ಅಂಕಣಗಳು

ರಾಜ್‌ನಾಥ್ ಸಿಂಗ್ ಅವರ ಮೊದಲ ಅಗ್ನಿ ಪರೀಕ್ಷೆ ಕರ್ನಾಟಕದಲ್ಲಿ!

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಒಂದು ಪ್ರಮುಖ ಬದಲಾವಣೆಯನ್ನು ಕಂಡಿದೆ. ನಿತಿನ್ ಗಡ್ಕರಿಯವರು ಹೊರನಡೆದರೆ, ಅವರ ಜಾಗದಲ್ಲಿ ರಾಜ್‌ನಾಥ್ ಸಿಂಗ್ ಬಂದು ಕುಳಿತಿದ್ದಾರೆ. ಈ ಬದಲಾವಣೆಯಿಂದಾಗಿ ಕರ್ನಾಟಕ ಬಿಜೆಪಿಗೆ ಲಾಭವಾಗಲಿದೆಯೇ? ಮಸಿ ಹತ್ತಿದ ಮುಖವನ್ನು ಒರೆಸಿಕೊಂಡು ಅದು ಮತ್ತೊಮ್ಮೆ ಕಂಗೊಳಿಸಲಿದೆಯೇ? ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿರುವುದರಿಂದ ಈ ಎಲ್ಲಾ ಪ್ರಶ್ನೆಗಳು ಉದ್ಭವವಾಗುತ್ತಿವೆ.
ಕರ್ನಾಟಕ ಬಿಜೆಪಿಯ ಅವ್ಯವಸ್ಥೆಯನ್ನು ಸರಿಪಡಿಸಲು ಗಡ್ಕರಿಯವರಿಂದ ಆಗಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಅವರೊಂದಿಗೆ ಗಡ್ಕರಿ ಗಾಢ ಸ್ನೇಹ ಹೊಂದಿದ್ದರು. ಆದರೆ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪ ಹೊತ್ತ ಯಡಿಯೂರಪ್ಪ ಮನಸ್ಸಿಲ್ಲದ ಮನಸ್ಸಿನಿಂದ ಕುರ್ಚಿಯಿಂದ ಕೆಳಗಿಳಿದರೋ, ಆಗ ಅವರು ಬಂಡಾಯವೆದ್ದರು. ಗಡ್ಕರಿ, ಯಡಿಯೂರಪ್ಪ ಅವರ ವಿರುದ್ಧ ಅತ್ತ ಕಠಿಣ ಕ್ರಮವನ್ನೂ ಜರುಗಿಸಲಿಲ್ಲ, ಇತ್ತ ಅವರನ್ನು ಪಕ್ಷದಲ್ಲಿ ಉಳಿಯುವಂತೆ ಮನವೊಲಿಸಲೂ ಸಫಲರಾಗಲಿಲ್ಲ. ಫಲಿತಾಂಶ- ಯಡಿಯೂರಪ್ಪ ತಾವು ಹೇಳಿದಂತೆ ಹಿರಿಯ ನಾಯಕರು ಕೇಳಬೇಕೆಂದು ಆರ್ಭಟಿಸಿದರು, ನಂತರ ಪಕ್ಷ ತೊರೆದು ಕೆಜೆಪಿ ಎಂಬ ಹೊಸ ಪಕ್ಷ ಸ್ಥಾಪಿಸಿದರು. ಅದಷ್ಟೇ ಅಲ್ಲ, ಬಿಜೆಪಿಯಲ್ಲಿರುವ ಸುಮಾರು ಎಮ್‌ಎಲ್‌ಎಗಳನ್ನು ತಮ್ಮತ್ತ ಸೆಳೆಯಲೂ ಸಫಲರಾದರು.
ಬಿಜೆಪಿಯ ಓಟ್ ಬ್ಯಾಂಕ್ ಅನ್ನು ಕೆಜೆಪಿ ಪಕ್ಷ ತುಂಡರಿಸಲಿದೆಯೇ ಎನ್ನುವ ಪ್ರಶ್ನೆಗೆ ಈಗಿನ ಸನ್ನಿವೇಶದಲ್ಲಿ ಉತ್ತರಿಸುವುದು ಸಾಧ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ, ಯಡಿಯೂರಪ್ಪ ತಮಗಾಗಿ ಗುಂಡಿ ತೋಡಿಕೊಂಡದ್ದೂ ಅಲ್ಲದೆ ಬಿಜೆಪಿಗೂ ಗುಂಡಿ ತೋಡಿಟ್ಟಿದ್ದಾರೆ ಎನ್ನುವುದು. ಅಧಿಕಾರ ವಿರೋಧಿ ಅಲೆ ಬಿಜೆಪಿಯ ಮುಖಕ್ಕೆ ಜೋರಾಗಿ ಅಪ್ಪಳಿಸುತ್ತಿರುವುದರಿಂದ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದು ಕುಣಿದಾಡಿದ್ದ ಆ ಪಕ್ಷ ಈಗ ಅಧಿಕಾರ ಕಳೆದುಕೊಳ್ಳುವ ಅಪಾಯದಂಚಿಗೆ ಬಂದು ನಿಂತಿದೆ. ರಾಜನಾಥ್ ಸಿಂಗ್ ಆ ಪಕ್ಷದ ಕೈ ಹಿಡಿದು ಅದನ್ನು ಸ್ಥಿರವಾಗಿ ನಿಲ್ಲಿಸಬಲ್ಲರೇ ಎನ್ನುವುದೇ ಮುಖ್ಯ ಪ್ರಶ್ನೆ. ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅವರಿಗಿದು ಮೊದಲ ದೊಡ್ಡ ಸವಾಲಾಗಲಿದೆ. ಒಂದು ವೇಳೆ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರದಿದ್ದರೆ, ಆ ವಿಷಯ ರಾಜ್‌ನಾಥ್ ಸಿಂಗ್ ಅವರಿಗೆ ಬಹುವಾಗಿ ಕಾಡಲಿದೆ. ಅದಾಗ್ಯೂ 2014ರಲ್ಲಿ ಬಿಜೆಪಿಗೆ ಕೇಂದ್ರದಲ್ಲಿ ತನ್ನ ಸರ್ಕಾರ ಸ್ಥಾಪಿಸಬೇಕಾದರೆ, ಅದಕ್ಕೆ ಕರ್ನಾಟಕದಿಂದಲೂ ಲೋಕಸಭಾ ಸೀಟುಗಳ ಅವಶ್ಯಕತೆಯಿದೆ. ಇದರಿಂದಾಗಿ ನಿಜಕ್ಕೂ ರಾಜ್‌ನಾಥ್ ಸಿಂಗ್ ಅವರ ಹಾದಿ ಇನ್ನು ಮುಂದೆ ಸುಗಮವಾಗಿರುವುದಿಲ್ಲ ಎನ್ನುವುದಂತೂ ಸ್ಪಷ್ಟ.
ಕರ್ನಾಟಕದಲ್ಲಿ ಜಯಘೋಷ ಮೊಳಗಿಸುವವರೆಗೂ ಬಿಜೆಪಿ ಉತ್ತರ ಭಾರತದ ಪಕ್ಷವಾಗಿಯೇ ಉಳಿದಿತ್ತು. ತಮಿಳುನಾಡು, ಆಂಧ್ರ ಮತ್ತು ಕೇರಳ ರಾಜ್ಯಗಳಲ್ಲಿ ಅದು ಎಂದಿಗೂ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಲಿಲ್ಲ. ಇನ್ನು ಕರ್ನಾಟಕದಲ್ಲಿ ಆ ಪಕ್ಷ 2005ರ ಚುನಾವಣೆಯಲ್ಲಿ ಅತಿಹೆಚ್ಚು ಮತ ಪಡೆಯಿತಾದರೂ ಸರ್ಕಾರ ರಚಿಸುವಷ್ಟು ಮತಗಳು ಮಾತ್ರ ಅದರ ಬಳಿ ಇರಲಿಲ್ಲ.  ಕೇಸರಿ ಪಕ್ಷವನ್ನು ಕಂಡರಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೈಜೋಡಿಸಿ ಅಧಿಕಾರಕ್ಕೆ ಬಂದವು. ಆದರೆ ಈ ಮೈತ್ರಿ 20 ತಿಂಗಳಲ್ಲಿಯೇ ಕುಸಿದು ಬಿತ್ತು. ಆಗ ಜೆಡಿಎಸ್, ಶತ್ರು ಪಕ್ಷವಾದ ಬಿಜೆಪಿಯೊಂದಿಗೇ 20-20 ಫಾರ್ಮುಲಾದ ಮೇಲೆ ಮೈತ್ರಿ ಮಾಡಿಕೊಂಡಿತು. 20 ತಿಂಗಳು ಚೆನ್ನಾಗಿ ಅಧಿಕಾರ ಅನುಭವಿಸಿದ ಜೆಡಿಎಸ್, ಒಪ್ಪಂದದಂತೆ ಅಧಿಕಾರ ಹಸ್ತಾಂತರಿಸುವ ಬದಲು ಬಿಜೆಪಿಗೆ ಕೈಕೊಟ್ಟುಬಿಟ್ಟಿತು. ಆಗ ದೊಡ್ಡದಾಗೇ ಹರಿದು ಬಂದ ಅನುಕಂಪದ ಅಲೆ ಬಿಜೆಪಿಯನ್ನು ಗದ್ದುಗೆಯ ಮೇಲೋಯ್ದು ಕೂರಿಸಿತು. ಯಡಿಯೂರಪ್ಪ ಮುಖ್ಯಮಂತ್ರಿ ಆದರು.
ಆದರೆ ಅವರು ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಳ್ಳುವ ಮೊದಲೇ, ಸಮಸ್ಯೆಗಳು ಶುರುವಾದವು. ಬಳ್ಳಾರಿಯ ರೆಡ್ಡಿ ಸಹೋದರು ಯಡಿಯೂರಪ್ಪ ತಮ್ಮ ಗಣಿಗಾರಿಕೆ ಚಟುವಟಿಕೆಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ ದಂಗೆಯೆದ್ದರು. ಅವರನ್ನು ಕಡೆಗಣಿಸುವ ಬದಲು ಬಿಜೆಪಿ ಯಡಿಯೂರಪ್ಪನವರತ್ತಲೇ ಕೆಂಗಣ್ಣು ಬೀರಿತು.  ಅದಾದನಂತರ ರೆಡ್ಡಿ ಸಹೋದರರ ಮೈನಿಂಗ್ ಹಗರಣದ ಕುರಿತು ಲೋಕಾಯುಕ್ತ ವರದಿ ಬಂತಾದರೂ ಯಡಿಯೂರಪ್ಪ ಸಮಾಧಾನದ ನಿಟ್ಟುಸಿರು ಬಿಡುವಂತಿರಲಿಲ್ಲ, ಏಕೆಂದರೆ ಅವರ ಮೇಲೂ ಭ್ರಷ್ಟಾಚಾರದ ಮತ್ತು ಸ್ವಜನಪಕ್ಷಪಾತದ ಮಸಿ ಅಂಟಿಕೊಂಡಿತು. ಆದರೂ ಕುರ್ಚಿ ಬಿಟ್ಟೇಳಲು ಅವರು ಸಿದ್ಧರಿರಲಿಲ್ಲ. ಪಕ್ಷ, ಯಡಿಯೂರಪ್ಪ ಪರ/ವಿರೋಧಿ ಎಂಬ ಎರಡು ಗುಂಪುಗಳಾಗಿ ಇಬ್ಭಾಗವಾಯಿತು. ಬಹಳಷ್ಟು ವಿಫಲ ಪ್ರಯತ್ನಗಳ ನಂತರ ಅವರನ್ನು ಕೆಳಗಿಳಿಸಲು ಬಿಜೆಪಿಯ ಹಿರಿಯ ನಾಯಕರು ಸಫಲರಾದರಾದರೂ, ಅವರನ್ನು ಕಿಂಗ್‌ಮೇಕರ್ ಆಗಿ ಮಾಡಿ ನಂತರ ನಾಲಿಗೆ ಕಚ್ಚಿಕೊಂಡರು. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಪಟ್ಟು ಹಿಡಿದು ಕೂತುಬಿಟ್ಟರು ಯಡಿಯೂರಪ್ಪ. ಯಾವಾಗ ಸದಾನಂದಗೌಡರು ಅವರನೆರಳಿನಿಂದ ಮೆಲ್ಲಗೆ ಜಾರತೊಡಗಿದರೋ ಆಗ ಅವರನ್ನು ಕೆಳಗಿಳಿಸಿ ಆ ಜಾಗದಲ್ಲಿ ತಮ್ಮ ವ್ಯಕ್ತಿ ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸಿದರು.
ಯಡಿಯೂರಪ್ಪನವರ ಬೇಡಿಕೆಗಳು ಇಲ್ಲಿಗೇ ಕೊನೆಗೊಳ್ಳಲಿಲ್ಲ.  ಒಂದೋ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು, ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಬೇಕು ಎಂದು ಹಿರಿ ತಲೆಗಳನ್ನು ಪೀಡಿಸತೊಡಗಿದರು. ಯಾವಾಗ ಅತ್ತಲಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲವೋ ಆಗ ಹೊರಗೆದ್ದು ಬಂದು ಕೆಜೆಪಿ ಎನ್ನುವ ಹೊಸ ಪಕ್ಷವನ್ನು ಸ್ಥಾಪಿಸಿ, ಅದರ ಓಟ್‌ಬ್ಯಾಂಕ್ ಒಡೆಯುವುದಾಗಿ, ಅದರಲ್ಲೂ ಪ್ರಬಲ ಲಿಂಗಾಯತ ಸಮುದಾಯದ ಮತಗಳನ್ನೆಲ್ಲ ತಾವೇ ಕಬಳಿಸುವುದಾಗಿ ಶಪಥ ಮಾಡಿದರು. ಆಗಿನಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಮುರಿದು ಹೋದ ಮನೆಯನ್ನು ಮತ್ತೊಮ್ಮೆ ಕಟ್ಟಲು ರಾಜ್‌ನಾಥ್ ಸಿಂಗ್‌ಗೆ ಸಾಧ್ಯವೆ? ರಾಜ್ಯ ಬಿಜೆಪಿಯ ನಾಯಕರಲ್ಲಿ ಆತ್ಮವಿಶ್ವಾಸ ತುಂಬಲು ಅವರು ಸಫಲರಾಗುವರೇ? ಪಕ್ಷದ ಬುಡವನ್ನು ಅಲ್ಲಾಡಿಸುತ್ತಿರುವ ಯಡಿಯೂರಪ್ಪ ಅವರನ್ನು ರಾಜ್‌ನಾಥ್ ಸುಮ್ಮನಾಗಿಸಬಲ್ಲರೇ? ಬಿಜೆಪಿ ಮತ್ತೊಮ್ಮೆ ಜನರ ವಿಶ್ವಾಸವನ್ನು ಗಳಿಸುವಂತೆ ಮಾಡಬಲ್ಲರೆ? ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕರ್ನಾಟಕಕ್ಕೆ ಅವರು ಮೊದಲ ಆದ್ಯತೆ ಕೊಡಲಿದ್ದಾರೆಯೆ? 'ಇಲ್ಲ' ಎನ್ನುವುದು ಈ ಪ್ರಶ್ನೆಗೆ ಉತ್ತರವಾದರೆ, ನಿಸ್ಸಂಶಯವಾಗಿಯೂ ಕರ್ನಾಟಕ ಹಿಮಾಚಲದ ಹಾದಿ ಹಿಡಿಯಲಿದೆ. ಸದ್ಯಕ್ಕೆ ಎಲ್ಲರ ದೃಷ್ಟಿ ರಾಜ್‌ನಾಥ್ ಸಿಂಗ್ ಅವರತ್ತ ನೆಟ್ಟಿದೆ.
ಕೊನೆಯ ಗುಟುಕು: ಹೀಗೊಂದು ಕುತೂಹಲಕರ ಟ್ವೀಟ್- 'ಆಟೋ ಚಾಲಕನ ಮಗಳು ಸಿಎ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿದ್ದಾಳೆ. ಚೌಟಾಲಾ ಮತ್ತು ಅವನ ಮಗ ಭ್ರಷ್ಟಾಚಾರ ಮಾಡಿ ಜೈಲುಪಾಲಾಗಿದ್ದಾರೆ. ಒಟ್ಟಿನಲ್ಲಿ ಭಾರತ, ಒಳ್ಳೆಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ!'   

-ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