ಅರುಂಧತಿ ಫಿಕ್ಷನ್ ಪಕ್ಕ ಒಂದಿಷ್ಟು ಫ್ಯಾಕ್ಟ್ಗಳು!
ಸಂಚಿನ ಸಿದ್ಧಾಂತದ ಕತೆಗಳು ಕೇಳುವುದಕ್ಕೆ ಯಾವತ್ತೂ ಚೆಂದ. ಅಫ್ಜಲ್ ಗಲ್ಲಿಗೇರುತ್ತಿದ್ದಂತೆ ಆತ ಕೇವಲ 'ಬಲಿಪಶು' ಎಂಬ ಕತೆಗಳನ್ನು ಮತ್ತೆ ಪಠಿಸಲಾಗುತ್ತಿದೆ. ಆತನನ್ನು ಹಿಂಸೆಗೆ ಒಳಪಡಿಸಿ ತಪ್ಪೊಪ್ಪಿಗೆ ಪಡೆಯಲಾಯಿತು ಎಂದು ಭದ್ರತಾ ವ್ಯವಸ್ಥೆ ಹಾಗೂ ನ್ಯಾಯ ವ್ಯವಸ್ಥೆಗಳೆರಡರ ಮೇಲೂ ಕಾಮೆಂಟ್ ಹೊಡೆಯುವ ಎಂದಿನ ಕಾರ್ಯವನ್ನು ಅರುಂಧತಿ ರಾಯ್, ಪತ್ರಕರ್ತರ ಒಂದು ವರ್ಗ, ಪ್ರತ್ಯೇಕತಾವಾದಿಗಳು ಎಲ್ಲರೂ ಬಡಬಡಿಸಿದ್ದಾರೆ. ಇವರು ದೂರುವ ಇದೇ ನ್ಯಾಯಾಂಗ ವ್ಯವಸ್ಥೆ ಗಿಲಾನಿ, ಅಫ್ಸನ್ರನ್ನು ಬಿಡುಗಡೆ ಮಾಡಿದೆ. ಇಷ್ಟಕ್ಕೂ ಕೇವಲ ತಪ್ಪೊಪ್ಪಿಗೆ ಹೇಳಿಕೆ ಆಧಾರವಾಗಿಟ್ಟುಕೊಂಡು ಅಫ್ಜಲ್ನನ್ನು ಗಲ್ಲಿಗೇರಿಸಲಾಗಿಲ್ಲ. ಉಗ್ರರಿಗೆ ಆತ ಮಾಡಿದ್ದ ಮೊಬೈಲ್ ಕರೆಗಳು, ಅವರೊಂದಿಗೆ ಸಹವಾಸ ಹೊಂದಿದ್ದಕ್ಕೆ ಸಿಕ್ಕ ಸಾಕ್ಷ್ಯಗಳೇ ಪ್ರಮುಖ. ಆದರೆ ತೀರ್ಪಿನಲ್ಲಿ ತಮಗೆ ಬೇಕಾದ್ದನ್ನಷ್ಟೇ ಆರಿಸಿಕೊಂಡು ಕತೆ ಹೆಣೆವವರ ಎದುರು ಅದೇ ಜಡ್ಜ್ಮೆಂಟ್ನಿಂದ ಆಯ್ದ ಕೆಲ ಪ್ರಮುಖಾಂಶಗಳನ್ನು ಹರವಿಡಬೇಕಿದೆ...
ಮೊಬೈಲ್ ಫೋನ್ಗಳಿಗೆ ಸಂಬಂಧಿಸಿದ ವಿವರಗಳ ಬಗ್ಗೆ ತನಿಖೆಯ ನೇತೃತ್ವ ವಹಿಸಿದವರು ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮ. ಫೋನ್ ಕರೆಗಳ ಬಗ್ಗೆ ಮಾಹಿತಿಯನ್ನು ಅವರು ಕಲೆಹಾಕಿದ್ದು ಆಯಾ ಸೇವಾ ಕಂಪೆನಿಗಳಿಂದ.
ಸಂಸತ್ ದಾಳಿ ನಡೆಸಿ, ಗೇಟ್ ನಂಬರ್ 1ರ ಬಳಿ ಪೊಲೀಸರ ಗುಂಡೇಟಿಗೆ ಬಲಿಯಾದ ಮೊಹಮ್ಮದ್ನ ಶವದ ಬಳಿ ದೊರೆತ ಮೊಬೈಲ್ಗೆ ಮತ್ತು ಇನ್ನಿತರ ಉಗ್ರರ ಜೊತೆಗೆ '....9429' ಎಂಬ ಸಂಖ್ಯೆಯಿಂದ ನಿರಂತರವಾಗಿ ಕರೆಗಳು ಬಂದಿದ್ದವು(ಮುಂದೆ ಈ ನಂಬರ್ ಅಫ್ಜಲ್ ಗುರುವಿನದ್ದೆಂದು ತಿಳಿದುಬಂತು). 28.11.2001ರಿಂದ ದಾಳಿಯ ದಿನದವರೆಗೂ ಅಂದರೆ 13.12.2001ರವರೆಗೂ '....9429' ಸಂಖ್ಯೆ ಈ ಉಗ್ರರೊಂದಿಗೆ ಸಂಪರ್ಕದಲ್ಲಿತ್ತು. ಅಲ್ಲದೆ ದಾಳಿ ನಡೆದ ದಿನದಂದು ಬೆಳಗ್ಗೆ 10.40, 11.04 ಮತ್ತು 11.22 ಗಂಟೆಗೆ ಮೊಹಮ್ಮದ್ನ ಮೊಬೈಲ್ಗೆ ಈ ನಂಬರಿನಿಂದ ಮೂರು ಕರೆಗಳು ಬಂದಿದ್ದವು. ಈ ನಂಬರ್ ಆ್ಯಕ್ಟಿವೇಟ್ ಆಗಿದ್ದು 6.11.2001 ರಂದು.
ಕರೆಗಳ ದಾಖಲೆಗಳು ಇನ್ನಷ್ಟು ಬಹಿರಂಗವಾದಾಗ, '....3506' ಎನ್ನುವ ಇನ್ನೊಂದು ಸಂಖ್ಯೆ(4 ನೇ ಆಪಾದಿತೆ ಅಫ್ಸನ್ ಗುರುವಿನಿಂದ ವಶಪಡಿಸಿಕೊಂಡಿದ್ದು. ಇದು ಆಕೆಯ ಪತಿ ಶೌಕತ್ನದಾಗಿತ್ತು ಎನ್ನುವುದು ಮುಂದೆ ತಿಳಿದುಬಂತು) ಅಫ್ಜಲ್ನ ಮೊಬೈಲ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿತ್ತು. ಅಲ್ಲದೆ ಈ ನಂಬರ್ ಕೂಡ ದಾಳಿಗಿಂತಲೂ ಒಂದು ವಾರ ಮುಂಚೆಯಷ್ಟೆ ಆ್ಯಕ್ಟಿವೇಟ್ ಆಗಿದ್ದು ತಿಳಿಯಿತು.
ಶೌಕತ್ನ ಮೊಬೈಲ್ನಿಂದ 12 ಗಂಟೆ 12 ನಿಮಿಷಕ್ಕೆ '....81228' ಎನ್ನುವ ಇನ್ನೊಂದು ಸಂಖ್ಯೆಗೆ ಕರೆ ಹೋಗಿತ್ತು. ಅಲ್ಲದೆ ಈ ಕರೆ ಕೊನೆಗೊಂಡ ಹತ್ತು ನಿಮಿಷದ ಬಳಿಕ '....81228' ಸಂಖ್ಯೆಯಿಂದ ಶೌಕತ್ನ ಮೊಬೈಲ್ಗೆ ಮರುಕರೆ ಹೋಗಿತ್ತು. ಇನ್ನು ಈ ಮೊಬೈಲ್ ಸಂಖ್ಯೆಯಿಂದ ಅಫ್ಜಲ್ಗೂ ಕೂಡ ಕರೆಗಳು ಹೋಗಿದ್ದವು ಎನ್ನುವುದು ತನಿಖೆಯ ನಂತರ ಪತ್ತೆಯಾಯಿತು.
ಉಗ್ರರ ಬಳಿ ದೊರೆತ ಫೋನ್ಗಳು, ಸಿಮ್ಕಾರ್ಡ್ಗಳು ಮತ್ತು ಅವುಗಳ ಬಗ್ಗೆ ಮಾಹಿತಿ ದೊರೆತ ನಂತರ ತನಿಖೆ ಪ್ರಮುಖವಾಗಿ ಹೊರಳಿದ್ದು ಮೂರು ಪ್ರಮುಖ ಸಂಖ್ಯೆಗಳತ್ತ. 1)...9429 2) ...3506 3)...1228 . ಈ ಮೂರು ಫೋನ್ ನಂಬರ್ಗಳು ಕ್ರಮವಾಗಿ ಅಫ್ಜಲ್ ಗುರು, ಶೌಕತ್ ಮತ್ತು ಗಿಲಾನಿಯವರದ್ದೆಂದು ತನಿಖೆಯ ವೇಳೆಯಲ್ಲಿ ತಿಳಿದುಬಂತು!. '....81228' ಎಂಬ ಸಂಖ್ಯೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರಿಗೆ ಸೇರಿದ್ದು ಎಂದು ಏರ್ಟೆಲ್ ಕಂಪನಿ ಸ್ಪಷ್ಟವಾಗಿ ಹೇಳಿತು!
ಗಿಲಾನಿಯ ಫೋನ್ ಕರೆಯ ರೆಕಾರ್ಡಿಂಗ್ಗಳು ನಿಜಕ್ಕೂ ಆಘಾತ ಮೂಡಿಸುವಂತಿವೆ. ದಾಳಿಯ ಬಗ್ಗೆ ನೇರವಾಗಿ ಅವರು ಮಾತನಾಡಿರಲಿಲ್ಲವಾದರೂ, ದೆಹಲಿಯ ವಿಷಯ ಬಂದಾಗ ಸಂಭ್ರಮಪಟ್ಟು ನಕ್ಕಿದ್ದರು. 'ಅಫ್ಜಲ್ ಮತ್ತು ಶೌಕತ್ರ ಪರಿಚಯ ತಮಗೆ ಇತ್ತು ಆದರೆ ಅವರೊಂದಿಗೆ ತಾವು, ತಮ್ಮ ಮನೆಯಲ್ಲಿ ನಡೆದ ಜಗಳದ ಬಗ್ಗೆಯಷ್ಟೇ ಮಾತನಾಡಿದ್ದು ಎಂದು ಗಿಲಾನಿ ವಾದಿಸಿದರು. ಆದರೆ ದೆಹಲಿಯಲ್ಲಿ ಆಗಲಿರುವುದರ ಬಗ್ಗೆ ಅವರಿಗೆ ತಿಳಿದಿತ್ತು ಮತ್ತು ಸಮ್ಮತಿಯೂ ಇತ್ತು ಎನ್ನುವ ಗಂಭೀರ ಅನುಮಾನ ಉದ್ಭವಾಗಿಯೇ ಆಗುತ್ತದೆ. ಆದರೆ ಅನುಮಾನವನ್ನು ಸಾಕ್ಷಿಯೆಂದು ಪರಿಗಣಿಸಲಾಗದು. ಹಾಗಾಗೆ ಸಾಕ್ಷಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಅಲಿ ಶಾ ಗಿಲಾನಿಯವರನ್ನು ನಿರ್ದೋಷಿ ಎಂದು ತೀರ್ಪಿತ್ತಿತು.
ಇನ್ನು ದಾಳಿಯ ಬಗ್ಗೆ ಮಾಹಿತಿ ಇದ್ದರೂ, ಪೊಲೀಸರಿಗೆ ಈ ವಿಷಯ ತಿಳಿಸಲಿಲ್ಲ ಎನ್ನುವ ಕಾರಣದಿಂದಾಗಿ ಶೌಕತ್ನ ಹೆಂಡತಿ ಅಫ್ಸನ್ಳನ್ನು ಬಂಧಿಸಲಾಗಿತ್ತಾದರೂ, ಮುಂದೆ ಆಕೆಯನ್ನೂ ಸಾಕ್ಷಾಧಾರಗಳ ಕೊರತೆಯಿಂದಾಗಿ ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿತು. ಈ ವಿಚಾರದಲ್ಲಿ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸಲೇಬೇಕು.
----------
ಇನ್ನು ಮೃತಪಟ್ಟ ಉಗ್ರ ಮೊಹಮ್ಮದ್ನ ಪರ್ಸ್ನಲ್ಲಿ '...93456' ಮತ್ತು '...5284' ನಂಬರಿನ ಎರಡು ಸಿಮ್ ಕಾರ್ಡ್ಗಳು ಸಿಕ್ಕಿದ್ದವು. 21.11.2001 ರಂದು ಮೊದಲ ಸಂಖ್ಯೆಯಿಂದ('...93456') ದೆಹಲಿಯ ಲ್ಯಾಂಡ್ಲೈನ್ಗೆ ಮೊದಲ ಕರೆ ಹೋಗಿತ್ತು. ಇನ್ನು 24.11.2001ರಂದು ಎರಡನೆಯ ನಂಬರಿಗೆ('...5284') ಮುಂಬೈನಿಂದ ಕರೆಬಂದಿತ್ತು. 2001ರ ನವೆಂಬರ್ ಮೂರನೇ ವಾರದಲ್ಲಿ ದೆಹಲಿಯಲ್ಲಿದ್ದ ಮೊಹಮ್ಮದ್, ಈ ನಂಬರ್ಗಳನ್ನು ಆ್ಯಕ್ಟಿವೇಟ್ ಮಾಡಿದ್ದ. ಕರೆಯ ದಾಖಲೆಗಳಿಂದ ಮತ್ತು ಮೊಹಮ್ಮದ್ ಬಳಸಿದ್ದ ಮೊಬೈಲ್ನ ಐಎಮ್ಇಐ ಸಂಖ್ಯೆ(449269219639010)ಯಿಂದ ತಿಳಿದುಬಂದದ್ದೇನೆಂದರೆ, ಮೊದಲು ಈ ಮೊಬೈಲ್ನಲ್ಲಿ '....9429' ಸಂಖ್ಯೆಯ ಸಿಮ್ ಬಳಕೆಯಾಗಿತ್ತು ಎನ್ನುವುದು. ಮೊದಲೇ ತಿಳಿಸಿದಂತೆ '....9429' ಸಿಮ್ ಅನ್ನು ಬಳಸುತ್ತಿದ್ದವನು ಅಫ್ಜಲ್ ಗುರು! ಹಾಗಾಗೇ ಅಫ್ಜಲ್ ಮತ್ತು ಮೊಹಮ್ಮದ್ ಪರಿಚಿತರಾಗಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಉಗ್ರನ ಶವದ ಬಳಿ ದೊರೆತಿದ್ದ ಲ್ಯಾಪ್ಟಾಪ್ನಿಂದಲೂ ಬಹಳಷ್ಟು ಮಾಹಿತಿಗಳು ಹೊರಬಿದ್ದವು. 21.11.2001ರಂದು 'ರಾಧಿಕಾ.ಬಿಎಂಪಿ' ಎನ್ನುವ ಫೈಲ್ ಅನ್ನು ಅದರಲ್ಲಿ ಸೃಷ್ಟಿಸಲಾಗಿತ್ತು. ಆ ಫೈಲಿನಲ್ಲಿ ಸಂಜಯ್ ಶರ್ಮ ಎನ್ನುವ ವ್ಯಕ್ತಿ ವಾಸಿಸುತ್ತಿದ್ದ ಮನೆಯ ವಿಳಾಸ ಮತ್ತು ಅಫ್ಜಲ್ ಗುರುವಿನ ಮೊಬೈಲ್ ಸಂಖ್ಯೆಯ (....9429) ಉಲ್ಲೇಖವಿತ್ತು. ಈ ಸಂಜಯ್ ಶರ್ಮ ಬೇರೆ ಯಾರೂ ಅಲ್ಲ; ಮೊಹಮ್ಮದ್! ಅಷ್ಟೆ ಅಲ್ಲದೆ ಆ ಲ್ಯಾಪ್ಟಾಪ್ನಲ್ಲಿ ಸೃಷ್ಟಿಸಲಾಗಿದ್ದ ನಕಲಿ ಐಡೆಂಟಿಟಿ ಕಾರ್ಡ್ಗಳೂ ಕೂಡ ಆತನ ಶವದ ಬಳಿ ದೊರೆತವು. ಅಂದರೆ ಉಗ್ರರು ಮೊಬೈಲ್ ನಂಬರ್ಗಳ ಬದಲಾವಣೆಯ ಜೊತೆಯಲ್ಲೇ, ಲ್ಯಾಪ್ಟಾಪ್ನಿಂದ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ದಾಳಿಗಾಗಿ ಸಂಚು ಹಾಕಿದ್ದರು!
ಇನ್ನು 5 ಡಿಸೆಂಬರ್ 2001ರಂದು ಮೊಹಮ್ಮದ್ ದುಬೈಗೆ ಕರೆ ಮಾಡಿದ ಬಗ್ಗೆಯೂ ದಾಖಲೆಗಳು ದೊರೆತವು. ಅದಕ್ಕೂ ಕೂಡ ಆತ ಅಫ್ಜಲ್ ಗುರು ಮುಂಚೆ ಉಪಯೋಗಿಸುತ್ತಿದ್ದ ಮೊಬೈಲನ್ನೇ ಬಳಸಿದ್ದ.
ಅಫ್ಜಲ್ ಗುರುವನ್ನು ವಿಚಾರಣೆಯ ವೇಳೆ ಗುರುತಿಸಿದ ಮೊಬೈಲ್ ಅಂಗಡಿಯ ಮಾಲೀಕ 'ಈ ಮೊಟೋರೋಲಾ ಐ 180(ಐಎಮ್ಇಐ ಸಂಖ್ಯೆ 449269405808650) ಮಾಡೆಲ್ಲಿನ ಫೋನನ್ನು 4.2.2001ರಂದು ಖುದ್ದು ಅಫ್ಜಲ್ ಗುರು ನಮ್ಮ ಅಂಗಡಿಯಲ್ಲಿ ಖರೀದಿಸಿದ್ದ' ಎಂದು ಹೇಳಿದ.
ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಮೊಬೈಲ್ ಫೋನ್ ದೊರೆತದ್ದು ರಾಜಾ ಎನ್ನುವ ಇನ್ನೊಬ್ಬ ಉಗ್ರನ ಶವದ ಬಳಿ. ಕರೆಯ ದಾಖಲೆಗಳನ್ನು ನೋಡಿದಾಗ, ಆ ಮೊಬೈಲನ್ನು ಅಫ್ಜಲ್ 12.12.2001ರ ಮಧ್ಹಾಹ್ನದವರೆಗೂ ಬಳಸಿದ್ದ ಎನ್ನುವುದು ತಿಳಿಯುತ್ತದೆ. ದಾಳಿ ನಡೆದದ್ದು 13.12.2001ರಂದು, ಆದರೆ 12 ನೇ ತಾರೀಖಿನವರೆಗೂ ಅಫ್ಜಲ್ ಆ ಮೊಬೈಲ್ ಬಳಸಿದ್ದ ಅಂದರೆ, ಅದೇ ದಿನದಂದೇ(12.12.2001) ಆತ ಉಗ್ರವಾದಿಗಳನ್ನು ಭೇಟಿಯಾಗಿ ಅವರಿಗೆ ತನ್ನ ಫೋನ್ ಕೊಟ್ಟಿದ್ದ ಎನ್ನುವುದು ಸ್ಪಷ್ಟ. ಮೊಬೈಲ್ ದೊರೆತದ್ದು ರಾಜಾನ ಬಳಿಯೇ ಆದರೂ, ಮೊದಲು ಅದನ್ನು ಬಳಸಿದ್ದು ಮೊಹಮ್ಮದ್ ಎನ್ನುವುದು ಕರೆಯ ದಾಖಲೆಗಳಿಂದ ತಿಳಿದಬಂತು. ಗಮನಿಸಲೇಬೇಕಾದ ವಿಷಯವೆಂದರೆ, ಐಎಮ್ಇಐ 449269405808650 ಸಂಖ್ಯೆಯ ಮೊಟೋರೋಲಾ ಫೋನನ್ನು ಅಫ್ಜಲ್ ಖರೀದಿಸಿದ್ದನಾದರೂ, ಆತ ಅದನ್ನೆಂದೂ ಬಳಸಿರಲಿಲ್ಲ!
10 ಡಿಸೆಂಬರ್ 2001ರಂದು ಅಫ್ಜಲ್ ಗುರುವಿನ ನಂಬರ್ಗೆ ಸ್ಯಾಟಲೈಟ್ ಫೋನೊಂದರಿಂದ ಕರೆ ಬಂದಿತ್ತು. ಈ ಸಂಭಾಷಣೆ ಸುಮಾರು 5 ನಿಮಿಷಗಳ ವರೆಗೆ ನಡೆದಿತ್ತು. ಅದಾದ ಕೆಲವು ನಿಮಿಷಗಳ ಬಳಿಕ ಅದೇ ಸ್ಯಾಟಲೈಟ್ ಫೋನಿನಿಂದ ಮೊಹಮ್ಮದ್ನ ಫೋನಿಗೂ ಕರೆ ಹೋಯಿತು. ಇನ್ನು 12ನೇ ಡಿಸೆಂಬರ್ನಂದು(ದಾಳಿಯ ಹಿಂದಿನ ದಿನ) ಮೊಹಮ್ಮದ್ ರಾಜಾನಿಗೆ ಕರೆ ಮಾಡಿ ಸುಮಾರು 83 ಸೆಕೆಂಡುಗಳವರೆಗೆ ಮಾತನಾಡಿದ್ದ. ಅದಾದ ನಂತರ ಸ್ಯಾಟಲೈಟ್ ಫೋನಿನಿಂದ ಮೊಹಮ್ಮದ್ನ ಮೊಬೈಲಿಗೆ ಕರೆ ಬಂದಿತ್ತು. ಈ ಸಂಭಾಷಣೆ ಸುಮಾರು 11 ನಿಮಿಷಗಳವರೆಗೆ ನಡೆಯಿತು. ಅದೇ ದಿನ ಈ ಸ್ಯಾಟ್ಲೈಟ್ ಫೋನಿನಿಂದ ಎರಡು ಬಾರಿ ರಾಜಾಗೂ ಕರೆ ಬಂದಿತ್ತು.
ಇನ್ನು 13.12.2001ರಂದು, ಅಂದರೆ ಸಂಸತ್ ದಾಳಿಯ ದಿನದಂದು, ಅಫ್ಜಲ್ಗೆ ಮೊಹಮ್ಮದ್ ಮೂರು ಬಾರಿ ಕರೆ ಮಾಡಿದ್ದ(ಮುಂಜಾವಿನ 10.43, 11.08 ಮತ್ತು 11.25 ನಿಮಿಷಕ್ಕೆ). ಇದೇ ಸಮಯದಲ್ಲಿ ಅಫ್ಜಲ್ ಮತ್ತು ಶೌಕತ್ನ ನಡುವೆಯೂ ಸಂಭಾಷಣೆ ನಡೆದಿತ್ತು.
ಇನ್ನು ದಾಖಲೆಗಳ ಪ್ರಕಾರ, '....9429' ಎಂಬ ನಂಬರಿನ ಸಿಮ್ ಕಾರ್ಡ್, ಆ್ಯಕ್ಟಿವೇಟ್ ಆಗಿದ್ದು ನವೆಂಬರ್ 6 ತಾರೀಖಿನಂದು. ಆಗ ಐಎಮ್ಇಐ 449269219639010 ಸಂಖ್ಯೆಯ ಮೊಬೈಲ್ನಲ್ಲಿ ಅದನ್ನು ಬಳಸಲಾಗಿತ್ತು. ದಾಳಿಯವೇಳೆ ಮೃತಪಟ್ಟ ರಾಜಾನ ಶವದ ಬಳಿ ದೊರೆತ ಮೊಬೈಲ್ನ ಐಎಮ್ಇಐ ಸಂಖ್ಯೆ ಕೂಡ ಇದೇ ಆಗಿತ್ತು.
ಕರೆಯ ದಾಖಲೆಗಳು ತೋರಿಸುವಂತೆ ಇದರ ಬಳಕೆದಾರ ನವೆಂಬರ್ 29ರಿಂದ ಡಿಸೆಂಬರ್ 7ರವರೆಗೆ ಇದನ್ನು ರದ್ದಿನಲ್ಲಿ ಇಟ್ಟಿದ್ದ. ಪುನಃ ಡಿಸೆಂಬರ್ 12ಕ್ಕೆ ಅದು ಚಾಲನೆ ಹೊಂದಿತು. ಕೊನೆಯ ಕರೆ ದಾಖಲಾಗಿದ್ದು ಮಧ್ಯಾಹ್ನ 12ಕ್ಕೆ.
ಅದಾದ ನಂತರ ಈ ನಂಬರಿಗೆ ಸಂಬಧಿಸಿದ ಸಿಮ್ಕಾರ್ಡ್ 350102209452430 ನಂಬರಿನ ಹ್ಯಾಂಡ್ಸೆಟ್ನಲ್ಲಿ ಬಳಕೆಯಾಯಿತು. ಶ್ರೀನಗರದ ಟ್ರಕ್ನಲ್ಲಿ ಜಪ್ತಿಯಾಗಿದ್ದು, ಅಫ್ಜಲ್ ಗುರುತಿಸಿರುವುದು ಇದೇ ಹ್ಯಾಂಡ್ಸೆಟ್. ಇದರಿಂದ ದೊರೆಯುವ ಚಿತ್ರಣವೆಂದರೆ: ಇದೇ ಸಾಧನವನ್ನು ಡಿಸೆಂಬರ್ 12, 2001ರವರೆಗೂ ಅಫ್ಜಲ್ ಬಳಸಿದ್ದ. ಕೊನೆಯಲ್ಲಿ ಮೃತನಾದ ಉಗ್ರನ ಬಳಿ ಇದೇ ಸಾಧನ ದೊರೆಯಿತು. ಅಂದರೆ ಅಫ್ಜಲ್ ಈ ಉಗ್ರನನ್ನು ಡಿಸೆಂಬರ್ 12ರ ಮಧ್ಯಾಹ್ನ ಹಾಗೂ ಡಿಸೆಂಬರ್ 13ರ ಬೆಳಗಿನ ಅವಧಿಯ ನಡುವೆ ಭೇಟಿಯಾಗಿದ್ದ ಎಂದಾಯಿತು.
ಟ ಮೃತರಾದ ಉಗ್ರರ ತಲೆಮರೆಸಿಕೊಂಡ ಜಾಗಗಳಿಂದ ವಶಪಡಿಸಿಕೊಂಡ ವಸ್ತುಗಳೂ ಅಫ್ಜಲ್ ಕೃತ್ಯದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತವೆ. ಸ್ಪೋಟಕ ತಯಾರಿಕೆಗೆ ಅನುಕೂಲವಾಗುವ ಅನೇಕ ಸಲಕರಣೆಗಳ ಖರೀದಿ ವೇಳೆ ಉಗ್ರರ (ದಾಳಿ ವೇಳೆ ಮೃತರಾದ) ಜತೆ ಅರ್ಜಿದಾರನೂ ಇದ್ದಿದ್ದು ಅಂಗಡಿಗಳ ಮಾಲಿಕರನ್ನು ವಿಚಾರಣೆಗೊಳಪಡಿಸಿದಾಗ ಖಾತ್ರಿಯಾಗಿದೆ. ಉಗ್ರರು ಎಲ್ಲಿ ತಂಗಿದ್ದರು ಎಂಬ ಬಗ್ಗೆ ಜಾಗದ ಮಾಲಿಕರು ಹಾಗೂ ಅಂಗಡಿ ಮಾಲಿಕರು ನೀಡಿರುವ ಮಾಹಿತಿ ಎವಿಡೆನ್ಸ್ ಆ್ಯಕ್ಟ್ನ ಸೆಕ್ಶನ್ 27 ಅಥವಾ ಸೆಕ್ಶನ್ 8ರ ಅಡಿ ಸ್ವೀಕಾರಾರ್ಹ.