2014: ಸಂಖ್ಯಾಬಲಕ್ಕೆ ಕಾಂಗ್ರೆಸ್ಗೆಲ್ಲಿಯ ದಿಕ್ಕು?
ಕಾಂಗ್ರೆಸ್ನ ಇತರ ನೇತಾರರಂತಲ್ಲದೇ ರಾಹುಲ್ ಗಾಂಧಿ ಅವರು ನಾಲ್ಕು ರಾಜ್ಯಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ ವೈಫಲ್ಯ ಅನುಭವಿಸಿರುವುದಕ್ಕೆ ಆಂತರಿಕ ವಿಮರ್ಶೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಆಮ್ ಆದ್ಮಿ ಪಾರ್ಟಿ ಯಶಸ್ಸಿನಿಂದಲೂ ಕಲಿಯುವುದು ಏನಿದೆ ಎಂಬುದನ್ನು ಗಮನಿಸುವುದಕ್ಕೆ ಸಿದ್ಧ ಎಂಬ ಉವಾಚವೂ ಅವರದ್ದು. ಆದರೆ ನಿಜಕ್ಕೂ ಇದೆಲ್ಲ ಸಹಕರಿಸಲಿದೆಯೇ? ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬಕ್ಕೆ ತಪ್ಪು ತಿದ್ದಿಕೊಳ್ಳುವುದಕ್ಕಾಗಿ ಉಳಿದಿರುವ ಅಂಶ ಎಂಬುದೇನಾದರೂ ಇದೆಯೇ?
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವಾಗ ರಾಹುಲ್ ಮತ್ತು ಕಾಂಗ್ರೆಸ್ ತಮ್ಮ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಬೇಕಿರುವುದು ಅನಿವಾರ್ಯ. ಆದರೆ ಅದು ಕೆಲಸಕ್ಕೆ ಬರುವುದೇ? ರಾಹುಲ್ ಗಾಂಧಿಯವರು ರಾತ್ರಿ ಬೆಳಗಾಗುವುದರೊಳಗೆ ತಮ್ಮ ವರ್ಚಸ್ಸನ್ನು ಬೆಳಗಿಕೊಳ್ಳುವುದು ಸಾಧ್ಯವಿಲ್ಲ. ಅಂತೆಯೇ ಮನಮೋಹನ ಸಿಂಗ್ ಅವರು ತಮ್ಮ ಸರ್ಕಾರದ ತಪ್ಪು ನೀತಿಗಳನ್ನೆಲ್ಲ ಬದಲಿಸಿ ಏಕಾಏಕಿ ಸುಧಾರಣೆ ಮತ್ತು ಜನಕಲ್ಯಾಣವನ್ನು ಸಾಧಿಸಿಬಿಡುವುದಕ್ಕೂ ಆಗುವುದಿಲ್ಲ. ಸದ್ಯಕ್ಕೆ ತನ್ನ ಬಳಿ ಹೇಳಿಕೊಳ್ಳಬಹುದಾದ ನಾಯಕತ್ವ ಹಾಗೂ ಜನಪ್ರಿಯ ಕಾರ್ಯಕ್ರಮ ಎರಡೂ ಇರದ ಸ್ಥಿತಿಯಲ್ಲಿ ಒಟ್ಟಾರೆಯಾಗಿ ಚುನಾವಣೆಗೆ ಸಿದ್ಧವಾಗಬೇಕಿರುವುದಷ್ಟೇ ಕಾಂಗ್ರೆಸ್ ಪಾಲಿಗೆ ಉಳಿದಿರುವುದು. ಅದೂ ಸಹ ಸುಲಭದಲ್ಲಿಲ್ಲ.
