ಕತ್ತಲ ರಾತ್ರಿಯಲ್ಲಾ
ಇದು ನಕ್ಷತ್ರ ಜಾತ್ರೆ
ನಾಳೆಗೆ ಖಾತ್ರಿಯಿಲ್ಲ
ನಕ್ಕಿಹುದು ಮಧುಪಾತ್ರೆ...
'ಓಹ್.. ಈ ರಾತ್ರಿ ಹೀಗೆ ಚಳಿಗಾಳಿಗೆ ಮೈಚೆಲ್ಲಿ ಟೆರೇಸ್‌ನಲ್ಲಿ ಕುಳಿತಿರುವುದೇ ಒಂದು ಹುಚ್ಚು. ಜತೆಗೆ ಈ ದ್ರಾಕ್ಷಾರಸವೂ ಇರಲಾಗಿ, ಮೇಲಿಂದ ನೀನು ಕವಿತೆಯನ್ನೂ ತೂರಿಬಿಟ್ಟರೆ ಮೈಹತ್ತುವ ಉನ್ಮಾದಕ್ಕೆ ಹೆಸರಿಡುವುದೇ ಕಷ್ಟವಾಗುತ್ತಲ್ಲ ಮಾರಾಯ್ತಿ...' ಈತ ಸುಮ್ಮನೇ ಎಂಬಂತೆ ಹೇಳಿದ ಮಾತಿನ ಅಂತರಾಳದಲ್ಲಿ ಆಕ್ಷೇಪಣೆಯೇನೂ ಇರಲಿಲ್ಲ.
'ಇರ್ಲಿ, ಇನ್ನೇನು ಕೆಲವೇ ದಿನ. ಎರಡು ಸಾವಿರದ ಹದಿಮೂರು ಮುಗಿದೇ ಹೋಗುತ್ತೆ. ಈ ಸಂತೋಷ, ವಿಷಾದ, ಆಗೀಗಿನ ನೀರವಗಳನ್ನೆಲ್ಲ ಬರಲಿರುವ 2014ಕ್ಕೆ ಸ್ವಾಗತವೆಂದೋ, ಕಳಚಿಕೊಳ್ಳಲಿರುವ ಈ ವರ್ಷದ ಕ್ಯಾಲೆಂಡರಿಗೆ ಬೀಳ್ಕೊಡುಗೆ ಎಂದೋ ಅಂದುಕೊಂಡರಾಯಿತು.' ಆಗಸದ ಪಾತಾಳಗಳಲ್ಲೆಲ್ಲೋ ದೃಷ್ಟಿಯ ಗಾಳ ಹಾಕುತ್ತ ಅವಳೆಂದಳು.
'ಇದಪ್ಪಾ ಫಿಲಾಸಫಿ. ನಮಗೆ ಎಲ್ಲವಕ್ಕೂ ಒಂದು ನೆಪ ಸಿಗುತ್ತೆ ಅಥವಾ ಹುಡುಕಿಕೊಳ್ಳುತ್ತೀವಿ. ಗುಂಡು ಹಾಕೋಕೆ, ಕಾಲಹರಣದ ಹರಟೆಗೆ, ಸುಮ್ಮನೇ ಕುಕ್ಕರಿಸಿಕೊಂಡಿರೋಕೆ ಎಲ್ಲವಕ್ಕೂ...'
'ನೆಪಗಳು ಬೇಕು ಗೆಳೆಯಾ... ನೆಪಗಳನ್ನು ಹುಡುಕಿಕೊಳ್ಳದಿದ್ದರೆ ಬದುಕಲ್ಲಿ ಹೊಸತು ಸಿಕ್ಕುವುದಾದರೂ ಹೇಗೆ? ನೆಪವಿಲ್ಲದಿದ್ದರೆ ಹೀಗೆ ಆಕಾಶ ನೋಡುವುದಕ್ಕೂ ಪುರಸೊತ್ತು ಸಿಗುವುದಿಲ್ಲ. ಹಾಗೆ ನೋಡಿದರೆ ನಮ್ಮ ಎಲ್ಲ ಸಂಭ್ರಮಗಳಿಗೂ ಪೊಳ್ಳುನೆಪಗಳೇ ಆಶ್ರಯ. ಅದಿಲ್ಲದಿದ್ದರೆ ಹೊಸವರ್ಷಕ್ಕೆ, ಹುಟ್ಟಿದದಿನಕ್ಕೆ ಸಡಗರಗೊಳ್ಳುವುದೇ ಅಭಾಸವಾಗಿಬಿಡುತ್ತದೆ. ವರ್ಷ ಜಾರುವುದೆಂದರೆ, ಆಯಸ್ಸು ತುಂಬೋದು ಎಂದರೆ ಅಷ್ಟರಮಟ್ಟಿಗೆ ನಾವೆಲ್ಲ ನಮ್ಮ ಅಂತ್ಯಗಳಿಗೆ ಸಮೀಪವಾಗುವುದಲ್ಲವೇ? ದಿಗಿಲು ಪಡಬೇಕಾದ ವಿಷಯ. ಆ ಭಯ ನಮ್ಮ ಅರಿವಿಗೆ ಬಾರದಂತೆ ಅಂಥ ಲೆಕ್ಕಗಳನ್ನು ದಾಟುವುದಕ್ಕೆಂದೇ ಆಚರಣೆಗಳಿಗೆ ಅಂಟಿಕೊಂಡಿದ್ದೇವೆ ಅಂತ ನನಗನ್ಸುತ್ತೆ.'
'ಡೆತ್ ಈಸ್ ನಾಟ್ ಆ್ಯನ್ ಎಂಡ್. ಇಟ್ಸ್ ಅ ಬಿಗಿನಿಂಗ್...'
'ಸುಡುಗಾಡು. ಈ ರಾತ್ರಿ ಒಣ ಫಿಲಾಸಫಿಗಳಿಗೆ ಜಾಗವಿಲ್ಲ. ತೀರಾ ಬಾಲಿಶವೆನಿಸದ ಭಾವುಕತನವೇನಾದರೂ ಇದ್ದರೆ ಹೊರಹಾಕು. ಇಲ್ಲದಿದ್ದರೆ ಬಾಯ್ಮುಚ್ಚಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಾಕೋಣ. ಈ ಫಿಲ್ಮು, ಕಾದಂಬರಿಗಳಲ್ಲಿ ಕಲ್ಪನೆಯೊಂದನ್ನು ಕಟ್ಟಿಕೊಡ್ತಾರಲ್ಲ. ಹೀರೋ- ಹೀರೋಯಿನ್ ನಮ್ಮ ಹಾಗೆ ಹತ್ತಿರ ಹತ್ತಿರ ಕುಳಿತು 'ಅದೋ ಅಲ್ಲಿ ಮಿನುಗ್ತಿರೋ ತಾರೆ ನನ್ನಮ್ಮ, ಪಕ್ಕದ್ದು ನನ್ನಪ್ಪ' ಅಂತ ಹೇಳೋದು ಎಷ್ಟು ಹಿತವಾಗಿರುತ್ತೆ! ನಾಯಕ-ನಾಯಕಿ ಪ್ರೇಮದ ಮೂಡಿನಲ್ಲಿದ್ದಾರೆ ಎಂಬ ಸಂಗತಿಗಿಂತ ನಮ್ಮನ್ನು ಅಗಲಿದವರು, ತಮ್ಮ ಕಾಲವನ್ನು ಮುಗಿಸಿದವರು ಅಂತರಿಕ್ಷದಂಗಳದಲ್ಲಿ ಯಾವುದೋ ರೂಪದಲ್ಲಿದ್ದಾರೆ ಎಂಬ ಕಲ್ಪನೆ ಕೊಡುವ ಪುಳಕವೇ ಅನನ್ಯ..'
'ಹೌದ್ಹೌದು. ನಾನೂ ಅಷ್ಟೊತ್ತಿನಿಂದ, ಸಿನಿಮಾಗಳಲ್ಲಿ ತೋರಿಸುವಂತೆ ಆಕಾಶದಂಚಿನಲ್ಲಿ ನಕ್ಷತ್ರವೇನಾದರೂ ಜಾರಿದ್ದು ಕಂಡರೆ 'ಮೇಕ್ ಅ ವಿಶ್.. ಏನಾದ್ರೂ ಕೇಳ್ಕೊ' ಅಂತ ರೋಮ್ಯಾಂಟಿಕ್ ವರಸೆ ತೆಗೆಯುವ ಆಸೇಲಿದೀನಿ.'
'ಇದೊಳ್ಳೆ ತಮಾಷೆ. ನಕ್ಷತ್ರವೋ ಇನ್ನೆಂಥದೋ ಮಿನುಗುಕಾಯವೋ ತನ್ನನ್ನು ತಾನು ಸಂಭಾಳಿಸಿಕೊಳ್ಳೋಕಾಗ್ದೇ ಬೀಳುತ್ತೆ ಅಂತಾದ್ರೆ, ಅದು ನಮ್ಮ ಆಸೆ ಪೂರೈಸೋದೇನು ಬಂತು ಬದನೆಕಾಯಿ?'
'ಅಯ್ಯೋ ಹಂಗನ್ಬೇಡ ಮಾರಾಯ್ತಿ. ಅದು ತುಂಬ ಸೈಂಟಿಫಿಕ್ ವಿಶ್ ಅನ್ನಿಸಿಕೊಳ್ಳುತ್ತೆ, ನಾನು ಓದಿರೋ ಪ್ರಕಾರ..'
'ಹೀಗೂ ಉಂಟೇ? ಸರಿ, ತೀರ ಕೊರೆಯದೇ ಇರೋದು ಸಾಧ್ಯ ಅಂತಾದ್ರೆ ತಾವು ತಿಳಿದುಕೊಂಡಿದ್ದನ್ನು ಕಥಾಕಾಲಕ್ಷೇಪವಾಗಿ ಪ್ರಸ್ತುತಪಡಿಸಬಹುದಾಗಿ ಬಿನ್ನಹ. ಕೇಳ್ತಾ ಹಂಗೇ ಈ ರಾತ್ರಿ ಜಾರಿ ಹೋಗ್ಬೇಕು...'
ಈತ ನಾಟಕೀಯವಾಗಿ ಗಂಟಲು ಕೆರಸಿ ಸರಿಪಡಿಸಿಕೊಂಡ. 'ಒಂದೇ ವಾಕ್ಯದಲ್ಲಿ ಉತ್ತರಿಸಬೇಕೆಂದರೆ ನಕ್ಷತ್ರಗಳ ಸಾವಿನ ಸಮಾಧಿಯ ಮೇಲೆ ನಮ್ಮ ಬದುಕು ಅರಳಿ ನಿಂತಿದೆ...'
'ಇಂಟರೆಸ್ಟಿಂಗ್. ಸಂದರ್ಭ ಸಹಿತ ವಿವರಿಸಿ.'
'ಹೆಚ್ಚುವರಿ ಪುರವಣಿಗಳು ಬೇಕಾಗಬಹುದು.'
'ಕೊನೆಯಲ್ಲಿ ಚಿಕ್ಕದಾಗಿ- ಚೊಕ್ಕದಾಗಿ ಸಾರಾಂಶ ಹೇಳುವುದಾದರೆ ಸಮಯ, ಪುರವಣಿ, ಪೊಣಿಸುವ ದಾರ ಎಲ್ಲವೂ ಲಭ್ಯ. ಶುರು ಹಚ್ಚಿಕೊಳ್ಳಬಹುದು.'
'ಶ್ರೀ ಗಣೇಶಾಯ ನಮಃ. ಪ್ರಪ್ರಥಮವಾಗಿ, ಎಲೈ ಬಾಲೆ! ಹೊಸವರ್ಷದ ಹೊಸ್ತಿಲಲ್ಲಿ ನೀನು ಮುಗಿಯುತ್ತಿರುವ ನಿನ್ನ ಕಾಲದ ಬಗ್ಗೆ ಯೋಚಿಸಬೇಕಿಲ್ಲ. ಬಹಳ ಮೊದಲೇ ಹೇಳಿದ್ದನ್ನು ರಿಪೀಟ್ ಹೊಡೆಯುವುದಾದರೆ- ನಿನ್ನದೆನ್ನುವುದು ಏನೂ ಇಲ್ಲ. ನೀನೇನನ್ನು ಪಡೆದಿರುವೆಯೋ ಅದು ನನ್ನಿಂದಲೇ ಹಾಗೂ ಅದು ಬಂದು ಸೇರುವುದು ನನಗೇ...'
'ಬುಲ್‌ಷಿಟ್ ಅರ್ಥಾತ್ ಎತ್ತಿನ ಸಗಣಿ. ನಾಟ್ ಕನ್‌ವಿನ್ಸ್‌ಡ್.'
'ಎಲ್ಲ ಬಗೆಯ ಸಗಣಿಗೂ ಗೊಬ್ಬರವಾಗುವ ಯೋಗ್ಯತೆ ಇದೆ. ಅದಿರಲಿ. ಟೇಕ್ ದಿಸ್. ಶಕ್ತಿಯನ್ನು ಸೃಷ್ಟಿಸುವುದೂ ಸಾಧ್ಯವಿಲ್ಲ, ನಷ್ಟವಾಗುವುದೂ ಇಲ್ಲ. ಕೇವಲ ರೂಪಾಂತರ ಸಾಧ್ಯವಷ್ಟೆ.'
'ವಿಜ್ಞಾನ ಓದುವಾಗ ಉರು ಹೊಡೆದಿದ್ದು. ಇರಬಹುದು. ಇಷ್ಟಕ್ಕೂ ನೀನು ಹೇಳೋಕಿರೋದು ಏನನ್ನ?'
'ಹೇಳಬೇಕಾಗಿರೋದು ಬದುಕಿನ ಬೆರಗನ್ನು. ಫ್ಯಾಂಟಸಿಯಾಗಿ ಕಾಣುತ್ತಿರುವ ವಾಸ್ತವವನ್ನು. ವಿಶ್ವವೆಂಬ ಅಚ್ಚರಿಯ ವಿಶಾಲ ಹರವನ್ನು. ಅಲ್ಲಿ ಮಿನುಗುವ ನಕ್ಷತ್ರವನ್ನು ನೋಡಿ ಬೆರಗಾಗುತ್ತೇವಲ್ಲ, ಹಾಗೆ ಮಿನು ಮಿನುಗಿ ಹೊತ್ತುರಿದು ಢಮ್ಮೆಂದ ದೈತ್ಯ ನಕ್ಷತ್ರವೊಂದರ ಧೂಳಿನಿಂದ ಈ ಭೂಮಿ, ಈ ಹಸಿರು, ಈ ಜೀವಗಳೆಲ್ಲವೂ ಬೆಳಗಿದವು. ಖಗೋಳಕ್ಕೆ ಕಣ್ಣು ನೆಟ್ಟವರು ಗಟ್ಟಿ ಧ್ವನಿಯಲ್ಲಿ ಹೀಗೆಲ್ಲ ಹೇಳುತ್ತಿರುವುದಕ್ಕೆ ಮಜಬೂತು ಕಾರಣಗಳನ್ನೇ ಕೊಡುತ್ತಾರೆ. ಜೀವ ವ್ಯವಸ್ಥೆಯೊಂದರ ಇರುವಿಕೆಗೆ ಒಂದಿಷ್ಟು ರಾಸಾಯನಿಕ ಪದಾರ್ಥಗಳೆಲ್ಲ ಕಾರಣವಾಗಿವೆಯಲ್ಲ. ಈ ಹೈಡ್ರೋಜನ್, ನೈಟ್ರೋಜನ್, ಕಾರ್ಬನ್‌ಗಳೆಲ್ಲ ದೈತ್ಯ ನಕ್ಷತ್ರವೊಂದು ಸಿಡಿದು ಚೂರಾಗುವ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡಂಥವು. ಇವು ಪೃಥ್ವಿಯಲ್ಲಿವೆ, ನಮ್ಮ ದೇಹದಲ್ಲಿವೆ. ನೀರಿನಲ್ಲಿರುವ, ದೇಹದಲ್ಲಿರುವ, ಭೂಮಿಯ ಇನ್ನಿತರ ಕಡೆಗಳಲ್ಲಿರುವ ಜಲಜನಕದ ಅಣು ರಚನೆಯಾಗಿದ್ದು ನಕ್ಷತ್ರವೊಂದರ ಸಾವಿನಲ್ಲಿ. ಜಲಜನಕ ಮತ್ತು ಫ್ರೀ ನ್ಯೂಟ್ರಾನ್‌ಗಳ ಬೆರಕೆಯಲ್ಲಿ ಹೀಲಿಯಂ ರಚನೆಯಾಯಿತು. ಇವೆರಡನ್ನೇ ಆಧಾರವಾಗಿಟ್ಟುಕೊಂಡು ನಂತರ ಮುಂದುವರಿದ ಸಂಘರ್ಷದಲ್ಲಿ ಹೆಚ್ಚು-ಕಡಿಮೆ ಎಲ್ಲ ರಾಸಾಯನಿಕಗಳೂ ಹುಟ್ಟಿದವು. ನಮ್ಮ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಸತ್ತ ದೈತ್ಯ ಕೆಂಪು ನಕ್ಷತ್ರವೊಂದರ ಕೊಡುಗೆ ಇವೆಲ್ಲ. ಅದರ ಆಂತರ್ಯವೇ ನಮ್ಮೊಳಗೆ ಆಡಿಕೊಂಡಿದೆ. ಸತ್ತವರು ನಕ್ಷತ್ರವಾಗಿದ್ದಾರೋ ಗೊತ್ತಿಲ್ಲವಾಗಲೀ ನಕ್ಷತ್ರಗಳಲ್ಲಿ ನಮ್ಮ ವಂಶಮೂಲವನ್ನು ಬೆದಕುವುದು ಬರಿಯ ಕಲ್ಪನೆಯೇನೂ ಆಗದು. ಇನ್ನೆಷ್ಟೋ ಬಿಲಿಯ ವರ್ಷಗಳಲ್ಲಿ ಉರಿದು ಸಾಯಲಿರುವ ನಮ್ಮ ಸೂರ್ಯ ಆ ಲೆಕ್ಕದಲ್ಲಿ ತುಂಬ ಚಿಕ್ಕವನು. ಹೀಗಾಗಿ ಸಾಯುತ್ತ ಆತ ತನ್ನೊಳಗಿನ ಇಂಗಾಲವನ್ನು ಗ್ಯಾಲೆಕ್ಸಿಗೆ ಮರುಚೆಲ್ಲಿ ಅಂತರ್ಧಾನನಾಗುತ್ತಾನೆ. ಮತ್ತೆಷ್ಟೋ ಬಿಲಿಯ ವರ್ಷಗಳಲ್ಲಿ ಮರು ರೂಪಗೊಳ್ಳಬಹುದಾದ ಗ್ರಹವ್ಯವಸ್ಥೆಗೆ ಮುಹೂರ್ತವಿಟ್ಟು...
ಈ ವಿಶ್ವಕ್ಕೆ ಅಜಮಾಸು 13 ಬಿಲಿಯನ್ ವರ್ಷಗಳ ಪ್ರಾಯವಂತೆ. ವಿಶ್ವವನ್ನು ಕಟ್ಟಿದ ಇಟ್ಟಿಗೆಗಳೇ ನಮ್ಮನ್ನೂ ಕಟ್ಟಿವೆ. ಅಲ್ಲಿರುವುದೇ ಇಲ್ಲಿದೆ. ಈ ಅರ್ಥದಲ್ಲಿ ನಮ್ಮ ದೇಹದ ವಯಸ್ಸು 13 ಬಿಲಿಯನ್ ವರ್ಷಗಳು. ನಾಳೆ ನಾನು- ನೀನು ಈ ರೂಪ ಕಳಚಿಕೊಂಡಾಗ ಅರ್ಥಾತ್ ನೆಗೆದುಬಿದ್ದಾಗ, ದೊಡ್ಡಮನುಷ್ಯರ ವಿಷಯದಲ್ಲಾದಂತೆ ಯಾವ ಪತ್ರಿಕೆಗಳೂ ನಾವು 'ಪಂಚಭೂತಗಳಲ್ಲಿ ಲೀನ' ಅಂತ ಹೆಡ್ಡಿಂಗ್ ಕೊಡದಿದ್ದರೂ ನಮ್ಮೊಳಗಿನ ಕಾರ್ಬನ್, ಕ್ಯಾಲ್ಶಿಯಂ ಸಕಲ ಸಾವಿರದೆಂಟೂ ವಿಶ್ವಸೆರಗಿನ ಧೂಳಲ್ಲೇ ಲೀನ. ಅವನ್ನೇ ಬಳಸಿಕೊಂಡು ಇನ್ಯಾವುದೋ ಸೃಷ್ಟಿಯಾಗುತ್ತದೆ. ಹೀಗೆ ಟೆರೇಸ್‌ನಲ್ಲಿ ನಿನ್ನೊಂದಿಗೆ ಕುಳಿತಾಗಲೆಲ್ಲ ನಕ್ಷತ್ರ ಬಾಚುವ ಉಮೇದಾಗುತ್ತೆ. ಮಜ ಏನಂದ್ರೆ ನಾವೇ ನಕ್ಷತ್ರಗಳು! ತಾರೇ ಜಮೀನ್ ಪರ್..'
ಆಕೆ ಈ ಎಲ್ಲ ಪದಗಳ ಅರ್ಥಗಳಲ್ಲಿ ಜೀಕುತ್ತಲೇ ಎಚ್ಚರ ಬಂದವಳಂತೆ ಹೇಳಿದಳು. 'ಓಹ್! ಲಾಸ್ಟ್ ಟೆನ್ ಮಿನಿಟ್ಸ್. ಟೈ ಯುವರ್ ಸಪ್ಲಿಮೆಂಟ್..'
'ವಿಶ್ವದ ಅಗಾಧತೆ ಎದುರು ನಾವು ತೃಣಸಮಾನರು, ನಮ್ಮ ಕಾಲ ತುಂಬ ಅಲ್ಪ ಎಂದೆಲ್ಲ ಅಂದುಕೊಳ್ಳುತ್ತೇವೆ. ಇನ್ನೊಂದು ನಿಜವೇನೆಂದರೆ ಅಗಾಧ ವಿಶ್ವದ ಮಿನಿಯೇಚರ್ ಒಂದು ನಮ್ಮೆಲ್ಲರೊಳಗಿದೆ. ಯಾವ ಪ್ರೊಟಾನ್ ಮತ್ತು ನ್ಯೂಟ್ರಾನ್‌ಗಳ ಗಿರಿಗಿಟ್ಲೆ ಈ ವಿಶ್ವಕ್ಕೊಂದು ಆಯಾಮವನ್ನು ಕೊಟ್ಟಿದೆಯೋ ಅದೇ ಪ್ರಕ್ರಿಯೆ ನಮ್ಮನ್ನೂ ಹಿಡಿದಿಟ್ಟಿದೆ. ಹೊರಗೆ ಕಾಣುವ ಸ್ಪೇಸ್ ಮತ್ತು ಟೈಮ್ ನಮ್ಮೊಳಗಿನ ವಿಶ್ವದಲ್ಲೂ ಇದ್ದಿರಲೇಬೇಕು. ನಮ್ಮೊಳಗಿನ ನಿಹಾರಿಕೆಗಳಲ್ಲಿ, ವಿಶ್ವಪ್ರಜ್ಞೆಯಲ್ಲಿ ಜೀಕುವ ಬಗೆ ಹೇಗೆ? ಆಕಾಶ ನೋಡುತ್ತ ಹಾಗೆಯೇ ಕಣ್ಣುಮುಚ್ಚಿ ಒಳಗಿನ ಆಗಸವನ್ನು ತೆರೆಯುವುದಕ್ಕೆ ಬೇಕಿರುವ ಮೌನ ಎಂಥಾದ್ದು, ಧ್ಯಾನ ಎಂಥಾದ್ದು? ವಿಶ್ವದಲ್ಲಿ ಬೆಳಕಿದೆ. ಅದರದ್ದೇ ಆದ ಶಬ್ದವೂ ಒಂದಿರಬೇಕು. ವಿಶ್ವಾವಕಾಶದಲ್ಲಿ ಗುಂಯ್‌ಗುಡುತ್ತಿರುವ ಆ ಶಬ್ದ ಓಂಕಾರವೇ? ನಮ್ಮ ದೈನಿಕದ ಗಲಾಟೆಗಳನ್ನು ಮೀರಿದರೆ ಅದರೊಂದಿಗೆ ಬೆಸೆದುಕೊಳ್ಳಬಹುದೇ?
ವಿಶ್ವದ ಅಗಾಧತೆಯಲ್ಲಿ ನಾವೊಂದು ಧೂಳಿನ ಕಣ ಎಂದು ತಿಳಿದುಕೊಳ್ಳುತ್ತಲೇ ಅದೇ ಧೂಳಿನಿಂದ ಎಲ್ಲವೂ ಆಗಿದೆ ಎಂಬ ಅರಿವಿಗೆ ನಮ್ಮನ್ನು ವಿಸ್ತರಿಸಿಕೊಳ್ಳುವುದರಲ್ಲಿಯೇ ಆನಂದವಿದೆ. ಆನಂದೋಬ್ರಹ್ಮ...'
***
ಬರಲಿರುವ ಇಂಗ್ಲಿಷ್ ಹೊಸವರ್ಷಕ್ಕೆ ಅಡ್ವಾನ್ಸ್ ಆಗಿ ವೆಲ್‌ಕಮ್ ಮತ್ತು ಚಿಯರ್ಸ್!
- ಚೈತನ್ಯ ಹೆಗಡೆ
cchegde@gmail.com