ಅಂಕಣಗಳು

ಇವರ ಧರ್ಮದಲ್ಲಿ ಆಕೆಗೆ ಧ್ವನಿಯೆಲ್ಲಿ?

ಇದೊಂದು ಮೌನ. ಇದೊಂದು ಸಂಕೀರ್ಣತೆ. ಅಸೌಖ್ಯವಾಗುತ್ತಿದೆಯಾದರೂ ಚೀರಿ ಹೇಳುವವರ್ಯಾರಿಲ್ಲ. ಕೆಲ ನಂಬಿಗಸ್ಥರಿಗೆ ಸಂಬಂಧಿಸಿದ ವಿಷಯ ಇದಾದ್ದರಿಂದ ಅಳುಕು, ಆತ್ಮವಿಶ್ವಾಸದ ಕೊರತೆ ಹಾಗೂ ಅನಿಶ್ಚಿತತೆ.
ಭಾರತ ಉಪಖಂಡದ ಸಂಸ್ಕೃತಿಯು ಜಗತ್ತಿನ ಹಳೆಯ ಧರ್ಮಗಳ ಸ್ಫೂರ್ತಿಯಿಂದ ಉದ್ದೀಪಿತಗೊಂಡಿದೆ. ಹಿಂದು ಧರ್ಮ ಪ್ರಾರಂಭದಲ್ಲಿ ಹಾಗೂ ಇಸ್ಲಾಂ ಕೊನೆಯಲ್ಲಿ. ಧರ್ಮಗಳೂ ಸಾಮಾಜಿಕ ಕ್ರಾಂತಿಗಳ ರೂಪದಲ್ಲಿ ಹುಟ್ಟಿಕೊಳ್ಳುತ್ತವೆ. ಆ ಕಾಲಕ್ಕೆ ಬೀಡುಬಿಟ್ಟ ಅಸಮಾನತೆಯನ್ನು ಹೊಗಲಾಡಿಸುವುದೇ ಇದರ ಉದ್ದೇಶವಾಗಿರುತ್ತದೆ. ಪ್ರವಾದಿಗಳ ಧ್ವನಿಯಲ್ಲಿ ಹಾಗೂ ಸಂತರ ಪ್ರವಚನಗಳಲ್ಲಿ ಧರ್ಮವು ಸ್ಫೂರ್ತಿದಾಯಕವಾಗಿರುತ್ತದೆ. ಆದರೆ ಶತಮಾನಗಳು ಸವೆದ ನಂತರ ಸ್ವಯಂಘೋಷಿತ ಧರ್ಮ ರಕ್ಷಕರಿಂದ ಇದು ಯಾವ ರೂಪಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಮಾತ್ರ ಬೇರೆಯದೇ ಆದ ಚರ್ಚೆಯ ವಿಷಯ.
ಜನವರಿ 2ರಂದು ಪ್ರಕಟವಾದ ವರದಿಯೊಂದು ಇಂಥ ಆಯಾಮದತ್ತ ಬೆಳಕು ಚೆಲ್ಲಿದೆ. ವ್ಯಾಖ್ಯಾನವೊಂದನ್ನು ಆವರಿಸಿಕೊಂಡಿರುವ ಹಲವು ಪದರಗಳಿಂದ ನಾವು ಕಣ್ಣು ಕಟ್ಟಿದವರಂತಾಗುತ್ತೇವೆ ಎಂಬುದನ್ನು ಇದು ಜಾಹೀರುಗೊಳಿಸಿದೆ. ಕಾಮಿನಿ ಲಾ ಎಂಬ ಹೆಚ್ಚುವರಿ ಸೆಷನ್ ಜಡ್ಜ್, ಮೌಲ್ವಿ ಮುಸ್ತಫಾ ರಜಾ ಎಂಬ ವ್ಯಕ್ತಿಗೆ ಜಾಮೀನು ನಿರಾಕರಿಸಿದರು. ಅಕ್ರಮವಾಗಿ ವಿವಾಹ ಮಾಡಿಕೊಟ್ಟ ಆರೋಪ ಮೌಲ್ವಿ ಮೇಲಿತ್ತು. ಅದಾಗಲೇ ಮದುವೆಯಾಗಿದ್ದ ನದೀಮ್ ಖಾನ್ ಎಂಬಾತನಿಗೆ ಆತ ಅಪಹರಿಸಿ ತಂದ ಹುಡುಗಿ ಜತೆ ನಿಖಾ ನೆರವೇರಿಸಿಕೊಟ್ಟಿದ್ದ ತಪ್ಪಿನ ಆರೋಪ ಮೌಲ್ವಿ ಮುಸ್ತಫಾ ಮೇಲಿದೆ. ಆ ವಿವಾಹಕ್ಕೆ ಹುಡುಗಿಯ ಒಪ್ಪಿಗೆ ಇರಲಿಲ್ಲ. ಅಲ್ಲದೇ ಹುಡುಗಿಯ ಪೋಷಕರ ಸಮಕ್ಷಮದಲ್ಲಿ ಮದುವೆ ನಡೆದಿರಲಿಲ್ಲ. ಮುಸ್ಲಿಮರು ನಾಲ್ಕು ಮದುವೆಯಾಗಬಹುದು ಎಂಬುದು ಮೌಲ್ವಿ ಮುಂದಿಟ್ಟ ವಾದ. ಆಗ ನ್ಯಾಯಾಧೀಶೆ ಕಾಮಿನಿ ಲಾ, 'ಕೆಲ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿಕೊಂಡಾಗ ಇಸ್ಲಾಂ ಬಹುಪತ್ನಿತ್ವಕ್ಕೆ ಅವಕಾಶ ಮಾಡಿಕೊಡುತ್ತದೆಯಾದರೂ ಅದನ್ನೇ ಉತ್ತೇಜಿಸುವುದಿಲ್ಲ' ಎಂಬ ಅಂಶವನ್ನು ಟಿಪ್ಪಣಿ ಮಾಡಿದರು. ಅಲ್ಲದೇ ಹುಡುಗಿಯ ಒಪ್ಪಿಗೆ ಇಲ್ಲದೇ ಯಾವುದೇ ನಿಖಾವನ್ನು ಕ್ರಮಬದ್ಧ ಎಂದು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ ಎಂದವರು ಸಾರಿದರು. ಮುಸ್ಲಿಂ ರಾಷ್ಟ್ರಗಳಾದ ಟರ್ಕಿ ಹಾಗೂ ಟ್ಯುನಿಷಿಯಾಗಳು ಬಹುಪತ್ನಿತ್ವ ಕಾನೂನಿಗೆ ವಿರುದ್ಧ ಎಂದು ನಿರ್ಣಯಿಸಿರುವುದನ್ನೂ ನ್ಯಾಯಾಧೀಶೆ ಉಲ್ಲೇಖಿಸಿದರು. ಅವರು ಇನ್ನೂ ಒಂದು ಅಂಶವನ್ನೂ ಉಲ್ಲೇಖಿಸಬಹುದಿತ್ತು. ಇಸ್ಲಾಮಿಸ್ಟ್ ಎಂದು ಕರೆಸಿಕೊಳ್ಳುತ್ತಿರುವ ಪ್ರಸ್ತುತದ ಟರ್ಕಿ ಸರ್ಕಾರವು ವಿವಾಹ ವ್ಯವಸ್ಥೆಯ ಒಳಗೂ ಸಮ್ಮತಿಯಿಲ್ಲದೇ ಬಲಾತ್ಕಾರ ನಡೆಸುವುದನ್ನು ಅಪರಾಧ ಎಂದು ಪರಿಗಣಿಸಿರುವುದಲ್ಲದೇ ಮರ್ಯಾದಾ ಹತ್ಯೆಗಳಿಗೆ ಜೀವಾವಧಿ ಶಿಕ್ಷೆಯನ್ನು ಜಾರಿಗೊಳಿಸಿದೆ.
ನ್ಯಾಯಾಧೀಶೆ ಕಾಮಿನಿ ಲಾ ಅವರು ನ್ಯಾಯ ತೀರ್ಮಾನದಲ್ಲಿ ಚೂರೂ ಹಿಂಜರಿಕೆ ತೋರಲಿಲ್ಲ. ನದೀಮ್ ಖಾನ್ ಆ ಹುಡುಗಿಯ ಮೇಲೆ ಎಸಗಿರುವುದು ಅತ್ಯಾಚಾರ ಹಾಗೂ ಮೌಲ್ವಿ ರಜಾ ಈ ಅಪರಾಧದಲ್ಲಿ ಸಹಾಯಕ ಎಂಬ ಸ್ಪಷ್ಟ ತೀರ್ಮಾನ ಅವರದ್ದಾಗಿತ್ತು. ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತವರು ಹೆಣ್ಣಾಗಿದ್ದರಿಂದಲೇ ಇಂಥ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಧ್ಯವಾಯಿತೇನೋ?
ಧರ್ಮಗಳ ನಡುವೆ ವ್ಯತ್ಯಾಸವಿದೆ ಎಂಬುದರಲ್ಲಿ ಪ್ರಶ್ನೆಯೇ ಇಲ್ಲ. ಆದರೆ ಎಲ್ಲ ನಂಬಿಕೆಗಳೂ ಒಂದು ಸಾಮಾನ್ಯ ಅಂಶವನ್ನು ಹೊಂದಿವೆ. ಎಲ್ಲ ಪುರೋಹಿತರೂ ಪುರುಷರೇ ಆಗಿದ್ದಾರೆ. ಧಾರ್ಮಿಕ ನಿಯಮಗಳು ಹಾಗೂ ರೂಢಿಗಳನ್ನು ನಿರ್ಧರಿಸುವವರು ಪುರುಷರೇ. ಧರ್ಮವೊಂದು ಏಕದೇವತಾರಾಧನೆಯಲ್ಲಿ ನಂಬಿಕೆ ಇರಿಸಿರಬಹುದು, ಇನ್ನೊಂದು ಬಹುದೇವತಾರಾಧನೆ ಒಪ್ಪಿರಬಹುದು. ದೈವವನ್ನು ಧರ್ಮವೊಂದು ಚಿತ್ರದಲ್ಲಿ ಪರಿಭಾವಿಸಿರಬಹುದು, ಇನ್ನೊಂದು ಅವ್ಯಕ್ತದಲ್ಲಿ ಗ್ರಹಿಸಿರಬಹುದು. ಆದರೆ ಪೋಪ್ ಆಗುವುದು, ಆಚಾರ್ಯ ಎನಿಸಿಕೊಳ್ಳುವುದು, ದಲೈ ಲಾಮಾ ಪಟ್ಟ ಏರುವುದು ಅಥವಾ ಶೇಖ್ ಉಲ್ ಇಸ್ಲಾಂ ಎನ್ನಿಸಿಕೊಳ್ಳುವವ ಪುರುಷ ಮಾತ್ರ. ಸನ್ಯಾಸ ವಸ್ತ್ರದ ಪಡೆಯಲ್ಲಿ ಪುರುಷರೇ ಅಧಿಕ. ಕೆಲವೊಂದು ಕಡೆಗಳಲ್ಲಿ ಚಿಕ್ಕ ಚಿಕ್ಕ ಸುಧಾರಣೆಗಳು ಆಗಿವೆ. ಆದರೆ ಕಳೆದ ವರ್ಷ ಇಂಗ್ಲೆಂಡ್‌ನ ಚರ್ಚ್, ಮಹಿಳೆಯು ಬಿಷಪ್ ಪದವಿಗೇರುವುದನ್ನು ಸಮ್ಮತಿಸಲಿಲ್ಲ ಎಂಬುದು ಗಮನಾರ್ಹ. ಈ ನಂಬಿಕೆಯ ಪಥವು ಮತ್ತೆ ವಿಂಗಡನೆಯಾಗುತ್ತದೆ. ಪ್ರವಾದಿಯ ನಿಜವಾದ ವಾರಸುದಾರರು ತಾವೆಂದು ಶಿಯಾ ಮತ್ತು ಸುನ್ನಿ ಪಂಗಡಗಳು ಜಗಳಕ್ಕೆ ಇಳಿಯುತ್ತವೆ. ಇಲ್ಲೂ ಹೊಯ್-ಕೈ ಆಗುವುದು ಪುರುಷರದ್ದೇ.
ಕಳ್ಳತನಕ್ಕೆ ಇರುವ ನಿರ್ದಿಷ್ಟ ಶಿಕ್ಷೆ ಎಂದರೆ ಕೈಗಳನ್ನು ಕತ್ತರಿಸುವುದು. ಯಾವ ಮುಲ್ಲಾ ಅಥವಾ ಮುಸ್ಲಿಂ ರಾಜಕಾರಣಿಯೂ ಕಳ್ಳನೆಂದು ಸಾಬೀತಾದ ತನ್ನ ಧರ್ಮದವನಿಗೆ ಕೈ ಕತ್ತರಿಸುವ ಶಿಕ್ಷೆ ಜಾರಿ ಮಾಡಿ ಎಂದು ಪ್ರತಿಭಟನೆಗೆ ಇಳಿಯುವುದಿಲ್ಲ. ಆದರೆ ಮುಸ್ಲಿಂ ಸಮಾಜದ ಸ್ತ್ರೀಯರ ಸ್ಥಿತಿಗತಿ ಸುಧಾರಣೆ ನಿಟ್ಟಿನಲ್ಲಿ ಕಾನೂನನ್ನು ಪರಾಮರ್ಶೆಗೆ ಒಳಪಡಿಸುವ ಮಾತು ಬಂದಾಗ ಮುಸ್ಲಿಂ ರಾಜಕಾರಣಿಗಳೆಲ್ಲ ಒಟ್ಟಿಗೆ ಎದ್ದುನಿಂತು 'ಇಸ್ಲಾಂ ಅಪಾಯದಲ್ಲಿದೆ' ಎಂದು ಬೊಬ್ಬಿರಿಯುತ್ತಾರೆ. ಈ ಪೂರ್ವಗ್ರಹದ ಹಿಂದೆ ತಿಳಿದೋ ತಿಳಿಯದೆಯೋ ಕೆಲಸ ಮಾಡುತ್ತಿರುವ ಭಾವನೆ ಎಂದರೆ ಮಹಿಳೆ ಕೆಳದರ್ಜೆಯವಳು ಎಂಬ ಧೋರಣೆ. ಇನ್ನೂ ಮೂಲದಲ್ಲಿ ನೋಡುವುದಾದರೆ ವೀರ್ಯವೆಂಬುದು ಪವಿತ್ರ ಹಾಗೂ ಋತುಸ್ರಾವ ಬಹಳ ಗಲೀಜಿನದು. ಲೈಂಗಿಕತೆ ಎನ್ನುವುದು ಪುರುಷನ ಹಕ್ಕು ಸ್ಥಾಪಿಸುವ ವಿಷಯವಾಗಿದೆ. ಇದು ಎಲ್ಲ ಮತಗಳಲ್ಲೂ ವ್ಯಾಪಿಸಿಕೊಂಡಿರುವ ನಂಬಿಕೆ.
ಯಾವುದೇ ಕಾಯ್ದೆ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆಯಾಗುತ್ತ ಸಾಗುತ್ತದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದು. ಇಸ್ಲಾಮಿಕ್ ಕಾಯ್ದೆಗಳೂ ಈ ವಿಕಸಿತ ಪ್ರಕ್ರಿಯೆಯನ್ನು ಒಪ್ಪಿಕೊಳ್ಳುತ್ತವೆ. ಮಹಿಳೆಯರು ಪುರೋಹಿತ ಗಣದ ಉನ್ನತ ಸ್ಥಾನದಲ್ಲಿ ಇದ್ದಿದ್ದೇ ಹೌದಾದರೆ ಧಾರ್ಮಿಕ ಕಾಯ್ದೆಗಳು ಭಿನ್ನ ಜಾಡಿನಲ್ಲೇ ರೂಪುಗೊಳ್ಳುತ್ತಿದ್ದವೇನೋ? ಭಾರತದಲ್ಲಿ ಹಿಂದು ಧರ್ಮವೂ ಅನಿಯಂತ್ರಿತ ಬಹುಪತ್ನಿತ್ವಕ್ಕೆ ತೆರೆದುಕೊಂಡಿತ್ತು. 1955ರಲ್ಲಿ ಸ್ವಪಕ್ಷೀಯರಿಂದಲೇ ವ್ಯಕ್ತವಾದ ವಿರೋಧವನ್ನು ಲೆಕ್ಕಿಸದೇ ನೆಹರು ಮತ್ತು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ಪದ್ಧತಿ ಸುಧಾರಿಸುವ ಹಿಂದು ಕೋಡ್ ಬಿಲ್ ಅನ್ನು ಜಾರಿಗೆ ತಂದರು. 1962ರಲ್ಲಿ ನೆಹರು ಅವರಿಗೆ ಕೇಳಲಾಯಿತು- ನೀವೇಕೆ ಮುಸ್ಲಿಂ ಧರ್ಮದಲ್ಲಿರುವ ಬಹುಪತ್ನಿತ್ವ ಪದ್ಧತಿಗೆ ಸುಧಾರಣೆ ತರಲು ಮುಂದಾಗಿಲ್ಲ ಎಂದು. ಐವತ್ತರ ದಶಕದಲ್ಲಿ ಹಾಗೆ ಮಾಡುವುದಕ್ಕೆ ಕಾಲ ಪಕ್ವವಾಗಿಲ್ಲ ಎಂದಿದ್ದರು. ಆದರೆ 1980ರ ಅವಧಿ ಬಂದಾಗಲೂ ಕಾಲ ಪಕ್ವಗೊಳ್ಳದೇ ಹೋದದ್ದು ದುರಂತ. ವಿಚ್ಛೇದನದ ನಂತರ ತನ್ನ ಪತಿಯಿಂದ ಪರಿಹಾರ ಕೇಳಿದ್ದ ಶಾ ಬಾನು ಬೇಡಿಕೆಯನ್ನು ಕೋರ್ಟ್ ಪುರಸ್ಕರಿಸಿತು. ಆದರೆ ಸಂಸತ್ತು, ನ್ಯಾಯಾಲಯದ ತೀರ್ಪೇ ಅಸಿಂಧುವಾಗುವಂತೆ ಕಾನೂನು ಮಾಡಿತು.
ಈ ಪೂರ್ವಾಗ್ರಹ ಎಂಬುದು ಇಸ್ಲಾಂಗೆ ಮಾತ್ರವೇ ಸೀಮಿತವಾಗಿಲ್ಲ. ಯೋಗದ ಮರೆಯಲ್ಲಿ ಸಾಧುತ್ವದ ವೇಷದಲ್ಲಿರುವ ಕೆಲವರು, ಅತ್ಯಾಚಾರಕ್ಕೆ ಮಹಿಳೆಯನ್ನೂ ದೂರಬೇಕು ಎಂದಿರುವುದನ್ನು ಕೇಳಿಸಿಕೊಳ್ಳಿ. ಸಮಾಜವಾದಿ ಪಕ್ಷದ ಅಬು ಅಜ್ಮಿ ಇದಕ್ಕೆ ದನಿಗೂಡಿಸಿದರು. ಈ ವಿಷಯದಲ್ಲಿ ಇಬ್ಬರನ್ನೂ ಒಂದಾಗಿಸಿರುವುದು ಧರ್ಮವಲ್ಲ, ಅವರ ಪೂರ್ವಾಗ್ರಹ. ಅವರು ಪಶ್ಚಿಮವನ್ನು ದೂರಿದಾಗ ಭೂಗೋಳಕ್ಕೆ ಹೆದರಿಕೊಂಡಿರುವುದು ಕಾಣುತ್ತಿಲ್ಲ, ಬದಲಿಗೆ ಆಧುನಿಕತೆಗೆ ಹೆದರಿದ್ದಾರೆ. ಇಂಗ್ಲಿಷ್ ಹಾಡು ಹೇಳಿಕೊಂಡು ಜೀನ್ಸ್ ಧರಿಸುವುದಲ್ಲ ಆಧುನಿಕತೆ. ಆಧುನಿಕತೆ ಎಂದರೆ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಮಾನತೆಯನ್ನು ಬಯಸುವುದು.
ಇಂಥ ಎಲ್ಲ ಮನಸ್ಥಿತಿಗಳ ವಿರುದ್ಧ ಭಾರತ ಹೆಜ್ಜೆ ಇಡುತ್ತಿದೆ. ಆ ನಿಟ್ಟಿನ ಮಹಾಸಂಘರ್ಷದ ಮೊದಲ ಹೆಜ್ಜೆಗಳಷ್ಟೇ ಈಗ ಕಾಣುತ್ತಿವೆ.

-ಎಂ. ಜೆ. ಅಕ್ಬರ್
ಅಂಕಣಕಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!