಗಾಗಿ ವಾರಗಟ್ಟಲೆ ಕಾಯುವಂಥ ತವಕ. ಈಗದು 'ಖುಷಿ'ಯ ಮೂಲಕ ಮರುಕಳಿಸಿದೆ. 'ಕನ್ನಡಪ್ರಭ' ಬಳಗಕ್ಕೆ ಧನ್ಯವಾದಗಳು.
- ಉಮೇಶ್, ಲೇಖಕ
ಕೊಂಡು ಓದ್ತೀನಿ...
ನಿಜವಾಗಿಯೂ ಒಳ್ಳೆಯ ಪ್ರಯತ್ನ. ಇಷ್ಟು ದಿನ ಆನ್ಲೈನ್ ಪತ್ರಿಕೆ ಓದ್ತಾ ಇದ್ದೆ. 'ಖುಷಿ' ಬಂದಿದೆ ಎನ್ನುವ ಕಾರಣಕ್ಕಾಗಿ, ಪೇಪರನ್ನು ಮನೆಗೆ ಹಾಕಿಸಿಕೊಳ್ಳುವ ನಿರ್ಧಾರ ಮಾಡಿದ್ದೀನಿ.
- ಗುರು ದೇಸಾಯಿ
ವಿದ್ಯಾರ್ಥಿಗಳತ್ತ ಗಮನ ಇರಲಿ
'ಖುಷಿ' ಆಗಮನ ಸಂತೋಷ ತಂದಿದೆ. ವಿದ್ಯಾರ್ಥಿಗಳ ಬಗ್ಗೆಯೂ ಗಮನ ಇರಲಿ. ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸುವ ವಿಷಯಗಳು, ಕಂಪ್ಯೂಟರ್ ಲೋಕದಗ ಆಗುಹೋಗುಗಳ ಕುರಿತಾಗಿಯೂ ಬೆಳಕು ಚೆಲ್ಲಿದರೆ ಚೆನ್ನಾಗಿರುತ್ತದೆ.
- ವಾಸು ಎಸ್., ರತನ್ರಾಜ್ ಕೋಬಾಳ್ಕರ್, ಚಂದ್ರಕಾಂತ ಭಂಡಾರಿ, ಶಿವಯೋಗಿ ಕಟ್ಟಿ, ಸಂತೋಷ್, ವಿಲಾಸ್
ಬಾಳೆಲೆ ಊಟ!
ವಾರದ ಐದೂ ದಿನಗಳು 'ಬೈಟು ಕಾಫಿ' ಹೀರುತ್ತಿದ್ದ ನಮಗೆ ಬಾಳೆಲೆ ಊಟ ಸವಿದ್ಹಂಗೆ ಆಯ್ತು. ಜ್ಞಾನದಾತೋ ಸುಖೀಭವ! ಖುಷಿದಾತೋ ಸುಖೀಭವ!
- ಪಿ.ಜೆ. ರಾಘವೇಂದ್ರ, ಮೈಸೂರು
ಪಂಚಾಮೃತದ ಖುಷಿ!
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುತೂಹಲದಲ್ಲಿದ್ದ ನಮಗೆ ಅದಕ್ಕಿಂತ ಮುಂಚಿತವಾಗಿಯೇ 'ಖುಷಿ'ಯ ವಿಚಾರ ನೀಡಿದ್ದೀರಿ. ಪತ್ರಿಕಾ ಲೋಕದಲ್ಲಿ 'ಕನ್ನಡಪ್ರಭ' ಮನ್ವಂತರದ ಹರಿಕಾರ. 'ಬೈಟುಕಾಫಿ' ಇದಕ್ಕೆ ಸಾಕ್ಷಿ; 'ಖುಷಿ' ಅರಳಿಸಿದೆ ಓದುಗನ ಅಕ್ಷಿ!
- ಆದಿಪ್ರಿಯ, ದಾವಣಗೆರೆ
ಇದು ಜಾದೂ
'ಖುಷಿ' ಅಪರೂಪದ ಚಮತ್ಕಾರ. ಪ್ರತಿ ಪುಟದಲ್ಲೂ ಸುಂದರ ಲೇಖನಗಳು ರಾರಾಜಿಸಿವೆ. ಖಂಡಿತಾ ನಾವೆಲ್ಲ ಇದನ್ನು ಸ್ವಾಗತಿಸುತ್ತೇವೆ. ಕೆಟ್ಟ ರಾಜಕೀಯ ಸಮಾಚಾರಗಳನ್ನು ಬದಿಗಿಟ್ಟು, ಇಂಥ ವೈವಿಧ್ಯ ಕೊಟ್ಟರೆ 'ಖುಷಿ' ಕನ್ನಡಿಗರ ಮನದ ಅತಿಥಿ ಖಂಡಿತಾ ಆಗುತ್ತದೆ.
- ನಾ. ಗೋಪಾಲ, ಶಿಕಾರಿಪುರ
ಕಥೆ ಪುಟ ಹೆಚ್ಚಿಸಿ
'ಖುಷಿ' ಚೆನ್ನಾಗಿದೆ. ಆದರೆ ಕಥೆಗೆ ನೀಡಿರುವ ಜಾಗ ಕಡಿಮೆ ಆಯಿತು. ಅದನ್ನು ಕನಿಷ್ಠ ನಾಲ್ಕು ಪುಟಗಳಿಗೆ ಹೆಚ್ಚಿಸಿ. ಸಾಪ್ತಾಹಿಕ ಪ್ರಭದಲ್ಲಿ ಬರುತ್ತಿದ್ದ ವ್ಯಕ್ತಿ ಚಿತ್ರ ಅಂಕಣ ಮುಂದುವರೆಸಿ.
- ವಿನಯ್ ಕುಲಕರ್ಣಿ
ಅಭಿನಂದನೆಗಳು ಸಂಗ್ರಹಯೋಗ್ಯ
ಸಂಚಿಕೆಯಾಗಿ 'ಖುಷಿ' ಮೂಡಿಬರುತ್ತಿದೆ. ಕನ್ನಡಪ್ರಭಕ್ಕೆ ಅಭಿನಂದನೆಗಳು.
- ದಂಡಿನಶಿವರ ಮಂಜುನಾಥ
ಅರಳಿ ಕೂರುವ 'ಖುಷಿ'
ತುಂಬಾ ದಿನಗಳ ನಂತರ ಕನ್ನಡ ಪುರವಣಿ ಲೋಕದಲ್ಲಿ ಕ್ರಾಂತಿ ಆದ 'ಖುಷಿ' ಆಯಿತು. ನಿಮ್ಮ ಸಾಪ್ತಾಹಿಕಕ್ಕೆ ಈಗ ಕಳೆ ಬಂದಿದೆ. ಎತ್ತಲೋ ಹೊರಟಾಗ ಅದನ್ನು ಹಿಡಿದು ಓದಬೇಕೆಂದರೆ ಬಹಳ ಹಿಂಸೆ ಆಗ್ತಿತ್ತು. ಈಗ ಕೈಯೊಳಗೆ ಖುಷಿ ಮುದುಡಿಯೂ, ಅರಳಿಯೂ ಕೂರುತ್ತದೆ. ತೀರಾ ಗಂಭೀರವಾಗಿದ್ದ ಸಾಪ್ತಾಹಿಕಕ್ಕೆ ಲೈಟ್ ಟಚ್ ನೀಡಿದ್ದು ನಿಜಕ್ಕೂ ಖುಷಿಯ ವಿಚಾರ.
- ರಾಮಕೃಷ್ಣ ಅಯ್ಯರ್, ಮೈಸೂರು
ಕ್ರೀಡೆ ಕೊಡಿ ಸಾರ್...
