ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪಾಕಿಸ್ತಾನದ ಒನಪಿಗೆ ಪರಾಕು ಹಾಕುವ 'ಪರಮಾಪ್ತರು'!

Lingaraj Badiger
Updated On : 16 Jan 2013, 12:05 pm

ಶರ್ಮ್ ಎಲ್ ಶೇಖ್‌ನ ಅಪಮಾನ ಭಾರತವನ್ನು ಇಂದಿಗೂ ಕಾಡುತ್ತಲಿದೆ. ರಕ್ತದಾಹಿ ಪಾಕಿಸ್ತಾನಿ ಸೇನೆ ಗಡಿಪ್ರದೇಶದಲ್ಲಿ ತನ್ನ ಕ್ರೂರ ಆಟಗಳನ್ನು ಮುಂದುವರಿಸಿದ್ದರೆ, ಶರ್ಮ್ ಎಲ್ ಶೇಖ್‌ನ ಸೃಷ್ಟಿಕರ್ತರು ಅಂತಾರಾಷ್ಟ್ರೀಯ ವಿಶೇಷಜ್ಞರ ಸಮಿತಿಯಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಹಾಯಕವಾಗಬಲ್ಲ 'ಗ್ಲಾಮರಸ್ ರಾಜತಾಂತ್ರಿಕತೆಗೆ' ಮರುಳಾಗಿ ಭಾರತೀಯ ಸೈನಿಕರ ಬಲಿದಾನವನ್ನು ಕೀಳಾಗಿ ಕಾಣುತ್ತಿದ್ದಾರೆ. ಕಳೆದೊಂದು ವಾರದಿಂದ ದೇಶದ ಪ್ರತಿಯೊಂದು ಉಪಕರಣಗಳು, ಭಾರತೀಯ ಕಾರ್ಪೋರೇಟ್‌ಗಳು, ರಾಜತಾಂತ್ರಿಕ ಮತ್ತು ಶೈಕ್ಷಣಿಕ ವಲಯಗಳನ್ನು ಬಳಸಿಕೊಂಡು ಸೈನಿಕರ ಅಮಾನವೀಯ ಹತ್ಯೆಯನ್ನು ಕೇವಲ ಚಿಕ್ಕ ಗಡಿ ವಿವಾದ ಎಂದು ಬಿಂಬಿಸಲಾಗುತ್ತಿದೆ. 'ಭಾರತೀಯ ಮಾಧ್ಯಮಗಳು ಪಾಕಿಸ್ತಾನಿ ಮಾಧ್ಯಮಗಳಿಂದ ಪಾಠ ಕಲಿತು ಗಡಿ ವಿವಾದಗಳ ಬಗ್ಗೆ ಉತ್ಪ್ರೇಕ್ಷೆ ಮಾಡುವುದನ್ನು ನಿಲ್ಲಿಸಬೇಕು' ಎನ್ನುವ ಪಾಕ್‌ನ ಮನಮೋಹಕ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್‌ರ ಉಪದೇಶವನ್ನು ಕೇಳಿಯೂ ನಮ್ಮವರಿಗೆ ಮೈ ಉರಿದಿಲ್ಲ. ಪಾಕಿಸ್ತಾನದ ಜಗಳಗಂಟ ಸೇನೆ ಭಾರತದ ಮೇಲೆ ನಿರ್ಭಯವಾಗಿ ದಾಳಿ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ದೊಡ್ಡದಾಗಿ ಕೂಗಾಡಿ, ಪಾಕ್‌ನ ವಿಷಯ ಬಂದಾಕ್ಷಣ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವವರು!
ಇಂತಹ ಮನಸ್ಥಿತಿಯ ಮಂದಿ ಮೆಲ್ಲಗೆ ಅಧಿಕಾರ ಕೇಂದ್ರಗಳಲ್ಲಿ, ಭಾರತೀಯ ವಿಶೇಷಜ್ಞರ ಸಮಿತಿಗಳಲ್ಲಿ, ಅಂತಾರಾಷ್ಟ್ರೀಯ ಸೆಮಿನಾರ್ ವಲಯಗಳಲ್ಲಿ ತೂರಿಕೊಂಡು ಅಧಿಪತ್ಯ ಮೆರೆಯತೊಡಗಿದ್ದಾರೆ. ಶಾಂತಿ ಸ್ಥಾಪನೆಗಾಗಿ ಇವರುಗಳು ಅಂಗಲಾಚುವ ಪರಿಯನ್ನು ನೋಡಿದರೆ ಉಗ್ರರ ಕ್ಷೇಮಾಭಿವೃದ್ಧಿಯಲ್ಲಿ ಬಂಡವಾಳ ಹೂಡಿದ್ದಾರೇನೋ ಎಂದು ಅನುಮಾನ ಬರುತ್ತದೆ.  ವಿಚಿತ್ರವೆಂದರೆ ಯಾವೊಬ್ಬ ಕಾರ್ಪೋರೇಟ್ ನಾಯಕರು, ಬಾಲಿವುಡ್ ಐಕಾನ್‌ಗಳು, ಅತಿಮಾತಿನ ಅಕಾಡೆಮಿಷಿಯನ್‌ಗಳು, ಹುಸಿ ಜಾತ್ಯತೀತ ಎನ್‌ಜಿಒಗಳು ಪಾಕಿಸ್ತಾನದ ಅತಿಕ್ರಮಣದ ವಿರುದ್ಧ ಪಿಟ್ ಎನ್ನುತ್ತಿಲ್ಲ. ಮಾತನಾಡಿದರೆ ತಮ್ಮ ನೋಟಿನ 'ನಲ್ಲಿ' ಒಣಗಿ ಹೋಗುತ್ತದೆ ಎನ್ನುವ ಭಯವಿರಬಹುದಾ? ಇದೇ ಭಯ ದೆಹಲಿಯ ಸೌತ್ ಬ್ಲಾಕ್‌ನಲ್ಲಿ ಆಸೀನರಾಗಿರುವ ರಾಜಕಾರಣಿಗಳಿಗೂ ಕಾಡುತ್ತಿದೆ. ದೆಹಲಿ ಗ್ಯಾಂಗ್‌ರೇಪ್ ವಿಷಯವಾಗಿ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಂತಿದ್ದ ಬುದ್ಧಿಜೀವಿ ವಲಯಕ್ಕೆ ಅದೇಕೋ ಬಡಪಾಯಿ ಸೈನಿಕರ ಮೇಲಿನ ಪಾಶವೀ ಕೃತ್ಯ ಕ್ರೋಧ ಹುಟ್ಟಿಸುತ್ತಿಲ್ಲ.  ಕಾರ್ಪೋರೇಟ್‌ಗಳು ಮತ್ತು ರಾಜಕೀಯ ಪಕ್ಷಗಳು ನಿರ್ಭಯಾಳ ವಿಷಯದಲ್ಲಿ ಮೆಚ್ಚುವಂತಹ ಹೋರಾಟ ಮಾಡಿದವು. ಆದರೆ ಪಾಕಿಸ್ತಾನಿಗಳು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದ ವಿಷಯದಲ್ಲಿ ಮಾತ್ರ ಇವುಗಳು ಮೂಕ ಮೇಕೆಗಳಂತೇಕೆ ವರ್ತಿಸುತ್ತಿವೆ? ನಮ್ಮ ದೇಶದ ಈ ಐಷಾರಾಮಿ ಜೀವಿಗಳು 26/11 ಮತ್ತು ಸಂಸತ್ ದಾಳಿಯಂತಹ ಘಟನೆಗಳಲ್ಲಿ ಪಾಕಿಸ್ತಾನದ ಹೆಸರು ಥಳುಕುಹಾಕಿಕೊಳ್ಳದಂತೆ ಮಾಡಲು ಅನವಶ್ಯಕ ವಿಷಯಗಳ ಬಗ್ಗೆ ಗುಲ್ಲೆಬ್ಬಿಸುತ್ತಾ ಅಡ್ಡಾಡುವುದನ್ನು ನೋಡಿದಾಗ ನಿಜಕ್ಕೂ ಹೇಸಿಗೆಯಾಗುತ್ತದೆ. ಅಫ್ಜಲ್ ಗುರು ಇಂದಿಗೂ ಜೀವಂತವಾಗಿದ್ದಾನೆಂದರೆ ಅದಕ್ಕೆ ಪರೋಕ್ಷವಾಗಿ ಇವರುಗಳೇ ಕಾರಣ ಎಂದರೆ ತಪ್ಪಾಗಲಾರದು. ತ್ವರಿತ ನ್ಯಾಯದ ಮೂಲಕ ಕಸಬ್‌ನನ್ನು ನೇಣಿಗೇರಿಸಬಹುದಾದರೆ ಗುರುವಿನ ವಿಷಯದಲ್ಲೇಕೆ ಅದು ಸಾಧ್ಯವಿಲ್ಲ? ಮುಂಬೈ ದಾಳಿಯಲ್ಲಿ ಮಡಿದವರ ರಕ್ತದ ಬಣ್ಣ ಮತ್ತು ಗುಣಮಟ್ಟ ರಾಜಕಾರಣಿಗಳನ್ನು ರಕ್ಷಿಸಲು ಹೋಗಿ ಸತ್ತವರಿಗಿಂತ ಭಿನ್ನವಾಗಿತ್ತೇ? ಪಾಕಿಸ್ತಾನ ಏನಿಲ್ಲವೆಂದರೂ ನೂರಕ್ಕಿಂತ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿರಬಹುದು. ಅದಕ್ಕೆ ಪ್ರತಿಯಾಗಿ ನಾವು ಮಾಡುವುದೇನು? 'ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಪಾಕಿಸ್ತಾನವನ್ನು ಎಚ್ಚರಿಸಿ ಸೂಕ್ತ ಸಮಯಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುತ್ತೇವೆ, ಆದರೆ ಆ ಸಮಯ ಬರುವುದೇ ಇಲ್ಲ. ಯುದ್ಧ ಒಂದು ಆಯ್ಕೆಯಲ್ಲ ಎನ್ನುವುದು ನಮಗೆ ಗೊತ್ತು. ಆದರೆ ರುಂಡವಿಲ್ಲದ ಸೈನಿಕರ ದೇಹಗಳನ್ನು ವಿನಯಪೂರ್ವಕವಾಗಿ ಸ್ವೀಕರಿಸುವುದು ದೇಶದ ಸಮಗ್ರತೆಗೆ ಬಹುದೊಡ್ಡ ಆಘಾತ ಉಂಟುಮಾಡುವುದಿಲ್ಲವೇ? ದುರದೃಷ್ಟವಶಾತ್ ರಾಷ್ಟ್ರೀಯತೆಯೊಂದಿಗೆ ಮದುವೆ ಮಾಡಿಕೊಂಡವರೂ ಕೂಡ ಪಾಕಿಸ್ತಾನದ ಆತಿಥ್ಯಕ್ಕೆ, ಸಂಗೀತಕ್ಕೆ, ಒನಪಿಗೆ ಶರಣಾಗುತ್ತಿದ್ದಾರೆ. ಪಾಕಿಸ್ತಾನವನ್ನು ಅವಕಾಶ ಸಿಕ್ಕಾಗಲೆಲ್ಲ ಜಾಡಿಸಬೇಕು ಎಂದು ಕಾಯುವವರೇ ಆದೇಶದೊಂದಿಗೆ ಸಾಂಸ್ಕೃತಿಕ ಮೈತ್ರಿ ಹೊಂದಲು, ಕ್ರೀಡೆಯನ್ನು ಪ್ರೋತ್ಸಾಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪಾಕಿಸ್ತಾನದ ಶ್ರೀಮಂತ ಮತ್ತು ಸುಂದರ ಮಂದಿಯೇ ಭಾರತದ ವೈನ್ ಆ್ಯಂಡ್ ಡೈನ್ ಪಾರ್ಟಿಗಳ ಸ್ಟಾರ್ ಅಟ್ರ್ಯಾಕ್ಷನ್ ಆಗಿ ಮಿಂಚತೊಡಗಿದ್ದಾರೆ. ಅವರಿಗೆ ರಾಜಮರ್ಯಾದೆಯ ಜೊತೆಗೆ ನಮ್ಮ ಹರಟೆಕೋರ ವರ್ಗದಿಂದ ಜೇಬು ತುಂಬಿ ತುಳುಕುವಷ್ಟು ಡಾಲರ್‌ಗಳೂ ಸಿಗುತ್ತವೆ. ಮನೆಗೆ ಹಿಂದಿರುಗಿದಾಕ್ಷಣ ಅವರ್ಯಾರೂ ಉಗ್ರವಾದಿಗಳನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರನ್ನು ಎತ್ತಿಕುಣಿದಾಡುವ ಭಾರತೀಯ ಆತಿಥೇಯರು ಮಾತ್ರ ನಮ್ಮ ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಳ್ಳುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಾರೆ.  
ಈ 'ಪಾಕಿಸ್ತಾನದ ಪರಮಾಪ್ತರು' ಮಾತುಕತೆಯಾಡುವ ಮೂಲಕ ನಂಬಿಕೆಗರ್ಹವಲ್ಲದ ಆ ದೇಶದೊಂದಿಗೆ ಶಾಂತಿಸ್ಥಾಪಿಸಬಹುದು ಎನ್ನುವ ಗುಂಗಿಗೆ ಬಿದ್ದಿದ್ದಾರೆ. ಆದರೆ 'ಶಾಂತಿಯ ಶತ್ರುಗಳು' ಪಾಕಿಸ್ತಾನದಲ್ಲೇ ಬೆಳೆಯುತ್ತಾ, ಭಾರತದ ನೆತ್ತರಿಗಾಗಿ ಹಪಾಹಪಿಸುತ್ತಿದ್ದಾರೆ ಎನ್ನುವುದನ್ನು ಇವರುಗಳು ಮರೆತುಬಿಟ್ಟಿದ್ದಾರೆ.  ಪಾಕಿಸ್ತಾನದಲ್ಲಿ ಕಳೆದ 20 ವರ್ಷಗಳಿಂದ ರಾಜವೈಭೋಗ ಅನುಭವಿಸುತ್ತಿರುವ 20 ಉಗ್ರವಾದಿಗಳನ್ನು ಭಾರತಕ್ಕೊಪ್ಪಿಸಬೇಕು ಎಂದು ಇವರು ಕ್ಯಾಂಡಲ್ ಲೈಟ್ ಪ್ರತಿಭಟನೆಗಳನ್ನೇಕೆ ಮಾಡುವುದಿಲ್ಲ? ದೆಹಲಿ ಮತ್ತು ನ್ಯೂಯಾರ್ಕ್‌ನಲ್ಲಿ ಸೆಮಿನಾರ್‌ಗಳನ್ನು ನಡೆಸಿ ನೆರೆದೇಶದ ವಿರುದ್ಧವೇಕೆ ಆರ್ಭಟಿಸುವುದಿಲ್ಲ? ಹಫೀಜ್ ಸಯೀದ್‌ನನ್ನು ಹಸ್ತಾಂತರಿಸಬೇಕೆಂದು ಜಂತರ್ ಮಂತರ್‌ನಲ್ಲಿ ಅಥವಾ ಪಾಕಿಸ್ತಾನ ರಾಯಭಾರ ಕಚೇರಿಯ ಮುಂದೆ ಇವರು ಉಪವಾಸವೇಕೆ ಕೂಡುವುದಿಲ್ಲ?   
ದುರದೃಷ್ಟವಶಾತ್ ಇವರಿಗೆ ಪಾಕಿಸ್ತಾನ ಒಂದು ವಿಫಲವಾದ ರಾಷ್ಟ್ರ ಎನ್ನುವ ಸತ್ಯ ಅರ್ಥವಾಗುತ್ತಿಲ್ಲ. ಭಾರತ-ಪಾಕಿಸ್ತಾನ ಬಾಂಧವ್ಯದ ಸ್ಥಿತಿಗತಿಯನ್ನು ಅಮೆರಿಕ ನಿರ್ಧರಿಸಿ, ನಿರ್ದೇಶಿಸುತ್ತದಾದ್ದರಿಂದ ಈ 'ಪರಮಾಪ್ತರು' ಪ್ರತಿಬಾರಿಯೂ ಅಮೆರಿಕದಿಂದ ಸುಳಿವು ಪಡೆಯುತ್ತಾರೆ. 1990ರವರೆಗೆ ಇವರುಗಳು ಕೇವಲ ಅಕಾಡೆಮಿಕ್ ಮತ್ತು ಕೆಲವೇ ಕೆಲವು ಸರ್ಕಾರಿ ಸ್ಥಾನಗಳಿಗೆ ಸೀಮಿತವಾಗಿದ್ದರು. ಆದರೆ ಯಾವಾಗ ರಕ್ಷಣೆಯ ಬದಲು ಆರ್ಥಿಕತೆ ಭಾರತ- ಪಾಕ್ ಸಂಬಂಧವನ್ನು ನಿರ್ಧರಿಸುವ ಹಂತಕ್ಕೆ ಬೆಳೆಯಿತೋ, ಆಗ ಎನ್‌ಡಿಎ ಮತ್ತು ಯುಪಿಎ ಸರ್ಕಾರಗಳು ಅಮೆರಿಕದ ಸಿದ್ಧಾಂತಕ್ಕೆ ಅಂಟಿಕೊಂಡುಬಿಟ್ಟವು. ಈ ಸೂತ್ರವನ್ನಪ್ಪಿದ್ದರಿಂದಲೇ ಭಾರತ ಪಾಕಿಸ್ತಾನದ ಅವಮಾನಕರ ನಡವಳಿಕೆಯನ್ನು ಇಂದಿಗೂ ಸಹಿಸಿಕೊಳ್ಳುತ್ತಿದೆ.  ನಿಜ ಹೇಳಬೇಕೆಂದರೆ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎಂದು ಹಾತೊರೆಯುವ 'ಭಾರತ'ವನ್ನು, 'ಇಂಡಿಯಾ' ಕಡೆಗಣಿಸುತ್ತಿದೆ. ಯುದ್ಧಕ್ಕೆ ಹೋಗುವುದು ಕೊನೆಯ ಆಯ್ಕೆಯಾಗಿರಬೇಕು ಎಂದು ಕೆಲವರು ವಾದಿಸಬಹುದು. ಆದರೆ ಪಾಕಿಸ್ತಾನದ ಮಗ್ಗಲು ಮುರಿಯಬೇಕಾದರೆ, ಅದರ ಸದ್ದಡಗಿಸಬೇಕಾದರೆ, ನಾವು ಆ ದೇಶವನ್ನು ಆಂತರಿಕವಾಗಿ ಪ್ರತ್ಯೇಕಗೊಳಿಸಿ, ಆರ್ಥಿಕ ತೊಂದರೆಯಿಂದ ಅದು ಉಸಿರುಗಟ್ಟಿ ಸಾಯುವಂತೆ ಮಾಡಬೇಕು(ಸಂಸತ್ ದಾಳಿಯ ಮತ್ತು 26/11ರ ಸಮಯದಲ್ಲಿ ಮಾಡಿದಂತೆ). ಪಾಕಿಸ್ತಾನಕ್ಕೆ ತಾನೆಲ್ಲಿ ಜಾಗತಿಕ ಅಸ್ಪೃಶ್ಯನಾಗುತ್ತೇನೋ ಎನ್ನುವ ಭಯ ಮೊದಲಿನಿಂದಲೂ ಇದೆ. ಆ ಭಯವನ್ನು ನಾವು ಸತ್ಯವಾಗಿಸಬೇಕು. ಆದರೆ 'ಪರಮಾಪ್ತರ' ದಬ್ಬಾಳಿಕೆಯಲ್ಲಿ ಬದುಕುತ್ತಿರುವ ಭಾರತಕ್ಕೆ 'ಡಿನ್ನರ್ ಡಿಪ್ಲೋಮಸಿ' ನಡೆಸಬೇಕೆಂದು ಹಂಬಲ!
ಶತ್ರುವನ್ನು ತಾತ್ಸಾರ ಮಾಡುವುದು, ಬೆಂಕಿ ಉಗುಳುವ ಕ್ಷಿಪಣಿಗಳೆದುರು ನಿಂತುಕೊಳ್ಳುವುದಕ್ಕಿಂತಲೂ ಅಪಾಯಕಾರಿ ಕೆಲಸ ಎನ್ನುವುದು ನಮಗ್ಯಾವಾಗ ಅರ್ಥವಾಗುತ್ತದೋ?!
-ಪ್ರಭು ಚಾವ್ಲಾ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement