ಅಸ್ತವ್ಯಸ್ತ ಕಾಂಗ್ರೆಸ್ನ ತುಂಬಾ ಅಸಮಾಧಾನದ ಹೊಗೆ
ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಬಹಳ...
ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಬಹಳ ಕೆಟ್ಟ ಅನುಭವವಾಗಿದೆ. ಆದರೆ ಅದಕ್ಕಿಂತಲೂ ಕೆಟ್ಟ ಸಮಯ ಅದಕ್ಕೆ ಮುಂದಿನ ದಿನಗಳಲ್ಲಿ ಎದುರಾಗಲಿದೆ. ತಾಯಿ-ಮಗನ ದರ್ಬಾರು ತನ್ನ ಚುನಾವಣಾ ರಂಗನ್ನು ಕಳೆದುಕೊಳ್ಳುತ್ತಿದೆ ಎನ್ನುವುದನ್ನು ಮನಗಂಡಿರುವ ಕೆಲವು ಕಾಂಗ್ರೆಸ್ಸಿಗರು ಮತ್ತು ಮಿತ್ರಪಕ್ಷಗಳು, ಹೈಕಮಾಂಡ್ ವಿರುದ್ಧ ಈಗ ತೋಳೇರಿಸಿ ನಿಂತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಬಂಡಾಯದ ಬಾವುಟ ಜೋರಾಗಿಯೇ ಹಾರುವ ಲಕ್ಷಣಗಳು ಕಾಣಿಸುತ್ತಿವೆ.
ವಿಧಾನಸಭಾ ಚುನಾವಣೆಗಳಲ್ಲಿನ ಸೋಲಿಗೆ ಭ್ರಮನಿರಸನಗೊಂಡಿರುವ ಕಾಂಗ್ರೆಸ್ಸಿಗರು ಈ ವಿದ್ಯಮಾನಕ್ಕೆ ಎರಡು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರಂತೂ ಆಘಾತದಿಂದಾಗಿ ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೆ ತಮ್ಮ ಭವಿಷ್ಯವನ್ನು ಹೇಗೆ ಭದ್ರಪಡಿಸಿಕೊಳ್ಳಬೇಕು ಎನ್ನುವುದಕ್ಕೆ ಅನ್ಯ ಹಾದಿಯನ್ನು ಹುಡುಕತೊಡಗಿದ್ದಾರೆ. ಕಾಂಗ್ರೆಸ್ನಲ್ಲಿನ ಕೆಲವರು ಆ ಪಕ್ಷದ ಸಿದ್ಧಾಂತಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಹಾಗಾಗಿ ಹೈಕಮಾಂಡ್ ಮಾಡುವ ಕೆಲಸಗಳನ್ನೆಲ್ಲ ಅವರು ಮೌನವಾಗಿ ಸಮ್ಮತಿಸುತ್ತಿದ್ದಾರೆ. ಆದರೆ ಇನ್ನೂ ಕೆಲವರು, ಹೋರಿಯನ್ನು ಕೋಡು ಹಿಡಿದೇ ಕೆಳಕ್ಕೆ ಬೀಳಿಸಬೇಕು ಎಂದು ನಿರ್ಧರಿಸಿ ಹೈಕಮಾಂಡ್ಗೆ ಬಹಿರಂಗವಾಗಿಯೇ ಸವಾಲು ಹಾಕುತ್ತಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ನ ಆರು ಲೋಕಸಭಾ ಸದಸ್ಯರು ತಮ್ಮ ಸರ್ಕಾರದ ವಿರುದ್ಧವೇ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ಆಂಧ್ರ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಜೆ.ಸಿ. ದಿವಾಕರ ರೆಡ್ಡಿ, ತಮ್ಮ ರಾಜ್ಯದಲ್ಲಿ ಕಾಂಗ್ರೆಸ್ "ಸತ್ತುಹೋಗಿದೆ" ಎಂದು ಹೇಳಿದ್ದಷ್ಟೇ ಅಲ್ಲದೆ, ಸೋನಿಯಾ ಗಾಂಧಿಯವರು ನಾಯಕತ್ವದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ನೇರವಾಗಿ ಮಾತನಾಡುವ ಗುಣವಿರುವ ಮಣಿಶಂಕರ ಅಯ್ಯರ್, 2014ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಹೇಳಿದ್ದಾರೆ. ಶರದ್ ಪವಾರ್ ಕೂಡ ಆಗಾಗ ಮುಸುಕುಹಾಕಿಕೊಂಡು ತಮ್ಮ ನಾಯಕರ ಮೇಲೆ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಕೇರಳ ಕಾಂಗ್ರೆಸ್(ಎಮ್)ನ ನಾಯಕ ಮತ್ತು ಆ ರಾಜ್ಯದ ವಿತ್ತ ಸಚಿವರೂ ಆಗಿರುವ ಕೆ.ಎಮ್.ಮಣಿ ಈ ಕುರಿತು ಮಾತನಾಡುತ್ತಾ, "ಇತ್ತೀಚಿನ ವಿಧಾನಸಭಾ ಚುನಾವಣೆಗಳು ಎಲ್ಲರ ಕಣ್ಣು ತೆರೆಸಿವೆ. ಈಗಲಾದರೂ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ" ಎಂದು ಹೇಳುತ್ತಾರೆ. ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ನಾಯಕ ಇ.ಟಿ. ಮೊಹಮ್ಮದ್ ಬಷೀರ್, "ಕಾಂಗ್ರೆಸ್ ಈಗಲಾದರೂ ಪಾಠ ಕಲಿಯದಿದ್ದರೆ, ಮುಂದೆ ಕಷ್ಟ ಎದುರಿಸಲಿದೆ" ಎನ್ನುತ್ತಾರೆ.
ನಿಜ ಹೇಳಬೇಕೆಂದರೆ ಅದಾಗಲೇ ಬಂಡಾಯದ ಬೆಂಕಿ ಕಾಂಗ್ರೆಸ್ನಲ್ಲಿ ಮೆಲ್ಲಗೆ ಹರಡುತ್ತಿದೆ. ಮುಂಬರುವ ವರ್ಷಗಳಲ್ಲಿ ಪಕ್ಷದ ನಾಯಕತ್ವವವನ್ನು ಮತ್ತು ಪಕ್ಷವನ್ನು ಅದು ನುಂಗಿ ಹಾಕಿತೆಂದರೆ ಆಶ್ಚರ್ಯಪಡಬೇಕಿಲ್ಲ. ಇದೆಲ್ಲ ಒತ್ತಟ್ಟಿಗಿರಲಿ, ಈ ಬಿಕ್ಕಟ್ಟಿಗೆ ಹೈಕಮಾಂಡ್ ಪ್ರತಿಕ್ರಿಯೆ ಯಾವ ರೀತಿಯಲ್ಲಿದೆ ಎನ್ನುವುದನ್ನು ನೋಡೋಣ..
ಹೈಕಮಾಂಡ್(ಇಲ್ಲಿ ಸೋನಿಯಾ ಮತ್ತು ರಾಹುಲ್ರ ವಿಷಯ ಮಾತನಾಡುತ್ತಿದ್ದೇನೆ) ಅಪರೂಪಕ್ಕೆನ್ನುವಂತೆ ಜೊತೆಯಾಗಿ ಮಾಧ್ಯಮಗಳ ಮುಂದೆ ಬಂದು ತುಸು ಹೊತ್ತು ಈ ಸೋಲಿನ ಬಗ್ಗೆ ಮಾತನಾಡಿದೆ.
ಆದರೆ ಸೋನಿಯಾ ಮತ್ತು ರಾಹುಲ್ರ ಮಾತನ್ನು ಕೇಳಿದವರೆಲ್ಲ, "ಕಾಂಗ್ರೆಸ್ ಅನ್ನು ನಡೆಸುತ್ತಿರುವುದು ಯಾರು?" ಎನ್ನುವ ಗೊಂದಲಕ್ಕೆ ಬಿದ್ದರು! ಪಕ್ಷದಲ್ಲಿ ಕೊಳೆತು ನಾರುತ್ತಿರುವ ಸಂಗತಿಗಳಿಂದ ತಮ್ಮನ್ನು ಆದಷ್ಟು ದೂರವಿಟ್ಟುಕೊಂಡು ಮಾತನಾಡಿದ ಈ ಜೋಡಿ, ಕೂಡಲೇ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಹೇಳಿತು.
ಒಂದು ವಿಷಯ ಗಮನಿಸಿ. ಮೇ 1999ರಂದು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರನ್ನು ಅಚಾನಕ್ಕಾಗಿ ಕಿತ್ತೆಸೆದ ನಂತರದಿಂದ ಪಕ್ಷವನ್ನು ಯಾರು ನಿಯಂತ್ರಿಸುತ್ತಿದ್ದಾರೆ? 2004ರ ಚುನಾವಣೆಗಳಲ್ಲಿ ಎನ್ಡಿಎ ಒಕ್ಕೂಟ ಸೋತು ಅಧಿಕಾರದಿಂದ ಕೆಳಕ್ಕಿಳಿದ ನಂತರ ಸರ್ಕಾರವನ್ನು ಮುನ್ನಡೆಸುತ್ತಿರುವವರು ಯಾರು? ನಿಸ್ಸಂಶಯವಾಗಿಯೂ ಮನಮೋಹನ್ ಸಿಂಗ್ ಅವರಂತೂ ಅಲ್ಲ ಬಿಡಿ. ಅವರು ಹೆಸರಿಗಷ್ಟೇ ಪ್ರಧಾನಿಯೇ ಹೊರತು, ಆ ಹುದ್ದೆಗಿರುವ ಯಾವ ಅಧಿಕಾರವೂ ಅವರ ಹಿಡಿತದಲ್ಲಿಲ್ಲ.
ಸೋನಿಯಾ- ರಾಹುಲ್ ಜೋಡಿ ಮತ್ತು ಅವರಿಗೆ ನಿಷ್ಠವಾಗಿರುವ ರಾಷ್ಟ್ರೀಯ ಸಲಹಾಸಮಿತಿ (ಎನ್ಎಸ್ಸಿ) ಸರ್ಕಾರದ ಅಜೆಂಡಾವನ್ನು ನಿರ್ಧರಿಸುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮೇಲಿನವರ ಆಣತಿಯಂತೆ ಜನರ ಮೇಲೆ ತೆರಿಗೆ ಹೇರುವುದು, ಹಣ ಒಗ್ಗೂಡಿಸುವುದು ಮತ್ತು ಖರ್ಚುಮಾಡುವುದಷ್ಟೇ ಕೇಂದ್ರ ಕ್ಯಾಬಿನೆಟ್ನ ಕೆಲಸ. ಆದರೆ ಈ ರಚನೆ ಮಕಾಡೆ ಮಲಗಿದ್ದಕ್ಕೂ ಕಾರಣವಿದೆ. ಈ ಸಚಿವರ್ಯಾರೂ ಸಂಸತ್ತಿಗೆ ಅಥವಾ ಪ್ರಧಾನಿಗಳಿಗೆ ಉತ್ತರದಾಯಿಯಾಗಿಲ್ಲ. ಹೈಕಮಾಂಡ್ಗೆ ಜೀ ಹಜೂರ್ ಎಂದರೆ ಸಾಕು ಇವರೆಲ್ಲ ಆರಾಮಾಗಿ ಬದುಕುತ್ತಾರೆ.
ನಮ್ಮ ಸಂಸತ್ ವ್ಯವಸ್ಥೆಯ ಕಿಂಗ್ಪಿನ್ ಎನ್ನಿಸಿಕೊಳ್ಳುವ ಪ್ರಧಾನಿಗಳು ಈ ಆಟದಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಅವರಿಗೆ ಯಾರನ್ನಾದರೂ ನೇಮಿಸುವುದಕ್ಕೆ, ಕಿತ್ತುಹಾಕುವುದಕ್ಕೆ ಸಾಧ್ಯವೇ ಇಲ್ಲ. ಕೇಂದ್ರದಲ್ಲಿ ಒಂದು ಗಟ್ಟಿ ಸರ್ಕಾರವೇ ಇಲ್ಲ. ಒಬ್ಬೊಬ್ಬ ಮಂತ್ರಿಯೂ ತನ್ನದೇ ಸರ್ಕಾರ ರಚಿಸಿಬಿಟ್ಟಿದ್ದಾನೆ. ಇದರಿಂದಾಗಿಯೇ ಮಂತ್ರಿಗಳ ನಡುವೆ ಹೊಂದಾಣಿಕೆಯಿಲ್ಲ. ಬಹುತೇಕ ಬಾರಿ ಇವರೆಲ್ಲ ಪರಸ್ಪರ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ. ಅಂದರೆ, ಸರ್ಕಾರದ ಒಳಗೆ ದಿನವೂ ಕಲಹಗಳು ನಡೆಯುತ್ತಲೇ ಇರುತ್ತವೆ. ಇದೆಲ್ಲದರಿಂದಾಗಿ ನೀತಿ ನಿರೂಪಣೆ ಬೆನ್ನು ಮುರಿದುಕೊಂಡು ಬಿದ್ದರೆ, ಆಡಳಿತ ನೆಲ ಕಚ್ಚಿದೆ.
ಹೀಗಾಗೇ ವಿದ್ಯುತ್ ಸಚಿವರು ಪ್ರಸ್ತಾಪಿಸಿದ ಅಥವಾ ಅನುಷ್ಠಾನಕ್ಕೆ ತರಲು ಮುಂದಾದ ಯೋಜನೆಗಳಿಗೆ ಪರಿಸರ ಸಚಿವರು ಅಡ್ಡಗಾಲು ಹಾಕುತ್ತಾರೆ. ಗೃಹ ಸಚಿವಾಲಯ ಉಗ್ರವಾದದ ವಿರುದ್ಧ ಎದ್ದು ನಿಂತರೆ ಅದರ ಭುಜ ಒತ್ತಿ ಕೆಳಕ್ಕೆ ಕೂಡಿಸುತ್ತಾರೆ ದಿಗ್ವಿಜಯ್ ಸಿಂಗ್ರಂಥವರು. ದಿಗ್ವಿಜಯ್ ಸಿಂಗ್ ಅವರಂತೂ ಪ್ರತಿಬಾರಿಯೂ ಉಗ್ರವಾದದ ಆರೋಪ ಹೊತ್ತವರ ಪರವಾಗಿಯೇ ನಿಂತು ಭದ್ರತಾ ಸಂಸ್ಥೆಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಾರೆ! ಇಂಥ ಉದಾಹರಣೆಗಳು ಕಳೆದ ಹತ್ತು ವರ್ಷದ ಯುಪಿಎ ಆಡಳಿತದಲ್ಲಿ ದಂಡಿಯಾಗಿ ಸಿಗುತ್ತವೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳ ಫಲಿತಾಂಶ, ಸೋನಿಯಾಗಾಂಧಿ ನೇತೃತ್ವದ ಅರ್ಥಹೀನ ಆರ್ಥಿಕ ಪ್ಯಾಕೆಜ್ಗಳ ವೈಫಲ್ಯದ ಪರಿಣಾಮವೆನ್ನುವುದು ಕಾಂಗ್ರೆಸ್ಗೂ ಗೊತ್ತು.
ಕಾಂಗ್ರೆಸ್ಸಿಗರು ಮತ್ತು ಸ್ವಯಂಘೋಷಿತ ಜಾತ್ಯತೀತರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಎಷ್ಟು ಜರಿದರೂ ಕೂಡ, ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರು ಅವುಗಳ ಮಾತನ್ನು ಕಡೆಗಣಿಸಿದ್ದಾರೆ.
ಅಷ್ಟೇ ಅಲ್ಲ ಕಾಂಗ್ರೆಸ್ನ ಆಪ್ತ ಪಕ್ಷಗಳು ಎಂದು ಕರೆಸಿಕೊಳ್ಳುವ ಎಸ್ಪಿ ಮತ್ತು ಬಿಎಸ್ಪಿಗೂ ಕೂಡ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸತೊಡಗಿವೆ!
- ಬಲಬೀರ್ ಪುಂಜ್