ನಮ್ಮ ರಕ್ಷಣಾ ಸಂಶೋಧನೆಗಳಿಗೇಕಿಲ್ಲ ಸಮರೋತ್ಸಾಹ?
ಬೆಂಗಳೂರಿನಲ್ಲಿ ನಡೆಯುತ್ತಿರುವ 'ಏರೋ ಇಂಡಿಯಾ-2013' ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಗಮನ ನೀಡಲೇಬೇಕಾದ ಇನ್ನೊಂದು ವಿಷಯವಿದೆ. ಮಂಗಳವಾರ ನಿಮ್ಹಾನ್ಸ್ ಸಂಭಾಗಣದಲ್ಲಿ ನಡೆದ 'ವೈಮಾನಿಕ ಉತ್ಪನ್ನಗಳ ವಿನ್ಯಾಸ, ನಿಯೋಜನೆಯಲ್ಲಿನ ಸವಾಲುಗಳು' ಎಂಬ ವಿಷಯ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ರಕ್ಷಣಾ ಸಚಿವ ಎ.ಕೆ ಆಂಟನಿ - 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಾಧನೆಗಳಿಂದ ನಾನು ಸಂತಸಗೊಂಡಿದ್ದೇನೆ. ಆದರೆ ಸಂಪೂರ್ಣವಾಗಿ ಸಂತೋಷವಿಲ್ಲ. ಉತ್ಪನ್ನಗಳನ್ನು ರಕ್ಷಣಾ ಪಡೆಗಳ ಸೇವೆಗೆ ಸಮರ್ಪಿಸಲು ವಿಳಂಬವಾಗುತ್ತಿರುವುದೇ ಪ್ರಮುಖ ಸಮಸ್ಯೆಯಾಗಿದೆ' ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಉಪಸ್ಥಿತರಿದ್ದ ವಾಯು ಸೇನೆ ಏರ್ ಮಾರ್ಷಲ್ ಎನ್.ಎ.ಕೆ. ಬ್ರೌನ್ ಕೂಡ ಯೋಜನೆಗಳ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವಿಸ್ತೃತ ಲೇಖನವೊಂದನ್ನು ಪ್ರಕಟಿಸಿತ್ತು. ಅದರ ಆಯ್ದ ಭಾಗ ಇಲ್ಲಿದೆ.
--------------
'ಭಾರತ ಯುದ್ಧ ರಂಗದಲ್ಲಿದೆ. ತೇಜಸ್ ಯುದ್ಧ ವಿಮಾನಗಳು ತಮ್ಮ ಉತ್ಕೃಷ್ಟ ಕ್ಷಿಪಣಿಗಳಿಂದ ಶತ್ರುವಿಮಾನಗಳನ್ನು ಕೆಳಕ್ಕುರುಳಿಸುತ್ತಾ ಮಿಂಚಿನ ವೇಗದಲ್ಲಿ ಹಾರುತ್ತಿವೆ. ಅವುಗಳಿಗಿಂತ ತುಸು ಕಡಿಮೆ ಎತ್ತರದಲ್ಲಿ ಹಾರುತ್ತಿರುವ ಭಾರತ ನಿರ್ಮಿತ ಹೆಲಿಕಾಪ್ಟರ್ಗಳು ಮಶಿನ್ ಗನ್ನಿನಿಂದ ಮಳೆಗರೆದು ಶತ್ರು ತಂಡಗಳನ್ನು ಚಿಂದಿ ಮಾಡುತ್ತಿವೆ. ಬಲಿಷ್ಠ 'ಕಾಂಚನ್' ಕವಚ ಹೊಂದಿರುವ ಅರ್ಜುನ್ ಯುದ್ಧ ವಾಹನಗಳು ತಮ್ಮ 120 ಎಂಎಂ ಫಿಂರಂಗಿಯಿಂದ ಗುಂಡುಗಳನ್ನುಗುಳುತ್ತಾ ಎದುರು ಬಂದದ್ದನ್ನೆಲ್ಲ ಕ್ಷಣ ಮಾತ್ರದಲ್ಲಿ ಇಲ್ಲವಾಗಿಸುತ್ತಿವೆ. ಕ್ಷಮತೆ ಹೆಚ್ಚಿಸುವ ಗುಳಿಗೆಗಳನ್ನು ಸೇವಿಸಿರುವ ಭಾರತೀಯ ಯೋಧರು ಕಿಂಚಿತ್ ದಣಿವಿಲ್ಲದೇ ಶತ್ರು ಪಡೆಗಳತ್ತ ವೇಗವಾಗಿ ಸಾಗುತ್ತಲೇ ಇದ್ದಾರೆ'
ನಮ್ಮ 'ಡಿಆರ್ಡಿಓ ಕನಸು' ಇದೇ ರೀತಿಯಲ್ಲೇ ಇರುತ್ತದಲ್ಲವೇ? ಕನಸಿನ ವಿಷಯ ಪಕ್ಕಕ್ಕಿಡಿ, ಏಕೆಂದರೆ ರಕ್ಷಣಾ ಸಚಿವ ಎ.ಕೆ. ಆ್ಯಂಟೋನಿ ಅವರ ಆದೇಶದ ಮೇರೆಗೆ COMPTROLLER GENERAL OF DEFENCE AUDIT(CGDA)ತಯಾರಿಸಿರುವ ವರದಿಯನ್ನು ನೋಡಿದರೆ ನಮಗೆ ನಿದ್ದೆಯೇ ಬರುವುದಿಲ್ಲವೇನೋ?
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಓ) ಕುರಿತು ಸಿಜಿಡಿಎ ತಯಾರಿಸಿರುವ ವರದಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. 10,500 ಕೋಟಿ ರುಪಾಯಿಗಳಷ್ಟು ವಾರ್ಷಿಕ ಬಜೆಟ್ ಹೊಂದಿರುವ ಈ ಸಂಸ್ಥೆ ಹುಟ್ಟಿಕೊಂಡದ್ದು 1958ರಲ್ಲಿ. ಭಾರತದಾದ್ಯಂತ ಸುಮಾರು 52 ಸಂಶೋಧನಾಲಯಗಳನ್ನು, 5,000 ವಿಜ್ಞಾನಿಗಳನ್ನು, 25,000 ನೌಕರ ವರ್ಗವನ್ನು ಇದು ಹೊಂದಿದೆ. ಆದರೆ ಕಳೆದ 17 ವರ್ಷಗಳಲ್ಲಿ ಈ ಸಂಸ್ಥೆಯಿಂದ ಅಭಿವೃದ್ಧಿಯಾಗಿರುವ 29 ಪ್ರತಿಶತ ಉತ್ಪನ್ನಗಳನ್ನು ಮಾತ್ರ ನಮ್ಮ ಸಶಸ್ತ್ರ ಪಡೆಗಳು ಉಪಯೋಗಿಸುತ್ತಿವೆ. ಡಿಆರ್ಡಿಓ, ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಕೊನೆಗೆ ಇತರೆ ಕಂಪನಿಗಳಿಂದ ಸಾಧನ ಸಾಮಗ್ರಿಗಳನ್ನು ಖರೀದಿಸಿದಂತಹ ಹಲವಾರು ನಿದರ್ಶನಗಳನ್ನು ಈ ವರದಿ ನೀಡುತ್ತದೆ. ಉದಾಹರಣೆಗೆ- ಸ್ಯಾಟ್ಲೈಟ್ ಸಿಗ್ನಲ್ಗಳ ಮೂಲಕ ಮುನ್ನೆಚ್ಚರಿಕೆ ನೀಡುವ ತಂತ್ರಜ್ಞಾನದ ಅಭಿವೃದ್ಧಿಗಾಗಿ ಸುಮಾರು 29.96 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿದ ಡಿಆರ್ಡಿಓ, ಕೊನೆಗೆ 24.50 ಕೋಟಿ ರುಪಾಯಿಗಳ ಟೆಂಡರ್ ಆಧಾರದ ಮೇಲೆ ಸಾರ್ವಜನಿಕ ಉದ್ಯಮವೊಂದರಿಂದ ಆ ತಂತ್ರಜ್ಞಾನವನ್ನು ಖರೀದಿಸಿತು!
'ವಾಣಿಜ್ಯಿಕವಾಗಿ ಅಂತಹ ತಂತ್ರಜ್ಞಾನಗಳು ಲಭ್ಯವಿವೆ ಎಂದಮೇಲೆ ಡಿಆರ್ಡಿಓಗೆ ಅಷ್ಟೊಂದು ಸಮಯ ಮತ್ತು ಹಣ ಖರ್ಚು ಮಾಡುವ ಆಗತ್ಯವಾದರೂ ಏನಿತ್ತು?' ಎಂದು ಕೇಳುತ್ತಾರೆ ಸಿಜಿಡಿಎದ ಅಧಿಕಾರಿಯೊಬ್ಬರು. ಇದಷ್ಟೆ ಅಲ್ಲ, ಸ್ಫೋಟಕಗಳನ್ನು ಪತ್ತೆಹಚ್ಚುವ ಡಿಟೆಕ್ಟರ್ಗಳ ಅಭಿವೃದ್ಧಿಗಾಗಿ ಅದು ಸುಮಾರು 6.85 ಕೋಟಿ ರುಪಾಯಿ ವ್ಯಯಿಸಿ, ಕಡಗೆ ಪ್ರತಿ ಡಿಟೆಕ್ಟರ್ಗೆ 30 ಲಕ್ಷ ರುಪಾಯಿ ನಿಗದಿ ಮಾಡಿತು. ಆದರೆ ಅದೇ ಗುಣಮಟ್ಟದ ವಿದೇಶಿ ಡಿಟೆಕ್ಟರ್ಗಳು 9.8 ಲಕ್ಷ ರುಪಾಯಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿವೆ!
'ಈಗಂತೂ ಡಿಆರ್ಡಿಓ ಶಸ್ತ್ರಾಸ್ತ್ರ ಸಂಬಂಧಿತ ತಂತ್ರಜ್ಞಾನದ ಅಭಿವೃದ್ಧಿಯನ್ನು ಬಿಟ್ಟು, ಸ್ವಯಂಚಾಲಿತ ಇಡ್ಲಿ ಮತ್ತು ದೋಸೆ ಮಷೀನುಗಳ ಮೇಲೆ ಮತ್ತು 'ಉಪ್ಪಿನಕಾಯಿ' ಅಭಿವೃದ್ಧಿಯ ಮೇಲೆ ಹಣ ವ್ಯಯಿಸುತ್ತಿದೆ. ಆ ಸಂಸ್ಥೆ ಇನ್ನೂ ಅಸ್ತಿತ್ವದಲ್ಲೇಕಿದೆಯೋ ತಿಳಿಯುತ್ತಿಲ್ಲ' ಎನ್ನುತ್ತಾರೆ ಡಿಆರ್ಡಿಓದ ಮಾಜಿ ವಿಜ್ಞಾನಿ ವಿ.ಕೆ. ಮಿತ್ತಲ್. ನಿಜ ಹೇಳಬೇಕೆಂದರೆ ಡಿಆರ್ಡಿಓದ ಸಾಧನೆಗಳು ಪಾಕಶಾಲೆಗಷ್ಟೇ ಸೀಮಿತವಾಗಿವೆ. ಉಪ್ಪಿನಕಾಯಿ ಪ್ಯಾಕೆಟು, ಆಲೂಗಡ್ಡೆ ಪರೋಠ, ಮೊಟ್ಟೆ ಬಿಸ್ಕೆಟ್, ಇನ್ಸ್ಟೆಂಟ್ ಹಲ್ವಾ ಮಿಕ್ಸ್, ಉಪ್ಮಾ ಮಿಕ್ಸ್ , ಮಟನ್ ವೆಜಿಟೆಬಲ್ ಕುರ್ಮಾಗಳನ್ನು ತಯಾರಿಸುವುದರಲ್ಲಿ ಆ ಸಂಸ್ಥೆಯದ್ದು ಎತ್ತಿದ ಕೈ!
ಇನ್ನು ಸಿಎಜಿ ಕೂಡ 2011-2012ರಲ್ಲಿ ಆ ಸಂಸ್ಥೆಯ ಕುರಿತು ಪ್ರತ್ಯೇಕ ವರದಿಯೊಂದನ್ನು ಪ್ರಕಟ ಮಾಡಿತ್ತು. 'ಡಿಆರ್ಡಿಓ, ಗೊತ್ತು ಗುರಿಯಿಲ್ಲದೆ ಅನೇಕ ಸಂಶೋಧನಾ ಯೋಜನೆಗಳಿಗೆ ಕೋಟ್ಯಂತರ ರುಪಾಯಿ ಹಣ ಸುರಿದು, ಕೊನೆಗೆ ಎಲ್ಲವನ್ನೂ ಅರ್ಧಂಬರ್ಧ ಮಾಡಿ ಕೈತೊಳೆದುಕೊಂಡು ಬಿಡುತ್ತದೆ' ಎಂದು ಅದು ಹೇಳಿತ್ತು. ಸೇನೆಗಾಗಿ ಸುಮಾರು 21.46 ಕೋಟಿ ರುಪಾಯಿ ವೆಚ್ಚದ ಮಾಡುಲಾರ್ ಸೇತುವೆ ನಿರ್ಮಾಣ ಮಾಡಲು ಹೊರಟ ಡಿಆರ್ಡಿಓ, ಅದಕ್ಕಾಗಿ ತೆಗೆದುಕೊಂಡಿದ್ದು ಎಂಟು ವರ್ಷಳಷ್ಟು ಸಮಯವನ್ನು. ಆದರೆ ಆ ಸೇತುವೆ ಕೂಡ ಪೂರ್ಣಗೊಳ್ಳಲಿಲ್ಲ. 2010ರಲ್ಲಿ ಅದರ ನಿರ್ಮಾಣವನ್ನು ಸ್ಥಗಿತಗೊಳಿಸಲಾಯಿತು. ಆರು ತಿಂಗಳ ನಂತರ 13.25 ಕೋಟಿ ರುಪಾಯಿ ವೆಚ್ಚದಲ್ಲಿ ಮತ್ತೊಂದು ಸೇತುವೆ ನಿರ್ಮಾಣದ ಯೋಜನೆಯನ್ನು ಅದು ಕೈಗೆತ್ತಿಕೊಂಡಿತು!
'ನಾವು ನಮ್ಮ ಶತ್ರುಗಳಿಗಿಂತ ತುಂಬಾ ಹಿಂದಿದ್ದೇವೆ. ಯುದ್ಧ ವಾಹನ ಮತ್ತು ಕ್ಷಿಪಣಿ ತಯಾರಿಯಲ್ಲಿ ಚೀನಾ ನಮಗಿಂತ ತುಂಬಾ ಮುಂದಿದೆ. ಡಿಆರ್ಡಿಓದ ಆಧುನಿಕ ತಂತ್ರಜ್ಞಾನ, ಸೇನೆಯನ್ನು ತಲುಪುವ ವೇಳೆಗೆ ಪುರಾತನವಾಗಿ ಹೋಗಿರುತ್ತದೆ!' ಎನ್ನುತ್ತಾರೆ ಮಾಜಿ ಸುರಕ್ಷತಾ ವಿಮರ್ಶಕ ಅಫ್ಸೀರ್ ಕರೀಂ.
'ಡಿಆರ್ಡಿಓ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ, ಆದರೆ ಅದರಲ್ಲಿ ಎಷ್ಟು ಯೋಜನೆಗಳು ಯಶಸ್ವಿಯಾಗಿವೆ ಎನ್ನುವುದರ ಬಗ್ಗೆ ಮಾತ್ರ ಅದು ಸ್ಪಷ್ಟ ದಾಖಲೆಗಳನ್ನು ತೋರಿಸುತ್ತಿಲ್ಲ' ಎನ್ನುತ್ತದೆ ಲೆಕ್ಕ ಪರಿಶೋಧನಾ ಸಂಸ್ಥೆ. 2009-2010ರ ನಡುವೆ ಡಿಆರ್ಡಿಓ ಸುಮಾರು 702 ಯೋಜನೆಗಳನ್ನು ಕೈಗೆತ್ತಿಕೊಂಡಿತು. ಪ್ರತಿ ಯೋಜನೆಯ ವೆಚ್ಚ 50 ಲಕ್ಷ ರುಪಾಯಿಗಳಿಗಿಂತ ಕಡಿಮೆ ಇರಲಿಲ್ಲ. ಸಚಿವಾಲಯದ ಮುಂದೆ ವರದಿ ಒಪ್ಪಿಸುವಾಗ ಮಾತ್ರ ಅದು, ಕೇವಲ 102 ಯೋಜನೆಗಳ ಬಗ್ಗೆ ಮಾಹಿತಿ ನೀಡಿತ್ತು!
ಇನ್ನು ಟಿ70 ಟ್ಯಾಂಕ್ಗಳಿಗಾಗಿ 'ಕೌಂಟರ್ ಮೈನ್ ಫ್ಲೇಲ್ (ಸಿಎಮ್ಎಫ್)' ಎನ್ನುವ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದಕ್ಕೆ 8 ಕೋಟಿ ರುಪಾಯಿಗಳನ್ನು ಅದು ವೆಚ್ಚ ಮಾಡಿತ್ತು. ನೆಲ ಬಾಂಬ್ಗಳನ್ನು ಪತ್ತೆ ಹಚ್ಚಿ ದೂರದಿಂದಲೇ ಸ್ಫೋಟಿಸುವ ತಂತ್ರಜ್ಞಾನವಿದು. ಆದರೆ 2004ರ ವೇಳೆಗೆ ಸೇನೆ ತನ್ನ ಅವಶ್ಯಕತೆಗಳ ಪಟ್ಟಿಯನ್ನು ಪರಿಷ್ಕರಿಸಿತ್ತಾದರೂ, ಡಿಆರ್ಡಿಓ ಮಾತ್ರ ಹಳೆಯ ಯೋಜನೆಯ ಅಭಿವೃದ್ಧಿಯಲ್ಲೇ ನಿರತವಾಗಿತ್ತು. 2002ರಲ್ಲಿ ಶುರುವಾದ ಈ ಯೋಜನೆ ಕೊನೆಗೆ ವಿಫಲವಾಗಿ 2008ರಲ್ಲಿ ಮುಕ್ತಾಯ ಕಂಡಿತು. ಇಷ್ಟಾದರೂ ಕೂಡ ಅದು ಸುಮ್ಮನೆ ಕುಳಿತುಕೊಳ್ಳಲಿಲ್ಲ. 2011 ಫೆಬ್ರವರಿಯಲ್ಲಿ ಮತ್ತೆ ಸಿಎಮ್ಎಫ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 49.85 ಕೋಟಿ ರುಪಾಯಿ ಖರ್ಚಾಗುವ ಇನ್ನೊಂದು ಹೊಸ ಯೋಜನೆಯನ್ನು ಎತ್ತಿಕೊಂಡಿದೆ. ಶಸ್ತ್ರಾಸ್ತ್ರಗಳ ವಿಷಯ ಒತ್ತಟ್ಟಿಗಿರಲಿ, ಡಿಆರ್ಡಿಓ ಪ್ರತಿ ವರ್ಷದ ತನ್ನ ವಾರ್ಷಿಕ ಬಜೆಟ್ನಿಂದ ಸುಮಾರು ಹತ್ತು ಪ್ರತಿಶತ ಹಣವನ್ನು ಹೊಸ ಆಫೀಸುಗಳು ಮತ್ತು ಸಂಭಾಂಗಣಗಳ ನಿರ್ಮಾಣಕ್ಕೆ ವ್ಯಯ ಮಾಡುತ್ತಿದೆ. ಇಷ್ಟೇ ಅಲ್ಲದೆ ಅನಧಿಕೃತವಾಗಿ ಸುಮಾರು 49.15 ಕೋಟಿ ರುಪಾಯಿಗಳನ್ನು ಮಂಜೂರು ಮಾಡಿ ಪುಣೆಯಲ್ಲಿ ಸಾರ್ವಜನಿಕ ವಾಹನ ಪರೀಕ್ಷಣಾ ಕೇಂದ್ರವನ್ನು ತೆರೆದಿದೆ!
'ಈಗಂತೂ ಆ ಸಂಸ್ಥೆಯಲ್ಲಿ ವಿಜ್ಞಾನಿಗಳೇ ಇಲ್ಲ. ಕಳೆದ ವರ್ಷ ಸುಮಾರು 86 ವಿಜ್ಞಾನಿಗಳು ಡಿಆರ್ಡಿಓದಿಂದ ವಿಆರ್ಎಸ್ ಪಡೆದಿದ್ದಾರೆ. ಅವರ ಜಾಗವನ್ನು ಭರ್ತಿ ಮಾಡುವ ಕೆಲಸವೂ ಆಗುತ್ತಿಲ್ಲ. ಇದೇ ರೀತಿ ಅಸ್ತವ್ಯಸ್ಥವಾಗಿ ಅದು ಕಾರ್ಯ ನಿರ್ವಹಿಸುತ್ತಾ ಹೋಯಿತೆಂದರೆ ಇನ್ನೊಂದು 5 ವರ್ಷದಲ್ಲಿ ನಮ್ಮ ಶತ್ರುರಾಷ್ಟ್ರಗಳಿಗಿಂತ ನಾವು ತುಂಬಾ ಹಿಂದುಳಿದುಬಿಡುತ್ತೇವೆ. ರಕ್ಷಣಾ ಸಚಿವಾಲಯ ಡಿಆರ್ಡಿಓದ ಸುಧಾರಣೆ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ' ಎನ್ನುತ್ತಾರೆ ಜನರಲ್ ಕರೀಂ.
ಇನ್ನು ಭಾರತೀಯ ಸೇನೆಯ ಪ್ರಮುಖ ಅಸ್ತ್ರ ಎಂದು ಕರೆಸಿಕೊಳ್ಳುವ 'ಇನ್ಸಾಸ್ ರೈಫಲ್' ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತವೆ. ಆದರೆ ಇವು ಕಠಿಣ ವಾತಾವರಣದಲ್ಲಿ ಕೈ ಕೊಡುತ್ತವೆ ಎನ್ನುವುದು ಸೇನೆಯ ದೂರು. ಇವು ಕೈ ಕೊಡುವ ರೈಫಲ್ಗಳು ಎಂದು ಸ್ಪಷ್ಟವಾಗಿದ್ದು ಆಗಸ್ಟ್ 7, 2005 ರಂದು. ನೆಪಾಳದ ಕಾಠ್ಮಂಡುವಿನಿಂದ ಸುಮಾರು 550 ಕಿಲೋಮೀಟರ್ ದೂರದಲ್ಲಿ ಠಿಕಾಣಿ ಹೂಡಿದ್ದ ನೆಪಾಲಿ ಸೇನೆಯ ಪಿಲಿ ಕ್ಯಾಂಪ್ನ ಮೇಲೆ ಒಂದು ಸಂಜೆ 1000 ಕ್ಕೂ ಹೆಚ್ಚು ಮಾವೋವಾದಿಗಳು ದಾಳಿ ಮಾಡಿದರು. ಪಿಲಿ ಕ್ಯಾಂಪಿನಲ್ಲಿದ್ದ ಸೈನಿಕರ ಸಂಖ್ಯೆ 200 ಕ್ಕಿಂತಲೂ ಹೆಚ್ಚಿತ್ತು. ಅಲ್ಲದೆ ಎಲ್ಲರ ಬಳಿಯೂ ಭಾರತ ನಿರ್ಮಿತ ಇನ್ಸಾಸ್ ರೈಫಲ್ಗಳಿದ್ದವು. ಯಾವಾಗ ಅವರುಗಳು ಮಾವೋಗಳ ಮೇಲೆ ದಾಳಿ ಮಾಡಲು ಶುರು ಮಾಡಿದರೋ, ಆಗಲೇ ಅವರಿಗೆ 'ಇನ್ಸಾಸ್' ಟುಸ್ ಪಟಾಕಿ ಎಂದು ಅರ್ಥವಾಗಿದ್ದು! 