ತೆರಿಗೆದಾರರ ಹಣದಲ್ಲಿ ಮತ್ತೊಂದು ಮಸ್ತಿಯ ಪ್ರವಾಸ ನಡೆಸಲು ಕರ್ನಾಟಕದ ಶಾಸಕರು ಸಿದ್ಧರಾಗಿದ್ದಾರೆ. ಅಧ್ಯಯನದ ಹೆಸರಿನಲ್ಲಿ ಲ್ಯಾಟಿನ್ ಅಮೆರಿಕನ್ ಪ್ರವಾಸಕ್ಕೆ 30 ಮಂದಿ ಸಿದ್ಧತೆ ನಡೆಸಿದ್ದಾರೆ. ಅವರ ಮೊದಲ ಸ್ಟಾಪ್ ಅಮೆಜಾನ್ ಅರಣ್ಯಪ್ರದೇಶ. ಏತಕ್ಕೆ ಗೊತ್ತೇ? ಅಲ್ಲಿನ ಜಲಪಾತಗಳ ಬಗ್ಗೆ ಅಧ್ಯಯನ ನಡೆಸಿ ಅಲ್ಲಿ ಕಲಿತದ್ದನ್ನು ಕರ್ನಾಟದಲ್ಲಿ ಅನುಷ್ಠಾನಕ್ಕೆ ತರವುದಕ್ಕಂತೆ! ಇದಾದ ನಂತರ ಬ್ರೆಜಿಲ್ಗೆ ಭೇಟಿ ನೀಡಲಿರುವ ಈ ತಂಡಅಲ್ಲಿನ ಕ್ರೀಡಾ ಚಟುವಟಿಕೆಯ ಬಗ್ಗೆ ತಿಳಿದುಕೊಳ್ಳಲಿದೆ. ಇನ್ನು ಬುವಾನ್ಬರಾ ಕಡಲ ತೀರ, ಶುಗರ್ಲೋಫ್ ಪರ್ವತಗಳು, ಮಾಚುಪಿಚುಗಳಲ್ಲಿ ಅಡ್ಡಾಡಿ ನಂತರ ಬ್ಯೂನಸ್ ಏರ್ಸ್ನಲ್ಲಿ ಟ್ಯಾಂಗೋ ನೃತ್ಯವನ್ನು ವೀಕ್ಷಿಸಿ ಕೊನೆಗೆ ದುಬಾಯ್ನ ಮರುಳುಗಾಡಿನಲ್ಲಿ ಇವರುಗಳು ಸಫಾರಿ ಮಾಡಲಿದ್ದಾರೆ. ಈ 15 ದಿನಗಳ ಪ್ರವಾಸಕ್ಕೆ ಒಬ್ಬೊಬ್ಬ ವ್ಯಕ್ತಿಗೆ 7.5 ಲಕ್ಷ ರುಪಾಯಿ ಖರ್ಚಾಗಲಿದ್ದು. ಒಟ್ಟು ಖರ್ಚು 2.25 ಕೋಟಿ ರುಪಾಯಿಗಳಾಗುತ್ತದೆ!
ಈ ಶಾಸಕರು ಬಟ್ಟೆ ಜೋಡಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ, 19 ಶಾಸಕರ ಇನ್ನೊಂದು ಗುಂಪು ತೆರಿಗೆದಾರರ ಹಣದಲ್ಲಿ ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ಫಿಜಿ ರಾಷ್ಟ್ರಗಳಲ್ಲಿ ಪ್ರವಾಸ ಮಾಡುತ್ತಿದೆ. ಅವರು ಅಲ್ಲಿ ನಿಜಕ್ಕೂ ಮಾಡುತ್ತಿರುವುದೇನು ಎನ್ನುವುದು ಯಾರಿಗೂ ತಿಳಿಯದು. ಆದರೆ ಅಲ್ಲಿ ಅವರು ಮಜಾ ಉಡಾಯಿಸುವುದಕ್ಕೆ ಹೋಗಿದ್ದಾರೆ ಎನ್ನುವುದಂತೂ ಸತ್ಯ. ಒಬ್ಬ ವ್ಯಕ್ತಿಗೆ 9 ಲಕ್ಷ ರುಪಾಯಿಗಳಂತೆ ಈ ಪ್ರವಾಸದ ಒಟ್ಟು ಖರ್ಚು 1.71ಕೋಟಿ ರುಪಾಯಿ.
ಕಳೆದ ವರ್ಷ ಇದೇ ರೀತಿಯ ಒಂದು ಪ್ರವಾಸದ ಬಗ್ಗೆ ಲೇಖನ ಬರೆದಿದ್ದೆ. ನಮ್ಮ 13 ಶಾಸಕರು ದಕ್ಷಿಣ ಅಮೆರಿಕದ ರಾಷ್ಟ್ರಗಳಾದ ಅರ್ಜೆಂಟಿನಾ, ಚಿಲಿಯಲ್ಲಿ ಅಧ್ಯಯನ ನಡೆಸಿ(?) ಕೊನೆಗೆ ದುಬೈನಲ್ಲಿ 2 ದಿನ ವಿಶ್ರಾಂತಿ ಪಡೆದು ಬಂದಿದ್ದರು. ಆ ರಾಷ್ಟ್ರಗಳಲ್ಲಿನ ನಾಗರಿಕ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಲು ಈ ಮಹಾನುಭಾವರು ಹೋಗಿದ್ದಾರೆ ಎಂದು ಆಗ ಹೇಳಲಾಗಿತ್ತು. ತಲಾ 7 ಲಕ್ಷ ರುಪಾಯಿಯಂತೆ ಈ ಪ್ರವಾಸದ ಒಟ್ಟು ಖರ್ಚು 1 ಕೋಟಿ ರುಪಾಯಿಗಳಷ್ಟಾಗಿತ್ತು. ಅವರು ಅಲ್ಲಿಂದ ತಿರುಗಿ ಬಂದ ನಂತರ ಯಾವ ವರದಿಯನ್ನೂ ಸಲ್ಲಿಸಲಿಲ್ಲ. ಯಾರನ್ನು ಭೇಟಿಯಾದರು, ಯಾವ ಚರ್ಚೆಗಳಾದವು, ಏನನ್ನು ಕಲಿತು ಬಂದರು, ಯಾವ ವಿಷಯ ಅವರಲ್ಲಿ ಹೆಚ್ಚು ಆಸಕ್ತಿ ಮೂಡಿಸಿತು, ಅದನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯವೇ, ತೆರಿಗೆದಾರರ ಹಣವನ್ನು ಯಾವ ರೀತಿ ಖರ್ಚು ಮಾಡಿದರು...ಊಹುಂ! ಯಾವುದರ ಬಗ್ಗೆಯೂ ಮಾಹಿತಿ ಸಿಗಲಿಲ್ಲ. ಅವರನ್ನು ಯಾರೂ ಪ್ರಶ್ನಿಸಲೂ ಇಲ್ಲ. ಈ ವಿಷಯದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಲೇ ಇಲ್ಲ.
ಅದೊಂದು ಮೋಜಿನ ಪ್ರವಾಸವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಾಧ್ಯಮಗಳ ವರದಿಗಳನ್ನು ನೋಡಿದಾಗ, ಆ ಶಾಸಕರು ಅಲ್ಲಿ ಮಾಡಿ ಬಂದಿದ್ದು ಬರೀ ಮಸ್ತಿಯಷ್ಟೇ ಎನ್ನುವುದು ತಿಳಿಯಿತು. ಕೆಲವು ಶಾಸಕರಂತೂ ತಮ್ಮ ಮಡದಿಯರನ್ನೂ ಜೊತೆಗೊಯ್ದರು. ಆದರೆ ಅವರ ಖರ್ಚನ್ನೆಲ್ಲ ತಾವೇ ನೋಡಿಕೊಂಡರು ಎನ್ನುವುದಷ್ಟೇ ಸಮಾಧಾನ! ಅದಿರಲಿ, ಇಂದು ಅಧಿಕೃತ ಪ್ರವಾಸ ಎಂದಾದರೆ, ಮಡದಿಯರನ್ನು ಜೊತೆಗೆ ಕರೆದುಕೊಂಡು ಹೋಗಲು ಅವರಿಗೆ ಅನುಮತಿ ಹೇಗೆ ಸಿಕ್ಕಿತು? ಯಾರು ಕೊಟ್ಟರು?
ಈಗ ಒಂದು ವರ್ಷದ ನಂತರ ಕೆಲವು ಶಾಸಕರು ಮತ್ತೆ ಅದೇ ಹಾದಿಯನ್ನು ಹಿಡಿದಿದ್ದಾರೆ. ಅಧ್ಯಯನ ಪ್ರವಾಸ ಎಂಬ ಅದೇ ಸುಳ್ಳನ್ನು ಮುಂದಿಡುತ್ತಿದ್ದಾರೆ. ಈ ಬಾರಿಯೂ ಕೆಲವರು ತಮ್ಮ ಸಂಗಾತಿಯನ್ನು ಸಂಗಡ ಒಯ್ಯುವುದರಲ್ಲಿ ಸಂದೇಹವಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯವಲ್ಲವೇ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್...ಈ ಎಲ್ಲಾ ಪಕ್ಷಗಳೂ ತಮ್ಮ ಶಾಸಕರು ಮತ್ತು ಅಧಿಕಾರಿಗಳನ್ನು ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕುಣಿದುಕುಪ್ಪಳಿಸಲು ವಿದೇಶಗಳಿಗೆ ಕಳಿಸುವುದು/ ಕಳಿಸಿದ್ದು ಎಷ್ಟು ಸರಿ?
ಅವರಿಗೂ ಪ್ರವಾಸ ಮಾಡುವ ಅಧಿಕಾರವಿದೆ. ಆದರೆ ಜನತೆಯ ತೆರಿಗೆ ಹಣವನ್ನು ತೂರಾಡುವ ಅಧಿಕಾರವನ್ನು ಅವರಿಗೆ ಕೊಟ್ಟಿದ್ದು ಯಾರು? ಆ ಹಣವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಬಹುದಲ್ಲವೇ? ರಾಜ್ಯದ ಹಲವಾರು ಭಾಗಗಳು ಸಮಸ್ಯೆಯಿಂದ ಬಳಲುತ್ತಿವೆ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ಅವುಗಳನ್ನು ಸರಿಪಡಿಸುವುದಕ್ಕೆ ಈ ಹಣವನ್ನು ಬಳಸುವುದು ಸರಿಯಲ್ಲವೇ? ಒಂದು ವೇಳೆ ವಿದೇಶಗಳಿಗೆ ಹೋಗಲೇಬೇಕು ಎನ್ನುವ ತೆವಲು ಇವರುಗಳಿಗಿದ್ದರೆ, ತಮ್ಮ ಹಣದಲ್ಲಿ ಹೋಗಿ ಬರಲಿ, ಬೇಡ ಎನ್ನುವವರ್ಯಾರು?!
ಕಳೆದ ವರ್ಷ ವಿಮಾನ ಹತ್ತುವ ಮುನ್ನ ಕೆಲವು ಶಾಸಕರು ಏನು ಹೇಳಿದರು ಗೊತ್ತೇ?:
ಟಿ ಬರಗಾಲ ಎದುರಾಗಿದೆಯೆಂದು ಯಾರಾದರೂ ಉಪವಾಸ ಬಿದ್ದಿದ್ದಾರಾ? ಈ ಪ್ರವಾಸಕ್ಕೆ ಖರ್ಚು ಮಾಡುವ ಹಣ ಬರಪೀಡಿತ ಪ್ರದೇಶಗಳಲ್ಲಿ ಹೆಚ್ಚು ಬದಲಾವಣೆ ತರಲಾರದು.
ಟಿ ಇದರಲ್ಲಿ ತಪ್ಪೇನಿದೆ(ಪ್ರವಾಸ ಕೈಗೊಳ್ಳುವುದರಲ್ಲಿ)? ನನ್ನ ಕ್ಷೇತ್ರದಲ್ಲಿ ಕ್ಷಾಮ ಎದುರಾಗಿಲ್ಲ. ನಮ್ಮಲ್ಲಿ ಚೆನ್ನಾಗಿ ಮಳೆಯಾಗಿದೆ. ರೈತರೆಲ್ಲ ಕೃಷಿಯಲ್ಲಿ ತೊಡಗಿದ್ದಾರೆ.
ಟಿ ನಾವು ಈ ಪ್ರವಾಸಕ್ಕೆ ಹೋದರೆ ಪ್ರಪಂಚವೇನೂ ಮುಳುಗುವುದಿಲ್ಲ.
ಟಿ ಕಸಬ್ನ ಭದ್ರತೆಗಾಗಿ ಭಾರತ 25 ಕೋಟಿ ರುಪಾಯಿ ಖರ್ಚುಮಾಡುತ್ತದೆ. ಒಂದು ರಾಜ್ಯದ ಶಾಸಕರಾದ ನಾವು ಪ್ರವಾಸ ಕೈಗೊಂಡರೇನು ತಪ್ಪು?
ಈಗ ಭುಜಕ್ಕೆ ಬ್ಯಾಗ್ ಏರಿಸಿರುವ 20 ಶಾಸಕರೂ ಇದೇ ಮಾತನ್ನು ಹೇಳುತ್ತಿದ್ದಾರೆ. ತಮ್ಮ ಮಸ್ತಿಯ ಪ್ರವಾಸದ ಕನಸು ಕಾಣುತ್ತಾ ಕುಳಿತಿದ್ದಾರೆ. ಇನ್ನು ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ಮತ್ತು ಫಿಜಿ ಪ್ರವಾಸದಲ್ಲಿರುವವರೂ ಕೂಡ ಇಂಥದ್ದೇ ನೆಪವನ್ನು ನೀಡಬಹುದು. ಈ ಕುರಿತು ಸ್ಪೀಕರ್ ಏನನ್ನುತ್ತಾರೆ ಗೊತ್ತೆ?: "ಹಿಂದಿನ ಸರ್ಕಾರಗಳು ಹುಟ್ಟುಹಾಕಿದ ಪದ್ಧತಿಯಿದು. ಈ ವಿಷಯದಲ್ಲಿ ನಾನು ತಲೆಹಾಕುವುದಿಲ್ಲ." ಒಟ್ಟಿನಲ್ಲಿ ಪಶ್ಚಾತ್ತಾಪದ ಭಾವನೆ ಯಾರಲ್ಲೂ ಇಲ್ಲ! ನಮ್ಮ ನಾಯಕರು ಒಮ್ಮೆ ಅಧಿಕಾರಕ್ಕೇರಿದ ನಂತರ ಹೇಗೆ ವರ್ತಿಸುತ್ತಾರೆ ಎನ್ನುವುದು ಇದರಿಂದ ತಿಳಿಯುವುದಿಲ್ಲವೇ? ಸಾರ್ವಜನಿಕ ಸೇವೆ ಎನ್ನುವುದು ಅವರ ಆದ್ಯತೆಯ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುತ್ತದೆ ಅಥವಾ ಪಡೆದೇ ಇರುವುದಿಲ್ಲ. ಇನ್ನು ಸರ್ಕಾರ ಇಂಥ ಪ್ರವಾಸಕ್ಕೆ ಒಪ್ಪಿಗೆ ನೀಡಿದ್ದು ಆಘಾತಕಾರಿ ವಿಷಯ. ಇದು ಬರೀ ಕರ್ನಾಟಕದ ಕತೆಯಲ್ಲ. ಎಲ್ಲೆಡೆಯೂ ಇದೇ ಪರಿಸ್ಥಿತಿ. ಇಂಥ ಅರ್ಥಹೀನ ಪ್ರವಾಸಗಳ ವಿರುದ್ಧ ಧ್ವನಿಯೆತ್ತುವ ಸಮಯ ಬಂದಿದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸ ನಿರ್ವಹಿಸುವಂತೆ ನಾವು ಅವರನ್ನು ಒತ್ತಾಯಿಸಬೇಕು. ಇದನ್ನೆಲ್ಲ ಸಹಿಸಿಕೊಳ್ಳುತ್ತಾ ಕೂಡುವುದು ಬೇಡ.
ಕೊನೆಯ ಗುಟುಕು: ಹೀಗೊಂದು ಟ್ವೀಟ್: "32 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ 4 ಸ್ಥಾನಗಳನ್ನು ಪಡೆಯಲಾಗಲಿಲ್ಲ. ಆದರೆ ಕೇವಲ 8 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ 28 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈಗ ಹೇಳಿ, ಯಾರು ಸಮರ್ಥರು?"
- ಎಚ್.ಎಸ್. ಬಲರಾಮ್
hsbalram@gmail.com
(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)