'ಖುಷಿ'ಯನ್ನು ಸಂಪೂರ್ಣವಾಗಿ ಓದಿದೆ. ಸಿನಿಮಾ, ಭವಿಷ್ಯ, ಸಾಹಿತ್ಯ, ರಾಜಕೀಯ- ಎಲ್ಲವೂ ಇದೆ. ಆದರೆ, ಕ್ರೀಡೆ ಮಾತ್ರ ಇರಲಿಲ್ಲ. ನಾನು ಅಪ್ಪಟ ಕ್ರೀಡಾಭಿಮಾನಿ. ಕ್ರೀಡಾರಂಗವನ್ನೂ ನೀವು ರಸಯುಕ್ತವಾಗಿ 'ಖುಷಿ'ಯಲ್ಲಿ ಕೊಡಿ. 'ಲಾಸ್ಟ್ಬಾಲ್'ನಲ್ಲಿ ಬರುವ ಪ್ರಸಿದ್ಧ ಆಟಗಾರರ ಸಲ್ಲಾಪಗಳನ್ನು ಕೊಟ್ಟರೂ ಪರ್ವಾಗಿಲ್ಲ. ಚಪ್ಪರಿಸುತ್ತೇವೆ.
- ಭೀಮೇಶ್ವರ ಪೂಜಾರಿ, ಹೆಬ್ರಿ
ಸೀರಿಯಲ್ ಕೊಟ್ರೆ ಖುಷಿ
'ಖುಷಿ'ಯಲ್ಲಿ ಎಲ್ಲವೂ ಇತ್ತು. ಆದರೆ, ಕಿರುತೆರೆಗೆ ಸಂಬಂಧಿಸಿದ ಯಾವ ಸ್ಟೋರಿಗಳೂ ಇರಲಿಲ್ಲ. ಇದರಿಂದ ನಮಗೆ ಬೇಜಾರಾಗಿದೆ. ನಾವು ಮನೆಗೆಲಸ ಬಿಟ್ಟು ಧಾರಾವಾಹಿ ನೋಡುವ ಜಾತಿಯವರು. ಮೊದಲೇ ಪ್ರತಿ ಭಾನುವಾರ ಟಿವಿ ವಾಹಿನಿಗಳಲ್ಲಿ ಧಾರಾವಾಹಿಗಳು ಇರುವುದಿಲ್ಲ. ಅಂಥದ್ದರಲ್ಲಿ ನೀವೂ ಮೋಸ ಮಾಡ್ತೀರ ಅಂತ ಗೊತ್ತಿರ್ಲಿಲ್ಲ. ಪ್ಲೀಸ್ ಸೀರಿಯಲ್ ಅನ್ನು ಸೀರಿಯಸ್ಸಾಗಿ ತಗೊಳ್ಳಿ.
- ಸೀತಾಲಕ್ಷ್ಮಿ, ಸ್ಮಿತಾ ಭಟ್, ರಾಜೇಶ್ವರಿ
ಡಬ್ಬಲ್ 'ಖುಷಿ'
'ಖುಷಿ' ಓದುವುದೇ ಒಂದು ತರಹ ಖುಷಿ. ನನಗೆ ಬುದ್ಧಿ ಬಂದಾಗಿನಿಂದ ಕನ್ನಡಪ್ರಭ ಓದುತ್ತಿದ್ದೇನೆ. ಪತ್ರಿಕೆ ಓದುವುದು ಒಂದು ಖುಷಿಯಾದರೆ ಈಗ ಮತ್ತೊಂದು 'ಖುಷಿ' ಸಿಕ್ಕಿದೆ. ಎರಡೆರಡು ಖುಷಿ ನನಗೆ ಇನ್ನಷ್ಟು ಖುಷಿಯಾಗಿದೆ.
- ಸ್ನೇಕ್ ಶ್ಯಾಮ್