ಆಹಾರ ಸಿಗುವವರೆಗೂ ನಿಲ್ಲದು ಕಾಡಾನೆ ಹಾವಳಿ
ಕಾಡಾನೆಗಳು ಮತ್ತು ಮಾನವರ ನಡುವೆ ನಡೆಯುತ್ತಿರುವ ಸಂಘರ್ಷ ಕಡಿಮೆ ಆಗುವ ಬದಲು ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರು ಮತ್ತಿತರ ಕಡೆ ಕಾಡಾನೆಗಳ ಹಿಂಡು ನಾಡಿಗೆ ನುಗ್ಗಿ ಅನಾಹುತ ಉಂಟು ಮಾಡಿವೆ. ಇಲ್ಲಿ ಮಾತ್ರವೇ ಅಲ್ಲ ಪ್ರತಿ ದಿನ ರಾಜ್ಯದ ಹಲವೆಡೆ ಒಂದಲ್ಲ ಒಂದು ಕಡೆ ಕಾಡಾನೆಗಳ ದಾಳಿಯಿಂದ ಜೀವಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ. ಕಾಡಾನೆಗಳು ನಾಡಿಗೆ ನುಗ್ಗಿದಾಗಲೆಲ್ಲಾ ಪಳಗಿದ ಆನೆಗಳನ್ನು ಕರೆಸಿಕೊಂಡು ದೂರ ಸಾಗಿಸುವುದು ಮತ್ತು ಕಾಡಿಗೆ ಮತ್ತೆ ಓಡಿಸುವುದು ಅರಣ್ಯ ಇಲಾಖೆಯ ಮಾಮೂಲಿ ಕಾರ್ಯಕ್ರಮ. ಇದರಿಂದ ಕಾಡಾನೆಗಳು ನಾಡಿಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದ ಮೇಲೆ ಪರ್ಯಾಯ ಚಿಂತನೆ ಮಾಡುವ ಅಗತ್ಯವಿದೆಯಲ್ಲವೇ? 1972 ರ ವನ್ಯಜೀವಿ ಕಾಯ್ದೆ ಪ್ರಕಾರ ಕಾಡನ್ನು ಸಂರಕ್ಷಿಸುವುದರ ಜೊತೆಗೆ ವನ್ಯಜೀವಿಗಳನ್ನೂ ರಕ್ಷಿಸಬೇಕು. ಆದರೆ ಎರಡನೇ ಕೆಲಸವಾಗುತ್ತಿಲ್ಲ.
ಹಾಸನ ಜಿಲ್ಲೆ ಆಲೂರು ಸಮೀಪ ಇದ್ದ ಕಾಡಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಿ ತಮಿಳುನಾಡಿನ ಮಧು ಮಲೈ ಅರಣ್ಯಕ್ಕೆ ಬಿಟ್ಟು ಬರಲಾಗಿತ್ತು. ಅದು ಅಲ್ಪಾವಧಿಯಲ್ಲೇ ಸ್ವಸ್ಥಾನಕ್ಕೆ ಮರಳಿತು. ರೇಡಿಯೋ ಕಾಲರ್ ಕೂಡ ವಿಫಲವಾಯಿತು.
ನಾಗರಹೊಳೆ ಸಂರಕ್ಷಿತ ಅರಣ್ಯ ವಲಯದಲ್ಲೇ 257 ಸಾಗವಾನಿ ಮರಗಳ ಪ್ಲಾಂಟೇಷನ್ ಇದೆ. ಅಲ್ಲದೇ ಇತರೆ ಕಾಡುಗಳಲ್ಲಿ ಸಾಗುವಾನಿ ಪ್ಲಾಂಟೇಷನ್ ಮಾಡಲಾಗಿದೆ. ಕೂಡಲೇ ಇದನ್ನು ತೆಗೆದು ಅಲ್ಲಿ ಕಾಡಾನೆಗಳಿಗೆ ಬೇಕಾಗುವ ಮರಗಳನ್ನು ಬೆಳೆಸಬೇಕು. ಕಾಡಿನಲ್ಲಿ ಆನೆಗಳು ಹೆಚ್ಚು ತಿನ್ನುವ ಬೆಂಡೆಮರ ಮತ್ತು ತಡಸಲು ಮರಗಳು ಕಡಿಮೆಯಾಗುತ್ತಿವೆ. ಇನ್ನು ಕಾಡಿನಲ್ಲೇ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಬೇಕು.
2 ವರ್ಷಗಳಿಂದ ಕಾಡಿನಲ್ಲಿ ಬಿದಿರು ಬೆಳೆಯುತ್ತಿಲ್ಲ. ನಶಿಸುತ್ತಿದೆ. ಇದು ಕೂಡ ಕಾಡಿನಲ್ಲಿ ಆಹಾರ ಸಮಸ್ಯೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಬಿದಿರನ್ನು ವೈಜ್ಞಾನಿಕ ನೆಲೆಯಲ್ಲಿ ಹೆಚ್ಚೆಚ್ಚು ಬೆಳೆಸುವತ್ತಲೂ ಗಮನಹರಿಸಬೇಕು. ಅಲ್ಲದೇ ಶತಶತಮಾನಗಳಿಂದಲೂ ಕಾಡಿನಲ್ಲಿ ಹುಟ್ಟಿ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳ ಬಗ್ಗೆ ವ್ಯರ್ಥ ಆರೋಪ ಮಾಡದೇ ಅರಣ್ಯ ಇಲಾಖೆಯವರು ಅವರೊಡನೆ ಸೌಹಾರ್ದಯುತ ವಾತಾವರಣದಲ್ಲಿ ಚರ್ಚಿಸಿದರೇ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಸಾಧಾರಣವಾಗಿ ಹಿಂಡಾನೆಗಳು ಪ್ರತಿದಿನ 800 ಚದರ ಕಿಲೋಮೀಟರ್ ಅಲೆದಾಡುತ್ತವೆ. ಅಲ್ಲದೇ ಪ್ರತಿದಿನ ಒಂದು ಆನೆಗೆ 200 ಕೆ.ಜಿ. ಆಹಾರ ಬೇಕು. ಅರಣ್ಯ ಕಾಯ್ದೆ ಪ್ರಕಾರ ಶೇ.33 ರಷ್ಟು ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಇರಬೇಕು. ಅದರೆ ಇರುವುದು ಶೇ.19 ರಷ್ಟು ಮಾತ್ರ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಸತಿ ಪ್ರದೇಶ ಮತ್ತು ಕೃಷಿ ಭೂಮಿಯನ್ನು ವಿಸ್ತರಿಸಿಕೊಂಡು ಹೋಗುತ್ತಿರುವುದರಿಂದ ಕಾಡಿನ ಮೇಲೆ ಒತ್ತಡ ಹೆಚ್ಚಾಗಿದೆ.
ಕಾಡು ಭೂಮಿ ಒತ್ತುವರಿ, ಮತ್ತು ಸೌದೆ ಸಾಗಾಣಿಕೆ ಮತ್ತಿತರ ಅರಣ್ಯ ನಾಶದ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅನೇಕಾನೇಕ ಯೋಜನೆಗಳನ್ನು ನೈಸರ್ಗಿಕ ಕಾಡಿನೊಳಗೆ ಅನುಷ್ಠಾನಗೊಳಿಸಿ ಸಾವಿರಾರು ಎಕರೆ ಅಮೂಲ್ಯ ಅರಣ್ಯವನ್ನು ನಾಶ ಮಾಡಲಾಗಿದೆ. ಇದರಿಂದ ಆಹಾರ ಮತ್ತು ನೀರು ಸಿಗದೇ ಕಾಡು ಪ್ರಾಣಿಗಳು ನಾಡಿನತ್ತ ಕಾಲಿಡುವುದು ಸಾಮಾನ್ಯ ಮತ್ತು ಸಹಜ.
ಕಾಡು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಕೋಟ್ಯಂತರ ರುಪಾಯಿ ಹಣ ಸರಿಯಾದ ರೀತಿಯಲ್ಲಿ ಸದ್ವಿನಿಯೋಗವಾಗುತ್ತಿಲ್ಲ. ಈ ಬಗ್ಗೆ ಹಣ ಕೊಟ್ಟ ಸರ್ಕಾರಗಳೂ ಗಮನಹರಿಸುತ್ತಿಲ್ಲ.
ಕೇಂದ್ರ ಸರ್ಕಾರ ಪ್ರತಿ ವರ್ಷ 1 ಹೆಕ್ಟೇರ್ ಅರಣ್ಯ ಅಭಿವೃದ್ದಿಗೆ 12, 500 ರು. ನೀಡುತ್ತದೆ. ಆದರೆ ಇದರಲ್ಲಿ ಶೇ. 50 ರಷ್ಟು ಮೊತ್ತ ಕೂಡ ನ್ಯಾಯಯುತವಾಗಿ ವೆಚ್ಚವಾಗುತ್ತಿಲ್ಲ. ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳ ನಿರ್ಮಾಣದಿಂದ ಹಾಸನ ಜಿಲ್ಲೆ ದೊಡ್ಡಬೆಟ್ಟ ಅರಣ್ಯದಿಂದ ಕೊಡಗು ಜಿಲ್ಲೆಯ ಮಾಲಂಬಿವರೆಗೆ ಕಾಡಾನೆಗಳು ಸಂಚರಿಸುತ್ತಿದ್ದ ಕಾರಿಡಾರ್ ತುಂಡಾಗಿದೆ. ಇದರಿಂದ ತಮಿಳುನಾಡಿನ ಮಧುಮಲ್ಲೈ ಮತ್ತು ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಿಂದ ಸಂಚಾರ ಮಾಡಲು ಕಾಡಾನೆಗಳಿಗೆ ಸಾಧ್ಯವಾಗುತ್ತಿಲ್ಲ.
ಕನಕಪುರದಿಂದ ಹಿಡಿದು ನಾಗರಹೊಳೆವರೆಗೆ ಒಂದು ಅಂದಾಜಿನ ಪ್ರಕಾರ 3,500 ರಿಂದ 4 ಸಾವಿರ ಕಾಡಾನೆಗಳಿವೆ. ಒಂದು ಕಾಡಾನೆ ಹಿಂಡು ಜೀವನ ಸಾಗಿಸಬೇಕಾದರೇ 1800 ಚದರ ಕಿಮೀ ಕಾಡು ಬೇಕು. ಆ ಪ್ರಮಾಣದ ಕಾಡಿಲ್ಲ ಮತ್ತು ಇರುವ ಕಾಡು ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಈ ಸಂಗತಿ ಅರಣ್ಯ ಇಲಾಖೆಯವರಿಗೆ ತಿಳಿಯದ ಸಂಗತಿಯೇನು ಅಲ್ಲ. ರಾಜ್ಯ ಹೈಕೋರ್ಟ್ 'ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸದೇ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದೇ?' ಎಂದು ಕೇಳಿದ ಪ್ರಶ್ನಗೆ ಅರಣ್ಯ ಇಲಾಖೆಗೆ ಸರಿಯಾದ ಉತ್ತರ ನೀಡಲು ಸಹ ಸಾಧ್ಯವಾಗಿಲ್ಲ. 'ಇದೊಂದು ಹೊಸ ಪ್ರಯೋಗವಷ್ಟೇ' ಎಂದದು ಹೇಳಿದೆ!
- ದಯಾಶಂಕರ ಮೈಲಿ, ಕನ್ನಡಪ್ರಭ