ಕಾಂಗ್ರೆಸ್ ಈಗ ಚಿಂತಿಸಬೇಕಾದ ಸಂಗತಿ ಎಂದರೆ ತನಗೆ ಬೇಕಾದ ಸಂಖ್ಯಾಬಲ ಎಂಬುದು ಎಲ್ಲಿಂದ ಬರಲಿದೆ ಎಂಬುದರ ಬಗ್ಗೆ. ಇದು ಅದರ ಪಾಲಿಗೆ ಅತಿಕೆಟ್ಟ ಚುನಾವಣೆ ಆಗಲಿದೆಯೇ? ಟಿವಿ ವಾಹಿನಿಗಳಲ್ಲಿ ಇಂಥ ಪ್ರಶ್ನೆಗಳು ಎದುರಾದಾಗ ಅದರ ವಕ್ತಾರರು- 11 ರಾಜ್ಯಗಳಲ್ಲಿ ಆಳ್ವಿಕೆ ಇರಿಸಿಕೊಂಡಿರುವ ಏಕಮಾತ್ರ ಪಕ್ಷ ಕಾಂಗ್ರೆಸ್ ಎಂಬ ಸಮರ್ಥನೆ ಮುಂದಿಡುತ್ತಾರೆ. ನಿಜ. ಪಕ್ಷದ ಕಾರ್ಯಕರ್ತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಅಂಕಿ ಆಶಾದಾಯಕವಾಗುತ್ತದೆ. ಆದರೆ ಈ ಎಲ್ಲ ರಾಜ್ಯಗಳ ಲೋಕಸಭೆ ಸ್ಥಾನವನ್ನು ಲೆಕ್ಕ ಹಾಕಿದರೆ 180 ಸೀಟುಗಳಾಗುತ್ತವೆ ಅಷ್ಟೆ ಎಂಬ ಸತ್ಯವನ್ನು ಅವರೆಲ್ಲ ಮುಚ್ಚಿಡುತ್ತಿದ್ದಾರೆ. ಈ 180 ಸ್ಥಾನಗಳಲ್ಲಿ ಕಾಂಗ್ರೆಸ್ ಪ್ರಸ್ತುತ ಹೊಂದಿರುವ ಸ್ಥಾನಗಳು ನೂರಕ್ಕಿಂತ ಕಡಿಮೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಈ ಎಲ್ಲ ರಾಜ್ಯಗಳಲ್ಲಿ ಉತ್ತಮ ಫಲಿತಾಂಶವನ್ನು ಸಾಬೀತುಮಾಡಿ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಒಪ್ಪಬೇಕಾದ ವಿಷಯ. ಆದರೆ ಈ ಬಾರಿಯೂ ಅವರು ಆ ಯಶಸ್ಸನ್ನು ಪುನರಾವರ್ತಿಸಬಲ್ಲರೇ ಎಂಬುದು ಪ್ರಶ್ನೆ. ಈ ಸಾಧ್ಯತೆ ಬಹಳ ಕ್ಷೀಣ. ಇದು ಪಕ್ಷಕ್ಕೆ ಬಹಳ ದೊಡ್ಡ ಆಘಾತವನ್ನೇ ತಂದೊಡ್ಡಲಿದೆ.
ಹೀಗೆ ಹೇಳುವುದಕ್ಕೆ ಕಾರಣಗಳಿವೆ. ಕಳೆದ ಬಾರಿ ಆಂಧ್ರ ಪ್ರದೇಶದ 42 ಸ್ಥಾನಗಳ ಪೈಕಿ 33ನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು. ಆದರೆ ಈ ಸಲ ಕಾಂಗ್ರೆಸ್ ಅಲ್ಲಿ ತೊಂದರೆ ಎದುರಿಸುತ್ತಿದೆ. ವೈಎಸ್ಆರ್ ಕುಟುಂಬದ ಪ್ರಭಾವದಿಂದಾಗಿ ರಾಜ್ಯದಲ್ಲಿ ನಾಯಕತ್ವದ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ. ರಾಜ್ಯವನ್ನು ತೆಲಂಗಾಣ ಮತ್ತು ಸೀಮಾಂಧ್ರಗಳಾಗಿ ವಿಭಾಗಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತೆಲಂಗಾಣ ಪ್ರಾಂತ್ಯವು ತಮ್ಮ ಕೈ ಹಿಡಿಯಬಹುದು ಎಂಬ ಆಸೆ ಕಾಂಗ್ರೆಸ್ನದ್ದು. ಆದರೆ ಯಾವ ತೆಲಂಗಾಣ ರಾಷ್ಟ್ರೀಯ ಸಮಿತಿ ಬೆನ್ನಮೇಲೆ ತಾನು ನಡೆಯಬಹುದು ಎಂದು ಕಾಂಗ್ರೆಸ್ ಕನಸು ಕಂಡಿತ್ತೋ ಅದರಲ್ಲೇ ವಿಘ್ನವಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅನ್ನು ಕೋಲಿನಿಂದಲೂ ಮುಟ್ಟಲಾರೆ ಎಂಬಂತೆ ಅಂತರ ಕಾಯ್ದುಕೊಂಡಿರುವ ಟಿಆರ್ಎಸ್, ಬಿಜೆಪಿ ಜತೆ ಕೈಜೋಡಿಸಿದರೂ ಆಶ್ಚರ್ಯವಿಲ್ಲ.
ಮುಂದಿನ ಅತಿದೊಡ್ಡ ಸಂಖ್ಯೆಯ ನಿರೀಕ್ಷೆ ಇರುವುದು ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರದಲ್ಲಿ. ಒಟ್ಟೂ 48 ಸ್ಥಾನಗಳಲ್ಲಿ ಕಾಂಗ್ರೆಸ್ ಮೈತ್ರಿಗೆ 25 ಸ್ಥಾನಗಳು ಲಭಿಸಿವೆ. ಈ ಪೈಕಿ 17 ಕಾಂಗ್ರೆಸ್ ಬಳಿ ಹಾಗೂ 8 ಸ್ಥಾನಗಳು ಶರದ್ ಪವಾರ್ರ ಎನ್ಸಿಪಿಯ ಬಳಿ ಇವೆ. ಪ್ರಸ್ತುತ ಆಡಳಿತಾವಧಿಯಲ್ಲಿ ಆದರ್ಶ ಹಗರಣ, ನೀರಾವರಿ ಹಗರಣಗಳು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಹೀಗೆ ಲೆಕ್ಕವಿಲ್ಲದಷ್ಟು ಅಹಿತಕರ ಘಟನೆಗಳು ನಡೆದಿವೆ. ಅದ್ಭುತ ಎಂಬಂಥ ಆಡಳಿತವನ್ನೇನೂ ಇವರು ನೀಡಲಿಲ್ಲ. ಹೀಗಾಗಿ ಪೃಥ್ವಿರಾಜ್ ಚೌಹಾಣ್ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವುದು ನಿಶ್ಚಿತ. ಈ ತಲೆಬಿಸಿಗೆ ಇನ್ನಷ್ಟು ತುಪ್ಪ ಸುರಿದಿರುವುದು ಮೈತ್ರಿಪಕ್ಷ ಎನ್ಸಿಪಿ ಜತೆ ಕಾಂಗ್ರೆಸ್ನ ತಿಕ್ಕಾಟ. ಇವೆಲ್ಲದರ ನಡುವೆಯೇ ಹಿಂದಿನ ಬಾರಿ ಗಳಿಸಿದಷ್ಟಾದರೂ ಸ್ಥಾನಗಳನ್ನು ಈ ಬಾರಿ ಗಳಿಸುವುದಕ್ಕೆ ಕಾಂಗ್ರೆಸ್ಗೆ ಸಾಧ್ಯವಿದೆಯೇ? ಇವೆಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ-ಶಿವಸೇನಾ ಮೈತ್ರಿ 20 ಸ್ಥಾನಗಳನ್ನು ಹೊಂದಿದ್ದು, ಇವರಿಗಿಂತ ತೀರ ಹಿಂದೆ ಬಿದ್ದಿರುವ ಸ್ಥಿತಿಯಲ್ಲಂತೂ ಇಲ್ಲ.