40 ಸೈನಿಕರನ್ನು ಕೊಂದು ಹಾಕಿದ ಮಾವೋಗಳು ಸುಮಾರು 100 ಸೈನಿಕರನ್ನು ಒತ್ತೆಯಾಳಾಗಿರಿಸಿಕೊಂಡರು. ನೆಪಾಳ ಭಾರತದತ್ತ ಅಳುತ್ತಾ ಬೆರಳು ತೋರಿಸಿತು. 'ಈ ರೈಫಲ್ಗಳನ್ನು ಹೆಚ್ಚೆಂದರೆ ಒಂದು ಗಂಟೆಯವರೆಗೆ ಬಳಸಬಹುದಷ್ಟೆ. ದೀರ್ಘಾವಧಿ ಯುದ್ಧಗಳಲ್ಲಿ ಇವು ಉಪಯೋಗಕ್ಕೆ ಬರುವುದಿಲ್ಲ. ನಮ್ಮ ಬಳಿ ಇನ್ಸಾಸ್ಗಿಂತ ಉತ್ತಮ ಆಯುಧಗಳಿದ್ದವು. ಆದರೆ ಭಾರತದ ಮಾತು ಕೇಳಿ ತಪ್ಪು ಮಾಡಿಬಿಟ್ಟೆವು' ಎಂದು ನೆಪಾಳ ಸರ್ಕಾರದ ವಕ್ತಾರರೊಬ್ಬರು ವೇದನೆ ಪಟ್ಟಿದ್ದರು. 2011ರಲ್ಲಿ ಎಚ್ಚೆತ್ತುಕೊಂಡ ರಕ್ಷಣಾ ಇಲಾಖೆ ಸುಮಾರು 66,000 ಅಸಾಲ್ಟ್ ರೈಫಲ್ಗಳಿಗೆ ಟೆಂಡರ್ ಕರೆಯಿತು!
ಇನ್ನು ಭಾರತದ ಪ್ರಮುಖ ಯುದ್ಧ ಟ್ಯಾಂಕರ್ ಎಂದೇ ಕರೆಸಿಕೊಳ್ಳುವ 'ಅರ್ಜುನ'ದ ಅಭಿವೃದ್ಧಿಗೆ 10 ವರ್ಷಗಳು ಹಿಡಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದರ ನಿರ್ಮಾಣಕ್ಕಾಗಿ ತಗುಲಿದ ಸಮಯ 35 ವರ್ಷಗಳು. 105 ಎಂಎಂ ಗನ್ ಮತ್ತು 40 ಟನ್ ತೂಕ ಹೊಂದಿರಬೇಕಿದ್ದ ಅರ್ಜುನ, 2008ರಲ್ಲಿ ಸಿದ್ಧವಾಗುವ ವೇಳೆಗೆ 58.5 ಟನ್ ವಜನ್ ಪಡೆದಿತ್ತು. ಇನ್ನು ಅದಕ್ಕಾಗಿ ತಗುಲಿದ ವೆಚ್ಚದ ಬಗ್ಗೆ ಕೇಳಲೇ ಬೇಡಿ. ಅಂದಾಜು ಮಾಡಿದಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಹಣ ಅದರ ಅಭಿವೃದ್ಧಿಗೆ ಖರ್ಚಾಯಿತು! ಅದು ಎಷ್ಟು ದೊಡ್ಡದಿದೆಯೆಂದರೆ, ಸೋವಿಯತ್ ಅಥವಾ ಬ್ರಟಿಷ್ ನಿರ್ಮಿತ ಟ್ಯಾಂಕ್ಗಳನ್ನು ಸುಲಭವಾಗಿ ಹೊತ್ತೊಯ್ಯುತ್ತಿದ್ದ ಭಾರತೀಯ ರೈಲುಗಳನ್ನು ಅದಕ್ಕೋಸ್ಕರವೇ ಮರು ವಿನ್ಯಾಸಗೊಳಿಸಬೇಕಾಯಿತು. ಕೆಲವರು ಅರ್ಜುನನ್ನು ತೆಗಳುತ್ತಾ ಕುಳಿತರೆ, ಇನ್ನೂ ಕೆಲವರು 'ಸಶಸ್ತ್ರ ಪಡೆಗಳಿಗೆ ಸಿಕ್ಕ ಅತಿ ಉತ್ಕೃಷ್ಟ ಅಸ್ತ್ರವಿದು' ಎಂದು ಹೊಗಳುತ್ತಾರೆ. ಈಗಂತೂ ಭಾರತದ ಬಳಿ 250ಕ್ಕೂ ಹೆಚ್ಚು ಅರ್ಜುನ ಟ್ಯಾಂಕರುಗಳಿವೆ. 1000ಕ್ಕೂ ಮಿಕ್ಕಿ ಟಿ-90ಗಳಿವೆ. ಅಲ್ಲದೆ ಜರ್ಮನಿಯೊಂದಿಗೆ ಕೈಜೋಡಿಸಿ ಹೊಸ ಯುದ್ಧ ವಾಹನ ನಿರ್ಮಾಣದ ಯೋಜನೆಯನ್ನೂ ಡಿಆರ್ಡಿಓ ತಯಾರಿಸಿಕೊಂಡು ಕುಳಿತಿದೆ!
ಇಷ್ಟೆಲ್ಲ ಹುಳುಕುಗಳ ನಡುವೆಯೂ ಕೆಲವು ತಿಂಗಳುಗಳ ಹಿಂದೆ ಅದು ಮೆಚ್ಚುವಂತಹ ಕೆಲಸವೊಂದನ್ನು ಮಾಡಿದೆ. 350 ಕಿ.ಮಿ ಸಾಗಬಲ್ಲ ಪ್ರಿಥ್ವಿ 2 ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಈ ಯಶಸ್ಸಿನಿಂದ ಹಿಗ್ಗಿಹೋದ ಸಾರಸ್ವತ್ ಅವರು ಉಂಗುರ ತುಂಬಿದ ತಮ್ಮ ಕೈಯಿಂದ ಸೇನಾ ಕಮಾಂಡರ್ಗೆ ಲಡ್ಡು ತಿನಿಸಿ ಖುಷಿಪಟ್ಟಿದ್ದರು.
ಆದರೂ ಈ ಗೆಲುವನ್ನು ಮುಂದಿಟ್ಟುಕೊಂಡು ಅವರು ನುಣುಚಿಕೊಳ್ಳುವ ಹಾಗಿಲ್ಲ, ಏಕೆಂದರೆ ಸಿಜಿಡಿಎ ವರದಿಯಿಂದ ಉದ್ಭವವಾಗಿರುವ ಪ್ರಶ್ನೆಗಳಿಗೆ ಇದುವರೆಗೂ ಅವರಿಂದ ಉತ್ತರ ಸಿಕ್ಕಿಲ್ಲ.
(ಯತೀಶ್ ಯಾದವ್, ನರ್ದೀಪ್ ಸಿಂಗ್ ದಹಿಯಾ)