ಅಂಕಣಗಳು

ಯುವಜನತೆಯ ಚಿತ್ತ, ಬೆಂಗಳೂರಿನ ಅಭಿವೃದ್ಧಿಯತ್ತ

ಅಸೆಂಬ್ಲಿ ಚುನಾವಣೆಗಳು ಎದುರು ಬಂದು ಕುಳಿತಿವೆ. ಹಾಗಾಗಿ ಜನತೆಗೆ ಎರಡು ಪ್ರಶ್ನೆಗಳು ಎದುರಾಗಿವೆ.  ಯಾವ ಅಭ್ಯರ್ಥಿಗೆ ಅಥವಾ ಯಾವ ಪಕ್ಷಕ್ಕೆ ಮತ ನೀಡಬೇಕು? ಸದ್ಯಕ್ಕಿರುವ ಆಡಳಿತ ಪಕ್ಷ ಕಳೆದ 5 ವರ್ಷಗಳಲ್ಲಿ ಉತ್ತಮವಾಗಿ ಆಡಳಿತ ನಡೆಸಿದೆಯೇ?
ಜನತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದೇ ನೀತಿಯನ್ನು ಅನುಸರಿಸುತ್ತವಾದ್ದರಿಂದ, ಸ್ಪಷ್ಟ ನಿರ್ಧಾರಕ್ಕೆ ಬರಲು ಮತದಾರರಿಗೆ ಕಷ್ಟವಾಗುತ್ತದೆ.
'ದಕ್ಷ್‌' ಎನ್ನುವ ಸಮಾಜ ಸೇವಾ ಸಂಸ್ಥೆಯೊಂದು, ನಮ್ಮ ಬೆಂಗಳೂರು ಫೌಂಡೇಷನ್ ಒಡಗೂಡಿ ರಾಜ್ಯದ ಶಾಸಕಾಂಗ ಕ್ಷೇತ್ರಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ರಾಜಕೀಯ ಪಕ್ಷಗಳಿಂದ ಜನರು ಏನನ್ನು ಆಪೇಕ್ಷಿಸುತ್ತಾರೆ, ಯಾವ ಸಮಸ್ಯೆಗಳು ಅವರನ್ನು ಬಹುವಾಗಿ ಕಾಡುತ್ತಿವೆ, ಆ ಸಮಸ್ಯೆಗಳ ಪರಿಹಾರಕ್ಕೆ ಅವರುಗಳ ಎಮ್‌ಎಲ್‌ಎ ಯಾವ ರೀತಿಯ ಕೆಲಸ ಮಾಡಿದ್ದಾರೆ, ಇತ್ಯಾದಿ. ಈ ಸಮೀಕ್ಷೆಯ ಮುಖ್ಯ ಉದ್ದೇಶ ರಾಜಕೀಯ ಮತ್ತು ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದಾಗಿದೆ.
ಬೆಂಗಳೂರಿನ ಸುಮಾರು 27 ಅಸೆಂಬ್ಲಿ ಕ್ಷೇತ್ರಗಳಲ್ಲಿ 'ಪರ್ಸೆಪ್ಶನ್ ಸರ್ವೆ'ಯನ್ನು ಇವು ಕೈಗೊಂಡಿವೆ. ತಮ್ಮ ಎಮ್‌ಎಲ್‌ಎಗಳ ಕಾರ್ಯವಿಧಾನದ ಬಗ್ಗೆ ಜನತೆಯ ಗ್ರಹಿಕೆ ಹೇಗಿದೆ ಎಂದು ತಿಳಿದುಕೊಳ್ಳುವ ಉದ್ದೇಶ ಈ ಸಮೀಕ್ಷೆಯದ್ದಾಗಿತ್ತು. ಜನರಿಗೆ ಪ್ರಶ್ನೆಗಳ ಪಟ್ಟಿಯೊಂದನ್ನು ಕೊಟ್ಟು ಅದಕ್ಕೆ ಉತ್ತರಿಸುವಂತೆ ಕೇಳಿಕೊಳ್ಳಲಾಯಿತು. ಹಲವಾರು ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಹೊಂದಿದ್ದ ಅದರಲ್ಲಿ- ಎಮ್‌ಎಲ್‌ಎಗಳ ಭೇಟಿಯ ಅನುಕೂಲತೆ, ಕಾನೂನು ಸುವ್ಯವಸ್ಥೆ/ ಪೊಲೀಸ್, ರಸ್ತೆಗಳ ನಿರ್ವಹಣೆ, ಟ್ರಾಫಿಕ್ ನಿರ್ವಹಣೆ, ಸಾರ್ವಜನಿಕ ಸಾರಿಗೆ, ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್ ಮತ್ತು ನೀರು ಪೂರೈಕೆ, ಗಾರ್ಬೇಜ್ ಸ್ವಚ್ಛತೆ, ಭ್ರಷ್ಟಾಚಾರ, ಆರೋಗ್ಯ ಸೌಲಭ್ಯಗಳು, ಮಹಿಳಾ ಸುರಕ್ಷತೆ ಮುಂತಾದ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಹೆಣೆಯಲಾಗಿತ್ತು.
ಸಮೀಕ್ಷೆಯಿಂದ ಹೊರಬಿದ್ದ ವಿಚಾರಗಳು ನಿಜಕೂ ಕೂತೂಹಲಕರವಾಗಿದ್ದು ಅವು ಬೆಂಗಳೂರಿನ ಸತ್ಯದರ್ಶನ ಮಾಡಿಸುತ್ತವೆ:
ಟಿ ತಾವು ಅಂದುಕೊಂಡದ್ದಕ್ಕೂ, ತಮ್ಮ ಎಮ್‌ಎಲ್‌ಗಳು ಕಾರ್ಯನಿರ್ವಹಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದೇ ಬಹುತೇಕರ ವಾದ. ಬೆಂಗಳೂರಿನ ಎಲ್ಲ ಶಾಸಕರ ಒಟ್ಟು ಸಾಮಾನ್ಯ ಕಾರ್ಯನಿರ್ವಹಣಾ ಸೂಚಕ 10ರಲ್ಲಿ 5.4 ರಷ್ಟಿದೆ. ಅಂದರೆ 50 ಪ್ರತಿಶತಕ್ಕಿಂತಲೂ ಚೂರು ಹೆಚ್ಚು. ಅತಿ ಹೆಚ್ಚು ಅಂಕ 6.6 ರಷ್ಟಿದ್ದರೆ, ಅತಿ ಕಡಿಮೆ ಅಂಕ 4.8 ರಷ್ಟಿದೆ.
ಟಿ ಒಬ್ಬ ಅಭ್ಯರ್ಥಿಗಿಂತಲೂ, ಜಾತಿ ಮತ್ತು ಪಕ್ಷ ದೊಡ್ಡದು ಎಂಬುದು ಜನರ ಭಾವನೆ. 41 ಪ್ರತಿಶತ ಬೆಂಗಳೂರಿಗರು ಜಾತಿಯೇ ಮುಖ್ಯ ಎಂದರೆ; 18.7 ಪ್ರತಿಶತ ಜನರು ಪಕ್ಷವೇ ದೊಡ್ಡದು ಎನ್ನುತ್ತಾರೆ; ಕೇವಲ 14.5 ಪ್ರತಿಶತ ಮಂದಿ ಮಾತ್ರ ಅಭ್ಯರ್ಥಿಗೇ ಹೆಚ್ಚು ಮನ್ನಣೆ ಕೊಡುತ್ತಾರೆ.
ಟಿ ಬೆಂಗಳೂರಿನ 27 ಎಮ್‌ಎಲ್‌ಎಗಳ ಪೈಕಿ, 4 ಜನ ಇದುವರೆಗೂ ತಮ್ಮ ಆಡಳಿತಾವಧಿಯಲ್ಲಿ ಅಸೆಂಬ್ಲಿಯಲ್ಲಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ; 7 ಜನ ಎಮ್‌ಎಲ್‌ಎಗಳು 10 ಅಥವಾ ಅದಕ್ಕಿಂತ ಕಡಿಮೆ ಪ್ರಶ್ನೆ ಕೇಳಿದ್ದಾರೆ; 8 ಮಂದಿ 10 ಕ್ಕಿಂತಲೂ ಹೆಚ್ಚು ಆದರೆ 100 ಕ್ಕಿಂತ ಕಡಿಮೆ ಪ್ರಶ್ನೆ ಕೇಳಿದ್ದರೆ, ಮೂವರು ಮಾತ್ರ 100 ಕ್ಕಿಂತಲೂ ಹೆಚ್ಚು ಪ್ರಶ್ನೆ ಕೇಳಿದ್ದಾರೆ.     
ಟಿ ಬೆಂಗಳೂರಿಗರನ್ನು ಕಾಡುತ್ತಿರುವ ಆರು ಪ್ರಮುಖ ವಿಚಾರಗಳೆಂದರೆ, 1)ಸಾರ್ವಜನಿಕ ಜಾಗ, ಕೆರೆಗಳು ಮತ್ತು ರಸ್ತೆಗಳ ಅತಿಕ್ರಮಣ 2)ವಲಯದ ಕಟ್ಟುಪಾಡುಗಳು 3) ಉತ್ತಮ ಉದ್ಯೋಗಾವಕಾಶಗಳು 4) ವೃತ್ತಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ 5) ಉತ್ತಮ ಮೂಲಸೌಕರ್ಯಗಳು, ಜೊತೆಗೆ ಪಾರ್ಕು, ಶೌಚಾಲಯ, ಫುಟ್‌ಪಾತ್‌ಗಳ ಅಭಿವೃದ್ಧಿ 6) ಹೆಚ್ಚು ಆಸ್ಪತ್ರೆಗಳು ಮತ್ತು ಹೆಲ್ತ್ ಕೇರ್ ಸೆಂಟರ್‌ಗಳು.
ಟಿ 10.1 ಪ್ರತಿಶತ ಬೆಂಗಳೂರಿಗರು 'ಭ್ರಷ್ಟಾಚಾರ ನಿರ್ಮೂಲನೆಗೇ' ಮೊದಲ ಆದ್ಯತೆ ನೀಡಿದ್ದಾರೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೇವಲ 5 ಪ್ರತಿಶತದಷ್ಟು ಜನ ಮಾತ್ರ ಭ್ರಷ್ಟಾಚಾರ ಪ್ರಮುಖ ಸಮಸ್ಯೆಯೆಂದು ಭಾವಿಸುತ್ತಾರೆ.
ಇನ್ನೊಂದು ಕುತೂಹಲಕರ ವಿಷಯವೂ ಈ ಸಮೀಕ್ಷೆಯಿಂದ ಹೊರಬಿತ್ತು. ಯುವಜನರ ಸಮಸ್ಯೆಗಳ ಬಗೆಗಿನ ಧೋರಣೆ ಮತ್ತು ಅವಶ್ಯಕತೆಗಳು ವೃದ್ಧರಿಗಿಂತ ತುಸು ಭಿನ್ನವಾಗಿಯೇ ಇವೆ.
ಟಿ 18-30 ವಯೋವಾನ: ಕ್ರಮವಾಗಿ- ಸಾರ್ವಜನಿಕ ಜಾಗಗಳ ಅತಿಕ್ರಮಣ, ಹೆಚ್ಚು ಆಸ್ಪತ್ರೆಗಳ ನಿರ್ಮಾಣ, ಉದ್ಯೋಗಾವಕಾಶಗಳು, ವಲಯದ ನಿರ್ವಹಣೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ.
ಟಿ 31-45 ವಯೋವಾನ: ಸಾರ್ವಜನಿಕ ಜಾಗಗಳ ಅತಿಕ್ರಮಣ,  ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ, ವಲಯದ ನಿರ್ವಹಣೆ, ಮೂಲಸೌಕರ್ಯಾಭಿವೃದ್ಧಿ, ಪಾರ್ಕಿಂಗ್ ಸೌಲಭ್ಯ, ಕೆರೆಗಳ ಪುನರುತ್ಥಾನ.
ಟಿ 46-60 ವಯೋವಾನ: ಗಾರ್ಬೇಜ್ ಸ್ವಚ್ಛತೆ, ಮೂಲಸೌಕರ್ಯಾಭಿವೃದ್ಧಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ, ಸ್ವಚ್ಛ ನೀರು ಸರಬರಾಜು, ಕೆರೆಗಳ ಪುನರುತ್ಥಾನ, ಸಾರ್ವಜನಿಕ ಜಾಗಗಳ ಅತಿಕ್ರಮಣ.
ಟಿ 60 ಮೇಲ್ಪಟ್ಟವರು: ವಲಯದ ನಿರ್ವಹಣೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ,  ಸಾರ್ವಜನಿಕ ಜಾಗಗಳ ಅತಿಕ್ರಮಣ, ಮೂಲಸೌಕರ್ಯಾಭಿವೃದ್ಧಿ, ಕೆರೆಗಳ ಪುನರುತ್ಥಾನ, ಸ್ವಚ್ಛ ನೀರು ಸರಬರಾಜು.
ಈ ಸಮೀಕ್ಷೆಯಿಂದ ಯುವಜನತೆ ಸಾರ್ವಜನಿಕ ಜಾಗಗಳ, ಕೆರೆಗಳ ಮತ್ತು ರಸ್ತೆಗಳ ಅತಿಕ್ರಮಣದ ಬಗ್ಗೆ ಹೆಚ್ಚು ಚಿಂತಿತವಾಗಿರುವುದು ತಿಳಿಯುತ್ತದೆ. ಅದು ಅವರ ಬೇಡಿಕೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದಿದೆ. ಅತಿಕ್ರಮಣಕಾರರಿಂದಾಗಿ ದಿನ ದಿನವೂ ಸಂಕುಚಿತವಾಗುತ್ತಿರುವ ಬೆಂಗಳೂರು ಅವರಿಗೆ ಅಸಹನೀಯವಾಗುತ್ತಿದೆ ಎನ್ನುವುದು ಸ್ಪಷ್ಟ.  ಇನ್ನು ವೃದ್ಧರು, ಸ್ವಚ್ಛತೆ, ಟಾಯ್ಲೆಟ್ ಮತ್ತು ಪಾರ್ಕುಗಳ ಅಭಿವೃದ್ಧಿಯ ಬಗೆಗೇ ಹೆಚ್ಚು ಒತ್ತು ಕೊಡುತ್ತಾರೆ ಎನ್ನುವುದು ಸ್ಪಷ್ಟ. ಚುನಾವಣೆಗಳಿಗೆ ಧುಮುಕಲಿರುವ ಅಭ್ಯರ್ಥಿಗಳು ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಲಿ ಎಂದು ಆಶಿಸೋಣ.
ಇನ್ನು ತಮ್ಮ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಎಮ್‌ಎಲ್‌ಎಗಳು ಮಾಡಿರುವ ಕೆಲಸದ ಬಗ್ಗೆ ನೀಡಲಾದ ಅಂಕಗಳ ಬಗ್ಗೆ ಮೇಲೆಯೇ ಪ್ರಸ್ತಾಪಿಸಿದ್ದೇನೆ. ಎಮ್‌ಎಲ್‌ಎಗಳಿಗೆ ಕಾರ್ಯವೈಖರಿಗೆ ಗರಿಷ್ಠ ಮತ್ತು ಕನಿಷ್ಠ ಅಂಕಗಳನ್ನು ನೀಡಿದ ಕ್ಷೇತ್ರಗಳು ಈ ರೀತಿ ಇವೆ: ದಾಸರಹಳ್ಳಿ 6.6, ಶಾಂತಿನಗರ 6.5, ಮಲ್ಲೇಶ್ವರಂ 5.9, ಸರವಣನಗರ 5.7, ಯಲಹಂಕ 5.5 ಮತ್ತು ರಾಜಾಜಿನಗರ 5.5. ಅತಿ ಕಡಿಮೆ ಅಂಕದ ಕ್ಷೇತ್ರಗಳೆಂದರೆ: ಪುಲಕೇಶಿ ನಗರ 5.1, ಬ್ಯಾಟರಾಯನಪುರ 5.1, ಕೆ.ಆರ್.ಪುರಂ 5, ಬೆಂಗಳೂರು ದಕ್ಷಿಣ 4.9, ಚಿಕ್ಕಪೇಟೆ 4.8, ಹೆಬ್ಬಾಳ 4.8.
ಈ ಸಮೀಕ್ಷೆಯ ಮುಖ್ಯ ಉದ್ದೇಶ ಪಕ್ಷಗಳ ಮತ್ತದರ ಪ್ರತಿನಿಧಿಗಳ ಕಾರ್ಯವೈಖರಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವಲ್ಲಿ ಜನತೆಯ ಪಾತ್ರವೇನೆಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವುದು.
ಈ ಸಮೀಕ್ಷೆಯಿಂದ ಹೊರಬಂದ ವಿವಿಧ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ನಿಮಗೆ ಆಸಕ್ತಿಯಿದ್ದರೆ harish@dakshindia.org, kishore@dakshindia.org  ಮತ್ತು nbf@namma-bangaluru.org ಗೆ ಸಂಪರ್ಕಿಸಬಹುದು.
ಕೊನೆಯ ಗುಟುಕು: ಹೀಗೊಂದು ಟ್ವೀಟ್- ಸೇನಾ ಮುಖ್ಯಸ್ಥನ ಶಾಲಾ ಸರ್ಟಿಫಿಕೆಟ್ ಅನ್ನು ತಿರಸ್ಕರಿಸುವ ದೇಶ, ಆತ್ಯಾಚಾರಿಯೊಬ್ಬನ ಶಾಲಾ ಸರ್ಟಿಫಿಕೆಟ್‌ಗೆ ಸಮ್ಮತಿ ಸೂಚಿಸುತ್ತದೆ. ನಮ್ಮ ವ್ಯವಸ್ಥೆಯೇ ವಿಚಿತ್ರವಾಗಿದೆ!


- ಎಚ್.ಎಸ್. ಬಲರಾಮ್
hsbalram@gmail.com


(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org  ಹಾಗೂ  www.suvarnanews.tv/featuresನಲ್ಲಿ ಕನ್ನಡ ಅಂಕಣ ಲಭ್ಯ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!