ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಫ್ಜಲ್ ಸತ್ತರೂ ವಿದ್ರೋಹದ ಮನಸ್ಥಿತಿ ಜೀವಂತ

Rashmi Kasaragodu
Updated On : 12 Feb 2013, 9:04 am

ಅಫ್ಜಲ್ ಗುರುವಿಗೆ ನೇಣುಗಂಬವೇರಿಸಿದ್ದಾಗಿದೆ. ಪ್ರಜಾಪ್ರಭುತ್ವದ ದೇಗುಲದಂತಿರುವ ಸಂಸತ್ ಭವನಕ್ಕೆ  ದಾಳಿ ನಡೆಸಲು ಸಂಚು ರೂಪಿಸಿದ ಪಾಪಿಗೆ ಸರಿಯಾದ ಶಿಕ್ಷೆಯೇ ಆಗಿದೆ. ಆತನ ಅಪೇಕ್ಷೆಯೂ ಅದೇ ಆಗಿತ್ತು. ಆತನೇ ಹೇಳಿರುವಂತೆ 'ಕಾಂಗ್ರೆಸ್‌ನದ್ದು ಯಾವಾಗಲೂ ಇಬ್ಬಗೆ ನೀತಿ. ನನ್ನನ್ನು ನೇಣುಗಂಬವೇರುವುದಕ್ಕೆ ಅವಕಾಶ ಕೊಡುವುದಿಲ್ಲ ಹಾಗಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಡ್ವಾಣಿ ಪ್ರಧಾನಿಯಾದರೆ ಅದು ಸಾಧ್ಯ' ಎಂದು ಜೈಲಿನಲ್ಲಿ ತಾನು ಅನುಭವಿಸುವ ಅಸಹನೀಯ ಬದುಕಿನ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ. ಅದ್ಯಾವ ಕಾರಣವೋ ಅಂತೂ ಕಾಂಗ್ರೆಸ್ ದೊಡ್ಡ ಮನಸ್ಸು ಮಾಡಿದೆ. ಇದರಲ್ಲಿ ಅದ್ಯಾವ ತಂತ್ರವಿದೆಯೋ ಅಂತೂ ಆತನನ್ನು ಯಮಸದನಕ್ಕಂತೂ ಅಟ್ಟಿದ್ದಾಯಿತು. ಆದರೆ ಪ್ರಶ್ನೆ ಅದಲ್ಲ, ಫೆಬ್ರವರಿ 9ರ ಬೆಳಿಗ್ಗೆ ಆತ ನೇಣಿಗೇರಿದ್ದಾಗಿತ್ತು. ಆದರೆ ಮಾಧ್ಯಮದಲ್ಲಿ ಮಾತ್ರ ಕಮ್ಯುನಿಷ್ಟ್ ಚಿಂತನೆಯ ಕೆಲ ವಿಚಾರವಾದಿಗಳಂತೂ ಇದೊಂದು ಅಮಾನವೀಯ ಸಂಗತಿ ಎಂದು ಪ್ರತಿಪಾದನೆ ಮಾಡುವ ಮೂಲಕ ತಮ್ಮ ವಿಚಾರವಾದ ಯಾವ ರಾಷ್ಟ್ರದ ಪರವಾಗಿದೆ, ತಮ್ಮ ಚಿಂತನೆ ಯಾವ ದೇಶಕ್ಕೆ ನೈತಿಕ ಬಲವನ್ನು ಕೊಡುತ್ತದೆ ಎಂಬುದನ್ನು ಸಾಬೀತು ಪಡಿಸಿ ಬಿಟ್ಟರು. ಇದು ಜಿಹಾದಿ ಮಾನಸಿಕತೆಗಿಂತ ಹೆಚ್ಚು ಆಪಾಯಕಾರಿಯಾಗಿದೆ ಎನ್ನುವುದು ಆತಂಕ ತರುವ ಸಂಗತಿಯಾಗಿದೆ.
ಯಾವುದೇ ದೇಶವಿರಲಿ, ಅದರೊಳಗಿನ ಯಾವುದೇ ಪಕ್ಷವಿರಲಿ, ಆ ರಾಷ್ಟ್ರದ ವಿರೋಧಿ ಶಕ್ತಿಗಳಿಗೆ ವಿರೋಧ ವ್ಯಕ್ತಪಡಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ, ಇರಲೂ ಬಾರದು. ಆದರೆ ಭಾರತ ದೇಶದ ವಿಚಾರವಾದಿಗಳು ಮಾತ್ರ ಅದಕ್ಕೆ ವ್ಯತಿರಿಕ್ತ. ಅಫ್ಜಲ್ ಗುರುವಿನ ವಿಚಾರದಲ್ಲಿ ಅವರ ಮುಖವಾಡ ಬಯಲಾಗಿದೆ. ಸುವರ್ಣ ವಾರ್ತಾವಾಹಿನಿಯಲ್ಲಿ ಆಯೋಜಸಿದ್ದ ಚರ್ಚೆಯಲ್ಲಿ ಪಾಲ್ಗೊಂಡ ವಿಚಾರವಾದಿಯೊಬ್ಬರೂ ಸುಪ್ರಿಂ ಕೋರ್ಟನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರು. ಅವರ ದೃಷ್ಟಿಯಲ್ಲಿ ಸಂಸತ್‌ನ ಮೇಲೆ ದಾಳಿ ನಡೆಸಿದ ಅಪರಾಧ ಗೌಣ, ಅದಕ್ಕೆ ಪ್ರತಿಯಾಗಿ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಧೀಶರೇ ನಿಜವಾದ ಅಪರಾಧಿಗಳು ಎಂಬಂತಿತ್ತು.
ಜಾತ್ಯತೀತ, ತತ್ವ-ಸಿದ್ಧಾಂತ, ವಿಚಾರವಾದದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು, ರಾಷ್ಟ್ರರಕ್ಷಣೆ ಅದರ ಗೌರವವದ ರಕ್ಷಣೆಯ ವಿಷಯ ಬಂದಾಗ ಮಾನವತಾವಾದಿಗಳಾಗುತ್ತಾರೆ. ಗಲಭೆ ನಿರತ ಮತಾಂಧರ ಸೊಕ್ಕನ್ನು ಅಡಗಿಸುವ ಬದಲು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದೇ ಅಪರಾಧವೆಂಬಂತೆ, ಕಾಶ್ಮೀರಿ ಯುವಕರಲ್ಲಿ ಅಸಮಾಧಾನದ ಜ್ವಾಲೆ ಭುಗಿಲೇಳುತ್ತದೆ ಎಂದು ಹೇಳುವ ಮೂಲಕ  ಉರಿಯುವ ಗಾಯಕ್ಕೆ ಉಪ್ಪು ಸುರಿಯುತ್ತಾರೆ. ಒಬ್ಬ ಭಯೋತ್ಪಾದಕನ ಸಾವಿಗೆ ಒಂದು ಜನಾಂಗ ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತದೆ ಎಂದು ಹೇಳುವ ಮುಖ್ಯಮಂತ್ರಿ ಒಂದು ರಾಜ್ಯವನ್ನು ಪ್ರತಿನಿದಿಸುತ್ತಾರೆನ್ನುವುದು ಅಪಮಾನದ ಸಂಗತಿ.
ಕಮ್ಯುನಿಷ್ಟ್ ವಿಚಾರವಾದಿಗಳು ಸಿದ್ಧಾಂತದ ಮುಖವಾಡ ತೊಟ್ಟು ಪರೋಕ್ಷವಾಗಿ ಭಯೋತ್ಪಾದಕರ ಸಮರ್ಥ್ಥನೆಗೆ ನಿಲ್ಲುತ್ತಾರೆ. ನ್ಯಾಯಧೀಶರ ತೀರ್ಪು ಸಾಕ್ಷಿಗಳಿಗಿಂತ ಬಹುಸಂಖ್ಯಾತರ ಅಭಿಪ್ರಾಯವನ್ನು ಅನುಸರಿಸಿ ಕೊಟ್ಟಿದ್ದಾಗಿದೆ ಎಂದು ಬೊಬ್ಬಿರಿಯುತ್ತಾರೆ. ನಾವು ಒಂದು ವಿಷಯ ಗಮನಿಸಬೇಕು, ಕೆಲ ತಿಂಗಳ ಹಿಂದೆ ಅಮೆರಿಕದ ಸೇನೆ ಒಸಾಮ ಬಿನ್ ಲಾಡೆನ್‌ನ ಜಾಡನ್ನು ಹುಡುಕಿ ಅವನನ್ನು ಸೇರಬೇಕಾದ ಜಾಗಕ್ಕೆ ಸೇರಿಸಿತು. ಆತನ ಶವವನ್ನು ಆತನ ವಾರಸುದಾರರಿಗೆ ಒಪ್ಪಿಸಿದರೆ ಎಲ್ಲಿ ಆತನನ್ನು ದೈವಾಂಶಸಂಭೂತನಾಗಿ ರೂಪಿಸಿ ಬಿಡಬಹುದೆಂಬ ದೂರಾಲೋಚನೆಯಿಂದ ಒಬಾಮ ಸರ್ಕಾರ ಸಮುದ್ರದ ಮಧ್ಯೆಯೇ ಆತನ ಶವಕ್ಕೊಂದು ಗತಿ ಕಾಣಿಸುವಂತೆ ವ್ಯವಸ್ಥೆ ಮಾಡಿತು.
 ಈ ವಿಚಾರದಲ್ಲಿ ಆ ದೇಶದ ಐಕ್ಯತೆ ಮತ್ತು ಸಮಗ್ರತೆಯ ಹಿನ್ನೆಲೆಯಲ್ಲಿ ಆ ದೇಶದ ಒಬ್ಬ ಸಾಮಾನ್ಯ ವ್ಯಕ್ತಿಯೂ ಸರ್ಕಾರದ ಪರವಾಗಿ ನಿಂತ. ದೇಶಕಂಟಕರ ವಿರುದ್ಧ ಅಲ್ಲಿನ ಎಲ್ಲ ಜನರು ಒಂದಾಗಿ ನಿಂತರು. ಭಾರತದ ಗಣರಾಜ್ಯದ ದೇಗುಲದಂತಿರುವ ಸಂಸತ್ತಿನ ಮೇಲೆ ದಾಳಿ ನಡೆದು ಹನ್ನೊಂದು ವರ್ಷಗಳು ಕಳೆದು ಭಾರತದ ನ್ಯಾಯಾಲಯಗಳ ವಿಚಾರಣೆಯ ಎಲ್ಲ ಹಂತಗಳು ಮುಗಿದು ಸುಪ್ರಿಂಕೋರ್ಟ್ ತೀರ್ಪಿತ್ತ ನಂತರವೂ ಆತನನ್ನು ರಕ್ಷಿಸುವ ಪ್ರಯತ್ನ ನಡೆಯಿತು. ಅನಿವಾರ್ಯವಾಗಿ ಯುಪಿಎ ಸರ್ಕಾರ ಅಫ್ಜಲ್‌ನ ಗಲ್ಲಿಗೇರಿಸಿದೆ ಅದಾದ ಮೇಲೂ ಈ ದೇಶದ ತಥಾಕಥಿಥ ಕಮ್ಯುನಿಷ್ಟ್ ಬುದ್ಧಿಜೀವಿ ಪಡೆ ಅಫ್ಜಲ್ ಪರ ಬ್ಯಾಟಿಂಗ್ ಮಾಡುತ್ತಿರುವುದು ಈ ದೇಶದ ದುರಂತವಲ್ಲದೇ ಮತ್ತೇನು? ಒಬ್ಬ ದೇಶಕಂಟಕ ಆ ದೇಶದ ಒಬ್ಬ ಸಾಮಾನ್ಯ ಪ್ರಜೆಗೂ ಅವನು ಶತ್ರುವೇ ಆಗುತ್ತಾನೆನ್ನುವ ಕಾಮನ್ಸೆನ್ಸ್ ಈ ವಿಚಾರವಾದಿಗಳಿಗೇಕೆ ಅರ್ಥವಾಗುವುದಿಲ್ಲ? ಇವರೇಕೆ ಈ ದೇಶಕ್ಕೆ ಅಪಾಯವಾಗುವ ಸಂಗತಿಗಳಲ್ಲಿ ಮಾನವತೆಯನ್ನು ಹುಡುಕುತ್ತಾರೆ? ಇವರ ವಾದಗಳಲ್ಲಿ ಇವರೇಕೆ ಹಿಂದೂ ಭಯೋತ್ಪಾದನೆ ಎಂಬ ಚಲಾವಣೆಯಲ್ಲಿಲ್ಲದ ವಿಚಾರವನ್ನು ತರುತ್ತಾರೆ?
ಇದನ್ನು ವಿಶ್ಲೇಷಣೆ ಮಾಡಿ ಹೇಳುವುದಾದರೇ ಕಮ್ಯುನಿಷ್ಟ್ ಚಿಂತಕರಿಗೂ ಮುಸ್ಲಿಂ ಜಿಹಾದಿಗಳಿಗೆ ಹಾಗೂ ಮತಾಂತರಗೊಳಿಸುವ ಮಿಷನರಿಗಳಿಗೂ ಗಾಢ ಸ್ನೇಹವಿದೆ ಎನ್ನುವುದು ವೇದ್ಯ. ಭಾರತದಲ್ಲಿ ಹಿಂದುತ್ವದ ಪ್ರಭಾವ ಕಡಿಮೆಯಾದರೆ ಕಮ್ಯುನಿಸಂ ವೇಗವಾಗಿ ಬೆಳೆಯುತ್ತದೆ ಎನ್ನುವ ಭ್ರಮೆ ಕಮ್ಯುನಿಷ್ಟ್ ಚಿಂತಕರದ್ದು. ಹಾಗಾಗಿ ಅವರು ಕಟ್ಟಿಕೊಂಡಿರುವ ಅನೇಕ ಕಟ್ಟು ಕಥೆಗಳಲ್ಲಿ ಹಿಂದೂ ಭಯೋತ್ಪಾದನೆಯೂ ಒಂದು. ಅದಕ್ಕಾಗಿ ಭಯೋತ್ಪಾದನೆ ಎಂದೊಡನೆ ಅವರಿಗೆ ತಕ್ಷಣ ನೆನಪಾಗುವುದೇ  ಹಿಂದು ಕೋಮುವಾದ. ಈ ಬಗ್ಗೆ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅದಕ್ಕಾಗಿ ಅವರು ಮುಸ್ಲಿಂ ಜಿಹಾದಿಗಳನ್ನು, ಭಯೋತ್ಪಾದಕರನ್ನು ಪ್ರೋತ್ಸಾಹಿಸುತ್ತಾರೆ. ಹಿಂದೆ ಸಿಖ್ ತೀವ್ರವಾದಿಗಳು ಸ್ವತಂತ್ರ ಖಲಿಸ್ತಾನಕ್ಕಾಗಿ ಹೋರಾಡಿದರೆ ತಪ್ಪೇನು ಎಂಬ ಹೇಳಿಕೆಯನ್ನು ಕೊಟ್ಟಿದ್ದಿದೆ. 'ಕಾಶ್ಮೀರದ ಯುವಕರಿಗೆ ತಮ್ಮದೇ ಆದ ಆಸೆ-ಆಕಾಂಕ್ಷೆಗಳಿವೆ ಅವುಗಳನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಬಲ ಪ್ರಯೋಗದಿಂದ ಸಮಸ್ಯೆಗೆ ಪರಿಹಾರ ಸಿಗದು' ಎಂಬ ವಾದಸರಣಿ ಮುಂದಿಡುತ್ತಾರೆ. ಕಮ್ಯುನಿಷ್ಟ್ ವಿಚಾರವಾದಿಗಳು ವಿತಂಡವಾದಿಗಳು ಸತ್ಯವನ್ನು ಸುಳ್ಳೆಂದೂ ಸುಳ್ಳನ್ನು ಸತ್ಯವೆಂದು ಸಾಧಿಸುವ ಪ್ರತಿಭಾಸಂಪನ್ನರು. ಅಫ್ಜಲ್ ಗುರುವಿನ ವಿಚಾರದಲ್ಲಿ ಅವರು ಮಂಡಿಸುತ್ತಿದ್ದ ಅವರ ವಿಚಾರಸರಣಿ ತಾವು ಯಾವತ್ತೂ ಈ ದೇಶದ ವಿರುದ್ಧವೇ ಎಂಬುದನ್ನು ಅವರು ಮತ್ತೊಮ್ಮೆ ದೃಢಪಡಿಸಿದ್ದಾರೆ.
ಅಫ್ಜಲ್ ಗುರು ನೇಣುಗಂಬ ಏರಿರುವುದು ವಿಚಾರವಂತಿಕೆಯ ವಾದಸರಣಿಯನ್ನು ಮಂಡಿಸುವ ಬುದ್ಧಿಜೀವಿಗಳಿಗೆ, ಧರ್ಮದ ಹೆಸರಿನಲ್ಲಿ ಆತಂಕವಾದ ನಡೆಸುವ ದೇಶದ್ರೋಹಿಗಳಿಗೆ ಈ ಘಟನೆ ಆಘಾತ ತಂದಿರಬಹುದು. ಆದರೆ ಈ ದೇಶದ ಸಾರ್ವಭೌಮತೆಗೆ ಸಾಕ್ಷಿಯಾಗಿರುವ ಸಂಸತ್ತಿನ ಮೇಲೆ ದಾಳಿ ನಡೆಸಿದಾಗ ಅದರ ರಕ್ಷಣೆಗಾಗಿ ತಮ್ಮ ಪ್ರಾಣಾರ್ಪಣೆ ಗೈದಿರುವ ಹುತಾತ್ಮ ರಕ್ಷಣಾಪಡೆಗಳ ಆತ್ಮಗಳಿಗಂತೂ ಶಾಂತಿ ದೊರೆತಿದೆ. ಇದು ಪ್ರತಿ ಭಾರತಿಯನೂ ಸಂತೋಷ ಪಡಬೇಕಾದ ವಿಷಯ.

- ಡ್ಯಾನಿ ಪಿರೇರಾ
ಶಿಕ್ಷಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement