ತನ್ನ ಯೋಧರನ್ನು ಕಳೆದುಕೊಂಡ ನೋವಲ್ಲಿ ಭಾರತ ನರಳುತ್ತಿದೆ. ಪಾಕಿಸ್ತಾನ ಎಂದಿನ ಮೊಂಡುತನ ತೋರಿಸುತ್ತಿದೆ. ಭಾರತವು 'ಯುದ್ದೋನ್ಮಾದ' ತೋರಿಸುತ್ತಿದೆ ಎಂದು ಪಾಕ್‌ನಿಂದ ಅದಾಗಲೇ ಆರೋಪ ವ್ಯಕ್ತವಾಗಿದೆ. ಭಾರತದ ಆಕ್ರೋಶಕ್ಕೆ ಸಕಾರಣಗಳಿವೆಯಾದರೂ ಯುದ್ಧ ಎಂಬುದು ಕೊನೆಯ ಆಯ್ಕೆಯಷ್ಟೆ ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೇ. ಈ ಸಂದರ್ಭದಲ್ಲಿ ಭಾರತ ಮಾಡಬೇಕಿರುವುದೇನು ಎಂಬುದನ್ನು ವಿಶ್ಲೇಷಿಸಿರುವ ಎರಡು ಬರಹಗಳು ಇಲ್ಲಿವೆ. ಇಬ್ಬರೂ ಲೇಖಕರೂ ಭಾರತದ ಗುಪ್ತಚರ ಸಂಸ್ಥೆ 'ರೀಸರ್ಚ್ ಆ್ಯಡ್ ಅನಾಲಿಸಿಸ್ ವಿಂಗ್'ನಲ್ಲಿ ಮುಖ್ಯಸ್ಥ ಹುದ್ದೆ ನಿಭಾಯಿಸಿ ನಿವೃತ್ತರಾದವರು ಎಂಬುದು ಗಮನಾರ್ಹ.
ಒಬ್ಬ ವ್ಯಕ್ತಿಯನ್ನು ಯಾವ ರೀತಿಯ ಘಟನೆ ಉಲ್ಲಸಿತಗೊಳಿಸುತ್ತದೆ ಎನ್ನುವುದರ ಮೇಲೆ ಆತನ ವ್ಯಕ್ತಿತ್ವ ಹೇಗಿದೆ ಎನ್ನುವುದು ತಿಳಿಯುತ್ತದೆ; ಅದೇ ರೀತಿಯಲ್ಲಿ ಸಿಟ್ಟಿನಲ್ಲಿ ಆತ ಯಾವ ರೀತಿಯ ಹೇಳಿಕೆ ನೀಡುತ್ತಾನೆ ಎನ್ನುವುದರ ಮೇಲೂ ಆತನ ವ್ಯಕ್ತಿತ್ವವನ್ನು ನಿರ್ಧರಿಸಬಹುದು.
ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ನಾಲ್ಕು ಮಂದಿ- ಮಾಜಿ ರಾಯಭಾರಿ, ನಿವೃತ್ತ ಅಡ್ಮಿರಲ್, ವಾಚಾಳಿ ವಕೀಲ ಮತ್ತೊಬ್ಬ ಮಿಲಿಟರಿ ಸಮವಸ್ತ್ರ ಧರಿಸಿ ಕೂತಿದ್ದ ವ್ಯಕ್ತಿ, ಸುದ್ದಿ ಮಾಧ್ಯಮವೊಂದರಲ್ಲಿ ಪ್ರಚೋದನಕಾರಿ ಚರ್ಚೆಯಲ್ಲಿ ನಿರತರಾಗಿದ್ದರು. ಅವರು ಚರ್ಚಿಸುತ್ತಿದ್ದದ್ದು (ಚರ್ಚಿಸುತ್ತಿದ್ದ ಅನ್ನುವುದಕ್ಕಿಂತ ನಿರಾಕರಣೆ ಅಥವಾ ರಕ್ಷಣೆಯಲ್ಲಿ ತೊಡಗಿದ್ದ ಎನ್ನುವುದೇ ಸರಿ) ಪಾಕಿಸ್ತಾನಿಗಳು ಮೆಂಧಾರ್ ಸೆಕ್ಟರ್‌ಗೆ ನುಗ್ಗಿ ಭಾರತೀಯ ಸೈನಿಕನೊಬ್ಬನ ಶಿರಚ್ಛೇದ ಮಾಡಿದ ವಿಷಯದ ಕುರಿತಾಗಿತ್ತು.
ಈ ಚರ್ಚೆಯಲ್ಲಿನ ಬಹುತೇಕ 'ಮಾತುಗಳು' ಇವರುಗಳ ಅಬ್ಬರಗಳ ನಡುವೆಯೇ ಕಳೆದುಹೋದವು. ಆದರೆ ಅವರ ಮೂರು ಹೇಳಿಕೆಗಳು ಮಾತ್ರ ಸ್ಪಷ್ಟವಾಗಿ ಕೇಳಿಸುವಂತಿದ್ದವು. ಮೊದಲನೆಯದು- 'ನಮ್ಮದು ಅಣ್ವಸ್ತ್ರ ಹೊಂದಿದ ರಾಷ್ಟ್ರ ಎನ್ನುವುದನ್ನು ಮರೆಯಬೇಡಿ' ಎಂಬ ಹೇಳಿಕೆ. ಪಾಕಿಸ್ತಾನಿಗಳು ಎಂಥ ಕೆಳಮಟ್ಟಕ್ಕಿಳಿದಿದ್ದಾರೆ ಎನ್ನುವ ಕಲ್ಪನೆ ಭಾರತೀಯರಿಗೆ ಇದೆಯಾದರೂ, ನಮ್ಮ ಕಲ್ಪನೆಗಿಂತ ಕೆಳಮಟ್ಟಕ್ಕಿಳಿಯಬಲ್ಲೆವು ಎನ್ನುವುದನ್ನವರು ಈ ಮಾತನ್ನಾಡುವ ಮೂಲಕ ಬಹಿರಂಗಪಡಿಸಿದರು. ಎರಡನೆಯದು- 'ಸಾವಿರಾರು ವರ್ಷಗಳ ಹಿಂದೆ ಕೆಲವು ಜಿಹಾದಿಗಳು ಭಾರತಕ್ಕೆ ಬಂದಿದ್ದರು ಎನ್ನುವುದನ್ನು ಮರೆಯಬೇಡಿ'. ಈ ಹೇಳಿಕೆಯಿಂದ ಅವರ ಧರ್ಮಾಂಧತೆ ಯಾವ ಮಟ್ಟಕ್ಕಿದೆ ಎನ್ನುವುದರ ಸ್ಪಷ್ಟ ಕಲ್ಪನೆ ಮೂಡುತ್ತದೆ. ಮೂರನೆಯದಾಗಿ- 'ಕಾಶ್ಮೀರದ ಸಮಸ್ಯೆ ಬಗೆಹರಿಯುವವರೆಗೂ (ಅದನ್ನು ನಮಗೆ ಕೊಡುವವರೆಗೂ) ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.' ಈ ಹೇಳಿಕೆಯ ಮೂಲಕ ಅವರು ಭಾರತಕ್ಕೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದರು. ನಾವಿಂದು ಎದುರುಹಾಕಿಕೊಂಡಿರುವವರ ಮನಸ್ಥಿತಿ ಹೇಗಿದೆಯೋ ನೋಡಿ! ಆಡಳಿತ ವರ್ಗದ ವಿದ್ಯಾವಂತ ಮಂದಿಯೇ ಈ ರೀತಿಯ ಮನಸ್ಥಿತಿ ಹೊಂದಿದ್ದಾರೆಂದ ಮೇಲೆ, ಅದೇಕೆ ನಾವು ಅವರೊಂದಿಗೆ ಶಾಂತಿ ಸ್ಥಾಪನೆಗಾಗಿ ಮುಂದಾಗುತ್ತಿದ್ದೀವೋ? ಪದೇ ಪದೇ ಶಾಂತಿಮಾತುಕತೆಯ ಪ್ರಸ್ತಾವನೆಯನ್ನಿಟ್ಟು ನಮ್ಮ ವಿಶಾಲ ಹೃದಯವನ್ನು ತೋರಿಸಿಕೊಳ್ಳುವ ಚಪಲ ನಿಜಕ್ಕೂ ಭಾರತವನ್ನು ತಪ್ಪು ಹಾದಿಗೆ ಕೊಂಡೊಯ್ಯುತ್ತಿದೆ.
ಏತನ್ಮಧ್ಯೆ ನಿಯಂತ್ರಣ ರೇಖೆಯಲ್ಲಿ ಎರಡೂ ದೇಶಗಳು ಗುಂಡಿನ ವಿನಮಯ ಮಾಡಿಕೊಳ್ಳುತ್ತಿವೆ. ಪಾಕಿಸ್ತಾನ ತಮ್ಮವರನ್ನು ಭಾರತದ ಗಡಿಯೊಳಕ್ಕೆ ನುಸುಳಿಸುವ ಯೋಜನೆ ಹಾಕಿಕೊಂಡಾಗಲೆಲ್ಲ ನಮ್ಮತ್ತ ಗುಂಡು ಹಾರಿಸುತ್ತಾ ನಮ್ಮ ಸೈನಿಕರ ಹಾದಿ ತಪ್ಪಿಸಲು ಈ ರೀತಿಯ ತಂತ್ರದಲ್ಲಿ ತೊಡಗುತ್ತದೆ ಎನ್ನುವುದು ನಮಗೆ ಗೊತ್ತೇ ಇದೆ. ಹಿಂಸಾಚಾರ ಭುಗಿಲೇಳಿಸುತ್ತೇವೆ ಎಂಬ ಹಫೀಜ್ ಸಯೀದ್‌ನ ಎಚ್ಚರಿಕೆ, ಸರಪಂಚನೊಬ್ಬನ ಹತ್ಯೆ ಮತ್ತು ಇನ್ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ, ಇತ್ತೀಚೆಗೆ ಕಾಶ್ಮೀರದ ಕೆಲವು ಯುವಕರು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿಕೊಟ್ಟು ಹಫೀಜ್ ಸಯೀದ್ ಮತ್ತು ಸೈಯ್ಯದ್ ಸಲಾಹುದ್ದೀನ್‌ರೊಂದಿಗೆ ನಡೆಸಿದ ಮಾತುಕತೆಯಂತಹ ವರ್ತಮಾನಗಳೊಂದಿಗೆ ಈ ಶಿರಚ್ಛೇದ ಘಟನೆಯನ್ನು ನಾವು ಥಳುಕುಹಾಕಿ ನೊಡಬೇಕು. ಆಘಾತಕಾರಿ ವಿಷಯವೇನೆಂದರೆ, ಭಾರತವನ್ನು ದುರ್ಬಲಗೊಳಿಸುತ್ತೇವೆ ಎಂದು ಬಹಿರಂಗವಾಗಿಯೇ ಆರ್ಭಟಿಸುವ ಉಗ್ರರ ಭೇಟಿಗೆ ಕಾಶ್ಮೀರದ ಪ್ರತ್ಯೇಕತಾವಾದಿಗಳು ಹೋದರೆ, ಅವರನ್ನು ತಡೆಯುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಮಾಡುತ್ತಿಲ್ಲ. ಪಾಕಿಸ್ತಾನಿಗಳ ನೀಲ ನಕ್ಷೆಗಳಿಗೆ ನಾವು ಅಧಿಕೃತ ರೂಪವಾಗಿಯೇ ಸಹಾಯ ಮಾಡುತ್ತಿದ್ದೇವೆ!
ಏರ್‌ಚೀಫ್ ಮಾರ್ಷಲ್ ಬ್ರೌನೇ, 'ಭಾರತ ಅನ್ಯ ಮಾರ್ಗಗಳ ಬಗ್ಗೆ ಯೋಚಿಸುತ್ತಿದೆ' ಎಂದು ಹೇಳಿದ್ದಾರೆ. ಇದಕ್ಕೂ ಕೆಲ ದಿನಗಳ ಮುನ್ನ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಶ್ಫಕ್ ಪರ್ವೇಜ್ ಕಯಾನಿ, 'ಭಾರತದ ಎಲ್ಲಾ ರೀತಿಯ ಬೆದರಿಕೆಗಳನ್ನು ಎದುರಿಸಲು ನಾವು ತಯಾರಾಗಿದ್ದೇವೆ' ಎಂದು ಹೇಳಿದ್ದರು. ಪಾಕಿಸ್ತಾನಿಗಳು ತಮ್ಮೆಲ್ಲಾ ಆಂತರಿಕ ಸಮಸ್ಯೆಗಳಿಗೆ ಭಾರತವೇ ಕಾರಣ ಎಂದು ಭಾವಿಸುತ್ತಾರಾದ್ದರಿಂದ ಈ ರೀತಿಯ ಸಮಸ್ಯೆಗಳು ಉದ್ಭವವಾಗುತ್ತಿವೆ. ತಮ್ಮ ಅಸಹಾಯಕತೆಯನ್ನು ಒಪ್ಪಿಕೊಳ್ಳಲು ಅವರುಗಳು ತಯಾರಿಲ್ಲ. ಆದರೆ ಒಂದು ವಿಷಯವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಸಮಸ್ಯೆಯನ್ನು ಅವರೇ ಪರಿಹಾರ ಮಾಡಿಕೊಳ್ಳಬೇಕೇ ಹೊರತು, ಹೊರಗಿನವರು ಬಂದು ಪರಿಹರಿಸುವುದಿಲ್ಲ.
ಪಾಕಿಸ್ತಾನಿ ಸೇನೆ, ತಮ್ಮ ಸರ್ಕಾರವೇ ಹುಟ್ಟುಹಾಕಿದ ಮೂಲಭೂತವಾದಿಗಳಿಂದಲೇ ಸಮಸ್ಯೆ ಎದುರಿಸುತ್ತಿದೆ. ತೆಹರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಈಗ ತನ್ನನ್ನು ತಾನು 'ದೇವರ ಸೈನಿಕರು' ಎಂದು ಕರೆದುಕೊಳ್ಳುತ್ತಿದೆ. ಇನ್ನು ಲಷ್ಕರ್-ಎ-ತೋಯ್ಬಾದಂತಹ ಉಗ್ರವಾದಿ ಸಂಘಟನೆಗಳಿಗೆ ಪಾಕಿಸ್ತಾನಿ ಸರ್ಕಾರದ ಬೆಂಬಲವಿರುವುದರಿಂದ ಅವು ರಾಜಾರೋಷವಾಗಿ ಪಾಕಿಸ್ತಾನದಲ್ಲಿ ಮೆರೆಯುತ್ತಿವೆ. ಇದೇ ವಿಷಯ ಪಾಕಿಸ್ತಾನವನ್ನು ಪೀಡಿಸುತ್ತಿರುವುದು. ತಮ್ಮ ಪೋಷಕ ರಾಷ್ಟ್ರಕ್ಕೇ ಈ ಸಂಘಟನೆಗಳು ಎರಡು ಬಗೆಯುತ್ತಿವೆ. ಇನ್ನು ಅಮೆರಿಕ ಈ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎನ್ನುವುದೂ ಸಾಧ್ಯವಿಲ್ಲ.
ಶಿಯಾಗಳ ಮಾರಣಹೋಮ ಮತ್ತು ಜಾತೀಯ ಯುದ್ಧಗಳಿಂದ ಹೈರಾಣಾಗಿರುವ ರಾಷ್ಟ್ರದ ನಾಯಕರು, ತಮ್ಮ ಮನೆಯನ್ನು ಸರಿಪಡಿಸಿಕೊಳ್ಳುವ ಬದಲು ಸುಖಾಸುಮ್ಮನೆ ಭಾರತದೊಂದಿಗೆ ಜಗಳಕ್ಕಿಳಿದು, ಇಲ್ಲದ ರಗಳೆಯನ್ನೇಕೆ ಮೈಮೇಲೆಳೆದುಕೊಳ್ಳುತ್ತಾರೆ ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ ತನ್ನ ಪ್ರತಿಯೊಂದು ಸಮಸ್ಯೆಗೂ ಭಾರತದತ್ತ ಬೊಟ್ಟು ಮಾಡಿ ತೋರಿಸುವ ಚಟ ಆ ದೇಶಕ್ಕೆ ಅಂಟಿಕೊಂಡು ಬಿಟ್ಟಿದೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ಭಾರತದೊಂದಿಗೆ ಸಮಬಲ ಸಾಧಿಸಬೇಕು ಎನ್ನುವುದೇ ಅದರ ಗುರಿಯಾಗಿದ್ದರೆ ಅದು ಬೇರೆ ಮಾರ್ಗವನ್ನು ಅನುಸರಿಸಬೇಕು. ಹಾಗಾದಾಗ ಮಾತ್ರ ಎರಡೂ ರಾಷ್ಟ್ರಗಳಿಂದ ಕ್ಷಿಪಣಿಗಳ ಮೇಲೆ, ಪರಮಾಣು ಅಸ್ತ್ರಗಳ ಮೇಲೆ ದುಂದುವೆಚ್ಚ ಮಾಡುವುದಾದರೂ ಕಡಿಮೆಯಾಗುತ್ತದೆ.
ಇನ್ನೊಂದೆಡೆ ಭಾರತ, ತನ್ನದು 'ತಾರ್ಕಿಕ ನ್ಯಾಯೋಚಿತ ರಾಜ್ಯವೆಂದು' ತೋರಿಸಿಕೊಳ್ಳುವ ಭರಾಟೆಯಲ್ಲಿ ಅತಾರ್ಕಿಕ ಹೆಜ್ಜೆಗಳನ್ನೇ ಇಡುತ್ತಿದೆ. ದೇಶದ್ರೋಹದಲ್ಲಿ ತೊಡಗಿರುವ ದುಷ್ಟಶಕ್ತಿಗಳನ್ನು ಪೋಷಿಸುವ ಕೆಲಸವನ್ನು ನಾವು ಮೊದಲು ಬಿಡಬೇಕಿದೆ. ಅದಕ್ಕೆ ಬದಲಾಗಿ ನಾವು ಜಮ್ಮು ಮತ್ತು ಕಾಶ್ಮೀರದ ಚುನಾಯಿತ ಪ್ರತಿನಿಧಿಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ಕಾಶ್ಮೀರಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿಯೂ, ಅವರ ಆಕಾಂಕ್ಷೆಗಳನ್ನು ಆಡೇರಿಸುವುದಾಗಿಯೂ ಆಶ್ವಾಸನೆ ಕೊಟ್ಟು ಅವರ ಮನಗೆಲ್ಲಬೇಕು. ಯುದ್ಧ ಮತ್ತು ಶರಣಾಗತಿಯ ನಡುವೆಯೂ ಅನೇಕ ಆಯ್ಕೆಗಳಿವೆ. ನಾವು ನಿರಂತರವಾಗಿ ಅವರೊಂದಿಗೆ ಶಾಂತಿ ಸ್ಥಾಪನೆಯ ಪ್ರಸ್ತಾಪನೆಯನ್ನಿಡುತ್ತೇವೆ ಎನ್ನುವುದು ಎಷ್ಟು ನಿಜವೋ, ಆ ಪ್ರಸ್ತಾವನೆಗಳನ್ನು ನಮ್ಮ ಅಸಹಾಯಕತೆ ಎಂದು ಅವರುಗಳು ಭಾವಿಸುತ್ತಿದ್ದಾರೆ ಎನ್ನುವುದೂ ಅಷ್ಟೇ ನಿಜ. ನಮ್ಮ ದೇಶದ ವಿರುದ್ಧ ಕುತಂತ್ರ ಹೂಡುವುದರಲ್ಲಿ ಮಗ್ನರಾಗಿರುವ ಆ ಶಕ್ತಿಗಳ ಎದೆಯೊಳಗೆ ನಡುಕ ಹುಟ್ಟಿಸುವ ತಂತ್ರಗಳನ್ನು ನಾವು ಹೆಣೆಯಬೇಕಿದೆ. ಆ ದೇಶದೊಂದಿಗೆ ಎಲ್ಲಾ ರೀತಿಯ ಮಾತುಕತೆಗಳನ್ನೂ ನಿಲ್ಲಿಸುವ ಮೂಲಕ ನಾವು ಈ ಕೆಲಸಕ್ಕೆ ಮುಂದಾಗಬಹುದು.
ಕೂಡಲೇ ಕಾರ್ಯಗತರಾಗದಿದ್ದರೆ ನಮ್ಮ ಸೈನಿಕರು ಮತ್ತು ಭದ್ರತಾಪಡೆಗಳು ಸೇವೆಯ ಹೆಸರಿನಲ್ಲಿ ಸಾವು ನೋವನ್ನು ಅನುಭವಿಸುವುದಂತೂ ನಿಶ್ಚಿತ. ನಮ್ಮ ಸರ್ಕಾರ ಹುತಾತ್ಮರಿಗೆ ಗೌವರ ಕೊಡುತ್ತದೆ ಎಂದಾದರೆ, ಪಾಕಿಸ್ತಾನದೊಂದಿಗೆ ಮತ್ತೆ ಕೈಜೋಡಿಸುವ ಕೆಲಸಕ್ಕೆ ಅದು ಮುಂದಾಗಬಾರದು. ಒಂದು ವೇಳೆ ಭಾರತ ಮಾತುಕತೆಗೆ ಮುಂದಾಗಿದ್ದೇ ಆದರೆ, ಅದೂ ಕೂಡ ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಾಲಿಕ್‌ರಂತೆ ಅಥವಾ ಹೀನಾ ರಬ್ಬಾನಿ ಖಾರ್‌ರಂತೆ 'ಸಂವೇದನಾಶೂನ್ಯ' ಎಂದೇ ಕರೆಸಿಕೊಳ್ಳುತ್ತದೆ. ಪಾಕಿಸ್ತಾನವನ್ನು ನಮ್ಮಿಂದ ಬದಲಾಯಿಸಲು ಅಥವಾ ಉಳಿಸಲು ಸಾಧ್ಯವಿಲ್ಲ; ಆ ಕೆಲಸವನ್ನು ಕೇವಲ ಪಾಕಿಸ್ತಾನಿಗಳೇ ಮಾಡಬಹುದು. ಪಾಕಿಸ್ತಾನದಲ್ಲಿ ಏನೇ ನಡೆಯಲಿ ಅದರಿಂದ ಪಾಠ ಕಲಿತು, ನಮ್ಮ ನೆರೆ ರಾಷ್ಟ್ರದೊಂದಿಗೆ ಬದುಕುವುದನ್ನು ನಾವು ಕಲಿಯಬೇಕು- ಆದರೆ ಮಧ್ಯದಲ್ಲಿ ಬಲಿಷ್ಠ ಬೇಲಿ ಹಾಕಿಕೊಂಡು!
ಇದರ ಮಧ್ಯೆ ನಮ್ಮನ್ನು ನಾವೇ ಒಂದು ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ. ಆ ರಾಷ್ಟ್ರದೊಂದಿಗೆ ನಾವೇಕೆ ಮಾತನಾಡುತ್ತಿದ್ದೇವೆ? ಯಾರಿಗಾಗಿ? ಎಲ್ಲಿಯವರೆಗೂ?
-ವಿಕ್ರಮ್ ಸೂದ್
'ರಾ' ಸಂಸ್ಥೆಯ ಮಾಜಿ ಕಾರ್ಯದರ್ಶಿಗಳು
----
ಜನವರಿ 8ರಂದು ಜಮ್ಮು ಪ್ರಾಂತ್ಯದಲ್ಲಿ ಪಾಕಿಸ್ತಾನಿಯರು ಅನಾಗರಿಕವಾಗಿ ಭಾರತೀಯ ಯೋಧರ ಮೇಲೆ ಧಾಳಿ ಮಾಡಿ ನಮ್ಮ ಇಬ್ಬರು ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಹಾಗೂ ಹುತಾತ್ಮ ಯೋಧರೊಬ್ಬರ ತಲೆಯನ್ನು ಕಡಿದು ಒಯ್ದಿರುವ ಪೈಶಾಚಿಕ ಘಟನೆಗೆ ಮೂರು ಪದರಗಳಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿದೆ.
ಮೊದಲಿಗೆ ಇಡೀ ರಾಷ್ಟ್ರ ಹುತಾತ್ಮ ಯೋಧರ ಕುಟುಂಬದೊಂದಿಗೆ ಇದ್ದೇವೆ ಎಂಬ ನಡೆಯನ್ನು ತೋರಿಸಬೇಕು. ಯೋಧರಗೌರವವನ್ನು ಕಾಪಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿರಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ಪ್ರಧಾನಿ ಕಾರ್ಯಾಲಯವು ಮಾಡಬೇಕಿದ್ದ ಕಾರ್ಯಗಳು ಹಲವಿದ್ದವು. ಹುತಾತ್ಮ ಯೋಧನ ಕುಟುಂಬಕ್ಕೆ ಪ್ರಧಾನಿ ಭೇಟಿ ಇತ್ತು ಸಂತಾಪ ಸೂಚಿಸುವುದು, ಅಂತ್ಯ ಸಂಸ್ಕಾರದ ವೇಳೆ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಅಲ್ಲಿರುವಂತೆ ನೋಡಿಕೊಳ್ಳಬೇಕಾಗಿತ್ತು, ಸಶಸ್ತ್ರ ಪಡೆಗಳ ಆತ್ಮಸ್ಥೈರ್ಯ ವೃದ್ಧಿಸುವುದಕ್ಕೆ ದೇಶವೇ ಜತೆಯಲ್ಲಿದೆ ಎಂಬ ವಿಶ್ವಾಸವನ್ನು ಕಟ್ಟಿಕೊಡುವ ಟಿವಿ ಮುಖೇನ ಭಾಷಣ, ಈ ವಿಷಯದಲ್ಲಿ ತಮ್ಮ ಲಾಭಕ್ಕೆ ತಕ್ಕಂತೆ ಒಬ್ಬೊಬ್ಬರು ಒಂದೊಂದು ಮಾತನಾಡುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಭೆ...ಇವೆಲ್ಲ ಆಗಬೇಕಿದ್ದ ಕೆಲಸಗಳಾಗಿದ್ದವು. ಆದರೆ ಇವೆಲ್ಲವುಗಳನ್ನೂ ಸರ್ಕಾರ ಸಾರಾಸಗಟಾಗಿ ನಿರ್ಲಕ್ಷಿಸಿತು ಎಂಬುದು ಎಲ್ಲರಿಗೂ ಗೋಚರವಾಗುವ ಅಂಶ.
ಎರಡನೆಯದಾಗಿ ಆಗಬೇಕಿದ್ದ ಕೆಲಸ ಎಂದರೆ- ಇಂಥ ಅನಾಗರಿಕ ಕೃತ್ಯವನ್ನು ಭಾರತದ ಪ್ರದೇಶದ ಒಳಗೇ ಬಂದು ಅಷ್ಟೇನೂ ಪ್ರತಿರೋಧವಿಲ್ಲದೇ ನಡೆಸುವುದಕ್ಕೆ ಪಾಕಿಸ್ತಾನಿಯರು ಸಫಲರಾಗಿದ್ದು ಹೇಗೆ ಎಂಬ ಬಗ್ಗೆ ವಿಚಾರಣೆ. ಏಕೆಂದರೆ ಗಡಿ ನಿಯಂತ್ರಣ ರೇಖೆಯ ಬಳಿ ಉಲ್ಲಂಘನೆಗಳನ್ನು ತಡೆಯುವುದಕ್ಕೆ ಭಾರತೀಯ ಪಡೆ ಯಾವತ್ತೂ ಕಾರ್ಯನಿರ್ವಹಿಸುತ್ತಿರುತ್ತದೆ. ಇದು ಸೇನೆಯ ತಾಂತ್ರಿಕ ಸಾಮರ್ಥ್ಯವನ್ನು ಅವಲಂಬಿಸಿರುವಂಥದ್ದು. ಜನವರಿ 14ರಂದು ಮಾಧ್ಯಮಗಳಿಗೆ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಭೂಸೇನೆ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರು ಈ ಸಂಬಂಧ ಸೇನೆ ತೆಗೆದುಕೊಂಡಿರುವ ದೃಢ ಕ್ರಮಗಳನ್ನು ನಿಖರವಾಗಿ ಹೇಳಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿ ಆಗುವ ಉಲ್ಲಂಘನೆಗಳನ್ನು ಆಕ್ರಮಣ ಪೂರ್ವಕವಾಗಿ ಹತ್ತಿಕ್ಕಲಾಗುವುದು, ಅಗತ್ಯ ಬಿದ್ದರೆ ತಿರುಗಿ ಬೀಳುವ ಆಯ್ಕೆಯನ್ನೂ ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೇನೆಗೆ ಸರ್ಕಾರವು ಗಡಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಕೊಟ್ಟಿದೆ. ಹೀಗಾಗಿ ಸನ್ನಿವೇಶ ಎದುರಾದಾಗ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಅದು ಮುಕ್ತವಾಗಿದೆ.
ನನ್ನ ಪ್ರಕಾರ ಮುಖ್ಯವೆನಿಸಿರುವ ಮೂರನೇ ಕ್ರಮವೆಂದರೆ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಸೇನೆ ನಡೆಸಿರುವ ಯೋಜಿತ ಅನಾಗರಿಕ ಕೃತ್ಯವು ಉಭಯ ದೇಶಗಳ ರಾಜಕೀಯ ಮುಖ್ಯಸ್ಥರ ನಡುವಿನ ಮಾತುಕತೆಯನ್ನು ಮುಕ್ಕಾಗಿಸಬಾರದು.
ಇವುಗಳಲ್ಲಿ ಮೊದಲನೇ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವೈಫಲ್ಯ ಎದುರಾಗಿದೆ. ರಕ್ಷಣಾ ಸಚಿವಾಲಯ ಹಾಗೂ ಪ್ರಧಾನಿ ಕಚೇರಿಗಳಿಂದ ಪ್ರಾರಂಭಿಕ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯವನ್ನು ತೋರಿದ್ದೇ ಇದಕ್ಕೆ ಕಾರಣ. ಇಂಥ ಸನ್ನಿವೇಶಗಳಲ್ಲಿ ಸೇನೆಗೆ ವಿಶ್ವಾಸವನ್ನು ಮೂಡಿಸುವುದು ಹಾಗೂ ದೇಶದ ಆಲೋಚನೆಯಲ್ಲಿ ಸಹಮತವನ್ನು ರೂಪಿಸುವುದು ಸರ್ಕಾರದ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಅಮೆರಿಕದಲ್ಲಿ ಸಶಸ್ತ್ರ ಪಡೆ ಹಿನ್ನಡೆ ಅನುಭವಿಸಿದಾಗಲೆಲ್ಲ ಅಧ್ಯಕ್ಷರು ಮುಂದೆ ಬಂದು ಧೈರ್ಯ ತುಂಬುತ್ತಾರೆ. ಪರಿಸ್ಥಿತಿಯನ್ನು ತಾವೇ ನಿಭಾಯಿಸುತ್ತಾರಾಗಲೀ ತಮ್ಮ ರಕ್ಷಣಾ ಸಚಿವರ ಹೆಗಲಿಗೆ ದಾಟಿಸುವುದಿಲ್ಲ. ಪಶ್ಚಿಮದ ರಾಷ್ಟ್ರಗಳಲ್ಲೂ ಇದೇ ರೂಢಿಯಿದೆ.
ಯಾವಾಗಲೂ ನೇಪಥ್ಯದಲ್ಲೇ ಇರುವುದಕ್ಕೆ ಬಯಸುವ ಪ್ರಧಾನಿ ಮನಮೋಹನ ಸಿಂಗ್ ಅವರು ಈ ಕೆಲಸವನ್ನು ರಕ್ಷಣಾ ಸಚಿವರಿಗೆ ವಹಿಸಿದರು. ಅದನ್ನು ನಿಭಾಯಿಸುವುದಕ್ಕೆ ಅವರೂ ವಿಫಲರಾದರು. ಪರಿಣಾಮವಾಗಿ ರಕ್ಷಣಾ ಸಚಿವಾಲಯ ಹಾಗೂ ಪ್ರಧಾನಿ ಯಾರಿಂದಲೂ ನಾಯಕತ್ವವೇ ದೊರೆಯದ ಪರಿಸ್ಥಿತಿ ಉಂಟಾಗಿದೆ. ಹುತಾತ್ಮ ಯೋಧರ ಸಂಬಂಧಿಕರಲ್ಲಿ ಹಾಗೂ ಎಲ್ಲ ಸೈನಿಕರಲ್ಲಿ ಸರ್ಕಾರವು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಭಾವನೆ ಒಡಮೂಡುವುದಕ್ಕೆ ಇದು ಕಾರಣವಾಗಿದೆ. ಈ ಕರ್ತವ್ಯದಲ್ಲಿ ವಿಫಲವಾಗಿರುವ ಮಾದರಿಯು ನಮ್ಮ ಸರ್ಕಾರಗಳು ಯೋಧರ ಕಲ್ಯಾಣದಲ್ಲಿ ಹೊಂದಿರುವ ಅಸಡ್ಡೆ ಹಾಗೂ ಹೇಗೂ ನಡೆಯುತ್ತದೆ ಎಂಬ ಸಾಮಾನ್ಯ ಭಾವನೆಯನ್ನು ಮತ್ತೊಮ್ಮೆ ಜಾಹೀರು ಮಾಡಿದೆ. ಅದು ಯೋಧರಿರಬಹುದು, ನಿವೃತ್ತಿ ಹೊಂದಿದವರಿರಬಹುದು ಇಲ್ಲವೇ ಹುತಾತ್ಮರಾದವರಿರಬಹುದು ಎಲ್ಲರ ವಿಷಯದಲ್ಲೂ ಸರ್ಕಾರದ ಮಟ್ಟದಲ್ಲಿ ಇುವ ಸಂವೇದನಾಶೂನ್ಯತೆಯನ್ನು ಮತ್ತೆ ಬಿಂಬಿಸಿದೆ ಈ ಪ್ರಕರಣ. ಸೂಕ್ತ ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಪ್ರಧಾನಿ ಜವಾಬ್ದಾರಿ. ಅದರಿಂದ ನುಣುಚಿಕೊಳ್ಳುವಂತಿಲ್ಲ.
ಬಿ. ರಾಮನ್
ರಕ್ಷಣಾ ಪರಿಣತ