ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತೀರ್ಪಿನ ಬಗ್ಗೆ ಉಡಾಫೆ ಮಾಡುವವರಿಗೇನು ಶಿಕ್ಷೆ?

'ದಯವಿಟ್ಟು ಕ್ಷಮಿಸಿ ದೇಶದ್ರೋಹಿಯೊಬ್ಬನನ್ನು ಗಲ್ಲಿಗೇರಿಸುತ್ತಿದ್ದೇವೆ' ಅನ್ನಬೇಕಿತ್ತೇನೋ? ಪಾಕಿಸ್ತಾನಿ ಉಗ್ರವಾದಿ ಸಂಘಟನೆಗಳಾದ ...

Rashmi Kasaragodu
Updated On : 13 Feb 2013, 11:50 am

'ದಯವಿಟ್ಟು ಕ್ಷಮಿಸಿ ದೇಶದ್ರೋಹಿಯೊಬ್ಬನನ್ನು ಗಲ್ಲಿಗೇರಿಸುತ್ತಿದ್ದೇವೆ' ಅನ್ನಬೇಕಿತ್ತೇನೋ?
ಪಾಕಿಸ್ತಾನಿ ಉಗ್ರವಾದಿ ಸಂಘಟನೆಗಳಾದ ಲಷ್ಕರ್ ಎ ತೋಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರವಾದಿಗಳು ಭಾರತದ ಅತ್ಯಂತ ಪ್ರಮುಖ ಕಟ್ಟಡವಾದ ಸಂಸತ್ ಭವನದ  ಮೇಲೆ ದಾಳಿ ಮಾಡಿ ಹನ್ನೆರಡು ವರ್ಷಗಳೇ ಕಳೆದು ಹೋದವು. ಅಂದು ಆ ಉಗ್ರರ ಹೋರಾಟದಲ್ಲಿ ಸತ್ತವರ ಸಂಖ್ಯೆ ಒಂಬತ್ತು ಜನ ಮತ್ತು 18 ಕ್ಕಿಂತ ಹೆಚ್ಚು ಜನ ಗಾಯಗೊಂಡರು. ಹಾಡುಹಗಲೇ ದೇಶದ ಭದ್ರತೆಗೆ ಸವಾಲೊಡ್ಡಿದ ಉಗ್ರವಾದಿಗಳು ಭಾರತದ ಪ್ರಮುಖ ನಾಯಕರನ್ನೆಲ್ಲ ಮುಗಿಸಬೇಕೆನ್ನುವ ಪ್ರಯತ್ನ ವಿಫಲಗೊಂಡಿತ್ತು.  ಈ ದಾಳಿಯ ರೂವಾರಿ ಹಾಗು ಪ್ರಮುಖ ಸದಸ್ಯನೇ ಈ ಅಫ್ಜಲ್ ಗುರು. (ಅದ್ಯಾವ ಪುಣ್ಯಕ್ಕೆ ಇವನ ಹೆಸರಿನಲ್ಲಿ ಈ ಗುರು ಪದ ಸೇರಿತೋ). ಮೊನ್ನೆ ಶನಿವಾರ ಬೆಳ್ಳಂಬೆಳಗ್ಗೆ ಅಂದರೆ 9ನೇ ತಾರೀಖಿಗೆ ಇಡೀ ದೇಶವೇ ಸಂಭ್ರಮ ಪಡುವಂಥ ಅಫ್ಜಲ್ ನೇಣಿನ ಖುಷಿ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಿದವು.  ಇದರ ಬೆನ್ನಲ್ಲೇ ಈ ರಾಷ್ಟ್ರ ವಿರೋಧಿ ಆಫ್ಜಲನ ಹಿತೈಷಿಗಳು ಬೀದಿಗಿಳಿದು ಉಗ್ರ ಹೋರಾಟಕ್ಕಿಳಿದರು. ಅಂದರೆ ದೇಶದ್ರೋಹಿಯನ್ನು ಶಿಕ್ಷಿಸುವುದಕ್ಕೂ ಇವರ ಪರವಾನಗಿ ಪಡೆದುಕೊಳ್ಳಬೇಕಿತ್ತೇ?
ಅಂದು ಈ ಉಗ್ರವಾದಿಗಳನ್ನು ತಡೆಯುವುದರಲ್ಲಿ ನಮ್ಮ ಭದ್ರತಾ ಪಡೆಗಳೇನಾದರು ಸ್ವಲ್ಪ ಹಿಂಜರಿದಿದ್ದರೆ ಅಥವಾ ವಿಫಲಗೊಂಡಿದ್ದರೆ, ಪ್ರಪಂಚದಲ್ಲೇ ಮೊದಲ ಬಾರಿಗೆ ಒಂದು ದೊಡ್ಡ ಅನಾಹುತವೇ ಆಗಿ ಹೋಗಿರುತಿತ್ತು. ನಮ್ಮ ಆಗಿನ ಉಪರಾಷ್ಟ್ರಪತಿ ಕೃಷ್ಣಕಾಂತ್ ಅವರು ಸಹ ಕೂದಲೆಳೆಯಲ್ಲಿ ಪಾರಾಗಿದ್ದರು.
ಅಫ್ಜಲ್ನ ಗಲ್ಲು ತಡವಾದರೂ ಪರವಾಗಿಲ್ಲ ಒಂದು ದಿಟ್ಟ ಹೆಜ್ಜೆಯೆಂದು ಇಡೀ ದೇಶವೇ ಸಂಭ್ರಮಿಸುವುದರಲ್ಲಿ ತೊಡಗಿತ್ತು. ಮತ್ತೊಂಡದೆ ದೇಶದ್ರೋಹಿಗಳ ದೊಡ್ಡ ಗುಂಪೊಂದು ಅಫ್ಜಲ್ನನ್ನು ಗಲ್ಲಿಗೇರಿಸಿದ್ದು ಸರಿಯಲ್ಲ ಎನ್ನುತ್ತಾ ರಾಷ್ಟೀಯ ಮಾಧ್ಯಮಗಳ ಮುಂದೆ ಕುಳಿತು ಹರಟುತ್ತಿದ್ದರು. ನಮ್ಮ ಕನ್ನಡ ಮಾಧ್ಯಮದ ಮುಂದೆಯೂ ಇಂಥಹ ಒಬ್ಬ ಪುಣ್ಯಾತ್ಮ ಇಡೀ ದಿನ ಇದನ್ನೇ ಊದಿದ. ಕಾಶ್ಮೀರದ ಪ್ರತ್ಯೇಕತಾವಾದಿಗಳಷ್ಟೇ ಅಲ್ಲದೆ ಪ್ರಮುಖ ವಿರೋಧ ಪಕ್ಷವಾದ ಪಿಡಿಪಿ ಯಂಥಹ ಪಕ್ಷವು ರಸ್ತೆಗಿಳಿದು ಕಳೆದ ನಾಲ್ಕು ದಿನಗಳಿಂದ ಇಡೀ ಕಾಶ್ಮೀರ ಕಣಿವೆಯನ್ನೇ ಕದಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕಾಶ್ಮೀರ ಉಗ್ರರೂಪ ಪಡೆದುಕೊಂಡಿದೆ. ದೂರವಾಣಿ, ದೂರದರ್ಶನ ಹಾಗು ಎಸ್ಎಂಎಸ್ ಸಂಪರ್ಕ ನಿಲ್ಲಿಸಿದರೂ ಪ್ರತಿಭಟನೆಗಳು ಇನ್ನೂ ನಿಂತಿಲ್ಲ. ಕರ್ಫ್ಯೂ ಇನ್ನೂ ಮುಂದುವರೆದಿದೆ. ಇದಲ್ಲದೆ ದೆಹಲಿಯಲ್ಲಿ, ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ, ದೂರದ ಹೈದರಾಬಾದಿನಲ್ಲಿ ಶಹೀದ್(!) ಅಫ್ಜಲ್ನ ಗಲ್ಲಿಗೇರಿಸಿರುವುದರ ವಿರುದ್ಧ ಕೆಲವು ಜನ ಬೀದಿಗಿಳಿದಿದ್ದಾರೆ.
ಒಬ್ಬ ಉಗ್ರವಾದಿಯನ್ನು ಗಲ್ಲಿಗೇರಿಸಿರುವುದನ್ನು ವಿರೋಧಿಸುವ ದೊಡ್ಡ ಪಡೆಯೊಂದನ್ನು ನೋಡಿದರೆ ನಾಚಿಕೆಯೆನ್ನಿಸುತ್ತದೆ. ಅಷ್ಟಕ್ಕೂ ಯಾರೋ ಉಗ್ರವಾದಿಗಳ ಕೈಯಲ್ಲಿ ಸಿಕ್ಕ ಅಮಾಯಕನಲ್ಲ ಈ ಅಫ್ಜಲ್ ಗುರು. ವಿದ್ಯಾವಂತನಾಗಿದ್ದು ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳುವಷ್ಟು ಚಾಣಾಕ್ಷ್ಯನಾಗಿದ್ದ.
ಸ್ವತಂತ್ರ ಕಾಶ್ಮೀರದ ಹೋರಾಟದ ಹುಚ್ಚಿನಲ್ಲೋ(!) ಅಥವಾ ಭಯೋತ್ಪಾದನೆಯ ಉಗಮ ಸ್ಥಾನವಾದ ಪಾಕಿಸ್ತಾನದ ಕುತಂತ್ರದಿಂದಲೋ, 13ನೇ ಡಿಸೆಂಬರ್ 2001ಕ್ಕೆ ದೇಶದ ಇಡೀ ರಾಜಕೀಯ ನಾಯಕರ ಸಮುದಾಯವನ್ನೇ ಮುಗಿಸುವ ಹೀನಾಯ ಕೃತ್ಯಕ್ಕೆ ಕೈ ಹಾಕಿತ್ತು ಅಫ್ಜಲನ ಈ ತಂಡ. ಅಂದು ಹುತಾತ್ಮಳಾದ ಸಿಆರ್ಪಿಎಫ್ನ ಕಮಲೇಶ್ ಕುಮಾರಿ ಮೊದಲು ನೋಡಿದ್ದು ಬಿಳಿ ಅಂಬಾಸಿಡರ್ನಲ್ಲಿ ಕುಳಿತಿದ್ದ ಈ ಉಗ್ರವಾದಿಗಳನ್ನು.  ನೋಡಿದ ತಕ್ಷಣವೆ ಗೇಟ್ ಮುಚ್ಚಲು ಮುಂದಾದಾಗ ಗುಂಡುಗಳು ಅವಳ ದೇಹವನ್ನು ನುಗ್ಗಿದ್ದವು. ಕಮಲೇಶ್ ಕುಮಾರಿಯೇನೋ ಅಂದು ಜೀವ ತೊರೆದರು. ಆದರೆ ಅವರ ಈ ದಿಟ್ಟ ಹೆಜ್ಜೆಯಿಂದ ಇಡಿ ಕುತಂತ್ರವೇ ಯಶಸ್ಸು ಕಾಣದಂತಾಯಿತು. ನಮ್ಮ ಸರ್ಕಾರ ಅವರಿಗೆ 2002ರಲ್ಲಿಯೇ ಅಶೋಕ ಚಕ್ರ ಕೊಟ್ಟಿತು. ಆದರೆ ಅವರ ಸಾವಿಗೆ ನಿಜವಾದ ನ್ಯಾಯ ದೊರಕಿದ್ದು ಮೊನ್ನೆ ಶನಿವಾರ ಅಫ್ಜಲ್ನ ಗಲ್ಲಿಗೇರಿಸಿದ ಕ್ಷಣಕ್ಕೆ.
ಈ ಪ್ರಕರಣದ ಹಿಂದೆ ಕಾಂಗ್ರೆಸ್ಸು ತನ್ನ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಲು ಯತ್ನಿಸುತ್ತಿದೆ. 2014ರ ಚುನಾವಣೆಯ ಪೂರ್ವ ಸಿದ್ಧತೆಯಾಗಿ ಮೊದಲು ಕಸಬ್ನನ್ನು ಈಗ ಅಫ್ಜಲ್ನನ್ನು ಗಲ್ಲಿಗೇರಿಸಿದೆ. ನರೇಂದ್ರ ಮೋದಿಯ ಭಯದಿಂದ ಯುಪಿಎ ಸರ್ಕಾರ ಈ ದಿಟ್ಟ ಹೆಜ್ಜೆ ತೆಗೆದುಕೊಂಡಿದೆ. ಪ್ರಣಬ್ ಮುಖರ್ಜಿಯವರೇ ಈ ಒಳ್ಳೆಯ ಬೆಳವಣಿಗೆಗೆ ಕಾರಣ ಎಂಬ ಮಾತುಗಳು ಕೇಳಿಬಂತು. ಅದೇನೇ ಇದ್ದರೂ ಯಾವುದೇ ದೇಶಭಕ್ತನಿಗೆ ಇದೊಂದು ಖುಷಿ ಸುದ್ದಿ. ಇದನ್ನು ಸಂಭ್ರಮಿಸುವುದು ಬಿಟ್ಟು ಬಹಿರಂಗವಾಗಿ ವಿರೋಧಿಸುವವರ ದೊಡ್ಡ ಪಡೆಯೇ ಇದೆಯೆಂದರೆ ಇದೊಂದು ಆಘಾತಕರ ಬೆಳವಣಿಗೆಯೇ.