ಭುಪಿಂದರ್ ಹೂಡಾ ಅವರ ಆಳ್ವಿಕೆಯ ಹರ್ಯಾಣದ 10 ಸ್ಥಾನಗಳ ಪೈಕಿ ಈ ಹಿಂದಿನ ಚುನಾವಣೆಯಲ್ಲಿ ಭರ್ತಿ ಒಂಭತ್ತನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಅದೊಂದು ಒಳ್ಳೆಯ ಕಾಲ. ಅಲ್ಲಿ ರಾಬರ್ಟ್ ವಾದ್ರಾ ಅವರ ಭೂ ಹಗರಣಗಳೂ ಇರಲಿಲ್ಲ, ಅಶೋಕ್ ಖೇಮ್ಕ ಅವರು ಭ್ರಷ್ಟಾಚಾರದ ಕತೆಗಳನ್ನೂ ಬಿಚ್ಚಿಟ್ಟಿರಲಿಲ್ಲ. ಇದರೊಂದಿಗೆ ಪಕ್ಕದ ದೆಹಲಿಯಲ್ಲಿ ಈಗಾಗಲೇ ಯಶ ಸಾಧಿಸಿರುವ ಆಮ್ ಆದ್ಮಿ ಪಕ್ಷ ಇಲ್ಲಿಯೂ ತನ್ನ ಪ್ರಭಾವ ಬೀರಿದ್ದೇ ಆದರೆ ಕಾಂಗ್ರೆಸ್ಗೆ ಬಿಗಿಯಾಗುತ್ತದೆ.
ತರುಣ್ ಗೋಗೊಯ್ ಅವರ ಅಸ್ಸಾಂ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಏಳು ಸ್ಥಾನಗಳನ್ನು ದೊರಕಿಸಿಕೊಟ್ಟಿತ್ತು. ಇದು ಆ ರಾಜ್ಯದ ಅರ್ಧದಷ್ಟು ಸ್ಥಾನಗಳನ್ನು ತುಂಬಿಸಿದಂತಾಯಿತು. ಆದರೆ ಇತ್ತೀಚಿನ ಅತ್ಯಾಚಾರ ವಿರೋಧಿ ಆಕ್ರೋಶ ಹಾಗೂ ದುರಾಡಳಿತದ ಆರೋಪಗಳ ಬೆಳಕಿನಲ್ಲಿ ತರುಣ್ ಗೋಗೊಯ್ ಅದಾಗಲೇ ಸೋತವರಂತೆ ಕಾಣುತ್ತಿದ್ದಾರೆ.
ದಕ್ಷಿಣದಲ್ಲಿ ಕೇರಳವು ಕಾಂಗ್ರೆಸ್ ನಂಬಿಕೊಂಡಿರಬಹುದಾದ ರಾಜ್ಯ. ಪ್ರಸ್ತುತ ಅದರ 20 ಲೋಕಸಭೆ ಸ್ಥಾನಗಳ ಪೈಕಿ 13 ಸ್ಥಾನಗಳನ್ನು ಹಾಗೂ ಅದರ ಮಿತ್ರಪಕ್ಷ 3 ಸ್ಥಾನವನ್ನೂ ಹೊಂದಿದೆ. ಆದರೀಗ ಪಕ್ಷ ಮತ್ತು ಅದರ ಸರ್ಕಾರ ಗೊಂದಲದ ಗೂಡಾಗಿದೆ. ಹಗರಣಗಳು, ಆಂತರಿಕ ಕಚ್ಚಾಟ, ಲೈಂಗಿಕ ಹಗರಣ ಇವೆಲ್ಲವಕ್ಕೂ ಕಾಂಗ್ರೆಸ್ ನೇತೃತ್ವದ ಕೇರಳ ಸರ್ಕಾರ ಸುದ್ದಿಯಾಗುತ್ತಿದೆ. ಪ್ರತಿಪಕ್ಷ ಸಿಪಿಎಮ್ನ ಅವಕಾಶವಾದಿ ರಾಜಕಾರಣ ಹಾಗೂ ಹಿಂಸಾತ್ಮಕ ನಡೆಗಳು ಜನರ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದ್ದರೆ ಮಾತ್ರ ಉಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಪಕ್ಷ ಈ ಬಾರಿ ಅಲ್ಲಿ ಲಾಭ ಪಡೆದುಕೊಳ್ಳಬಹುದು.
ಈ ಎಲ್ಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವಿತವ್ಯದ ಕಥಾ ಸಾರಾಂಶವನ್ನು ಹೀಗೆ ಹಿಡಿದಿಡಬಹುದು: ಹೆಚ್ಚಿನ ರಾಜ್ಯಗಳು ಕಾಂಗ್ರೆಸ್ ಆಡಳಿತದಲ್ಲಿ ಇವೆಯಾದ್ದರಿಂದ ಅದರ ಲಾಭ ಪಡೆದುಕೊಳ್ಳಬಹುದು ಎಂಬ ವಾದ ಅರ್ಥಹೀನ. ಈ ಹಿಂದೆ ಗೆದ್ದ ಸ್ಥಾನಗಳ ಅರ್ಧದಷ್ಟನ್ನು ಉಳಿಸಿಕೊಳ್ಳುವುದೂ ಕಾಂಗ್ರೆಸ್ಗೆ ಈ ಬಾರಿ ಸವಾಲಾಗಲಿದೆ. ಈ ಎಲ್ಲ ಪ್ರಾಂತ್ಯಗಳಿಂದ 50 ಪ್ಲಸ್ ಸ್ಥಾನಗಳನ್ನು ಗಳಿಸುವುದಕ್ಕಷ್ಟೇ ಕಾಂಗ್ರೆಸ್ಗೆ ಸಾಧ್ಯವಾಗಬಹುದು.
ಈ ಹಿಂದೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆಳ್ವಿಕೆ ಇಲ್ಲದ ಕಡೆಗಳಲ್ಲೂ ಕಾಂಗ್ರೆಸ್ ಅತ್ಯುತ್ತಮ ಸಾಧನೆ ಮಾಡಿರುವ ಉದಾಹರಣೆಗಳು ಇವೆ. ವಾಸ್ತವವಾಗಿ ಅವು ನಿರ್ಣಾಯಕ ರಾಜ್ಯಗಳೇ ಆಗಿದ್ದವು. ಹೆಚ್ಚಿನ ಸಂಖ್ಯೆಯ ಲೋಕಸಭೆ ಸ್ಥಾನಗಳನ್ನೂ ಹೊಂದಿದ್ದಂಥವು. ರಾಜಸ್ಥಾನದಲ್ಲಿ ಒಟ್ಟೂ 25 ಲೋಕಸಭೆ ಸ್ಥಾನಗಳ ಪೈಕಿ 20ನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆಗ ಕಾಂಗ್ರೆಸ್ ಪರವಾದ ಅಲೆಯಿತ್ತು. ಅಶೋಕ್ ಗೆಹ್ಲೋಟ್ಉತ್ತುಂಗದಲ್ಲಿದ್ದರು. ಅವೆಲ್ಲವೂ ಈಗ ಇತಿಹಾಸವಾಗಿವೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚುವುದರೊಂದಿಗೆ ಕೆಲವೇ ಸ್ಥಾನಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರವೇ ಪಕ್ಷ ಆಶಾಭಾವನೆ ಇರಿಸಿಕೊಳ್ಳಬಹುದು.
ಉತ್ತರ ಪ್ರದೇಶ ಅತ್ಯಂತ ನಿರ್ಣಾಯಕ ರಾಜ್ಯ. ಅತಿಹೆಚ್ಚಿನ ಅಂದರೆ 80 ಲೋಕಸಭೆ ಸ್ಥಾನಗಳು ಇಲ್ಲಿವೆ. ಕಳೆದ ಬಾರಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿತ್ತು. ಹೆಚ್ಚಿನ ಸ್ಥಾನಗಳು ಸಮಾಜವಾದಿ ಪಕ್ಷಕ್ಕೆ ಒಲಿದಿದ್ದವು. ಎಸ್ಪಿ- ಬಿಜೆಪಿ- ಬಿಎಸ್ಪಿ- ಕಾಂಗ್ರೆಸ್ ನಡುವೆ ಮತದಾರರು ಹಂಚಿಹೋಗಿರುವ ವಿದ್ಯಮಾನವೇ ಮುಂದುವರಿದರೆ ಈ ಬಾರಿಯೂ ಕಾಂಗ್ರೆಸ್ ಅಲ್ಲಿ ಹೆಚ್ಚಿನ ಸಂಖ್ಯೆ ಗೆಲ್ಲಲಾರದು. ಕಾಂಗ್ರೆಸ್ ಗೆಲ್ಲಬೇಕೆಂದರೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. ಸದ್ಯಕ್ಕೆ ಅದು ಅಸಂಭವ ಎಂದೇ ತೋರುತ್ತಿದೆ. ಇಲ್ಲಿ ಮೈತ್ರಿಯೂ ಸಹಕರಿಸದು. ಒಂದೊಮ್ಮೆ ಎಸ್ಪಿ ಜತೆಗೋ, ಬಿಎಸ್ಪಿ ಜತೆಗೋ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾದರೂ ಅತಿ ಹೆಚ್ಚಿನ ಸ್ಥಾನಗಳನ್ನು ಅವೇ ಇಟ್ಟುಕೊಳ್ಳುತ್ತವೆ.
ಕಾಂಗ್ರೆಸ್ ಪಾಲಿಗೆ ತಮಿಳುನಾಡು ಸಹ ಬಹಳ ಪ್ರಮುಖವಾದದ್ದು. ಡಿಎಂಕೆ ಜತೆಗಿನ ಮೈತ್ರಿ ಅಲ್ಲಿ 26 ಸ್ಥಾನಗಳನ್ನು ಗೆದ್ದಿತ್ತು. (ಡಿಎಂಕೆ-18, ಕಾಂಗ್ರೆಸ್-8). ಜಯಲಲಿತಾ ವಿರೋಧಿ ಅಲೆ ಎಂಬುದು ಆ ರಾಜ್ಯದಲ್ಲಿ ಕಾಣುತ್ತಲೇ ಇಲ್ಲವಾದ್ದರಿಂದ ಹಾಗೂ 2ಜಿ ಹಗರಣ ಮತ್ತು ಶ್ರೀಲಂಕಾ ತಮಿಳರ ವಿಷಯಗಳು ಕಾಂಗ್ರೆಸ್-ಡಿಎಂಕೆ ಮೈತ್ರಿ ವಿರುದ್ಧ ಅಸಮಾಧಾನದ ಅಲೆಯನ್ನೇ ಹಬ್ಬಿಸಿರುವುದರಿಂದ ಅಲ್ಲಿಯೂ ಪ್ರತಿಕೂಲ ಪರಿಸ್ಥಿತಿಯೇ. ಎಲ್ಲ 39 ಸ್ಥಾನಗಳನ್ನೂ ಗೆಲ್ಲಬೇಕು ಎಂಬ ಜಯಲಲಿತಾ ಆಕ್ರಮಣಶೀಲತೆ ತಡೆಯಬೇಕೆಂದರೆ ಪವಾಡವೇ ಜರುಗಬೇಕು!
ಹೆಚ್ಚಿನ ಸಂಖ್ಯೆ ಹೊಂದಿರುವ ಕಾಂಗ್ರೆಸ್ಸೇತರ ರಾಜ್ಯಗಳಲ್ಲೂ, ಪಶ್ಚಿಮ ಬಂಗಾಳ (42ರಲ್ಲಿ 6), ಗುಜರಾತ್ (26ರಲ್ಲಿ 11) ಪರಿಸ್ಥಿತಿ ಬದಲಾಗುತ್ತದೆಯೇ? ಸಂಶಯವೇ. ಸ್ವಲ್ಪ ಹೊರತಾಗಿ ಕಾಣುವ ರಾಜ್ಯ ಎಂದರೆ ಬಿಹಾರ. 40 ಲೋಕಸಭೆ ಸ್ಥಾನಗಳಿರುವ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ 32ನ್ನು ಗೆದ್ದುಕೊಂಡಿತ್ತು. ಜೆಡಿಯು ಕಾಂಗ್ರೆಸ್ನ ಜತೆಗೂಡಿ ಈ ಸಾಧನೆಯನ್ನು ಪುನರಾವರ್ತಿಸುವುದೇ? ಗುರಿ ಸಾಧಿಸುವುದು ಅಷ್ಟು ಸುಲಭವೇನೂ ಅಲ್ಲ.
ನಾವೀಗ ಮತ್ತೆ ಮೊದಲಿನ ಪ್ರಶ್ನೆಗೆ ಮರಳುವುದಾದರೆ, ಕಾಂಗ್ರೆಸ್ಗೆ ಸಂಖ್ಯಾಬಲ ಬರುವುದಾದರೂ ಎಲ್ಲಿಂದ? ಕಾಂಗ್ರೆಸ್ ತೊಂದರೆಗೆ ಸಿಲುಕಿಕೊಂಡಾಗಲೆಲ್ಲ ದಕ್ಷಿಣದ ರಾಜ್ಯಗಳು ಕೈ ಹಿಡಿದಿದ್ದವು. ತುರ್ತು ಪರಿಸ್ಥಿತಿ ನಂತರದಲ್ಲೂ ಕಾಂಗ್ರೆಸ್ ಗಳಿಸಿಕೊಂಡ 150 ಸಂಸದರ ಪೈಕಿ 110 ಸಂಸದರು ದಕ್ಷಿಣದ ರಾಜ್ಯಗಳು ಹಾಗೂ ಮಹಾರಾಷ್ಟ್ರದಿಂದಲೇ ಬಂದವರಾಗಿದ್ದರು. 1980ರಲ್ಲಿ ಇಂದಿರಾ ಗಾಂಧಿ ಪುನಃ ಅಧಿಕಾರ ಹಿಡಿಯುವುದಕ್ಕೂ ಈ ರಾಜ್ಯಗಳ ಸಂಸದರ ಯೋಗದಾನ ಪ್ರಮುಖವಾಗಿತ್ತು. ಆದರೆ ಈಗ ಈ ರಾಜ್ಯಗಳು ಅಸಹಾಯಕವಾದಂತೆ ತೋರುತ್ತಿವೆ.
ನರಸಿಂಹರಾವ್ ಹಾಗೂ ಸೀತಾರಾಮ್ ಕೇಸರಿ ಮಧ್ಯಾಂತರ ಅವಧಿಯಲ್ಲಿ ಕಾಂಗ್ರೆಸ್ಗೆ ನಾಯಕತ್ವದ ಕೊರತೆ ಕಾಡಿತ್ತು.ಆದರೆ ಸೋನಿಯಾ ಯಶಸ್ಸು ಸಮಾಧಾನ ಹೇಳಿತ್ತು. ಈಗ ರಾಹುಲ್ ಗಾಂಧಿ ಇನ್ನೂ ಸಿದ್ಧವಾಗದವರಂತಿದ್ದಾರೆ. ಹೀಗಾಗಿ ಪಕ್ಷ ಯಾರನ್ನು ನಂಬಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ರಾಷ್ಟ್ರೀಯ ಪಕ್ಷವೊಂದನ್ನು ಕುಟುಂಬವೊಂದರ ವರ್ಚಸ್ಸಿಗೆ ಜೋತುಬೀಳುವಂತೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ತನ್ನನ್ನು ತಾನೇ ದೂರಿಕೊಳ್ಳಬೇಕು.ಕುಟುಂಬ ನಿಯಂತ್ರಿತ ಉದ್ಯಮಗಳು ಕಾಲದೊಂದಿಗೆ ಹೆಜ್ಜೆ ಹಾಕಲಾಗದೇ ಬಿದ್ದಿರುವುದನ್ನು ನೋಡಿದ್ದೇವೆ. ಅದು ಕುಟುಂಬಕೇಂದ್ರಿತ ಪಕ್ಷದ ವಿಷಯದಲ್ಲೂ ನಿಜವಾಗುತ್ತದೆ ಎಂಬುದನ್ನು ತಳ್ಳಿಹಾಕಲಾಗದು. ಬಹುಶಃ ಕಾಂಗ್ರೆಸ್ ಇತಿಹಾಸದ ದಯನೀಯ ಸೋಲೊಂದನ್ನು ನೋಡಲಿದೆ. ಮಣಿ ಶಂಕರ್ ಅಯ್ಯರ್ ಹೇಳಿದಂತೆ ಕಾಂಗ್ರೆಸ್ ಪ್ರತಿಪಕ್ಷದಲ್ಲಿ ಕೂರುವ ಕಾಲ ಬಂದಿದೆಯೇನೋ? ಈ ಅವಧಿಯಲ್ಲಿ ಪಕ್ಷ ಸಂಪೂರ್ಣ ಬದಲಾವಣೆಗೆ ತೆರೆದುಕೊಳ್ಳಬೇಕು. ಮನಮೋಹನ ಸಿಂಗ್ ಹಾಗೂ ತಾಂತ್ರಿಕ ಪಂಡಿತರೇ ತುಂಬಿಕೊಂಡಿರುವ ನೀತಿ ನಿರೂಪಣೆ ಜಾಗಕ್ಕೆ ಹೊಸಬರು ಬರುವಂತಾಗಬೇಕು. ಜನರ ಅಗತ್ಯಕ್ಕೆ ತಕ್ಕುದಾದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ದೃಷ್ಟಿಯನ್ನು ಕಾಂಗ್ರೆಸ್ ಪಡೆಯಬೇಕಿದೆ. ಬಹುಸಂಖ್ಯಾತರನ್ನು ಉಪೇಕ್ಷಿಸದೇ ಅರ್ಥವ್ಯವಸ್ಥೆ ಸುಧಾರಿಸುವ ದೃಷ್ಟಿಕೋನ ಅದಕ್ಕೆ ಲಭಿಸಬೇಕಿದೆ. ಆಮ್ ಆದ್ಮಿ ಯಶಸ್ಸಿನಿಂದ ಪಾಠ ಕಲಿಯುವಂತಾಗಿ ಹೊಸ ರಾಜಕೀಯ ಹುಟ್ಟುವಂತಾಗಲಿ. ಮುಖ್ಯವಾಗಿ ನಾಯಕತ್ವದಲ್ಲಿ ಬದಲಾವಣೆ ಗಾಳಿ ಬೀಸಿ, ಹೈಕಮಾಂಡ್ ಸಂಸ್ಕೃತಿ ಹೋಗಿ, ಅಧಿಕಾರದ ವಿಕೇಂದ್ರಿಕರಣ ಪಕ್ಷದ ನೆಲೆಯಲ್ಲಿ ಸಾಕಾರವಾಗುವಂತೆ ಆಗಬೇಕಿದೆ.
- ಜಿ. ಪ್ರಮೋದ್ ಕುಮಾರ್
ಫಸ್ಟ್ಪೋಸ್ಟ್ ಡಾಟ್ಕಾಮ್