ಡಿಸೆಂಬರ್13 ದೇಶದ ಭದ್ರತಾ ವ್ಯವಸ್ಥೆಗೆ ಒಂದು ಕಪ್ಪು ದಿನ ಎಂದು ಇಡೀ ದೇಶವೇ ನೊಂದುಕೊಳ್ಳುತ್ತಿದ್ದರೆ, ಅಂದಿನ ಆ ಉಗ್ರರ ಆಕ್ರಮಣದಲ್ಲಿ ಹುತಾತ್ಮರಾದವರ ಬಗ್ಗೆ ದೇಶ ಮರುಗುತ್ತಿದ್ದರೆ ಕಾಂಗ್ರೆಸ್ಸಿನ ಮಣಿ ಶಂಕರ್ ಅಯ್ಯರ್ ಅವರು ಅಫ್ಜಲ್ನ ನೇಣಿನ ಸುದ್ದಿ ತುಂಬಾ ನೋವು ತಂದಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳುವಷ್ಟು ನಾಚಿಕೆ ಬಿಟ್ಟಿದ್ದಾರಲ್ಲ? ದೇಶದ ಗಡಿ ಕಾಯುವ ಸೈನಿಕರಿಗೆ, ದೇಶದ ಭದ್ರತೆ ಕಾಪಾಡುವ ಪೊಲೀಸರು ಅನುಭವಿಸುವ ನೋವಿಗೂ ಇವರ ಅಂತಃಕರಣ ತುಸು ಕಲಕಲಿ.  
ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ಮುಕ್ತ ಅಭಿಪ್ರಾಯ ಬರೆಯುವರ ವಿರುದ್ಧ, ಅನ್ಯಾಯದ ವಿರುದ್ಧ ಮೊಂಬತ್ತಿ ಪ್ರದರ್ಶನಗಳ ಮಾಡುವವರ ವಿರುದ್ಧ, ಭ್ರಷ್ಟಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುವವರ ವಿರುದ್ಧ, ಕಪ್ಪು ಹಣ ವಾಪಾಸ್ ತರಬೇಕೆಂದು ಹೋರಾಡುವವರ ವಿರುದ್ಧ ಸಣ್ಣ ಸಣ್ಣ ನೆಪವೊಡ್ಡಿ ಕೇಸ್ ಜಡಿದು ಲಾಠಿ ಚಾರ್ಜ್ ಮಾಡುವ ನಮ್ಮ ಪೊಲೀಸರು- ಇವರೆಲ್ಲರು ಶಾಂತಿ ಕದಡುತಿದ್ದಾರೆ ಎಂದು ಸಮರ್ಥಿಸಿಕೊಳ್ಳುವ ನಮ್ಮ ನಾಯಕರು, ದೇಶದ ಭದ್ರತೆಗೆ ಸವಾಲೊಡ್ಡಿದ ಈ ಅಫ್ಜಲ್ನ ಗಲ್ಲಿಗೇರಿಸಿರುವುದರ ವಿರುದ್ಧ ದೆಹಲಿಯಲ್ಲಿ, ಅಲಿಗರ್ನಲ್ಲಿ, ಹೈದರಾಬಾದಿನಲ್ಲಿ ರಸ್ತೆಗಿಳಿದು ಹಗಲು ರಾತ್ರಿ ಹೋರಾಟ ನಡೆಸುತ್ತಿರುವ ಈ ಯುವಕರನ್ನು ಬಂಧಿಸಬೇಕಲ್ಲವೇ?  ಈ ಉಗ್ರವಾದಿಯನ್ನು ಶಹೀದ್ ಎಂದು ಪಟ್ಟ ಕಟ್ಟುತ್ತಿರುವವರ ವಿರುದ್ಧವೇಕೆ ನಮ್ಮ ಪೋಲೀಸರ ಹಾಗು ಸರ್ಕಾರದ ಜಾಣ ಕುರುಡು?  ಅಷ್ಟಕ್ಕೂ ಅವರ ಘೋಷಣೆಗಳು ದೇಶದ ವಿರುದ್ಧ ಹಾಗು ಪ್ರಜಾಪ್ರಭುತ್ವದ ವಿರುದ್ಧ ಇರುವುದು ನೋಡಿದರೆ ನಮ್ಮ ಪೊಲೀಸರು ಹೀಗೇಕೆ ಅನ್ನುವ ಪ್ರಶ್ನೆ ಕಾಡುತ್ತದೆ.
ಅಷ್ಟಕ್ಕೂ ಅಫ್ಜಲ್ನ ವಿಷಯದಲ್ಲಿ ನಮ್ಮ ಸರ್ಕಾರ ಹಾಗು ನ್ಯಾಯಾಲಯ ಹಿಂದೂ ಮುಂದು ನೋಡದೆ ಯಾವುದೇ ಕ್ರಮ ತೆಗೆದುಕೊಕೊಂಡಿಲ್ಲ. ಆ ದಿನ ಅವನ ದೂರವಾಣಿಗೆ ಉಗ್ರರಿಂದ ದಾಳಿ ನಡೆಯುವ ಸಮಯದಲ್ಲಿ ಬಂದ ಕರೆಗಳು, ಹೇಳಿಕೆ, ಸಾಕ್ಷ್ಯಾಧಾರ ಪರಿಗಣನೆ, ಹೈ ಕೋರ್ಟ್, ಸುಪ್ರೀಂ ಕೋರ್ಟ್, ರಾಷ್ಟ್ರಪತಿಗಳ ವಿವೇಚನೆಗಳ ನಂತರ ಸಹಮತದಿಂದ ಅಫ್ಜಲ್ನನ್ನು ಗಲ್ಲಿಗೇರಿಸಬೇಕು ಎಂದು ತೀರ್ಮಾನಿಸಲಾಯಿತು. ಅವನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೂ ಸಹ ನಮ್ಮಲ್ಲಿ ಕೆಲವು ರಾಜಕೀಯ ನಾಯಕರು, ವಿಚಾರವಾದಿಗಳು, ಕಮ್ಯುನಿಸ್ಟರು, ಮಾನವ ಹಕ್ಕು ಹೋರಾಟಗಾರರು, ಚಿಂತಕರು ಇದು ಅಫ್ಜಲ್ನಿಗೆ ಆದ ಅನ್ಯಾಯವೆಂದು ಗಂಟೆಗಟ್ಟಲೆ ವಾದ ಮಾಡುತ್ತಿದ್ದರಲ್ಲ? ಇವರೆಲ್ಲ ಮಹಾನ್ ದೇಶ ಪ್ರೇಮಿಗಳೇ? ಸರ್ವೋಚ್ಚ ನ್ಯಾಯಾಲಯ ಹಾಗೂ ರಾಷ್ಟ್ರಪತಿಗಳ ತೀರ್ಮಾನದ ವಿರುದ್ಧ ಮಾತನಾಡುವವರ ಮೇಲೆ ಕ್ರಮಕೈಗೊಳ್ಳದೆ ಇರುವುದು ರಾಜಕೀಯವಲ್ಲವೆಂದರೆ ನಂಬುವುದಾದರೂ ಹೇಗೆ? ಯುಪಿಎ ಸರ್ಕಾರ ದೇಶದ್ರೋಹಿಗಳನ್ನು ಎಂದೂ ಕ್ಷಮಿಸುವುದಿಲ್ಲ ಇದರಲ್ಲಿ ಯಾವುದೇ ರಾಜಕೀಯ ಗುರಿ ಇಲ್ಲ ಎಂದು ಒಂದೆಡೆ ನಮ್ಮ ಗೃಹ ಮಂತ್ರಿಗಳು ಹೇಳಿಕೊಳ್ಳುತ್ತಿದ್ದರೆ, ಅದೇ ಯುಪಿಎ ಸರ್ಕಾರದ ಅವರ ಸಹೋದ್ಯೋಗಿ ಮಣಿಶಂಕರ್ ಅಯ್ಯರ್ ಅಂತಹವರು ಅಥವಾ ಒಮರ್ ಅಬ್ದುಲ್ಲಾರಂಥವರು ಇದು ಅಫ್ಜಲ್ ಮತ್ತು ಕಾಶ್ಮೀರದ ಮೇಲೆ ಆಗಿರುವ ಅನ್ಯಾಯ ಎಂದಾಗ ಸುಮ್ಮನಿರುವುದಾದರು ಏಕೆ?

 - ಅನಿಲ್ ಚಳಗೇರಿ
anil.chalageri@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement